ಉತ್ಪಾದನೆ ಹೆಚ್ಚಿಸಲು ಗಮನ ನೀಡಿ

Production
Published on

ಟಿಕ್​ಟಾಕ್ ಸೇರಿ ಚೀನಾ ಮೂಲದ 59 ಆಪ್​ಗಳನ್ನು ಕೇಂದ್ರ ಸರ್ಕಾರ ನಿಷೇಧ ಮಾಡಿರುವುದು ಒಳ್ಳೆಯ ನಿರ್ಧಾರ. ಆದರೆ ಸಣ್ಣ ಪಿನ್ನಿನಿಂದ ಹಿಡಿದು ಬಾಳಿಕೆ ಬರದ ಮೊಬೈಲ್ ಬಿಡಿಭಾಗಗಳು, ಹಾನಿಕಾರಕ ಪ್ಲಾಸ್ಟಿಕ್ ಆಟಿಕೆಗಳು, ಗೃಹಬಳಕೆ ವಸ್ತುಗಳು, ಪಟಾಕಿಯವರೆಗೆ ನೂರಾರು ಸಾಮಗ್ರಿಗಳನ್ನು ನಮ್ಮ ದೇಶ ಚೀನಾದಿಂದ ಆಮದು ಮಾಡಿಕೊಳ್ಳುತ್ತಿದೆ. ಇವೆಲ್ಲವುಗಳನ್ನು ಒಮ್ಮೆಲೇ ನಿಷೇಧಿಸುವುದು ಕಷ್ಟ. ಆದರೆ ಈ ಹಿಂದೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಗ್ಯಾಸ್ ಸಬ್ಸಿಡಿ ತ್ಯಜಿಸಲು ಮತ್ತು ಸ್ವಚ್ಛ ಭಾರತ ಅಭಿಯಾನದ ಜಾರಿಗಾಗಿ ಜನತೆಯಲ್ಲಿ ಮನವಿ ಮಾಡಿದಾಗ ಅದನ್ನು ಜನರು ಸವಾಲಿನ ರೀತಿಯಲ್ಲಿ ತೆಗೆದುಕೊಂಡು ನೆರವೇರಿಸಿದ್ದಾರೆ.

ಪ್ರಸಕ್ತ ಅದೇ ರೀತಿ ಚೀನಾದಿಂದ ಆಮದಾಗುವ ಎಲ್ಲ ಉತ್ಪನ್ನಗಳ ಪಟ್ಟಿ ಮಾಡಿ, ಆಯಾ ರಾಜ್ಯ ಒಂದು ವರ್ಷದೊಳಗೆ ಇಂತಿಷ್ಟು ವಸ್ತುಗಳನ್ನು ಉತ್ಪಾದಿಸುವ ಶಕ್ತಿ ಪಡೆಯಬೇಕೆಂದು ರಾಜ್ಯಗಳಿಗೆ ಮತ್ತು ಉದ್ಯಮಿಗಳಿಗೆ ಗುರಿ ನೀಡಬೇಕಿದೆ. ಮುಂದಿನ ವರ್ಷದೊಳಗೆ ಚೀನಾ ಸರಬರಾಜು ಮಾಡುವ ವಸ್ತುಗಳನ್ನು ಅದಕ್ಕಿಂತ ಕಡಿಮೆ ಬೆಲೆಗೆ ಇಡೀ ಜಗತ್ತಿಗೆ ಭಾರತ ಸರಬರಾಜು ಮಾಡುವಂತಾಗಬೇಕು. ಇದರಿಂದ ಆರ್ಥಿಕ ಅಭಿವೃದ್ಧಿಯೂ ಆಗುತ್ತದೆ. ಆತ್ಮನಿರ್ಭರ ಭಾರತದ ಕನಸೂ ಸಾಕಾಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಮತ್ತು ನಾವೆಲ್ಲರೂ ಕಾರ್ಯೂೕನ್ಮುಖರಾಗಬೇಕಿದೆ.

| ಎಸ್. ನಾಗರಾಜ ನಾಗೂರ ಬಾಗಲಕೋಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net