ಮಕ್ಕಳ ಮನಸ್ಸಿಗೆ ಹುಮ್ಮಸ್ಸು ತುಂಬಿ

Children story
Published on
ಇಂದಿನ ಮಕ್ಕಳು ನಾಳಿನ ಪ್ರಜೆಗಳು ಎನ್ನುವ ಕಾಲವೊಂದಿತ್ತು. ಆದರೆ ಬದಲಾದ ಸನ್ನಿವೇಶದಲ್ಲಿ ಇಂದಿನ ಮಕ್ಕಳು ಇಂದಿನ ಪ್ರಜೆಗಳಾಗಿದ್ದಾರೆ. ಅಂದರೆ ಅಷ್ಟರ ಮಟ್ಟಿಗೆ ಅಪ್​ಡೇಟ್ ಆಗಿದ್ದಾರೆ. ಆಧುನಿಕತೆ ಮೈಗೂಡಿಸಿಕೊಂಡಿದ್ದಾರೆ. ಇದರ ಮಧ್ಯೆಯೇ ಅಷ್ಟೇ ಪ್ರಮಾಣದಲ್ಲಿ ಕೆಲ ದುಶ್ಚಟ ಹಾಗೂ ಜೀವನಶೈಲಿಯಿಂದ ಮಾನಸಿಕವಾಗಿ ಜಜ್ಜರಿತರಾಗಿದ್ದಾರೆ.

ಹಲವು ಪಾಲಕರು ಮಕ್ಕಳ ವರ್ತನೆ ಬಗ್ಗೆ ಬೇಸರಗೊಂಡು ನನ್ನ ಬಳಿ ಬಂದಿರುತ್ತಾರೆ. ‘ಓದುವುದೇ ಇಲ್ಲ ಸರ್’ ಎಂದು ಒಬ್ಬರು ದೂರಿದರೆ ಇನ್ನೊಬ್ಬರು, ‘ಬರೀ ಮೊಬೈಲ್ ಹಿಡಕೊಂಡೇ ಇರುತ್ತಾನೆ’ ಎಂದು ಹೇಳುತ್ತಾರೆೆ. ಇದು ಇಂದು ಸರ್ವೆ ಸಾಮಾನ್ಯವಾಗಿದೆ. ಇದಕ್ಕೂ ಮುನ್ನ ನಾವು ಅವರ ಮನಸ್ಥಿತಿ ಅರಿಯುವ ಕೆಲಸ ಮಾಡಬೇಕು.

ಮಕ್ಕಳು ಮನಸ್ಸು ಮುಗ್ಧ. ಎಳೆ ವಯಸ್ಸಿನಲ್ಲಿ ಬೀರುವ ಪ್ರಭಾವ ಅಷ್ಟೇ ಪ್ರಬಲವಾಗಿರುತ್ತದೆ. ಬಾಲ್ಯಾವಸ್ಥೆಯಲ್ಲಿ ಮಕ್ಕಳು ಪಾಲಕರನ್ನು ಅನುಸರಿಸುತ್ತಾರೆ ಹಾಗೂ ನಿರೀಕ್ಷೆಗಳನ್ನು ಇರಿಸಿಕೊಳ್ಳುತ್ತಾರೆ. ಇವರ ಮನಸ್ಸಿನಲ್ಲಿ ಅಚ್ಚೊತ್ತುವ ಪ್ರತಿ ವಿಷಯಗಳೂ ಅವರ ವರ್ತನೆಯ ಮೇಲೆ ಪ್ರಭಾವ ಬೀರುತ್ತವೆ. ಇವರನ್ನು ಸರಿದಾರಿಯಲ್ಲಿ ಮುನ್ನಡೆಸುವುದು ಹಾಗೂ ಇವರ ವರ್ತನೆ ದುರ್ವರ್ತನೆಗೆ ಪರಿವರ್ತನೆಗೊಳ್ಳದಂತೆ ತಡೆಯುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

ಪಾಲಕರು ಮಾಡುವ ತಪ್ಪುಗಳನ್ನು ಮಕ್ಕಳು ಗಮನಿಸುತ್ತಿರು ತ್ತಾರೆ. ಲೋಪಗಳನ್ನು ಯಥಾವತ್ತಾಗಿ ಅನುಸರಿಸುತ್ತಾರೆ. ತಾವು ನೋಡುವ, ಪುಸ್ತಕಗಳಲ್ಲಿ ಓದುವ, ಟಿವಿ-ಕಾರ್ಟೂನುಗಳಲ್ಲಿ ನೋಡುವ ಪಾತ್ರಗಳಿಂದಲೂ ಪ್ರಭಾವಿತರಾಗುತ್ತಾರೆ ಹಾಗೂ ಇವರ ವರ್ತನೆ ಮೇಲೆ ಈ ಎಲ್ಲಾ ಅಂಶಗಳು ಪ್ರಭಾವ ಬೀರುತ್ತವೆ. ಪಾಲಕರಾಗಿ, ನಾವು ಮಕ್ಕಳ ತಪ್ಪುಗಳನ್ನು ಕಂಡಾಕ್ಷಣವೇ ತಿಳಿಸಿ ಸರಿಪಡಿಸಬೇಕು. ಇದರ ಜತೆ ಜತೆಗೆ ಅತಿಯಾದ ಮುದ್ದು ಕೂಡ ತಪ್ಪೇ. ಹಾಗಂತ ವಿಪರೀತ ಶಿಕ್ಷೆಯೂ ಸಲ್ಲ. ಮಕ್ಕಳ ವರ್ತನೆಗಳು ದುರ್ವರ್ತನೆಗಳಾಗುವ ಮುನ್ನವೇ ಸರಿಪಡಿಸುವುದು ಅತಿ ಅಗತ್ಯ.

ಮಕ್ಕಳು ಬೆಳೆಯುತ್ತ ಸಾಗಿದಂತೆ ಅವರಿಗೆ ಹಂತ ಹಂತವಾಗಿ ಕೆಲ ನಿರ್ಬಂಧ ಹಾಗೂ ನಿಯಮಗಳನ್ನು ಜಾರಿಗೊಳಿಸುತ್ತ ಬರಬೇಕು. ದೊಡ್ಡವರಾಗುವವರೆಗೆ ಕಾಯಬಾರದು. ಬಾಲ್ಯದಿಂದಲೇ ಬದುಕಿನ ಮೌಲ್ಯಗಳು, ಸೂಕ್ತ ದಿನಚರಿ, ಸಕಾರಾತ್ಮಕ ಚಿಂತನೆ, ಸರಿಯಾದ ನಡವಳಿಕೆ ಅಳವಡಿಸಿಕೊಳ್ಳುವಂತೆ ಮಾಡುವುದು ಸೂಕ್ತ. ಇದರ ಜತೆ ಜತೆಗೆ ಮಕ್ಕಳೆದುರು ದೊಡ್ಡವರು ಜಗಳಾಡುವುದು, ಅಶ್ಲೀಲ ಪದ ಬಳಸುವುದು, ಧೂಮಪಾನ ಮೊದಲಾದ ವ್ಯಸನಗಳನ್ನು ಮಾಡುವುದು ಸಲ್ಲದು. ಮಕ್ಕಳಿಗೆ ಅವರು ನೋಡುವ ಪ್ರತಿ ವಿಷಯವೂ ಜೀವನದಲ್ಲಿ ಮೊತ್ತ ಮೊದಲಾಗಿ ನೋಡುತ್ತಿರುವ ವಿಷಯವಾಗಿದ್ದು ಇದು ಸರಿಯೋ ತಪ್ಪೋ ಎಂದು ನಿರ್ಧರಿಸಲೂ ಸಾಧ್ಯವಾಗದ ಮನಸ್ಸನ್ನು ಹೊಂದಿರುತ್ತಾರೆ. ಎಲ್ಲಿಯವರೆಗೆ ಇದು ತಪ್ಪು ಎಂದು ಪಾಲಕರು ಸ್ಪಷ್ಟವಾಗಿ ಹೇಳುವುದಿಲ್ಲವೋ ಅಲ್ಲಿಯವರೆಗೂ ಆ ವಿಷಯವನ್ನು ಅವರು ಸರಿ ಎಂದೇ ತಿಳಿಯಬಹುದು. ಉದಾಹರಣೆಗೆ, ಬೆಂಕಿಯ ಜ್ವಾಲೆ. ಮೊದಲ ಬಾರಿಗೆ ನೋಡುವ ಮಗುವಿಗೆ ಜ್ವಾಲೆ ಬಿಸಿ ಇದೆ ಎಂದೇ ತಿಳಿದಿರುವುದಿಲ್ಲ. ನೋಡಲು ಸುಂದರವಾಗಿರುವ ಕಾರಣ ಇದನ್ನು ಮುಟ್ಟಲು ಹೋಗಬಹುದು. ಇದೇ ರೀತಿಯಾಗಿ ವಿದ್ಯುತ್ ಸಾಕೆಟ್​ಗಳು. ಮಕ್ಕಳು ಕುತೂಹಲದಿಂದ ಮೊಳೆ ಮೊದಲಾದವುಗಳನ್ನು ಇದರಲ್ಲಿ ತೂರಿಸಲು ಯತ್ನಿಸಬಹುದು. ಆಗ ಅನಾಹುತ ಸಂಭವಿಸಿದರೆ ಯಾರು ಹೊಣೆ. ಮತ್ತದೇ ಪಾಲಕರು.

ಯಾವುದು ಸರಿ, ಯಾವುದು ತಪ್ಪು ಎಂಬ ವಿವೇಕವನ್ನು ಬಾಲ್ಯದಲ್ಲೇ ಮೂಡಿಸಬೇಕು. ಅವರ ಮಾತುಗಳನ್ನೂ ಆಲಿಸಬೇಕು. ಅವರ ನಡೆ ನುಡಿ ಏನು ಎಂಬುದನ್ನು ನಾವೂ ಅರಿಯಬೇಕು. ಗೌರವಿಸಬೇಕು. ಅವರ ಆಸಕ್ತಿ ಏನು? ಅವರ ಆಲೋಚನೆಗಳು ಹೇಗಿವೆ? ಎತ್ತ ಸಾಗಿವೆ? ಎಂಬೆಲ್ಲ ವಿಷಯಗಳ ಮೇಲೆ ಗಮನಹರಿಸುವುದು ಕೂಡ ಅಷ್ಟೇ ಪ್ರಮುಖ. ಒಳ್ಳೆಯ ಕೆಲಸಗಳನ್ನು ಮಾಡಿದರೆ ಪ್ರಶಂಸಿಸಬೇಕು. ತಪ್ಪು ಕೆಲಸಗಳನ್ನು ಮಾಡಿದರೆ ತೆಗಳದೇ ಆಗಿದ್ದು ಆಗಿ ಹೋಯಿತು ಮತ್ತೆಂದೂ ಈ ರೀತಿ ಮಾಡಬೇಡ ಎಂದು ಸಂಭಾಳಿಸಬೇಕು. ಅಂದಾಗ ಅವರಿಗೂ ಸ್ವಲ್ಪ ಅರಿವಾಗುತ್ತದೆ. ಜನರೆದುರು ಹೀಗಳೆದರೆ ಅವಮಾನಗೊಂಡು ಸೇಡು ಇಟ್ಟುಕೊಳ್ಳುತ್ತಾರೆ. ಇನ್ನು ಕೆಲವರು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರ ಕೈಗೊಳ್ಳುತ್ತಾರೆ.

ಇದರ ಜತೆಗೆ ನಾವು ಮಕ್ಕಳಿಗೆ ಶ್ರದ್ಧೆ, ಶ್ರಮ ಇದ್ದರೆ ಸಾಧನೆ ಖಚಿತ ಎಂಬ ಪ್ರೇರಣೆ ತುಂಬಬೇಕು. ಸಾಧಕರನ್ನು ಪರಿಚಯಿಸಬೇಕು. ಅಸಾಧ್ಯವಾದುದು ಇಲ್ಲಿ ಯಾವುದೂ ಇಲ್ಲ ಎಂಬ ಹುರುಪು ತುಂಬಬೇಕು. ಒಟ್ಟಾರೆ ಹೇಳುವುದಾದರೆ ಬಾಲ್ಯದಲ್ಲಿ ಪಾಲಕರ ನಿರ್ಲಕ್ಷ್ಯದಿಂದ ಮಕ್ಕಳ ಇಡೀ ಸಮಾಜಕ್ಕೆ ಘಾತಕರಾಗಬಾರದು ಅಷ್ಟೇ. ಹಾಗೆ ಅಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net