

ಒಬ್ಬ ಬಹಳ ಸಿರಿವಂತನಿದ್ದ. ಸತ್ತ ನಂತರ ತನ್ನನ್ನೊಯ್ಯಲು ಬಂದ ಧರ್ಮರಾಜನನ್ನು ‘ನಾನು ಹಣ, ಐಶ್ವರ್ಯಗಳನ್ನು ನನ್ನೊಡನೆ ಒಯ್ಯಬಹುದೇ?’ ಎಂದು ಕೇಳಿದ. ಆಗ ಧರ್ಮರಾಜನು, ‘ಸಾಧ್ಯವಿಲ್ಲ. ಅವು ಭೂಮಿಗೆ ಸೇರಿದವು’ ಎನ್ನುತ್ತಾನೆ. ‘ಹಾಗಾದರೆ ನನ್ನ ಗೌರವಾದರಗಳನ್ನಾದರೂ ಒಯ್ಯಬಹುದೇ’ ಎನ್ನಲು, ‘ಇಲ್ಲ ಅವು ದಿಕ್ಪಾಲಕರ ಸ್ವತ್ತು’ ಎಂದುತ್ತರಿಸುತ್ತಾನೆ. ಹಾಗಾದರೆ ಈ ಶರೀರವನ್ನಾದರೂ ಕೊಂಡು ಹೋಗಬಹುದೇ ಎಂದು ಕೇಳಲು, ‘ಅದನ್ನು ನಿನ್ನೊಡನೆ ಒಯ್ಯಲಾಗದು. ಅದು ಪಂಚಭೂತಗಳಿಗೆ ಸೇರಿದ್ದು’ ಎನ್ನುತ್ತಾನೆ ಧರ್ಮರಾಜ. ‘ನನ್ನ ಮಡದಿ ಮಕ್ಕಳೊಡನೆ ಕಳೆದ ನೆನಪುಗಳು!’ ಎಂದಾಗ, ‘ಅವು ಕಾಲನವು ನಿನ್ನವಲ’ ಎಂಬ ಉತ್ತರ ಸಿಗುತ್ತದೆ. ಆಗ ಸಿರಿವಂತನು ದುಃಖಾಶ್ಚರ್ಯಗಳಿಂದ, ‘ಹಾಗಾದರೆ ನನ್ನದೇನು!’ ಎಂದು ಕೇಳಲು ಚೀಲವೊಂದನ್ನು ಕೈಗಿತ್ತು, ‘ಇವು ನಿನ್ನ ಗಳಿಕೆ, ನಿನ್ನ ಕರ್ಮಗಳು’ ಎನ್ನುತ್ತಾನೆ.
ಯಾರೇ ಆಗಲಿ ಈ ಪಾರ್ಥಿವ ಶರೀರವನ್ನಗಲಿದ ನಂತರ ಯಾವುದೂ ಅವರದ್ದಲ್ಲ. ಕರ್ಮಫಲಗಳು ಅಂದರೆ ಮಾಡಿದ ದಾನ, ಗಳಿಸಿದ ಪುಣ್ಯ ಮೊದಲಾದವು ಮಾತ್ರ ಆತನವು. ಆದ್ದರಿಂದಲೇ ಹಿರಿಯರು ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸನ್ಯಾಸಗಳನ್ನು ಹೇಳಿರುವುದು. ಬ್ರಹ್ಮಚರ್ಯದಲ್ಲಿ ಅಧ್ಯಯನಾದಿಗಳು, ಗೃಹಸ್ಥದಲ್ಲಿ ದುಡಿಮೆ-ಸಂಸಾರ, ವಾನಪ್ರಸ್ಥದಲ್ಲಿ ಸಂಸಾರ ಬಂಧನಗಳು ಸಾರರಹಿತ ಎಂದರಿತು ಗಳಿಸಿದ ಜ್ಞಾನ-ಸಂಪತ್ತುಗಳನ್ನು ದಾನ ಮಾಡಬೇಕು, ಭಗವಂತನ ಧ್ಯಾನ ಮಾಡಬೇಕು. ಕೊನೆಯಲ್ಲಿ ಎಲ್ಲವನ್ನೂ ತ್ಯಜಿಸಿ ಸನ್ಯಾಸದಲ್ಲಿ ಮೋಕ್ಷದ ನಿಟ್ಟಿನಲ್ಲಿ ಹೆಜ್ಜೆ ಹಾಕಬೇಕು. ಇಲ್ಲದಿದ್ದರೆ ಲೌಕಿಕ ಬಂಧನಗಳಲ್ಲಿ ಸಿಕ್ಕಿ ತೊಳಲಾಡಿ ಕೊನೆಯಲ್ಲಿ ಖಾಲಿ ಚೀಲದೊಂದಿಗೆ ನಿರ್ಗಮಿಸಬೇಕಾಗುತ್ತದೆ.
ಏನು ಬೇಕು? ಎಂಬ ಪ್ರಶ್ನೆಯನ್ನು ಎದುರಿಟ್ಟರೆ ಬಹುಶಃ ನನಗೇನೂ ಬೇಡ ಎಂಬ ಉತ್ತರವನ್ನು ಯಾವ ವ್ಯಕ್ತಿಯೂ ನೀಡಲಾರ. ಅದರ ಮೂಲ ಆಸೆ, ಯಾರಿಗಾಗಿ ಎಂದರೆ ನನಗಾಗಿ! ನನ್ನವರಿಗಾಗಿ! ಜೀವನದ ಕೊನೆಯ ಕ್ಷಣದವರೆಗೂ ಪ್ರತಿಯೊಬ್ಬನೂ ಏನಾದರೊಂದನ್ನು ಆಶಿಸುತ್ತಾನೆ. ನಡೆದು ಹೋಗುವವನು ಸೈಕಲ್ಲನ್ನು ಬಯಸುತ್ತಾನೆ. ಸೈಕಲ್ ಇರುವವನು ಬೈಕನ್ನು, ಬೈಕಿನವರು ಕಾರನ್ನು, ಕಾರುಳ್ಳವನು ಮತ್ತೇನನ್ನೋ . . . ಹೀಗೆ ಪ್ರತಿಯೋರ್ವನಿಗೂ ಉನ್ನತ ಹಂತಕ್ಕೇರುವ ಬಯಕೆ. ಈ ಬಯಕೆಗಳು ಲೌಕಿಕ ಜೀವನದ ಗುರಿಯನ್ನು ನಿರ್ಧರಿಸುತ್ತವೆ. ಆಳವಾದ ಬೇರುಳ್ಳ ಮರವೂ ಒಂದು ದಿನ ಉರುಳುತ್ತದೆ. ನದಿ-ಕೊಳಗಳ ನೀರು ಬತ್ತಿ ಹೋಗುತ್ತದೆ. ಆದರೆ, ಮಾನವನು ಮಾಡಿದ ದಾನ ಹೋಮ-ನೇಮಗಳು ನಮ್ಮ ಬೆನ್ನಿಗೆ ಬರುತ್ತವೆ.
ಚಿರಪ್ರವಾಸಿನಂ ಪುರುಷಂ ದೂರತಃ ಸ್ವಸ್ಥಮಾಗತಂ|
ಜ್ಞಾತಿಮಿತ್ರಾಣಿ ಸುಹೃದಾಶ್ಚಾಭಿನನ್ದನ್ತಾ್ಯ ಗತಮ್|
ತಥೈವ ಕೃತಪುಣ್ಯಮಪಿ ಅಸ್ಮಾಲ್ಲೋಕಾತ್ವರಂ ಗತಂ|
ಪುಣ್ಯಾನಿ ಪ್ರತಿಗೃಹ್ಯನ್ತಿ ಪ್ರೀಯಂ ಜ್ಞಾತಿವಾಗತಮ್|
ಬಹುಕಾಲ ಹೊರಗೆ ಹೋಗಿದ್ದು, ದೂರದೇಶದಿಂದ ಸುಖವಾಗಿ ಹಿಂತಿರುಗಿ ಬಂದವನನ್ನು ನೆಂಟರು, ಇಷ್ಟರು, ಗೆಳೆಯರು ಎಲ್ಲರೂ ಆನಂದದಿಂದ ಬರಮಾಡಿಕೊಳ್ಳುವರು. ಇದರಂತೆಯೇ ಪುಣ್ಯವನ್ನು ಮಾಡಿ ಈ ಲೋಕದಿಂದ ಪರಲೋಕಕ್ಕೆ ಹೋದವನನ್ನು ಅವನ ಪುಣ್ಯಗಳು ಹಿಂದಕ್ಕೆ ಬಂದ ನೆಂಟನೆಂಬಂತೆ ಬರಮಾಡಿಕೊಳ್ಳುವವು.
(ಲೇಖಕರು ನಿವೃತ್ತ ಪ್ರಾಧ್ಯಾಪಕರು, ಹವ್ಯಾಸಿ ಬರಹಗಾರರು)