ಮೀನುಗಾರರ ಬದುಕಿಗೆ ಬೇಕಿದೆ ಆಧಾರ: ಜನಮತ

Janamatha1
Published on

ವಿಶ್ವದಲ್ಲೇ ಮೀನುಗಾರಿಕೆಯಲ್ಲಿ ಭಾರತಕ್ಕೆ ಎರಡನೇ ಸ್ಥಾನ. ದೇಶದಲ್ಲಿ ಕರ್ನಾಟಕ ಏಳನೇ ಸ್ಥಾನ ಪಡೆದಿದೆ. ಭಾರತದಲ್ಲಿ 2 ಕೋಟಿಗಿಂತಲೂ ಹೆಚ್ಚು, ಕರ್ನಾಟಕದಲ್ಲಿ ಹತ್ತು ಲಕ್ಷ ಜನರು ಮೀನುಗಾರಿಕೆಯನ್ನು ಅವಲಂಬಿಸಿದ್ದಾರೆ. ಕರ್ನಾಟಕದ ಕರಾವಳಿ ಬಹುದೊಡ್ಡ ವಿಶಾಲ ಸಾಂದ್ರತೆಯನ್ನು ಹೊಂದಿದೆ. ಕೃಷಿ ಜೊತೆಗೆ ಮೀನುಗಾರಿಕೆ ಕಡಲಬದಿಯ ಜನರ ಕುಲಕಸಬು. ಮಳೆಗಾಲ ಬಿಟ್ಟು ಉಳಿದೆಲ್ಲ ಸಮಯದಲ್ಲಿ ಯಥೇಚ್ಛವಾಗಿ ಮೀನುಗಾರಿಕೆ ನಡೆಯುತ್ತದೆ. ಆದರೆ, ಕರ್ನಾಟಕದ ಕಡಲಲ್ಲಿ ಮೀನುಗಾರಿಕೆ ಮಿತಿಮೀರಿದೆ. ಕಡಲ ಮೀನುಗಾರಿಕೆಯಲ್ಲಿ ಬಂಗಡೆ, ಭೂತಾಯ್ ಮುಂತಾದ ಮೀನುಗಳ ಲಭ್ಯತೆ ಗಣನೀಯವಾಗಿ ಕುಸಿದಿದೆ. ಒಂದು ವರದಿ ಪ್ರಕಾರ ಈ ಎರಡು ವಿಧಗಳ ಮೀನುಗಳ ಲಭ್ಯತೆ 2019 ಮತ್ತು 2020ರ ನಡುವೆ ಅನುಕ್ರಮವಾಗಿ ಶೇಕಡ 59 ರಿಂದ 22ಕ್ಕೆ ಕುಸಿದಿದೆ. ಇದು ಕಡಲತೀರದ ಜನರ ಆಹಾರ ಭದ್ರತೆ ಮೇಲೆ ಪರಿಣಾಮ ಬೀರುತ್ತದೆ.

ಸಮಸ್ಯೆಯ ಒಂದು ಕಾರಣ ಏನೆಂದರೆ, ಈ ಮೀನುಗಳು ಆಹಾರವಾಗಿಯೂ, ಮೀನಿನೆಣ್ಣೆ ತಯಾರಿಸುವ ಕಾರ್ಖಾನೆಗೆ ಅವಶ್ಯ ಕಚ್ಚಾ ಪದಾರ್ಥಗಳಾಗಿಯೂ ಬಳಕೆಯಾಗುತ್ತಿರುವುದು. ಕರ್ನಾಟಕದಲ್ಲಿ ಇಂತಹ 34 ಕಾರ್ಖಾನೆಗಳಿವೆ. ಈ ಕಾರ್ಖಾನೆಗಳು ಅಧಿಕ ಪೌಷ್ಟಿಕಾಂಶಗಳಿರುವ ಮೀನುಗಳನ್ನು ಮತ್ತು ಮೀನು ಸಾಕಾಣಿಕೆಗೆ ಬೇಕಾಗುವ ಮೀನು ಆಹಾರವನ್ನು ತಯಾರಿಸುತ್ತವೆ. ಆದರೆ, ಮಿತಿಮೀರಿದ ಮೀನುಗಾರಿಕೆ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಕರ್ನಾಟಕದ ಕಡಲಲ್ಲಿ ಯಾಂತ್ರೀಕೃತ ದೋಣಿಗಳ ಮೂಲಕ ಬಲೆ ಬೀಸಿ ಮೀನು ಹಿಡಿಯುವಾಗ ದೊಡ್ಡ ಪ್ರಮಾಣದ ಮರಿ ಮೀನುಗಳು ನೀರಿನಿಂದ ಹೊರಬಿದ್ದು ನಾಶವಾಗುತ್ತವೆ. ಕಡಲಿನಲ್ಲಿ ಇಂತಹ ಮೀನುಗಳ ಪ್ರಮಾಣ ಗಣನೀಯವಾಗಿ ಕುಸಿಯಲು ಇದು ಒಂದು ಕಾರಣವಾಗಿದೆ. ಬಂಗಡೆ ಮೀನು ದೊಡ್ಡ ಪ್ರಮಾಣದಲ್ಲಿ ದೊರೆಯುತ್ತಿತ್ತು. 2017 ಮತ್ತು 2018ರಲ್ಲಿ ವಾಣಿಜ್ಯ ದೃಷ್ಟಿಯಿಂದ ಪ್ರಥಮ ಸ್ಥಾನದಲ್ಲಿದ್ದ ಈ ಮೀನು 2019ಕ್ಕೆ 5ನೇ ಸ್ಥಾನಕ್ಕೆ ಕುಸಿಯಿತು. 2018 ಭೂತಾಯ್ ಮೀನು ಕೇವಲ 40 ಸಾವಿರ ಟನ್ ಲಭ್ಯವಾಗಿತ್ತು. 2014ಕ್ಕೆ ಹೋಲಿಸಿದರೆ ಶೇಕಡ 72 ಕುಸಿತ ಉಂಟಾಯಿತು. ಈ ಪ್ರಮಾಣದ ಕುಸಿತದಿಂದಾಗಿ ಮೀನಿನೆಣ್ಣೆ ರಫ್ತು ವಾಣಿಜ್ಯವು ಅಷ್ಟೇ ಪ್ರಮಾಣದಲ್ಲಿ ಕುಸಿಯಿತು.

ತಜ್ಞರ ಪ್ರಕಾರ, ಮರಿ ಮೀನುಗಳ ಅನಿಯಂತ್ರಿತ ಮೀನುಗಾರಿಕೆಯಿಂದಾಗಿ ಮತ್ಸ್ಯ ಸಂಪತ್ತು ಲೂಟಿಯಾಗುತ್ತದೆ. ಕಡಲ ಉದರ ಬರಿದಾಗುತ್ತಿದೆ. ಮೀನಿನ ಬೆಲೆ ಗಗನಕ್ಕೇರುತ್ತಿದೆ. ಕಡಿಮೆ ಆದಾಯದ ಕುಟುಂಬಗಳು ಸುಲಭವಾಗಿ ಸಿಗುತ್ತಿದ್ದ ಪೌಷ್ಟಿಕ ಆಹಾರದಿಂದ ವಂಚಿತರಾಗುತ್ತಿದ್ದಾರೆ. ಮರಿ ಮೀನುಗಳು ಬಲೆಯಲ್ಲಿ ಸಿಕ್ಕಿಹಾಕಿಕೊಂಡು ನಾಶವಾಗುವುದನ್ನು ತಡೆಯಲು 35 ಎಂಎಂನ ಚೌಕಾಕಾರದ ಬಲೆಗಳನ್ನೇ ಬಳಕೆ ಮಾಡಬೇಕೆಂದು ನಿರ್ದೇಶನವಿದ್ದರೂ ಬಹುತೇಕ ದೋಣಿಗಳು ಚಿಕ್ಕ ಗಾತ್ರದ ವಜ್ರ ಆಕಾರದ ಬಲೆಗಳನ್ನೇ ಉಪಯೋಗಿಸಿ ಮರಿ ಮೀನುಗಳ ಮಾರಣಹೋಮಕ್ಕೆ ಕಾರಣವಾಗುತ್ತಿವೆ. ಮೀನುಗಾರಿಕೆಯಲ್ಲಿ ಹಿಡಿಯಬಹುದಾದ ಮೀನುಗಳ ಕನಿಷ್ಠ ಗಾತ್ರವನ್ನು ಕಾನೂನಾತ್ಮಕವಾಗಿ ನಿಗದಿಪಡಿಸಿದ್ದು ಕೇರಳ ಸರ್ಕಾರ. ಈಗ ಅದು ಆಂತರಿಕ ಮೀನುಗಾರಿಕೆಗೂ ಸಮಾನವಾದ ನಿಯಮಗಳನ್ನು ರಚಿಸಲು ಮುಂದಾಗಿದೆ. ಇದರಿಂದ ಮತ್ಸ್ಯ ಸಂಪನ್ಮೂಲದ ಲೂಟಿ ತಡೆಗಟ್ಟಲು ಸಹಾಯವಾಗಲಿದೆ.

ಮರಿಮೀನುಗಳು ನೀರಿನಿಂದ ಹೊರಬಿದ್ದು ನಾಶವಾಗುವುದನ್ನು ತಡೆಯಲು ಸಾಧ್ಯವಾದರೆ ಮಾತ್ರ ಕಡಲಿನಲ್ಲಿ ಮೀನುಗಳ ಸಂತತಿ ಬೆಳೆದು ಮನುಷ್ಯನಿಗೆ ಆಹಾರವಾಗಿ ಹಾಗೂ ಕೈಗಾರಿಕೆಗಳಿಗೆ ಕಚ್ಚಾ ಪದಾರ್ಥವಾಗಿ ಲಭ್ಯವಾಗುವುದು. ಹಾಗಾಗಿ, ಅನಿಯಂತ್ರಿತ ಮರಿ ಮೀನುಗಳ ಮೀನುಗಾರಿಕೆಯನ್ನು ತಡೆಗಟ್ಟಬೇಕು. ಸರ್ಕಾರ ಮಧ್ಯಪ್ರವೇಶಿಸಿ ಮೀನುಗಾರರ ಕುಟುಂಬಗಳಿಗೆ ಸೂಕ್ತ ಪರಿಹಾರ ಮತ್ತು ಮತ್ಸೊ್ಯೕದ್ಯಮಕ್ಕೆ ಬೆಂಬಲ ನೀಡಬೇಕು. ಮೊಗವೀರರ ಕುಟುಂಬಗಳಿಗೆ ಮತ್ತು ಅವರ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಸಹಾಯ ಮಾಡಬೇಕು. ರಾಜ್ಯದಲ್ಲಿ ಅಬಕಾರಿ ಇಲಾಖೆ ಬಿಟ್ಟರೆ ಎರಡನೇ ಸ್ಥಾನದಲ್ಲಿ ಲಾಭ ಪಡೆಯುತ್ತಿರುವುದು ಮೀನುಗಾರಿಕೆ. ಸರ್ಕಾರ ವಿಶೇಷ ಪ್ಯಾಕೇಜ್ ಘೊಷಣೆ ಮಾಡಿ, ಮೀನುಗಾರರ ಬದುಕು ಕಟ್ಟಿ ಕೊಡಬೇಕಿದೆ.

| ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ, ಕುಂದಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net