

ಅದು 2011ರ ಡಿಸೆಂಬರ್ ತಿಂಗಳ ಕೊನೆಯ ವಾರ. ಬೆಳಗಿನ 11 ಗಂಟೆಗೆ ಮಹಾನಗರದ ಆಸ್ಪತ್ರೆಯೊಂದಕ್ಕೆ ತಲೆಗೆ ತೀವ್ರ ಪೆಟ್ಟಾಗಿದ್ದ ಒಬ್ಬ ಯುವಕನನ್ನು ಕರೆತರಲಾಯಿತು. ಗಾಯಾಳುವನ್ನು 21 ವರ್ಷದ ಅಭಿಷೇಕ್ ಎಂದು ತಿಳಿಸಿದ ಅವನ ಇಬ್ಬರು ಸ್ನೇಹಿತರು ಅರ್ಧಗಂಟೆ ಹಿಂದೆ ಹಾಸ್ಟೆಲಿನ ತಾರಸಿಯಿಂದ ಯಾರೋ ಬಿದ್ದ ಶಬ್ದ ಕೇಳಿಸಿ ತಾವು ಹೊರಗೆ ಬಂದು ನೋಡಿದಾಗ ರಸ್ತೆಯಲ್ಲಿ ಅಭಿಷೇಕ್ ಬಿದ್ದಿದ್ದನೆಂದೂ, ಕೂಡಲೇ ಅವನನ್ನು ಚಿಕಿತ್ಸೆಗಾಗಿ ಕರೆತಂದೆವೆಂದೂ ತಿಳಿಸಿದರು.
ಪೊಲೀಸರು ಆಸ್ಪತ್ರೆಗೆ ಬಂದು ವಿಚಾರಿಸಿದಾಗ ಅಭಿಷೇಕ್ ಕೊಲ್ಕತ್ತ ನಿವಾಸಿಯಾಗಿದ್ದು ತಾವೆಲ್ಲರೂ ಸಮೀಪದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಲಿಯುತ್ತಿದ್ದು ಖಾಸಗಿ ಹಾಸ್ಟೆಲ್ನಲ್ಲಿ ವಾಸಿಸುತ್ತಿರುವುದಾಗಿ ಅಭಿಷೇಕ್ನ ಸ್ನೇಹಿತರು ಹೇಳಿದರು. ಅಭಿಷೇಕ್ ಕೆಲಕಾಲದಿಂದ ಮಂಕಾಗಿದ್ದು, ಆತ ಯಾವ ಕಾರಣಕ್ಕೆ ಆತ್ಮಹತ್ಯೆಗೆ ಪ್ರಯತ್ನಿಸಿದ ಎನ್ನುವುದು ತಿಳಿಯದಾಗಿದೆ ಎಂದರು. ಅಭಿಷೇಕ್ ವಿರುದ್ಧ ಆತ್ಮಹತ್ಯೆ ಯತ್ನದ ಪ್ರಕರಣ ದಾಖಲಾಯಿತು. ಅದೇ ಸಂಜೆ ಆತನ ತಂದೆ-ತಾಯಿ ಕೊಲ್ಕತ್ತದಿಂದ ಬಂದರು. ಆ ವೇಳೆಗೆ ಆತ ಜೀವನ್ಮರಣದ ನಡುವೆ ಹೋರಾಡುತ್ತಿದ್ದ. ಮಾರನೆಯ ಬೆಳಗ್ಗೆ ಆತ ಕೋಮಾಗೆ ಜಾರಿದ.
ಅವನ ತಂದೆ ಚೌಧರಿ ಪೊಲೀಸ್ ಠಾಣೆಗೆ ಹೋಗಿ ಠಾಣಾಧಿಕಾರಿಯನ್ನು ಭೇಟಿಯಾದರು. ‘ನಾವು ನಿನ್ನೆಯಷ್ಟೇ ಅವನಿಗೆ ವಿಡಿಯೋ ಕಾಲ್ ಮಾಡಿದ್ದೆವು, ಆತ ಗೆಲುವಿನಿಂದಿದ್ದ, ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದಿದ್ದು ಅವನಿಗೆ ಕೆಟ್ಟ ಚಟಗಳಿರಲಿಲ್ಲ, ಹಣದ ಕೊರತೆಯಿರಲಿಲ್ಲ, ಜೀವನದಲ್ಲಿ ಜಿಗುಪ್ಸೆ ಹೊಂದಲು ಕಾರಣವಿಲ್ಲ’ ಎಂದು ಅವರು ಹೇಳಿದಾಗ, ‘ಅವನ ಮಿತ್ರರ ಹೇಳಿಕೆ ಮೇರೆಗೆ ಪ್ರಕರಣ ದಾಖಲಾಗಿದೆ. ನಿಮ್ಮ ಮಗ ಮಾತನಾಡದ ಪರಿಸ್ಥಿತಿಯಲ್ಲಿರುವುದರಿಂದ ಕಾದು ನೋಡೋಣ’ ಎಂದರು ಪಿಎಸ್ಐ.
ಆನಂತರ ತಂದೆ ಪೊಲೀಸ್ ಆಯುಕ್ತರ ಬಳಿಗೆ ಹೋಗಿ ಅಭಿಷೇಕ್ ಆತ್ಮಹತ್ಯೆಗೆ ಪ್ರಯತ್ನಿಸಲು ಕಾರಣವೇ ಇಲ್ಲ, ಅವನ ಕೊಲೆಪ್ರಯತ್ನ ನಡೆದಿದೆ ಎಂದು ದೂರಿದರು. ‘ನಿಮ್ಮ ಮಗನನ್ನು ಕೊಲೆ ಮಾಡಲು ಪ್ರಯತ್ನಿಸಿದ್ದಾರೆ ಎನ್ನಲು ಯಾವುದೇ ಸಾಕ್ಷ್ಯಾಧಾರ ಸದ್ಯಕ್ಕಿಲ್ಲ, ಆದರೂ ಹಾಸ್ಟೆಲ್ ಬಳಿಯಿದ್ದ ಸಿಸಿಟಿವಿ ಕ್ಯಾಮರಾಗಳ ದೃಶ್ಯಗಳನ್ನು ಪರೀಕ್ಷಿಸಿ, ವಿಚಾರಣೆ ಮಾಡಿಸುತ್ತೇನೆ’ ಎಂದರು ಕಮಿಷನರ್. ಕ್ಯಾಮರಾಗಳಲ್ಲಿ ಅಭಿಷೇಕ್ ಕೆಳಗೆ ಬಿದ್ದ ಅಸ್ಪಷ್ಟ ಚಿತ್ರಗಳು ಮಾತ್ರ ಕಂಡವು.
ವಾರದ ನಂತರವೂ ಕೋಮಾದಿಂದ ಹೊರಬರಲಿಲ್ಲ ಅಭಿಷೇಕ್. ಆಸ್ಪತ್ರೆಯಲ್ಲಿಟ್ಟರೆ ಬಹಳ ಖರ್ಚು ಬರುವುದರಿಂದ ಅವನನ್ನು ಊರಿಗೆ ಕರೆದೊಯ್ಯಲು ವೈದ್ಯರು ಚೌಧರಿಗೆ ಸೂಚಿಸಿದರು. ಅಂತೆಯೇ ಆಸ್ಪತ್ರೆಯಿಂದ ಡಿಸ್ಟಾರ್ಜ್ ಮಾಡಿಸಿ ಕೊಲ್ಕತ್ತಕ್ಕೆ ಕರೆದೊಯ್ದರು. ಆತ ಕೋಮಾ ಸ್ಥಿತಿಯಿಂದ ಹೊರಬರಲೇ ಇಲ್ಲ.
ಪವಾಡವೆಂಬಂತೆ 2013ರಲ್ಲಿ ಅಭಿಷೇಕ್ ಕೈಕಾಲುಗಳನ್ನಾಡಿಸಲು ಆರಂಭಿಸಿದಾಗ ಎಲ್ಲರೂ ಆಶ್ಚರ್ಯಗೊಂಡರು. ‘ನೀನು ಕೆಳಗೆ ಹೇಗೆ ಬಿದ್ದೆ’ ಎಂದು ಕೇಳಿದಾಗ ಆತ ಉತ್ತರಿಸಲು ಪ್ರಯತ್ನಿಸಿದರೂ ಬಾಯಿಯಿಂದ ಮಾತುಗಳೇ ಹೊರಡುತ್ತಿರಲಿಲ್ಲ. ಕೆಲವು ತಿಂಗಳ ನಂತರ ಅಭಿಷೇಕ್ ತಾನು ಮಲಗಿದ್ದ ಜಾಗಕ್ಕೆ ಸೋದರಿ ರೇಖಾಳನ್ನು ಕರೆದು ತನ್ನ ಲ್ಯಾಪ್ಟಾಪ್ ತಂದುಕೊಡಲು ಸನ್ನೆ ಮಾಡಿದ. ಆಕೆ ಲ್ಯಾಪ್ಟಾಪ್ ಕೊಟ್ಟಾಗ ಅದನ್ನು ತೆರೆಯಲು ಅವಳಿಗೆ ಹೇಳಿ ಅದರಲ್ಲಿದ್ದ ಒಂದು ಗ್ರೂಪ್ ಫೋಟೋ ತೋರಿಸಿ ಆ ಚಿತ್ರದಲ್ಲಿದ್ದ ಒಬ್ಬನತ್ತ ಬೊಟ್ಟು ಮಾಡಿ ಸನ್ನೆ ಮಾತಿನಲ್ಲಿ ಏನೋ ಹೇಳಿದ. ಅವನು ಏನು ಹೇಳುತ್ತಿದ್ದಾನೆ ಎನ್ನುವುದು ಮನೆಯಲ್ಲಿದ್ದವರಾರಿಗೂ ತಿಳಿಯಲಿಲ್ಲ.
ಆದರೆ ಆತ ಪದೇಪದೆ ಅದೇ ಫೋಟೋವನ್ನೇ ತೋರಿಸತೊಡಗಿದಾಗ ಚೌಧರಿ ಸನ್ನೆಮಾತನ್ನು ಅರಿಯುವಂಥ ತಜ್ಞರನ್ನು ಕರೆಸಿದರು. ಫೋಟೋದಲ್ಲಿರುವ ವ್ಯಕ್ತಿ ತನಗೆ ತೊಂದರೆ ಕೊಟ್ಟ ಎಂದು ಅಭಿಷೇಕ್ ತಿಳಿಸುತ್ತಿದ್ದಾನೆ ಎಂದು ಅವರು ಹೇಳಿದರು. ಆನಂತರ ಅವರ ಸೂಚನೆಯಂತೆ ಅಭಿಷೇಕ್ಗೆ ಬಿಳಿ ಹಾಳೆ, ಪೆನ್ಸಿಲ್ ಕೊಡಲಾಯಿತು. ಅದರಲ್ಲಾತ ಕಟ್ಟಡದ ತಾರಸಿ ಮತ್ತು ಅದರ ಮೇಲಿದ್ದ ನೀರಿನ ಟ್ಯಾಂಕಿನ ಚಿತ್ರವನ್ನು ಬರೆದು ಏನನ್ನೋ ಹೇಳಲು ಹೊರಟ. ಒಂದು ತಿಂಗಳ ನಂತರ ಅಭಿಷೇಕ್ ಅಲ್ಪಸ್ವಲ್ಪ ಮಾತನಾಡಬಲ್ಲವನಾದ. ಆತ ಮತ್ತೆ ಗ್ರೂಪ್ ಫೋಟೋದಲ್ಲಿನ ವ್ಯಕ್ತಿಯನ್ನು ತೋರಿಸಿ ಆತನೇ ತನ್ನನ್ನು ಮಹಡಿಯಿಂದ ನೂಕಿದ ಎನ್ನುವ ಅರ್ಥ ಬರುವಂತೆ ಹೇಳಿದ. ಆಗ ಚೌಧರಿಗೆ ತಾವು ಅನುಮಾನಿಸಿದಂತೆ ಅಭಿಷೇಕ್ನನ್ನು ಯಾರೋ ತಾರಸಿಯಿಂದ ನೂಕಿ ಕೊಲೆ ಮಾಡಲು ಪ್ರಯತ್ನಿಸಿದ್ದಾರೆಂದು ಖಾತ್ರಿಯಾಯಿತು. ಅವರು ಕೂಡಲೇ ಪೊಲೀಸ್ ಆಯುಕ್ತರಿಗೆ ಕರೆ ಮಾಡಿ ನಡೆದ ವಿಷಯ ತಿಳಿಸಿ ಅವರ ಸಹಾಯ ಕೋರಿದರು. ಅವರು ಒಬ್ಬ ಪೊಲೀಸ್ ಅಧಿಕಾರಿಯನ್ನು ಕೊಲ್ಕತ್ತಕ್ಕೆ ಕಳುಹಿಸಿದರು. ಪೊಲೀಸರ ಎದುರು ಅಭಿಷೇಕ್ ತನ್ನನ್ನು ಮಹಡಿಯಿಂದ ಇಬ್ಬರು ಸಹಪಾಠಿಗಳು ನೂಕಿದ್ದಾಗಿ ತಿಳಿಸಿದ. ಆ ಗೆಳೆಯರನ್ನು ಗ್ರೂಪ್ ಫೋಟೋದಲ್ಲಿ ತೋರಿಸಿದ. ಅವನ ಹೇಳಿಕೆ ಮೇರೆಗೆ ಚಿತ್ರದಲ್ಲಿದ್ದ ಶಶಾಂಕ್ ಮತ್ತು ಜಿತೇಂದ್ರ ಎನ್ನುವ ವಿದ್ಯಾರ್ಥಿಗಳ ಮೇಲೆ ಕೊಲೆ ಪ್ರಯತ್ನದ ಪ್ರಕರಣ ದಾಖಲಾಯಿತು.
ಶಶಾಂಕ್ ಆ ಸಮಯದಲ್ಲಿ ಇಂಜಿನಿಯರಿಂಗ್ ಪದವಿ ಪಡೆದು ಪ್ರತಿಷ್ಠಿತ ಕಂಪನಿಯೊಂದರಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ತಿಂಗಳಿಗೆ ಎರಡು ಲಕ್ಷ ರೂಪಾಯಿ ಸಂಬಳ ಪಡೆಯುತ್ತಿದ್ದ. ಆತನನ್ನು ಠಾಣೆಗೆ ಕರೆಸಿ ಅಭಿಷೇಕ್ ಕೊಟ್ಟ ದೂರಿನ ಬಗ್ಗೆ ತಿಳಿಸಿದಾಗ ಆತ ಘಟನೆ ಹೇಗಾಯಿತೆಂದು ಹೀಗೆ ವಿವರಿಸಿದ:
‘ಅಭಿಷೇಕ್ ನಮ್ಮ ಪಕ್ಕದ ಕಾಲೇಜಿನಲ್ಲಿದ್ದ ಎರಡನೇ ವರ್ಷದ ಕಾನೂನು ವಿದ್ಯಾರ್ಥಿನಿ ರೂಪಾಲಿ ಮೇಲೆ ಅನುರಕ್ತನಾಗಿದ್ದ. ನಾನೂ ಅವಳನ್ನು ಪ್ರೀತಿಸುತ್ತಿದ್ದೆ. ನಾನು ಅವಳನ್ನು ಲಗ್ನವಾಗಲು ಕೋರಿದಾಗ ಆಕೆ ತಾನು ಅಭಿಷೇಕ್ನನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳಿ ನನ್ನನ್ನು ತಿರಸ್ಕರಿಸಿದಳು. ಅಭಿಷೇಕ್ನನ್ನು ಭೇಟಿಯಾಗಿ ರೂಪಾಲಿಯನ್ನು ಬಿಟ್ಟುಬಿಡಲು ಕೋರಿದೆ. ಆತ ಒಪ್ಪಲಿಲ್ಲ. ಮತ್ತೊಮ್ಮೆ ರೂಪಾಲಿಯನ್ನು ಭೇಟಿಯಾಗಿ ನನ್ನ ಪ್ರೀತಿಯನ್ನು ನಿವೇದಿಸಿದೆ. ಆಕೆ ಒಪ್ಪಲಿಲ್ಲ. ಅಭಿಷೇಕ್ನನ್ನು ಇಲ್ಲವಾಗಿಸಿದರೆ ರೂಪಾಲಿ ನನ್ನವಳಾಗಬಹುದು ಎಂದು ರ್ತಸಿ ಆತನ ಕೊಲೆ ಮಾಡುವ ತೀರ್ವನಕ್ಕೆ ಬಂದೆ.
ಕಾಲೇಜಿನಲ್ಲಿ ಒಂದು ವರ್ಷ ಹಿರಿಯನಾಗಿದ್ದ ನನ್ನ ರಾಜ್ಯದವನೇ ಆದ ಜಿತೇಂದ್ರನಿಗೆ ನನ್ನ ತೀರ್ಮಾನ ತಿಳಿಸಿ ಅವನ ಸಹಾಯ ಕೋರಿದೆ. ಘಟನೆಯಾದ ದಿನ ಅಭಿಷೇಕ್ ರೂಪಾಲಿ ಜತೆ ಹಾಸ್ಟೆಲ್ ಬಳಿಯ ಕ್ಯಾಂಟಿನಿನಲ್ಲಿ ಬೆಳಗಿನ ಉಪಾಹಾರ ಸೇವಿಸುತ್ತಿದ್ದ. ಆಗ ನನ್ನ ಸೂಚನೆಯಂತೆ ಜಿತೇಂದ್ರ ಅವರಿಬ್ಬರ ಬಳಿಗೆ ಹೋಗಿ ‘ಶಶಾಂಕ್ ನಿಮ್ಮಿಬ್ಬರ ಪ್ರೇಮಕ್ಕೆ ಅಡ್ಡಿಬರುವುದಿಲ್ಲವೆಂದು ನಿರ್ಧರಿಸಿದ್ದಾನೆ, ಆತ ಅಭಿಷೇಕನ ಕ್ಷಮೆ ಕೋರಲು ಬಯಸಿದ್ದಾನೆ, ಅವನಿಗಾಗಿ ಕಾಯತ್ತಿದ್ದಾನೆ’ ಎಂದ. ನಂತರ ಜಿತೇಂದ್ರ ನನ್ನನ್ನು ಭೇಟಿ ಮಾಡಿಸಲು ಅಭಿಷೇಕ್ನನ್ನು ಹಾಸ್ಟೆಲಿನ ತಾರಸಿಗೆ ಕರೆದುಕೊಂಡು ಬಂದ. ತಾರಸಿಯಲ್ಲಿ ಇನ್ನೊಬ್ಬ ಸ್ನೇಹಿತನ ಜೊತೆ ಅವನಿಗಾಗಿ ಕಾಯುತ್ತಿದ್ದೆ. ಅವನು ಬಂದ ಕೂಡಲೇ ‘ನೀನು ರೂಪಾಲಿಯನ್ನು ಬಿಡದಿದ್ದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ’ ಎಂದು ಮೂವರೂ ಬೆದರಿಸಿದೆವು. ‘ನೀವು ಏನೇ ಮಾಡಿದರೂ ನಾನು ರೂಪಾಲಿಯನ್ನು ಬಿಡುವುದಿಲ್ಲ’ ಎಂದ ಆತ. ನಾವೆಲ್ಲ ಕೋಪಗೊಂಡು ಅವನನ್ನು ಮನಸಾರೆ ಥಳಿಸಿದೆವು. ನಂತರ ಅದೇ ತಾರಸಿಯ ಮೇಲೆ ಅಟ್ಟಾಡಿಸಿಕೊಂಡು ಹೋದೆವು. ಅವನು ತಾರಸಿಯ ಮೂಲೆಗೆ ಹೋದಾಗ ಅಲ್ಲಿಂದ ಅವನನ್ನು ಎತ್ತಿ ಕೆಳಕ್ಕೆ ಎಸೆದೆವು. ಅವನು ಕೆಳಗೆ ಬಿದ್ದ ನಂತರ ನಾವು ರಸ್ತೆಗೆ ಹೋದೆವು. ಅಭಿಷೇಕ್ ತಲೆಗೆ ಪೆಟ್ಟಾಗಿ ರಕ್ತ ಸುರಿಯುತ್ತಿತ್ತು. ಅವನು ಉಸಿರಾಡುತ್ತಿದ್ದ. ನಾವು ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಆತ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದಾನೆ ಎಂದು ದೂರು ನೀಡಿದೆವು. ಆತ 2-3 ದಿನಗಳಲ್ಲಿ ಸಾಯುತ್ತಾನೆ, ನಮ್ಮ ಕೃತ್ಯ ಬೆಳಕಿಗೆ ಬರುವುದಿಲ್ಲ ಎಂದು ಭಾವಿಸಿದ್ದೆವು’.
ಶಶಾಂಕ್ ಹೇಳಿಕೆ ಮೇರೆಗೆ ಜಿತೇಂದ್ರನನ್ನು ಪತ್ತೆ ಮಾಡಿ ಬಂಧಿಸಲಾಯಿತು. ಆತನೂ ಸಾಫ್ಟ್ವೇರ್ ಕಂಪನಿಯ ನೌಕರಿಯಲ್ಲಿದ್ದ. ಆತ ತನ್ನ ತಪ್ಪೊಪ್ಪಿಕೊಂಡ. ನಂತರ ಶಶಾಂಕನ ಇನ್ನೊಬ್ಬ ಸ್ನೇಹಿತ ರವಿ ಎನ್ನುವವನನ್ನು ಬಂಧಿಸಲಾಯಿತು. ಮೂರೂ ಜನರ ಮೇಲೆ ನ್ಯಾಯಾಲಯದಲ್ಲಿ ಕೊಲೆಗೆ ಪ್ರಯತ್ನ ಮಾಡಿದರೆಂದು ಆರೋಪಪಟ್ಟಿ ಸಲ್ಲಿಸಲಾಯಿತು. ನ್ಯಾಯಾಲಯಕ್ಕೆ ಅಭಿಷೇಕ್ ಗಾಲಿಕುರ್ಚಿಯಲ್ಲಿ ಬಂದು ಹೇಳಿಕೆ ನೀಡಿದ. ಆರೋಪಿಗಳು ಕೊಲೆ ಮಾಡಲು ಪ್ರಯತ್ನಿಸಿದ್ದಾರೆ ಎನ್ನುವ ನಿರ್ಣಯಕ್ಕೆ ಬಂದ ನ್ಯಾಯಾಧೀಶರು ಮೂವರಿಗೂ ಜೀವಾವಧಿ ಶಿಕ್ಷೆ ವಿಧಿಸಿ, ಮೂವರೂ ತಲಾ 50 ಸಾವಿರ ರೂಪಾಯಿ ದಂಡ ಕಟ್ಟಬೇಕೆಂದು ನಿರ್ಧರಿಸಿ ಅದರಲ್ಲಿ ಶೇಕಡ 90ರಷ್ಟನ್ನು ಅಭಿಷೇಕ್ನ ಚಿಕಿತ್ಸಾ ವೆಚ್ಚವಾಗಿ ಕೊಡಬೇಕೆಂದು ತೀರ್ವನಿಸಿದರು. ಇದಲ್ಲದೆ ಅಭಿಷೇಕ್ ಮೂರೂವರೆ ವರ್ಷ ಕೋಮಾ ಸ್ಥಿತಿಯಲ್ಲಿದ್ದು, ತಂದೆ-ತಾಯಿ ಅವನ ಉಪಚಾರಕ್ಕೆ ಖರ್ಚು ಮಾಡಿರುವುದರಿಂದ ಸರ್ಕಾರ ಅವರಿಗೆ ಧನಸಹಾಯ ನೀಡಬೇಕೆಂದು ತೀರ್ಪಿತ್ತರು.
‘ಎಲ್ಲೆಲ್ಲಿಯುಂ ಮೋಹಸಂಭ್ರಾಂತಿಗಳ ಕವಿಸಿ ಸಲ್ಲದ ಕುರ್ವಗದೊಳು ನಿನ್ನ ತಾಂ ನಡೆಸಿ ಗೆಲ್ಲಲಿಲ್ಲವನಾ ಪರೀಕ್ಷೆಯೊಳಗೊಂದು ವಿಧಿ ಸೊಲ್ಲಿಪುದು ಸರಿಯೇನೋ ಮಂಕುತಿಮ್ಮ’ ಎಂಬ ನುಡಿಗಳಂತೆ ಕೋಮಾದಲ್ಲಿದ್ದ ಅಭಿಷೇಕ್ನಿಗೆ ಮಾತು ಬಂದು, ಆರೋಪಿಗಳಿಗೆ ಶಿಕ್ಷೆಯಾಗುವಂತಾಗಿದ್ದು ಪವಾಡವೇ.
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)