

ಎರಡು ವಾರಗಳ ಹಿಂದೆ ಚೀನಾದಲ್ಲಿ ಆಯೋಜನೆಗೊಂಡ ಎಸ್ಸಿಓ ಸಮಾವೇಶದಲ್ಲಿ ಹಲವು ಅಭೂತಪೂರ್ವ ಚಿತ್ರಗಳು ನಮಗೆದುರಾಗಿ ಅಚ್ಚರಿ ಮೂಡಿಸಿದವು. ಏಳು ವರ್ಷಗಳ ದೀರ್ಘ ಅಂತರದ ನಂತರ ಚೀನಿ ನೆಲಕ್ಕೆ ಕಾಲಿಟ್ಟ ಪ್ರಧಾನಮಂತ್ರಿ ನರೇಂದ್ರ ಮೋದಿ ಸಮಾವೇಶದ ನೇಪಥ್ಯದಲ್ಲಿ ಚೀನಿ ಅಧ್ಯಕ್ಷ ಷಿ ಜಿನ್ಪಿಂಗ್ ಅವರೊಂದಿಗೆ ಒಂದೇ ದಿನದಲ್ಲಿ ಆರು ಬಾರಿ ಮಾತುಕತೆ ನಡೆಸಿದರು. ಒಮ್ಮೆಯಂತೂ ಅದು ನಿಗದಿತ ಸಮಯವನ್ನು ದಾಟಿ ಮುಂದುವರಿಯಿತು. ಸಾಮಾನ್ಯವಾಗಿ ಇಂತಹ ಬಹುಪಕ್ಷೀಯ ಸಮಾವೇಶಗಳ ನೇಪಥ್ಯದಲ್ಲಿ ರಾಷ್ಟ್ರನಾಯಕರು ದ್ವಿಪಕ್ಷೀಯ ಮಾತುಕತೆ ನಡೆಸುವುದಾದರೆ ಅದಕ್ಕೆ ಸಮಯ ನಿಗದಿಯಾಗಿರುತ್ತದೆ ಮತ್ತು ಅದನ್ನು ಪಾಲಿಸಲಾಗುತ್ತದೆ. ಆದರೆ ಮೋದಿ-ಷಿ ಮಾತುಕತೆ ನಿಗದಿತ ಸಮಯವನ್ನು ದಾಟಿ ಮೂವತ್ತು ನಿಮಿಷಗಳಷ್ಟು ಅಧಿಕ ಸಮಯಕ್ಕೆ ವಿಸ್ತರಿಸಿತು!
ಇಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರ ಕುರಿತಾಗಿಯೂ ಒಂದು ಮಾತು ಹೇಳಬೇಕು. ತಾವು ತಂಗಿರುವ ಸ್ಥಳದಿಂದ ಸಮಾವೇಶ ನಡೆಯುವ ಸ್ಥಳಕ್ಕೆ ಪ್ರತಿಯೊಬ್ಬ ನಾಯಕರಿಗೂ ಬೇರೆಬೇರೆ ವಾಹನ ವ್ಯವಸ್ಥೆ ಇರುತ್ತದೆ. ಆದರೆ ಇಲ್ಲಿ ಪುತಿನ್ ಹತ್ತು ನಿಮಿಷಗಳವರೆಗೆ ಕಾದು ಮೋದಿಯವರನ್ನು ತಮ್ಮ ಜತೆಯೇ ಕರೆದೊಯ್ದರು. ಅಷ್ಟೇ ಅಲ್ಲ, ಸಮಾವೇಶದ ಸ್ಥಳ ತಲುಪಿದಾಗ ತಕ್ಷಣ ವಾಹನದಿಂದ ಇಳಿಯದೆ ಇಬ್ಬರು ನಾಯಕರೂ ಸುಮಾರು ನಲವತ್ತು ನಿಮಿಷಗಳಷ್ಟು ದೀರ್ಘಕಾಲ ವಾಹನದೊಳಗೇ ಕುಳಿತು ಮಾತುಕತೆಯಲ್ಲಿ ಮುಳುಗಿಹೋಗಿದ್ದರು!
ಈ ವಿಶೇಷ ದೃಶ್ಯಗಳನ್ನು ಜಗತ್ತೇ ಗಮನಿಸಿತು. ಅಮೆರಿಕಾಗಂತೂ ಇದು ಕಣ್ಣು ಕಿಸುರಾಗಿಸುವ ನೋಟ. ‘ನಾವು ಭಾರತವನ್ನು ಚೀನಾ ಮತ್ತು ರಷ್ಯಾಗೆ ಕಳೆದುಕೊಂಡಿದ್ದೇವೆ’ ಎಂದು ಹೇಳುವ ಮೂಲಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ನಿರಾಸೆ ಹಾಗೂ ಹತಾಶೆಗಳೆರಡನ್ನೂ ಸಾರ್ವಜನಿಕವಾಗಿಯೇ ಹೊರಹಾಕಿದರು. ಭಾರತವನ್ನು ‘ಕಳೆದುಕೊಂಡದ್ದು’ ತಮ್ಮದೇ ಮೂರ್ಖತನದಿಂದ ಹಾಗೂ ಅದರಿಂದಾಗಿ ಜಾಗತಿಕವಾಗಿ ಅಮೆರಿಕಾಗೆ ನಷ್ಟವಾಗಿ, ರಷ್ಯಾ ಮತ್ತು ಚೀನಾಗಳಿಗೆ ಲಾಭವಾಗುತ್ತಿದೆ ಎಂದವರು ಅರಿತರೇ? ಅದಿನ್ನೂ ಸ್ಪಷ್ಟವಾಗಿಲ್ಲ. ಆದರೆ ನಮಗಂತೂ ಸ್ಪಷ್ಟವಾಗಿಯೇ ಗೊತ್ತಾಗಿದೆ ಬಿಡಿ.
ಷಿ ಜಿನ್ಪಿಂಗ್ರ ಚೀನಾದ ತಂಟೆಕೋರ ನೀತಿಯಿಂದಾಗಿ ಎಂಟು ವರ್ಷಗಳ ಹಿಂದೆ ಭಾರತೀಯ ಮತ್ತು ಚೀನಿ ಸೇನೆಗಳು ದೊಕ್ಲಾಮ್ಲ್ಲಿ ಸತತ ಎಪ್ಪತ್ತೆರಡು ದಿನಗಳವರೆಗೆ ಮುಖಾಮುಖಿಯಾಗಿ ನಿಂತಿದ್ದವು. ಐದು ವರ್ಷಗಳ ಹಿಂದೆಯಂತೂ ಇಡೀ ಜಗತ್ತಿನ ಜತೆ ಭಾರತಕ್ಕೂ ಕರೊನಾ ವೈರಸ್ ಹರಡಿ ಸಂಕಷ್ಟಕ್ಕೀಡುಮಾಡಿದ ಚೀನಾ, ಸೋಂಕಿನ ವಿರುದ್ಧ ಭಾರತ ಸೆಣಸಾಡುತ್ತಿದ್ದ ಸಮಯವನ್ನು ದುರುಪಯೋಗಪಡಿಸಿಕೊಂಡು ಗಲ್ವಾನ್ ಪ್ರದೇಶದಲ್ಲಿ ಅತಿಕ್ರಮಣ ನಡೆಸಿತು. ಜತೆಗೆ ತನ್ನ ಸಾವು-ನೋವುಗಳನ್ನು ಮುಚ್ಚಿಟ್ಟದ್ದಲ್ಲದೆ ಭಾರತದ ಮೇಲೆ ಸುಳ್ಳು ಆಪಾದನೆಗಳ ಸುರಿಮಳೆ ಬೇರೆ. ಒಟ್ಟಾರೆಯಾಗಿ ಚೀನಾದ ಆ ನೀತಿಗಳು ಸ್ನೇಹಘಾತಕವಾಗಿದ್ದವು. ಹೀಗಾಗಿ ಈ ಎರಡು ವಿಶಾಲ ದೇಶಗಳ ನಡುವಿನ ಸಂಬಂಧಗಳು ಸರಿಪಡಿಸಲಾಗದ ಹಂತಕ್ಕೆ ತಲುಪಿದ್ದವು.
ಆದಾಗ್ಯೂ ಪಶ್ಚಿಮ ವಲಯದಲ್ಲಿ ವಾಸ್ತವ ಹತೋಟಿ ರೇಖೆಯಲ್ಲಿ ಬಿಕ್ಕಟ್ಟನ್ನು ತಹಬಂದಿಗೆ ತಂದು ಶಾಂತ ಸ್ಥಿತಿ ಸೃಷ್ಟಿಸುವ ಪ್ರಯತ್ನಗಳು ವರ್ಷದ ಹಿಂದೆ ಆರಂಭವಾಗಿ ಆ ಕುರಿತಾಗಿ 2024ರ ಅಕ್ಟೋಬರ್ 21ರಂದು ಒಪ್ಪಂದವೂ ಆಯಿತು. ಆದರೆ ಚೀನಾದ ಇದುವರೆಗಿನ ನೀತಿನಡವಳಿಕೆಗಳ ಹಿನ್ನೆಲೆಯಲ್ಲಿ ಆ ಒಪ್ಪಂದ ಹೆಚ್ಚುಕಾಲ ಚಾಲ್ತಿಯಲ್ಲಿರುತ್ತದೆಂಬ ನಂಬಿಕೆ ಇರಲಿಲ್ಲ. ಅದೇ ಸಮಯದಲ್ಲಿ ಅಮೆರಿಕಾದ ಅಧ್ಯಕ್ಷೀಯ ಚುನಾವಣಾ ಕಣದಲ್ಲಿದ್ದ ಡೊನಾಲ್ಡ್ ಟ್ರಂಪ್ ಭಾರತದ ಕುರಿತಾಗಿ ಒಳ್ಳೆಯ ಮಾತುಗಳನ್ನೂ, ಚೀನಾ ಬಗ್ಗೆ ಕಟುನುಡಿಗಳನ್ನೂ ಆಡುತ್ತಿದ್ದರು. ಹೀಗಾಗಿ ಅವರು ಅಧ್ಯಕ್ಷರಾದರೆ ಅವರ ಮೊದಲ ಅವಧಿಯ ನೀತಿಗಳು ಮುಂದುವರಿಯುತ್ತವೆಂದೂ, ಆ ಪ್ರಕಾರ ಅಮೆರಿಕಾ ತನ್ನ ವ್ಯಾಪಾರ ಸಂಘರ್ಷಗಳಿಗೆ ಚೀನಾವನ್ನು ಗುರಿಯಾಗಿಸಿಕೊಂಡು ಭಾರತದ ಜತೆ ಘನಿಷ್ಟ ಸಂಬಂಧಗಳನ್ನು ಸ್ಥಾಪಿಸಿಕೊಳ್ಳುತ್ತದೆಂದು ನಿರೀಕ್ಷಿಸಲಾಗಿತ್ತು. ಆದರೆ ಟ್ರಂಪ್ ಅಧಿಕಾರಕ್ಕೆ ಬಂದ ಮೇಲೆ ತಳೆದ ನಿಲುವುಗಳು ತೀರಾ ಅನಿರೀಕ್ಷಿತ ಹಾಗೂ ಅತೀವ ಋಣಾತ್ಮಕ.
ಈ ಬಗೆಯ ವಿಶ್ವಾಸಘಾತಕ್ಕೆ ಇತಿಹಾಸದಲ್ಲಿ ಉದಾಹರಣೆಗಳು ಕಡಿಮೆ. ಹತ್ತಿರದ ಹೋಲಿಕೆಯೆಂದರೆ ಪರಸ್ಪರ ಕಾಳಗಕ್ಕೆ ಇಳಿಯಬಾರದೆಂದು 1939ರ ಆಗಸ್ಟ್ನಲ್ಲಿ ಸೋವಿಯತ್ ಯೂನಿಯನ್ ಜತೆ ಒಪ್ಪಂದ ಮಾಡಿಕೊಂಡ ಅಡಾಲ್ಪ್ ಹಿಟ್ಲರ್ ಅದನ್ನು ತಿಪ್ಪೆಗೆಸೆದು 1941ರ ಜೂನ್ನಲ್ಲಿ ಸೋವಿಯತ್ ಯೂನಿಯನ್ ಮೇಲೆ ಉಗ್ರ ದಾಳಿ ಆರಂಭಿಸಿದ್ದು. ಹಿಟ್ಲರ್ನಿಂದ ಅಂತಹ ನಡವಳಿಕೆ ಒಂದು ಹಂತಕ್ಕೆ ನಿರೀಕ್ಷಿತವೇ ಆಗಿತ್ತು. ಆದರೆ ಟ್ರಂಪ್ರಿಂದ ಅಂತಹದು ತೀರಾ ಅನಿರೀಕ್ಷಿತ. ರಷ್ಯಾದಿಂದ ಕಚ್ಚಾತೈಲ ಆಮದು ಮಾಡಿಕೊಂಡು ಅದರ ಬೊಕ್ಕಸಕ್ಕೆ ಹಣ ತುಂಬಿ ಯೂಕ್ರೇನ್ ಯುದ್ಧದ ಮುಂದುವರಿಕೆಗೆ ಕಾರಣವಾಗುತ್ತಿದೆ ಎಂಬ ಆಪಾದನೆಯನ್ನು ಭಾರತ ಮೇಲೆ ಹೊರಿಸಿ, ಅದಕ್ಕಾಗಿ ಶಿಕ್ಷೆಯಾಗಿ ಅಧಿಕ ಆಯಾತ ಶುಲ್ಕ ವಿಧಿಸಹೊರಟ ಟ್ರಂಪ್ ಭಾರತಕ್ಕಿಂತಲೂ ಅಧಿಕ ರಷ್ಯನ್ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವ ಚೀನಾದ ಬಗ್ಗೆ ತುಟಿ ತೆರೆಯಲೇ ಇಲ್ಲ. ಅಷ್ಟೇ ಅಲ್ಲ, ಜಿ-7 ಕೂಟಕ್ಕೆ ಚೀನಾ ಮತ್ತು ರಷ್ಯಾಗಳನ್ನು ಸೇರಿಸಿಕೊಳ್ಳಬೇಕೆಂಬ ಸಲಹೆಯನ್ನೂ ಇದೇ ಜೂನ್ನಲ್ಲಿ ಕೆನಡಾದಲ್ಲಿ ಆಯೋಜನೆಗೊಂಡ ಸಮಾವೇಶದಲ್ಲಿ ನೀಡಿದರು! ಹಾಗಿದ್ದರೆ ಭಾರತದ ಮೇಲೆ ಹೊರಿಸಿದ ಆಪಾದನೆಗಳಿಗೆ ಅರ್ಥವೇನು?
ಇದು ಸಾಲದೆಂಬಂತೆ, ಮೋದಿ ಸರ್ಕಾರವನ್ನು ಉರುಳಿಸಲು ಟ್ರಂಪ್ ಆಡಳಿತ ಸಂಚು ಹೂಡಿದ್ದಂತೂ ವಿಶ್ವಾಸಘಾತಕತನ ಹಾಗೂ ಅಕ್ಷಮ್ಯ ಅಪರಾಧ. ಇದು ಸಾಬೀತು ಮಾಡಿದ್ದೇನೆಂದರೆ ಮೋದಿಯವರ ಬಗ್ಗೆ, ಭಾರತದ ಬಗ್ಗೆ ಟ್ರಂಪ್ ಮೊನ್ನೆಮೊನ್ನೆಯವರೆಗೂ ಆಡುತ್ತಿದ್ದ ಒಳ್ಳಯ ಮಾತುಗಳಿಗೆ ಯಾವ ಅರ್ಥವೂ ಇಲ್ಲ, ಆ ಮನುಷ್ಯ ನಂಬಿಕೆಗೆ ಅರ್ಹನೇ ಅಲ್ಲ ಎಂದು. ಸಹಜವಾಗಿಯೇ ವ್ಯಗ್ರಗೊಂಡ ಪ್ರಧಾನಿ ನರೇಂದ್ರ ಮೋದಿ ಕಳೆದ ತಿಂಗಳು ಟ್ರಂಪ್ರ ನಾಲ್ಕು ದೂರವಾಣಿ ಕರೆಗಳನ್ನು ಸ್ವೀಕರಿಸಲೇ ಇಲ್ಲ. ಇದೆಲ್ಲದರ ನಡುವೆ ಪಾಕಿಸ್ತಾನದೊಂದಿಗೆ ಟ್ರಂಪ್ರ ಚೆಲ್ಲಾಟ ಬೇರೆ. ತಮ್ಮ ಕುಟುಂಬದ ಸದಸ್ಯರ ಕ್ರಿಪ್ಟೋ ಕರೆನ್ಸಿ ವ್ಯವಹಾರ ಮತ್ತು ಅದರಿಂದಾಗಿ ಬರಬಹುದಾದ ಲಾಭಕ್ಕಷ್ಟೇ ಬೆಲೆ ನೀಡಿ ಆ ಭಯೋತ್ಪಾದಕ ದೇಶವನ್ನು ಓಲೈಸಲು ಹೊರಟ ಟ್ರಂಪ್ ಜವಾಬ್ದಾರಿಯುತ ಜಾಗತಿಕ ನೇತಾರ ಅಲ್ಲವೇ ಅಲ್ಲ ಎನ್ನುವುದು ಜಗಜ್ಜಾಹೀರಾಯಿತು. ಇಂತಹ ಸನ್ನಿವೇಶದಲ್ಲಿ ಚೀನಾದೊಂದಿಗೆ ಸಂಬಂಧಗಳನ್ನು ಸುಭದ್ರಗೊಳಿಸಿಕೊಳ್ಳಬೇಕೆಂದು ಪ್ರಧಾನಿ ಮೋದಿ ಲೆಕ್ಕಹಾಕುವುದು ಸಹಜವೇ ಆಯಿತು. ಇದರ ಪರಿಣಾಮವೇ ಆಗಸ್ಟ್ 31-ಸೆಪ್ಟೆಂಬರ್ 1ರಂದು ತಿಯೆನ್ಜಿನ್ನಲ್ಲಿ ನಾವು ಕಂಡ ನೋಟಗಳು.
ತನ್ನ ವಿರುದ್ಧ ಭಾರತ, ಜಪಾನ್ ಮತ್ತು ಆಸ್ಟ್ರೇಲಿಯಾಗಳನ್ನು ಕೂಡಿಸಿಕೊಂಡು ಅಮೆರಿಕಾ ಕಟ್ಟಿದ್ದ ‘ಕ್ವಾಡ್’ ಕೂಟ ಹೀಗೆ ಕುಸಿದುಬೀಳುತ್ತಿರುವುದನ್ನು ಚೀನಾಗೆ ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದಂತಹ ಪರಮಾನಂದದ ಸ್ಥಿತಿ. ಟ್ರಂಪ್ ಅಧಿಕಾರದಲ್ಲಿ ಇರುವವರೆಗೂ ಭಾರತ-ಅಮೆರಿಕಾ ಸಂಬಂಧಗಳು ಸರಿಹೋಗುವುದಿಲ್ಲವೆಂದೂ, ಈ ಹೊಸ ವಾಸ್ತವವನ್ನು ತಾನು ತನ್ನ ಅನುಕೂಲಕ್ಕೆ ಬಳಸಿಕೊಳ್ಳಬೇಕೆಂದೂ ಚಾಣಾಕ್ಷ ಷಿ ಜಿನ್ಪಿಂಗ್ ಅರಿತಿದ್ದಾರೆ. ಈ ‘ಕಷ್ಟಕಾಲ’ದಲ್ಲಿ ಭಾರತದೊಂದಿಗೆ ಚೀನಾ ನಿಂತರೆ ಅದು ನವದೆಹಲಿಯನ್ನು ಶಾಶ್ವತವಾಗಿ ವಾಷಿಂಗ್ಟನ್ನಿಂದ ದೂರವಿಡುತ್ತದೆಂದೂ, ಅಷ್ಟರಮಟ್ಟಿಗೆ ತನ್ನ ದೇಶ ದ್ವಿರಂಗ ಯುದ್ಧದ ಅಪಾಯದಿಂದ ಮುಕ್ತವಾಗುತ್ತದೆಂದೂ ಅವರು ಲೆಕ್ಕಹಾಕಿದ್ದಾರೆ. ಚೀನಿ ಸೇನೆಯನ್ನು ಭಾರತ ಹಿಮಾಲಯದ ಯುದ್ಧರಂಗದಲ್ಲಿ ಕಟ್ಟಿಹಾಕುತ್ತದೆ ಎಂಬ ಯಾವ ಹೆದರಿಕೆಯೂ ಇಲ್ಲದೆ ತಾನು ತೈವಾನ್ ಮೇಲೆ ಆಕ್ರಮಣ ಎಸಗಬಹುದಾದ ಸುವರ್ಣಾವಕಾಶ ತನ್ನ ಪಾಲಿಗೆ ಇಂದು ಬಂದಿದೆ ಎಂದು ಷಿ ತಿಳಿದಿದ್ದಾರೆ.
ಇದೆಲ್ಲದರ ಅರ್ಥ ಟ್ರಂಪ್ರ ಮೂರ್ಖತನದಿಂದಾಗಿ ಹಾಳಾಗಿರುವ ಭಾರತ-ಅಮೆರಿಕಾ ಸಂಬಂಧಗಳಿಂದ ಎಷ್ಟು ಲಾಭ ಬಾಚಿಕೊಳ್ಳಬಹುದು ಎನ್ನುವುದಷ್ಟೇ ಅವರ ಲೆಕ್ಕಾಚಾರ. ಭಾರತದ ಪರವಾಗಿ ಅವರು ಅಥವಾ ಅವರ ಸರ್ಕಾರದ ಯಾವುದೇ ಪ್ರಮುಖ ವ್ಯಕ್ತಿ ಆಡುವ ಮಾತುಗಳು ಭಾರತವನ್ನು ಅಮೆರಿಕಾದಿಂದ ಶಾಶ್ವತವಾಗಿ ದೂರವಿಡಬೇಕೆನ್ನುವ ಹುನ್ನಾರಗಳಷ್ಟೇ. ಇಲ್ಲಿ ನಾವು ನೆನಪಿಸಿಕೊಳ್ಳಬೇಕಾದ್ದು ನವದೆಹಲಿಯಲ್ಲಿರುವ ಚೀನಿ ರಾಯಭಾರ ಷು ಫೈಬಾಂಗ್ ಆಡಿದ ಒಂದು ಮಾತು. ಭಾರತದ ಮೇಲೆ ಟ್ರಂಪ್ ಹೇರುತ್ತಿರುವ ವ್ಯಾಪಾರ ನಿಯಮಗಳ ವಿರುದ್ಧ ದನಿಯೆತ್ತಿದ ರಾಯಭಾರಿ ಷು ಅಂತಹ ಯಾವ ಒತ್ತಡಕ್ಕೂ ಭಾರತ ಮಣಿಯಬಾರದೆಂದೂ, ಹಾಗೆ ಮಣಿದರೆ ಟ್ರಂಪ್ ಇನ್ನಷ್ಟು ಒತ್ತಡ ಹೇರುತ್ತಾರೆಂದೂ ಹೇಳಿದ ಷು ತಮ್ಮ ಮಾತಿಗಾಗಿ ಬಳಸಿದ ಪದಗಳಿವು: 'Give the bully an inch, he will take a mile'! ಈ ಮಾತು ಟ್ರಂಪ್ರ ಅವಿವೇಕದ ನೀತಿಗಳಿಂದಾಗಿ ಭಾರತ-ಅಮೆರಿಕಾ ಸಂಬಂಧಗಳ ವಿಷಯದಲ್ಲಿ ಇಂದು ನಿಜವೆನಿಸುತ್ತಿರಬಹುದು. ಆದರೆ ಷು ಅಮೆರಿಕಾ ಬಗ್ಗೆ ಹೇಳುವ ಆ ನೀತಿಯನ್ನೇ ಅಲ್ಲವೇ ಇದುವರೆಗೂ ಭಾರತದ ಬಗ್ಗೆ ಚೀನಾ ಪಾಲಿಸಿಕೊಂಡು ಬಂದಿರುವುದು?
1950ರ ದಶಕದಲ್ಲಿ ನೆಹರು ಸರ್ಕಾರದ ಅವ್ಯವಹಾರಿಕ ಮತ್ತು ಸಡಿಲ ನೀತಿಗಳಿಂದಾಗಿ ನಲವತ್ತು ಸಾವಿರ ಚದರ ಕಿಲೋಮೀಟರ್ ಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡಿತ್ತು. ಅಂತಹದೇ ಪ್ರಯತ್ನವನ್ನು 1967ರಲ್ಲಿ ಸಿಕ್ಕಿಂನಲ್ಲಿ ಚೀನಾ ಮಾಡಹೊರಟಾಗ ಇಂದಿರಾ ಸರ್ಕಾರ ಬಡಿದು ಹಿಂದಕ್ಕಟ್ಟಿತು. 2004-14ರ ಯುಪಿಎ ಆಡಳಿತಾವಧಿ ಚೀನಾಗೆ ಸುವರ್ಣಕಾಲ. 2008ರ ಜುಲೈನಲ್ಲಿ ಚೀನಿ ಸರ್ಕಾರ ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ ಮತ್ತವರ ಮಕ್ಕಳನ್ನು ಒಲಿಂಪಿಕ್ಸ್ ಪಂದ್ಯಗಳ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸಿ ಸತ್ಕರಿಸಿತು. ಮುಂದಿನ ತಿಂಗಳೇ ಚೀನಿ ಕಮ್ಯೂನಿಸ್ಟ್ ಪಾರ್ಟಿಯ ಬೇಹುಗಾರ ವಿಭಾಗ ‘ಇಂಟರ್ನ್ಯಾಷನಲ್ ಲಿಯಾನಸ್ ಡಿಪಾರ್ಟ್ವೆುಂಟ್’ ಮತ್ತು ಕಾಂಗ್ರೆಸ್ ಜತೆಗಿನ ರಹಸ್ಯ ಒಪ್ಪಂದಕ್ಕೆ ರಾಹುಲ್ ಗಾಂಧಿ ಸಹಿಹಾಕಿದರು. ಅದರ ಮರುತಿಂಗಳೇ ಚೀನಿ ಸೇನೆ ಲಡಾಖ್ನ ಕೊಂಗ್ಕಾ ಕಣಿವೆ ನುಗ್ಗಿತು.
ಎಲ್ಲಕ್ಕಿಂತ ದೊಡ್ಡ ಅನಾಹುತ ಘಟಿಸಿದ್ದು 2013ರ ಏಪ್ರಿಲ್ನಲ್ಲಿ. ಉತ್ತರದ ದೆಪ್ಸಂಗ್ ಮೈದಾನದಲ್ಲಿ ಚೀನಿ ಸೇನೆ ಅತಿಕ್ರಮಣ ಎಸಗಿದಾಗ ಹಿಂದಕ್ಕೆ ಸರಿಯುವಂತೆ ಯುಪಿಎ ಸರ್ಕಾರ ನಮ್ಮ ಸೇನೆಗೆ ಆದೇಶಿಸಿತು! ಪರಿಣಾಮವಾಗಿ ಎಲ್ಓಸಿಯಿಂದ 19 ಕಿಲೋಮೀಟರ್ವರೆಗೆ ಚೀನಿ ಸೇನೆ ನಿರಾಯಾಸವಾಗಿ ನುಗ್ಗಿಬಂತು. ಆ ದಿನಗಳಲ್ಲಿ ಭಾರತದ ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಶ್ಯಾಮ್ ಸರನ್ ಲೋಕಸಭೆಯಲ್ಲೇ ಹೇಳಿದ ಪ್ರಕಾರ ಆ ಅವಧಿಯಲ್ಲಿ ಚೀನಾ ಸುಮಾರು ಒಂದುಸಾವಿರ ಚ.ಕಿ.ಮೀ. ಭಾರತೀಯ ಪ್ರದೇಶವನ್ನು ಆಕ್ರಮಿಸಿಕೊಂಡಿತಂತೆ! ಇಂಚು ಕೊಟ್ಟರೆ ಮೈಲುಗಟ್ಟಲೆ ಆಕ್ರಮಿಸಿಕೊಳ್ಳುವ ಅದರ ತಂತ್ರಕ್ಕೆ ಸೂಕ್ತ ಪ್ರತಿತಂತ್ರ ರೂಪಿಸಿದ್ದು ಈಗಿನ ಮೋದಿ ಸರ್ಕಾರ. ಇದು ಸಾಮರಿಕ ವಿಷಯವಾದರೆ ಆರ್ಥಿಕ ಕ್ಷೇತ್ರದಲ್ಲೂ ಚೀನಿ ದಬ್ಬಾಳಿಕೆ ಅವ್ಯಾಹತವಾಗಿ ಸಾಗಿತು. ಯುಪಿಎ ಸರ್ಕಾರ ಚೀನಾದ ಮೇಲೆ ಭಾರತದ ಅವಲಂಬನೆಯನ್ನು ಹೆಚ್ಚಿಸಿದ್ದರಿಂದಾಗಿ ಆ ಆಡಳಿತದ ಅಂತ್ಯದ ಹೊತ್ತಿಗೆ ಪ್ರತಿವರ್ಷವೂ 60 ಬಿಲಿಯನ್ ಡಾಲರ್ಗಳಷ್ಟು ಭಾರಿ ಮೊತ್ತವನ್ನು ಚೀನಾ ಭಾರತದಿಂದ ಕೊಳ್ಳೆಹೊಡೆಯತೊಡಗಿತ್ತು.
ಆ ವಿಷವರ್ತಲದಿಂದ ದೇಶವನ್ನು ಹೊರತರಲು ಮೋದಿ ಸರ್ಕಾರಕ್ಕೆ ಇಂದಿಗೂ ಸಾಧ್ಯವಾಗಿಲ್ಲ. ಇದೆಲ್ಲದರ ಅರ್ಥವೇನೆಂದರೆ, ಇಂದು ಅಮೆರಿಕಾ ಜತೆ ಸಂಬಂಧ ಕೆಟ್ಟಿರುವ ಕಾರಣ ನಾವು ಸಾರಾಸಗಟಾಗಿ ಚೀನಾದ ಕಡೆ ಎಂದಿಗೂ ಹೋಗಕೂಡದು. ಟ್ರಂಪ್ ಶ್ವೇತಭವನದಲ್ಲಿ ಶಾಶ್ವತವಾಗಿ ಬೇರೂರಿ ಕೂಡಲು ಸಾಧ್ಯವಿಲ್ಲ. ಷಿ ಜಿನ್ಪಿಂಗ್ ಚೀನಾದಲ್ಲಿ ಮಾಡಿಕೊಂಡಂತೆ ಜೀವಮಾನವಿಡೀ ಅಧ್ಯಕ್ಷರಾಗಿರುವ ವ್ಯವಸ್ಥೆ ಅಮೆರಿಕಾದಲ್ಲಿ ಇಲ್ಲ. ಇನ್ನು ಮೂರೂವರೆ ವರ್ಷಗಳಲ್ಲಿ ಟ್ರಂಪ್ ಜಾಗ ಖಾಲಿ ಮಾಡುವುದು ನಿಶ್ಚಿತ. ಅಥವಾ ಮುಂದಿನ ವರ್ಷದ ಸಂಸತ್ ಚುನಾವಣೆಗಳಲ್ಲಿ ಡೆಮೋಕ್ರಾಟಿಕ್ ಪಕ್ಷ ಬಹುಮತ ಗಳಿಸಿದರೆ ಟ್ರಂಪ್ ಅವರನ್ನು ‘ಮಹಾಭಿಯೋಗ’ದ ಮೂಲಕ ಮನೆಗೆ ಕಳುಹಿಸಬಹುದು. ಆಗ ಅಧ್ಯಕ್ಷರಾಗುವ ಜೆಡಿ ವ್ಯಾನ್ಸ್ ಭಾರತದ ಬಗ್ಗೆ ಬೇರೆಯೇ ನೀತಿ ಅನುಸರಿಸುವುದು ನಿಶ್ಚಿತ.
ಈ ನಡುವೆ ನೇಪಾಳದಲ್ಲಿ ಘಟಿಸುತ್ತಿರುವ ರಾಜಕೀಯ ಬೆಳವಣಿಗೆಗಳು ಭಾರತ- ಚೀನಾ ಸಂಬಂಧಗಳನ್ನು ಪರೀಕ್ಷೆಗೊಡ್ಡಿವೆ. ಜೆನ್ಝೀ ಯುವಜನತೆ ಓಡಿಸಿದ್ದು ಚೀನಿ ಕೈಗೊಂಬೆ ಕೆ.ಪಿ. ಶರ್ಮಾ ಓಲಿ ಅವರನ್ನ. ಅವರ ಸ್ಥಾನದಲ್ಲಿ ಮಧ್ಯಂತರ ಪ್ರಧಾನಿಯಾಗಿರುವ ಜಸ್ಟಿಸ್ ಸುಶೀಲಾ ರ್ಕಾ ಭಾರತದ ಬಗ್ಗೆ ಸದ್ಭಾನವೆ ಉಳ್ಳವರು. ಆ ದೇಶದಲ್ಲಿ ಈಗಿರುವ ಗೊಂದಲಮಯ ಸ್ಥಿತಿಯಲ್ಲಿ ರ್ಕಾ ಎಷ್ಟು ದಿನ ಪ್ರಧಾನಿಯಾಗಿರುತ್ತಾರೆಂದು ಹೇಳಲಾಗುವುದಿಲ್ಲ. ಅವರ ಎತ್ತಂಗಡಿಗೆ ಈಗಾಗಲೇ ಪ್ರಯತ್ನ ಆರಂಭವಾಗಿದೆ. ಅದರ ಹಿಂದೆ ಚೀನಾದ ಕೈವಾಡ ಇಲ್ಲದೇ ಇಲ್ಲ. ಒಟ್ಟಾರೆ ಇಂದಿನ ನೇಪಾಳವನ್ನು ಚೀನಾ ಹೇಗೆ ನೋಡುತ್ತದೆ ಎನ್ನುವುದು ಭಾರತದ ಬಗ್ಗೆ ಅದು ಹೊಂದಿರುವ ನಿಜವಾದ ನಿಲುವಿನ ಪರೀಕ್ಷೆಯಾಗುತ್ತದೆ. ಚೀನಾ ನಮಗೆ ಶಾಶ್ವತ ಹಿತೈಷಿ ಆಗಲಾರದು ಎನ್ನುವುದು ಪ್ರಧಾನಿ ಮೋದಿಯವರಿಗೂ ತಿಳಿದೇ ಇದೆ. ಹೀಗಾಗಿಯೇ ಅವರು ಚೀನಾಗೆ ಹೋಗುವ ಮೊದಲು ಜಪಾನ್ಗೆ ಭೇಟಿ ನೀಡಿದ್ದು, ‘ನಾವು ಪೂರ್ತಿಯಾಗಿ ಚೀನಾ ಪರ ತಿರುಗುತ್ತಿಲ್ಲ’ ಎಂಬ ಆಶ್ವಾನೆಯನ್ನು ಜಪಾನ್ಗೆ ನೀಡಿದ್ದು. ಜತೆಗೆ ಅವರು ಟ್ರಂಪ್ರಾಚೆಗಿನ ಭಾರತ-ಅಮೆರಿಕಾ ಸಂಬಂಧಗಳತ್ತ ಗಮನ ಹರಿಸುತ್ತಿದ್ದಾರೆ. ಇದು ವಿವೇಕಯುತ ಲೆಕ್ಕಾಚಾರ. ಚೀನಿ ಸ್ನೇಹ ಹಾವಿನ ಹೆಡೆಯ ನೆರಳು ಎಂದು ಅವರಿಗೆ ಗೊತ್ತೇ ಇದೆ.