ಆಂಕರೇಜ್​ನಲ್ಲಿ ಮಾಜಿ ರಿಯಾಲಿಟಿ ಶೋ ಆಂಕರ್!

photo-11-68a60d3511d62
Published on
ಜಾಗತಿಕವಾಗಿ ಕುತೂಹಲ ಕೆರಳಿಸಿದ್ದ ಎರಡು ಭೇಟಿಗಳು ಮುಕ್ತಾಯವಾಗಿವೆ. ಆದರೆ ಫಲಿತಾಂಶಗಳೇನು ಎನ್ನುವುದನ್ನು ಸ್ಪಷ್ಟಪಡಿಸುವುದರಲ್ಲಿ ವಿಫಲವಾಗಿವೆ. ಹೀಗಾಗಿ ರಷ್ಯಾ-ಯೂಕ್ರೇನ್ ಯುದ್ಧದ ಗತಿಯ ಬಗ್ಗೆ ಅನಿಶ್ಚಿತತೆ ಮುಂದುವರಿದಿದೆ. ಇದಕ್ಕೆ ಪ್ರಮುಖ ಕಾರಣ ಈ ಭೇಟಿಗಳನ್ನು ಬಯಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೇ ತಮ್ಮ ಆಶಯ ಹಾಗೂ ನಿರೀಕ್ಷೆಗಳ ಬಗ್ಗೆ ಸ್ಪಷ್ಟತೆ ಇಲ್ಲದಿದ್ದುದು ಮತ್ತು ಭೇಟಿಗಳಿಗೆ ಅಗತ್ಯ ಪೂರ್ವತಯಾರಿಯೂ ಅವರಿಂದ ಆಗದೇ ಇಲ್ಲದಿದ್ದುದು.

ಮೊದಲಿಗೆ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲ್ಲಾದಿಮಿರ್ ಪುತಿನ್ ನಡುವೆ ಅಲಾಸ್ಕಾದ ಆಮರೇಜ್​ನ ಎಲ್ಮಂಡಾರ್ಫ್ - ರಿಚರ್ಡ್​ಸನ್ ನೆಲೆಯಲ್ಲಿ ಆಗಸ್ಟ್ 15ರಂದು ನಡೆದ ಭೇಟಿಯನ್ನು ಅವಲೋಕಿಸೋಣ. ವಾರ, ಹತ್ತು ದಿನಗಳ ಮೊದಲು ಇಂತಹದೊಂದು ಭೇಟಿಯನ್ನು ಯಾರೂ ನಿರೀಕ್ಷಿರಲಿಲ್ಲ. ಮಹಾಶಕ್ತಿಗಳ ವರಿಷ್ಠ ನೇತಾರರ ಭೇಟಿ ಹೀಗೆ ತರಾತುರಿಯಲ್ಲಿ ಆಯೋಜನೆಗೊಳ್ಳುವುದಿಲ್ಲ. ಹಾಗೇನಾದರೂ ಆದರೆ ಅಂತಹ ಭೇಟಿ ಆಗಲೇಬೇಕಾದ ತುರ್ತು ನಿರ್ವಣವಾಗಿರುತ್ತದೆ. ಈ ಭೇಟಿಗೆ ಅಂತಹದ್ದೇನಿತ್ತು?

ತಾವು ಅಧಿಕಾರದಲ್ಲಿ ಇದ್ದಿದ್ದರೆ ರಷ್ಯಾ-ಯೂಕ್ರೇನ್ ಯುದ್ಧ ಆಗುತ್ತಲೇ ಇರಲಿಲ್ಲ ಎಂದು ಟ್ರಂಪ್ ಹೇಳುತ್ತಲೇ ಇದ್ದಾರೆ. ಅವರ ಮಾತಿನಲ್ಲಿ ಸತ್ಯವಿದೆ. ವೊಲೊದಿಮಿರ್ ಝೆಲೆನ್ಸ್ಕಿ 2019ರಲ್ಲಿ ಯೂಕ್ರೇನ್​ನ ಅಧ್ಯಕ್ಷರಾದಾಗಿನಿಂದಲೂ ತಮ್ಮ ದೇಶವನ್ನು ಅಮೆರಿಕಾ ನೇತೃತ್ವದ ನ್ಯಾಟೋ ಸೇನಾಕೂಟದ ಸದಸ್ಯನನ್ನಾಗಿಸುವ ಬಯಕೆಯನ್ನಿರಿಸಿಕೊಂಡಿದ್ದಾರೆ. ಯೂಕ್ರೇನ್​ನ ಪಶ್ಚಿಮ ಗಡಿಯಲ್ಲಿರುವ ಪೋಲ್ಯಾಂಡ್, ರುಮೇನಿಯಾ ಹಾಗೂ ಬಲ್ಗೇರಿಯಾಗಳು ಈಗಾಗಲೇ ನ್ಯಾಟೋ ಸೇರಿರುವುದರಿಂದ ಯೂಕ್ರೇನ್ ಸಹಾ ಆ ಹಾದಿ ಹಿಡಿಯುವುದು ಸಹಜವೇ ಅನಿಸಬಹುದು. ಆದರೆ ಸಮಸ್ಯೆಯಾಗುವುದು ಯೂಕ್ರೇನ್​ನ ನ್ಯಾಟೋ ಸದಸ್ಯತ್ವ ರಷ್ಯಾದ ಸಾಮರಿಕ ಹಾಗೂ ಆರ್ಥಿಕ ಸುರಕ್ಷೆಯ ಮೇಲೆ ಉಂಟುಮಾಡಬಹುದಾದ ಋಣಾತ್ಮಕ ಪರಿಣಾಮಗಳ ವಿಷಯದಲ್ಲಿ.

ಹೇಳಿಕೇಳಿ ಯೂಕ್ರೇನ್ ಮೂರೂವರೆ ದಶಕಗಳ ಹಿಂದಿನವರೆಗೂ ರಷ್ಯಾದ ಜತೆಗೂಡಿ ಹಿಂದೆ ರಷಿಯನ್ ಸಾಮ್ರಾಜ್ಯ ಮತ್ತು ಕಮ್ಯೂನಿಸ್ಟ್ ಸೋವಿಯೆತ್ ಯೂನಿಯನ್ ಭಾಗವಾಗಿದ್ದ ದೇಶ. ಆ ಕಮ್ಯೂನಿಸ್ಟ್ ದೈತ್ಯ ಛಿದ್ರಗೊಂಡು ಯೂಕ್ರೇನ್ ಸ್ವತಂತ್ರ ರಾಷ್ಟ್ರವಾದಾಗ್ಯೂ ಅದು ರಷ್ಯಾ ಜತೆ ದೀರ್ಘ ಗಡಿಯನ್ನು ಹೊಂದಿದೆ. ಅಂದರೆ ಯೂಕ್ರೇನ್ ನ್ಯಾಟೋ ಸೇರಿದರೆ ಆ ಸೇನಾಕೂಟದ ಸೈನಿಕರು ರಷ್ಯಾದ ಗಡಿಗೆ ಬರುತ್ತಾರೆ, ನ್ಯಾಟೋ ಯುದ್ಧವಿಮಾನಗಳು ಮತ್ತು ಯುದ್ಧನೌಕೆಗಳು ಯೂಕ್ರೇನ್​ನ ವಾಯುನೆಲೆಗಳಲ್ಲಿ ಮತ್ತು ಬಂದರುಗಳಲ್ಲಿ ಬಂದು ನಿಲ್ಲುತ್ತವೆ, ನ್ಯಾಟೋದ ಅಣ್ವಸ್ತ್ರಸಜ್ಜಿತ ಕ್ಷಿಪಣಿಗಳೂ ಯೂಕ್ರೇನ್ ನೆಲದಲ್ಲಿ ರಷ್ಯಾಗೆದುರಾಗಿ ನಿಲ್ಲಬಹುದು. ಇಂತಹ ಸನ್ನಿವೇಶ ಯಾವುದೇ ಸಣ್ಣ ಕಿಡಿಯಿಂದ ರಷ್ಯಾ ಮತ್ತು ನ್ಯಾಟೋ ನಡುವೆ ಯುದ್ಧಕ್ಕೆ ಕಾರಣವಾಗಬಹುದು ಮತ್ತು ಆ ಯುದ್ಧ ಅಣ್ವಸ್ತ್ರ ಯುದ್ಧವಾಗುವ ಸಾಧ್ಯತೆ ಇರುತ್ತದೆ.

ಇದನ್ನರಿತಿದ್ದ ಟ್ರಂಪ್ ಯೂಕ್ರೇನನ್ನು ನ್ಯಾಟೋಗೆ ಸೇರಿಸಿಕೊಳ್ಳುವುದಕ್ಕೆ ಸಿದ್ಧವಿರಲಿಲ್ಲ. ಯಾವುದೇ ಹೊಸ ರಾಷ್ಟ್ರ ನ್ಯಾಟೋಗೆ ಸೇರಬೇಕೆಂದರೆ ಅದನ್ನು ಆ ಸೇನಾಕೂಟದ ಎಲ್ಲ ಸದಸ್ಯ ರಾಷ್ಟ್ರಗಳೂ ಅನುಮೋದಿಸಬೇಕಾದ್ದು ಕಡ್ಡಾಯ. ಒಂದು ಸದಸ್ಯ ರಾಷ್ಟ್ರ ಅಪಸ್ವರ ತೆಗೆದರೂ ಪ್ರವೇಶ ಸಾಧ್ಯವಿಲ್ಲ. ನೇತಾರ ಅಮೆರಿಕಾವೇ ವಿರುದ್ಧವಾಗಿ ನಿಂತರೆ ಯೂಕ್ರೇನ್ ತೆಪ್ಪಗಿರಬೇಕು ಅಷ್ಟೇ. ಟ್ರಂಪ್​ರ ಮೊದಲ ಅವಧಿಯಲ್ಲಿ ಅದೇ ಆದದ್ದು.

ಆದರೆ ಅದೆಲ್ಲವೂ ಬದಲಾದದ್ದು ಜನವರಿ 2021ರಲ್ಲಿ ಜೋ ಬೈಡೆನ್ ಅಧ್ಯಕ್ಷರಾದಾಗ. ಬೈಡೆನ್ ಆಡಳಿತ ಯೂಕ್ರೇನ್​ನ ನ್ಯಾಟೋ ಸದಸ್ಯತ್ವದ ಪರವಾಗಿರುವುದರ ಸಂಕೇತ ನೀಡಿದ್ದಲ್ಲದೇ ಆ ದೇಶಕ್ಕೆ ಶಸ್ತ್ರಾಸ್ತ್ರಗಳನ್ನೂ ಪೂರೈಸತೊಡಗಿತು. ಇದರಿಂದ ಹೆಂಡ ಕುಡಿದ ಕೋತಿಯಂತಾದ ಝೆಲೆನ್ಸ್ಕಿ ನ್ಯಾಟೋ ಸದಸ್ಯತ್ವಕ್ಕೆ ಮತ್ತೆ ಪ್ರಯತ್ನ ತೀವ್ರಗೊಳಿಸಿದರು. ಇದರಿಂದ ಆತಂಕಗೊಂಡ ಪುತಿನ್ ನ್ಯಾಟೋ ಕನಸನ್ನು ಬಿಡುವಂತೆ ಝೆಲೆನ್ಸ್ಕಿ ಮನವೊಲಿಸಲು ಇನ್ನಿಲ್ಲದ ಪ್ರಯತ್ನ ಮಾಡಿದರು. ಆ ಪ್ರಯತ್ನದಲ್ಲಿ ಅತಿ ಮುಖ್ಯವಾಗಿ ಕಾಣುವುದು ತಮ್ಮೆರಡು ಜನತೆಗಳ ನಡುವಿನ ಐತಿಹಾಸಿಕ ಬಾಂಧವ್ಯ ಮುಂದುವರಿಯುವುದು ಎರಡೂ ದೇಶಗಳ ಭವಿಷ್ಯದ ದೃಷ್ಟಿಯಿಂದ ಅತ್ಯಗತ್ಯ ಎಂದು ವಿವರಿಸಿ ಝೆಲೆನ್​ಸ್ಕಿಗೆ ಬರೆದ ದೀರ್ಘ ಪತ್ರ. ಆದರೆ ಇದಾವುದಕ್ಕೂ ಗಮನ ಕೊಡುವ ಮನೋಭಾವ ಝೆಲೆನ್​ಸ್ಕಿಯದಾಗಿರಲಿಲ್ಲ.

ಬೈಡೆನ್​ರ ಅಮೆರಿಕಾದಿಂದ ಬಂದ ಮತ್ತೆರಡು ಶಸ್ತ್ರಾಸ್ತ್ರ ಪೂರೈಕೆಗಳು ಅವರ ಉತ್ಸಾಹವನ್ನು ಹುಚ್ಚೆಬ್ಬಿಸಿದವು. ನಿರ್ವಾಹವಿಲ್ಲದ ಪುತಿನ್ ಫೆಬ್ರವರಿ 24, 2021ರಂದು ರಣಕಹಳೆ ಊದಿದರು. ಯಾವುದೇ ಯುದ್ಧನಿರತ ದೇಶವನ್ನು ನ್ಯಾಟೋಗೆ ಸೇರಿಸಿಕೊಳ್ಳಲಾಗದು ಎಂಬ ಲಿಖಿತ ನಿಯಮ ಆ ಸೇನಾಕೂಟದ ಸಂವಿಧಾನದಲ್ಲೇ ಇದೆ! ತಾನು ನ್ಯಾಟೋಗೆ ಸೇರುವುದಿಲ್ಲ ಎಂದು ಯೂಕ್ರೇನ್ ರಷ್ಯಾದೊಂದಿಗೆ ಲಿಖಿತ ಒಪ್ಪಂದ ಮಾಡಿಕೊಳ್ಳುವವರೆಗೆ ಅಥವಾ ಆ ದೇಶವನ್ನು ತನ್ನೊಳಗೆ ಸೇರಿಸಿಕೊಳ್ಳುವುದಿಲ್ಲ ಎಂದು ನ್ಯಾಟೋ ಲಿಖಿತವಾಗಿ ರಷ್ಯಾಗೆ ಆಶ್ವಾಸನೆ ನೀಡುವವರೆಗೆ ಈ ಯುದ್ಧ ಮುಂದುವರಿಯುತ್ತಲೇ ಹೋಗುತ್ತದೆ.

ಈ ವಾಸ್ತವವನ್ನರಿತ ಟ್ರಂಪ್ ಯೂಕ್ರೇನನ್ನು ನ್ಯಾಟೋದಿಂದ ಹೊರಗೇ ಇಡಲು ತೀರ್ವನಿಸಿದ್ದರು. ಜತೆಗೆ, ಯೂಕ್ರೇನ್​ನಲ್ಲಿ ರಷ್ಯಾ ಆಕ್ರಮಿಸಿಕೊಂಡಿರುವ ಪ್ರದೇಶಗಳಲ್ಲಿ ಬಹುಪಾಲು ರಷಿಯನ್ನರ ಕೈಯಲ್ಲೇ ಶಾಶ್ವತವಾಗಿ ಉಳಿಯಬೇಕು, ಶಾಶ್ವತ ಶಾಂತಿಗಾಗಿ ಇದೂ ಅಗತ್ಯ ಎಂಬ ಸಂದೇಶವನ್ನು ಅವರು ತಾವು ಮತ್ತೆ ಶ್ವೇತಭವನ ಪ್ರವೇಶಿಸುವ ಮೊದಲೇ ಮಾಸ್ಕೋ ಮತ್ತು ಕೀಯೆವ್​ಗಳಿಗೆ ತಲುಪಿಸಿದ್ದರು ಸಹ. ತಮ್ಮ ಮಾತು ಪುತಿನ್​ರ ಕಿವಿಗೆ ಇಂಪು ಸಂಗೀತ ಎಂದವರಿಗೆ ಗೊತ್ತೇ ಇತ್ತು. ಜತೆಗೆ ಮೂರು ವರ್ಷಗಳ ಯುದ್ಧದಿಂದ ಬಸವಳಿದ ಝೆಲೆನ್​ಸ್ಕಿ ಸಹ ತಮ್ಮ ದಾರಿಗೇ ಬರುತ್ತಾರೆ ಎನ್ನುವುದು ಟ್ರಂಪ್ ಲೆಕ್ಕಾಚಾರವಾಗಿತ್ತು.

ಅದರಿಂದಾಗಿಯೇ ಅವರು ಅಧಿಕಾರಕ್ಕೆ ಬಂದ ಇಪ್ಪತ್ತನಾಲ್ಕು ತಾಸುಗಳಲ್ಲಿ ರಷ್ಯಾ-ಯೂಕ್ರೇನ್ ಯುದ್ಧವನ್ನು ನಿಲುಗಡೆಗೆ ತರುತ್ತೇನೆ ಎಂಬ ಆತ್ಮವಿಶ್ವಾಸದ ಮಾತುಗಳನ್ನು ಆಡಿದ್ದು. ಹಂಗೆರಿ ಹೊರತಾಗಿ ಎಲ್ಲ ಯೂರೋಪಿಯನ್ ರಾಷ್ಟ್ರಗಳೂ ತಮ್ಮ ಪರವಾಗಿ ಇರುವುದನ್ನು ಕಂಡ ಝೆಲೆನ್​ಸ್ಕಿ ಟ್ರಂಪ್​ರ ಅಮೆರಿಕದ ಸಹಾಯವಿಲ್ಲದೆಯೂ ತಾನು ಯುದ್ಧವನ್ನು ಮುಂದುವರಿಸಬಲ್ಲೆ ಎಂಬ ನಂಬಿಕೆಯನ್ನು ಗಟ್ಟಿಯಾಗಿ ಬೆಳೆಸಿಕೊಂಡಾಗಿತ್ತು. ಪರಿಣಾಮವಾಗಿ ಟ್ರಂಪ್​ರಿಗೆ ಅರಿವಾದದ್ದು ಯುದ್ಧವನ್ನು ನಿಲುಗಡೆಗೆ ತರುವ ಪ್ರಯತ್ನ ಹಗಲುಗನಸಷ್ಟೇ ಎಂದು. ಹೀಗಾಗಿಯೇ ಅವರು ವ್ಯಗ್ರಗೊಂಡು ಫೆಬ್ರವರಿಯಲ್ಲಿ ಝೆಲೆನ್​ಸ್ಕಿಯವರಿಗೆ ಶ್ವೇತಭವನದಲ್ಲೇ ಎಲ್ಲರ ಮುಂದೆ ಛೀಮಾರಿ ಹಾಕಿ ಅವಮಾನಿಸಿದ್ದು.

ಆದರೆ ಟ್ರಂಪ್ ತಾವೇ ಸೃಷ್ಟಿಸಿಕೊಂಡ ಒತ್ತಡಗಳಿಂದಾಗಿ ಯೂಕ್ರೇನ್ ಬಗ್ಗೆ ನಿಲುವನ್ನು ಬದಲಾಯಿಸಿಕೊಂಡ ಚೋದ್ಯ ನಮ್ಮೆದುರು ಕಾಣಿಸಿಕೊಂಡಿತು. ಜಗತ್ತಿನ ಎಲ್ಲ ದೇಶಗಳ ಜತೆ, ಮುಖ್ಯವಾಗಿ ಚೀನಾ ಜತೆ ಸುಂಕ ಸಮರಕ್ಕಿಳಿದ ಟ್ರಂಪ್​ರ ನಡೆ ಅವರಿಗೇ ಮುಳುವಾಯಿತು. ಅವರು ವಿಧಿಸಿದ 35% ಆಮದುಸುಂಕಕ್ಕೆ ಚೀನಾ ಸಹ ಅಷ್ಟೇ ಸುಂಕ ವಿಧಿಸಿತು. ಅದನ್ನು ಉಪಾಯವಾಗಿ ಪರಿಹರಿಸಿಕೊಳ್ಳುವ ಮಾರ್ಗ ತೊರೆದ ಟ್ರಂಪ್ ಚೀನಾ ಮೇಲಿನ ಸುಂಕವನ್ನು 145%, 245% ಅಂತೆಲ್ಲಾ ವಿಧಿಸುವ ಘೊಷಣೆ ಮಾಡಿದರು. ಆಗ ದುರ್ಲಭ ಖನಿಜಗಳ ಅತಿ ದೊಡ್ಡ ಉತ್ಪಾದಕನಾದ ಚೀನಾ ಅವುಗಳನ್ನು ಅಮೆರಿಕಾಗೆ ಪೂರೈಸುವುದನ್ನು ನಿಲ್ಲಿಸಿತು.

ಅಮೆರಿಕಾದ ಎಲೆಕ್ಟ್ರಾನಿಕ್ ಮತ್ತು ಎಲೆಕ್ಟ್ರಿಕ್ ಕೈಗಾರಿಕಾ ಕ್ಷೇತ್ರದ ಮೇಲೆ ಇದರ ಪರಿಣಾಮ ಭೀಕರ. ಆಗ ಟಂಪ್​ರ ಕಣ್ಣು ಹೊರಳಿದ್ದು ಯೂಕ್ರೇನಿನಲ್ಲಿ ಇದೆಯೆನ್ನಲಾಗುವ ದುರ್ಲಭ ಖನಿಜ ಭಂಡಾರದತ್ತ. ಆ ಖನಿಜಗಳನ್ನು ಹೊರತೆಗೆದು ಬಳಸಿಕೊಳ್ಳುವ ಅಧಿಕಾರವನ್ನು ಅಮೆರಿಕಾಗೆ ನೀಡಬೇಕೆಂದೂ, ಪ್ರತಿಯಾಗಿ 500 ಮಿಲಿಯನ್ ಡಾಲರ್​ಗಳ ಅಗಾಧ ಮೊತ್ತ ನೀಡುವುದಾಗಿಯೂ ಝೆಲೆನ್​ಸ್ಕಿಯವರನ್ನು ಟ್ರಂಪ್ ಮತ್ತವರ ವಾಣಿಜ್ಯ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಒತ್ತಾಯಿಸತೊಡಗಿದರು. ಮೊದಲಿಗೆ ಕೊಸರಾಡಿದ ಝೆಲೆನ್​ಸ್ಕಿ ಆಮೇಲೆ ಒಪ್ಪಿಕೊಂಡು ಒಪ್ಪಂದಕ್ಕೆ ಸಹಿ ಹಾಕಿದರು. ಅಲ್ಲಿಯವರೆಗೆ ಟ್ರಂಪ್ ದೃಷ್ಟಿಯಲ್ಲಿ ಖಳನಾಯಕನಾಗಿದ್ದ ಝೆಲೆನ್​ಸ್ಕಿ ಏಕಾಏಕಿ ಸಭ್ಯರಾಗಿಬಿಟ್ಟರು, ‘ಒಳ್ಳೆಯ ಸ್ನೇಹಿತ’ರಾಗಿದ್ದ ಪುತಿನ್ ಖಳನಾಯಕರಾಗಿಬಿಟ್ಟರು. ಝೆಲೆನ್​ಸ್ಕಿಯವರ ಕುರಿತಾಗಿ ಬಳಸುತ್ತಿದ್ದ ‘ಮೂರನೆಯ ಮಹಾಯುದ್ಧಕ್ಕೆ ಕಾರಣಕರ್ತ’ ಎಂಬೆಲ್ಲಾ ಬೈಗುಳಗಳನ್ನು ಟ್ರಂಪ್ ಮಹಾಶಯ ಪುತಿನ್ ವಿರುದ್ಧ ಬಳಸತೊಡಗಿದರು!

ಯುದ್ಧ ನಿಲ್ಲಲಿಲ್ಲ. ಯೂಕ್ರೇನಿನ ದುರ್ಲಭ ಖನಿಜಗಳ ಕನಸಿನ ಗಂಟು ಟ್ರಂಪ್​ರ ಕೈಗೆ ಹತ್ತಲಿಲ್ಲ. ಹಳೇ ಗಂಡನ ಪಾದವೇ ಗತಿ ಎನ್ನುವಂತೆ ದುರ್ಲಭ ಖನಿಜಗಳಿಗಾಗಿ ಚೀನಾದ ಮುಂದೆಯೇ ಅಂಗಲಾಚಿದರು. ಅದಕ್ಕಾಗಿ ಚೀನಾ ಮೇಲಿನ ಸುಂಕದ ಅನುಷ್ಠಾನವನ್ನು ಮುಂದೂಡುತ್ತಾ ಬಂದರು. (ಈಗ ಅದು ನವೆಂಬರ್ 10ಕ್ಕೆ ಹೋಗಿದೆ!)

ಹೇಳಿಕೇಳಿ ಲಾಗಾಯ್ತಿನಿಂದಲೂ ಟ್ರಂಪ್​ರ ಮೊದಲ ಆದ್ಯತೆ ಚೀನಾದ ಆದಾಯವನ್ನು ಕುಗ್ಗಿಸಿ ಅದರ ನವವಸಾಹತುಶಾಹಿ ಸಂಚುಗಳನ್ನು ತಡೆಯುವುದು. ಆದರೆ ಈಗ ಮತ್ತೆ ಚೀನಾದ ಬಳಿಗೇ ಹೋಗಿ ಅದಕ್ಕೆ ಬಿಲಿಯನ್​ಗಟ್ಟಲೆ ಡಾಲರ್​ಗಳನ್ನು ಕೊಡಬೇಕಾದ ಸ್ಥಿತಿಯ ಬಗ್ಗೆ ಅವರಿಗೆ ಹಳಹಳಿಕೆಯಾದದ್ದು ನಿಜ. ಆ ನಿರಾಸೆಗೆ ಅವರು ದೂರತೊಡಗಿದ್ದು ಯುದ್ಧ ನಿಲುಗಡೆಗೆ ತಯಾರಿಲ್ಲದ ಪುತಿನ್​ರನ್ನು. ಟ್ರಂಪ್ ವಿವೇಕಿಯಾಗಿದ್ದರೆ ತಮ್ಮ ಮೊದಲಿನ ನೀತಿಗೇ ಅಂಟಿಕೊಂಡು ಝೆಲೆನ್​ಸ್ಕಿ ಮೇಲೆ ಒತ್ತಡ ಹಾಕಿ ಕದನವಿರಾಮ ಉಂಟುಮಾಡಬಹುದಿತ್ತು.

ಆಗ ತನ್ನಲ್ಲಿರುವ ದುರ್ಲಭ ಖನಿಜಗಳ ಜತೆ ತಾನು ಯೂಕ್ರೇನಿನಲ್ಲಿ ಹಿಡಿತ ಸ್ಥಾಪಿಸಿರುವ ದಾನ್​ಬಾಸ್ ಪ್ರದೇಶದಲ್ಲಿನ ಖನಿಜಗಳನ್ನೂ ಹೊರತೆಗೆದು ಬಳಸಿಕೊಳ್ಳುವ ಅವಕಾಶವನ್ನು ರಷ್ಯಾ ಟ್ರಂಪ್​ಗೆ ನೀಡುತ್ತಿತ್ತು. ಅಂತಹದೊಂದು ಒಪ್ಪಂದದ ಪರವಾಗಿ ಪುತಿನ್ ಇರುವ ಸೂಚನೆ ಮಾರ್ಚ್-ಏಪ್ರಿಲ್​ನಲ್ಲಿ ಹೊರಬಂದಿತ್ತು. ಜತೆಗೆ, ಯುದ್ಧದಲ್ಲಿ ಸೋತು ಸುಣ್ಣವಾದ ಯೂಕ್ರೇನ್​ನ ಪುನರ್ನಿರ್ವಣಕ್ಕೆ ಧನಸಹಾಯ ಒದಗಿಸಿ, ಪ್ರತಿಯಾಗಿ ಅಲ್ಲಿನ ದುರ್ಲಭ ಖನಿಜಗಳನ್ನು ಕೈವಶ ಮಾಡಿಕೊಳ್ಳುವುದರತ್ತಲೂ ಟ್ರಂಪ್ ಗಮನ ಹರಿಸಬಹುದಾಗಿತ್ತು. ಆದರೆ ಅದಾವುದನ್ನೂ ಮಾಡದ ಅವರು ಪುತಿನ್ ಮತ್ತವರ ಸಹಯೋಗಿಗಳನ್ನು ದೂರತೊಡಗಿದರು. ಮಾಜಿ ಅಧ್ಯಕ್ಷ ಹಾಗೂ ಪುತಿನ್​ರ ಅತಿ ಘನಿಷ್ಟ ಸಹಯೋಗಿ ದಿಮಿತ್ರಿ ಮೆದ್ವೆದೆವ್ ಕುರಿತಾಗಿ ಟ್ರಂಪ್ ಆಡಿದ ಮಾತುಗಳು ಶಿಷ್ಟಾಚಾರಕ್ಕೆ ಹೊಂದುವಂತಹವಲ್ಲ. ಅಮೆರಿಕಾದ ರಾಜಕಾರಣಿಗಳು ತಮ್ಮ ಒಳಗಿನ ಎದುರಾಳಿಗಳು ಮತ್ತು ತಮಗಿಷ್ಟವಾಗದ ವಿದೇಶಿ ನಾಯಕರ ಬಗ್ಗೆ ಕೀಳುಭಾಷೆಯಲ್ಲಿ ಮಾತಾಡುತ್ತಾರೆ.

ಆದರೆ ಅದೆಲ್ಲವೂ ನಡೆಯುವುದು ಶ್ವೇತಭವನ ಮತ್ತು ಪೆಂಟಗನ್​ನಲ್ಲಿ ನಾಲ್ಕು ಗೋಡೆಗಳ ಒಳಗೆ. ಆದರೆ ಟ್ರಂಪ್ ಆ ಎಚ್ಚರವನ್ನೂ ವಹಿಸುತ್ತಿಲ್ಲ. ರಷಿಯನ್ ನಾಯಕರನ್ನು ಮಾತಿನ ಧಮಕಿಯಿಂದ ಮಣಿಸಬಹುದೆಂದು ತಿಳಿದ ಅವರು ರಷ್ಯಾಗೆ ಯುದ್ಧದ ಬೆದರಿಕೆಯನ್ನೂ ಒಡ್ಡುವ ಹಂತಕ್ಕೆ ಹೋದದ್ದು ವಿಪರ್ಯಾಸ. ರಷ್ಯಾದ ಸಾಗರ ಪ್ರದೇಶಕ್ಕೆ ಎರಡು ಅಣ್ವಸ್ತ್ರಚಾಲಿತ ಮತ್ತು ಅಣ್ವಸ್ತ್ರಸಜ್ಜಿತ ಜಲಾಂತರ್ಗಾಮಿಗಳನ್ನು ಕಳುಹಿಸುವ ಬೆದರಿಕೆಯನ್ನು ಟ್ರಂಪ್ ಒಡ್ಡಿದ್ದು ತೀರಾ ಹೊಣೆಗೇಡಿತನ ನಡೆ. ನೊಬೆಲ್ ಶಾಂತಿ ಪುರಸ್ಕಾರಕ್ಕಾಗಿ ಹಪಹಪಿಸುತ್ತಿರುವ ಅವರು ಹೀಗೆ ಶಾಂತಿಭಂಗದ ಕೃತ್ಯಕ್ಕೆ ಮುಂದಾದರೆ ಹೇಗೆ? (ನಾರ್ವೆಯ ನೊಬೆಲ್ ಶಾಂತಿ ಸಮಿತಿ ಟ್ರಂಪ್ ಮುಂದೆ ಅದೇ ಪ್ರಶ್ನೆಯನ್ನಿಟ್ಟಿದೆ)

ಟ್ರಂಪ್ ಬೆದರಿಕೆಗೆ ಪ್ರತಿಯಾಗಿ ರಷ್ಯಾ ತಾನೂ ಹಣಾಹಣಿಗೆ ತಯಾರಿರುವುದಾಗಿ ಹೇಳಿದ್ದಲ್ಲದೇ, 1987ರ ಐತಿಹಾಸಿಕ ಐಎನ್​ಎಫ್ ಒಪ್ಪಂದದಿಂದ ಹೊರನಡೆಯಿತು ಮತ್ತು ಕ್ಷಿಪಣಿಗಳನ್ನು ಅಣ್ವಸ್ತ್ರಗಳೊಂದಿಗೆ ಸಜ್ಜಾಗಿರಿಸುವುದನ್ನು ಮೂವತ್ತೆಂಟು ವರ್ಷಗಳ ನಂತರ ಮತ್ತೆ ಆರಂಭಿಸುವುದಾಗಿ ಹೇಳಿತು. ಜಗತ್ತು ಅಣ್ವಸ್ತ್ರ ಯುದ್ಧದ ಅಂಚಿನಲ್ಲಿ ನಿಂತದ್ದು ಆಗ. ಜತೆಗೆ ತಾನು ಈ ಜಗತ್ತಿನ ಪಾಳೇಗಾರನಲ್ಲ ಎಂಬ ಅರಿವು ಟ್ರಂಪ್​ಗಾಯಿತು. ರಷ್ಯಾದ ಕ್ರಮದಿಂದ ಅತಿಯಾಗಿ ಆತಂಕಗೊಂಡ ಪಶ್ಚಿಮ ಯೂರೋಪಿಯನ್ ದೇಶಗಳು ಅಮೆರಿಕಾದ ಅಧ್ಯಕ್ಷರ ಕಿವಿ ಹಿಂಡಿರಲಿಕ್ಕೂ ಸಾಕು. ಪರಿಣಾಮ- ತಕ್ಷಣ ಪುತಿನ್​ರನ್ನು ಭೇಟಿಯಾಗಿ ಗಲ್ಲ ಬಡಿದುಕೊಳ್ಳುವ ತೀರ್ವನವನ್ನು ಟ್ರಂಪ್ ಮಾಡಿದ್ದು. ಇದೇನು ಹೇಳುತ್ತದೆ? ರಷ್ಯನ್ ಅಧ್ಯಕ್ಷರ ಜತೆ ತುರ್ತಾಗಿ ಮಾತಾಡಬೇಕಿರುವುದು ಯೂಕ್ರೇನ್ ವಿಷಯವನ್ನಲ್ಲ, ರಷ್ಯಾ- ಅಮೆರಿಕಾ ಸಂಬಂಧ ಇನ್ನಷ್ಟು ಕೆಳಗಿಳಿಯದಂತೆ ತಡೆಯುವುದು ತಮ್ಮ ಪ್ರಥಮ ಆದ್ಯತೆ ಎಂದು ಟ್ರಂಪ್ ಅರಿತರು! ಆಗಸ್ಟ್ 15ರಂದು ಆಂಕರೇಜ್​ನಲ್ಲಿ ಆದದ್ದು ಅದೇ. Trump always chickens out ಎಂಬ ಮಾತು ಇಲ್ಲೂ ನಿಜವಾಯಿತು. ಪರಿಣಾಮ ಒಳ್ಳೆಯದೇ.

ಆದರೆ ಅಲಾಸ್ಕಾ ಮಾತುಕಥೆಗಾಗಿ ಘೊಷಿತ ಅಜೆಂಡಾ ಮತ್ತು ಒಳ ಅಜೆಂಡಾಗಳ ನಡುವೆ ಸಮತೋಲನ ಕಾಪಾಡಿಕೊಳ್ಳಲು, ಜಗತ್ತನ್ನು ಏಮಾರಿಸಲು ಮಾಜಿ ರಿಯಾಲಿಟಿ ಶೋ ಆಂಕರ್ ಡೊನಾಲ್ಡ್ ಟ್ರಂಪ್ ನಡೆಸಿದ ಕಸರತ್ತು ನಗೆಪಾಟಲಿನದಾದರೂ ಆಸಕ್ತಿಕರ. ಜತೆಗೆ, ತಾವು ಎಂತಹ ನುರಿತ ರಾಜತಂತ್ರಜ್ಞ ಎನ್ನುವುದನ್ನೂ ಪುತಿನ್ ಅಲ್ಲಿ ಅಮೆರಿಕನ್ನರ ಮುಂದೆಯೇ ತೋರಿಸಿದರು. ಈ ವಿಷಯಗಳನ್ನು ಹಾಗೂ ಮೂರು ದಿನಗಳ ನಂತರ ಶ್ವೇತಭವನದಲ್ಲಿ ಟ್ರಂಪ್ ಮತ್ತು ಯೂರೋಪಿಯನ್ ನಾಯಕರ ನಡುವೆ ನಡೆದ ಮಾತುಕಥೆಗಳು ಇಂದು ಜಗತ್ತನ್ನು ಎಲ್ಲಿ ನಿಲ್ಲಿಸಿದೆ, ಅಲ್ಲಿ ಭಾರತದ ಸ್ಥಾನವೇನು ಎನ್ನುವುದನ್ನು ಮುಂದಿನವಾರ ವಿಶ್ಲೇಷಿಸೋಣ. (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net