ನಾಗಮಂಗಲದಿಂದ ನಾಗಮಂಡಲದವರೆಗೆ

mandya rames
Published on

ನಾನು ಮಂಡ್ಯ ಜಿಲ್ಲೆ ನಾಗಮಂಗಲದವನು. ಬಾಲ್ಯ ಕಳೆದಿದ್ದು ಬೆಳ್ಳೂರಿನಲ್ಲಿ. ಒಬ್ಬ ಕಲಾವಿದನಿಗೆ ಬೇಕಾದ ಜಾನಪದ ನನಗೆ ಸಂಪೂರ್ಣವಾಗಿ ದೊರಕಿದ್ದು ಮತ್ತು ನನ್ನ ಬಾಲ್ಯವನ್ನು ಸಂಪದ್ಭರಿತಗೊಳಿಸಿದ್ದು ಈ ಗ್ರಾಮೀಣ ಪ್ರದೇಶ. ಜಾನಪದ ಕಲಾ ಪ್ರಕಾರಗಳು ನನಗೆ ದೊಡ್ಡ ಅನುಭವದ ಗಂಟನ್ನೇ ನೀಡಿದವು. ಇದರಿಂದ ಕನ್ನಡ ಭಾಷೆಯ ಕಲಿಕೆಗೆ ಹಾಗೂ ಬದುಕನ್ನು ಸಂತೋಷದಿಂದ ಅನುಭವಿಸುವುದಕ್ಕೆ ದಾರಿಯಾಯಿತು. ನಮ್ಮೂರಿನ ದೇವಸ್ಥಾನದ ಮುಂದೆ ನಡೆಯುತ್ತಿದ್ದ ಕುರುಕ್ಷೇತ್ರ, ದೇವಿ ಮಹಾತ್ಮೆ, ರಾಜ ಸುಯಾಗ ಮುಂತಾದ ಪೌರಾಣಿಕ, ಸಾಮಾಜಿಕ ನಾಟಕಗಳು ನನ್ನ ಮೇಲೆ ಬಹಳ ಪ್ರಭಾವ ಬೀರಿ, ನನ್ನಲ್ಲಿ ಒಂದು ಸ್ವಪ್ನಲೋಕವನ್ನೇ ಸೃಷ್ಟಿಸಿದವು. ಮಧ್ಯಾಹ್ನವೇ ಬಂದು ವೇದಿಕೆ ನಿರ್ವಿುಸುವುದು, ಸಂಜೆ ಝುಗಮಗಿಸುವ ವಿದ್ಯುದ್ದೀಪಗಳ ಅಲಂಕಾರ, ಮೇಷ್ಟ್ರ ಪೇಟಿಯ ಸದ್ದು, ಕಲಾವಿದರ ತಾಲೀಮು ಇವೆಲ್ಲವೂ ನನ್ನನ್ನು ಹೊಸ ಲೋಕಕ್ಕೆ ಕರೆದುಕೊಂಡು ಹೋಗುತ್ತಿದ್ದವು.

ನಾಟಕ ಆರಂಭವಾದಾಗ ಅಲ್ಲಿ ಬರುತ್ತಿದ್ದ ಪಾತ್ರಗಳು, ದೃಶ್ಯಗಳು, ಆವೇಶ, ಹಾಸ್ಯ, ಶೃಂಗಾರ ಕಂಡು ರೋಮಾಂಚಿತನಾಗುತ್ತಿದ್ದೆ. ಸ್ವಾತಂತ್ರ್ಯೊತ್ಸವ, ಗಣೇಶೋತ್ಸವ ಮುಂತಾದ ಸಂದರ್ಭಗಳಲ್ಲಿ ನಡೆಯುತ್ತಿದ್ದ ನಾಟಕಗಳು, ಗ್ರಾಮೀಣ ಕ್ರೀಡಾಕೂಟಗಳು ನನ್ನನ್ನು ಹೆಚ್ಚು ಉತ್ಸಾಹಿಯನ್ನಾಗಿಸುತ್ತಿದ್ದವು. ಇದೇ ಮುಂದೆ ನನ್ನನ್ನು ಕಲಾಲೋಕಕ್ಕೆ ಕರೆದುಕೊಂಡು ಬಂತು. ಆರನೇ ತರಗತಿಯಲ್ಲಿರುವಾಗಲೇ ನಾನು ಅನೇಕ ಗೆಳೆಯರನ್ನು ಜತೆಗೂಡಿಸಿಕೊಂಡು ‘ಶಿವಶಂಕರ ಸಮಿತಿ’ ಎಂಬ ತಂಡ ರೂಪಿಸಿದ್ದೆ. ಕುರುಕ್ಷೇತ್ರದ ‘ಕೌರವನ ಗರ್ವಭಂಗ’ ಎಂಬ ನಾಟಕ ರಚಿಸಿ, ಅದರಲ್ಲಿ ನಾನೇ ಕೌರವನ ಪಾತ್ರ ಮಾಡಿದ್ದೆ. ಈ ನಾಟಕ ಸಾಕಷ್ಟು ಹೆಸರು ತಂದುಕೊಟ್ಟಿತ್ತು. ಹಾಗೆಯೇ ಹೈಸ್ಕೂಲ್​ನಲ್ಲಿರುವಾಗ ಸಿದ್ದಪ್ಪ ಎಂಬ ಡ್ರಾಮಾ ಮೇಷ್ಟ್ರು ರಂಗಕಲೆಯ ಗುರುಪಾಠ ಹೇಳಿಕೊಟ್ಟರು. ಅದೇ ನನ್ನ ಮುಂದಿನ ಎಲ್ಲ ಏಳ್ಗೆಗೆ ಪ್ರೇರಣೆ.

ನಮ್ಮ ತಂದೆ ಬಾಲಸುಬ್ರಹ್ಮಣ್ಯಂ ನಾಗಮಂಗಲದ ಸರ್ಕಾರಿ ಕಚೇರಿಯಲ್ಲಿ ಗುಮಾಸ್ತರಾಗಿದ್ದರು. ನನ್ನಲ್ಲಿದ್ದ ಒಬ್ಬ ಕಲೆಗಾರರನ್ನು ಹೆಕ್ಕಿ ತೆಗೆದವರಲ್ಲಿ ಅವರೇ ಮೊದಲಿಗರು. ನಾನು ಮಾಡುತ್ತಿದ್ದ ಏಕಪಾತ್ರ್ರಾಭಿನಯವನ್ನು ಅಪ್ಪ ತುಂಬಾ ಇಷ್ಟಪಡುತ್ತಿದ್ದರು. ಜತೆಗೆ ಅವರೇ ಆಕ್ಟಿಂಗ್ ಹೇಳಿಕೊಡುತ್ತಿದ್ದರು. ರಟ್ಟು ಕತ್ತರಿಸಿ, ಮಿಣಮಿಣ ಹೊಳೆಯುವ ಬಣ್ಣದ ಹಾಳೆಯನ್ನು ಹಚ್ಚಿ ನನಗೆ ಕತ್ತಿ, ಕಿರೀಟ ಮುಂತಾದ ನಾಟಕ ಪರಿಕರಗಳನ್ನು ಮಾಡಿಕೊಡುತ್ತಿದ್ದರು. ಇದೆಲ್ಲದರ ಮಧ್ಯೆ ತಂದೆಗೆ ನಾಗಮಂಗಲದಿಂದ ಮಂಡ್ಯಕ್ಕೆ ವರ್ಗಾವಣೆ ಆಯಿತು. ಆಗ ನನ್ನ ಎಲ್ಲ ಚಟುವಟಿಕೆಗಳು ಮಂಡ್ಯಕ್ಕೆ ಶಿಫ್ಟ್ ಆದವು. ನಾನಾಗ ಪಿಯುಸಿಯಲ್ಲಿದ್ದೆ. ಮಂಡ್ಯದ ಗೆಳೆಯರ ಬಳಗದಲ್ಲಿ ಹವ್ಯಾಸಿ ಕಲಾವಿದನಾಗಿ ಕಾಣಿಸಿಕೊಳ್ಳತೊಡಗಿದೆ. 1982ರ ಅಕ್ಟೋಬರ್​ನಲ್ಲಿ ಮಂಡ್ಯ ಗೆಳೆಯರ ಬಳಗದಿಂದ ಅಶೋಕ್ ಬಾದರದಿನ್ನಿ ಮಾರ್ಗದರ್ಶನದಲ್ಲಿ ಒಂದು ರಂಗಶಿಬಿರ ನಡೆಯಿತು. ಅದು ನನ್ನ ಜೀವನದಲ್ಲಿ ದೊಡ್ಡ ಬದಲಾವಣೆ ತಂದಿತು.

ದೊಡ್ಡ ದೊಡ್ಡ ಕಲಾವಿದರು, ರಂಗಕರ್ವಿುಗಳನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು. ನಾನು ಮೊದಲ ಬಾರಿ ಬೀದಿನಾಟಕ ನೋಡಿದ್ದು ಅಲ್ಲೇ. ‘ರಂಗಭೂಮಿ ಕೇವಲ ಮನರಂಜನೆಗಲ್ಲ, ಅದರಿಂದ ಮನೋವಿಕಾಸವೂ ಸಾಧ್ಯ, ಅಗತ್ಯ ಬಿದ್ದಾಗ ಅದನ್ನು ಪ್ರತಿಭಟನೆಯ ಅಸ್ತ್ರವಾಗಿಯೂ ಬಳಸಬಹುದು’ ಎಂಬುದು ಆಗಲೇ ನನಗೆ ಮನವರಿಕೆಯಾಯಿತು. ಎ.ಎಸ್. ಮೂರ್ತಿ ಅವರ ಬೀದಿನಾಟಕಗಳಿಂದ ಸ್ಪೂರ್ತಿ ಪಡೆದು ನಾನೇ ಒಂದು ಬೀದಿ ನಾಟಕ ರಚಿಸಿ, ನಿರ್ದೇಶಿಸಿದೆ. ಕಾಲೇಜು ದಿನಗಳಲ್ಲಿಯೇ ನನ್ನನ್ನು ‘ಮರಿ ಕ್ರಾಂತಿಕಾರಿ’ ಎಂದು ಕರೆಯುತ್ತಿದ್ದರು. ನನ್ನೊಳಗಿದ್ದ ರಂಗಪ್ರಜ್ಞೆಯೇ ಇದಕ್ಕೆ ಕಾರಣ. ಆಗ ಪುಸ್ತಕ ಓದುವ ಗೀಳು ಹತ್ತಿದ್ದು ಮತ್ತೊಂದು ಪರಿವರ್ತನೆಗೆ ನಾಂದಿಯಾಯಿತು.

ಪಿಯು ವ್ಯಾಸಂಗ ಮುಗಿದ ಬಳಿಕ ಕೆಲಸಕ್ಕಾಗಿ ಅಲೆಯತೊಡಗಿದೆ. ಯಾವ ಕೆಲಸ ಸಿಗದ ಕಾರಣ ಮನೆಮನೆಗೆ ದಿನಪತ್ರಿಕೆ ಹಾಕಲು ಶುರು ಮಾಡಿದೆ. ಅದೇ ನನಗೆ ಮೊದಲ ಸಂಬಳ ತಂದುಕೊಟ್ಟ ಕೆಲಸ. ಪೇಪರ್​ಬಾಯ್ ಆಗಿದ್ದಾಗಲೇ ಹಲವಾರು ಸಂಘ-ಸಂಸ್ಥೆಗಳು ಮತ್ತು ಗಣ್ಯರೊಂದಿಗೆ ಒಡನಾಟ ಬೆಳೆಯಿತು. ಮುಂದೆ ಮಾಂಡೋವಿ ಕಲಾವೃಂದ, ಕೆ.ವಿ. ಶಂಕರೇಗೌಡರ ಸಂಸ್ಥೆಗಳಲ್ಲಿ ಕೆಲಸ ಮಾಡಿದೆ. ಬಳಿಕ ‘ವೇದಿಕೆ’ ಎಂಬ ಹೆಸರಿನಲ್ಲಿ ನನ್ನದೇ ತಂಡ ಕಟ್ಟಿಕೊಂಡು ಬೀದಿನಾಟಕ ಮಾಡಲು ಮುಂದಾದೆ. ಇದು ಮಂಡ್ಯದಲ್ಲಿ ದೊಡ್ಡ ರಂಗಸಂಚಲನವನ್ನೇ ಸೃಷ್ಟಿಸಿತು. ಬಿಎಸ್ಸಿ ಪದವಿ ಪೂರ್ಣಗೊಳ್ಳುವ ಸಮಯದಲ್ಲಿ ಹೆಗ್ಗೋಡು ನೀನಾಸಂ ಹೆಸರು ಕೇಳಿ, ಅಲ್ಲಿಗೆ ಸೇರಿಕೊಂಡೆ. ಅಲ್ಲಿಂದ ನನ್ನ ಬದುಕಿನಲ್ಲಿ ಮತ್ತೊಂದು ಪರ್ವ ಶುರುವಾಯಿತು. ಜೀವನ ಅಂದ್ರೆ ಹೀಗೇನೆ. ಒಂದು ಮುಗೀತು ಎನ್ನುವಷ್ಟರಲ್ಲಿ ಮತ್ತೊಂದು ಪ್ರಾರಂಭವಾಗಿಬಿಡುತ್ತದೆ. ಇದಕ್ಕೆ ನನ್ನ ಜೀವನವೇ ಉದಾಹರಣೆ.

ನೀನಾಸಂ ಸೇರಿದ ಮಂಡ್ಯ ಜಿಲ್ಲೆಯ ಮೊದಲ ವಿದ್ಯಾರ್ಥಿ ನಾನು. ಕೆ.ವಿ. ಸುಬ್ಬಣ್ಣ, ಚಿದಂಬರ ಜಂಬೆ, ಮಹಾಬಲೇಶ್ವರ ಭಟ್, ಕೆ.ಜಿ. ಕೃಷ್ಣಮೂರ್ತಿ, ಕೆ.ವಿ. ಅಕ್ಷರ, ಟಿ.ಪಿ. ಅಶೋಕ್ ಮುಂತಾದ ಖ್ಯಾತನಾಮ ನಿರ್ದೇಶಕರು ಮತ್ತು ಕಲಾವಿದರ ಜತೆ ಕೆಲಸ ಮಾಡುವ ಅವಕಾಶ ನನ್ನದಾಯಿತು. ನೀನಾಸಂನ ಒಂದು ವರ್ಷದ ಡಿಪ್ಲೊಮಾ ಕೋರ್ಸ್ ನನ್ನ ಬದುಕಿಗೆ ಹೊಸತನ ಕರುಣಿಸಿತು. ಬಳಿಕ ‘ನೀನಾಸಂ ತಿರುಗಾಟ’ ಆರಂಭಿಸಿದೆವು. ಮೊದಲ ವರ್ಷದ ತಿರುಗಾಟದಲ್ಲಿ ನಾನು, ಏಣಗಿ ನಟರಾಜ್, ಕೆ.ಜಿ. ಕೃಷ್ಣಮೂರ್ತಿ, ಹುಲುಗಪ್ಪ ಕಟ್ಟಿಮನಿ ಮುಂತಾದವರಿದ್ದೆವು. ರಾಜ್ಯದ ಮೂಲೆಮೂಲೆಗೆ ತೆರಳಿ ನಾಟಕಗಳನ್ನು ಪ್ರದರ್ಶಿಸಿದೆವು. ಆಧುನಿಕ ರಂಗಭೂಮಿಯ ಹೊಸ ಪ್ರಜ್ಞೆಯ ನಾಟಕಗಳನ್ನು ಪ್ರದರ್ಶಿಸುವ ಮೂಲಕ ರಂಗಸಂಚಲನ ಮೂಡಿಸಿದೆವು. ಆಗ ನಾವು ಸೆಟ್ ನಿರ್ವಣ, ಮೇಕಪ್, ರಂಗಸಜ್ಜಿಕೆ ರೂಪಿಸುವುದು, ಆಕ್ಟಿಂಗ್ ಹೀಗೆ ಎಲ್ಲ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದೆವು. ಈ ಸಂದರ್ಭದಲ್ಲೇ ನಾನು ಒಳ್ಳೆಯ ರಂಗ ನಿರ್ದೇಶಕ ಅಂತ ಹೆಸರು ಮಾಡಿದೆ. ಈ ಮೂರು ವರ್ಷದ ತಿರುಗಾಟದಲ್ಲಿ ನಾನೊಬ್ಬ ಪರಿಪೂರ್ಣ ನಟ, ನಿರ್ದೇಶಕನಾಗಿ ರೂಪುಗೊಂಡೆ.

ನಂಜುಂಡೇಗೌಡ ಅವರ ‘ಸಂಕ್ರಾಂತಿ’ ಚಿತ್ರದಲ್ಲಿ ಮೊದಲ ಬಾರಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದೆ. ಆ ಚಿತ್ರ ಜನಪ್ರಿಯವಾಯಿತಲ್ಲದೇ, ಅತ್ಯುತ್ತಮ ಚಿತ್ರ ಎಂಬ ರಾಜ್ಯ ಪ್ರಶಸ್ತಿಯನ್ನೂ ಗಳಿಸಿತು. ಆದರೆ, ನಾನು ಮತ್ತೆ ನೀನಾಸಂನತ್ತ ಪ್ರಯಾಣ ಬೆಳೆಸಿದೆ. ಅಲ್ಲಿ ಮೂರು ವರ್ಷ ಇದ್ದೆ. ಒಮ್ಮೆ ಅಲ್ಲಿಗೆ ಹೆಸರಾಂತ ನಿರ್ದೇಶಕ ಬಿ.ವಿ. ಕಾರಂತರು ಬಂದರು. ಅವರು ಮೈಸೂರು ರಂಗಾಯಣದಿಂದ ನಾಟಕ ನಿರ್ದೇಶಿಸುವವರಿದ್ದರು. ಅವರ ಸಲಹೆ ಮೇರೆಗೆ ಮೈಸೂರು ರಂಗಾಯಣಕ್ಕೆ ಅರ್ಜಿ ಹಾಕಿ, ಆಯ್ಕೆಯಾದೆ. ಆ ಮೂಲಕ ಮತ್ತೊಂದು ಜರ್ನಿ ಆರಂಭವಾಯಿತು. ಅಲ್ಲಿ ಹೊಸ ನಾಟಕಗಳನ್ನು ಮಾಡಲು ಅವಕಾಶ ಸಿಕ್ಕಿತು. ನೀನಾಸಂನ ಕೆ.ವಿ. ಸುಬ್ಬಣ್ಣ ಹಾಗೂ ಬಿ.ವಿ. ಕಾರಂತ ನನ್ನ ಜೀವನದ ಎರಡು ರಂಗಧ್ರುವಗಳು, ನನ್ನ ಬದುಕಿನ ಎರಡು ಕಣ್ಣುಗಳು. ಅವರು ಹಾಕಿಕೊಟ್ಟ ಮಾರ್ಗ ನನ್ನ ಬದುಕಿಗೆ ಹೊಸ ಪ್ರೇರಣೆ ಮತ್ತು ಶಕ್ತಿಯನ್ನು ನೀಡಿತು.

ಆಗ ನನಗೆ ಸಿನಿಮಾಗಳಿಂದ ಆಫರ್ ಬರತೊಡಗಿದವು. 1995ರಲ್ಲಿ ಮೊದಲ ಬಾರಿಗೆ ‘ಜನುಮದ ಜೋಡಿ’ ಚಿತ್ರದ ಮೂಲಕ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡೆ. ಈ ಸಿನಿಮಾ ಒಂದು ವರ್ಷ ಪ್ರದರ್ಶನ ಕಂಡಿತು. ಈ ಚಿತ್ರದ ಜನಪ್ರಿಯತೆಯಿಂದಾಗಿ ತಕ್ಷಣವೇ ‘ನಾಗಮಂಡಲ’ ಚಿತ್ರಕ್ಕೆ ಅವಕಾಶ ದೊರೆಯಿತು. ಆ ಸಿನಿಮಾಕ್ಕೂ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿ, ನನಗೆ ‘ಅತ್ಯುತ್ತಮ ಪೋಷಕ ನಟ’ ರಾಜ್ಯ ಪ್ರಶಸ್ತಿ ದೊರೆಯಿತು. ನಿರ್ದೇಶಕ ಟಿ.ಎಸ್. ನಾಗಭರಣ, ಕಲಾವಿದರಾದ ಬಿ. ಜಯಶ್ರೀ, ಪ್ರಕಾಶ್​ರಾಜ್ ಅವರಂತಹ ಕಲಾವಿದರ ಮಧ್ಯೆ ಕನ್ನಡ ಫಿಲ್ಮ್ ಇಂಡಸ್ಟ್ರಿಯಲ್ಲಿ ನನಗೊಂದು ಜಾಗ ಸಿಕ್ಕಿತು. ಅಲ್ಲಿಂದ ಶುರುವಾದ ನನ್ನ ಪಯಣ ಈಗ ಕನ್ನಡದ 360 ಚಿತ್ರಗಳಲ್ಲಿ ನಟಿಸುವವರೆಗೆ ಬಂದಿದೆ. ಸದ್ಯ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಹೊಸ ಚಿತ್ರದಲ್ಲಿ ನಟಿಸಿದ್ದೇನೆ.

ಚಿತ್ರರಂಗದಲ್ಲಿ 30 ವರ್ಷಗಳ ಸಾರ್ಥಕ ಕಲಾಬದುಕು ನನ್ನದು. ಈ ಹಾದಿಯಲ್ಲಿ ನಲಿವು-ನೋವು, ಹಸಿವು, ತಿರುಗಾಟ, ಕಷ್ಟ-ನಷ್ಟ ಎಲ್ಲವನ್ನೂ ಕಂಡಿದ್ದೇನೆ. ಅದಕ್ಕಿಂತ ಮುಖ್ಯವಾಗಿ ಡಾ. ರಾಜಕುಮಾರ್, ವಿಷ್ಣುವರ್ಧನ್, ಅಂಬರೀಷ್, ರವಿಚಂದ್ರನ್​ರಂತಹ ದಿಗ್ಗಜರೊಂದಿಗೆ ಕೆಲಸ ಮಾಡಿದ್ದೇನೆ ಎಂಬ ಆತ್ಮಸಂತೃಪ್ತಿ ನನ್ನದು. ಹಿರಿಯ ಕಲಾವಿದರಿಂದ ಹಿಡಿದು ಹೊಸ ತಲೆಮಾರಿನ ಕಲಾವಿದರ ಜತೆ ನಟಿಸುವಾಗಲೂ ಅವರ ಜೀವನಚಕ್ರವನ್ನು ಅನ್ವೇಷಿಸಿದ್ದೇನೆ. ಅಭಿನಯದ ಕಸರತ್ತುಗಳನ್ನು ಗಮನಿಸುತ್ತ ಬಂದು ಜೀರ್ಣಿಸಿಕೊಂಡಿದ್ದೇನೆ. ಇಷ್ಟು ವರ್ಷಗಳ ಒಟ್ಟು ಅನುಭವವನ್ನು ನನ್ನದಾಗಿಸಿಕೊಂಡು ‘ರಂಗವಲ್ಲಿ’ ಹಾಗೂ ‘ಕನವರಿಕೆ’ ಎಂಬ ಪುಸ್ತಕಗಳನ್ನು ಬರೆದಿದ್ದೇನೆ. ಜತೆಗೆ ಮೈಸೂರಿನಲ್ಲಿ ‘ನಟನ’ ರಂಗಶಾಲೆಯನ್ನು ಆರಂಭಿಸಿ, ಹೊಸ ತಲೆಮಾರಿಗೆ ರಂಗಕಲೆಯನ್ನು ಹೇಳಿಕೊಡುತ್ತಿದ್ದೇನೆ. ಈ ರಂಗಭೂಮಿಯೇ ನನ್ನನ್ನು ಅಮೆರಿಕ, ಜಪಾನ್ ಸೇರಿ ಅನೇಕ ದೇಶಗಳಿಗೆ ಸುತ್ತಿಸಿದೆ.

ಸಿನಿಮಾ, ಕಿರುತೆರೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿದರೂ, ನನ್ನ ನಿಲ್ದಾಣ ರಂಗಭೂಮಿಯೇ. ನನ್ನ ದುಡಿಮೆ, ಶ್ರಮ, ಬಂಡವಾಳ ಎಲ್ಲವನ್ನೂ ನಾನು ರಂಗಭೂಮಿಗೆ ಹಾಕುತ್ತಿದ್ದೇನೆ. ಇದರಿಂದ ನಾನು ಸಂತೃಪ್ತ ಬದುಕು ಕಂಡಿದ್ದೇನೆ. ರಂಗ ತಿರುಗಾಟ ನನಗೆ ಸಾಕಷ್ಟು ಅನುಭವ ನೀಡಿದೆ. ಬದುಕನ್ನು ಸುಂದರವಾಗಿ ನೋಡುವುದನ್ನು ನಾನು ಕಲಿತಿದ್ದೇನೆ. ಸಂಘಟನಾತ್ಮಕವಾಗಿ ಬದುಕಬೇಕು ಎಂಬುದನ್ನು ಕಲಿಸಿರುವುದೇ ಈ ತಿರುಗಾಟ. ಹೊಸ ತಲೆಮಾರಿನ ಕಲಾವಿದರಿಗೂ ನಾನು ಇದನ್ನೇ ಹೇಳುವುದು. ನೀವು ಉತ್ತಮ ಕಲಾವಿದರಾಗಬೇಕು ಎಂದರೆ ಮೊದಲು ಮೂರ್ನಾಲ್ಕು ವರ್ಷ ರಂಗಭೂಮಿಯಲ್ಲಿ ಪಳಗಬೇಕು. ನಿಮಗೆ ರಂಗಭೂಮಿಯು ಆತ್ಮಸ್ಥೈರ್ಯವನ್ನು, ಬದುಕುವ ರೀತಿಯನ್ನು ಕಲಿಸಿಕೊಡುತ್ತದೆ. ಅಲ್ಲಿಂದ ಎಷ್ಟು ಸಾಧ್ಯವೋ ಅಷ್ಟು ಕಲಿತು ಮುಂದಿನ ಅವಕಾಶಕ್ಕೆ ತೆರೆದುಕೊಳ್ಳಬೇಕು ಎಂಬುದು ನನ್ನ ಕಿವಿಮಾತು.

(ನಿರೂಪಣೆ: ಶಿವ ಸ್ಥಾವರಮಠ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net