

ಚಿಕ್ಕ ಮಕ್ಕಳಿಂದ ವಯೋವೃದ್ಧರವರೆಗೆ ಪೂಜಿಸಲ್ಪಡುವ, ನಮ್ಮ ಮನಕ್ಕನುಗುಣವಾಗಿ ನಾನಾ ರೂಪಗಳನ್ನು ತಾಳುವ ಗಣೇಶ ಹಾಗೂ ಜಗನ್ಮಾತೆ ಗೌರಿ ಹಬ್ಬಗಳು ಹೊಸ್ತಿಲಲ್ಲಿವೆ. ಹಬ್ಬಗಳನ್ನು ಅಂಧಾನುಕರಣೆ, ಅವೈಜ್ಞಾನಿಕವಾಗಿಸದೆ ಆಚರಣೆಯ ಹಿಂದಿನ ತತ್ವವನ್ನು ತಿಳಿಯಬೇಕು. ಗಣೇಶನ ಕಥೆಯ ವಿನೋದವನ್ನೂ ಅನುಭವಿಸಬೇಕು ಎಂಬ ಕಲ್ಪನೆಯಲ್ಲಿ ‘ವಿಜಯವಾಣಿ’ ಮತ್ತು ‘ದಿಗ್ವಿಜಯ ನ್ಯೂಸ್ 247’ ಬುಧವಾರ ಕ್ಲಬ್ಹೌಸ್ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಸಿದ್ಧ ಲೇಖಕ, ವಾಗ್ಮಿ ಹಾಗೂ ಗಣೇಶ ವಿಗ್ರಹ ಸಂಗ್ರಹಕಾರ ಎಸ್.ಷಡಕ್ಷರಿ, ಸಂಸ್ಕೃತ ವಿದ್ವಾಂಸ ಹಾಗೂ ಮೈತ್ರೇಯಿ ಸಂಸ್ಕೃತ ಸಂಸ್ಕೃತಿ ಪ್ರತಿಷ್ಠಾನದ ಡಾ.ಗಣಪತಿ ಹೆಗಡೆಯವರು ಅನೇಕ ವಿಚಾರ ತಿಳಿಸಿಕೊಟ್ಟರು. ಖ್ಯಾತ ಗಾಯಕಿಯರಾದ ಸವಿತಾ ಹಾಗೂ ರಮ್ಯಾ ವಸಿಷ್ಠ ಅವರ ಗಾಯನದ ಮೂಲಕ ಇಡೀ ಕಾರ್ಯಕ್ರಮ ರಮಣೀಯವಾಯಿತು.
ಗಣೇಶ ಮೂರ್ತಿಗಳ ಸಂಗ್ರಹ
ಅಂಗಾಂಗಕ್ಕೂ ಇದೆ ಕಥೆ
ಗಣಪತಿ ಆಕಾರಕ್ಕೆ ಒಂದು ವೈಜ್ಞಾನಿಕ ವಿವರಣೆ ಇದೆ. ಜಗತ್ತಿನಲ್ಲಿ ಎಲ್ಲ ವಿಚಾರಗಳನ್ನೂ ಮುಕ್ತವಾಗಿ ಕೇಳಿಸಿಕೊಳ್ಳಬೇಕು, ಸ್ವೀಕರಿಸಬೇಕು ಎಂದು ಅಗಲವಾದ ಕಿವಿ ಸೂಚಿಸುತ್ತದೆ. ಎಲ್ಲ ವಿಚಾರವನ್ನೂ ಗಮನವಿಟ್ಟು ನೋಡುವುದನ್ನು ಸಣ್ಣ ಕಣ್ಣು ಸೂಚಿಸುತ್ತದೆ. ಊಟಕ್ಕೆ ಹಾಗೂ ಸ್ನಾನಕ್ಕೂ ಸೊಂಡಿಲನ್ನೆ ಬಳಸಬಹುದಾಗಿದ್ದು, ಗಣಪತಿ ತನ್ನ ಉದ್ದನೆಯ ಮೂಗನ್ನು ಎಲ್ಲ ಕಡೆ ತೂರಿಸಿ ಕೆಲಸ ಸಾಧಿಸುತ್ತಾನೆ. ಜೀವನದಲ್ಲಿ ಬಂದ ಕಷ್ಟ ನಷ್ಟ ಸುಖಗಳೆಲ್ಲವನ್ನೂ ಜೀರ್ಣಿಸಿಕೊಳ್ಳಬೇಕು ಎಂಬುದರ ಸಂಕೇತವೇ ದೊಡ್ಡ ಹೊಟ್ಟೆ. ವಾಹನದ ಕುರಿತು ಚಿಂತೆಯಿಲ್ಲದೆ ಪುಟ್ಟ ಇಲಿಯೇರಿ ಜಗತ್ತನ್ನೆ ಸುತ್ತಿ ಬರುತ್ತಾನೆ. ಒಂದೇ ಸಮಯಕ್ಕೆ ಅನೇಕ ಕೆಲಸಗಳನ್ನು ಮಾಡಬೇಕು ಎಂಬುದನ್ನು ನಾಲ್ಕು ಕೈ ತೋರಿಸುತ್ತದೆ.
1 ರೂಪಾಯಿಗೆ ಹುಂಡಿ ಗಣಪ
ಮಹಾರಾಷ್ಟ್ರದ ಪುಣೆ ಬಳಿ ಅಷ್ಟ ಗಣಪತಿ ದೇವಸ್ಥಾನವಿದೆ. ದೂರದೂರದಲ್ಲಿರುವ ಎಲ್ಲ 8 ಗಣಪತಿಗಳನ್ನೂ ವೀಕ್ಷಿಸಲು ಮೂರು ದಿನ ಬೇಕಾಗುತ್ತದೆ. ಒಮ್ಮೆ ಹೋದಾಗ, ಪ್ರತಿ ದೇವಸ್ಥಾನದ ಎದುರೂ ಮಾರಾಟಕ್ಕಿದ್ದ ವಿಶಿಷ್ಠ ಗಣಪತಿ ವಿಗ್ರಹಗಳನ್ನು ಕೊಳ್ಳುತ್ತ ಸಾಗುತ್ತಿದ್ದೆ, ಸುಮಾರು 22-23 ಗಣಪತಿ ವಿಗ್ರಹಳಾಗಿದ್ದವು. ಮಯೂರ ಗಣಪತಿ ದೇವಸ್ಥಾನದ ಬಳಿ ವಯೋವೃದ್ಧ ಮಹಿಳೆಯೊಬ್ಬರು ಆಗಮಿಸಿ, ತನ್ನ ಗಂಡನಿಂದ ಲಭಿಸಿದ ಹುಂಡಿ ಆಕಾರದ ಗಣಪತಿಯನ್ನು ತೋರಿಸಿದರು. ಇದನ್ನು ನೀವೇ ತೆಗೆದುಕೊಂಡು ಹೋಗಿ ಎಂದಾಗ, ನಾನು ಹಣ ಎಷ್ಟು ಎಂದು ಕೇಳಿದೆ. ಹಣ ಬೇಡ ಎಂದವರು, ಕೊನೆಗೆ ನನ್ನ ಒತ್ತಾಯಕ್ಕೆ ಮಣಿದು 1 ರೂ. ಪಡೆದು ಅದನ್ನು ನೀಡಿದರು.
ಪರಿಸರಸ್ನೇಹಿ ಗಣೇಶನೇ ಶ್ರೇಷ್ಠ
ಪ್ಲಾಸ್ಟಿಕ್, ಪ್ಲಾಸ್ಟರ್ ಆಫ್ ಪ್ಯಾರಿಸ್ನಿಂದ ತಯಾರಿಸಿದ, ರಾಸಾಯನಿಕ ಬಣ್ಣವನ್ನು ಬಳಿದ ಗಣಪತಿಯನ್ನು ಪೂಜಿಸಬಾರದು ಎಂದು ಷಡಕ್ಷರಿ ಹಾಗೂ ಡಾ. ಗಣಪತಿ ಹೆಗಡೆಯವರಿಬ್ಬರೂ ಕರೆ ನೀಡಿದರು. ಪ್ಲಾಸ್ಟರ್ ಆಫ್ ಪ್ಯಾರಿಸ್ನಿಂದ ಮಾಡಿದ ಗಣೇಶ ನೀರಿನಲ್ಲಿ ಕರಗುವುದಿಲ್ಲ. ಕೆರೆಗಳಲ್ಲಿ ಮೂರ್ತಿಗಳು ಅನಾಥವಾಗಿರುತ್ತವೆ, ಇದನ್ನು ಕಂಡರೆ ಬೇಸರವಾಗುತ್ತದೆ. ಮಣ್ಣಿನಿಂದ ತಯಾರಿಸಿದ ಹಾಗೂ ರಾಸಾಯನಿಕ ಬಣ್ಣ ಇಲ್ಲದ ಗಣೇಶನನ್ನು ಬಳಸಬೇಕು. ಉತ್ಸವವು ಆನಂದ ನೀಡಬೇಕೆ ವಿನಃ ನೋವು ಕೊಡಬಾರದು. ರಾಸಾಯನಿಕ ವಿಗ್ರಹ ಬಳಸಬಾರದು. ಮಣ್ಣಿನಿಂದ, ಹಸುವಿನ ಸಗಣಿಯಿಂದ ಗಣೇಶನನ್ನು ತಯಾರಿಸಬೇಕು. ಮಣ್ಣಿಂದಲೇ ಕಾಯ, ಮಣ್ಣಿಂದಲೇ ಸರ್ವ ಎಂಬಂತೆ, ಗಣಪತಿ ಜೀವನ ತತ್ವವನ್ನು ಅರ್ಥ ಮಾಡಿಕೊಂಡು ಆರಾಧಿಸಿ ಎಂದರು.
ಕೃಷಿಯಲ್ಲಿ ಗಣೇಶನ ವರ್ಣನೆ
| ಎಂ.ಎಸ್.ನರಸಿಂಹಮೂರ್ತಿ ಹಾಸ್ಯ ಸಾಹಿತಿ
ಅಪ್ಪ ಅಮ್ಮನಿಗೇ ಬೇಸ್ತು
ಶಿವ ಹಾಗೂ ಪಾರ್ವತಿಗೆ ಪ್ರಿಯವಾದ ಪುತ್ರ ಗಣೇಶ. ಗಣಪತಿ ಯಾವಾಗಲೂ ಶಿವ ಪಾರ್ವತಿ ಮಧ್ಯೆಯಲ್ಲಿಯೇ ಕುಳಿತಿರುತ್ತಾನೆ. ಒಮ್ಮೆ ಇಬ್ಬರೂ ಗಣಪತಿಗೆ ಮುತ್ತಿಕ್ಕಲು ಬರುತ್ತಾರೆ. ಇದನ್ನು ಕಂಡ ಗಣಪತಿ ತಕ್ಷಣವೇ ಹಿಂದೆ ಸರಿಯುತ್ತಾನೆ, ಶಿವ ಪಾರ್ವತಿ ಇಬ್ಬರೂ ಪರಸ್ಪರ ಮುತ್ತು ಕೊಟ್ಟುಕೊಳ್ಳುತ್ತಾರೆ. ನೋಡಿ, ನಿಮ್ಮನ್ನು ಹೇಗೆ ಬೇಸ್ತು ಬೀಳಿಸಿದೆ ಎಂದು ಗಣೇಶ ನಗುತ್ತಾನೆ.
ತಾಯಿಯಿಂದಲೇ ಪೂಜಿತ
ಗಣೇಶ ಪುರಾಣದಲ್ಲಿ ಗಣಪತಿಯ ಕುರಿತು ಅನೇಕ ಕಥೆಗಳಿವೆ. ಗಣಪತಿ ಆದಿದೇವತೆ, ಆತನನ್ನು ಪೂಜಿಸಿಯೇ ಎಲ್ಲ ಕಾರ್ಯವನ್ನೂ ಆರಂಭಿಸಬೇಕು. ಪಾರ್ವತಿಗೆ ಮದುವೆ ಆಗದಿದ್ದಾಗ, ಅರಿಶಿಣದಲ್ಲಿ ಒಂದು ಗಣಪತಿಯನ್ನು ಪ್ರತಿಷ್ಠಾಪಿಸಿ ಪೂಜಿಸಿ ನಂತರ ತಪಸ್ಸು ಮಾಡುತ್ತಾಳೆ. ಆಗ ಶಿವ ಪ್ರತ್ಯಕ್ಷನಾಗಿ ಪಾರ್ವತಿಯನ್ನು ಮದುವೆ ಆಗುತ್ತಾನೆ. ತನ್ನ ಮದುವೆಗೆ ಮಗನನ್ನೆ ತಾಯಿ ಪ್ರಾರ್ಥಿಸಿದಳು ಎಂಬುದು ಇದರ ವೈಶಿಷ್ಠ್ಯ
ದೇವರ ಆದೇಶಕ್ಕೆ ಮೇಲ್ಮನವಿ ಇಲ್ಲ!
ಪ್ರತಿದಿನ ಬೆಳಗ್ಗೆ ಕಚೇರಿಗೆ ಹೋದ ಕೂಡಲೆ ಗಣಪತಿಗೆ ಐದು ಹೂ ಅರ್ಪಿಸುತ್ತೇನೆ, ಬಾಳೆ ಹಣ್ಣು ಇಡುತ್ತೇನೆ. ಸಾಯಂಕಾಲದವರೆಗೆ ನೋಡಿ, ಬಾಳೆ ಹಣ್ಣನ್ನು ಗಣಪತಿ ತಿಂದಿಲ್ಲವೆಂದರೆ ನಾನೇ ತಿನ್ನುತ್ತೇನೆ! ನಾನು ಏನೆಲ್ಲ ಬೇಕು ಎಂದು ಬೇಡಿಕೊಂಡಿದ್ದೇನೆಯೋ, ಕೆಲವೊಮ್ಮೆ ನಿಧಾನವಾಗಿಯಾದರೂ ಅದೆಲ್ಲವೂ ಆಗಿದೆ. ಒಂದು ವೇಳೆ ಆಗಿಲ್ಲವೆಂದರೆ, ಅದು ನನಗೆ ಬೇಡ ಎಂದು ದೇವರೇ ನಿರ್ಧರಿಸಿದ್ದಾನೆ ಎಂದು ಭಾವಿಸುತ್ತೇನೆ. ದೇವರ ತೀರ್ಪಿಗೆ ಅಪೀಲು ಇಲ್ಲ, ಚರ್ಚೆಯ ಪ್ರಶ್ನೆಯಿಲ್ಲ.
ಗಣಪನನ್ನು ಅವಮಾನಿಸಬೇಡಿ
ಗಣಪತಿ ಅತ್ಯಂತ ಸ್ನೇಹಪರವಾದ ದೇವರು. ನೀವು ಯಾವ ರೂಪವನ್ನಾದರೂ ಆತನಿಗೆ ನೀಡಬಹುದು. ದಶಾವತಾರ ರೂಪದಲ್ಲಿ ವಿಷ್ಣುವಿನ ಬದಲಿಗೆ ಗಣಪತಿ ಇರುವ, ಲ್ಯಾಪ್ಟಾಪ್ ಬಳಸುತ್ತಿರುವ, ಮೊಬೈಲ್ ಬಳಸುತ್ತಿರುವ, ಕಿಂದರಿಜೋಗಿ ಜತೆಗೆ 100 ಇಲಿಗಳಿರುವ ವಿಗ್ರಹವಿವೆ. ಆದರೆ ಕೆಲವೆಡೆ ವೀರಪ್ಪನ್ ಗಣಪತಿ, ತಾಲಿಬಾನ್ ಗಣಪತಿ ಮಾಡುತ್ತಾರೆ, ಅದು ತಪು್ಪ. ಈ ರೀತಿ ಮಾಡುವುದರ ಮೂಲಕ ಗಣಪತಿ ಜತೆಗೆ ಸಂಸ್ಕೃತಿಗೂ ಅವಮಾನ ಮಾಡಬಾರದು.
ನಾಟಕದಲ್ಲಿ ವ್ಯಕ್ತವಾದ ಗಣಪತಿ
ಗಣಪತಿ ಎಂದ ಕೂಡಲೆ ಮಣ್ಣಿಂದ ಕಾಯ ಎಂಬ ಪುರಂದರದಾಸರ ಹಾಡು ನೆನಪಿಗೆ ಬರುತ್ತದೆ. ಪೃಥ್ವಿ, ಮಣ್ಣು, ಗಣಪತಿ ಎಲ್ಲವೂ ಎಷ್ಟು ಅಂತರ್ಸಂಪರ್ಕ ಹೊಂದಿವೆ ಎಂಬುದನ್ನು ಇದು ತಿಳಿಸುತ್ತದೆ. ಭೂಮಿ ಜತೆಗೆ ನಮ್ಮ ಗಾಢ ಸಂಬಂಧವಿದೆ. ಅಥರ್ವಶೀರ್ಷದಲ್ಲಿ, ಗಣಪತಿಯನ್ನು ಪ್ರಣವ ಎಂದು ಕರೆಯಲಾಗಿದೆ. ಅವನೇ ಎಲ್ಲವೂ ಎಂದು ತಿಳಿಸಲಾಗಿದೆ. ಬಹುಶಃ ಬಿ.ವಿ. ಕಾರಂತರು ಇದರಿಂದಲೇ ಪ್ರಭಾವಿತರಾಗಿ, ‘ಓ ಆದಿ ಪ್ರೇಕ್ಷಕನೆ, ನಾಟಕದ ಮಾಲಿಕನೆ, ಸ್ವೀಕರಿಸು ನಾಟಕ ಮೋದಕವ’ ಎಂದು ಹೇಳಿದ್ದಾರೆ.
| ರಮ್ಯಾ ವಸಿಷ್ಠ ಗಾಯಕಿ
ನಮ್ಮ ಧರ್ಮದಷ್ಟೆ ಜನಪದವೂ ಸನಾತನವಾದದ್ದು. ಉತ್ತರ ಕರ್ನಾಟಕದಲ್ಲಿ ಐದು ದೇವರನ್ನು ಮಣ್ಣಿನಿಂದ ತಯಾರಿಸಿ ಪೂಜೆ ಮಾಡುತ್ತಾರೆ. ಮೊದಲ ಮಣ್ಣಿನ ದೇವತೆಯಾಗಿ, ಶಿವ ಪಾರ್ವತಿ ಬಳಿ ಮಳೆ ತಂದ ಜೋಕುಮಾರನನ್ನು ಪೂಜಿಸುತ್ತಾರೆ. ಮಣ್ಣೆತ್ತಿನ ಅಮಾವಾಸ್ಯೆ ದಿನ ಮಣ್ಣೆತ್ತು ಪೂಜಿಸುತ್ತಾರೆ, ಅನ್ನದ ದೇವತೆಯಾದ ಗುಳ್ಳವ್ವನ ವಿಗ್ರಹ ತಯಾರಿಸುತ್ತಾರೆ. ಕೃಷಿಯನ್ನು ರಕ್ಷಿಸುವವನಾಗಿ ನಾಗನ ವಿಗ್ರಹ ಮಾಡುತ್ತಾರೆ. ಐದನೆಯದಾಗಿ ಗಣೇಶನನ್ನು ಪೂಜಿಸಿ ನೈವೇದ್ಯ ಅರ್ಪಿಸುತ್ತಾರೆ.
| ಸುಬ್ರಹ್ಮಣ್ಯ ಸಾಹಿತ್ಯ ಪ್ರಕಾಶನ
ಗಾಯನದಿಂದ ಮೆರುಗು
ಎಲ್ಲರಿಗೂ ಬೇಕಾದವ ಗಣಪ
ಭಾದ್ರಪದದ ತೃತೀಯ ಹಾಗೂ ಚತುರ್ಥ ಎಂಬುದು ವಿಶಿಷ್ಠ ಸಂಯೋಗ. ತಾಯಿಯ ಹೆಸರಿನಲ್ಲಿ ತೃತೀಯ ಹಾಗೂ ಪುತ್ರ ಗಣೇಶನ ಹೆಸರಿನಲ್ಲಿ ಚತುರ್ಥಿಗೆ ಪ್ರಾಮುಖ್ಯತೆ ಇದೆ. ನಮ್ಮದು ಕೃಷಿ ಪ್ರಧಾನ ದೇಶ. ಪಾರ್ವತಿ, ಪರ್ವತರಾಜನ ಮಗಳು. ಪರ್ವತ ಎಂದರೆ ಕಲ್ಲು, ಬೆಟ್ಟ ಗುಡ್ಡಗಳಿಂದ ಕೂಡಿದ್ದು, ಕೃಷಿಗೆ ಸಂಬಂಧಿಸಿದ್ದು. ಆದ್ದರಿಂದಲೇ ಪಾರ್ವತಿಯನ್ನು ಕೃಷಿಕರು ಶ್ರದ್ಧೆಯಿಂದ ಪೂಜೆ ಮಾಡುತ್ತಾರೆ. ಗಣೇಶನನ್ನು ಕೃಷಿ ಪ್ರಧಾನ ದೇವತೆ ಎಂದು ನಂಬುತ್ತಾರೆ. ಕಲ್ಲು, ಮಣ್ಣು ಸೇರಿ ಅನೇಕ ವಸ್ತುಗಳಲ್ಲಿ ಗಣೇಶನನ್ನು ಭಾವಿಸಿ ಪೂಜಿಸಿ, ಪ್ರಸಾದ ಸ್ವೀಕರಿಸುವ ವೈಶಿಷ್ಠ್ಯದೆ. ಕೆಲವು ಹಬ್ಬಗಳು ಕೆಲವು ವಯೋಮಾನದವರಿಗೆ ಮಾತ್ರ ಅನ್ವಯಿಸುತ್ತದೆ. ಆದರೆ ಗಣೇಶ ಹಬ್ಬ ಮಾತ್ರ ಚಿಕ್ಕ ಮಕ್ಕಳಿಂದ ವಯೋವೃದ್ಧರವರೆಗೆ ಎಲ್ಲರಿಗೂ ಅನ್ವಯಿಸುತ್ತದೆ.
ಗಣಪತಿ ಪೂಜೆ-ಆವಿರ್ಭಾವ
ಶಿವಪುರಾಣದಲ್ಲಿ ಗಣಪತಿ ವ್ರತದ ಬಗ್ಗೆ ವಿವರಣೆ ಇದೆ. ಗಣಪತಿಯ ಆವಿರ್ಭಾವ ಬಹುತೇಕ ಒಂದೇ ರೀತಿ ಇರುತ್ತದೆ. ಪಾರ್ವತಿ ತಾನು ಸ್ನಾನ ಮಾಡಲು ಹೋಗುವಾಗ ಮಣ್ಣಿನ ಮೂರ್ತಿಯನ್ನು ತಯಾರಿಸಿ ಅದಕ್ಕೆ ತನ್ನ ರಕ್ಷಣೆಯ ಹೊಣೆ ನೀಡುತ್ತಾಳೆ, ಶಿವ ಬಂದಾಗ ಗಣಪತಿ ತಡೆಯುತ್ತಾನೆ. ಇಬ್ಬರಲ್ಲಿ ವಾಗ್ವಾದ ನಡೆದು ಶಿವ ಕೋಪದಲ್ಲಿ ಗಣೇಶನ ಕತ್ತು ತುಂಡರಿಸುತ್ತಾನೆ. ಪಾರ್ವತಿ ನೋಡಿ, ಇದು ಸರಿಯಲ್ಲ ಎಂದು ಆಕ್ಷೇಪಿಸುತ್ತಾಳೆ. ಶಿವ ಆನೆಯ ತಲೆಯನ್ನು ಜೋಡಿಸಿ ಆನೆ ರೂಪ ನೀಡುತ್ತಾನೆ, ಆಗಿನಿಂದ ಗಜಾನನ ಎಂಬ ಹೆಸರು ಬರುತ್ತದೆ. ಶಿವನು ಗಣಪತಿಯನ್ನು ಪ್ರಾರಂಭದಲ್ಲಿ ಅಲಕ್ಷಿಸಿದರೂ ನಂತರ ಇಷ್ಟ ಪಡುತ್ತಾನೆ. ತನ್ನ ಗಣದ ಜತೆಗೆ ಯುದ್ಧ ಮಾಡಿ ಜಯಿಸಿದ ಗಣಪತಿಗೆ, ನೀನು ಜನ್ಮ ತಾಳಿದ ದಿನದಂದು ಜಗತ್ತು ಭಕ್ತಿ ಗೌರವದಿಂದ ನೋಡುವಂತಾಗಲಿ. ನಿನ್ನ ಆಶೀರ್ವಾದದಿಂದ ಎಲ್ಲ ವಿಘ್ನಗಳೂ ನಿವಾರಣೆ ಆಗಲಿ. ನಿನ್ನನ್ನು ಪೂಜೆ ಮಾಡದವರಿಗೆ ವಿಘ್ನಕಾರಕನಾಗಿಯೂ ಕೆಲಸ ಮಾಡಬಹುದು ಎಂದು ತಿಳಿಸುತ್ತಾನೆ.
ಎಲ್ಲ ಪುರಾಣಗಳಲ್ಲೂ ಗಣೇಶ
ಯಾವುದೇ ಊರಿಗೆ ಹೋದರೂ ಗಣೇಶನ ವಿಗ್ರಹ, ದೇವಸ್ಥಾನ ಇರುತ್ತದೆ. ಅದೇ ರೀತಿ ಪುರಾಣಗಳಲ್ಲೂ ಗಣೇಶನನ್ನು ಕಾಣಬಹುದು. ಹೆಚ್ಚು ಪುರಾಣಗಳಲ್ಲಿ ರ್ಚಚಿಸಲಾಗಿರುವ ದೇವರು ಎಂದರೆ ಗಣೇಶ. ಬ್ರಹ್ಮವೈವರ್ತ ಪುರಾಣ, ಶಿವ ಪುರಾಣ, ಪದ್ಮ ಪುರಾಣ, ಭವಿಷ್ಯ ಪುರಾಣ, ಸ್ಕಾಂದ ಪುರಾಣ, ವಿಷ್ಣು ಧಮೋತ್ತರ ಪುರಾಣ, ವರಾಹ ಪುರಾಣ, ಲಿಂಗ ಪುರಾಣ, ಅಗ್ನಿ ಪುರಾಣ, ಬ್ರಹ್ಮಾಂಡ ಪುರಾಣ, ನಾರದ ಪುರಾಣ, ದೇವೀ ಭಾಗವತ, ಗರುಡ ಪುರಾಣ, ಗಣೇಶ ಪುರಾಣ... ಎಲ್ಲದರಲ್ಲೂ ಗಣಪತಿಯ ತತ್ವ, ವಿಚಾರಗಳನ್ನು ಚರ್ಚೆ ಮಾಡಲಾಗಿದೆ.
ಷೋಡಶೋಪಚಾರದ ಶ್ರೇಷ್ಠತೆ
ವಿಭಿನ್ನ ಕಡೆಗಳಲ್ಲಿ ವಿಭಿನ್ನ ರೀತಿಯಲ್ಲಿ ಗಣಪತಿಯನ್ನು ಪೂಜಿಸಲಾಗುತ್ತದೆ. ಬಹುತೇಕ ಕಡೆಗಳಲ್ಲಿ ಮಣ್ಣಿನಿಂದಲೇ ಗೌರಿ, ಗಣೇಶ ಮೂರ್ತಿಯನ್ನು ತಯಾರು ಮಾಡಿ ಪೂಜಿಸಬೇಕು, ಷೋಢಶೋಪಚಾರ ಪೂಜೆಯನ್ನೇ ಮಾಡಬೇಕು ಎಂದು ತಿಳಿಸಿದೆ. ಷೋಡಶೋಪಚಾರ ಎಂದರೆ ಆವಾಹನ, ಆಸನದಿಂದ ನೀರಾಜನ, ಮಂತ್ರಪುಷ್ಪದವರೆಗೆ 16 ಪೂಜೆಗಳು ಎಂದರ್ಥ. ತೃತೀಯ ದಿನ ಪೂಜಿಸಿದರೆ ಗೌರಿಗೆ, ಚತುರ್ಥಿಯ ದಿನ ಪೂಜಿಸಿದರೆ ಗಣೇಶನಿಗೆ ಸಲ್ಲುತ್ತದೆ. ಗಣಪತಿ ತತ್ವವನ್ನು ಆರಾಧಿಸಬೇಕು.
ಗಣಪತಿ ಪೂಜೆಯ ಫಲಗಳು
ಅಥರ್ವಶೀರ್ಷದಲ್ಲಿ ಹೇಳಿರುವಂತೆ, ದೂರ್ವಾಂಕುರಗಳಿಂದ(ಗರಿಕೆ) ಪೂಜಿಸಿದರೆ ಸಾಕ್ಷಾತ್ ಕುಬೇರನ ಸ್ಥಾನವನ್ನು ಪಡೆದುಕೊಳ್ಳುತ್ತಾರೆ, ಅತ್ಯಂತ ಶ್ರೀಮಂತರಾಗುತ್ತಾರೆ. ಭತ್ತದ ಅರಳುಗಳಿಂದ ಪೂಜೆ, ಹೋಮ ಮಾಡುವವರು ಯಶಸ್ಸು ಪಡೆಯುತ್ತಾರೆ. ಸಾವಿರ ಮೋದಕಗಳಿಂದ ಗಣಪತಿ ಹೋಮ, ಪೂಜೆ ಮಾಡುವವರಿಗೆ, ಬೇಕಾದ ಫಲ ಲಭಿಸುತ್ತದೆ. ತುಪ್ಪ ಹಾಗೂ ಸಮಿತ್ತು ಬಳಸಿ ಹೋಮ ಮಾಡುವವರು ಎಲ್ಲವನ್ನೂ ಪಡೆದುಕೊಳ್ಳುತ್ತಾರೆ. ಗ್ರಹಣ ಕಾಲದಲ್ಲಿ ಗಣಪತಿಯ ಸನ್ನಿಧಿಯಲ್ಲಿ ಕುಳಿತು, ಪ್ರಕೃತಿಯ ಮಧ್ಯೆ ಕುಳಿತು ಈ ಜಪ ಮಾಡಿದರೆ ಅವನ ಮಂತ್ರಸಿದ್ಧಿಯಾಗುತ್ತದೆ ಎಂಬ ಮಾತನ್ನು ಹೇಳುತ್ತಾರೆ.
ಸೃಷ್ಟಿ ಸ್ಥಿತಿ ಲಯದ ಕರ್ತ
ಗಣಪತಿಯ ಕುರಿತು ವಿಶಿಷ್ಟ ವಿವರಣೆಯಿದೆ. ನೀನು ಸ್ಥಿತಿಕರ್ತ, ಇಡೀ ಜಗತ್ತು ನಿನ್ನಲ್ಲಿಯೇ ಆಶ್ರಯ ಪಡೆದಿದೆ. ಸೃಷ್ಟಿಯಾಗಿರುವ ಜಗತ್ತು ಮತ್ತೆ ಪೂರ್ತಿಯಾಗಿ ನಿನ್ನಲ್ಲೇ ಲಯವಾಗುತ್ತದೆ. ಇಡೀ ಜಗತ್ತು ಮತ್ತೆ ನಿನ್ನಲ್ಲಿಯೇ ಬಂದು ಸೇರಿಕೊಳ್ಳುತ್ತದೆ ಎಂಬ ಕಲ್ಪನೆಯನ್ನು ನೀಡುತ್ತದೆ. ಗಣೇಶ ಸಾಮಾನ್ಯ ದೇವರಲ್ಲ, ವೈಜ್ಞಾನಿಕವಾಗಿಯೂ, ಸೃಷ್ಟಿ ಸ್ಥಿತಿ ಲಯಗಳಿಗೆ ಕಾರಣಕರ್ತ ಎಂಬ ವಿಚಾರವನ್ನೂ ಹೇಳಲಾಗುತ್ತದೆ. ಗಣಪತಿ, ಜ್ಞಾನಮಯನೂ ಹೌದು, ವಿಜ್ಞಾನಮಯನೂ ಹೌದು.
ಪ್ರತಿಷ್ಠಾಪನೆ ಹೇಗೆ ಮಾಡಬೇಕು?
ಗಣೇಶನ ಪೂಜೆ ಕುರಿತಂತೆ ಜಾನಪದರಲ್ಲಿ, ಒಂದೊಂದು ಊರಿಗೂ ಒಂದೊಂದು ಸಂಪ್ರದಾಯ ಇದೆ. ಪೂಜಾ ಪದ್ಧತಿಗಳು ನಂಬಿಕೆಯ ಆಧಾರದಲ್ಲಿ ನಡೆದುಕೊಂಡು ಬಂದಿವೆ. ಕೆಲವು ಮನೆಗಳಲ್ಲಿ ಗಣೇಶ ತರಬಾರದು ಎನ್ನುತ್ತಾರೆ, ಕೆಲವರು ಪೂರ್ವಜರಿಂದ ಬಳುವಳಿಯಾಗಿ ಬಂದಿದೆ ಎನ್ನುತ್ತಾರೆ. ಕೆಲವೆಡೆ ಬಲಮುರಿ, ಎಡಮುರಿ ಕುರಿತು ಅನೇಕ ಚರ್ಚೆಗಳಿವೆ. ಇವುಗಳಿಗೆ ಕಥೆಗಳು ಆಧಾರವೇ ವಿನಃ ವೈದಿಕ ಆಧಾರಗಳಿಲ್ಲ. ನಂಬಿಕೆ ಹಾಗೂ ಅನುಭವಗಳಿಂದ ಫಲ ಸಿಗುತ್ತದೆ. ನಂಬಿಕೆಯಿಂದ ಏನೇ ಮಾಡಿದರೂ ಫಲ ನೀಡುತ್ತದೆ. ಮನಸ್ಸಿನಲ್ಲಿ ಯಾವುದೇ ಭಯ ಇರಬಾರದು. ಗಣಪತಿ ಬೌದ್ಧಿಕ ದೇವತೆಯಾದ್ಧರಿಂದ ಭಯ ಇರಬಾರದು. ಭಯವಿದ್ದರೆ ಪೂಜೆಯ ಫಲ ಲಭಿಸದು. ಧೈರ್ಯ, ಉತ್ಸಾಹದಿಂದ ಯಾವುದೇ ಪದ್ಧತಿಯನ್ನು ಅನುಸರಿಸಬಹುದು.
ಹಾಸ್ಯಾಧಿದೇವತೆ
ಪ್ರತಿ ರಸಕ್ಕೂ ಅಧಿದೇವತೆ ಇರುವಂತೆ, ಹಾಸ್ಯದ ಅಧಿದೇವತೆ ಗಣಪತಿ. ಚಂದ್ರನ ಮೇಲಿನ ಸಿಟ್ಟಿಗೆ ತನ್ನ ಹಲ್ಲನ್ನು ತಾನೇ ಮುರಿದುಕೊಂಡೆ, ತುಟ್ಟಿಯಾಯಿತು ಬೆಲ್ಟ್ ಎಂದು ಹಾವು ಸುತ್ತಿಕೊಂಡೆ, ಪೆಟ್ರೋಲ್ ರೇಟು ಹೆಚ್ಚಿತೆಂದು ಇಲಿಯೇರಿ ಹೊರಟವನೆ ಎಂದು ಕವಿಗಳು ಗಣಪತಿಯನ್ನೂ ಗೇಲಿ ಮಾಡುತ್ತಾರೆ. ವ್ಯಾಸರು ಹೇಳಿದ ಮಹಾಭಾರತವನ್ನು ತಪ್ಪಿಲ್ಲದೆ ಬರೆದುಕೊಂಡ, ವಿಶ್ವದ ಮೊದಲ ಸ್ಟೆನೊಗ್ರಾಫರ್ ಗಣೇಶ. ಮೊದಲ ಬಾರಿಗೆ ತಲೆ ಕಸಿಗೆ ಒಳಗಾದವನು ಗಣಪತಿ. ಬಾಲಗಂಗಾಧರ ತಿಲಕರಿಂದ ಸಾರ್ವಜನಿಕವಾಗಿ, ಜನರನ್ನು ಒಗ್ಗೂಡಿಸಿದ ಸ್ವಾತಂತ್ರ್ಯ ಹೋರಾಟಗಾರ ಗಣಪತಿ, ಆದರೆ ಆತನಿಗೆ ಸ್ವಾತಂತ್ರ್ಯ ಯೋಧರಿಗೆ ಸಿಗಬೇಕಾದ ಆದರೆ ಪಿಂಚಣಿ ಬರುತ್ತಿಲ್ಲ!. ಪ್ರಪಂಚದಲ್ಲಿ ಏಕೈಕ ಮಣ್ಣಿನ ಮಗ ಗಣೇಶ, ಉಳಿದವರೆಲ್ಲ ಹೋಲಿಕೆ.