ಸದಾಕಾಲದ ಜೊತೆಗಾರ

untitled-design-4-68890be3cb912
Published on
| ಚಿದಂಬರ ಮುನವಳ್ಳಿ

ನಮ್ಮಲ್ಲಿ ಜಾವಳ, ಮುಂಜ್ವಿ ಇತ್ಯಾದಿ ಸಂಸ್ಕಾರಗಳಿರುವಂತೆ ಆಫ್ರಿಕಾದ ಚೆರೋಕಿ ಎಂಬ ಜನಾಂಗದಲ್ಲಿ ಒಂದು ಸಂಪ್ರದಾಯ ಇದೆ. ಅಲ್ಲಿ ಬಾಲಕನು ಕೌಮಾರ್ಯ ಅವಸ್ಥೆಯಿಂದ ಯವ್ವನ ಅವಸ್ಥೆಗೆ ಕಾಲಿಡುವಾಗ ಅಂದರೆ ಸುಮಾರು 15ನೇ ವಯಸ್ಸಿನಲ್ಲಿ ಅವನು ಸದೃಢನಾಗಿರುವನೋ ಇಲ್ಲವೋ ಎಂದು ಪರೀಕ್ಷಿಸಲು ವಿಧಾನವೊಂದನ್ನು ಅನುಸರಿಸುತ್ತಾರೆ.

ಹುಡುಗನ ತಂದೆ ಒಂದು ದಿನ ಸಂಜೆಯ ಹೊತ್ತಿಗೆ ಅವನ ಕಣ್ಣಿಗೆ ಬಟ್ಟೆ ಕಟ್ಟಿ ದಟ್ಟವಾದ ಕಾಡಿನಲ್ಲಿ ಕರೆದುಕೊಂಡು ಹೋಗಿ ದೊಡ್ಡ ಕಲ್ಲುಬಂಡೆ ಅಥವಾ ಹಳೆಯ ಮರದ ಬೊಡ್ಡೆಯ ಮೇಲೆ ಕೂಡ್ರಿಸಿ ಹೇಳುತ್ತಾನೆ- ‘ನೀನು ರಾತ್ರಿಯಿಡೀ ಇಲ್ಲಿ ಒಬ್ಬನೇ ಇರಬೇಕು. ನಮ್ಮ ಜನಾಂಗದ ನಿಯಮದ ಪ್ರಕಾರ ಎಂಥ ಪರಿಸ್ಥಿತಿಯಲ್ಲೂ ನೀನು ಅಳುವಂತಿಲ್ಲ, ಯಾರ ಸಹಾಯ ಕೇಳುವಂತಿಲ್ಲ, ಕಣ್ಣಿನ ಬಟ್ಟೆ ಬಿಚ್ಚುವಂತಿಲ್ಲ, ಓಡಿ ಹೋಗುವ ಮಾತೇ ಇಲ್ಲ’. ಆ ಗಾಡಾಂಧಕಾರದಲ್ಲಿ ಸುಂಯಗುಡುವ ಗಾಳಿ, ಗೂಬೆ ರಣಹದ್ದುಗಳ ಶಬ್ದ, ಕಾಡುಮೃಗಗಳ ಗರ್ಜನೆ ಎಲ್ಲವೂ ಕೇಳಿಸುತ್ತಿದ್ದರೆ ಹೇಗಿರಬಹುದು ಆ ಹುಡುಗನ ಮನಸ್ಥಿತಿ? ಆದರೆ ಯಾವುದಕ್ಕೂ ಅಂಜದೆ ನಿರ್ಭೀತನಾಗಿರಬೇಕೆಂಬ ಷರತ್ತು ಪಾಲಿಸಲೇಬೇಕು.

ರಾತ್ರಿ ಕಳೆದು ಬೆಳಗಾದ ಮೇಲೆ ಅವನನ್ನು ಊರಿಗೆ ಕರೆತಂದು ಸಮಾಜದ ಹಿರಿಯರ ಮುಂದೆ ನಿಲ್ಲಿಸಿ ಕಣ್ಣಿನ ಪಟ್ಟಿ ತೆಗೆದು ಸನ್ಮಾನಿಸಲಾಗುತ್ತದೆ. ಅವನ ಅನುಭವ ಕೇಳಲಾಗುತ್ತದೆ. ಆಗ ವಯಸ್ಸಾದ ವೃದ್ಧನೊಬ್ಬ ಹೇಳುತ್ತಾನೆ- ‘ಮಗೂ ನಾವು ನಿನ್ನನ್ನು ಎಂಥ ಅಪಾಯಕ್ಕೆ ನೂಕಿದ್ದೆವು ಎಂದು ನಿನಗೆ ಎನಿಸಿರಬಹುದು. ವಾಸ್ತವವಾಗಿ ಹಾಗಿಲ್ಲ. ನಿನ್ನ ತಂದೆ ರಾತ್ರಿಯಿಡೀ ನಿನ್ನ ಹತ್ತಿರವೇ ಆಯುಧ ಹಿಡಿದುಕೊಂಡು ಮೌನದಿಂದ ನಿನ್ನ ರಕ್ಷಣೆಗೆ ನಿಂತಿದ್ದರು. ಒಂದು ಕ್ಷಣವೂ ನಿನ್ನನ್ನು ಬಿಟ್ಟಿರಲಿಲ್ಲ, ನಾವೂ ದೂರದಿಂದ ನೋಡುತ್ತಿದ್ದೆವು. ಆದರೆ ನಿನ್ನ ಸುತ್ತ ನಾವಿದ್ದ ಈ ರಹಸ್ಯವನ್ನು ನೀನು ಯಾವ ಹೊಸ ಹುಡುಗರಿಗೂ ಹೇಳತಕ್ಕದ್ದಲ್ಲ. ಗೌಪ್ಯತೆ ಇರಲಿ. ನಮ್ಮ ಯುವಕರೆಲ್ಲ ಆತ್ಮಸ್ಥೈರ್ಯ ತುಂಬುವ ಈ ಕಠಿಣ ಪರೀಕ್ಷೆಗೆ ಒಳಪಟ್ಟು ತೇರ್ಗಡೆಯಾಗಬೇಕು’.

ಜೀವನದಲ್ಲಿ ಸೋಲು, ನಿಂದೆ, ದುಃಖ, ಹಾನಿ ಮುಂತಾದ ವೇದನೆಗಳನ್ನು ಅನುಭವಿಸುವಾಗ ದೇವರು ನಮಗೆ ಎಂಥ ಶಿಕ್ಷೆ ಕೊಟ್ಟಿದ್ದಾನೆ ಎನಿಸುತ್ತದೆ. ಆದರೆ ಆ ವಿಪರೀತ ಪರಿಸ್ಥಿತಿ ಎದುರಿಸಿ ಗೆದ್ದಾಗ ಕಣ್ಣಿನ ಪೊರೆ ಕಳಚಿ ನನ್ನ ಪ್ರಭು ಯಾವಾಗಲೂ ನನ್ನ ಜೊತೆ ಇದ್ದು ಹೇಗೆ ಸಂರಕ್ಷಿಸಿದ ಎಂಬುದು ವೇದ್ಯವಾಗುತ್ತದೆ. ಛಾಂದೋಗ್ಯ ಉಪನಿಷತ್ತಿನಲ್ಲಿ ಮೂರು ಮಹಾವಾಕ್ಯಗಳಿವೆ. ಅಕ್ಷಿತಮಸಿ: ‘ನೀನು ಅಕ್ಷಯರೂಪನಾಗಿರುವೆ. ನಿನ್ನ ಹತ್ತಿರ ಎಲ್ಲವೂ ಇದೆ.

ಅದನ್ನು ಹುಡುಕಿ ಹೊರತೆಗೆದು ಯಶಸ್ವಿಯಾಗು’. ಅಚ್ಯುತಮಸಿ: ‘ಗರಿಕೆಯ ಹುಲ್ಲಿನ ಬೇರಿನಂತೆ ಅಚಲವಾಗಿರು. ಎಂಥ ಮಳೆ ಗಾಳಿಯೂ ನಿನ್ನನ್ನು ಅಲುಗಾಡಿಸಲಾಗದು. ಕಾಲ್ತುಳಿತಕ್ಕೊಳಗಾದರೂ ಬೆಳೆಯುತ್ತಲೇ ಇರುವೆ’. ಪ್ರಾಣಸಂಸ್ಮಿತಮಸಿ: ‘ಮೃತ್ಯುವಿನ ಭಯ ದೂರವಾಗಲು, ಈ ಶರೀರವೇ ನಾನೆಂಬ ಭ್ರಾಂತಿಯಿಂದ ಹೊರಗೆ ಬಾ. ನೀನು ಅನಂತಕಾಲದವರೆಗೆ ಇರುವ ಆತ್ಮನಾಗಿರುವೆ’. ಮುನ್ನುಗ್ಗಲು ಇರಬೇಕಾದ ಇಂಥ ಅಪೂರ್ವ ಜ್ಞಾನ ಎಲ್ಲಿ ಸಿಕ್ಕೀತು?

(ಲೇಖಕರು ನಿವೃತ್ತ ಬ್ಯಾಂಕ್ ಅಧಿಕಾರಿ, ಹವ್ಯಾಸಿ ಬರಹಗಾರರು) (ಪ್ರತಿಕ್ರಿಯಿಸಿ: manollasavv@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net