

ಪ್ರತಿಯೊಬ್ಬ ವ್ಯಕ್ತಿಯ ಆರೋಗ್ಯ, ಬುದ್ಧಿಮತ್ತೆ, ನಡವಳಿಕೆ ಎಲ್ಲವೂ ವಂಶವಾಹಿಯಲ್ಲಿ (ಜೀನ್) ಅಡಗಿರುತ್ತದೆ. ಹಾಗಾದರೆ ಜೀನ್ಗಳನ್ನು ನಮಗೆ ಬೇಕಾದ ಹಾಗೆ ಮಾರ್ಪಾಟು ಮಾಡಿ, ಮಗು ಹುಟ್ಟುವ ಮೊದಲೇ ಅದರ ರೂಪ, ಗುಣ, ಬಣ್ಣ ಎಲ್ಲವನ್ನೂ ನಾವೇ ನಿರ್ಧರಿಸಿಬಿಡಬಹುದಲ್ಲವೆ? ಇದುವರೆಗೆ ಕೇವಲ ಕಲ್ಪನೆಯಾಗಿದ್ದ ಈ ಸಂಗತಿ ಈಗ ನಿಜವಾಗತೊಡಗಿದೆ.
ಚೀನಾ ವಿಜ್ಞಾನಿಯೊಬ್ಬರು 2018ರ ನವೆಂಬರ್ನಲ್ಲಿ ನಡೆದ ಅಂತಾರಾಷ್ಟ್ರೀಯ ಕಮ್ಮಟವೊಂದರಲ್ಲಿ ಜಗತ್ತೇ ಬೆಕ್ಕಸ ಬೆರಗಾಗುವ ವಿಷಯವೊಂದನ್ನು ಹೊರಹಾಕಿದ್ದರು. ಜೀನ್ ಎಡಿಟಿಂಗ್ ತಂತ್ರಜ್ಞಾನವನ್ನು ಮೊದಲ ಬಾರಿಗೆ ಮನುಷ್ಯರ ಎಳೆ-ಬಸಿರುಗಳ (ಭ್ರೂಣ) ಮೇಲೆ ಪ್ರಯೋಗ ಮಾಡಿರುವುದಾಗಿ ಅವರು ಸಾರಿದ್ದರು. ಆ ಭ್ರೂಣ ಮುಂದೆ ಏಡ್ಸ್ ರೋಗವನ್ನು ತಡೆದುಕೊಳ್ಳಬಲ್ಲ, ‘ಲುಲು’ ಮತ್ತು ‘ನಾನಾ’ ಎಂಬ ಎರಡು ಅವಳಿ ಮಕ್ಕಳಾಗಿರುವ ವಿಷಯವನ್ನೂ ಅವರು ಹೊರಹಾಕಿದ್ದರು. ಆ ಕಮ್ಮಟ ನಡೆಯುವ ಮೂರು ದಿನಗಳ ಮುಂಚೆಯೇ ಚೀನಾ ವಿಜ್ಞಾನಿಯ ಈ ವಿಷಯ ಆಗಲೇ ಒಂದು ಸೈನ್ಸ್ ಮ್ಯಾಗಜಿನ್ನಲ್ಲಿ ಪ್ರಕಟವಾಗಿತ್ತಾದರೂ ಹೆಚ್ಚಿನವರು ಇದನ್ನು ನಂಬಿರಲಿಲ್ಲ. ಅಂದು ಆ ಕಮ್ಮಟದಲ್ಲಿ ಚೀನಾ ವಿಜ್ಞಾನಿ ಡಾ. ಹ ಜೀಯನ್ಕ್ವುಯಿ ಸಿಡಿಸಿದ ಸ್ಪೋಟಕ ಸಂಗತಿ ಇಡೀ ವಿಜ್ಞಾನ ಜಗತ್ತನ್ನೇ ತಲ್ಲಣಗೊಳಿಸಿತ್ತು.
ಹೌದು, ಆ ವಿಷಯವೇ ಅಂಥದ್ದಾಗಿತ್ತು. ಮನುಷ್ಯರ ತಿಳಿವಳಿಕೆಗೆ ಇನ್ನೂ ಇಡಿಯಾಗಿ ಎಟಕದಿರುವ ವಿಷಯವನ್ನು ಅವರು ಇಷ್ಟು ಸಲೀಸಾಗಿ, ಯಾವುದೇ ಸರಿಯಾದ ದೃಢೀಕರಣ ಪಡೆಯದೇ ಏಕೆ ಮಾಡಿದರು? ಇದರಿಂದ ಇಡೀ ಮನುಕುಲವೇ ತೊಂದರೆಗೆ ಒಳಗಾಗಬಹುದಲ್ಲವೇ? ಅನ್ನುವುದು ಹೆಚ್ಚಿನ ವಿಜ್ಞಾನಿಗಳ ವಾದವಾಗಿತ್ತು. ಈ ವಿರೋಧ ಕ್ರಮೇಣ ಹೆಚ್ಚುತ್ತ ಹೋಗಿ ಕೊನೆಗೆ ಚೀನಾ ಸರಕಾರ ಜೀಯನ್ಕ್ವುಯಿ ಅವರ ಪ್ರಯೋಗ ಕೈಗೊಳ್ಳುವ ಲೈಸೆನ್ಸ್ ರದ್ದು ಮಾಡಿ, ಅವರನ್ನು ವಿಚಾರಣೆಗೆ ಒಳಪಡಿಸಿತು. ಮೊನ್ನೆಯಷ್ಟೆ (ಡಿ. 30) ಆ ವಿಜ್ಞಾನಿಗೆ ಚೀನಾದ ಕೋರ್ಟು ಮೂರು ವರುಷಗಳ ಸೆರೆಮನೆ ವಾಸದ ಶಿಕ್ಷೆ ವಿಧಿಸಿತು.
ಏನಿದು ಜೀನ್ ಎಡಿಟಿಂಗ್?: ಜೀನ್ ಮಾರ್ಪಾಟಿನ ಬಗ್ಗೆ ಯಾಕಿಷ್ಟು ಅಂಜಿಕೆ ಅನ್ನುವ ಕುತೂಹಲದ ಬೆನ್ನು ಹತ್ತಿ ಹೋದರೆ, ಬೆರಗಾಗುವ ವಿಷಯಗಳು ಹೊರಬರುತ್ತವೆ. ಜೀನ್ ಎಡಿಟಿಂಗ್ ಅರ್ಥಾತ್ ಜಿನೋಮ್ ಎಡಿಟಿಂಗ್ ಎಂದು ಕರೆಯಲಾಗುವ ತಂತ್ರಜ್ಞಾನದ ಬಗ್ಗೆ ತಿಳಿಯುವ ಮುನ್ನ, ಜೀನ್ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ. ಜೀವಕೋಶಗಳು ಜೀವಿಗಳ ಮುಖ್ಯ ಘಟಕ. ತಲೆ, ಚರ್ಮ, ಗುಂಡಿಗೆ ಹೀಗೆ ಅಂಗಾಂಗಳಿಗೆ ತಕ್ಕಂತೆ ಅವುಗಳಲ್ಲಿರುವ ಜೀವಕೋಶಗಳು ಬೇರೆ ಬೇರೆಯಾಗಿದ್ದರೂ, ಈ ಎಲ್ಲ ಜೀವಕೋಶಗಳ ಮೂಲರಚನೆ ಒಂದೇ ತರನಾಗಿರುತ್ತದೆ. ಉದಾಹರಣೆಗೆ, ಮನುಷ್ಯರ ಜೀವಕೋಶದಲ್ಲಿ ಸುತ್ತುವರೆದ ಪದರವೊಂದಿದ್ದು, ಮಧ್ಯದಲ್ಲಿ ನ್ಯೂಕ್ಲಿಯಸ್ ಎಂಬ ಭಾಗವಿರುತ್ತದೆ. ಇದರೊಳಗೆ ಪೊ›ಟೀನ್ ರಚನೆಗಳಿದ್ದು, ಇವು ಕ್ರೋಮೋಜೋಮ್ಳಿಂದ ಮಾಡಲ್ಪಟ್ಟಿರುತ್ತವೆ. ಮನುಷ್ಯರ ಜೀವಕೋಶಗಳಲ್ಲಿ ಒಟ್ಟು 23 ಜತೆ ಕ್ರೋಮೋಜೋಮ್ಳಿರುತ್ತವೆ. ಇವುಗಳಲ್ಲಿ ಅಡಗಿರುವುದೇ ಗುಟ್ಟು ಸೂಚನೆಗಳನ್ನು ಹೊತ್ತ ಡಿಎನ್ಎ ಎಂಬ ಎರಡು ಸುರುಳಿಯ ರಚನೆ.
ಡಿ-ಆಕ್ಸಿ ರೈಬೋ ನ್ಯೂಕ್ಲಿಕ್ ಅಸಿಡ್ (ಡಿಎನ್ಎ) ರಾಸಾಯನಿಕ ರಚನೆಯಾಗಿದ್ದು ಜೀವಿಯೊಂದರ ಗುಣಗಳನ್ನು ತೀರ್ವನಿಸಬಲ್ಲ ಸೂಚನೆಗಳನ್ನು ತನ್ನಲ್ಲಿ ಅಳವಡಿಸಿಕೊಂಡಿರುತ್ತದೆ. ಇದರಲ್ಲಿ ಸೈಟೋಸಿನ್, ಗ್ವಾನಿನ್, ಅಡಿನಿನ್ ಮತ್ತು ತೈಮಿನ್ ಎಂಬ ನಾಲ್ಕು ಒಳ ರಾಸಾಯನಿಕ ರಚನೆಗಳಿರುತ್ತವೆ. ಇವು ಯಾವ ಕ್ರಮದಲ್ಲಿ ಸಾಲಾಗಿ ಹೊಂದಿಕೊಂಡಿರುತ್ತವೆಯೋ ಆ ಕ್ರಮ ಜೀವಕೋಶದ, ಆ ಮೂಲಕ ಅಂಗಾಂಗಗಳ ಮತ್ತು ಒಟ್ಟಾರೆ ಜೀವಿಯೊಂದರ ಗುಣಗಳನ್ನು ತೀರ್ವನಿಸುತ್ತವೆ. ಇಡೀ ಡಿಎನ್ಎ ರಚನೆಯ ನಿರ್ದಿಷ್ಟವಾದ ತುಣುಕುಗಳನ್ನು ಜೀನ್ಸ್ ಅನ್ನುತ್ತಾರೆ. ಗುಟ್ಟು ಸೂಚನೆಗಳನ್ನು ಹೊಂದಿರುವ ಜೀನ್ಸ್ ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಹರಿದುಬರುತ್ತವೆ. ಈ ಸೂಚನೆಗಳು ಅಂಗಾಂಗಗಳ ಸಹಜ ಗುಣಗಳನ್ನು ತೀರ್ವನಿಸುವುದರಿಂದ ಇವುಗಳಲ್ಲಿ ಏನಾದರೂ ತಪ್ಪಾಗಿದ್ದರೆ ಅವುಗಳ ಕೆಲಸಕ್ಕೆ ತೊಂದರೆಯಾಗಿ ರೋಗಕ್ಕೂ ತುತ್ತಾಗಬಹುದು. ಹಾಗಾದರೆ ಆ ತಪ್ಪಾಗಿರುವ ಸೂಚನೆಗಳನ್ನು ಸರಿಪಡಿಸಿದರೆ ರೋಗಗಳನ್ನು ತಡೆಗಟ್ಟಬಹುದಲ್ಲವೇ? ನಮಗೆ ಬೇಕಿರುವಂತೆ ಅಂಗಾಂಗಗಳ ಗುಣಗಳನ್ನು ತೀರ್ವನಿಸಬಹುದಲ್ಲವೇ? ಈ ಕುತೂಹಲದ ಬೆನ್ನತ್ತಿ ಹೋದಾಗ ಹುಟ್ಟಿಕೊಂಡಿದ್ದೇ ‘ಜೀನ್ಸ್ ಎಡಿಟಿಂಗ್’!
ಕುತೂಹಲಕರ ಪ್ರಯೋಗಗಳು: 1856-63ರ ಗಡುವಿನಲ್ಲಿ ವಿಜ್ಞಾನಿ ಗ್ರೆಗರ್ ಮೆಂಡೆಲ್ ನಡೆಸಿದ ಸಂಶೋಧನೆಗಳು ಮೊದಲ ಬಾರಿಗೆ ಜೀನ್ಗಳ ಬಗ್ಗೆ ಬೆಳಕು ಚೆಲ್ಲಿದ್ದವು. ಅವರು ತಮ್ಮ ಹಿತ್ತಲಿನಲ್ಲಿ ಬಟಾಣಿ ಗಿಡಗಳ ಮೇಲೆ ನಡೆಸಿದ ಪ್ರಯೋಗಗಳು ಹೇಗೆ ಗುಣಗಳು ತಲೆಮಾರಿನಿಂದ ತಲೆಮಾರಿಗೆ ಹರಿದುಬರುತ್ತವೆ? ಹೇಗೆ ಗುಣವೊಂದರ ತೀರ್ವನವನ್ನು ಅದರ ಜೀನ್ಸ್ನಲ್ಲಿ ಅಡಗಿರುವ ಗುಟ್ಟು ಸೂಚನೆಗಳು ಮಾಡುತ್ತವೆ ಅಂತ ತೋರಿಸಿಕೊಟ್ಟಿದ್ದವು. ಅಲ್ಲಿಂದೀಚೆಗೆ ಪೀಳಿಗೆ (ವಂಶವಾಹಿನಿ) ವಿಜ್ಞಾನ ಅಂದರೆ ಜೆನಿಟಿಕ್ಸ್ ಏರುಗತಿಯಲ್ಲಿ ಬೆಳೆಯುತ್ತಾ ಬಂದಿದೆ. 1960ರಲ್ಲಿ ಬೆಳಕಿನ ಕಿರಣಗಳನ್ನು ಸಸ್ಯಗಳ ಮೇಲೆ ಸೂಸಿಕೆ ಮಾಡಿ ಅವುಗಳ ಜೀನ್ಸ್ ಮಾರ್ಪಾಡು ಮಾಡುವ ಪ್ರಯೋಗಗಳು ನಡೆದವು. 1970ರಲ್ಲಿ ಬೇರೆ ಜೀವಿಗಳ ಡಿಎನ್ಎ ರಚನೆಗಳನ್ನು ಬ್ಯಾಕ್ಟೀರಿಯಾಗಳು, ಸಸ್ಯಗಳು ಮತ್ತು ಪ್ರಾಣಿಗಳ ಜೀವಕೋಶದಲ್ಲಿ ಹಾಕುವ ಸಂಶೋಧನೆಗಳು ನಡೆದವು. 1974ರಲ್ಲಿ ಮೊದಲ ಬಾರಿಗೆ ಜೀನ್ಸ್ ಮಾರ್ಪಾಟು ಮಾಡಿದ ಇಲಿ ಹುಟ್ಟಿಕೊಂಡಿತು. ಹೀಗೆ ಹುಟ್ಟುವ ಇಲಿಗಳು ವೈಜ್ಞಾನಿಕ ಪ್ರಯೋಗಗಳಿಗೆ ಬಳಕೆಯಾಗತೊಡಗಿದವು. ಜೀನ್ಸ್ ಮಾರ್ಪಾಟು ಮಾಡಿ ಹಲವು ದಿನಗಳು ಹೊಸತಾಗಿರಬಲ್ಲ ಟೊಮೆಟೊ ತಳಿ 1994ರಲ್ಲಿ ಹುಟ್ಟಿತು. ಹೀಗೆ ಮುಂದುವರೆಯುತ್ತಾ ಮನುಷ್ಯರಿಗೆ ನೀಡುವ ಮದ್ದುಗಳನ್ನು ತಯಾರಿಸಲು, ಮಾಂಸ ಹೆಚ್ಚಾಗಿರುವ ದಷ್ಟಪುಷ್ಟ ಹಂದಿ, ಕತ್ತಲೆಯಲ್ಲಿ ಮಿಂಚುವ ಮೀನು ಹೀಗೆ ಪ್ರಾಣಿಗಳ ಗುಣಗಳನ್ನು ಬೇಕಿರುವಂತೆ ಬದಲಾಯಿಸಲು ಜೀನ್ ಎಡಿಟಿಂಗ್ ಬಳಕೆಯಾಗುತ್ತಾ ಬಂತು. ಆದರೆ ಇದು ಎರಡು ಮುಖ್ಯ ಸವಾಲುಗಳನ್ನು ಎದುರಿಸುತ್ತಿತ್ತು. ಅದೆಂದರೆ ಹೆಚ್ಚಿನ ವೆಚ್ಚ ಮತ್ತು ಹೆಚ್ಚು ಸಮಯ. ಸಂಶೋಧನೆಗಳು ಮುಂದುವರೆಯುತ್ತಾ, ಇವೆರಡೂ ಸವಾಲುಗಳನ್ನೂ ಬಗೆಹರಿಸುವ ಕ್ರಿಸ್ಪರ್ ಎಂಬ ತಂತ್ರಜ್ಞಾನ ಹೊಮ್ಮಿ ವಿಜ್ಞಾನ ಜಗತ್ತಿನಲ್ಲಿ ಹೊಸ ಹುರುಪು ಹುಟ್ಟಿಸಿಬಿಟ್ಟಿತು.
ವೇಗ ಹೆಚ್ಚಿಸಿದ ಕ್ರಿಸ್ಪರ್: ಸುಲಭವಾಗಿ ಜೀನ್ಸ್ ಮಾರ್ಪಾಟು ಮಾಡಬಲ್ಲ ಕ್ರಿಸ್ಪರ್ ತಂತ್ರಜ್ಞಾನದ ಹಿನ್ನೆಲೆಯೂ ತುಂಬಾ ಕುತೂಹಲಕಾರಿಯಾಗಿದೆ. ಇದನ್ನು ಮನುಷ್ಯರು ಬ್ಯಾಕ್ಟೀರಿಯಾಗಳಿಂದ ಇತ್ತೀಚೆಗೆ ಕಲಿತದ್ದು ಎಂದರೆ ಅಚ್ಚರಿಯಾದೀತು. ಬ್ಯಾಕ್ಟೀರಿಯಾ ಮತ್ತು ವೈರಸ್ಗಳ ಕಾದಾಟ ಹಲವು ಮಿಲಿಯನ್ ವರುಷಗಳಿಂದ ನಡೆದುಕೊಂಡು ಬರುತ್ತಿದೆ. ತನ್ನ ಮೇಲೆ ಮಾಡುವ ವೈರಸ್ಗಳ ದಾಳಿಗಳನ್ನು ತಡೆಗಟ್ಟಲು ಬ್ಯಾಕ್ಟೀರಿಯಾಗಳು ಹರಸಾಹಸ ಪಡುತ್ತಾ ಬಂದಿವೆ. ಈ ಕಾದಾಟದಲ್ಲಿ ಬ್ಯಾಕ್ಟೀರಿಯಾಗಳು ಕೊನೆಗೂ ಒಂದು ಹೊಸ ನಡೆಯನ್ನು ಕಂಡುಕೊಂಡವು. ತನ್ನಲ್ಲಿ ವೈರಸ್ನಂತಿರುವ ಜೀನ್ಸ್ ಸರಣಿಯನ್ನು ಬೆಳೆಸಿಕೊಂಡು ವೈರಸ್ಗಳು ಅದರ ಮೇಲೆ ಕೂರುವಂತೆ ಮಾಡುವುದು, ಮತ್ತು ಅವು ಅಲ್ಲಿ ಕುಳಿತೊಡನೇ ಅಲ್ಲಿಂದ ಅವುಗಳನ್ನು ಕತ್ತರಿಸಿ ಬಿಸಾಕುವುದು! ಬ್ಯಾಕ್ಟೀರಿಯಾದ ಈ ಏರ್ಪಾಟನ್ನು ವಿಜ್ಞಾನಿಗಳು ಅರಿತುಕೊಂಡು, ಜೀವಿಗಳ ಜೀನ್ಸ್ ಎಡಿಟಿಂಗ್ ಮಾಡುವ ಕ್ರಿಸ್ಪರ್ ಎಂಬ ತಂತ್ರಜ್ಞಾನವನ್ನು ಕಂಡುಹಿಡಿದರು.
ಕ್ರಿಸ್ಪರ್ ತಂತ್ರಜ್ಞಾನದಲ್ಲಿ ಸಿಎ9 ಎಂಬ ಪೊ›ಟೀನ್ ನೆರವಿನಿಂದ ಗೊತ್ತುಪಡಿಸಿದ ಜೀನ್ಸ್ ಸೂಚನಾ ಸಾಲುಗಳನ್ನು ತಯಾರಿಸಲಾಗುತ್ತದೆ. ಜೀವಿಗಳ ಜೀವಕೋಶಗಳಲ್ಲಿರುವ ಜೀನ್ಸ್ಗೆ ಇವುಗಳನ್ನು ಕಳುಹಿಸಿ, ಅದರಲ್ಲಿರುವ ಇಂತಹುದೇ ಸೂಚನಾ ಸಾಲನ್ನು ಗುರುತಿಸಿ ಕತ್ತರಿಸಲಾಗುತ್ತದೆ. ಕತ್ತರಿಸಿದ ಸಾಲಿನ ಜಾಗದಲ್ಲಿ ಹೊಸದಾದ ಸೂಚನಾ ಸಾಲುಗಳನ್ನು ಸೇರಿಸಲಾಗುತ್ತದೆ. ಅಂದರೆ ಜೀನ್ಸ್ ಸೂಚನೆಗಳಲ್ಲಿ ತಪ್ಪಾಗಿದ್ದು, ಆ ತಪ್ಪುಗಳು ಅಂಗಾಂಗಗಳಿಗೆ ತೊಂದರೆ ಉಂಟುಮಾಡುತ್ತಿದ್ದರೆ, ಅಂತಹವುಗಳನ್ನು ತೆಗೆದುಹಾಕಿ ಹೊಸದಾದ ಮತ್ತು ಸರಿಯಾದ ಸೂಚನೆಗಳನ್ನು ಅಳವಡಿಸುವುದೇ ಈ ಜೀನ್ ಎಡಿಟಿಂಗ್ ಕ್ರಿಸ್ಪರ್ ತಂತ್ರಜ್ಞಾನ.
ನಾವೇ ಸೃಷ್ಟಿಕರ್ತರು!: ಈಗ ಇದರ ಉಪಯೋಗಗಳನ್ನು ಯೋಚಿಸಿ. ಅಂಗಾಂಗಗಳ ಗುಣ, ರೋಗ ತಡೆ ತೀರ್ಮಾನ ಮಾಡುವ ಜೀನ್ಸ್ಗಳಲ್ಲಿರುವ ಗುಟ್ಟು ಸೂಚನೆಗಳು ನಮಗೆ ಗೊತ್ತಾದರೆ, ಅವುಗಳನ್ನು ನಮಗೆ ಬೇಕಂತೆ ಬದಲಿಸಿ ಬಿಡಬಹುದಲ್ಲವೇ? ಉದಾಹರಣೆಗೆ, ಕ್ಯಾನ್ಸರ್ ರೋಗದ ವಿರುದ್ದ ಸೋಲುವ ಗುಟ್ಟು ಸೂಚನೆಗಳ ಬದಲಾಗಿ, ಗೆಲ್ಲುವ ಸೂಚನಾ ಸಾಲುಗಳನ್ನು ಸೇರಿಸಿದರೆ, ಕ್ಯಾನ್ಸರ್ ಬರದಂತೆ ತಡೆಯಬಹುದಲ್ಲವೇ? ಜೀನ್ಸ್ ಮಾರ್ಪಾಟು ಮಾಡಿ ನಮಗೆ ಬೇಕಿರುವ ಚರ್ಮದ ಬಣ್ಣ, ಚುರುಕಾದ ಕಣ್ಣುಗಳು, ಹೊಳೆಯುವ ಚರ್ಮ, ಎತ್ತರದ ಮೈಕಟ್ಟು ಹೀಗೆ ಏನು ಬೇಕಾದರೂ ಪಡೆದುಕೊಳ್ಳಬಹುದು! ಅಷ್ಟೇ ಏಕೆ ನಮಗೆ ಬೇಕಿರುವಂತಹ ಒಟ್ಟಾರೆ ಮೈಕಟ್ಟನ್ನು ಹೊಂದಿರುವ ಮಕ್ಕಳನ್ನೇ ಸೃಷ್ಟಿಸಿಬಿಡಬಹುದು. ಮನುಷ್ಯರಿಗೆ ವಯಸ್ಸೇ ಆಗದಿರುವಂತೆ ಮಾಡಬಹುದು ಅನ್ನುವಲ್ಲಿಗೆ ಯೋಚನೆ ಹರಿಯುತ್ತದೆ!
ವಿಜ್ಞಾನಿಗೆ ಜೈಲಾಗಿದ್ದೇಕೆ?: ಈಗ ಶುರುವಾಗುವುದೇ ‘ಯಾವುದು ಸರಿ, ಯಾವುದು ತಪ್ಪು’ ಅನ್ನುವ ಚರ್ಚೆ. ಜಗತ್ತಿನ ಹೆಚ್ಚಿನ ವಿಜ್ಞಾನಿಗಳು ಜೀನ್ಸ್ ಎಡಿಟಿಂಗ್ನ ಸಾಧ್ಯತೆಗಳನ್ನು ಒಪ್ಪುತ್ತ್ತಾರಾದರೂ, ಅವರ ಪ್ರಕಾರ ಇದರ ಬಗೆಗಿನ ತಿಳಿವಳಿಕೆ ಇನ್ನೂ ಎಳವೆಯಲ್ಲಿದೆ. ಎಲ್ಲವನ್ನೂ ಆಳವಾಗಿ ತಿಳಿಯದೇ ಈ ಕೆಲಸಕ್ಕೆ ಕೈಹಾಕಿದರೆ, ಅದರ ಪರಿಣಾಮಗಳನ್ನು ಎದುರಿಸಲು ನಮಗೆ ಸಾಧ್ಯವಾಗದಿರಬಹುದು. ಉದಾಹರಣೆಗೆ, ಜೀನ್ ಎಡಿಟಿಂಗ್ ಮಾಡುವಾಗ ತಪ್ಪಾಗಿ ಬೇರೊಂದು ಸೂಚನಾ ಸಾಲು ಕತ್ತರಿಯಾಯಿತೆಂದರೆ ಅದು ಪೀಳಿಗೆಯಿಂದ ಪೀಳಿಗೆಗೆ ಹರಿದು ಬರುತ್ತದೆ. ಇದರಿಂದ ಮಿಲಿಯಗಟ್ಟಲೆ ವರುಷಗಳಲ್ಲಿ ಜೀವಿಗಳು ಮೈಗೂಡಿಸಿಕೊಂಡಿರುವ, ವಾತಾವರಣಕ್ಕೆ ಹೊಂದಿಕೊಳ್ಳುವ ಗುಣವೇ ಇಲ್ಲವಾಗಬಹುದು! ಇದರಿಂದ ಇಡೀ ಮನುಕುಲವೇ ಅಪಾಯದ ಅಂಚಿಗೆ ಸಿಲುಕಬಹುದು ಅನ್ನುತ್ತಾರೆ ಜಗತ್ತಿನ ಹೆಚ್ಚಿನ ವಿಜ್ಞಾನಿಗಳು. ಈ ತರಹದ ತಕ್ಕುದಾದ ಕಾರಣಗಳಿಂದಾಗಿಯೇ ಚೀನಾದ ವಿಜ್ಞಾನಿಯ ಕೆಲಸವನ್ನು ಹಲವರು ವಿರೋಧಿಸಿದರಲ್ಲದೆ, ಆ ವಿಜ್ಞಾನಿ ಸೆರೆಮನೆ ಸೇರುವ ಹಾಗಾಯಿತು! ಆದರೆ ಜೀನ್ ಎಡಿಟಿಂಗ್ ಮಾಡುವ ಮನುಷ್ಯರ ಈ ಹೊಸ ಕತೆ ಈಗ ತಾನೆ ಶುರುವಾಗಿದೆ. ಮುಂದೆ ಅದು ಅಡ್ಡ ದಾರಿಯಲ್ಲಿ ಸಾಗಬಹುದು ಎಂಬ ಅಂಜಿಕೆ ಹಲವರಲ್ಲಿದೆ. ಸರಿಯಾಗಿ ಬಳಸಿದರೆ ಇದು ಕೂಡ ಮನುಷ್ಯರ ಹಲವು ಕುಂದುಕೊರತೆಗಳನ್ನು ನೀಗಬಲ್ಲ ತಂತ್ರಜ್ಞಾನ ಆಗಬಲ್ಲದು ಎನ್ನುವವರೂ ಇದ್ದಾರೆ. ಏನಾಗುವುದೋ ಕಾದು ನೋಡೋಣ.
| ಪ್ರಶಾಂತ ಸೊರಟೂರ
(ಲೇಖಕರು ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಗಳ ಬರಹಗಾರರು, ‘ಅರಿಮೆ’ ಜಾಲತಾಣದ ಸಂಪಾದಕರು)