ರೆಸಲೂಷನ್​ 2019 ಹೀಗೆಲ್ಲಾ ಆಯ್ತಪ್ಪ: ನೌಕಾಪಡೆ ಪರೀಕ್ಷೆ ಪಾಸು ಮಾಡಿದೆ

Mas 2
Published on

ಜನವರಿ ಎಂದರೆ ಹಲವರಿಗೆ ಅದು ‘ಸಾಧನೆ’ಯ ಮಾಸ. ಹೋದ ವರ್ಷ ಮಾಡದ ಏನಾದರೊಂದು ಸಾಧನೆ ಈ ವರ್ಷ ಮಾಡಬೇಕು ಎನ್ನುವ ಹಂಬಲ. ಕಳೆದ ವರ್ಷ ಇಂಥದ್ದೇ ರೆಸಲೂಷನ್ ಮಾಡಿ ಎಷ್ಟರಮಟ್ಟಿಗೆ ಸಕ್ಸಸ್ ಆಗಿದ್ದೀರಿ ಎಂದು ವಿಜಯವಾಣಿ ಕೇಳಿದ ಪ್ರಶ್ನೆಗೆ ಬಂದ ಸಾವಿರಾರು ಪತ್ರಗಳಲ್ಲಿ ಆಯ್ದ ಕೆಲವು ಪತ್ರಗಳ ಎರಡನೆಯ ಭಾಗ.

ನೌಕಾಪಡೆ ಪರೀಕ್ಷೆ ಪಾಸು ಮಾಡಿದೆ

ನಾನು ಮತ್ತು ನನ್ನ ಅಣ್ಣ ಉಮೇಶ ಭಾರತೀಯ ನೌಕಾಪಡೆಗೆ ಸೇರಬೇಕೆಂಬ ಗುರಿ ಹಾಕಿಕೊಂಡಿದ್ದೆವು. ಆದರೆ ಈ ಪರೀಕ್ಷೆ ಪಾಸು ಮಾಡಲು ಕೋಚಿಂಗ್ ಇರಲೇಬೇಕು. ಸಾಮಾನ್ಯ ಹಳ್ಳಿಯವರಿಗೆ ಇದು ಅಸಾಧ್ಯವೆಂದೇ ಹಲವರು ಹೇಳಿದರು. ಆದರೆ ನನ್ನ ಮತ್ತೊಬ್ಬ ಅಣ್ಣ ಬೀರಪ್ಪ ಪ್ರಯತ್ನ ಬಲವಾಗಿದ್ದರೆ ಯಶಸ್ಸು ಖಚಿತ ಎಂದು ಹುರಿದುಂಬಿಸಿದ ಫಲವಾಗಿ, ಇಬ್ಬರೂ ಪರೀಕ್ಷೆ ಎದುರಿಸಲು ಸಿದ್ಧರಾದೆವು. ಪರೀಕ್ಷೆ ಮುಗಿಯಿತು. ಆಶ್ಚರ್ಯ! ಇಬ್ಬರೂ ಸೆಲೆಕ್ಟ್ ಆದೆವು. ಊರಿಗೇ ‘ಪ್ರಥಮ’ರಾಗಿ ನೌಕಾಪಡೆ ಪರೀಕ್ಷೆ ಪಾಸು ಮಾಡಿದ್ದರಿಂದ ಊರಲ್ಲೆಲ್ಲಾ ನಮ್ಮದೇ ಚರ್ಚೆ! ಕೋಚಿಂಗ್ ಇಲ್ಲದೆ ಸಾಧ್ಯವಿಲ್ಲ ಎಂದವರೆಲ್ಲ ಮೌನ. ಮುಂದಿನ ಪ್ರಕ್ರಿಯೆಯಲ್ಲಿಯೂ ಜಯಸಾಧಿಸಿ ಫೈನಲ್ ತಲುಪಿದೆವು. ಆದರೆ ಕೊನೆಯ ಫೈನಲ್ ಮೆರಿಟ್ ಲಿಸ್ಟಿನಲ್ಲಿ ಅಣ್ಣ ಆಯ್ಕೆಯಾದ. ನಾನು ಕೇವಲ 1 ಅಂಕದಿಂದ ದೂರ ಉಳಿದೆ. ನಾನು ಎದೆಗುಂದಿಲ್ಲ. ದೊಡ್ಡ ಗುರಿಯತ್ತ ಹೆಜ್ಜೆ ಇಟ್ಟಿದ್ದೇನೆ. ಯಶಸ್ಸು ಸಿಗುವುದೆಂಬ ವಿಶ್ವಾಸವಿದೆ.

| ನಾರಾಯಣ ಡಂಬಳಿ ಕೋಹಳ್ಳಿ, ಅಥಣಿ, ಬೆಳಗಾವಿ ಜಿಲ್ಲೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net