ಪಾಖಂಡಿ ಪಾಕಿಸ್ತಾನದ ಪಾಪಗಳಿಗೆ ಕೊನೆಗೂ ಶಿಕ್ಷೆ?

ವಿಜಯವಾಣಿ (3)
Published on

ಮತ್ತೆ ಟ್ರಂಪ್ ದಿನಗಳು ಬದಲಾಗಲಿವೆ ಭೂಪಟಗಳು ಭಾಗ 2

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ಇಪ್ಪತ್ತಮೂರು ವರ್ಷಗಳ ಹಿಂದೆ ಅಮೆರಿಕಾದ ಮೇಲೆ ಅಲ್ ಖೈದಾ ದಾಳಿಯಾದ ಎಂಟು ದಿನಕ್ಕೆ, ಅಂದರೆ 2001ರ ಸೆಪ್ಟೆಂಬರ್ 19ರಂದು ಆ ದೇಶದ ವಿದೇಶಾಂಗ ಇಲಾಖೆಯಿಂದ ಒಂದು ಭೂಪಟ ಹೊರಬಂತು. ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಇರಾನ್​ಗಳನ್ನು ಮುಖ್ಯವಾಗಿ ತೋರಿಸುತ್ತಿದ್ದ ಆ ಭೂಪಟದಲ್ಲಿ ಮೂರೂ ದೇಶಗಳ ನಡುವಿನ ಅಂತಾರಾಷ್ಟ್ರೀಯ ಗಡಿಗಳಿಗಿಂತ ಮುಖ್ಯವಾಗಿ ಈ ಪ್ರದೇಶದ ವಿವಿಧ ಜನಾಂಗಗಳು ನೆಲೆಸಿರುವ ಪ್ರದೇಶಗಳ ನಡುವಿನ ಗಡಿಗಳನ್ನು ಎತ್ತಿ ತೋರಿಸಲಾಗಿತ್ತು ಮತ್ತು ಆಯಾ ಪ್ರದೇಶಗಳನ್ನು ಬೇರೆಬೇರೆ ಬಣ್ಣಗಳಿಂದ ಗುರುತಿಸಲಾಗಿತ್ತು.

ಹತ್ತೊಂಬತ್ತನೇ ಶತಮಾನದ ಅಂತ್ಯದಲ್ಲಿ ಬ್ರಿಟಿಷರು ಅಂದಿನ ಭಾರತ, ಅಫ್ಘಾನಿಸ್ತಾನ ಮತ್ತು ಇರಾನ್​ಗಳ ನಡುವೆ ಗಡಿಗಳನ್ನೆಳೆದಾಗ ಅವರು ಪರಿಗಣಿಸಿದ್ದು ಕೇವಲ ತಮ್ಮ ಸೇನಾ ಅನುಕೂಲಗಳನ್ನು ಮಾತ್ರ. ಹೀಗಾಗಿ ಪಖ್ತೂನಿಗಳು/ ಪಷ್ಟೂನರು/ ಪಠಾಣರು ಇದ್ದ ಪ್ರದೇಶ ಭಾರತ ಮತ್ತು ಅಫ್ಘಾನಿಸ್ತಾನದ ನಡುವೆ ಹಂಚಿಹೋದರೆ ಬಲೂಚಿಗಳಿದ್ದ ವಿಶಾಲ ಪ್ರದೇಶ ಭಾರತ ಮತ್ತು ಇರಾನ್ ನಡುವೆ ಹರಿದು ಹಂಚಿಹೋಯಿತು. ಇದರರ್ಥ ಆ ಜನಾಂಗಗಳು ಏಕಾಏಕಿ ವಿಭಜನೆಗೊಂಡು ಬೇರೆಬೇರೆ ದೇಶಗಳ ಪ್ರಜೆಗಳಾಗಿ ಹೋದರು. ಇದನ್ನು ಅಂದು ರಾಜಕೀಯವಾಗಿ ಧ್ವನಿಯೇ ಇಲ್ಲದ ಬಲೂಚಿಗಳು ಪ್ರತಿಭಟಿಸದಿದ್ದರೂ ಪಖ್ತೂನಿಗಳು ರಾಜಕೀಯ ಅಧಿಕಾರ ಹೊಂದಿದ್ದ ಅಫ್ಘಾನಿಸ್ತಾನ ಮಾತ್ರ ಅಂದೂ ಒಪ್ಪಿಕೊಳ್ಳಲಿಲ್ಲ, 1947ರಲ್ಲಿ ಭಾರತ ವಿಭಜನೆಗೊಂಡು ಪಾಕಿಸ್ತಾನ ಸೃಷ್ಟಿಯಾದ ಮೇಲೂ ಒಪ್ಪಿಕೊಳ್ಳಲಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವಂತಹದ್ದೇ. ಪಾಕಿಸ್ತಾನದ ಭಾಗಗಳಾಗಿರುವ ಪಖ್ತೂನಿ ಪ್ರದೇಶಗಳು ಅಂದರೆ ಇಡೀ ಖೈಬರ್ ಪಖ್ತೂನ್​ಕ್ವಾ ಪ್ರಾಂತ್ಯ (ಹಿಂದಿನ ವಾಯುವ್ಯ ಗಡಿನಾಡು ಪ್ರಾಂತ್ಯ) ಮತ್ತು ಕ್ವೆಟ್ಟಾ ಸೇರಿದಂತೆ ಉತ್ತರ ಬಲೂಚಿಸ್ತಾನಗಳು ತನ್ನ ನೆಲ, ಅವು ತನಗೆ ಹಿಂತಿರುಗಬೇಕು ಎಂದು ಅಫ್ಘಾನಿಸ್ತಾನ ನಿರಂತರವಾಗಿ ಹೇಳುತ್ತಾ ಬಂದಿದೆ.

ಮೇಲೆ ಉಲ್ಲೇಖಿಸಿದ ಅಮೆರಿಕದ ವಿದೇಶಾಂಗ ಇಲಾಖೆ ಸೃಷ್ಟಿಸಿದ ಭೂಪಟ ಇಂದಿನ ರಾಜಕೀಯ ಗಡಿಗಳನ್ನು ಬದಿಗೊತ್ತಿ ಜನಾಂಗೀಯ ಗಡಿಗಳಿಗೆ ಒತ್ತು ನೀಡಿದ್ದು ಗಮನಿಸಬೇಕಾದ ಅಂಶ. ಜತೆಗೆ, ಜನಾಂಗೀಯ ಗಡಿಗಳು ನಿರ್ಲಕ್ಷ್ಯಕ್ಕೊಳಗಾಗಿ ರಾಜಕೀಯ ಗಡಿಗಳು ಎಳೆಯಲ್ಪಟ್ಟ ವಿವರಗಳೂ, ಇಸವಿಗಳ ಸಹಿತ, ನಮೂದಾಗಿರುವುದು ಮತ್ತೂ ವಿಶೇಷ. ಅಂದರೆ ಈ ಭೂಪಟವನ್ನು 2001ರಲ್ಲಿ ರಚಿಸಿದ ಕಿರಿಯ ಜಾರ್ಜ್ ಬುಷ್ ಅಧ್ಯಕ್ಷರಾಗಿದ್ದ ರಿಪಬ್ಲಿಕನ್ ಪಕ್ಷದ ಸರ್ಕಾರದ ವಿದೇಶಾಂಗ ಇಲಾಖೆಯ ಅಧಿಕಾರಿಗಳು ಈ ವಲಯದ ಇತಿಹಾಸವನ್ನು ಗಂಭೀರವಾಗಿ ಅಧ್ಯಯನ ಮಾಡಿರುವುದು ಸ್ಪಷ್ಟ. ಈಗ ನಾವು ಐದು ವರ್ಷ ಮುಂದೆ ಬರೋಣ. ಅದೇ ರಿಪಬ್ಲಿಕನ್ ಸರ್ಕಾರ ಇನ್ನೂ ಇದ್ದಾಗಲೇ 2006ರಲ್ಲಿ ಈ ವಲಯದ ಜನಾಂಗೀಯ ಗಡಿಗಳನ್ನು ಎತ್ತಿ ತೋರುವ ಭೂಪಟಗಳು ಅಫ್ಘಾನಿಸ್ತಾನದಲ್ಲಿದ್ದ ಅಮೆರಿಕನ್ ಸೇನೆಯ ಕೈಯಲ್ಲಿದ್ದವಂತೆ.

ಅಂತಹದೊಂದು ಭೂಪಟವನ್ನು ಕಾಬೂಲ್​ನಲ್ಲಿದ್ದ ಅಮೆರಿಕನ್ ಸೇನಾಧಿಕಾರಿಯೊಬ್ಬರು ತಮಗೆ ತೋರಿಸಿದ್ದಾಗಿ ಭಾರತೀಯ ಸೇನೆಯ ನಿವೃತ್ತ ಮೇಜರ್ ಜನರಲ್ ಒಬ್ಬರು ಹೇಳುತ್ತಾರೆ. ಅಮೆರಿಕನ್ ವಿದೇಶಾಂಗ ಇಲಾಖೆ 2001ರಲ್ಲಿ ಸೃಷ್ಟಿಸಿದ ಭೂಪಟ ಮತ್ತು ನಮ್ಮ ಸೇನಾಧಿಕಾರಿ 2006ರಲ್ಲಿ ಕಂಡ ಭೂಪಟ ಒಂದೇಯೇ ಎಂದು ನನಗೆ ಗೊತ್ತಿಲ್ಲ. ಆದರೆ ಒಂದು ವಿಷಯ ಮಾತ್ರ ನನಗೆ ಬಹಳ ಮುಖ್ಯವೆನಿಸುತ್ತದೆ. ಜನಾಂಗಗಳು ನೆಲೆಸಿರುವ ಪ್ರದೇಶಗಳಿಗೆ ಅನುಗುಣವಾಗಿ ಈ ವಲಯದಲ್ಲಿ ಹೊಸ ರಾಜಕೀಯ ಗಡಿಗಳನ್ನು ಎಳೆಯುವುದರ ಕಡೆಗೆ ನಮ್ಮ ಗಮನವಿದೆ ಎಂದು ಅಮೆರಿಕನ್ ಸೇನಾಧಿಕಾರಿ ತಮಗೆ ಹೇಳಿದ್ದಾಗಿ ನಮ್ಮ ಸೇನಾಧಿಕಾರಿ ಹೇಳುತ್ತಾರೆ! ಇದು ಹಾಗೆಯೇ ಇದ್ದರೆ ಪಾಕಿಸ್ತಾನವನ್ನು ವಿಭಜಿಸಿ ಉತ್ತರದ ಪಖ್ತೂನ್ ಪ್ರದೇಶಗಳನ್ನು ಅಫ್ಘಾನಿಸ್ತಾನಕ್ಕೆ ನೀಡುವುದು, ಉತ್ತರದ ಉಝೆ್ಬೕಗ್ ಮತ್ತು ತಾಜಿಕ್ ಪ್ರದೇಶಗಳನ್ನು ಉಝ್ಗುಬೇಕಿಸ್ತಾನ ಮತ್ತು ತಾಜಿಕಿಸ್ತಾನಗಳಿಗೆ ನೀಡಿ ಅಫ್ಘಾನಿಸ್ತಾನವನ್ನು ಪೂರ್ಣವಾಗಿ ಪಖ್ತೂನ್ ದೇಶವನ್ನಾಗಿಸುವುದು ರಿಪಬ್ಲಿಕನ್ ಸರ್ಕಾರದ ವಿಚಾರವಾಗಿತ್ತು ಎನ್ನಬಹುದು.

ಮುಂದುವರೆದು, ಬಲೂಚಿಸ್ತಾನವನ್ನು ಪಾಕಿಸ್ತಾನದಿಂದ ಪ್ರತ್ಯೇಕಿಸಿ, ಸಾಧ್ಯವಾದರೆ ಇರಾನ್​ನಲ್ಲಿರುವ ಬಲೂಚಿ ಪ್ರದೇಶಗಳನ್ನೂ ಅದಕ್ಕೆ ಸೇರಿಸಿ ಹೊಸದೊಂದು ದೇಶವನ್ನು ಸೃಷ್ಟಿಸುವುದೂ ವಾಷಿಂಗ್ಟನ್​ನಲ್ಲಿ ರ್ಚಚಿತವಾಗಿರಬಹುದು. ಆ ದಿನಗಳಲ್ಲಿ ಸ್ವತಂತ್ರ ಬಲೂಚಿಸ್ತಾನಕ್ಕಾಗಿ ಪಾಕಿಸ್ತಾನದ ಬಲೂಚಿಗಳು ಉಗ್ರ ಹೋರಾಟವನ್ನು ಆರಂಭಿಸಿದ್ದು ಹೀಗೆ ‘ಹೊರಗಿನಿಂದ’ ಸಹಕಾರದ ಸೂಚನೆ ಬಂದದ್ದರಿಂದಲೇ ಇರಬೇಕು. ಒಟ್ಟಿನಲ್ಲಿ ಈ ವಲಯದಲ್ಲಿ ಬ್ರಿಟಿಷರು ಮಾಡಿಟ್ಟುಹೋಗಿದ್ದ ಅನಾಹುತಗಳನ್ನು ಸರಿಪಡಿಸಿ, ಜನಾಂಗೀಯತೆಯ ಆಧಾರದ ಮೇಲೆ ರಾಷ್ಟ್ರಗಳನ್ನು ರಚಿಸಿದರೆ ಗಡಿ ವೈಷಮ್ಯಗಳು ಶಮನಗೊಳ್ಳುತ್ತವೆ, ಶಾಂತಿ ಮತ್ತು ಸುಭದ್ರತೆಗೆ ಅನುಕೂಲವಾಗುತ್ತದೆ ಎಂದು ರಿಪಬ್ಲಿಕನ್ ಸರ್ಕಾರ ಆಶಿಸಿದ್ದಿರಬಹುದು. ಜತೆಗೆ, ಅಂತಹ ವ್ಯವಸ್ಥೆಯನ್ನು ತಾನು ನಿರ್ಮಾಣ ಮಾಡುವುದರಿಂದ ಈ ವಲಯದಲ್ಲಿ ಅಮೆರಿಕದ ರಾಜಕೀಯ, ಸೇನಾ ಮತ್ತು ಆರ್ಥಿಕ ಪ್ರಭಾವ ಬೆಳೆಯಲು ಅವಕಾಶವಾಗುತ್ತದೆ ಎಂದೂ ಬುಷ್ ಆಡಳಿತ ಲೆಕ್ಕ ಹಾಕಿದ್ದಿರಬಹುದು. ಅದು ಸಹಜ. ಅಮೆರಿಕಾಗೆ ಲಾಭವಾಗದ ಯಾವ ಕೆಲಸವನ್ನೂ ರಿಪಬ್ಲಿಕನ್ ಪಕ್ಷದ ಸರ್ಕಾರಗಳು ಕೈಗೆತ್ತಿಕೊಳ್ಳುವುದಿಲ್ಲ.

ಆದರೆ ಕಿರಿಯ ಜಾರ್ಜ್ ಬುಷ್ ಎರಡು ಅವಧಿಗಳನ್ನು ಪೂರ್ಣಗೊಳಿಸಿದ ನಂತರ 2008ರ ಚುನಾವಣೆಗಳಲ್ಲಿ ರಿಪಬ್ಲಿಕನ್ ಅಭ್ಯರ್ಥಿ ಜಾನ್ ಮೆಕ್​ಕೇನ್ ಸೋತು ಡೆಮಾಕ್ರಟಿಕ್ ಅಭ್ಯರ್ಥಿ ಬರಾಕ್ ಹುಸೇನ್ ಒಬಾಮಾ ಜಯ ಗಳಿಸಿದ್ದೇ ಎಲ್ಲ ಯೋಜನೆಗಳೂ ಶೀತಪೆಟ್ಟಿಗೆಗೆ ದೂಡಲ್ಪಟ್ಟವು. ಪಾಕಿಸ್ತಾನಕ್ಕೆ ವಾರ್ಷಿಕ ಒಂದೂವರೆ ಬಿಲಿಯನ್ ಡಾಲರ್ ಸೇನಾ ನೆರವು ದೊರಕಲು ಕಾರಣವಾಗಿದ್ದ ಮತ್ತು ಪಾಕ್ ಸೇನಾ ಸರ್ವಾಧಿಕಾರಿ ಜನರಲ್ ಪರ್ವೆಜ್ ಮುಷರ್ರಫ್ ಜತೆಗಲ್ಲದೇ ರಾಜಕಾರಣಿಗಳ ಜತೆಗೂ ಸೌಹಾರ್ದ ಸಂಬಂಧ ಹೊಂದಿದ್ದ ಜೋ ಬೈಡನ್ ಉಪಾಧ್ಯಕ್ಷರಾದದ್ದಂತೂ ಪಾಕಿಸ್ತಾನವನ್ನು ಶ್ವೇತಭವನಕ್ಕೆ ಬಲು ಹತ್ತಿರಾಗಿಸಿಬಿಟ್ಟಿತು. ಜಪಾನ್, ಜರ್ಮನಿ, ಸೋವಿಯೆತ್ ಯೂನಿಯನ್ ಸೇರಿದಂತೆ ಹಿಂದಿನ ಯಾವ ಶತ್ರುವೂ ಎಸಗದಿದ್ದಷ್ಟು ಹಾನಿ ಮತ್ತು ಅವಮಾನವನ್ನು ಅಮೆರಿಕಾಗೆ ಎಸಗಿದ್ದ ಒಸಾಮಾ ಬಿನ್ ಲಾದೆನ್ ಪಾಕ್ ರಾಜಧಾನಿಗೆ ಹತ್ತಿರದ ಅಬ್ಬೊಟಾಬಾದ್​ನಲ್ಲಿ ಪಾಕ್ ಸೇನಾ ರಕ್ಷಣೆಯಲ್ಲೇ ಇರುವುದು ಪತ್ತೆಯಾದಾಗಲೂ, ಅಮೆರಿಕಾದಿಂದ ಪಡೆದುಕೊಂಡ ಹಣವನ್ನು ತಾಲಿಬಾನ್ ಅನ್ನು ಕೊಬ್ಬಿಸಲು ಪಾಕಿಸ್ತಾನ ಬಳಸುತ್ತಿದ್ದುದು ತಿಳಿದಾಗಲೂ ಒಬಾಮಾ ಸರ್ಕಾರಕ್ಕೆ ಆ ದೇಶದ ಮೇಲೆ ಅಕ್ಕರೆ ಇಂಗಲಿಲ್ಲ.

ಮುಂದಿನ ಎಂಟು ವರ್ಷಗಳಲ್ಲಿ ಇತಿಹಾಸದ ಚಕ್ರ ಮತ್ತೊಂದು ಸುತ್ತು ತಿರುಗಿತು. 2017ರ ಜನವರಿಯಲ್ಲಿ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದರು. ‘ಭಯೋತ್ಪಾದನೆಯ ನಿಗ್ರಹದ ಹೆಸರಿನಲ್ಲಿ ನಮ್ಮಿಂದ ನೀವು 35 ಬಿಲಿಯನ್ ಡಾಲರ್​ಗಳನ್ನು ಪಡೆದುಕೊಂಡಿದ್ದೀರಿ. ಆದರೆ ಅದಕ್ಕೆ ಪ್ರತಿಯಾಗಿ ನಿಮ್ಮಿಂದ ನಮಗೆ ಸಿಕ್ಕಿದ್ದು ಕೇವಲ ಸುಳ್ಳುಗಳು ಮತ್ತು ಮೋಸ’ ಎಂದು 2018ರ ಜನವರಿ 1ರಂದು ಪಾಕಿಸ್ತಾನಕ್ಕೆ ಹೇಳಿದ ಟ್ರಂಪ್ ಆ ದೇಶಕ್ಕೆ ಹೋಗುತ್ತಿದ್ದ ಧನಸಹಾಯದಲ್ಲಿ ಶೇ. 90ರಷ್ಟನ್ನು ಒಂದೇ ಏಟಿಗೆ ಕತ್ತರಿಸಿಹಾಕಿದರು. ಆದರೆ ಸರ್ಕಾರ ಅವರದಾದರೂ ವ್ಯವಸ್ಥೆ ಡೆಮಾಕ್ರಟಿಕ್ ಪಕ್ಷ ಬೆಳೆಸಿದ್ದ ತಥಾಕಥಿತ ಲಿಬರಲ್- ಪ್ರೋಗ್ರೆಸ್ಸಿವ್ - ಸೆಕ್ಯೂಲರ್​ಗಳದೇ ಆಗಿದ್ದುದರಿಂದ ತಮ್ಮೆಲ್ಲ ಯೋಜನೆಗಳನ್ನು ಕಾರ್ಯಗತಗೊಳಿಸಲು ಟ್ರಂಪ್ ಅವರಿಗೆ ಸಾಧ್ಯವಾಗಲಿಲ್ಲ. ನಾಲ್ಕು ವರ್ಷಗಳ ಹಿಂದೆ ಅವರು ಚುನಾವಣೆಗಳಲ್ಲಿ ಸೋತದ್ದೂ ಮೋಸದಿಂದಲೇ. ಆಗ ಬಂದ ಬೈಡನ್ ಪಾಕಿಸ್ತಾನಕ್ಕೆ ಎಲ್ಲ ಬಗೆಯ ನೆರವನ್ನೂ ಪುನರಾರಂಭಿಸಿದರು.

ಈಗ ಟ್ರಂಪ್ ಮತ್ತೆ ಶ್ವೇತಭವನ ಪ್ರವೇಶಿಸಿದ್ದಾರೆ. ಎಲ್ಲ ಬಗೆಯ ವ್ಯರ್ಥ ಖರ್ಚುಗಳನ್ನು ತಡೆದು ಅಮೆರಿಕಾದ ಉನ್ನತಿಗಾಗಿ ಬಳಸುವುದು ಅವರ America Great Again (MAGA ಮಗ ಅಲ್ಲ) ಯೋಜನೆಯ ಒಂದು ಪ್ರಮುಖ ಅಂಗ. ಆ ಪ್ರಕಾರ ಪಾಕಿಸ್ತಾ್ತನಕ್ಕೆ ಮತ್ತೆ ಚಿಪ್ಪು ನಿಶ್ಚಿತ. ಜತೆಗೆ USAID (United States Agency for International Development) ಮೂಲಕ 1961ರಿಂದಲೂ ಅಮೆರಿಕಾ ಜಗತ್ತಿನಾದ್ಯಂತ (ತನ್ನ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು) ದಾನವಾಗಿ ನೀಡುತ್ತಿದ್ದ ಅಪಾರ ಧನಸಹಾಯವನ್ನೂ ಇಸ್ರೇಲ್ ಮತ್ತು ಈಜಿಪ್ಟ್​ಗಳ ಹೊರತಾಗಿ ಇತರ ಎಲ್ಲಾ ದೇಶಗಳಿಗೂ ಟ್ರಂಪ್ ಕಳೆದ ವಾರಾಂತ್ಯದಲ್ಲಿ ನಿಲ್ಲಿಸಿದ್ದಾರೆ. ಇಲ್ಲಿ ತೀವ್ರತರದ ಹೊಡೆತ ಬೀಳುವುದು ಯೂಕ್ರೇನ್, ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳಿಗೆ ಎನ್ನುವುದು ಗಮನಾರ್ಹ.

ಇದರೊಂದಿಗೆ ಈ ವಲಯಕ್ಕೆ ಸಂಬಂಧಿಸಿದಂತೆ ಟ್ರಂಪ್ ಮಾಡುತ್ತಿರುವ ಇನ್ನೊಂದು ಆಲೋಚನೆ ಆಸಕ್ತಿಕರವಾಗಿದೆ. ಕಾಬೂಲ್​ನ ಹೊರವಲಯದಲ್ಲಿರುವ ಬಗ್ರಾಮ್ ವಾಯುನೆಲೆಯನ್ನು ಬಳಸಿಕೊಳ್ಳುವ ಅನುಮತಿಯನ್ನು ತಾಲಿಬಾನ್ ಸರ್ಕಾರದಿಂದ ಪಡೆದುಕೊಳ್ಳುವುದು ಅವರ ಲೆಕ್ಕಾಚಾರ. ಅದಕ್ಕಾಗಿ ಅವರು ಹೂಡಿರುವ ತಂತ್ರವೂ ಅಸಾಧಾರಣವಾದದ್ದೇ. 2021ರ ಆಗಸ್ಟ್ 15ರಂದು ಅಮೆರಿಕಾ ಆತುರದಲ್ಲಿ ಕಾಲ್ತೆಗೆದಾಗ ಅಫ್ಘಾನಿಸ್ತಾನದಲ್ಲಿ ಬಿಟ್ಟುಹೋದದ್ದು ಸುಮಾರು ಏಳು ಬಿಲಿಯನ್ ಡಾಲರ್ ಮೌಲ್ಯದ ಶಸ್ತ್ರಾಸ್ತ್ರಗಳು. ಆದರೀಗ ಟ್ರಂಪ್ ಆ ಮೌಲ್ಯವನ್ನು ತಾರಾಮಾರು ಏರಿಸಿ 87 ಬಿಲಿಯನ್ ಡಾಲರ್ ಎಂದು ಹೇಳುತ್ತಿದ್ದಾರೆ. ತಾಲಿಬಾನ್ ಅನ್ನು ದಿಕ್ಕೆಡಿಸಿ ಅದು ತಮ್ಮೊಂದಿಗೆ ಒಂದು ‘ಡೀಲ್’ ಮಾಡಿಕೊಳ್ಳಲು ಮುಂದೆ ಬರುವಂತೆ ಮಾಡುವುದು ಅವರ ಹವಣಿಕೆ. ಇದು ಯಶಸ್ವಿಯಾಗುವಂತೆ ಕಾಣುತ್ತಿದೆ. ಅಮೆರಿಕಾದ ಇತಿಹಾಸದಲ್ಲೇ ಮರೆಯದ ಸೋಲನ್ನು ನೀಡಿದ ವಿಯೆಟ್ನಾಂ ಈಗ ಅಮೆರಿಕಾದ ಘನಿಷ್ಟ ಮಿತ್ರ. ಖಿಖಅಐಈ ಮೂಲಕ ಅತಿ ಹೆಚ್ಚು ಧನಸಹಾಯ ಪಡೆಯುತ್ತಿದ್ದ ದೇಶಗಳಲ್ಲಿ ಇಸ್ರೇಲ್ ನಂತರ ವಿಯೆಟ್ನಾಂ ಎರಡನೆಯದು! ಹೀಗಿರುವಾಗ ತಾಲಿಬಾನ್ ಮತ್ತು ಅಮೆರಿಕಾ ನಡುವೆ ಸಹಕಾರದ ಯುಗ ಆರಂಭವಾಗುವುದೂ ಸಹಜ. ಅಮೆರಿಕಾದ ಜತೆಗಿನ ಸಖ್ಯ ತನಗೆ ರಾಜತಾಂತ್ರಿಕವಾಗಿ ಹಾಗೂ ಆರ್ಥಿಕವಾಗಿ ಅನುಕೂಲಕರ ಎಂದೆನಿಸಿದರೆ ತಾಲಿಬಾನ್ ಖುಷಿಯಿಂದಲೇ ಅಮೆರಿಕಾದ ಮಗ್ಗುಲಿಗೆ ಬರುತ್ತದೆ. ಭಾರತದ ವಿಷಯದಲ್ಲಿ ಅದು ಮಾಡುತ್ತಿರುವುದು ಇದೇ. ಅದರಲ್ಲೂ ಪಾಕಿಸ್ತಾನದ ಜತೆಗೆ ಈಗ ಆರಂಭವಾಗಿರುವ ಗಡಿ ಘರ್ಷಣೆಯನ್ನು ನಿಭಾಯಿಸಲು ಅಮೆರಿಕಾ ಮತ್ತು ಭಾರತದ ಸಹಾಯ ತನಗೆ ಅಗತ್ಯ ಹಾಗೂ ಅನುಕೂಲಕರ ಎಂದು ತಾಲಿಬಾನ್ ಈಗಾಗಲೇ ತಿಳಿದಾಗಿದೆ.

ಸರಿ, ಟ್ರಂಪ್​ಗೆ ಬಗ್ರಾಮ್ ವಾಯುನೆಲೆ ಏಕೆ ಬೇಕು? ಅಫ್ಘಾನಿಸ್ತಾನ ಚೀನೀ ಪ್ರಭಾವದೊಳಗೆ ಸಿಲುಕಿಹೋಗುವುದನ್ನು ತಡೆಯಲು ಮತ್ತು ಪಾಕಿಸ್ತಾನದಲ್ಲಿ ಅಮೆರಿಕಾದ ಹಿತಾಸಕ್ತಿಗಳ ವಿರುದ್ಧ ಕೆಲಸ ಮಾಡುತ್ತಿರುವ ಅಲ್ ಖೈದಾ, ಐಸ್-ಕೆಪಿ ಮತ್ತಿತರ ಪಾಕ್ ಸರ್ಕಾರಿ-ಪ್ರಾಯೋಜಿತ ಭಯೋತ್ಪಾದಕ ಸಂಘಟನೆಗಳನ್ನು ನಿಗ್ರಹಿಸಲು. ಅಂದರೆ, ಅಗತ್ಯ ಬಂದರೆ ಪಾಕ್ ನೆಲದ ಮೇಲೆ ದಾಳಿಯೆಸಗಲು ಅಧ್ಯಕ್ಷ ಟ್ರಂಪ್ ಅವರಿಗೆ ಅಫ್ಘಾನಿಸ್ತಾನದಲ್ಲಿರುವ ಬಗ್ರಾಮ್ ವಾಯುನೆಲೆ ಅತ್ಯಂತ ಸೂಕ್ತ. ಪ್ರಸಕ್ತ ಸನ್ನಿವೇಶದಲ್ಲಿ ಪಾಕಿಸ್ತಾನವನ್ನು ಅಮೆರಿಕಾ ತನ್ನ ದಾಳಿಗಳಿಗೆ ಗುರಿಯಾಗಿಸಿಕೊಳ್ಳುವುದು ತಾಲಿಬಾನ್​ಗೂ ಸಮ್ಮತವೇ. ಅದರಿಂದಾಗಿ ಡ್ಯೂರಾಂಡ್ ಗಡಿರೇಖೆಯಲ್ಲಿ, ಮುಖ್ಯವಾಗಿ ಪಖ್ತಿಕಾ ದಕ್ಷಿಣ ವಜೀರಿಸ್ತಾನ್ ಗಡಿಯಲ್ಲಿ ತನ್ನ ಕೈ ಮೇಲಾಗುವುದೆಂದು ಮತ್ತು ಪೂರ್ವ ಅಫ್ಘಾನಿಸ್ತಾನದ ವಖಾನ್ ಕಾರಿಡಾರ್ ಮೇಲೆ ಆಕ್ರಮಣ ಎಸಗಲು ಪಾಕ್ ಸೇನೆ ಮಾಡುತ್ತಿರುವ ಪ್ರಯತ್ನಗಳನ್ನು ನಿರರ್ಥಕಗೊಳಿಸಲು ತನಗೆ ಸುಲಭವಾಗುತ್ತದೆಂದು ತಾಲಿಬಾನ್ ಲೆಕ್ಕಹಾಕುತ್ತಿದೆ.

ಇತಿಹಾಸದ ಒಂದು ಆಸಕ್ತಿಕರ ತಿರುವಿನಲ್ಲಿ ಇಂದು ಅಫ್ಘಾನಿಸ್ತಾನ ಮತ್ತು ಅಮೆರಿಕಾಗಳೆರಡೂ ಪಾಕಿಸ್ತಾನವನ್ನು ಹಿಡಿದು ಬಡಿಯಲು ಸಜ್ಜಾಗುತ್ತಿವೆ. ಇದರರ್ಥ ಹಿಂದಿನ ಕಿರಿಯ ಬುಷ್ ಅಧ್ಯಕ್ಷಾವಧಿಯಲ್ಲಿ ತಯಾರಾದ ಭೂಪಟ ಈಗ ಮತ್ತೆ ಮೇಜಿನ ಮೇಲೆ ಬಂದಿದೆ. ಆದರೆ ಇಲ್ಲೊಂದು ಪುಟ್ಟ ವ್ಯತ್ಯಾಸವಿದೆ. ಬಲೂಚಿಸ್ತಾನ ಸ್ವತಂತ್ರಗೊಳ್ಳುವುದು ಟ್ರಂಪ್ ಸರ್ಕಾರಕ್ಕೆ ಸಮ್ಮತ ನಿಜ, ಆದರೆ ಇರಾನ್​ನ ಬಲೂಚಿ ಪ್ರದೇಶಗಳನ್ನೂ ಅದಕ್ಕೆ ಸೇರಿಸಲು ಇಂದು ಶ್ವೇತಭವನಕ್ಕೆ ಸಮ್ಮತವಿಲ್ಲ. ಇರಾನನ್ನೂ ವಿಭಜಿಸಲು ಹೋಗಿ ಈ ವಲಯದಲ್ಲಿ ಹೆಚ್ಚಿನ ಸೇನಾ ಹಾಗೂ ರಾಜತಾಂತ್ರಿಕ ಹೊರೆಗಳನ್ನು ಮೈಮೇಲೆ ಎಳೆದುಕೊಳ್ಳಲು ವ್ಯವಹಾರ ನಿಪುಣ ಟ್ರಂಪ್ ಬಯಸುತ್ತಿಲ್ಲ. ಪಾಕ್ ಪ್ರಶ್ನೆಯನ್ನು ಬಗೆಹರಿಸಲು ಸದ್ಯಕ್ಕೆ ಇರಾನ್ ಜತೆ ಸಖ್ಯ ಅಗತ್ಯ ಎಂದರಿತ ಅವರು ಅದಕ್ಕಾಗಿ ಪ್ರಯತ್ನವನ್ನು ಅಧಿಕಾರಕ್ಕೇರುವ ಮೊದಲೇ ಆರಂಭಿಸಿದ್ದಾರೆ.

ಅವರ ದೂತರಾಗಿ ಎಲಾನ್ ಮಸ್ಕ್ ಕಳೆದ ನವೆಂಬರ್​ನಲ್ಲೇ ವಿಶ್ವಸಂಸ್ಥೆಯಲ್ಲಿರುವ ಇರಾನಿ ರಾಯಭಾರಿ ಆಮಿರ್ ಸಯೀದ್ ಇರಾವಾನಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇನ್ನೂ ಮಹತ್ವದ್ದೆಂದರೆ ಮೈಕೇಲ್ ಪಿ. ದಿಮಿನೋ ಅವರನ್ನು ರಕ್ಷಣಾ ಇಲಾಖೆಯ ನೀತಿರಚನಾ ವಿಭಾಗದ ಮುಖ್ಯಸ್ಥರನ್ನಾಗಿಸಿರುವುದು. ಭಯೋತ್ಪಾನಾ ನಿಗ್ರಹ ವಿಶೇಷಜ್ಞರಾದ ದಿಮಿನೋ, ಇರಾನ್ ಜತೆಗಿನ ಸಮಸ್ಯೆಗಳನ್ನು ಬಗೆಹರಿಸಲು ಸಂಘರ್ಷಕ್ಕಿಂತಲೂ ಮಾತುಕತೆಯೇ ಸೂಕ್ತ ಎಂದು ಹೇಳುವವರು. ಇದೆಲ್ಲವೂ ಸೂಚಿಸುವುದು ತಮ್ಮ ಮೊದಲ ಆವಧಿಯಲ್ಲಿ ಇರಾನ್ ಬಗ್ಗೆ ತಳೆದ ಕಠಿಣ ನಿಲುವನ್ನು ಟ್ರಂಪ್ ಇಂದು ಕೈಬಿಟ್ಟಿದ್ದಾರೆ ಎಂದು. ಈ ಬದಲಾವಣೆ ಶಾಶ್ವತವೋ ಅಥವಾ ಸದ್ಯದ ಅನುಕೂಲಸಿಂಧು ಮಾರ್ಗವೋ ಹೇಳಲಾಗದು. ಆದರೆ ಇಂದು ಟ್ರಂಪ್ ಇರಾನ್ ಬಗ್ಗೆ ಮೃದುಧೋರಣೆ ತಳೆದಿರುವುದಂತೂ ನಿಜ.

ಹೀಗಾಗಿಯೇ ಅವರು ಇರಾನ್​ನ ಚಾಬಹಾರ್ ಬಂದರಿನ ಮೂಲಕ ಅಫ್ಘಾನಿಸ್ತಾನಕ್ಕೆ ಸಮುದ್ರಸಂಪರ್ಕ ಕಲ್ಪಿಸಿ ಆ ಮೂಲಕ ಪಾಕಿಸ್ತಾನದ ಕರಾಚಿ ಬಂದರಿನ ಮೇಲೆ ಅಫ್ಘಾನಿಸ್ತಾನದ ಅವಲಂಬನೆಯನ್ನು ದೂರೀಕರಿಸುವ ಭಾರತದ ಯೋಜನೆಯನ್ನು ಪುರಸ್ಕರಿಸುತ್ತಾರೆ. ಜತೆಗೆ, ಸುನ್ನಿ ಪಾಕಿಸ್ತಾನದ ಬಗ್ಗೆ ಶಿಯಾ ಇರಾನ್​ಗೆ ಅದರದೇ ಆದ ಮನಸ್ತಾಪಗಳಿವೆ. ವರ್ಷದ ಹಿಂದೆ ಎರಡೂ ದೇಶಗಳು ಪರಸ್ಪರರ ಮೇಲೆ ದಾಳಿ ಮಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಅಂದರೆ ಇತಿಹಾಸದ ಒಂದು ನಿರ್ಣಾಯಕ ಗಳಿಗೆಯಲ್ಲಿ ಇಂದು ಅಫ್ಘಾನಿಸ್ತಾನ, ಭಾರತ, ಅಮೆರಿಕಾ ಮತ್ತು ಇರಾನ್ ಒಂದೇ ಗುಂಪಿನಲ್ಲಿವೆ. ಈ ಗುಂಪಿನ ಗುರಿ ಪಾಕಿಸ್ತಾನ. ಅಲ್ಲಿ ಭೂಪಟ ಬದಲಾಗಲಿದೆ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net