ಬೆಂಗಳೂರು-ಮೈಸೂರು ದಶಪಥ ರಸ್ತೆ: ರೇಷ್ಮ್ಞೆನಗರ-ಗೊಂಬೆನಗರ ಮಧ್ಯೆ 23 ಕಿ.ಮೀ. ಬೈಪಾಸ್ ನಿರ್ಮಾಣ

Bypass
Published on

| ಗಂಗಾಧರ್ ಬೈರಾಪಟ್ಟಣ ರಾಮನಗರ

ಬೆಂಗಳೂರು - ಮೈಸೂರು ನಡುವೆ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ 275ರ ಕಾಮಗಾರಿ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಹೊಸ ಶಕ್ತಿ ತುಂಬಿದೆ. ಕರೊನಾದಿಂದಾಗಿ ಜಿಲ್ಲೆಯ ಪಾತಾಳಕ್ಕೆ ಇಳಿದಿದ್ದ ರಿಯಲ್ ಎಸ್ಟೇಟ್ ಉದ್ಯಮ ಇದೀಗ ಯಥಾಸ್ಥಿತಿಗೆ ಮರಳುತ್ತಿದೆ.

ರಾಜಧಾನಿ ಬೆಂಗಳೂರಿಗೆ ಹತ್ತಿರದಲ್ಲೇ ಇರುವ ರಾಮನಗರ ಜಿಲ್ಲೆ ರಿಯಲ್ ಎಸ್ಟೇಟ್ ಉದ್ಯಮಿಗಳ ಪಾಲಿಗೆ ಆಶಾಕಿರಣವಾಗಿರುವ ಜಿಲ್ಲೆಯಾಗಿದೆ. ಜಿಲ್ಲೆಯಲ್ಲಿ ರಿಯಲ್ ಎಸ್ಟೇಟ್​ಗೆ ಪೂರಕ ವಾತಾವರಣವಿದ್ದು, ಬೆಂಗಳೂರು, ಮೈಸೂರು ಹೊರತುಪಡಿಸಿ ಬೇರೆ ಎಲ್ಲಿಗೆ ಹೋಗಬೇಕು ಎನ್ನುವ ಪ್ರಶ್ನೆ ಬಂದಾಗ ರಾಮನಗರ ನೆನಪಾಗುತ್ತದೆ. ಇದರ ಜತೆಗೆ ಈಗಾಗಲೇ ಬೃಹತ್ ಕೈಗಾರಿಕೆಗಳ ಮೂಲಕ ವಿಶ್ವ ಭೂಪಟದಲ್ಲಿ ಸ್ಥಾನ ಪಡೆದುಕೊಂಡಿರುವ ಬಿಡದಿ ಹಾಗೂ ರೇಷ್ಮೆ ನಗರಿ ರಾಮನಗರ, ಗೊಂಬೆನಗರಿ ಚನ್ನಪಟ್ಟಣ ನಡುವೆ ಬೈಪಾಸ್ ನಿರ್ವಣವಾಗುತ್ತಿದೆ. ಇದರಿಂದಾಗಿ ಈ ಭಾಗದಲ್ಲಿ ರಿಯಲ್ ಎಸ್ಟೇಟ್ ಮೇಲಿನ ಹೂಡಿಕೆ ಭವಿಷ್ಯದಲ್ಲಿ ಹೆಚ್ಚಿನ ಲಾಭ ತಂದುಕೊಡಲಿದೆ.

ಬಿಡದಿಯಲ್ಲಿ 7 ಕಿ.ಮೀ. ಬೈಪಾಸ್ ರಸ್ತೆ ಹಾಗೂ ರಾಮನಗರ- ಚನ್ನಪಟ್ಟಣ ಅವಳಿ ನಗರಗಳ ನಡುವೆ 23 ಕಿ.ಮೀ. ಬೈಪಾಸ್ ರಸ್ತೆ ನಿರ್ವಣವಾಗುತ್ತಿದೆ. ಈ ಎರಡೂ ಬೈಪಾಸ್​ಗಳು ಪಾಕೃತಿಕ ಸೊಬಗಿನ ನಡುವೆಯೇ ಹಾದು ಹೋಗುವುದರಿಂದ ಈ ಭಾಗದಲ್ಲಿ ತನ್ನದೇ ಆದ ಸುಂದರ ಮನೆ ಕಟ್ಟಿಕೊಳ್ಳಬೇಕು ಎನ್ನುವ ಆಸೆ ಉಂಟಾಗುವುದು ಖಂಡಿತ. ಇದರ ಜತೆಗೆ ಈ ಎರಡೂ ನಗರಗಳು ಅತ್ತ ಐಟಿ ಹಬ್ ಬೆಂಗಳೂರು-ಸಾಂಸ್ಕೃತಿಕ ರಾಜಧಾನಿ ಮೈಸೂರಿಗೆ ಮಧ್ಯದಲ್ಲಿ ಇರುವುದರಿಂದ ಈ ನಗರದಲ್ಲಿ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಬಂಡವಾಳ ಹೂಡಿಕೆ ಭವಿಷ್ಯದ ಹಿತದೃಷ್ಟಿಯಿಂದ ಉತ್ತಮ ನಿರ್ಧಾರವಾಗುವುದು ಖಂಡಿತ.

ಭೂಮಿಗೆ ಚಿನ್ನದ ಬೆಲೆ

ಬೆಂಗಳೂರು - ಮೈಸೂರು ನಡುವಿನ ಭೂಮಿಗೆ ಹಿಂದಿನಿಂದಲೂ ಭಾರಿ ಬೇಡಿಕೆ ಇದೆ. ಕರೊನಾ ನಂತರದ ಪರಿಸ್ಥಿತಿಯಲ್ಲಿ ರಿಯಲ್ ಎಸ್ಟೇಟ್ ನೆಲಕಚ್ಚಿದ ಪರಿಣಾಮ, ಕೃಷಿ ಭೂಮಿ ಬೆಲೆಯಲ್ಲಿ ಇಳಿಕೆಯಾಗಿತ್ತು. ಆದರೆ, ಈಗ ಮತ್ತೆ ಏರಿಕೆ ಹಾದಿ ಹಿಡಿದಿದ್ದು, ಭೂಮಿಗೆ ಚಿನ್ನದ ಬೆಲೆ ಬಂದಿದೆ.

ಬೆಂಗಳೂರು - ಮೈಸೂರು ಹೆದ್ದಾರಿ ನಿರ್ಮಾಣ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಪೂರಕವಾಗಿದೆ. ಇಲ್ಲಿ ಬೈಪಾಸ್​ಗಳನ್ನು ನಿರ್ವಿುಸುತ್ತಿರುವುದರಿಂದ ನಗರ ಪ್ರದೇಶಗಳ ವ್ಯಾಪ್ತಿ ಹೆಚ್ಚುತ್ತಿದ್ದು, ರಿಯಲ್ ಎಸ್ಟೇಟ್ ಉದ್ಯಮಿಗಳು ಮತ್ತು ಖರೀದಿದಾರಿಗೆ ಉತ್ತಮ ಅವಕಾಶವನ್ನು ಕಲ್ಪಿಸುತ್ತದೆ. | ಎಚ್.ಎಸ್.ಮುರಳೀಧರ್ ಅಧ್ಯಕ್ಷರು, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ

ಹೈವೆ ವಿಶೇಷವೇನು?

  • ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿದ ನಂತರ ಬೆಂಗಳೂರಿನ ಕೆಂಗೇರಿ ಬಳಿಯಿಂದ ಮೈಸೂರಿನ ಕೊಲಂಬಿಯಾ ಆಸ್ಪತ್ರೆವರೆಗೆ ಪ್ರಸ್ತುತ ಇರುವ 135 ಕಿ.ಮೀ. 4 ಪಥದ ಹೆದ್ದಾರಿಯನ್ನು 10 ಪಥದ ರಸ್ತೆಯನ್ನಾಗಿ ವಿಸ್ತರಣೆ ಮಾಡಲಾಗುತ್ತಿದೆ.
  • ಕೆಂಗೇರಿಯಿಂದ ಬಿಡದಿ, ರಾಮನಗರ, ಚನ್ನಪಟ್ಟಣ ಮತ್ತು ಮದ್ದೂರು ತಾಲೂಕಿನ ನಿಡಘಟ್ಟವರೆಗೆ 56.20 ಕಿಮೀ ರಸ್ತೆ ಕಾಮಗಾರಿ, ಎರಡನೇ ಪ್ಯಾಕೇಜ್​ನಲ್ಲಿ ಮಂಡ್ಯ, ಶ್ರೀರಂಗಪಟ್ಟಣ ಮಾರ್ಗವಾಗಿ ಮೈಸೂರಿನ ಕೊಲಂಬಿಯ ಏಷ್ಯಾ ಆಸ್ಪತ್ರೆವರೆಗೂ 61.04 ಕಿ.ಮೀ. ರಸ್ತೆ ಕಾಮಗಾರಿ ನಡೆಯಲಿದೆ.
  • ಬಿಡದಿ ಬಳಿ ಒಟ್ಟು 6.9 ಕಿ. ಮೀ. ಬೈಪಾಸ್ ರಸ್ತೆ, ರಾಮನಗರದ ಬಸವನಪುರದಿಂದ ಚನ್ನಪಟ್ಟಣದ ಬೈರಾಪಟ್ಟಣವರೆಗೆ ಬೈಪಾಸ್​ಗೆ 22.35 ಕಿ.ಮೀ, ಮದ್ದೂರು ಬಳಿ 4.5 ಕಿ.ಮೀ., ಮಂಡ್ಯದಲ್ಲಿ 10 ಕಿ.ಮೀ. ಹಾಗೂ ಶ್ರೀರಂಗಪಟ್ಟಣದಲ್ಲಿ 8 ಕಿ.ಮೀ. ಉದ್ದದ ಬೈಪಾಸ್ ನಿರ್ವಣವಾಗುತ್ತಿದೆ.
  • 8 ಕಿ.ಮೀ. ಎಲಿವೇಟೆಡ್ ಕಾರಿಡಾರ್, ಒಟ್ಟು 9 ಪ್ರಮುಖ ಸೇತುವೆಗಳು, 44 ಕಿರುಸೇತುವೆ, 4 ರೈಲ್ವೆ ಮೇಲ್ಸೇತುವೆಗಳು ನಿರ್ವಣವಾಗುತ್ತಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net