ಕಾಮ-ಕ್ರೋಧಗಳನ್ನು ಗೆದ್ದವನೇ ಯೋಗಿ

Yogi 22 Jan 20
Published on
‘ಪೂರ್ವಪ್ರಾರಬ್ಧ ಕಳೆದುಕೊಳ್ಳಲು ಬುದ್ಧಿವಂತನಾದವನು ಯೋಚಿಸಿ, ಅಭ್ಯಾಸಮಾಡುತ್ತ ಕಾಲಕ್ರಮೇಣ ಮನಸ್ಸನ್ನು ವಿಷಯವಸ್ತುಗಳಿಂದ ಹಿಂದೆ ಪಡೆಯಬಹುದು. ಇದು ಕಷ್ಟವಾದರೂ ಅಸಾಧ್ಯವಲ್ಲ’ ಎನ್ನುವರು ವೇದಾಂತದೇಶಿಕರು. ಲೋಕದ ಸುಖ ಮಿತವಾದದ್ದು. ಬ್ರಹ್ಮನಿಗೂ ಆಯಸ್ಸು ಇದೆ. ಆಯಸ್ಸು ಮುಗಿದ ನಂತರ ಅವನೂ ಪರಬ್ರಹ್ಮದಲ್ಲಿ ಒಂದಾಗಬೇಕು. ಆದಿ-ಅಂತ್ಯಗಳಿರುವ ಪ್ರಪಂಚದಲ್ಲಿ ಸಾಧಕ ಎಚ್ಚರಿಕೆಯಿಂದ ಇರಬೇಕು. ವಿಷಯಸುಖವು ಸಾಪೇಕ್ಷ ಹಾಗೂ ಕ್ಷಣಿಕ, ಅಲ್ಪ ಹಾಗೂ ದುಃಖದಾಯಕ. ಇದನ್ನು ಚೆನ್ನಾಗಿ ತಿಳಿದ ಬ್ರಹ್ಮಜ್ಞಾನಿ ಅದರಲ್ಲಿ ಮನಸ್ಸನ್ನು ರಮಿಸಲು ಬಿಡುವುದಿಲ್ಲ. ಅವನು ಬ್ರಹ್ಮಾನಂದದಲ್ಲಿದ್ದಾಗ ವಿಷಯಸುಖಗಳು ಕಂಡರೂ ಅದು ಅವನನ್ನು ವಿಚಲಿತಗೊಳಿಸದಂತೆ ತಡೆಹಿಡಿಯುವುದು. ಮನಸ್ಸು ವಿಷಯಸುಖವು ತುಚ್ಛವೆನ್ನುವುದು. ಒಟ್ಟಿನಲ್ಲಿ ಆತ್ಮಜ್ಞಾನಿ ಎಂದಿಗೂ ಸಾಮಾನ್ಯ ಪ್ರಾಪಂಚಿಕ ಸುಖಗಳ ಗೊಡವೆಗೆ ಹೋಗುವುದೇ ಇಲ್ಲ.

ಶಕ್ನೋತಿಹೈವ ಯಃ ಸೋಢುಂ ಪ್ರಾಕ್ ಶರೀರವಿಮೋಕ್ಷಣಾತ್ |

ಕಾಮಕ್ರೋಧೋದ್ಭವಂ ವೇಗಂ ಸ ಯುಕ್ತಃ ಸ ಸುಖೀ ನರಃ || 5.23

‘ಶರೀರಪಾತಕ್ಕೆ (ಸಾಯುವ) ಮೊದಲು ಯಾವನು ಇಲ್ಲಿಯೇ ಕಾಮಕ್ರೋಧಗಳಿಂದ ಉಂಟಾದ ವೇಗವನ್ನು (ತೀವ್ರತೆಯನ್ನು) ಸಹಿಸಿಕೊಳ್ಳಲು ಶಕ್ತನಾಗುವನೋ ಅವನೇ ಯೋಗಿಯು, ಸುಖಿಯಾದವನು.’

ಈ ಶ್ಲೋಕದಲ್ಲಿ ಸ್ವಪ್ರಯತ್ನದ ಆವಶ್ಯಕತೆಯನ್ನು ಪರಮಾತ್ಮ ಆಗ್ರಹ ಮಾಡುತ್ತಿದ್ದಾನೆ. ತಾವು ಇಂದ್ರಿಯ ಮನಾದಿಗಳ ದೇಹ, ಇದರಲ್ಲಿ ನೂರಾರು ಜನ್ಮಗಳ ಸಂಸಾರ ತುಂಬಿದೆ, ಪರಿಣಾಮವಾಗಿ ಲೋಕದ ಆಕರ್ಷಣೆಗೆ ಬಲಿಯಾಗುತ್ತೇವೆಂಬ ಅರಿವು ಎಲ್ಲರಿಗೂ ಇದೆ. ಅರಿಷಡ್ವರ್ಗದಲ್ಲಿ ಮೊದಲ ಜೋಡಿಯಾದ ‘ಕಾಮ-ಕ್ರೋಧ’ಗಳು ಹೆಚ್ಚು ದೋಷಯುಕ್ತವಾಗಿವೆ. ಇದಕ್ಕೆ ಬಲಿಯಾದರೆ ಮುಳುಗಿದಂತೆಯೇ. ಇವು ಮತ್ತೆಮತ್ತೆ ವೇಗದಿಂದ ಬಂದಾಗ ತಡೆಯುವ ಶಕ್ತಿ ಇದ್ದವನೇ ಯೋಗಿ. ಮನುಷ್ಯನೊಬ್ಬ ಭಾರದ ಹೊರೆ ಹೊತ್ತೊಯ್ಯುವಾಗ ಅರ್ಧ ಭಾರವನ್ನು ಮತ್ತೊಬ್ಬನಿಗೆ ಕೊಟ್ಟಾಗ ಹೊರೆ ಸ್ವಲ್ಪ ಹಗುರವಾಗಬಹುದು. ಮತ್ತೊಬ್ಬ ಹಸಿವಿನಿಂದಿದ್ದಾಗ ಇನ್ನೊಬ್ಬನಿಗೆ ಅರ್ಧ ಹಸಿವನ್ನು ಹಂಚಲಾಗದು. ಹಸಿದವನೇ ಇದರ ನಿವಾರಣೆ ಮಾಡಿಕೊಳ್ಳಬೇಕು. ಸ್ವಪ್ರಯತ್ನವೆಂದರೆ ಇದುವೇ. ಸಾಯುವ ಮೊದಲು ಎಂದರೆ ಇದ್ದಾಗಲೇ ಬರುವ ಕಾಮ-ಕ್ರೋಧಗಳನ್ನು ಜಯಿಸಬೇಕು. ಸತ್ತವರಿಗೆ (ಹೆಣಕ್ಕೆ) ಕಾಮ-ಕ್ರೋಧಗಳೆಲ್ಲಿ? ಈ ದೋಷ ಬದುಕಿದ್ದಾಗಲೇ ಬರುವುದೆಂದು ಭಗವಂತನು ತೋರಿಸಿದ್ದಾನೆ. ‘ಇವುಗಳನ್ನು ತಡೆಯುವ ಶಕ್ತಿಗಳಿದ್ದಾಗ ಮನುಷ್ಯ ಅದ್ಭುತ ಕಾರ್ಯಗಳನ್ನು ಸಾಧಿಸಬಲ್ಲ’ ಎನ್ನುವರು ಶ್ರೀರಾಮಕೃಷ್ಣ ಪರಮಹಂಸರು. ಈ ಕಾರಣದಿಂದಲೇ ಸಾಧನಶಾಸ್ತ್ರಗಳಲ್ಲಿ ಬ್ರಹ್ಮಚರ್ಯವನ್ನು ಆಗ್ರಹಪೂರ್ವಕವಾಗಿ ಹೇಳಿದ್ದಾರೆ. (ಬ್ರಹ್ಮಚರ್ಯ ಹಾಗೂ ಸಂನ್ಯಾಸಜೀವನದಲ್ಲಿ ವಿಶೇಷವಾಗಿ) ‘ಕಾಮ-ಕ್ರೋಧಗಳನ್ನು ಅವು ಹುಟ್ಟುವಾಗಲೇ ತಡೆಯಬೇಕು. ಪ್ರವಾಹಕ್ಕೆ ಮೊದಲೇ ಅಣೆಕಟ್ಟು ಕಟ್ಟಿದರೆ ಪ್ರವಾಹವನ್ನು ತಡೆಯಬಹುದು. ಅಂತೆಯೇ ಕಾಮ-ಕ್ರೋಧಗಳನ್ನು ಬೆಳೆಯಲು ಬಿಡದೆ ತಡೆಯಬೇಕು. ರೋಗ ಪ್ರಾರಂಭವಾದಾಗಲೇ ಗುರುತಿಸಿ ಚಿಕಿತ್ಸೆ-ಔಷಧ ಮಾಡಿದರೆ ಗುಣವಾಗುವುದು. ಬಿಟ್ಟರೆ ಉಲ್ಬಣವಾಗುವುದು. ಆಗ ಯಾವ ಪ್ರಯತ್ನವೂ ಫಲಕಾರಿಯಾಗದು’ ಎನ್ನುವರು ಭಕ್ತಿಪ್ರಧಾನವಾಗಿ ವ್ಯಾಖ್ಯಾನ ಮಾಡಿರುವ ಶ್ರೀಧರಾಚಾರ್ಯರು.

ನಾವು ಬದುಕಿರುವವರೆಗೂ ತಡೆಯುವ ಪ್ರಕ್ರಿಯೆ, ಪ್ರಯತ್ನ ಜಾರಿಯಲ್ಲಿರಬೇಕು. ಈ ಸತತ ಅಭ್ಯಾಸದಿಂದ ಕಾಲಕ್ರಮೇಣ ನಮ್ಮೊಳಗೇ ಇದ್ದ ಮನಸ್ಸಿನ ಶಕ್ತಿಯು ಬೆಳೆದು, ಪ್ರಕಟವಾಗಿ ‘ಕಾಮ-ಕ್ರೋಧ’ಗಳನ್ನು ಗೆಲ್ಲುವುದು. ‘ನೀರಿನ ವೇಗವನ್ನು ತಡೆಯುವ ತಿಮಿಂಗಿಲದಂತಹ ಧೀರ ಯೋಗಿ, ಸಾಧಕ ವಿಷಯವಸ್ತುಗಳ ದೋಷಗಳನ್ನು ಗೆಲ್ಲುವ ಅಭ್ಯಾಸ ಮಾಡುತ್ತ ಇದ್ದಾಗ ಅವನಿಗೆ ಪರಮ ವೈರಾಗ್ಯ ಬರುವುದು’ ಎನ್ನುವರು ಮಧುಸೂದನ ಸರಸ್ವತಿಗಳು. ಯೋಗಸೂತ್ರದಂತೆ ವೈರಾಗ್ಯದಲ್ಲಿ ನಾಲ್ಕು ಹಂತಗಳಿವೆ. ಮೊದಲ ಹಂತದಲ್ಲಿ ವೈರಾಗ್ಯ ಬರುವ ಕರ್ಮಗಳನ್ನು ಅಥವಾ ವೈರಾಗ್ಯದೃಷ್ಟಿಯಿಂದ ಕರ್ಮಗಳನ್ನು ಮಾಡುತ್ತಾನೆ. ಆರು ತಿಂಗಳ ನಂತರ ತನ್ನ ಸಾಧನೆಯ ಅವಲೋಕನ ಮಾಡುವನು ಮತ್ತು ಸ್ವಲ್ಪ ಸಮಯದ ನಂತರ ಲೋಕಸುಖದ ಆಕರ್ಷಣೆ ಮನಸ್ಸಿನಲ್ಲಿ ಮಾತ್ರ ಇದ್ದು ಹೊರಗೆ ಇಲ್ಲವಾಗಿರುವುದನ್ನು ಗಮನಿಸುವನು. ನಾಲ್ಕನೇ ಹಂತದಲ್ಲಿ ಆಕರ್ಷಕ ವಸ್ತುಗಳು ಎದುರಿಗಿದ್ದರೂ, ಅನುಭವಿಸುವ ಅವಕಾಶವಿದ್ದರೂ ಮನಸ್ಸು ವಿಚಲಿತವಾಗದು. ಇದನ್ನು ಸಾಕ್ಷಾತ್ಕಾರದ ಹಿಂದಿನ ಹೆಜ್ಜೆ ‘ವಶೀಕಾರಸಂಜ್ಞ ವೈರಾಗ್ಯ’ ಎನ್ನುವರು. ಈ ಹಂತದಲ್ಲಿರುವವನೇ ನಿಜವಾದ ಸುಖಿ, ಯೋಗಿ. ‘ಮರಣಿಸಿದಾಗ ಕಾಮ-ಕ್ರೋಧಗಳು ಪ್ರವೇಶಿಸಲಾರವು. ಬದುಕಿರುವಾಗ ಈ ಸ್ಥಿತಿ ಪಡೆದವನೇ ಯೋಗಿ’ ಎನ್ನುವರು ವಸಿಷ್ಠಮಹರ್ಷಿಗಳು. ಈ ಅವಸ್ಥೆಯಲ್ಲಿ ಮನಸ್ಸನ್ನು ನಿಲ್ಲಿಸುವ ಸಾಧನೆ ಮಾಡಬೇಕು.

‘ಮಾನವಜನ್ಮವು ಬಹಳ ದುರ್ಲಭವಾದುದು. ಅದರಲ್ಲಿಯೂ ಬ್ರಾಹ್ಮಣತ್ವದ (ಜಾತಿಯಲ್ಲ) ಗುಣ ನಡವಳಿಕೆ ಮತ್ತೂ ದುರ್ಲಭ. ಇದು ದೊರೆತಾಗ ಮುಕ್ತಿಗೆ ಪ್ರಯತ್ನಿಸಿದವನು ಮೇರುಪರ್ವತದ ತುದಿ ತಲುಪಿ ಅಲ್ಲಿಂದ ಹಾರಿ ಬಿದ್ದು ಸಾಯುವವನಂತೆಯೇ. ಮೇಲಿರುವುದು ಆನಂದ ಪಡೆಯಲು. ಪಡೆಯದೆ ಸತ್ತರೆ ಅವನು ಮೂರ್ಖ. ಅರ್ಥಾತ್ ಮನುಷ್ಯಜನ್ಮದಲ್ಲಿ ಎಲ್ಲವನ್ನೂ ತ್ಯಾಗಮಾಡಿ, ವಿವೇಕ, ವೈರಾಗ್ಯಗಳ ಮೂಲಕ ಯೌವನದಲ್ಲಿದ್ದಾಗಲೇ ಸಾಧನೆಯಿಂದ ಕಾಮಾದಿ ಕ್ರೋಧಗಳನ್ನು ಗೆದ್ದಲ್ಲಿ ಮೋಕ್ಷ ಸಂಪಾದಿಸಲು ಯೋಗ್ಯನಾಗುವನು’ ಎನ್ನುವರು ಶಂಕರಾನಂದರು. ಮಾನವಜನ್ಮವನ್ನು ಆಧ್ಯಾತ್ಮಿಕ ಪ್ರವೃತ್ತಿಯಿಂದ ಬಳಸಿಕೊಂಡಾಗ ಜನ್ಮ ಸಾರ್ಥಕವಾಗಿ, ಪುನರ್ಜನ್ಮವಿರದ ಉದ್ಧಾರದ ದಾರಿಯನ್ನು ಭಗವಂತ ಭಗವದ್ಗೀತೆಯಲ್ಲಿ ತೋರಿಸುತ್ತಿದ್ದಾನೆ.

ಯೋಂತಃಸುಖೋಂತರಾರಾಮಸ್ತಥಾಂತಜ್ಯೋತಿರೇವ ಯಃ |

ಸ ಯೋಗೀ ಬ್ರಹ್ಮನಿರ್ವಾಣಂ ಬ್ರಹ್ಮಭೂತೋಧಿಗಚ್ಛತಿ || 5.24

‘ಯಾರು ತನ್ನೊಳಗೇ (ಆತ್ಮನಲ್ಲಿ) ಸುಖ ಪಡೆದು ಆರಾಮವಾಗಿರುವನೋ, ತನ್ನೊಳಗೇ ಜ್ಯೋತಿ, ಪ್ರಕಾಶವನ್ನು ನೋಡುವನೋ ಆ ಯೋಗಿಯು ಬ್ರಹ್ಮನಿಸ್ವರೂಪವನ್ನು ಹೊಂದಿ ಮುಕ್ತಿಯನ್ನು ಪಡೆಯುತ್ತಾನೆ.’

ಅಂತಃಸುಖ: ಎಲ್ಲ ಜೀವಿಗಳೂ, ವಿಶೇಷವಾಗಿ ಮನುಷ್ಯ ಭಗವಂತನಿಂದ ಮನಸ್ಸು, ಬುದ್ದಿಗಳ ಮೂಲಕ ಎಲ್ಲ ರೀತಿಯ ಸುಖ ಪಡೆಯಲು ಪ್ರಯತ್ನಿಸುತ್ತಾನೆ. ಪಂಚನೇಂದ್ರಿಯಗಳು ಹೊರಗಿನ ಇಂದ್ರಿಯ ವಿಷಯವಸ್ತುಗಳ ಸಂಪರ್ಕಕ್ಕೆ ಬಂದಾಗ ಸುಖವಾಗುವುದು. ಇದು ಎಲ್ಲ ಜೀವಿಗಳ ಅನುಭವಕ್ಕೆ ಬರುವ ಸುಖ. ಆದರೆ ಈ ಸುಖ ಕ್ಷಣಿಕ ಮಾತ್ರವಲ್ಲ ದುಃಖಕ್ಕೂ ಕಾರಣವಾಗುವುದು. ಆದ್ದರಿಂದ ಆಧ್ಯಾತ್ಮಿಕ ಜೀವನ ನಡೆಸಲು ಪ್ರಯತ್ನಿಸುತ್ತಿರುವವರು ಈ ಬಾಹ್ಯ ಸುಖ ತೊರೆದು ವೈರಾಗ್ಯವನ್ನು ಅಭ್ಯಾಸ ಮಾಡಬೇಕು. ಚತುಮುಖ ಬ್ರಹ್ಮನು ಮನುಷ್ಯರ ಇಂದ್ರಿಯಗಳನ್ನು ಹೊರಮುಖವಾಗಿ ಇಟ್ಟಿದ್ದಾನೆ. ಎಲ್ಲರ ಇಂದ್ರಿಯಗಳೂ ಹೊರಗೇ ಇದ್ದರೂ, ಯಾರೋ ಒಬ್ಬ ಧೀರ ನಿಜವಾದ ಸುಖ ಒಳಗಿದೆ ಎಂಬ ರಹಸ್ಯ ತಿಳಿದು ಹೊರಹೋಗುವ ಮನಸ್ಸನ್ನು ಬಲವಂತವಾಗಿ ತಡೆದು ಒಳಗೆ ತಿರುಗಿಸಿದ. ಆಗವನು ಆಂತರ್ಯದಲ್ಲಿನ ಆತ್ಮವಸ್ತುವಿನ ಅನುಭವ ಪಡೆದು ನಿಜವಾದ ಸುಖದಿಂದ ತೃಪ್ತಿ ಪಡೆಯುವನು. ಯೋಗಿಯದ್ದು ಅಂತಃಸುಖ. ಅವನಿಗೆ ಬಾಹ್ಯ ಸುಖದ ಅಗತ್ಯವಿಲ್ಲ. ಒಳಗೆ ಸುಖ ಪಡೆಯಲು ಜ್ಞಾನಯೋಗದ ದೃಷ್ಟಿಯಿಂದ ಅಂತರಾತ್ಮ, ಆತ್ಮ, ಪರಬ್ರಹ್ಮವಸ್ತು, ಭಕ್ತಿಯೋಗದ ದೃಷ್ಟಿಯಿಂದ ಇಷ್ಟದೇವತೆ ಇವುಗಳೊಡನೆ ಒಂದಾಗಬೇಕು. ಪರಮಾತ್ಮ ಹಾಗೂ ಇಷ್ಟದೇವತೆ ಎಲ್ಲರ ಹೃದಯದಲ್ಲಿಯೂ ಇರುತ್ತಾರೆ. ಆದ್ದರಿಂದ ಭಕ್ತರು ಹೊರಹೋಗುತ್ತಿರುವ ಮನಸ್ಸನ್ನು ಒಳಗಿನ ಇಷ್ಟದೇವತೆಯ ಕಡೆಗೆ ತಿರುಗಿಸಿ ನಿಜವಾದ ಸುಖ ಪಡೆಯುವರು.

ಅಂತರ್ ಆರಾಮ: ‘ಆರಾಮ’ ಶಬ್ದಕ್ಕೆ ಎರಡು ಅರ್ಥಗಳಿವೆ. ಒಂದು ‘ತೋಟ’, ಮತ್ತೊಂದು ‘ಆಟದ ವಸ್ತು’. ಬೇಸರವಾದಾಗ ಆರಾಮವಾಗಲು ತೋಟಕ್ಕೆ ಹೋಗುತ್ತೇವೆ. ಸುಂದರ ಹೂ-ಹಣ್ಣು-ಸುಗಂಧ-ನೆರಳಿನ ತೋಟದಲ್ಲಿದ್ದಾಗ ಆನಂದವಾಗುವುದು. ಚಿಕ್ಕಮಕ್ಕಳು ಸಂತೋಷಪಡುವಾಗ ಆಟದ ವಸ್ತುವನ್ನು ಪಡೆಯುವರು. ಆ ಮೂಲಕ ಸುಖ, ಆರಾಮ, ಸಂತೋಷವನ್ನು ಅನುಭವಿಸುವರು. ಆದರೆ ಯೋಗಿಗೆ ಸಾಮಾನ್ಯರು ಬಯಸುವ ತೋಟವಾಗಲಿ, ಆಟಿಕೆಯಾಗಲಿ ಬೇಕಿಲ್ಲ. ಯೋಗಿಯು ಎರಡನ್ನೂ ಅವುಗಳಿಂದ ಸಿಗುವ ಸುಖವನ್ನೂ ತನ್ನ ಮನಸ್ಸಿನೊಳಗೇ ಆಧ್ಯಾತ್ಮಿಕ ಶಕ್ತಿಯಿಂದ ಪಡೆಯುವನು.

ಅಂತರ್ ಜ್ಯೋತಿ: ಸೂರ್ಯ, ಚಂದ್ರ, ಅಗ್ನಿ ಎಂಬ ಮೂರು ಹೊರಗಿನ ಬೆಳಕುಗಳು ನಮಗೆ ತಿಳಿದಿವೆ. ಅವುಗಳನ್ನು ಆಶ್ರಯಿಸುವುದರಿಂದ ನಮಗೆ ಪ್ರಪಂಚ ತಿಳಿಯುವುದು. ಜ್ಞಾನವೂ ಜ್ಯೋತಿಪ್ರಕಾಶದಂತೆ. ಮನಸ್ಸಿನಲ್ಲಿ ಜ್ಞಾನಪ್ರಕಾಶವಾದಾಗ ವಸ್ತುವಿನ ಬಗ್ಗೆ ಇರುವ ಅಜ್ಞಾನ ಹೋಗುವುದು. ಬೆಳಕಿನಲ್ಲಿ ವಸ್ತುವು ಚೆನ್ನಾಗಿ ಕಾಣಿಸುವಂತೆ, ಮನಸ್ಸಿನಲ್ಲಿ ಜ್ಞಾನಜ್ಯೋತಿ ಬಂದಾಗ ಅಜ್ಞಾನ ತಾನಾಗಿಯೇ ಹೋಗುವುದು. ಯೋಗಿಯು ಬಾಹ್ಯಜ್ಯೋತಿಯನ್ನವಲಂಬಿಸದೆ ತನ್ನ ಮನಸ್ಸಿನಲ್ಲಿಯೇ ಜ್ಯೋತಿಯನ್ನು ಕಾಣುವನು. ಅವನ ಸೂಕ್ಷ್ಮ ಮನಸ್ಸು ಪ್ರಪಂಚದಲ್ಲಿ ತಿಳಿಯಬೇಕಾದ್ದೆಲ್ಲವನ್ನೂ ತನ್ನೊಳಗೇ ತಿಳಿಯುವುದು. ಯೋಗಿಗಳು ಧ್ಯಾನಸ್ಥನಾದರೆ ಸಾಕು, ಅವರಿಗೆ ಬೇಕಾದ್ದು ಅವರ ಹೃದಯದಲ್ಲಿಯೇ ಸ್ಪುರಿಸುವುದು. ಈ ಯೋಗಿ ಹೊರಮನಸ್ಸನ್ನು ಒಳಗೆಳೆದು, ಸಂಪೂರ್ಣವಾಗಿ ಬ್ರಹ್ಮ-ಆತ್ಮವಸ್ತುವಿನ ಮೇಲೆ ಕೇಂದ್ರೀಕರಿಸುತ್ತಿದ್ದಾನೆ. ಹೀಗೆ ಬ್ರಹ್ಮದ ಮೇಲೆ ಧ್ಯಾನ ಮಾಡುತ್ತ ತಾನೇ ಬ್ರಹ್ಮನಾಗಿದ್ದಾನೆ. ಇದರ ಫಲವೇ ಬ್ರಹ್ಮನಿರ್ವಾಣ. ನಿರ್ವಾಣವೆಂದರೆ ಉರಿಯುತ್ತಿರುವ ದೀಪವನ್ನು ಆರಿಸುವುದು. ದೀಪದ ಬೆಳಕು ಶೂನ್ಯದಲ್ಲಿ-ಆಕಾಶದಲ್ಲಿ ಲಯವಾಯಿತು. ಅದರಂತೆಯೇ ಯೋಗಿಯು ತಾನೇ ಬ್ರಹ್ಮನಾಗಿ ಬ್ರಹ್ಮವಸ್ತುವಿನಲ್ಲಿ ಒಂದಾಗಿ ಕರಗಿಹೋಗುವನು, ನದಿ ಸಮುದ್ರದಲ್ಲಿ ಒಂದಾದಂತೆ. ಬ್ರಹ್ಮನಿರ್ವಾಣ ಹೊಂದಲು ಮೊದಲಿಗೆ ಮನಸ್ಸನ್ನು ಹೊರಗಿನಿಂದ ಒಳಗೆಳೆದು ಬ್ರಹ್ಮದಲ್ಲಿ ಏಕಾಗ್ರತೆಯಿಂದ ನಿಲ್ಲಿಸಿ, ದೀರ್ಘ ಅಭ್ಯಾಸದಿಂದ ನಾವೇ ಬ್ರಹ್ಮವಾಗಿ, ಹೊರಗೆ ಪಡೆಯುತ್ತಿದ್ದ ಸುಖವನ್ನು ಒಳಗೇ ಪಡೆದು ಪರಬ್ರಹ್ಮದಲ್ಲಿ ಒಂದಾಗಬೇಕು. ಇದೇ ಬ್ರಹ್ಮನಿರ್ವಾಣ-ಮೋಕ್ಷ-ಮುಕ್ತಿ.

(ನಿರೂಪಣೆ: ರಾಮಾಯಣ ಸುರೇಶ್ ಕುಮಾರ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net