ಭವಿಷ್ಯದ ಭಾರತ: ಅವಕಾಶಗಳ ನಾಳೆಗಳು

untitled-design-2-689e27675d631
Published on

ಅಭಿವೃದ್ಧಿಯ ಪಥದಲ್ಲಿ ಭಾರತ ಮುಂಚೂಣಿಯಲ್ಲಿದೆ. ಆರ್ಥಿಕತೆ, ಮಾಹಿತಿ-ತಂತ್ರಜ್ಞಾನ, ಆರೋಗ್ಯ, ಕೃಷಿ, ಉದ್ಯಮ ಸೇರಿದಂತೆ ಹತ್ತುಹಲವು ಕ್ಷೇತ್ರಗಳಲ್ಲಿ ಭಾರತದ ಸಾಧನೆ ಜಾಗತಿಕ ಸಮುದಾಯವನ್ನೂ ಅಚ್ಚರಿಗೊಳಿಸಿದೆ. ಹಾಗಾಗಿಯೇ, ಹಲವು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತಕ್ಕೆ ನಾಯಕನ ಸ್ಥಾನ. 2047ರ ಹೊತ್ತಿಗೆ ಭಾರತ ಸಾಧಿಸಬೇಕಾದ ಕಾರ್ಯಗಳ ಕುರಿತಂತೆ ಪ್ರಧಾನಿ ನರೇಂದ್ರ ಮೋದಿಯವರು ಹಲವು ಸಂದರ್ಭಗಳಲ್ಲಿ ಮಾತನಾಡಿದ್ದು, ಆ ಗುರಿ ತಲುಪಲು ಸಿದ್ಧತೆ ಆರಂಭವಾಗಿದೆ. ಭಾರತದ ಇತಿಹಾಸ ಭವ್ಯವಾಗಿದೆ, ವರ್ತಮಾನ ಸಮೃದ್ಧವಾಗಿದ್ದು, ಭವಿಷ್ಯ ಅವಕಾಶಗಳಿಂದ ಕೂಡಿದೆ. ಹಾಗಾಗಿ, ನಮ್ಮ ನಾಡಿನ, ದೇಶದ ಯುವಶಕ್ತಿ ಹೊಸ ನಿರೀಕ್ಷೆ, ಕನಸುಗಳೊಂದಿಗೆ ಕಾರ್ಯನಿರ್ವಹಿಸುತ್ತ, ಭವಿಷ್ಯದ ಭಾರತವನ್ನು ರೂಪಿಸುತ್ತಿದೆ. ಮುಂಬರುವ ವರ್ಷಗಳಲ್ಲಿ ಈ ನಿಟ್ಟಿನಲ್ಲಿ ಆಗಬೇಕಾದ ಬದಲಾವಣೆ, ಸುಧಾರಣೆ ಏನು ಎಂಬುದನ್ನು ಯುವದನಿ ಆತ್ಮವಿಶ್ವಾಸದಿಂದ ಹೇಳಿದೆ. ಇದು ಸ್ವಾತಂತ್ರೋತ್ಸವ ಸಂಭ್ರಮಕ್ಕಾಗಿ ವಿಜಯವಾಣಿ ವಿಶೇಷ.

ಕೃಷಿಯತ್ತ ಕಾಳಜಿ ಹೆಚ್ಚಲಿ

ಕೃಷಿ ಪ್ರಧಾನವಾದ ಭಾರತದ ನಿಜವಾದ ಅಭಿವೃದ್ಧಿ ಇರುವುದು ನೇಗಿಲಯೋಗಿಯ ಪ್ರಗತಿಯಲ್ಲಿ. ರೈತರು ಆರ್ಥಿಕವಾಗಿ ಪ್ರಗತಿ ಹೊಂದಿದಾಗಲೇ ಭಾರತ ಮಾತೆಗೆ ಅಭಿವೃದ್ಧಿಯ ಕಿರೀಟ ಸಲ್ಲುತ್ತದೆ. ವಿಶ್ವದ ಭೂಪಟದಲ್ಲಿ ಅಭಿವೃದ್ಧಿ ಹೊಂದಿದ ಭಾರತವನ್ನು ಕಾಣಲು ಮುಖ್ಯವಾಗಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಕೃಷಿ ವಲಯದತ್ತ ದೊಡ್ಡಮಟ್ಟದ ಗಮನ ಮತ್ತು ಕಾಳಜಿ ವಹಿಸಬೇಕಾಗಿದೆ. ಭಾರತೀಯ ಪರಂಪರಾಗತ ಸಾವಯವ ಕೃಷಿಗೆ ಪ್ರೋತ್ಸಾಹ ನೀಡಬೇಕಿದೆ. ಇದಕ್ಕಾಗಿ ಸರ್ಕಾರ ಸಾವಯವ ಕೃಷಿಗೆ ಅಗತ್ಯ ಸಬ್ಸಿಡಿ ನಿಗದಿ ಪಡಿಸಬೇಕು.

ಪ್ರತಿಯೊಬ್ಬ ರೈತನಿಗೆ ಕನಿಷ್ಠ ಒಂದು ಹಸುವನ್ನು ಉಚಿತವಾಗಿ ನೀಡಬೇಕು. ಪ್ರತಿ ಹೋಬಳಿ ಮಟ್ಟದಲ್ಲಿ ಸಾವಯವ ಸಂತೆ ಮಾರುಕಟ್ಟೆ ನಿರ್ಮಾಣ ಮಾಡಬೇಕು. ಈ ಸಾವಯವ ಮಾರುಕಟ್ಟೆಯಲ್ಲಿ ದಲ್ಲಾಳಿಗಳು ಇರಬಾರದು. ರೈತರು ಮತ್ತು ಗ್ರಾಹಕರಿಗೆ ಮಾತ್ರ ಅವಕಾಶ ಇರಬೇಕು. ಸಾವಯವ ಸಂತೆ ವಾರದಲ್ಲಿ ಕನಿಷ್ಠ 3 ದಿನ ಇರಬೇಕು. ಅದಕ್ಕೆ ನಿಗದಿತ 2 ರಿಂದ 3 ಗಂಟೆ ಸಮಯ ನಿಗದಿ ಪಡಿಸಬೇಕು.

ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳ ವಿಜ್ಞಾನಿಗಳು ಸಾವಯವ ಕೃಷಿಗೆ ಅಗತ್ಯ ತಂತ್ರಜ್ಞಾನ ಮತ್ತು ರೋಗರುಜಿನಗಳಿಗೆ ಸಾವಯವ ಮಾದರಿಯಲ್ಲಿ ಔಷಧ ಕಂಡು ಹಿಡಿಯಬೇಕು. ನಾನು ಬಾಗಲಕೋಟೆ ಜಿಲ್ಲೆಯ ಗುಳೇದಗಡ್ಡ ತಾಲೂಕಿನ ಇಂಜನವಾರಿ ಗ್ರಾಮದ 1.35 ಎಕರೆ ಜಮೀನಿನಲ್ಲಿ ಶೂನ್ಯ ಬಂಡವಾಳದಲ್ಲಿ ವಾರ್ಷಿಕ 7 ರಿಂದ 8 ಲಕ್ಷ ಆದಾಯ ಪಡೆಯುತ್ತಿದ್ದೇನೆ. ಭೂಮಿಯ ಸತ್ವ ಹೆಚ್ಚಿಸಲು ಎರೆಹುಳ ಗೊಬ್ಬರ ತಯಾರಿಕೆ, ಜೇನು ಸಾಕಾಣಿಕೆ ಕೈಗೊಂಡಿದ್ದೇನೆ. ಅಲ್ಲದೆ, ಹೂವಿನ ಬೆಳೆ, ತೆಂಗಿನ ಗಿಡಗಳು, ತರಕಾರಿ, ಅರಣ್ಯ ಕೃಷಿ, ಹಣ್ಣು ಬೆಳೆದು ಕೃಷಿಯಿಂದಲೇ ಕುಟುಂಬ ನಿರ್ವಹಣೆ ಸಾಧ್ಯ ಎಂಬುದಕ್ಕೆ ಸಾಕ್ಷಿಯಾಗಿದ್ದೇನೆ. ಪಾಲುದಾರಿಕೆಯಲ್ಲಿ ಸಂಬಂಧಿಕರ ಜಮೀನಿನಲ್ಲಿ ಹತ್ತಿ ಬೆಳೆಯನ್ನು ಬೆಳೆಯುತ್ತಿದ್ದೇನೆ. ಈ ಎಲ್ಲ ಕೃಷಿ ಚಟುವಟಿಕೆಗಳಲ್ಲಿ ಕುಟುಂಬದ ಸದಸ್ಯರೇ ತೊಡಗಿಸಿಕೊಂಡಿರುವುದರಿಂದ ಕೂಲಿಗಳ ಸಮಸ್ಯೆ ಉದ್ಭವಿಸಿಲ್ಲ.

ಮಾರುಕಟ್ಟೆ ಸುಧಾರಣೆಯಾಗಲಿ

1.ರೈತರು ಬೆಳೆಯುವ ಆಹಾರ ಪದಾರ್ಥಗಳಿಗೆ ನೇರ ಮಾರುಕಟ್ಟೆ ಇರಬೇಕು.

2. ಮಾರಾಟ ಮಾಡುವ ರೈತ ಮತ್ತು ಕೊಳ್ಳುವ ರೈತರ ನಡುವೆ ನೇರ ಸಂಪರ್ಕ ಇರಬೇಕೇ ಹೊರತು, ದಲ್ಲಾಳಿಗಳಿಗೆ ಆಸ್ಪದ ಇರಬಾರದು. ಮಧ್ಯವರ್ತಿಗಳು ಹಾಗೂ ದಲ್ಲಾಳಿ ಮುಕ್ತ ಮಾರುಕಟ್ಟೆ ನಿರ್ಮಾಣ ಆಗಬೇಕು. ಇದಕ್ಕೆ ಅಡ್ಡಿ ಬರುವ ಯಾವುದೇ ಒತ್ತಡಗಳಿಗೆ ಸರ್ಕಾರ ಮಣಿಯದೆ ರೈತಪರ ಸರ್ಕಾರ ಎನ್ನುವುದನ್ನು ಸಾಬೀತು ಪಡಿಸಬೇಕು.

ಟೆಲಿ ಮೆಡಿಸಿನ್ ವಿಸ್ತಾರಗೊಳ್ಳಲಿ

ಭಾರತ ಭವಿಷ್ಯದಲ್ಲಿ ಪ್ರಕಾಶಮಾನವಾಗಲು ಆರೋಗ್ಯಕರ ಸಮಾಜ ನಿರ್ವಣದ ಅಗತ್ಯವಿದೆ. ಈ ನಿಟ್ಟಿನಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಗೂ ಗುಣಮಟ್ಟದ ವೈದ್ಯಕೀಯ ಸೇವೆ ಮತ್ತು ಆರೈಕೆ ದೊರೆಯುವಂತಾಗಬೇಕು. ದೇಶದಲ್ಲಿ ವೈದ್ಯಕೀಯ ಕ್ಷೇತ್ರವನ್ನು ಬಲಪಡಿಸುವ ಅಗತ್ಯವಿದೆ. ಜತೆಗೆ ವೈದ್ಯರ ಸಂಖ್ಯೆ ಹೆಚ್ಚಿಸಬೇಕಿದೆ. ಪ್ರಸ್ತುತ ಕಾಲಮಾನದಲ್ಲಿ ದೇಶದಲ್ಲಿ ವೈದ್ಯರ ಕೊರತೆ ಇದೆ. ಹಾಗಾಗಿ ಸರ್ಕಾರ ವೈದ್ಯಕೀಯ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಬೇಕಿದೆ. ಈಗಾಗಲೇ ಹೆಚ್ಚಿಸಲಾಗಿದೆಯಾದರೂ, ಅದು ನಿರೀಕ್ಷಿತ ಮಟ್ಟದಲ್ಲಿಲ್ಲ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ವೈದ್ಯರ ಅಗತ್ಯವಿದೆ. ಪ್ರತಿ 500-1000 ಜನಸಂಖ್ಯೆಗೆ ಒಬ್ಬರು ವೈದ್ಯರು ಇರುವಂತೆ ಕ್ರಮ ವಹಿಸಬೇಕಿದೆ. ಅದಕ್ಕಾಗಿ ವೈದ್ಯಕೀಯ ಸೀಟುಗಳು ಹೆಚ್ಚಾಗಬೇಕು. ಹೀಗೆ ಹೊಸದಾಗಿ ಹೊರಬರುವ ವೈದ್ಯರಿಗೆ ನುರಿತ ಹಾಗೂ ಅನುಭವಿ ವೈದ್ಯರಿಂದ ತರಬೇತಿ, ಸಲಹೆ ಒದಗಿಸುವ ಕಾರ್ಯವಾಗಬೇಕು.

ತಂತ್ರಜ್ಞಾನದ ಬಳಕೆ ಹೆಚ್ಚಲಿ: ಆಧುನಿಕ ಕಾಲಘಟ್ಟದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಕೆ ಮಾಡುವ ಅಗತ್ಯವಿದೆ. ನಿರೀಕ್ಷಿತ ಪ್ರಮಾಣದಲ್ಲಿ ವೈದ್ಯರನ್ನು ಹುಟ್ಟುಹಾಕಲು ಸಾಧ್ಯವಿಲ್ಲ ಎಂದಾದಾಗ ತಂತ್ರಜ್ಞಾನ ಬಳಕೆ ಅನಿವಾರ್ಯವಾಗುತ್ತದೆ. ಉದಾಹರಣೆಗೆ ರೋಬಾಟಿಕ್ ತಂತ್ರಜ್ಞಾನ, ಟೆಲಿ ಮೆಡಿಸಿನ್​ನಂತಹ ಉಪಕ್ರಮಗಳನ್ನು ಅಳವಡಿಕೆ ಮಾಡಿಕೊಳ್ಳಬೇಕಾಗುತ್ತದೆ. ಕೈಗಳಿಂದ ಮಾಡುವ ಬಹುತೇಕ ಶಸ್ತ್ರಚಿಕಿತ್ಸೆಗಳು ಹೆಚ್ಚಿನ ಛೇದ, ರಕ್ತಸ್ರಾವ, ನೋವು ಹಾಗೂ ಆಸ್ಪತ್ರೆವಾಸ ಹೊಂದಿರುತ್ತವೆ. ಅದರ ಬದಲಿಗೆ ರೋಬಾಟಿಕ್ ಬಳಕೆ ಮಾಡುವುದರಿಂದ ಕಡಿಮೆ ರಕ್ತಸ್ರಾವ, ಕಡಿಮೆ ನೋವು ಮಾತ್ರವಲ್ಲದೆ ಆಸ್ಪತ್ರೆವಾಸವೂ ಕಡಿಮೆ ಇದ್ದು, ರೋಗಿ ಬೇಗನೆ ಮನೆಗೆ ತೆರಳಬಹುದಾಗಿದೆ. ಇದಕ್ಕಾಗಿ ವೈದ್ಯರಿಗೆ ಅಗತ್ಯ ತರಬೇತಿ ಒದಗಿಸಬೇಕು. ಇದಲ್ಲದೆ ಅನುಭವಿ ವೈದ್ಯರಿಲ್ಲದ ಅಥವಾ ವೈದ್ಯರ ಕೊರತೆ ಇರುವ ಕಡೆಗಳಲ್ಲಿ ಅಂದರೆ ಒಬ್ಬರೇ ವೈದ್ಯರು 4-5 ಗ್ರಾಮಗಳಿಗೆ ಸೇವೆ ನೀಡಬೇಕಾದ ಪರಿಸ್ಥಿತಿ ಇರುವ ಕಡೆಗಳಲ್ಲಿ ಎಂಬಿಬಿಎಸ್ ವೈದ್ಯ ಇಲ್ಲವೇ ವೈದ್ಯಕೀಯ ತರಬೇತಿ ಪಡೆದ ಸಿಬ್ಬಂದಿಯನ್ನು ಬಳಸಿಕೊಂಡು ಟೆಲಿ ಮೆಡಿಸಿನ್ ಮೂಲಕ ವೈದ್ಯಕೀಯ ಸಲಹೆ ನೀಡಬಹುದಾಗಿದೆ. ಟೆಲಿ ಮೆಡಿಸಿನ್ ಸೇವೆ ಈಗಾಗಲೇ ಲಭ್ಯವಿದೆಯಾದರೂ, ಅದನ್ನು ಇನ್ನಷ್ಟು ವಿಸ್ತರಿಸುವ ಹಾಗೂ ಉನ್ನತೀಕರಿಸುವ ಅಗತ್ಯವಿದೆ.

ಆರೋಗ್ಯಕರ ಜೀವನಶೈಲಿ ಇರಲಿ: ಜನರಿಗೆ ಉಚಿತ ವೈದ್ಯಕೀಯ ಸೇವೆ ಒದಗಿಸುವುದು ಸುಲಭಸಾಧ್ಯವಲ್ಲ. ಇದು ಎಂತಹ ಮುಂದುವರಿದ ದೇಶಗಳಿಗೂ ದೊಡ್ಡ ಸವಾಲಿನ ವಿಷಯ. ಆದರೆ ಭಾರತ ದೇಶದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಬಡವರಿಗೆ ಉಚಿತವಾಗಿ ಹಾಗೂ ಉಳಿದವರಿಗೆ ಶೇಕಡ 30 ಸರ್ಕಾರವೇ ವೈದ್ಯಕೀಯ ವೆಚ್ಚ ಭರಿಸುತ್ತಿರುವುದು ಅನುಕೂಲಕರವಾಗಿದೆ. ಆದರೆ, ಎಲ್ಲರಿಗೂ ಎಲ್ಲ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ತುರ್ತು ಸೇವೆ ಸೇರಿ ಅಗತ್ಯ ವೈದ್ಯಕೀಯ ಸೇವೆ ಪಡೆಯಲು ಅನುಕೂಲ ಆಗುವಂತೆ ನಿರ್ದಿಷ್ಟ ಪ್ರಮಾಣದಲ್ಲಿ ಹಣವನ್ನು ಕಟ್ಟಿಸಿಕೊಂಡು (ಪ್ರೀಮಿಯಂ ತೆಗೆದುಕೊಂಡು) ವೈದ್ಯಕೀಯ ಸೇವೆ ಪಡೆಯಲು ಕಾರ್ಡ್ ವಿತರಿಸಬೇಕು. ಈ ಕಾರ್ಡ್ ಹೊಂದಿರುವವರು ಹತ್ತಿರದ ಯಾವುದೇ ಸರ್ಕಾರಿ ಇಲ್ಲವೆ ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಸೇವೆ ಪಡೆಯಲು ಅಕವಾಶ ಕಲ್ಪಿಸಬೇಕು. ಇದರಿಂದ ರೋಗಿಗೆ ತುರ್ತು ಹಾಗೂ ಗುಣಮಟ್ಟದ ವೈದ್ಯಕೀಯ ಸೇವೆ ಪಡೆಯಲು ಅನುಕೂಲವಾಗುತ್ತದೆ. ಜತೆಗೆ ಸರ್ಕಾರ ಹಾಗೂ ಆಸ್ಪತ್ರೆಗಳಿಗೂ ಆರ್ಥಿಕ ಲಾಭವಾಗುತ್ತದೆ. ಈ ಬಗ್ಗೆ ಸರ್ಕಾರ ಈಗಿನಿಂದಲೇ ಯೋಚಿಸಿ ಸೂಕ್ತ ನಿರ್ಧಾರ ಕೈಗೊಂಡರೆ ಭವಿಷ್ಯದಲ್ಲಿ ಅನುಕೂಲ ಆಗಬಹುದು. ಆರೋಗ್ಯಕರ ಸಮಾಜ ನಿರ್ವಣಕ್ಕಾಗಿ ಸರ್ಕಾರ ಲಭ್ಯವಿರುವ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಜನರಿಗೆ ಆರೋಗ್ಯಕರ ಜೀವನಶೈಲಿಯ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ಸರ್ಕಾರಿ ಆರೋಗ್ಯ ಕಾರ್ಯಕ್ರಮ ಮತ್ತು ಯೋಜನೆಗಳ ಕುರಿತು ಇನ್ನಷ್ಟು ಪರಿಣಾಮಕಾರಿಯಾಗಿ ತಿಳಿಸುವ ಕಾರ್ಯ ಮಾಡಬೇಕು.

ಸ್ವಾವಲಂಬನೆ ಮಂತ್ರ ಮೊಳಗಲಿ

ಭಾರತ ಸ್ವಾತಂತ್ರ್ಯದ ಶತಮಾನೋತ್ಸವವನ್ನು 2047ರಲ್ಲಿ ನಾವು ಕೇವಲ ಆಚರಿಸಿದರೆ ಸಾಕಾಗದು, ಅದನ್ನು ವಿಕಸಿತ ಭಾರತ ಹಾಗೂ ವಿಶ್ವಗುರು ಸ್ಥಾನವನ್ನು ಸಾಧಿಸಿರುವ ದಿನವನ್ನಾಗಿಸಬೇಕು. ಆ ಹೊತ್ತಿಗೆ ಭಾರತವು ಆರ್ಥಿಕವಾಗಿ ಮಾತ್ರವಲ್ಲದೆ ತಂತ್ರಜ್ಞಾನದಲ್ಲಿ ಮತ್ತು ಸಾಮಾಜಿಕವಾಗಿ ಸಂಪೂರ್ಣ ಸ್ವಾವಲಂಬಿಯಾಗಿರಬೇಕು. ಇದಕ್ಕಾಗಿ ವಿದೇಶಿ ತಂತ್ರಜ್ಞಾನ ಮತ್ತು ಉತ್ಪನ್ನಗಳ ಅವಲಂಬನೆ ಕಡಿಮೆ ಮಾಡಿ, ಸ್ವಂತವಾಗಿ ಆವಿಷ್ಕಾರ, ಉತ್ಪಾದನೆ ಹಾಗೂ ನಿರ್ವಹಣೆ ಮಾಡುವ ಸಾಮರ್ಥ್ಯ ಬೆಳೆಸುವುದು ಅತ್ಯವಶ್ಯಕ.

ಈ ಸ್ವಾವಲಂಬನೆಗೆ ಮೂಲ ಬಂಡವಾಳ ಕೌಶಲಾಭಿವೃದ್ಧಿ. ಹೊಸ ತಂತ್ರಜ್ಞಾನಗಳ ಬಗ್ಗೆ ಪರಿಣತಿ ಹೊಂದಿದ, ಸೃಜನಶೀಲ ಹಾಗೂ ನವೀನತೆ ತರುವ ಯುವಶಕ್ತಿಯೇ ನಮ್ಮ ದೇಶದ ನಿಜವಾದ ಶಕ್ತಿ. ಆದರೆ, ದುಃಖಕರ ಸಂಗತಿ ಏನೆಂದರೆ ನಮ್ಮ ದೇಶದಲ್ಲಿ ಶಿಕ್ಷಣ ಪಡೆದ ಅನೇಕ ಮೇಧಾವಿಗಳು ವಿದೇಶಗಳಲ್ಲಿ ಉದ್ಯೋಗ ಗಿಟ್ಟಿಸಿ, ಜೀವನ ಕಟ್ಟಿಕೊಳ್ಳುತ್ತಿದ್ದಾರೆ. ಈ ಬ್ರೇನ್​ಡ್ರೇನ್ ನಿಲ್ಲಿಸದೆ ಇದ್ದರೆ, ನಮ್ಮ ಅಭಿವೃದ್ಧಿಯ ವೇಗ ಕುಂಠಿತವಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ನಮ್ಮ ದೇಶದಲ್ಲಿ ಹುಟ್ಟಿದ ಪ್ರತಿಭೆ ಇಲ್ಲಿಯೇ ಉಳಿದು, ದೇಶದ ಅಭಿವೃದ್ಧಿಗಾಗಿ ಕೆಲಸ ಮಾಡುವಂತೆ ಪ್ರೋತ್ಸಾಹಿಸುವುದು ಅತ್ಯವಶ್ಯಕ. ಇದರ ಜೊತೆಗೆ, ಕೃತಕ ಬುದ್ಧಿಮತ್ತೆ (ಎಐ) ಈಗಾಗಲೇ ಉದ್ಯೋಗ ಕ್ಷೇತ್ರವನ್ನು ದೊಡ್ಡ ಮಟ್ಟದಲ್ಲಿ ಬದಲಾಯಿಸುತ್ತಿದೆ.

ಅನೇಕ ಹಳೆಯ ಕೆಲಸಗಳು ನಾಶವಾಗುವ ಸಾಧ್ಯತೆ ಇದ್ದು, ಎಐ ಬಳಸುವ, ನಿಯಂತ್ರಿಸುವ ಮತ್ತು ನಿರ್ವಿುಸುವ ಕೌಶಲ ಹೊಂದಿದವರು ಮಾತ್ರ ಭವಿಷ್ಯದ ಉದ್ಯೋಗ ಮಾರುಕಟ್ಟೆಯಲ್ಲಿ ಉಳಿಯಬಲ್ಲರು. ಈ ಗುರಿ ಸಾಧಿಸಲು, ಗ್ರಾಮದಿಂದ ನಗರವರೆಗೂ ಕೌಶಲಾಭಿವೃದ್ಧಿ ಕೇಂದ್ರಗಳು, ಉತ್ತಮ ಸಂಶೋಧನಾ ಸೌಲಭ್ಯಗಳು, ಉದ್ಯಮಶೀಲತೆಗೆ ಬೆಂಬಲ ಮತ್ತು ಮೇಕ್ ಇನ್ ಇಂಡಿಯಾ, ಸ್ಟಾರ್ಟಪ್ ಇಂಡಿಯಾ ಮುಂತಾದ ಕಾರ್ಯಕ್ರಮಗಳಿಗೆ ಮತ್ತಷ್ಟು ಬಲ ನೀಡಬೇಕು. ‘ಭಾರತದಲ್ಲೇ ನಿರ್ವಿುಸೋಣ, ಭಾರತಕ್ಕಾಗಿ ನಿರ್ವಿುಸೋಣ’ ಎಂಬ ರಾಷ್ಟ್ರಭಾವವನ್ನು ಪ್ರತಿಯೊಬ್ಬ ಯುವ ಮನಸ್ಸಿನಲ್ಲಿ ಬೆಳೆಸಬೇಕು. ಭಾರತೀಯ ಪ್ರತಿಭೆಗಳು ಭಾರತದಲ್ಲಿಯೇ ಉಳಿದು ತಂತ್ರಜ್ಞಾನ, ಆವಿಷ್ಕಾರ ಮತ್ತು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದಾಗ ಮಾತ್ರ ನಾವು ತಂತ್ರಜ್ಞಾನದಲ್ಲಿ ಸ್ವಾವಲಂಬಿಯಾಗುತ್ತೇವೆ, ಆರ್ಥಿಕ ಶಕ್ತಿ ಹೆಚ್ಚಿಸುತ್ತೇವೆ ಮತ್ತು ಖಂಡಿತವಾಗಿಯೂ 2047ರ ಮೊದಲೇ ಭಾರತವನ್ನು ನಿಜವಾದ ವಿಶ್ವಗುರುವನ್ನಾಗಿಸುತ್ತೇವೆ.

ಗುಣಮಟ್ಟದತ್ತ ತುಡಿತವಿರಲಿ

ನಾನು ಸದಾ ಕಾಲ ಭಾರತೀಯ ಕಲಾಪ್ರಕಾರ ಗಳೊಂದಿಗೆ ಒಡನಾಡುತ್ತಲೇ ಬೆಳೆದಿದ್ದೇನೆ. ಭಾರತದ ಕಲೆಗಳು ಮಾನವೀಯ ಅಭಿವ್ಯಕ್ತಿಗಳಷ್ಟೇ ಅಲ್ಲ, ಅವು ದೈವಿಕ ಕೊಡುಗೆಗಳೂ ಹೌದು. ಆದರೆ, ನಾನು ವಿವಿಧ ದೇಶಗಳಲ್ಲಿ ಸಂಚರಿಸಿ ತಾಯ್ನಾಡಿಗೆ ಮರಳಿದಾಗ, ‘ಹಿಂದೆ ಪರಿಪೂರ್ಣತೆಗೆ ದಾರಿದೀಪವಾಗಿದ್ದ ನಮ್ಮ ಕಲೆ ಈಗ ಸಾಮಾನ್ಯತೆಗೆ ಒಗ್ಗಿಕೊಂಡಿದೆ’ ಎಂಬ ಕಟುಸತ್ಯ ಎದುರಾಗುತ್ತದೆ. ನಮ್ಮಲ್ಲಿರುವ ಮೂಲಸೌಕರ್ಯ ಕೊರತೆಯೂ ಇದಕ್ಕೆ ಒಂದು ಕಾರಣ. ವಿಶ್ವದ ಪ್ರಮುಖ ನಗರಗಳಲ್ಲಿ, ಕಲಾವಿದರು ಅತ್ಯಾಧುನಿಕ ಧ್ವನಿವ್ಯವಸ್ಥೆ, ಬೆಳಕಿನ ವ್ಯವಸ್ಥೆ ಮತ್ತು ಬ್ಯಾಕ್​ಸ್ಟೇಜ್ ಸೌಲಭ್ಯಗಳಿರುವ ಸ್ಥಳಗಳಲ್ಲಿ ಪ್ರದರ್ಶನ ನೀಡುತ್ತಾರೆ.

ಇಲ್ಲಿ, ನಾವು ಇನ್ನೂ ಕೊಳಕು ಆಡಿಟೋರಿಯಂಗಳಲ್ಲಿ, ಮುರಿದುಹೋದ ಆಸನಗಳು, ಹಳೆಯ ಧ್ವನಿವ್ಯವಸ್ಥೆ ಮತ್ತು ಕಳಪೆ ಬೆಳಕಿನ ವ್ಯವಸ್ಥೆಯಲ್ಲಿ ಪ್ರದರ್ಶನ ನೀಡುತ್ತೇವೆ. ವಿಶ್ವದರ್ಜೆಯ ಉಪಕರಣಗಳನ್ನು ಅಳವಡಿಸುವ ಆಕಾಂಕ್ಷೆ ಇದ್ದರೂ ಸ್ಥಳೀಯವಾಗಿ ಅವುಗಳ ಉತ್ಪಾದನೆ ಇರುವುದಿಲ್ಲ, ಹೊರದೇಶಗಳಿಂದ ಆಮದು ಮಾಡಿಕೊಳ್ಳಬೇಕೆಂದರೆ ವೆಚ್ಚ ಅಧಿಕವಾಗುತ್ತದೆ. ಇದರ ಪರಿಣಾಮವಾಗಿ, ನಮ್ಮ ಸೃಜನಶೀಲತೆಯನ್ನು ಇಲ್ಲಿನ ಮಿತಿಗಳಿಗೆ ನಾವು ಹೊಂದಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ. ಕಲೆ ಮತ್ತು ಸಂಸ್ಕೃತಿಗಾಗಿ ಸರ್ಕಾರದ ಯೋಜನೆಗಳ ಉದ್ದೇಶ ಒಳ್ಳೆಯದಾಗಿದ್ದರೂ ಅವು ಕೆಲವೊಮ್ಮೆ ಔಪಚಾರಿಕ ಘೊಷಣೆಗಳಾಗಿಯೇ ಉಳಿದುಬಿಡುತ್ತವೆ. ಅನುದಾನ ಕಡಿಮೆ ಇರುತ್ತದೆ. ಒಂದೊಮ್ಮೆ ಉತ್ತಮ ಅನುದಾನ ಸಿಕ್ಕರೂ ಅದು ಅಧಿಕಾರಶಾಹಿಯ ಹಿಡಿತದಲ್ಲಿ ಸಿಲುಕಿಕೊಂಡುಬಿಡುತ್ತದೆ. ಕಲಾವಿದರ ಪಾಲಿಗೆ ಇದೆಲ್ಲವೂ ದೀರ್ಘಕಾಲಿಕ ಅವಕಾಶವಾಗುವುದಕ್ಕಿಂತ ಹೆಚ್ಚಾಗಿ, ಫೋಟೋಗೆ ಮುಖ ತೋರಿಸುವುದಕ್ಕೆ ಸೀಮಿತವಾಗಿಬಿಡುತ್ತದೆ.

ವಿದೇಶದ ಕಲಾವಿದರು ಭಾರತದಲ್ಲಿ ಪ್ರದರ್ಶನ ನೀಡಿದಾಗ, ಸಾವಿರಾರು ಜನರು ಸ್ಥಳಕ್ಕೆ ಧಾವಿಸಿಬರುತ್ತಾರೆ. ಭಾರತೀಯ ಕಲಾವಿದರು ವಿದೇಶಕ್ಕೆ ಹೋದಾಗ, ಪ್ರೇಕ್ಷಕರ ಸ್ಥಾನ ಅಲಂಕರಿಸುವವರು ಬಹುತೇಕ ಅಲ್ಲಿ ನೆಲೆಸಿರುವ ಭಾರತೀಯರೇ ಆಗಿರುತ್ತಾರೆ. ಸ್ಥಳೀಯರು ಕಾಣುವುದು ಕಡಿಮೆ. ಕಾರಣ ಸರಳ. ಅಲ್ಲಿನ ಸ್ಥಳೀಯರಿಗೆ ‘ಸಾಮಾನ್ಯ ಪ್ರದರ್ಶನ’ಗಳನ್ನು ವೀಕ್ಷಿಸಲು ಮನಸ್ಸಿಲ್ಲದೇ ಇರಬಹುದು. ನಮ್ಮ ಕಲಾ ಪ್ರದರ್ಶನಗಳು ಜಾಗತಿಕ ಮಟ್ಟಕ್ಕೆ ಪರಿವರ್ತನೆಗೆ ಆಗಿಲ್ಲ ಎಂಬುದು ಇದರಿಂದ ಸಾಬೀತಾಗುತ್ತದೆ. ಕಲೆಯ ಮೂಲವನ್ನು ಬದಲಾಯಿಸಬೇಕೆಂದು ನನ್ನ ವಾದವಲ್ಲ, ಆದರೆ ಸೌಂದರ್ಯವನ್ನು ಬದಲಿಸಬಹುದು.

ಯಾವುದೇ ಕಲಾಪ್ರದರ್ಶನಕ್ಕೆ ಅದರ ಸೌಂದರ್ಯವೇ (ಏಸ್ಥೆಟಿಕ್ಸ್) ಆತ್ಮ. ಆದರೆ ಅದನ್ನು ಹಲವು ಬಾರಿ ಎರಡನೇ ಆದ್ಯತೆಯಾಗಿ ಪರಿಗಣಿಸಲಾಗುತ್ತದೆ. ಬಲವಾದ ಕಲಾ ಶಿಕ್ಷಣದ ಕೊರತೆಯಿಂದಾಗಿ, ಪ್ರೇಕ್ಷಕರು ಮತ್ತು ಕಲಾವಿದರು ಉನ್ನತ ಗುಣಮಟ್ಟದ ನಿರ್ವಣವೆಂದರೆ ಏನೆಂದು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳುವುದಿಲ್ಲ. ಭಾರತದ ಆಧ್ಯಾತ್ಮಿಕ ಸಂಪ್ರದಾಯಗಳು ನಮ್ಮ ಕಲೆಗೆ ಅನನ್ಯ ಆಳವನ್ನು ನೀಡಿದರೂ, ಆವಿಷ್ಕಾರವಿಲ್ಲದೆ ಕೇವಲ ಆಚರಣೆಗೆ ಬದ್ಧವಾಗಿರುವುದು ಸಮಸ್ಯೆಯಾಗಿದೆ. ಜಾಗತಿಕ ವೇದಿಕೆಯಲ್ಲಿ ಹಲ್​ಚಲ್ ಸೃಷ್ಟಿಸುವ ಶಕ್ತಿಯಾಗಿ ಪರಿವರ್ತನೆಯಾಗದಂತೆ ಇದು ನಮ್ಮನ್ನು ತಡೆಯುತ್ತಿದೆ. ಸಾಮಾನ್ಯಕ್ಕಿಂತಲೂ ಕೆಳಮಟ್ಟದ ಪ್ರದರ್ಶನವನ್ನು ಪ್ರದರ್ಶಕರು ಮತ್ತು ಪ್ರೇಕ್ಷಕರೇ ಸ್ವೀಕರಿಸತೊಡಗಿದಾಗ, ನಿರೀಕ್ಷಿತ ಗುಣಮಟ್ಟವಿಲ್ಲದ ಬಹಳಷ್ಟು ಕಲಾವಿದರು ಈ ವ್ಯವಸ್ಥೆಯೊಳಗೆ ಬಂದು ಲಾಭ ಮಾಡಿಕೊಳ್ಳತೊಡಗುತ್ತಾರೆ. ಈ ಚಕ್ರ ಹೀಗೆಯೇ ಮುಂದುವರಿಯುತ್ತದೆ. ನೈಜ ಗುಣಮಟ್ಟಕ್ಕೆ ಬೆಲೆ ಕೊಡುವ ಹೊಸ ತಲೆಮಾರಿನ ಕಲಾವಿದರು ಮತ್ತು ಕಲಾರಸಿಕರನ್ನು ಸೃಷ್ಟಿಸಲು ರಾಷ್ಟ್ರೀಯ ಶಿಕ್ಷಣ ನೀತಿ (ಎನ್​ಇಪಿ) 2020 ಸಹಾಯ ಮಾಡುತ್ತದೆ ಎಂದು ಈ ಸ್ವಾತಂತ್ರ್ಯ ದಿನದ ಶುಭ ಸಂದರ್ಭದಲ್ಲಿ ನಾನು ಆಶಿಸುತ್ತೇನೆ.

ಡಿಜಿಟಲ್ ಕ್ರಾಂತಿಯ ಕಾಲ

ದೇಶದ ಪ್ರಗತಿಯಲ್ಲಿ ಉದ್ಯಮಶೀಲತೆಯ ಪಾತ್ರ ಮುಖ್ಯ. ಉದ್ಯಮ ಎಂದರೆ ಪ್ರತಿದಿನವೂ ಬದಲಾದ ಸ್ವರೂಪವನ್ನು ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ. ಜನರ ಅವಶ್ಯಕತೆ ಮತ್ತು ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಉದ್ಯಮದ ಸ್ವರೂಪವನ್ನು ಮಾರ್ಪಡಿಸುವ ಮನಸ್ಥಿತಿ ತೀರಾ ಅಗತ್ಯ. ಉದ್ಯಮದತ್ತ ಹೆಜ್ಜೆ ಇಡುವಾಗ ಸವಾಲುಗಳು ಸಾಮಾನ್ಯ. ಆದರೆ ಅವುಗಳನ್ನು ಗುರಿತಲುಪಲು ಬೇಕಾದ ಮೆಟ್ಟಿಲುಗಳನ್ನಾಗಿ ಮಾರ್ಪಡಿಸುವ ಮನಸ್ಥಿತಿ ಹೊಂದಿದವರು ಮಾತ್ರ ಯಶಸ್ಸು ಸಾಧಿಸಲು ಸಾಧ್ಯ. ಸಮಾಜದಲ್ಲಿನ ಪ್ರತಿಯೊಂದು ಬದಲಾವಣೆಯನ್ನು ಸೂಕ್ಷ್ಮವಾಗಿ ಗಮನಿಸಿ, ಅದಕ್ಕೆ ತಕ್ಕಂತೆ ಬಿಜಿನೆಸ್ ಮಾರ್ಪಾಡು ಮಾಡಿ ಕೊಳ್ಳಬೇಕು. ಡಿಜಿಟಲ್ ಕ್ರಾಂತಿ ಇಂದು ಮಾರುಕಟ್ಟೆ ಮೇಲೆ ಬೀರುತ್ತಿರುವ ಪ್ರಭಾವವನ್ನು ಸಮರ್ಥವಾಗಿ ಸದ್ಬಳಕೆ ಮಾಡಿಕೊಳ್ಳಬೇಕು.

ಪ್ರತಿಯೊಂದು ಅಗತ್ಯತೆಗಳು ಕೂಡ ಡಿಜಿಟಲ್ ಮೋಡ್​ಗೆ ಬದಲಾಗಿರುವುದನ್ನು ಅರ್ಥ ಮಾಡಿಕೊಳ್ಳಬೇಕು. ಕರೊನಾದಂತಹ ಸಾಂಕ್ರಾಮಿಕದ ಸಂದರ್ಭದಲ್ಲಿ ಪ್ರತಿ ಉದ್ಯೋಗವೂ ನಷ್ಟ ಅನುಭವಿಸಬೇಕಾಯಿತು. ಅದಕ್ಕೆ ಪರ್ಯಾಯವಾಗಿ ಬದುಕು ಕಟ್ಟಿಕೊಳ್ಳುವ ಕೌಶಲವನ್ನೂ ಆಗಿನ ಪರಿಸ್ಥಿತಿ ಪ್ರತಿಯೊಬ್ಬರಿಗೂ ಕಲಿಸಿತು. ಸಿಗ್ನಲ್​ನಲ್ಲಿ ಪೇರಲೆ, ಪೈನಾಪಲ್ ಮಾರುತ್ತಿದ್ದವರು, ಮಾಸ್ಕ್, ಸ್ಯಾನಿಟೈಸರ್ ಮಾರಾಟ ಮಾಡಲು ಆರಂಭಿಸಿದರು. ನಾನು ಕೂಡ ಕರೊನಾಕ್ಕೂ ಮೊದಲು ನಡೆಸುತ್ತಿದ್ದ ಐಟಿ ಕಂಪನಿಯಲ್ಲಿ ನಷ್ಟವನ್ನು ಅನುಭವಿಸಿ ಸಂಪೂರ್ಣ ಸೋಲು ಅನುಭವಿಸಿದೆ. ಆದರೆ ಅದರಿಂದ ಹೊರಬಂದು ಜಗತ್ತಿನ ಬೇಡಿಕೆಯನ್ನು ಮನಗಂಡು ನನ್ನ ಅನುಭವಕ್ಕೆ ವಿರುದ್ಧವಾಗಿ ಎಕ್ಸ್ ಪೋರ್ಟ್ ಬಿಜಿನೆಸ್ ಆರಂಭಿಸಿ ಕೇವಲ ಮೂರ್ನಾಲ್ಕು ವರ್ಷದಲ್ಲಿ ಗೆಲುವಿನ ಹಾದಿಗೆ ಮರಳಿದೆ. ಸದ್ಯ ದುಬೈ, ಸಿಂಗಾಪುರ ಮತ್ತಿತರ ದೇಶಗಳಲ್ಲಿ ಎಕ್ಸ್​ಪೋರ್ಟ್ ಬಿಜಿನೆಸ್ ಇದೆ. ಜೊತೆಗೆ ಸೈಬರ್ ಸೆಕ್ಯೂರಿಟಿ ಬಗ್ಗೆ ಹೊಸ ರೀತಿಯ ಪ್ರಾಜೆಕ್ಟ್ ಮಾಡುತ್ತಿದ್ದೇನೆ. ಹೇಳುವ ತಾತ್ಪರ್ಯವೇನೆಂದರೆ, ಪ್ರತಿಯೊಬ್ಬರೂ ತಾವು ಹೋಗುವ ದಾರಿಯಲ್ಲಿ ಯಾವುದೇ ಅಡಚಣೆ ಎದುರಾದರೂ ಬದಲಿ ಮಾರ್ಗದ ಮೂಲಕ ಗುರಿ ಮುಟ್ಟವ ಸೆಲ್ಪ್ ಸ್ಕಿಲ್ ಬೆಳೆಸಿಕೊಂಡಿರಬೇಕು.

ಉದ್ಯಮ ಕ್ಷೇತ್ರಕ್ಕೆ ಹೊಸದಾಗಿ ಬರುವವರು ಮೊದಲಿಗೆ ಕಡಿಮೆ ಬಂಡವಾಳವನ್ನು ಹೂಡಿ ಸಣ್ಣ ಮಟ್ಟದಲ್ಲಿ ಉದ್ಯಮವನ್ನು ಆರಂಭಿಸಬೇಕು. ಒಂದು ವೇಳೆ ತಮ್ಮ ಉದ್ಯಮದಲ್ಲಿ ನಷ್ಟ ಸಂಭವಿಸಿದರೂ ಸುಧಾರಿಸಿಕೊಳ್ಳಲು ಸಾಧ್ಯವಾಗುವಂತಿರಬೇಕು. ಗಳಿಸುವ ಲಾಭದ ಹಣದಿಂದ ಉದ್ಯಮವನ್ನು ವಿಸ್ತರಿಸುತ್ತ ಸಾಗಬೇಕು. ಉದ್ಯಮದಲ್ಲಿ ಯಶಸ್ಸು ಸಾಧಿಸಲು ನೆಟ್​ವರ್ಕ್ ಮತ್ತು ಮೆಂಟರ್​ಶಿಪ್ ಬಹಳ ಮುಖ್ಯ. ಮಾರುಕಟ್ಟೆಯಲ್ಲಿ ಸದಾ ಬೇಡಿಕೆ ಇರುವ ಕ್ಷೇತ್ರಗಳ ಬಗ್ಗೆ ಅಧ್ಯಯನ ನಡೆಸಿ ಉದ್ಯಮ ಆರಂಭಿಸಬೇಕು. ಸಾವಯವ ಕೃಷಿ ಉತ್ಪನ್ನಗಳು, ಇಂಧನ, ಶಿಕ್ಷಣ, ಆರೋಗ್ಯ, ತಾಂತ್ರಿಕ ಅಂಶಗಳಿಗೆ ಸಂಬಂಧಿಸಿದಂತೆ ಉದ್ಯಮದಲ್ಲಿ ವಿಪುಲ ಅವಕಾಶಗಳಿವೆ. ಎಐ ತಂತ್ರಜ್ಞಾನ, ಸೈಬರ್ ಸೆಕ್ಯೂರಿಟಿ ಬಹಳ ಬೇಡಿಕೆಯ ವಿಷಯಗಳು. ಒಟ್ಟಾರೆ ಈ ಎಲ್ಲ ಅಂಶಗಳನ್ನಾಧರಿಸಿ ವ್ಯಕ್ತಿಯ ವೈಯಕ್ತಿಕ ಅಭ್ಯುದಯ ಮತ್ತು ದೇಶದ ಪ್ರಗತಿ ಎರಡನ್ನೂ ಸಾಧಿಸಲು ಸಾಧ್ಯ.

ನೆಕ್ಸ್ಟ್​ಜೆನ್ ಮೇಲಿದೆ ಮಹತ್ವದ ಹೊಣೆ

ಭಾರತವು ಪ್ರಪಂಚದ ಅತಿ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರಗಳಲ್ಲಿ ಒಂದು. ಸ್ವಾತಂತ್ರ್ಯ ಪಡೆದ ನಂತರದ ಎಂಟು ದಶಕಗಳಲ್ಲಿ ಭಾರತ ಹಲವು ಕ್ಷೇತ್ರಗಳಲ್ಲಿ ಗಣನೀಯ ಪ್ರಗತಿಯನ್ನು ಸಾಧಿಸಿದೆ. ಆದರೆ ಭವಿಷ್ಯದ ಭಾರತ ಇನ್ನೂ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದ್ದು, ಮುಂದಿನ ವರ್ಷಗಳಲ್ಲಿ ವಿಶ್ವದ ಮಹಾಶಕ್ತಿಯಾಗಿ ಹೊರಹೊಮ್ಮುವ ಶಕ್ತಿಯನ್ನು ಪಡೆದಿದೆ.

ಅಭಿವೃದ್ಧಿಶೀಲ ರಾಷ್ಟ್ರದಿಂದ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಭವಿಷ್ಯದ ಭಾರತವನ್ನು ರೂಪಿಸುವಲ್ಲಿ ಶಿಕ್ಷಣ, ತಂತ್ರಜ್ಞಾನ, ಆರ್ಥಿಕತೆ, ಕೃಷಿ, ಆರೋಗ್ಯ ಮತ್ತು ಪರಿಸರ ಕ್ಷೇತ್ರಗಳು ಪ್ರಮುಖ ಪಾತ್ರ ವಹಿಸಲಿವೆ. ಇದಕ್ಕೆಲ್ಲ ನಿಯೋಜಕರಾಗಿ ಕಾರ್ಯ ನಿರ್ವಹಿಸಬೇಕಿರುವುದು ಭಾರತದ ಯುವಜನ ಶಕ್ತಿ. ಕೃತಕ ಬುದ್ಧಿಮತ್ತೆ (ಎಐ), ರೋಬೋಟಿಕ್ಸ್, ನವೀಕರಿಸಬಹುದಾದ ಇಂಧನ, ಬಾಹ್ಯಾಕಾಶ ಸಂಶೋಧನೆ ಮುಂತಾದ ಕ್ಷೇತ್ರಗಳಲ್ಲಿ ಭಾರತ ಈಗಾಗಲೇ ಮುಂಚೂಣಿಯಲ್ಲಿ ಸಾಗುತ್ತಿದೆ. ಮೇಕ್ ಇನ್ ಇಂಡಿಯಾ ಹಾಗೂ ಡಿಜಿಟಲ್ ಇಂಡಿಯಾ ಯೋಜನೆಗಳು ಭವಿಷ್ಯದ ಅಭಿವೃದ್ಧಿಗೆ ದಾರಿ ತೋರಿಸುತ್ತಿವೆ. ಆ ಮಾರ್ಗದಲ್ಲಿ ಇಡೀ ರಾಷ್ಟ್ರ ಒಂದಾಗಿ ಮುನ್ನಡೆಯಬೇಕಿದೆ.

ಉದ್ಯಮ, ವ್ಯಾಪಾರ ಮತ್ತು ಸ್ಟಾರ್ಟ್​ಅಪ್​ಗಳಿಗೆ ಇನ್ನೂ ಹೆಚ್ಚಿನ ಪೋ›ತ್ಸಾಹ ನೀಡುವುದರಿಂದ ಉದ್ಯೋಗಾವಕಾಶಗಳು ಹೆಚ್ಚುತ್ತವೆ. ಗ್ರಾಮೀಣ ಹಾಗೂ ನಗರ ಆರ್ಥಿಕತೆಯ ಸಮಾನ ಬೆಳವಣಿಗೆ ರಾಷ್ಟ್ರದ ಸಮಗ್ರ ಅಭಿವೃದ್ಧಿಗೆ ಅಗತ್ಯವಾಗಿದೆ. ಆಧುನಿಕ ಕೃಷಿ ವಿಧಾನಗಳು, ನೀರಾವರಿ ವ್ಯವಸ್ಥೆ ಮತ್ತು ರೈತರಿಗೆ ಮಾರುಕಟ್ಟೆ ಸಂಪರ್ಕ ಕಲ್ಪಿಸುವುದು ಆಹಾರ ಭದ್ರತೆ ಹಾಗೂ ಗ್ರಾಮೀಣ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಗುಣಮಟ್ಟದ ಆರೋಗ್ಯ ಸೇವೆ ಮತ್ತು ಸ್ವಚ್ಛ ಪರಿಸರ ಭವಿಷ್ಯ ಭಾರತದ ನಾಗರಿಕರ ಸಮೃದ್ಧಿ ಹಾಗೂ ಜೀವನಮಟ್ಟವನ್ನು ಹೆಚ್ಚಿಸುತ್ತವೆ. ನಮ್ಮ ಯುವಜನರ ಶ್ರಮ, ವಿಜ್ಞಾನಿಗಳ ಸಂಶೋಧನೆ, ರೈತರ ಪರಿಶ್ರಮ ಮತ್ತು ನಾಗರಿಕರ ಜವಾಬ್ದಾರಿತನದಿಂದ ಭಾರತ 2047ರೊಳಗೆ ವಿಶ್ವದ ಅತ್ಯಂತ ಪ್ರಭಾವಶಾಲಿ ರಾಷ್ಟ್ರಗಳಲ್ಲಿ ಒಂದಾಗುವುದು ಖಚಿತ.

ಆ ದಿಸೆಯಲ್ಲಿ ಭಾರತೀಯರೆಲ್ಲರೂ ತಮ್ಮ ತಮ್ಮ ಹೊಣೆಯರಿತು, ಎಲ್ಲ ಭೇದಗಳನ್ನೂ ಮರೆತು, ಇನ್ನಷ್ಟು ಮತ್ತಷ್ಟು ಶ್ರಮ ಹಾಕುವುದು ಇವತ್ತಿನ ತುರ್ತು ಅಗತ್ಯ. ಜೆನ್-ಎಕ್ಸ್​ನಿಂದ ಹಿಡಿದು ಈಗಿನ ಜೆನ್-ಬೀಟಾವರೆಗೂ ಸ್ವಾತಂತ್ರ್ಯದ ವ್ಯಾಖ್ಯಾನ ಬದಲಾಗುತ್ತಿದೆ. ಈಗ ರಾಷ್ಟ್ರಪ್ರೇಮ ಪ್ರತಿಯೊಬ್ಬರಲ್ಲಿಯೂ ನೆಲೆಸಿದೆ. ಸ್ವಾತಂತ್ರ್ಯೊತ್ಸವ ಈಗ ಪ್ರತಿ ಮನೆಯಲ್ಲೂ ಆಚರಿಸುವ ಹಬ್ಬವಾಗಿದೆ. ಈ ಸಂದರ್ಭದಲ್ಲಿ ಹೊಸ ಯೋಚನೆಗೆ ಮತ್ತು ಯೋಜನೆಗೆ ಅವಕಾಶದ ಸ್ವಾತಂತ್ರ್ಯ ಬೇಕಿದೆ. ತಂದೆ ಹಾಕಿದ ಆಲದ ಮರವಿದ್ದರೆ ಅದರಲ್ಲೇ ಒಂದು ಆವಿಷ್ಕಾರ ತರಬೇಕಿದೆ. ಮಾಡುವ ಎಲ್ಲ ಕೆಲಸಗಳಲ್ಲೂ ಒಂದು ವೈಜ್ಞಾನಿಕ ಮತ್ತು ನೈತಿಕತೆಯ ಅರ್ಥ ತುಂಬಿದರೆ ಅದು ಯಶಸ್ವಿಯಾಗುವುದು ಸುಲಭ. ದೇಶವನ್ನು ಉನ್ನತಗೊಳಿಸಲು ವಿಜ್ಞಾನಿಯೇ ಆಗಬೇಕಿಲ್ಲ; ಅಜ್ಞಾನಿಯಾಗದಿದ್ದರೆ ಸಾಕು.

ಪ್ರತಿದಿನ ನಮ್ಮ ಸುತ್ತ ಮುತ್ತ ನಡೆಯುವ ಎಷ್ಟೋ ಕೆಲಸಗಳಲ್ಲಿ ತಂತ್ರಜ್ಞಾನದ ಸಹಾಯದಿಂದ ಮತ್ತು ಸಾಮಾನ್ಯ ಜ್ಞಾನದಿಂದ ನಾವು ಸುಧಾರಣೆ ತರಬಹುದು. ಯಾವುದೇ ಕೆಲಸವಾದರೂ ಅದನ್ನು ಸಮಾನತೆಯಿಂದ ಗೌರವಿಸಿ ಪ್ರಾಮಾಣಿಕತೆಯಿಂದ ಮಾಡಿದರೆ ದೇಶವು ಅಭಿವೃದ್ಧಿಯಾಗುವುದರಲ್ಲಿ ಸಂದೇಹವಿಲ್ಲ. ವಿದೇಶಗಳಲ್ಲೂ ಬಹಳಷ್ಟು ಪ್ರಮುಖ ಜಾಗತಿಕ ಕಂಪನಿಗಳಲ್ಲಿ ಭಾರತ ಮೂಲದವರೇ ಪ್ರಮುಖ ಸ್ಥಾನದಲ್ಲಿದ್ದಾರೆ. ಇಂದು ಭಾರತವು ಕೃಷಿ, ಸಂಸ್ಕೃತಿ, ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ಆರೋಗ್ಯ, ಸೇನೆ ಮತ್ತು ಜಾಗತಿಕ ರಾಜಕೀಯಗಳಲ್ಲಿ ಯಶಸ್ವಿಯಾಗಲು ಯುವ ಭಾರತೀಯರಲ್ಲಿ ಬೆಳೆಯುತ್ತಿರುವ ಸ್ವತಂತ್ರ ಚಿಂತನೆ ಮತ್ತು ಸೃಜನಾತ್ಮಕ ದೃಷ್ಟಿಕೋನವೇ ಮುಖ್ಯ ಕಾರಣ. ಅದನ್ನು ಬೆಳೆಸಿಕೊಂಡು ಹೋಗುವುದು ಎಲ್ಲ ಯುವಜನರ ಹೊಣೆಯಾಗಿದೆ. ಹಾಗಾದಾಗ ಮಾತ್ರ ಭಾರತ ತನ್ನ ಸ್ವಾತಂತ್ರ್ಯ ಶತಮಾನೋತ್ಸವ ಕಾಲಕ್ಕೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಹೊರಹೊಮ್ಮುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net