

| ಮಂಜುನಾಥ್ ಬಿ.ಎಸ್.
ಬೆಂಗಳೂರು: ನಮ್ಮ ನಗರವಾಸಿಗಳಿಗೆ ಸದಾ ಮೈತುಂಬ ಕೆಲಸ. ಬೆಳಗ್ಗೆ ವಾಕಿಂಗ್, ಜಾಗಿಂಗ್, ಪೇಪರ್ ರೀಡಿಂಗ್, ಮಕ್ಕಳನ್ನು ಸಮಯಕ್ಕೆ ಸ್ಕೂಲಿಗೆ ಕರೆದೊಯ್ಯುವ ಟೆನ್ಶನ್. ಇಷ್ಟೆಲ್ಲದರ ನಡುವೆ ಆಫೀಸ್, ಮನೆ ಕೆಲಸ, ಧಾರಾವಾಹಿ, ರಿಯಾಲಿಟಿ ಶೋ ನೋಡಿ ಮುಗಿಸುವ ಜವಾಬ್ದಾರಿ. ಇಷ್ಟು ಬಿಜಿಯಾಗಿದ್ದವರಿಗೆ ತಿಂಡಿ, ಅಡುಗೆ ಮಾಡುವ ಪುರಸೊತ್ತೆಲ್ಲಿಂದ ಬರಬೇಕು? ಇವರೆಲ್ಲರ ಕಷ್ಟ ತಣಿಸುವ ಸ್ನೇಹಿತನೇ ಫ್ರೋಜನ್ ಫುಡ್ ಅರ್ಥಾತ್ ಘನೀಕೃತ ಆಹಾರ.
ಈ ಫುಡ್ ಫಟಾಫಟ್. ತರಕಾರಿ ಹೆಚ್ಚಬೇಕಿಲ್ಲ. ಪಾತ್ರೆ ತೊಳೆಯಬೇಕಿಲ್ಲ. ಪ್ಯಾಕೆಟ್ ಬಿಚ್ಚಿ ಬಾಣಲಿಗೆ ಹಾಕಿದರೆ ಅಲ್ಲಿಂದ ನೇರ ಬಾಯಿಗೆ. ನೀವು ತಿಂದು ಅರಗಿಸಿಕೊಳ್ಳಬೇಕಷ್ಟೆ. ಬೆಂಗಳೂರು ಏಕೆ ಜಿಲ್ಲಾ, ತಾಲೂಕು ಕೇಂದ್ರಗಳ ಮನೆ, ಮನೆಗಳಿಗೂ ಈ ಘನೀಕೃತ ಆಹಾರ ಹೊಕ್ಕಿದೆ. ನೋ ಟೈಮ್ ಎಂಬ ನೆಪ ಹೇಳಿಕೊಂಡು ಇದನ್ನು ತಿಂದುಣ್ಣುತ್ತಿರುವ ದೇಹಗಳು ದಿನಕಳೆದಂತೆ ಖಾಯಿಲೆಯ ಗೂಡಾಗುತ್ತಿವೆ. 10ರ ವಯಸ್ಸು ದಾಟದ ಮಕ್ಕಳಿಗೂ ಮಧುಮೇಹ, ಕ್ಯಾನ್ಸರ್ ಕಾಡುತ್ತಿದೆ. ಕಿ.ಮೀ ದೂರವೂ ನಡೆಯಲಾಗದೆ ಏದುಸಿರು ಬಿಡುತ್ತಿದ್ದಾರೆ.
ಹಬ್ಬುತ್ತಿದೆ ವಿಷಜಾಲ: ಸಲಾಮಿ, ನೂಡಲ್ಸ್, ಸಾಸೇಜ್, ಕಬಾಬ್ ಸೇರಿದಂತೆ ಈಗ ಫ್ರೋಜನ್ ಫುಡ್ ಹತ್ತಾರು ರೂಪದಲ್ಲಿ ಲಭ್ಯ. ಮಾಲ್, ಮಳಿಗೆಗಳಲ್ಲಿ ತಣ್ಣಗೆ ಫ್ರಿಜ್ನಲ್ಲಿ ಕುಳಿತಿರುವ ಈ ಆಹಾರವನ್ನು ಪ್ರಿಸರ್ವೆಟಿವ್ ಬಳಸಿ ಸಂರಕ್ಷಿ ಸಿಡಲಾಗುತ್ತದೆ. ವಾಸನೆ ಬರದಂತೆ, ರುಚಿ ಕೆಡದಂತೆ, ಅಂದ ಹೆಚ್ಚಿಸುವಂತಹ ಹತ್ತಾರು ಕೆಮಿಕಲ್ಗಳನ್ನು ಅಂಟಿಸಿಕೊಂಡಿರುತ್ತವೆ. ಈ ಘನೀಕೃತ ಆಹಾರವನ್ನು ಮನೆಗೆ ಬಂದು ಸ್ವಲ್ಪ ಬಿಸಿ ಮಾಡಿ ತಾವೂ ತಿಂದು ಮಕ್ಕಳಿಗೆ ಕೊಡುತ್ತಿದ್ದಾರೆ.
ಇನ್ನು ಬಹುತೇಕರು ಮಕ್ಕಳ ಹಠಕ್ಕೆ ಸೋತು ಫ್ರೋಜನ್ ಫುಡ್ ತರುವುದುಂಟು. ಅವರ ಶಾಲೆಯ ಊಟಕ್ಕೂ ಇದೇ ವಿಷಾಹಾರ ಕ್ಯಾರಿಯರ್ನಲ್ಲಿ ಹೋಗುತ್ತದೆ. ಮಕ್ಕಳೇ ರುಚಿ, ವಾಸನೆಯ ಬಲೆಗೆ ಬಿದ್ದು ಇಂತಹ ಫುಡ್ ತಿನ್ನುತ್ತಿದ್ದರೆ ಎಚ್ಚರ. ನಿಮ್ಮ ಜೀರ್ಣಾಂಗವನ್ನೇ ಈ ವಿಷಾಹಾರ ಕೊರೆದು ಹಾಕುತ್ತಿದೆ. ರೋಗ ನಿರೋಧಕ ಶಕ್ತಿಯನ್ನು ಕುಂದಿಸಿ ಶರೀರವನ್ನು ಸದ್ದಿಲ್ಲದೆ ಕೃಷವಾಗಿಸುತ್ತಿದೆ. ನಿಮಗೆ ಗೊತ್ತಿರಲಿ ಫ್ರೋಜನ್ ಫುಡ್ನ ಪರಿಣಾಮ ಏನೆಲ್ಲ ಎಂದು. ಇನ್ನಾದರೂ ಅದರಿಂದ ದೂರ ಇರಿ. ಇದು ಆರೋಗ್ಯಕ್ಕೆ ಒಳಿತಲ್ಲ ಎಂದು ಸಾಧ್ಯವಾದರೆ ಸುತ್ತಮುತ್ತಲಿನವರಿಗೂ ಮನವರಿಕೆ ಮಾಡಿ.
ಪರಿಣಾಮಗಳು
1 ಮಧುಮೇಹ: ಫ್ರೋಜನ್ ಫುಡ್ ದೇಹದಲ್ಲಿರುವ ಗ್ಲೂಕೋಸ್ ಅರಗುವ ಮೊದಲೇ ಅದನ್ನು ಶುಗರ್ ಆಗಿ ಬದಲಾಯಿಸುತ್ತದೆ. ಹೀಗೆ ಶುಗರ್ ಹೆಚ್ಚಾದಂತೆ ಮಧುಮೇಹವಾಗಿ ಬದಲಾಗುತ್ತದೆ. ಅಷ್ಟರ ಮಟ್ಟಿಗೆ ದೇಹ ಕರಗುವ ಹಂತಕ್ಕೆ ವೇದಿಕೆ ಕಲ್ಪಿಸುತ್ತದೆ.
2 ಹೃದಯ ಸಮಸ್ಯೆ: ಇದೇ ಫ್ರೋಜನ್ ಫುಡ್ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್(ಬೊಜ್ಜು) ಅನ್ನು ಹೆಚ್ಚಿಸುತ್ತದೆ. ಹಾಗೆಯೇ ಒಳ್ಳೆಯ ಕೊಲೆಸ್ಟ್ರಾಲ್ ಪ್ರಮಾಣ ಕುಂದುತ್ತದೆ. ಇದು ಹೃದಯವನ್ನು ಕಾಡಲಾರಂಭಿಸುತ್ತದೆ. ಭವಿಷ್ಯದಲ್ಲಿ ಹೃದಯಾಘಾತ ಸೃಷ್ಟಿಸುತ್ತದೆ.
3 ರಕ್ತದೊತ್ತಡ: ಕಾಬೋ ಹೈಡ್ರೇಟ್ಸ್, ಪ್ರೋಟೀನ್ಗಳಿಗಿಂತ ಫ್ರೋಜನ್ ಆಹಾರಗಳ ಕ್ಯಾಲರಿ ಅತ್ಯಧಿಕವಾಗಿರುವುದರಿಂದ ರಕ್ತದೊತ್ತಡ ಸಮಸ್ಯೆ ಕಾಡುತ್ತದೆ. ಇದು ಇನ್ನಷ್ಟು ರೋಗಗಳಿಗೆ ದೇಹವನ್ನು ರಹದಾರಿಯನ್ನಾಗಿಸುತ್ತದೆ.
4 ಕ್ಯಾನ್ಸರ್: ಇತರ ಆಹಾರಗಳಿಗೆ ಹೋಲಿಸಿದರೆ ಫ್ರೋಜನ್ ಮಾಂಸದಿಂದ ಕ್ಯಾನ್ಸರ್ ತಗುಲುವ ಸಾಧ್ಯತೆ ಹೆಚ್ಚು. ಹಾಟ್ಡಾಗ್ಸ್, ಸಲಾಮಿ ಸೇವನೆಯಿಂದ ಶೇ.65 ಕ್ಯಾನ್ಸರ್ ಸಾಧ್ಯತೆ ಹೆಚ್ಚಳವಾಗಿರುತ್ತದೆ. ಕಾರ್ನ್ ಸಿರಪ್ ಕೂಡ ಈ ಸಾಲಿಗೆ ಸೇರುತ್ತದೆ.
'ಫ್ರೋಜನ್ ಆಹಾರ ರುಚಿಕರವಾಗಿದ್ದರೂ ದಿನಕಳೆದಂತೆ ಋಣಾತ್ಮಕ ಪರಿಣಾಮ ಕಾಡುತ್ತದೆ. ಹೈಡ್ರೋಜೆನೇಟೆಡ್ ಪಾಮ್ ಆಯಿಲ್ ಫ್ಯಾಟ್ ಸೃಷ್ಟಿಸಿದರೆ ಸೋಡಿಯಂ ಕಂಟೆಂಟ್ ದೇಹವನ್ನು ಕರಗಿಸುತ್ತದೆ. ಚಿಕ್ಕ ಮಕ್ಕಳಿಗೆ ಬಿ.ಪಿ. ಮಧುಮೇಹ, ಕೊಲೆಸ್ಟ್ರಾಲ್ ಅನ್ನು ಬಳುವಳಿಯಾಗಿ ನೀಡುತ್ತದೆ. ವಿದೇಶಿ ಸಂಸ್ಕೃತಿ, ಭೌಗೋಳಿಕ ಪರಿಸರಕ್ಕೆ ಆ ಆಹಾರ ಹೊಂದಾಣಿಕೆ ಆಗಬಹುದು, ಭಾರತಕ್ಕಲ್ಲ'
ಮೊನಿಶಾ, ನ್ಯೂಟ್ರಿಶಿಯನ್, ದೆಹಲಿ