

ನವದೆಹಲಿ: ಕಳೆದ ವಾರ ಕಾಂಗ್ರೆಸ್ ದೆಹಲಿ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅರವಿಂದರ್ ಸಿಂಗ್ ಲವ್ಲಿ ಹೊಸ ಟ್ವಿಸ್ಟ್ ನೀಡಿದ್ದಾರೆ. ಹುದ್ದೆಗೆ ರಾಜೀನಾಮೆ ನೀಡಿದ್ದೇನೆ, ಆದರೆ ಪಕ್ಷಕ್ಕೆ ಅಲ್ಲ ಎನ್ನುತ್ತಲೇ ಇತರ ನಾಲ್ವರು ಕಾಂಗ್ರೆಸ್ ನಾಯಕರೊಂದಿಗೆ ಅವರು ಭಾರತೀಯ ಜನತಾ ಪಕ್ಷ ಸೇರಿದರು.
ಬಿಜೆಪಿ ಕೇಂದ್ರ ಕಚೇರಿಯಲ್ಲಿ ಕೇಂದ್ರ ಸಚಿವ ಹಾರ್ದಿದ್ ಸಿಂಗ್ ಪುರಿ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು. ಇವರೊಂದಿಗೆ ಕಾಂಗ್ರೆಸ್ ನ ಮಾಜಿ ಶಾಸಕರಾದ ರಾಜ್ ಕುಮಾರ್ ಚೌಹಾಣ್, ನಸೀಬ್ ಸಿಂಗ್, ನೀರಜ್ ಬಸೋಯಾ ಮತ್ತು ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅಮಿತ್ ಮಲ್ಲಿಕ್ ಬಿಜೆಪಿಗೆ ಸೇರ್ಪಡೆಯಾದರು.
'INDIA' ಮೈತ್ರಿಯ ಭಾಗವಾಗಿ ಎಎಪಿ ನೊಂದಿಗೆ ಕಾಂಗ್ರೆಸ್ ಸೀಟುಗಳನ್ನು ಹಂಚಿಕೊಳ್ಳುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಲವ್ಲಿ ಕಳೆದ ವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಶಾನ್ಯ ದೆಹಲಿಯಿಂದ ಕನ್ಹಯ್ಯಾ ಕುಮಾರ್ ಮತ್ತು ವಾಯುವ್ಯ ದೆಹಲಿಯಿಂದ ಉದಿತ್ ರಾಜ್ ಅವರ ಉಮೇದುವಾರಿಕೆಯನ್ನು ಅವರು ಟೀಕಿಸಿದ್ದರು.
ಅರವಿಂದರ್ ಸಿಂಗ್ ಲವ್ಲಿ ಅವರು ಬಿಜೆಪಿ ಸೇರಿದ ನಂತರ ಮನೆಯಲ್ಲಿ ಮಾತ್ರವಲ್ಲದೆ ದೇಶಕ್ಕಾಗಿ ಮತ್ತು ದೆಹಲಿಯ ಜನರಿಗಾಗಿ ಹೋರಾಡುವಂತೆ ಜನತೆಗೆ ಕೇಳಿಕೊಂಡರು.