ಆನ್​ಲೈನ್ ಗೇಮಿಂಗ್​ ಹೆಸರಿನಲ್ಲಿ ಜೂಜು!

game
Published on

ದೇಶದಲ್ಲಿ ಸರ್ಕಾರ ಮತ್ತು ಆರು ರಾಜ್ಯಗಳ ಹೈಕೋರ್ಟ್​ಗಳು ಆನ್​ಲೈನ್ ಗೇಮಿಂಗ್ ಮತ್ತು ಜೂಜಾಟ ನಡುವಿನ ವ್ಯತ್ಯಾಸವನ್ನು ಅರಿಯುವಲ್ಲಿ ತೊಡಗಿವೆ. ಮತ್ತೊಂದೆಡೆ, ಆನ್​ಲೈನ್ ಗೇಮಿಂಗ್​ಗಳಲ್ಲಿ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡು, ಕಂಗಾಲಾಗುವವರ ಸಂಖ್ಯೆ ಹೆಚ್ಚುತ್ತಿದೆ. ಕೆಲ ರಾಜ್ಯಗಳು ಇಂಥ ಆಟಗಳ ಮೇಲೆ ನಿಷೇಧ ಹೇರಿವೆಯಾದರೂ, ದೇಶಾದ್ಯಂತ ನಿಷೇಧ ಹೇರಬೇಕು ಎಂಬ ಆಗ್ರಹ ಬಲಗೊಳ್ಳುತ್ತಿದೆ. ಈ ನಡುವೆಯೇ, ಆನ್​ಲೈನ್ ಗೇಮಿಂಗ್ ಪ್ಲಾಟ್​ಫಾಮರ್್​ಗಳು ವರ್ಷದಿಂದ ವರ್ಷಕ್ಕೆ ತಮ್ಮ ಮಾರುಕಟ್ಟೆ ವಿಸ್ತರಿಸಿಕೊಳ್ಳುತ್ತಿವೆ.

ಆನ್​ಲೈನ್ ಗೇಮಿಂಗ್​ನ 7 ದೊಡ್ಡ ಪ್ಲಾಟ್​ಫಾಮರ್್​ಗಳಲ್ಲಿ 55 ಕೋಟಿ ಬಳಕೆದಾರರಿದ್ದಾರೆ- ಇದು ಹೈಕೋರ್ಟ್​ಗಳಲ್ಲಿ ಸರ್ಕಾರವೇ ಸಲ್ಲಿಸಿರುವ ಮಾಹಿತಿ. ಇಲ್ಲಿ ಪ್ರತಿನಿತ್ಯ ಸರಾಸರಿ 500 ಕೋಟಿ ಅಂದರೆ ವರ್ಷಕ್ಕೆ 1.80 ಲಕ್ಷ ಕೋಟಿ ರೂಪಾಯಿ ವಹಿವಾಟು ನಡೆಯುತ್ತದೆ. ಸಣ್ಣ ಪ್ರದೇಶಗಳಿಂದ ಹಿಡಿದು ದೇಶದ ಮಹಾನಗರಗಳವರೆಗೂ ‘ಯುವ ಕ್ರಿಕಟ್​ನ ಭವಿಷ್ಯವಾಣಿ’ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಪಣಕ್ಕೆ ಇಡಲಾಗುತ್ತಿದೆ. ಉದ್ಯೋಗಿಗಳು ತಮ್ಮ ಸಂಬಳ ಮತ್ತು ಉಳಿತಾಯದ ಹಣ ವನ್ನು ಆನ್​ಲೈನ್ ಆಟ ಅಥವಾ ಜೂಜಾಟ ಗಳಲ್ಲಿ ತೊಡ ಗಿಸುತ್ತಿದ್ದರೆ, ನಿರುದ್ಯೋಗಿಗಳು ಮತ್ತು ಕಾಲೇಜ್ ವಿದ್ಯಾರ್ಥಿಗಳು ದುಬಾರಿ ಬಡ್ಡಿದರದಲ್ಲಿ ಸಾಲ ಪಡೆದು ಹಣ ಹಾಕುತ್ತಿದ್ದಾರೆ. ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ಹೆಚ್ಚುತ್ತಿವೆ. ಈ ಆನ್​ಲೈನ್ ಗೇಮಿಂಗ್​ಗಳನ್ನು ನಿಷೇಧಿಸಬೇಕು ಎಂದು ದೇಶದ ಹಲವು ಹೈಕೋರ್ಟ್​ಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ದಾಖಲಾಗಿವೆ.

ಪ್ರಕರಣ-1: ಮಾಡಿದ ಸಾಲಕ್ಕೆ ಅಪ್ಪ ಮನೆ ಮಾರಬೇಕಾಯ್ತು!: ಮಗ ಮಾಡಿದ ಸಾಲಕ್ಕೆ ಅಪ್ಪ ಮನೆ ಮಾರಬೇಕಾಯ್ತು! :  ಭೋಪಾಲ್​ನ ಹರಿನಾಮ್ 2021ರಲ್ಲಿ ಸರ್ಕಾರಿ ನೌಕರಿಯಿಂದ ನಿವೃತ್ತರಾದರು. ಜನರಲ್ ಪ್ರಾವಿಡೆಂಟ್ ಫಂಡ್​ನಿಂದ ದೊರೆತ 30 ಲಕ್ಷ ರೂಪಾಯಿಗಳಲ್ಲಿ ಮನೆ ಕಟ್ಟಿಸಿದರು. ನಿವೃತ್ತಿಯ ದಿನಗಳಲ್ಲಾದರೂ ನೆಮ್ಮದಿಯಿಂದ ಸ್ವಂತ ಮನೆಯಲ್ಲಿ ಇರಬೇಕೆಂಬ ಬಯಕೆಯಿಂದ ಕಷ್ಟಪಟ್ಟು ಮನೆ ಕಟ್ಟಿಸಿದರು. ಕಿರಾಣಿ ಅಂಗಡಿ ನಡೆಸುತ್ತಿದ್ದ ಇವರ ಮಗ, ಕಡಿಮೆ ಸಮಯದಲ್ಲಿ ಹೆಚ್ಚು ದುಡ್ಡು ಮಾಡಬೇಕೆಂಬ ಹುಚ್ಚಿನಲ್ಲಿ ಕ್ರಿಕೆಟ್ ಬೆಟ್ಟಿಂಗ್​ನಲ್ಲಿ ಹಣ ಹಾಕಿದ. ಮೇಲಿಂದ ಮೇಲೆ ಹಣ ಕಳೆದುಕೊಂಡರೂ, ಸ್ನೇಹಿತರ ಬಳಿ ಸಾಲ ಮಾಡಿ ಬೆಟ್ಟಿಂಗ್ ಮುಂದುವರಿಸಿದ. 2023ರಲ್ಲಿ ಮಗನ ಸ್ನೇಹಿತರು ಸಾಲ ವಸೂಲಾತಿಗಾಗಿ ಮನೆಗೆ ಬಂದಾಗಲೇ, ಹರಿರಾಮ್ ಅವರಿಗೆ ಕರಾಳಸತ್ಯ ಗೊತ್ತಾಗಿದ್ದು. ಸಾಲ ಹೆಚ್ಚಾಗಿದ್ದರಿಂದ ಇದ್ದ ಒಂದು ಕಿರಾಣಿ ಅಂಗಡಿಯನ್ನು ಮುಚ್ಚಿದ್ದನ್ನೂ ಮನೆಯಲ್ಲಿ ಹೇಳಿರಲಿಲ್ಲ. ಪ್ರತಿನಿತ್ಯ ಐದು ಸಾವಿರ ರೂಪಾಯಿ ಬಡ್ಡಿಗೆ ಪಡೆದ 10 ಲಕ್ಷ ರೂಪಾಯಿಯನ್ನೂ ಬೆಟ್ಟಿಂಗ್​ನಲ್ಲಿ ಕಳೆದುಕೊಂಡಿದ್ದ. ಬಡ್ಡಿ, ಅಸಲು ಸೇರಿ ಒಟ್ಟು ಸಾಲ 35 ಲಕ್ಷ ರೂಪಾಯಿಗೆ ತಲುಪಿತ್ತು. ಸಾಲಗಾರರ ಕಾಟ ಜಾಸ್ತಿಯಾದಾಗ ಹರಿರಾಮ್ ಮುಂದೆ ಬೇರೆ ಯಾವುದೇ ಆಯ್ಕೆಗಳೇ ಇರಲಿಲ್ಲ. ತುಂಬ ಕಷ್ಟಪಟ್ಟು ಕಟ್ಟಿಸಿದ್ದ ಹೊಸ ಮನೆಯನ್ನೇ ಮಾರಾಟ ಮಾಡಿ, ಹಣ ಹಿಂತಿರುಗಿಸಿದ್ದಾರೆ. ಆದರೂ, ಸಾಲ ಇನ್ನೂ ಉಳಿದುಕೊಂಡಿದೆ.

ಪ್ರಕರಣ-2: ವಿಚ್ಛೇದನಕ್ಕೆ ದಾರಿ ಮಾಡಿ ಕೊಟ್ಟ ಬೆಟ್ಟಿಂಗ್ ಹುಚ್ಚು : ವಿಚ್ಛೇದನಕ್ಕೆ ದಾರಿ ಮಾಡಿ ಕೊಟ್ಟ ಬೆಟ್ಟಿಂಗ್ ಹುಚ್ಚು :  ಹರಿಯಾಣದ ಅಂಜಲಿ ಮತ್ತು ಪಂಕಜ್ ಪರಸ್ಪರ ಪ್ರೀತಿಸಿ ಮದುವೆಯಾದರು. ಕುಟುಂಬದವರು ಈ ಮದುವೆ ಒಪ್ಪಿಕೊಳ್ಳದಿದ್ದಾಗ ಹರಿಯಾಣದಿಂದ ದೆಹಲಿಗೆ ಬಂದು ನೆಲೆಸಿದರು. ಹೋಟೆಲ್ ಮ್ಯಾನೇಜರ್ ಆಗಿ ಪಂಕಜ್ ಕೆಲಸ ಮಾಡುತ್ತಿದ್ದರೆ, ಅಂಜಲಿಗೆ ಏರ್​ಲೈನ್ಸ್ ಕಂಪನಿಯಲ್ಲಿ ಉದ್ಯೋಗ. ಬೇಗ ಹಣ ಮಾಡಬೇಕೆಂಬ ಧಾವಂತದಲ್ಲಿ ಪಂಕಜ್ ಕ್ರಿಕೆಟ್ ಬೆಟ್ಟಿಂಗ್​ನಲ್ಲಿ ಹಣ ತೊಡಗಿಸಿದ. ಮೊದಲಿಗೆ ಸ್ನೇಹಿತರಿಂದ ಸಾಲ ಪಡೆದ, ಆ ಬಳಿಕ ಪತ್ನಿಗೆ ಹಣಕ್ಕಾಗಿ ಪೀಡಿಸತೊಡಗಿದ. ನೋಡನೋಡುತ್ತಿದ್ದಂತೆ ಸಾಲದ ಮೊತ್ತ 22 ಲಕ್ಷ ರೂಪಾಯಿಗೆ ಹೆಚ್ಚಿತು. ಸಾಲ ಕೊಟ್ಟವರು ಮನೆಗೆ ಬಂದು ಬೆದರಿಕೆ ಹಾಕತೊಡಗಿದರು. ಬೆಟ್ಟಿಂಗ್ ಹುಚ್ಚು ಬಿಡುವಂತೆ ಅನೇಕ ಬಾರಿ ಪತ್ನಿ ಎಚ್ಚರಿಸಿದರೂ, ಪಂಕಜ್ ಕೇಳಲಿಲ್ಲ. ಇಬ್ಬರ ನಡುವೆ ದಿನವೂ ಈ ವಿಷಯಕ್ಕಾಗಿ ಜಗಳವಾಗತೊಡಗಿತು. ಅದು ವಿಚ್ಛೇದನದಲ್ಲಿ ಅಂತ್ಯಗೊಂಡಿತು; ಮದುವೆಯಾದ ಎರಡೇ ವರ್ಷಗಳಲ್ಲಿ!

ಪ್ರಕರಣ-3: ತಾತನ 30 ಲಕ್ಷ ರೂ. ಉಡಾಯಿಸಿದ ಮೊಮ್ಮಗ : ತಾತನ 30 ಲಕ್ಷ ರೂ. ಉಡಾಯಿಸಿದ ಮೊಮ್ಮಗ: ಪುಣೆಯ ಪ್ರಕಾಶ್ ಅವರದ್ದು ಸಣ್ಣ ಉದ್ಯಮ. ವಯಸ್ಸು ಆಗಿದ್ದರಿಂದ ನೆರವಿಗಾಗಿ ಮುಂಬೈಯಲ್ಲಿದ್ದ 18 ವರ್ಷದ ಮೊಮ್ಮಗ ಗಿರಿರಾಜ್​ನನ್ನು ಕರೆಸಿಕೊಂಡರು. ಉದ್ಯಮದ ಸೂಕ್ಷ್ಮಗಳನ್ನು ಹೇಳಿಕೊಟ್ಟರು. ಕೆಲವು ದಿನಗಳವರೆಗೆ ಎಲ್ಲವೂ ಸರಿಯಾಗಿಯೇ ನಡೆದಿತ್ತು. ಅದೊಂದು ದಿನ ಬೇರೊಬ್ಬ ಉದ್ಯಮಿಗೆ ಆರ್​ಟಿಜಿಎಸ್ ಮಾಡಲು ಪ್ರಕಾಶ್ ಬ್ಯಾಂಕಿಗೆ ಹೋದರೆ ಅವರ ಖಾತೆಯಲ್ಲಿ 30 ಲಕ್ಷ ರೂಪಾಯಿ ಕಡಿಮೆ ಇತ್ತು. ಬ್ಯಾಂಕ್ ವಹಿವಾಟುಗಳಿಗಾಗಿ ಗಿರಿರಾಜ್​ನನ್ನೇ ಕಳುಹಿಸುತ್ತಿದ್ದರಿಂದ, ಈ ಬಗ್ಗೆ ಅವನನ್ನು ಪ್ರಶ್ನಿಸಿದರು. ಮೊದಲಿಗೆ ಹಾರಿಕೆಯ ಉತ್ತರ ನೀಡಿದ. ಖಡಕ್ ಆಗಿ ಕೇಳಿದಾಗ, ಕ್ರಿಕೆಟ್ ಬೆಟ್ಟಿಂಗ್​ನಲ್ಲಿ ಹಣ ಕಳೆದುಕೊಂಡೆ ಎಂದು ಉತ್ತರಿಸಿದ. ಒಂದಿಷ್ಟು ಆಸ್ತಿ ಮಾರಿ ಪ್ರಕಾಶ್ ಸಾಲ ಹಿಂದಿರುಗಿಸಿದರು. ಆದರೆ, ಹಣದ ಕೊರತೆಯಿಂದ ಅವರ ಉದ್ಯಮವೇ ಮುಚ್ಚಿಹೋಯಿತು! ‘ದುಡ್ಡು ವಾಪಸ್ ಬರಲಿಲ್ಲ. ಉದ್ಯಮವೂ ಇಲ್ಲ. ಮೊಮ್ಮಗ ಹೀಗೆ ಮಾಡಿದ್ದರಿಂದ ಮಗಳೊಂದಿಗಿನ ಬಾಂಧವ್ಯವೂ ಮುಂಚಿನಂತಿಲ್ಲ’ ಎಂದು ನೋವಿನಿಂದ ಹೇಳುತ್ತಾರೆ ಪ್ರಕಾಶ್.

ಕೇಂದ್ರದ ನಿಯಮಗಳು ಏನು ಹೇಳುತ್ತವೆ? ; ಕೇಂದ್ರದ ನಿಯಮಗಳು ಏನು ಹೇಳುತ್ತವೆ?: ಆನ್​ಲೈನ್ ಗೇಮಿಂಗ್ ಮೇಲೆ ಮುಂಚೆ ಸರ್ಕಾರದ ನಿಯಂತ್ರಣ ಇರಲಿಲ್ಲ. 2023ರ ಜೂನ್​ನಲ್ಲಿ ಕೇಂದ್ರ ವಿದ್ಯುನ್ಮಾನ ಹಾಗೂ ಮಾಹಿತಿ ಸಚಿವಾಲಯವು ಈ ಬಗ್ಗೆ ನಿಯಮಗಳನ್ನು ರೂಪಿಸಿ, ಮೂಗುದಾರ ಹಾಕಿದೆ. ಹಣವನ್ನು ಪಣಕ್ಕಿಟ್ಟು ಆಡುವ ಗೇಮ್ಳಿಗೆ ಅವಕಾಶವಿಲ್ಲ ಎಂದು ಹೊಸ ನಿಯಮ ಸ್ಪಷ್ಟವಾಗಿ ಹೇಳುತ್ತದೆ. ಜೂಜಾಟ ಉದ್ದೇಶದಿಂದ ನಡೆಯುತ್ತಿರುವ ರಿಯಲ್ ಮನಿ ಗೇಮ್ಳಿಗೆ (ಆರ್​ಎಂಜಿ) ದೇಶದಲ್ಲಿ ಅವಕಾಶವಿಲ್ಲ ಎಂದು ಸ್ಪಷ್ಟಪಡಿ ಸಲಾಗಿದೆ. ಯಾವ ಸ್ವರೂಪದ ಆನ್​ಲೈನ್ ಗೇಮ್ ನಿಷೇಧಿಸಬೇಕು, ಯಾವ ಸ್ವರೂಪದ ಆನ್​ಲೈನ್ ಗೇಮ್ ಬಳಕೆಗೆ ಅಡಿಯಿಲ್ಲ ಎಂಬುದರ ಕುರಿತು ಕೇಂದ್ರದ ಸ್ವಯಂ ನಿಯಂತ್ರಣ ಸಂಸ್ಥೆಯ (ಎಸ್​ಆರ್​ಒ) ತಜ್ಞರು ನಿರ್ಧರಿಸಲಿದ್ದಾರೆ. ಆಟವೊಂದು ಅದರ ಫಲಿತಾಂಶದ ಆಧಾರದಲ್ಲಿ ಬಹುಮಾನದ ಹಣ ನೀಡುವಂತಿದ್ದರೆ ಅಂತಹ ಗೇಮ್ಳಿಗೆ ಅವಕಾಶ ವಿಲ್ಲ ಎಂದು ನಿಯಮದಲ್ಲಿ ಹೇಳಲಾಗಿದೆ.

ಯಾವ ರಾಜ್ಯಗಳಲ್ಲಿ ಏನು?

| ಕರ್ನಾಟಕ, ತಮಿಳುನಾಡು. ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳು ಕೆಲವು ಸ್ವರೂಪದ ಆನ್​ಲೈನ್ ಗೇಮ್ಳನ್ನು ನಿಷೇಧಿಸಿವೆ.

| ಆಂಧ್ರಪ್ರದೇಶ, ಅಸ್ಸಾಂ, ಒಡಿಶಾ ಮತ್ತು ತೆಲಂಗಾಣ ರಾಜ್ಯಗಳು ಕೌಶಲ ಆಧಾರಿತ ಮತ್ತು ಅದೃಷ್ಟ ಆಧಾರಿತ- ಹೀಗೆ ಎರಡು ಸ್ವರೂಪದ ಗೇಮ್ಳನ್ನು ನಿಷೇಧಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net