ಅಡಕೆ ಕೊಯ್ಲಿಗೆ ಫೈಬರ್ ದೋಟಿ; 10ರಿಂದ 3 ದಿನ ದೋಟಿ ಕೊಯ್ಲು ಉಚಿತ ತರಬೇತಿ

Vittavani 1
Published on
ಮಲೆನಾಡು, ಕರಾವಳಿ ಭಾಗದಲ್ಲಿ ಸಾಂಪ್ರದಾಯಿಕ ಬೆಳೆಯಾಗಿದ್ದ ಅಡಕೆ, ಈಗಾಗಲೆ ವಾಣಿಜ್ಯ ಬೆಳೆಯಾಗಿ ಎಲ್ಲೆಡೆ ವ್ಯಾಪಿಸಿದೆ. ಮಲೆನಾಡು, ಕರಾವಳಿ ಭಾಗವನ್ನು ಮೀರಿಸುವಂತೆ ಬಯಲು ಸೀಮೆಯಲ್ಲಿ ಅಡಕೆ ಬೆಳೆ ರೈತರ ಆಯ್ಕೆಯಾಗಿದೆ. ಇದಕ್ಕೆ ಅಡಕೆಗೆ ಇತ್ತೀಚೆಗೆ ಸಿಗುತ್ತಿರುವ ದರವೂ ಕಾರಣ ಇರಬಹುದು. ಅಂತೆಯೇ, ಅಡಕೆ ಕೊಯ್ಲು, ಔಷಧ ಸಿಂಪಡಣೆ ವೇಳೆ ಕೂಲಿ ಕಾರ್ವಿುಕರ ಸಮಸ್ಯೆ ಅಪಾರ. ಎತ್ತರದ ಮರವೇರಿ ಅಡಕೆ ಗೊನೆ ಇಳಿಸುವ, ಔಷಧ ಸಿಂಪಡಣೆ ಮಾಡುವವರ ಸಂಖ್ಯೆ ಬಹಳ ಕಡಿಮೆ. ಈ ಸಮಸ್ಯೆ ನಿವಾರಣೆಗೆ ಕಾರ್ಬನ್ ಫೈಬರ್ ದೋಟಿ ಉತ್ತಮ ಸಾಧನ. ಈಗಾಗಲೆ ಮಲೆನಾಡು, ಕರಾವಳಿ ಭಾಗದಲ್ಲಿ ಫೈಬರ್ ದೋಟಿ ಸದ್ದು ಮಾಡುತ್ತಿದೆ. ಈ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ.

| ಶ್ರೀಪಡ್ರೆ ಕಾಸರಗೋಡು

ತರಬೇತಿ ಮುಗಿಸಿದ ಮರುದಿನವೇ ನಾವಿಬ್ಬರೂ 150 ಅಡಕೆ ಗೊನೆ ಕೊಯ್ದಿದ್ದೇವೆ. ಅದೂ ತುಂಬಾ ಎತ್ತರದ ಮರಗಳಲ್ಲಿ. ಮೊದಲ ದಿನವೇ ತಲಾ 900 ರೂಪಾಯಿ ಸಂಪಾದಿಸಿದ್ದೇವೆ. ಇದು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಸಮೀಪ ಖಂಡಿಕದ ಗಿರೀಶ್ ಹಾಗೂ ಶಿವಮೂರ್ತಿ ಎಂಬುವರ ಆತ್ಮವಿಶ್ವಾಸದ ನುಡಿ.

ತೀರ್ಥಹಳ್ಳಿಯ ಮಲೆನಾಡು ಕೃಷಿಕರ ಸಮುದಾಯ ಮತ್ತು ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ವಿಶ್ವವಿದ್ಯಾಲಯ ಈಚೆಗೆ ತೀರ್ಥಹಳ್ಳಿಯಲ್ಲಿ ಕಾರ್ಬನ್ ಫೈಬರ್ ದೋಟಿ ಮೂಲಕ ಅಡಕೆ ಕೊಯ್ಲಿನ ತರಬೇತಿ ನಡೆಸಿದ್ದರು. ಅಲ್ಲಿ ತರಬೇತಿ ಪಡೆದ ಈ ಇಬ್ಬರೂ ಯುವಕರು ಜೀವನಕ್ಕೆ ದಾರಿ ಕಂಡುಕೊಂಡಿದ್ದಾರೆ. ದೋಟಿ ವಿಧಾನದಲ್ಲಿ ಅಡಕೆ ಕೊಯ್ಲ್ಲು- ಔಷಧ ಸಿಂಪಡಣೆೆಗಳಲ್ಲಿ ತೊಡಗುವ ಇವರು, ತೋಟದಲ್ಲಿ ಹಾದುಹೋಗುವ ವಿದ್ಯುತ್ ಲೈನಿನ ಬಗ್ಗೆ ಎಚ್ಚರ ವಹಿಸಿದರೆ ಸಾಕು. ಉಳಿದಂತೆ, ಕೆಲಸ ಸುಲಭ ಎನ್ನುತ್ತಾರೆ. ಉತ್ತರ ಕನ್ನಡ ಜಿಲ್ಲೆಯ ಯಡಳ್ಳಿ ಸೊಸೈಟಿ ಕಳೆದ ವಾರ ಇಂಥದೇ ತರಬೇತಿ ನಡೆಸಿತ್ತು. ಅದರಲ್ಲಿ ಪಳಗಿದ ಕೆಲ ಯುವಕರು ಈಗಾಗಲೆ ವೃತ್ತಿ ಆರಂಭಿಸಿದ್ದಾರೆ. ನಾವೇ ಕೊಯ್ಲಿನ ತಂಡ ಕಟ್ಟಿ ಸೊಸೈಟಿ ಮೂಲಕವೇ ಕೊಯ್ಲು-ಸಿಂಪಡಣೆ ಕೆಲಸ ಮಾಡಿಸಲು ಮುಂದಾಗಿದ್ದೇವೆ ಎನ್ನುತ್ತಾರೆ ಸೊಸೈಟಿ ಅಧ್ಯಕ್ಷ ಜಿ.ಆರ್.ಹೆಗಡೆ ಬೆಳ್ಳೆಕೇರಿ. ಸೊಸೈಟಿಯೇ ಇಂಥ ತಂಡ ಕಟ್ಟಿ ಕೊಯ್ಲು-ಸಿಂಪಡಣೆ ನಡೆಸುವ ಕಾರ್ಯ ಮೊದಲು ಆರಂಭಿಸಿದ್ದು ಉ.ಕ. ಜಿಲ್ಲೆ ನಾಣಿಕಟ್ಟಾದ ತ್ಯಾಗಲಿ ಸೊಸೈಟಿ. 3 ವರ್ಷದಿಂದ ಈ ಕಾರ್ಯ ಮಾಡುತ್ತಿದೆ.

ಶಿಷ್ಯವೇತನ, ಸಮವಸ್ತ್ರ, ಹೆಲ್ಮೆಟ್, ಸಂಪನ್ಮೂಲ ವ್ಯಕ್ತಿಗಳ ಸಂಭಾವನೆ ಮತ್ತಿತರ ಎಲ್ಲ ಖರ್ಚು ಸೇರಿ 25,000 ರೂ.ಗಳಲ್ಲಿ ಆರೆಂಟು ಶಿಬಿರಾರ್ಥಿಗಳಿಗೆ ಎರಡು ದಿನದ ತರಬೇತಿ ನಿಭಾಯಿಸಬಹುದು. ತರಬೇತಿ ಪಡೆದ ಹೊಸಬರು ದಿನಕ್ಕೆ 1 ಸಾವಿರ ರೂ.ನಿಂದ ವರ್ಷದೊಳಗೆ 2 ಸಾವಿರ ರೂ.ಸಂಪಾದಿಸುವ ಮಟ್ಟಕ್ಕೆ ಬಂದಿದ್ದಾರೆ. | ಶಂನಾ ಖಂಡಿಗೆ ಕ್ಯಾಂಪ್ಕೋ ಕೌಶಲ ಪಡೆ ನಿರ್ದೇಶಕ, ಕ್ಯಾಂಪ್ಕೋ ಉಪಾಧ್ಯಕ್ಷ

ಏನಿದು ದೋಟಿ ತಂತ್ರ?: ಅಡಕೆ ಮರವನ್ನೇರಿ ಇಳಿಯುವುದು ರಿಸ್ಕ್ ಎಂಬ ಕಾರಣಕ್ಕೆ ಅದರ ಕಾರ್ವಿುಕರ ಸಂಖ್ಯೆ ಕಡಿಮೆಯಾಗುತ್ತಿದೆ. ಅದರ ಬದಲು ಉದ್ದುದ್ದ ಕಾರ್ಬನ್ ಫೈಬರ್ ದೋಟಿಗಳನ್ನು ಬಳಸಿಕೊಂಡು ಅಡಕೆ ಕೊಯ್ಲು ಮಾಡುವುದು, ಔಷಧ ಸಿಂಪಡಣೆ ಮಾಡುವ ತಂತ್ರಕ್ಕೆ ಮೊರೆಹೋಗುತ್ತಿದ್ದಾರೆ. 60ರಿಂದ 80 ಅಡಿಯಷ್ಟು ಎತ್ತರದ ದೋಟಿಗಳು ಈಗ ಲಭ್ಯ. ಇದರ ಬೆಲೆ ಅಡಿಗೆ 1,000 ರೂ. ಬೇಕಾದ ಉದ್ದಕ್ಕೆ ಇದನ್ನು ಏರಿಸಿ ಇಳಿಸಬಹುದು, ಗಟ್ಟಿ ಮಾಡಲು ಕ್ಲಿಪ್​ಗಳಿವೆ. ಕನಿಷ್ಠ 6 ಅಡಿಗೆ ಮಡಚಿ ಬೈಕಲ್ಲಿ ಕಟ್ಟಿ ಕೊಂಡೊಯ್ಯಲು ಸಾಧ್ಯವಿದೆ. ಕೊಯ್ಲಿಗೆ, ಸಿಂಪಡಣೆಗೆ ಒಂದೇ ದೋಟಿ. ಕೊಯ್ಲು ಸಂದರ್ಭ ಕತ್ತಿಯನ್ನು ಕಟ್ಟಲಾಗುತ್ತದೆ. ಸಿಂಪಡಣೆಗೆ ಸಾಮಾನ್ಯ ಪೈಪನ್ನೇ ಅಳವಡಿಸಿಕೊಳ್ಳಬಹುದು. ಕೆಳಗಿ ನಿಂದಲೇ ಗೊನೆಯನ್ನು ಗಮನಿಸಿ ಕೊಯ್ಲು ಮಾಡಬೇಕಾದ್ದರಿಂದ ಕೆಲಸಗಾರರ ದೃಷ್ಟಿ ಬಲ ಚೆನ್ನಾಗಿರಬೇಕು. ಉದ್ದಕ್ಕೆ ದೋಟಿಯನ್ನು ವಿಸ್ತರಿಸಿದಾಗ ಅದನ್ನು ಸಮತೋಲನದಲ್ಲಿ ಇರಿಸಿಕೊಂಡು ಕೆಲಸ ಮಾಡಲು ಅನುಭವ ಬೇಕಾಗುತ್ತದೆ.

10 ರಿಂದ ತರಬೇತಿ: ಕರಾವಳಿಯಲ್ಲಿ ಕ್ಯಾಂಪ್ಕೋ, ಅಡಕೆ ಪತ್ರಿಕೆ, ಸಿಪಿಸಿಆರ್​ಐ ಮತ್ತು ಅಭಾಅಬೆ ಸಂಘದ ಆಶ್ರಯದಲ್ಲಿ ಜನವರಿ 10ರಿಂದ ಮೂರು ದಿನ ದೋಟಿಕೊಯ್ಲು ಉಚಿತ ತರಬೇತಿ ನಡೆಸಲಿವೆ. ವಿಟ್ಲ ಸಿಪಿಸಿಆರ್​ಐನಲ್ಲಿ ಶಿಬಿರ ನಡೆಯಲಿದೆ. ಪ್ರಾಥಮಿಕ ಸಹಕಾರಿ ಸಂಘ, ಸರ್ಕಾರೇತರ ಸಂಸ್ಥೆ ಮತ್ತು ರೈತ ಉತ್ಪಾದಕ ಸಂಘಗಳು ಈ ರೀತಿಯ ತರಬೇತಿಯನ್ನು ಯುವಕರಿ ಗಾಗಿ ಹಮ್ಮಿಕೊಳ್ಳಬಹುದು. ಇಬ್ಬರು ದೋಟಿಕೊಯ್ಲು ಪರಿಣತರನ್ನು ಸಂಪನ್ಮೂಲ ವ್ಯಕ್ತಿಗಳಾಗಿ ಗೊತ್ತು ಮಾಡಿಕೊಂಡರೆ ಸಾಕು. ಎರಡು ದಿನ ತೋಟದಲ್ಲಿ ಪ್ರಾಯೋಗಿಕ ತರಬೇತಿ ಕೊಟ್ಟು ದೋಟಿ ಬ್ಯಾಲೆನ್ಸಿಂಗ್, ಏರಿಳಿ ಸುವ ಸೂಕ್ತ ವಿಧಾನ, ‘ಮಾಡಿ ಮತ್ತು ಬೇಡಿ’ಗಳನ್ನು ಕಲಿಸಿ ಅವರಿಂದಲೇ ಕೊಯ್ಲು- ಔಷಧ ಸಿಂಪಡಣೆ ಮಾಡಿಸಿದರೆ ಆಯ್ತು. ಗ್ರಾಮಗಳಲ್ಲಿ ಅಡಕೆ ಕೊಯ್ಲು - ಔಷಧ ಸಿಂಪಡಣೆಗೆ ಕೂಲಿ ಕಾರ್ವಿುಕರ ಸಮಸ್ಯೆ ತಪ್ಪಲಿದೆ.

(ಲೇಖಕರು: ಕೃಷಿ ತಜ್ಞರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net