ಮರೆತ ಪದಗಳು ಮತ್ತೆ ಸ್ಮೃತಿಪಟಲದಲ್ಲಿ ಕೂರುವಂತಾಗಿದೆ!

ಸಸ
Published on

ಇಡ್ಲಿ-ದೋಸೆ ಹಿಟ್ಟು ರುಬ್ಬುವಾಗ, ಹಬೆಪಾತ್ರೆಯಲ್ಲಿ ಇಡ್ಲಿ ಬೇಯಿಸುವಾಗ, ಒಂದು ಬ್ಯಾಚ್ ಎನ್ನಲಿಕ್ಕೆ ಒಂದು ‘ಒಬ್ಬೆ’ ಎನ್ನುವುದಿದೆ. ಉದಾಹರಣೆಗೆ- ‘ಬೆಳಗಿನ ಉಪಾಹಾರಕ್ಕೆ ಹೆಚ್ಚು ಜನ ನೆಂಟರಿಷ್ಟರಿದ್ದರೆ ಮನೆಯೊಡತಿಯ ಮೊದಲ ಆಯ್ಕೆ ಇಡ್ಲಿ. ಒಂದೇಸಲಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಇಡ್ಲಿ ಸಿದ್ಧವಾಗುತ್ತದೆ. ಎಲ್ಲರ ತಟ್ಟೆಗೂ ಒಂದಷ್ಟನ್ನು ಬಡಿಸಿ, ತಿನ್ನುವುದರೊಳಗೆ ಇನ್ನೊಂದು ಒಬ್ಬೆ ತಯಾರಿಸಿ ಬಡಿಸಲಿಕ್ಕಾಗುತ್ತದೆ’. ಇನ್ನು ಕೆಲವರು ಊಟದ ವೇಳೆ ತಟ್ಟೆಯಲ್ಲಿ ಒಂದು ಸಲಕ್ಕೆ ಹಾಕಿಕೊಳ್ಳುವ ಅನ್ನವನ್ನೂ ಒಂದು ಒಬ್ಬೆ ಅನ್ನ ಎನ್ನುತ್ತಾರೆ. ಈ ಒಬ್ಬೆ ಎಂಬ ಪದಬಳಕೆ ಕರ್ನಾಟಕದ ಎಲ್ಲ ಕಡೆಯೂ ಇದೆಯೆನ್ನಲಾಗದು. ಪ್ರಾದೇಶಿಕವಾಗಿ ಕೆಲವರಿಗಷ್ಟೇ ಪರಿಚಿತ. ಅಲ್ಲದೇ ಅಡುಗೆ, ಊಟ, ತಿಂಡಿತಿನಸುಗಳ ಸಂದರ್ಭದ ಹೊರತಾಗಿ ಇದರ ಬಳಕೆ ಕಡಿಮೆ. ಆದ್ದರಿಂದಲೇ ಕಳೆದ ಸಲ ಬ್ಯಾಚ್ ಎಂಬ ಪದವನ್ನು ಸವಾಲಾಗಿ ಕೊಡುವಾಗ ‘ನಮ್ಮ 7ನೇ ತರಗತಿಯ ಬ್ಯಾಚ್...’ ಮುಂತಾದ ಸಂದರ್ಭಗಳಲ್ಲಿ ಒಬ್ಬೆ ಸರಿಹೋಗದೇನೋ ಎಂದಿದ್ದೆ. ಆದರೆ ಆಮೇಲೆ ಒಬ್ಬೆ ಮತ್ತು Batch ಪದಗಳ ಜಾಡು ಹಿಡಿದು ನಿಘಂಟುಗಳಲ್ಲಿ, ಆಕರಗ್ರಂಥಗಳಲ್ಲಿ ಹುಡುಕಿದಾಗ ಕೆಲವು ಸ್ವಾರಸ್ಯಕರ ವಿಚಾರಗಳು ತಿಳಿದುಬಂದುವು.

ಒಬ್ಬೆ ಪದಕ್ಕೆ ಕಿಟ್ಟೆಲ್ ಕೋಶದಲ್ಲಿ a bush, a thicket  ಎಂಬ ಅರ್ಥ ಕೊಟ್ಟಿದ್ದಾರೆ. ಅಲ್ಲಿ ಇಡ್ಲಿ-ದೋಸೆ ಸುದ್ದಿಯೇನಿಲ್ಲ. ಆದರೆ ಕನ್ನಡ ಸಾಹಿತ್ಯ ಪರಿಷತ್ತಿನ ಬೃಹತ್ ಕೋಶದಲ್ಲಿ ಒಬ್ಬೆ ಪದಕ್ಕೆ ಎರಡು ಬೇರೆಬೇರೆ ಸಂದರ್ಭಗಳ ಅರ್ಥವಿದೆ. ಮೊದಲನೆಯದು ಮುಳ್ಳುಪೊದರು, ಬೇಲಿ, ಕಾಡುಕಂಟಿಯ ಹೊದರು ಇತ್ಯಾದಿ. ಇದು ಕಿಟ್ಟೆಲ್ ಕೋಶದಲ್ಲಿರುವ ಅರ್ಥವೇ. ಎರಡನೆಯ ಸಂದರ್ಭದಲ್ಲಿ- ಒಂದು ತಂಡ, ಪಂಗಡ, ಗುಂಪು, ಒರಳಿನಲ್ಲಿ ಒಂದು ಸಲಕ್ಕೆ ಹಿಡಿಯುವಷ್ಟು ಅಳತೆ ಎಂಬ ಅರ್ಥ. ಕನ್ನಡದ ಸಾಹಿತ್ಯಕೃತಿಗಳಿಂದ ಉದಾಹರಣೆಗಳನ್ನೂ ಕೊಟ್ಟಿದ್ದಾರೆ. ಗೋವಿಂದಕವಿಯ ನಂದಿಮಾಹಾತ್ಮ್ಯಂನಲ್ಲಿ ‘ಮುಗ್ಧಪುಳಿಂದಿಯೋರ್ವಳಕ್ಕಿಯ ಛಳಿಸುತಂದು ಕಾಲಿಂದೊಬ್ಬೆಯಿಂದೊಬ್ಬೆ ನಖರೋಚಿಯಿಂದ...’ ಒನಕೆ ಹಿಡಿದು ಬತ್ತ ಕುಟ್ಟುವವರು ತಮ್ಮ ಕಾಲುಗಳಿಂದ ಸ್ವಲ್ಪಸ್ವಲ್ಪವೇ ಬತ್ತವನ್ನು ಒರಳಿನೊಳಗೆ ಹಾಕುವ ಚಿತ್ರಣ. ಚನ್ನಪ್ಪಕವಿಯ ಶರಣಲೀಲಾಮೃತದಲ್ಲಿ ‘ಒರಳೊಳಗೆ ವೊಂದೊಬ್ಬೆ ಕೆಡಿಸಿದ ಪರಿಯು ತನಗಾಯಿತ್ತಿದೆನ್ನುತ...’ ಭಾಮಿನಿ ಷಟ್ಪದಿ. ಒಬ್ಬೆಯ ಇನ್ನೊಂದು ರೂಪವಾಗಿ ಇಬ್ಬೆ ಎಂಬ ಪದ ಇದೆ, ‘ಒಂದಿಬ್ಬೆ ಕುಟ್ಟುವಾಗ ಒಬ್ಬಣ್ಣನುಣಬಂದ... ಎರಡಿಬ್ಬೆ ಮಾಡಿದರೆ ಕಡಿನುಚ್ಚು ಆದವು... ಒಂದಿಬ್ಬೆ ಮಾಡಿದರೆ ಕುರುಡಕ್ಕಿಯಾದವು...’ ಎಂದು ಸುವ್ವಿಯ ಹಾಡು ಜನಪದಗೀತೆಯ ಉದಾಹರಣೆಯನ್ನೂ ಕೊಟ್ಟಿದ್ದಾರೆ.

ಅದಷ್ಟು ಒಬ್ಬೆಯ ವಿಚಾರವಾದರೆ, batch ಪದದ ವ್ಯುತ್ಪತ್ತಿ ಹೇಗೆಂದು ಆಂಗ್ಲ ಶಬ್ದಕೋಶಗಳಲ್ಲಿ ತಿಳಿಯುತ್ತದೆ. ಇದು 15ನೆಯ ಶತಮಾನದಿಂದ ಬಳಕೆಯಲ್ಲಿರುವ ಪದ. ಹಳೆಯ ಇಂಗ್ಲಿಷ್​ನ ಚಿಚ್ಚಚ್ಞ ಮತ್ತು ಅದರಿಂದ ಬಂದ ಚಿಚkಛಿ ಪದಗಳೇ ಇದರ ಮೂಲ. ಬ್ರೆಡ್ ಮತ್ತಿತರ ಆಹಾರವನ್ನು ಒಂದೊಂದೇ ಬ್ಯಾಚ್​ನಂತೆ ಬೇಯಿಸುವ ಪ್ರಕ್ರಿಯೆ. Batch is to bake as watch is to wake and match is to make ಅಂತೊಂದು ಪ್ರಾಸಬದ್ಧ ವಿವರಣೆಯೂ ಇದೆ. ಅಂತೂ ಇಂಗ್ಲಿಷ್​ನಲ್ಲೂ batch ಅನ್ನೋದು ಮೂಲತಃ ಆಹಾರ ತಯಾರಿಕೆಯ ಸಂದರ್ಭದ್ದೇ! ಆಮೇಲೆ ಅರ್ಥವಿಸ್ತರವಾಗಿ"any quantity produced at one operation' ಎಂದಾದದ್ದು. ‘ನಮ್ಮ 7ನೇ ತರಗತಿಯ ಬ್ಯಾಚ್’ ಎನ್ನುವಾಗ 7ನೇ ತರಗತಿಯಲ್ಲಿ ಒಟ್ಟಿಗೇ ಬೆಂದು ಬಂದವರು ಎಂದು ಅರ್ಥೈಸಿದರೆ ಸರಿಯೇ ಇದೆ! ಇನ್ನೂ ಆಳಕ್ಕಿಳಿದರೆ, bake ಕ್ರಿಯಾಪದ ಸಹ ಬೆಂಕಿಯಲ್ಲಿ ಕಾಯಿಸುವ, ಹಬೆಯಲ್ಲಿ ಬೇಯಿಸುವ ಎಂಬರ್ಥದಲ್ಲಿ ಹಳೆಯ ಐರೋಪ್ಯ ಭಾಷೆಗಳಲ್ಲಿದ್ದ bheg ಪದದಿಂದ ಬಂದದ್ದಂತೆ. ಇದು ಸಂಸ್ಕೃತ ಭಾಷೆಯಲ್ಲಿ ಅದೇ ಅರ್ಥದಲ್ಲಿರುವ ‘ಭೃಜ್’ ಧಾತುವಿಗೆ ಎಷ್ಟು ಸನ್ನಿಹಿತವಾಗಿದೆ ಎಂದು ಗಮನಿಸಿದರೆ ಅತ್ಯಾಶ್ಚರ್ಯವಾಗುತ್ತದೆ!

ಒಟ್ಟಿನಲ್ಲಿ batch ಪದಕ್ಕೆ ಸಂವಾದಿಯಾಗಿ ‘ಒಬ್ಬೆ’ಯನ್ನು ಧಾರಾಳವಾಗಿ ಬಳಸಬಹುದು. ಹಾಸನದಿಂದ ಶಾಂತಿನಿ ಮಂಜುನಾಥ್, ಶಿವಮೊಗ್ಗದಿಂದ ಶ್ರೀಹರ್ಷ ಕೆ.ಎ, ಭದ್ರಾವತಿಯಿಂದ ಜ್ಯೋತಿಮಧು ಅದನ್ನೇ ತಮ್ಮ ಪ್ರಥಮ ಆಯ್ಕೆಯೆಂದು ಸೂಚಿಸಿದ್ದಾರೆ. Batch ಅಂದರೆ ಒಂದೇ ಉದ್ದೇಶ ಹೊಂದಿದ, ಒಂದೇಕಡೆ ಒಂದೇಕಾಲಕ್ಕೆ ಇರುವ ವ್ಯಕ್ತಿಗಳ/ವಸ್ತುಗಳ ಸಮೂಹ. ಅದನ್ನು ‘ಒಗ್ಗಡ’ ಎನ್ನಬಹುದೆಂದವರು: ಸೀತಾ ವ್ಯಾಸಮುದ್ರಿ, ರಾಜೇಂದ್ರ ಶಿವಬಸಪ್ಪ, ಸೀಮಾ ಎಚ್.ಎಸ್, ಬೃಂದಾ ದತ್ತ, ರೇಣುಕಾ ಪ್ರಕಾಶ್, ಷಡಕ್ಷರಮುನಿ ಸ್ವಾಮೀಜಿ, ಮನೋನ್ಮಣಿ ಕೆ.ವಿ, ಶ್ರೀಲತಾ ಮೈಸೂರು, ಕಿರಣಕುಮಾರ್ ಎಚ್.ಎ, ಅಲಿಮುಲ್ಲಾ ಖಾನ್, ವಿ.ವಿಜಯೇಂದ್ರ ರಾವ್, ನಾ.ಗುರುದತ್ತ, ರಾಮಚಂದ್ರ ಬಡಗಬೆಟ್ಟು. ಒಗ್ಗಡ ಪದ ಸಹ ನಿಘಂಟುಗಳಲ್ಲಿದೆ. ‘ಒಗ್ಗಡಮೆನಲ್ಕೆ ಸಮೂಹಂ’ ಎಂದು ಕರ್ಣಾಟಕ ಶಬ್ದರತ್ನಾಕರದಲ್ಲಿ ವಿವರಣೆ. ಇನ್ನು ‘ತಂಡ’ ಪದವನ್ನು ಸೂಚಿಸುತ್ತ 100ಕ್ಕೂ ಹೆಚ್ಚು ಪ್ರವೇಶಿಕೆಗಳು ಬಂದಿವೆ. ಆದರೆ ತಂಡ team ಎಂಬರ್ಥ ಕೊಡುತ್ತದೆಯೇ ಹೊರತು batch ಅಲ್ಲ. ಒಂದಾದ ಬಳಿಕ ಇನ್ನೊಂದು ಎಂಬ ನಿರಂತರತೆಯ ಭಾವ ಅದರಲ್ಲಿಲ್ಲ.

ಕಳೆದಸಲ ಕೇಳಿದ್ದ ಎರಡನೆಯ ಪದ passion. ಇಂಗ್ಲಿಷ್​ನಲ್ಲಿ ಇದರದ್ದೂ ರೋಚಕ ಕಥೆಯಿದೆ. ಯೇಸುಕ್ರಿಸ್ತನನ್ನು ಶಿಲುಬೆಗೆ ಏರಿಸಿದಾಗ ಆತ ಸೈರಿಸಿಕೊಂಡ ಯಾತನೆ ಅಥವಾ ನೋವು ಈ ಪದದ ಮೂಲ ಅರ್ಥ. ಲ್ಯಾಟಿನ್ ಭಾಷೆಯ pati ಮೂಲಧಾತು. ಬಾಹ್ಯಶಕ್ತಿ, ಒತ್ತಡಗಳನ್ನು ತಡೆದುಕೊಳ್ಳುವ ಸಾಮರ್ಥ್ಯ. ನಮಗೆ ಪರಿಚಿತ ಗಡಿಯಾರ ಹೂವನ್ನು ಇಂಗ್ಲಿಷ್​ನಲ್ಲಿ passion flower ಎನ್ನುತ್ತಾರೆ, ಆ ಗಿಡದಲ್ಲಾಗುವ ಹಣ್ಣನ್ನು passion fruit ಎನ್ನುತ್ತಾರೆ. ಹೂವಿಗೆ ಆ ಹೆಸರು ಬರುವುದಕ್ಕೂ ಕ್ರಿಸ್ತನನ್ನು ಶಿಲುಬೆಗೇರಿಸಿದ್ದರ ಚಿತ್ರಣವೇ ಕಾರಣ. ಹೂವಿನ ಭಾಗಗಳು ಮೊಳೆಗಳಂತೆ, ಕಿರೀಟದ ಮುಳ್ಳುಗಳಂತೆ, ಐದು ದಳಗಳು ಮತ್ತು ಐದು ಪುಷ್ಪಪಾತ್ರಗಳು ಯೇಸುವಿನ ಹತ್ತು ಶಿಷ್ಯಂದಿರು ಎಂಬ ಭಾವನೆ (ಪೀಟರ್ ಮತ್ತು ಜುಡಾಸ್​ನ ಗಣನೆಯಿಲ್ಲ). ಕ್ರಮೇಣ ಇಂಗ್ಲಿಷ್​ನಲ್ಲಿ passion ಪದ ನೋವು ಅಥವಾ ಯಾತನೆಗಷ್ಟೇ ಅಲ್ಲದೆ ಉತ್ಸಾಹ, ಸಂತೋಷ, ಆಕ್ರೋಶ ಮುಂತಾದ ಭಾವನೆಗಳಿಗೂ ಅನ್ವಯವಾಯಿತು. ಯಾತನೆ ಕಹಿಯೇ ಆಗಬೇಕೆಂದಿಲ್ಲ ಸಿಹಿಯೂ ಆಗಬಹುದಲ್ಲವೇ? ‘ಮುಂಗಾರುಮಳೆ’ ಹಾಡಿನಲ್ಲಿ ಜಯಂತ ಕಾಯ್ಕಿಣಿ ‘ಆಹಾ ಎಂಥ ಮಧುರ ಯಾತನೆ!’ ಎಂದಿದ್ದಾರಲ್ಲ!

ಎಲ್ಲ ಥರದ ಭಾವಗಳಿಗೂ ಅನ್ವಯವಾಗುವುದರಿಂದ passionಎಂದರೆ ‘ಭಾವೋದ್ರೇಕ’ ಎನ್ನಬಹುದು. ಈ ಪದವನ್ನು ಸೂಚಿಸಿದವರು ಶಾಂತಿನಿ ಮಂಜುನಾಥ್, ಜ್ಯೋತಿಮಧು, ರೇಣುಕಾ ಪ್ರಕಾಶ್, ನಾ.ಗುರುದತ್ತ, ಅಪ್ಪುಮುತ್ಯ. ‘ಭಾವೋದ್ವೇಗ’ (ವಿಲಾಸಿನಿ ಭಟ್) ಮತ್ತು ‘ಭಾವೋನ್ಮಾದ’ (ಸುಧೀರ ಟಂಕಸಾಲಿ) ಸಹ ಅದೇ ಧಾಟಿಯವು. ಪ್ರೀತಿ ಎಂದಷ್ಟೇ ಅಲ್ಲದೆ ಗಾಢವಾದ ಆಸಕ್ತಿ ಎಂಬರ್ಥವೂ ಇರುವುದರಿಂದ ‘ಅನುರಾಗ’ (ಪಿ.ಜೆ.ರಾಘವೇಂದ್ರ, ಗುರುಮೂರ್ತಿ ಕುಲಕರ್ಣಿ, ಸುರೇಂದ್ರ ಪೈ, ಯಮನಪ್ಪ ಕೊಟ್ನಿಕಲ್, ಡಾ.ಎಂ.ಬಿ ಗಣಪತಿ, ರಾಜೇಂದ್ರ ಕಳಸಣ್ಣವರ, ಷಡಕ್ಷರಮುನಿ ಸ್ವಾಮೀಜಿ, ಸ್ನೇಹಾ ಬಸಮ್ಮ, ಭ.ನಿಂ.ಗೋಪಿನಾಥ್) ಮತ್ತು ‘ಅನುರಕ್ತಿ’ (ನಿತ್ಯಾನಂದ ಬ್ರಹ್ಮಾವರ, ಗಿರೀಶ ಎ.ವಿ); ಹಂಬಲ ಅಥವಾ ಉತ್ಕಟವಾದ ಬಯಕೆ ಎಂಬರ್ಥದ ಅಚ್ಚಕನ್ನಡ ಪದ ‘ಗೀಳು’ (ಸುಬ್ಬಣ್ಣ ಎನ್.ಕೆ, ಲಕ್ಷ್ಮಣ ಶೆಟ್ಟಿ, ದತ್ತಾತ್ರಿ ಸಾಮಗ, ಜ್ಯೋತಿ ಕೃಷ್ಣ, ಶಿವಶಂಕರ ಪ್ರಭು, ಬದರೀನಾಥ ಇಬ್ರಾಂಪುರ, ವಿದ್ಯಾಶಂಕರ ಶರ್ಮ, ಉಮಾ ಮತ್ತೂರು, ಜಿ.ಎಚ್.ಸಂಕಪ್ಪ, ಬೊ.ನಾ.ಕೃಷ್ಣಮೂರ್ತಿ, ನಳಿನಿ ಭಟ್, ರಾಮಾನುಜ ರಾಮನಾಥಪುರ) ಕೂಡ ಸೂಕ್ತವೆನಿಸುತ್ತವೆ. ಬೃಂದಾ ದತ್ತ ಅವರು ಸೂಚಿಸಿದ ‘ಮಸಕ’ ಸಹ ಗಮನಾರ್ಹ. ಹೆಚ್ಚಳ, ರಭಸ, ವೇಗ, ಅಬ್ಬರ, ಉತ್ಸಾಹ, ತಳಮಳ, ಸಿಟ್ಟು, ರೋಷ ಮುಂತಾದ ಅರ್ಥಗಳು ಇದರಲ್ಲಿವೆ. ‘ಆನು ಭಕ್ತನೆಂಬ ಹುಸಿಯ ಮಸಕವನೇನ ಬಣ್ಣಿಸುವೆನಯ್ಯಾ?’ ಎಂದು ಬಸವಣ್ಣನವರ ವಚನದಲ್ಲಿದೆ.

ಕೊನೆಯದಾಗಿ trend ಎಂಬ ಪದ. ಮೂಲತಃ to run or bend in a certain direction (of rivers, coasts etc.) ಎಂಬರ್ಥದಲ್ಲಿ ಹುಟ್ಟಿದ ಪದ. ಸುತ್ತುವುದು, ಉರುಳುವುದು ಎಂಬರ್ಥದ ಹಳೇ ಇಂಗ್ಲಿಷ್​ನ trendan ಪದಮೂಲ. ಇಂಗ್ಲಿಷ್​ನಲ್ಲಿ ಕ್ರಿಯಾಪದವಲ್ಲದೆ ನಾಮಪದವಾಗಿಯೂ ಬಳಕೆ. ಆ ದೃಷ್ಟಿಯಿಂದ ಸಂಸ್ಕೃತದ ‘ಪ್ರಚಲಿತ’ ಹೆಚ್ಚು ಸೂಕ್ತವೆನಿಸುತ್ತದೆ. ಸೂಚಿಸಿದವರು: ಸತೀಶ ಕಬೆಕೋಡಿ, ನರೇಂದ್ರನಾಥ ಎಚ್.ಎಂ, ದಾಮೋದರ ಭಟ್, ವಿದ್ಯಾಶಂಕರ ಶರ್ಮ, ಸುಕನ್ಯಾ ಎಂ, ಬದರೀನಾಥ ಇಬ್ರಾಂಪುರ, ಪಿ.ಜೆ.ರಾಘವೇಂದ್ರ, ವಿಲಾಸಿನಿ ಭಟ್, ಜಗದಂಬಾ ಬೆಂಗಳೂರು, ಧೀರೇಂದ್ರ ಬೀಳಗಿ. ಮರಾಠಿಯಿಂದ ಬಂದಿರುವ ‘ಚಾಲ್ತಿ’ ಆಗಬಹುದೆನ್ನುವವರು: ಸುಬ್ಬಣ್ಣ ಎನ್.ಕೆ, ಗೀತಾ ಗುರುಸ್ವಾಮಿ, ಎನ್.ಎಸ್. ಚಿದಂಬರ, ಸಂತೋಷ ಸಗರೆ, ಅಶ್ವಿನಿ ರಾಮಸ್ವಾಮಿ, ಜ್ಯೋತಿ ಕೃಷ್ಣ, ನಿತೀನ ಮೆಣಸಿನಕಾಯಿ, ಶಶಿಕಲಾ ಮೈಸೂರು. ಸಂಸ್ಕೃತದಿಂದ ಬಂದಿರುವ ‘ಪ್ರವೃತ್ತಿ’ ಸೂಚಿಸಿದವರು: ಪ್ರಭುಪ್ರಸಾದ ನಡುತೋಟ, ರಂಗನಾಥ ಟಿ.ಕೆ, ಎನ್.ವಿ ಶಂಕರ್, ಪ್ರಭಾವತಿ ಬೆಂಗಳೂರು, ಆನಂದರಾಮ ಮಡಿ, ಕೃಪಾ ಗೋಖಲೆ, ಡಾ.ಸಂಗಮೇಶ ಸುರಭಿ, ಯಮನಪ್ಪ ಕೊಟ್ನಿಕಲ್, ಸುಮಾ ಎಸ್ ರಾವ್, ಕಿರಣ್ ವೆಂಕಟೇಶ್, ಸುನೀಲ್ ಪಾಟೀಲ್, ಕಾಡೇಶ ವಿ.ಬಿ, ಪದ್ಮಜಾ ಕೌಲಗಿ, ಪಾರ್ವತಿ ರಾಮನ್, ಭ.ನಿಂ.ಗೋಪಿನಾಥ್, ಮಂಜುನಾಥ ಡಿ.ಎಸ್, ವಿ.ವಿಜಯೇಂದ್ರ ರಾವ್, ಸೀತಾರಾಮ ರಾವ್, ಜಿ.ನಾರಾಯಣ ರಾವ್, ಎಂ.ಕೆ.ರಮೇಶ್, ಗಿರೀಶ ಎ.ವಿ, ಮನೋನ್ಮಣಿ ಕೆ.ವಿ, ಅಲಿಮುಲ್ಲಾ ಖಾನ್, ದತ್ತಾತ್ರಿ ಸಾಮಗ, ಡಾ.ಎಂ.ಬಿ ಗಣಪತಿ, ಶಿವಕುಮಾರ್ ಸಿಂಗಟಗೆರೆ ಮುಂತಾದವರು.

‘ಕಟ್ಟುವೆವು ನಾವು ಕನ್ನಡದ ಪದವೊಂದನು’ ಅಂಕಣದಲ್ಲಿ ಚರ್ಚೆಯಾದ, ಆಯ್ಕೆಯಾದ ಪದಗಳೇ ಅಂತಿಮವೆಂದೇ? ಮರುದಿನದಿಂದಲೇ ಬಳಕೆ ಆರಂಭವಾಗಬೇಕೆಂದೇ? ಖಂಡಿತ ಅಲ್ಲ. ಜನರು ಈ ಪದಗಳನ್ನು ಬಳಸಲಾರಂಭಿಸಿದರೆ ಸಂತೋಷವೇ. ಇಲ್ಲಿ ಮುಖ್ಯ ಉದ್ದೇಶ ನಮ್ಮ ಕನ್ನಡ ಸಂಭಾಷಣೆ, ಬರವಣಿಗೆಗಳಲ್ಲಿ ಮಿತಿಮೀರಿರುವ ಆಂಗ್ಲ ಪದಬಳಕೆಯನ್ನು ಕಡಿಮೆ ಮಾಡುವುದು. ಕನ್ನಡ ಅಥವಾ ದೇಸಿ ಪರ್ಯಾಯಗಳನ್ನು ಹುಡುಕುವಂತೆ ಮಾಡುವುದು. ಓದುಗ ಸುರೇಂದ್ರ ಪೈ ಹೀಗೆನ್ನುತ್ತಾರೆ: ‘ಈ ಅಂಕಣ ಕುತೂಹಲ ಹೆಚ್ಚಿಸುತ್ತಿದೆ. ಸೂಚಿಸುವ ಆಂಗ್ಲಪದಗಳಿಗೆ ತಕ್ಕುದಾದ ಕನ್ನಡ ಪದ ಹುಡುಕುವುದೇ ಒಂದು ವಿಶೇಷ ಅನುಭವ ನೀಡುತ್ತಿದೆ. ಪದ ಹುಡುಕಲು ಹಲವು ಆಕರಗ್ರಂಥಗಳನ್ನು ಪರಿಶೀಲಿಸುವ ಅಭ್ಯಾಸ ಜಾಗೃತವಾಗಿದೆ. ಪದ ಹುಡುಕುವಾಗ ಹಲವು ಬೇರೆಬೇರೆ ಪದಗಳು ಕಣ್ಣಮುಂದೆ ಹಾದುಹೋಗಿ, ಮರೆತ ಹಲವು ಪದಗಳು ಮತ್ತೆ ಸ್ಮೃತಿಪಟಲದಲ್ಲಿ ಕೂರುವಂತಾಗಿದೆ. ನಿತ್ಯಜೀವನದಿಂದ ಕಾಣೆಯಾಗುತ್ತಿರುವ ಒಂದೊಂದೇ ಪದಗಳನ್ನು ಈ ಕಾರಣದಿಂದ ಮತ್ತೆ ಬಳಸುವಂತಾಗಿದೆ. ಈ ವಾರ ಸೂಚಿಸಿದ ಪದಗಳು ಸರಿಯಾಗಿವೆಯೇ, ಸೂಕ್ತವಿವೆಯೇ ಎಂಬುದನ್ನು ಮುಂದಿನ ಸಂಚಿಕೆಯ ತನಕ ಕಾದು ಕುತೂಹಲದಿಂದ ಓದುವ ಸುಖ ಹೇಳತೀರದು. ಒಬ್ಬ ಶಿಕ್ಷಕನಾಗಿ ನಾನು ಈ ಅಂಕಣದ ಶೈಲಿಯನ್ನು, ವಿಷಯಪ್ರಸ್ತುತಿ ವಿಧಾನವನ್ನು ಇಷ್ಟಪಡುತ್ತೇನೆ. ಯಾವುದೋ ಒಂದು ಆಂಗ್ಲಪದಕ್ಕೆ ಏನೋ ಒಂದು ಕನ್ನಡ ಪದ ಹೇಳಿ ಸುಮ್ಮನಾಗುವುದಿಲ್ಲ. ಬದಲಾಗಿ ಪೂರಕವಾದ ಒಂದಿಷ್ಟು ಅಧ್ಯಯನಯೋಗ್ಯ, ನಾವೆಲ್ಲ ತಿಳಿಯಬೇಕಾದ ಮಾಹಿತಿಯನ್ನೂ ಒದಗಿಸುವುದರಿಂದ ಸೂಚಿಸಿದ ಕನ್ನಡ ಪದದ ಬಗ್ಗೆ ಓದುಗರಲ್ಲಿ ಒಂದು ಪೂರ್ಣ ಚಿತ್ರಣ ದೊರಕುತ್ತದೆ’.

ಈ ವಾರದ ಮೂರು ಪದಗಳು

1. Drone: ಇತ್ತೀಚಿನ ದಿನಗಳಲ್ಲಿ ಬಹಳವಾಗಿ ಕೇಳಿಬಂದಿರುವ ಪದ. ಕನ್ನಡದಲ್ಲಿ ಏನನ್ನೋಣ?

2.Level Crossing: ರೈಲುದಾರಿ ಮತ್ತು ರಸ್ತೆಗಳು ಅಡ್ಡ ಹಾಯುವ ಸ್ಥಳ ಎಂಬ ವಿವರಣೆಗೆ ಸೂಕ್ತವಾದೊಂದು ಪದ ಬೇಕು.

3. Toss: ಐಪಿಎಲ್ ಕ್ರಿಕೆಟ್ ಪಂದ್ಯಾವಳಿ ಪುನರಾರಂಭವಾಗಲಿದೆ. ಟಾಸ್ ಗೆದ್ದವರಾರು ಎನ್ನುವಾಗ ಕನ್ನಡದಲ್ಲೇ ಕೇಳಲಿಕ್ಕಾಗದೇ?

ಓದುಗರು ಪ್ರತಿಯೊಂದು ಆಂಗ್ಲ ಪದಕ್ಕೆ ತಲಾ ಒಂದರಂತೆ ಕನ್ನಡ ಪದ ತಿಳಿಸಬೇಕು. ತಮ್ಮ ಹೆಸರು ಮತ್ತು ಊರಿನ ಹೆಸರನ್ನೂ ಬರೆಯಬೇಕು. ಪದಗಳನ್ನು ಕಳುಹಿಸಲಿಕ್ಕೆ ಗಡುವು: ಮುಂದಿನ ಶನಿವಾರ ಸಂಜೆ 6 ಗಂಟೆಯೊಳಗೆ. ವಾಟ್ಸ್​ಆಪ್ ಸಂಖ್ಯೆ: +12404010945

(ಲೇಖಕರು ಅಮೆರಿಕದಲ್ಲಿ ಸಾಫ್ಟ್​ವೇರ್ ಇಂಜಿನಿಯರ್

ಮತ್ತು ಅಂಕಣ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net