ಘಂಟಾನಾದದಿಂದ ದೈವಿಕ ಉಪಸ್ಥಿತಿಯ ಭಾವನೆ

ವಿಜಯವಾಣಿ (3)
Published on

(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)

ನಾವು ಯಾವುದೇ ದೇವಸ್ಥಾನ, ಮಂದಿರ ಮುಂತಾದ ಪುಣ್ಯ ಕ್ಷೇತ್ರಗಳಿಗೆ ಹೋದಾಗ ಮುಂಬಾಗಿಲ ಬಳಿ ನೇತು ಹಾಕಿರುವ ಘಂಟೆಯನ್ನು ಬಾರಿಸಿ, ಕೈ ಮುಗಿದು ಒಳ ನಡೆಯುವುದು ವಾಡಿಕೆ/ ಸಂಪ್ರದಾಯ. ಮುಂಬಾಗಿಲು ಮಾತ್ರವಲ್ಲದೆ ಒಳಾಂಗಣ, ಗರ್ಭಗುಡಿಯ ಎದುರು ಹೀಗೆ ಅಲ್ಲಲ್ಲಿ ತೂಗು ಹಾಕಿರುವ ಘಂಟೆಗಳನ್ನು ಬಾರಿಸಿದಾಗ ಕೇಳಿ ಬರುವ ಶಬ್ದದಿಂದ ಮನಸ್ಸು ಉಲ್ಲಸಿತಗೊಳ್ಳುತ್ತದೆ. ಪ್ರಶಾಂತ ವಾತಾವರಣದಲ್ಲಿ ಅದೇನೋ ಸಂಚಲನ ಉಂಟಾದಂತೆ ಭಾಸವಾಗುತ್ತದೆ.

ಸನಾತನ ಧರ್ಮದಲ್ಲಿ ಘಂಟೆಯು ತನ್ನದೇ ಆದ ಪಾವಿತ್ರ್ಯವನ್ನು ಹೊಂದಿದ್ದು, ಅದನ್ನು ಬಾರಿಸಿದಾಗ ಅದರಿಂದ ಓಂ ಎಂಬ ಶಬ್ದ ಕೇಳಿಬರುತ್ತದೆ. ಘಂಟೆಯ ಶಬ್ದದಿಂದ ವಾತಾವರಣದಲ್ಲಿರುವ ಋಣಾತ್ಮಕ ಶಕ್ತಿಗಳು ದೂರವಾಗಿ ಧನಾತ್ಮಕ ಕಂಪನದ ಅಲೆಗಳು ಉದ್ಭವವಾಗುತ್ತವೆ. ಜೊತೆಗೆ ಘಂಟೆ ಬಾರಿಸುವ ಮೂಲಕ ಭಗವಂತನಿಗೆ ನಮ್ಮ ಇರುವಿಕೆಯನ್ನೂ ಸಾಕ್ಷಾತ್ಕಾರ ಮಾಡಿಕೊಳ್ಳುವುದೂ ಆಗಿದೆ. ಎಲ್ಲಾ ಕ್ಷೇತ್ರಗಳಲ್ಲಿ ವಿವಿಧ ಆಕಾರದ ಘಂಟೆಗಳು ಇರುತ್ತವೆ. ಒಂದೆರಡು ಕೆ.ಜಿ. ತೂಕದಿಂದ ಹಿಡಿದು ನೂರಾರು ಕೆ.ಜಿ. ತೂಗುವ ಘಂಟೆಗಳು ಇದ್ದು, ಹೆಚ್ಚಿನವು ಹಿತ್ತಾಳೆ, ತಾಮ್ರಗಳಿಂದ ನಿರ್ವಿುತವಾಗಿರುತ್ತವೆ. ನಮ್ಮ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲೂ ದೇವಸ್ಥಾನದ ಒಳ ಪ್ರವೇಶ ಮಾಡುವ ಮುಖ್ಯ ಬಾಗಿಲಿನ ಬಳಿ ದೊಡ್ಡದಾದ ಘಂಟೆಯಿರುವುದನ್ನು ಗಮನಿಸಿರಬಹುದು. ಹಾಗೆಯೇ ಮಂಜೂಷಾ ವಸ್ತು ಸಂಗ್ರಹಾಲಯದಲ್ಲಿ ವಿವಿಧ ಆಕಾರದ ಹಾಗೂ ವಿವಿಧ ಲೋಹಗಳಿಂದ ನಿರ್ವಿುತವಾದ ಘಂಟೆಗಳನ್ನು ಕಾಣಬಹುದಾಗಿದೆ. ಘಂಟೆಯ ಶಬ್ದದಿಂದ ಮನಸ್ಸಿಗೆ ಏಕಾಗ್ರತೆ ಪ್ರಾಪ್ತವಾಗಿ ದೇವರ ದರ್ಶನಕ್ಕಾಗಿ ಭಕ್ತಿ ಸ್ಪುರಿಸಲು ಸಹಕಾರಿಯಾಗುತ್ತದೆ ಎಂಬ ನಂಬಿಕೆ ಇದೆ.

ದೇವರ ಪೂಜೆಯ ಸಂದರ್ಭ ಘಂಟಾಮಣಿ ಆಡಿಸುತ್ತಾ ‘ಆಗಮಾರ್ಥಂತು ದೇವಾನಾಂ ಗಮಾನಾರ್ಥಂತು ರಾಕ್ಷಸಾಂ ಕುರ್ವೆಘಂಟಾರವಂ ತತ್ರ ದೇವತಾಹ್ವಾನ ಲಾಂಛನಂ’ ಎಂಬ ಮಂತ್ರವನ್ನು ಹೇಳುತ್ತಾರೆ. ಇದರರ್ಥ ‘ದೇವರ ಆಗಮನಕ್ಕಾಗಿ, ರಾಕ್ಷಸರ/ ದುಷ್ಟ ಶಕ್ತಿಗಳ ನಿರ್ಗಮನಕ್ಕಾಗಿ ದೇವಸ್ಥಾನದ ಲಾಂಛನವಾದ ಘಂಟಾನಾದ ಮಾಡುತ್ತಿದ್ದೇವೆ’ ಎಂಬುದಾಗಿದೆ. ಹಾಗಾಗಿ ಘಂಟಾನಾದ ಶುಭಪ್ರದವಾದದ್ದು. ಎಲ್ಲಿ ಘಂಟೆ, ಶಂಖಗಳ ನಾದವಿರುತ್ತದೋ ಅಲ್ಲಿ ದುಷ್ಟ ಶಕ್ತಿಗಳು ವಾಸಿಸುವುದಿಲ್ಲ ಎಂಬ ಪ್ರತೀತಿ ಇದೆ. ಬೆಳಗ್ಗೆ ಅಥವಾ ಸಂಜೆ ವೇಳೆ ದೇವರಿಗೆ ದೀಪ ಬೆಳಗಿಸುವ ಸಂದರ್ಭ ಶಂಖಾನಾದ, ಘಂಟಾನಾದ ಮಾಡುತ್ತಾರೆ. ಆ ಮೂಲಕ ದೇವಾಲಯದಲ್ಲಿ ಸ್ಥಾಪಿಸಲಾದ ಲಿಂಗ ಅಥವಾ ಮೂರ್ತಿಗಳ ಸಾನ್ನಿಧ್ಯ ಜಾಗೃತವಾಗುತ್ತದೆ, ನಂತರ ಅವರ ಪೂಜೆ ಮತ್ತು ವ್ರತವು ಹೆಚ್ಚು ಫಲಪ್ರದ ಮತ್ತು ಪರಿಣಾಮಕಾರಿಯಾಗುತ್ತದೆ. ಇದರಿಂದಾಗಿ ಶಾಂತಿ ಮತ್ತು ದೈವಿಕ ಉಪಸ್ಥಿತಿಯ ಭಾವನೆ ಬರುತ್ತದೆ.

ಘಂಟೆಯ ಬಗ್ಗೆ ವೈಜ್ಞಾನಿಕವಾಗಿ ಸಾಕಷ್ಟು ಸಂಶೋಧನೆಗಳೂ ನಡೆದಿವೆ. ಘಂಟಾನಾದವನ್ನು ಸೌಂಡ್ ಥೆರಪಿಗೆ ಹೋಲಿಸುತ್ತಾರೆ. ಘಂಟೆಯ ನಾದದಿಂದ ಮಾನಸಿಕ ನೆಮ್ಮದಿ ಪ್ರಾಪ್ತವಾಗುತ್ತದೆ ಎನ್ನಲಾಗಿದೆ. ಶಬ್ದದ ಅಲೆಗಳು ಮನಸ್ಸಿನಲ್ಲಿ ಕಂಪನವನ್ನುಂಟು ಮಾಡಿ ಶಾಂತಿಗೆ ಕಾರಣವಾಗುತ್ತವೆ. ಘಂಟೆ ಇದೆ ಎಂದು ಒಟ್ಟಾರೆಯಾಗಿ ಬಾರಿಸದೇ ಲಯಬದ್ಧವಾಗಿ ಬಾರಿಸಬೇಕು. ಒಮ್ಮೆ ಬಾರಿಸಿದಾಗ ಏಳು ಸೆಕೆಂಡುಗಳ ಕಾಲ ಶಬ್ದದ ಅಲೆಗಳು ವಾತಾವರಣದಲ್ಲಿರುತ್ತವೆ. ಅದರ ಪ್ರತಿ ಧ್ವನಿ ನಮ್ಮ ಬಲ ಮತ್ತು ಎಡ ಮೆದುಳಿನ ನಡುವೆ ಅನ್ಯೋನ್ಯತೆ ಸಾಧಿಸಲು ಸಾಧ್ಯವಾಗುತ್ತದೆ ಎಂದು ಹೇಳಲಾಗುತ್ತದೆ. ಘಂಟೆಯ ಶಬ್ದದ ಕಂಪನದ ಪ್ರಯೋಜನವೆಂದರೆ ಅದು ವಾತಾವರಣದಲ್ಲಿನ ನಕಾರಾತ್ಮಕತೆಯನ್ನು ಮಾತ್ರ ದೂರವಾಗಿಸುವುದಲ್ಲದೆ, ಬ್ಯಾಕ್ಟೀರಿಯಾ, ವೈರಸ್​ಗಳನ್ನು ಮತ್ತು ಸೂಕ್ಷ್ಮಾಣು ಜೀವಿಗಳನ್ನು ನಾಶ ಮಾಡುತ್ತದೆ. ಇದರಿಂದಾಗಿ ಸುತ್ತಮುತ್ತಲಿನ ಪರಿಸರವು ಶುದ್ಧವಾಗುತ್ತದೆ ಎಂದು ವಿಜ್ಞಾನಿಗಳು ಪ್ರತಿಪಾದಿಸಿದ್ದಾರೆ.

ನಮ್ಮ ಸನಾತನ ಧಾರ್ವಿುಕ ಕ್ಷೇತ್ರಗಳಲ್ಲಿ ಮಾತ್ರವಲ್ಲದೆ ಕ್ರೖೆಸ್ತ ಧರ್ವಿುಯರ ಪ್ರಾರ್ಥನಾ ಮಂದಿರಗಳಲ್ಲಿಯೂ ಘಂಟೆ ಇರುವುದನ್ನು ಕಾಣಬಹುದು. ವಿಶೇಷವೆಂದರೆ ಪ್ರತಿ ಕೇಂದ್ರದಲ್ಲಿ ಬೃಹತ್ತಾದ ಒಂದೇ ಒಂದು ಘಂಟೆಯನ್ನು ಮಾತ್ರ ಅಳವಡಿಸಿ ಪ್ರಾರ್ಥನೆ, ವಿಶೇಷ ಸಂದರ್ಭಗಳಲ್ಲಿ ಬಾರಿಸುತ್ತಾರೆ. ಘಂಟೆಯು ಧಾರ್ವಿುಕವಾಗಿ ಮಾತ್ರವಲ್ಲದೆ ವಿವಿಧ ಸಂದರ್ಭ ಹಾಗೂ ವಿವಿಧ ಕಡೆಗಳಲ್ಲಿ ಬಳಕೆಯಲ್ಲಿದೆ. ಹಿಂದಿನ ಕಾಲದಲ್ಲಿ ಸಮಯ ನೋಡಲು ಈಗಿನ ಹಾಗೆ ವಾಚ್, ಗಡಿಯಾರ ಮುಂತಾದ ಯಾವುದೇ ವ್ಯವಸ್ಥೆಗಳಿರಲಿಲ್ಲ. ಅಂಗಳದಲ್ಲಿ ಕೋಲನ್ನಿರಿಸಿ, ಅದಕ್ಕೆ ಬಿಸಿಲು ಬಿದ್ದಾಗ ನೆಲದಲ್ಲಿ ಮೂಡುವ ನೆರಳನ್ನು ಆಧಾರಿಸಿ ಸಮಯವನ್ನು ಅಂದಾಜಿಸುತ್ತಿದ್ದರು. ಈ ಸಮಯವನ್ನು ಸುತ್ತಮುತ್ತಲಿನ ಜನರಿಗೆ ತಿಳಿಸುವ ಸಲುವಾಗಿ ದೊಡ್ಡದಾದ ಘಂಟೆಯನ್ನು ಬಾರಿಸಲಾಗುತ್ತಿತ್ತು. ಆಗ ಹೊಲ, ಗದ್ದೆ, ಜಮೀನಿನಲ್ಲಿ ಕೆಲಸ ಮಾಡುತ್ತಿರುವವರು ಓ ಗಂಟೆ 11 ಆಯಿತು, 12 ಆಯಿತು ಎಂದು ತಿಳಿದುಕೊಳ್ಳುತ್ತಿದ್ದರು.

ಜೊತೆಗೆ ದೇವಸ್ಥಾನಗಳಲ್ಲಿ ಮಹಾಪೂಜೆಯ ಸಂದರ್ಭದಲ್ಲಿ ಮೊಳಗುವ ಘಂಟಾನಾದವನ್ನು ಕೇಳಿಯೇ ಇಷ್ಟು ಗಂಟೆಯಾಯಿತು ಎಂಬುದನ್ನು ತಿಳಿಯಲಾಗುತ್ತಿತ್ತು. ನಮ್ಮ ಕ್ಷೇತ್ರದಲ್ಲೂ ನಿತ್ಯವೂ ಆಯಾ ಗಂಟೆಗೆ ಅನುಗುಣವಾಗಿ ದೇವಸ್ಥಾನದ ಮುಂಬಾಗಿಲ ಬಳಿ ಇರುವ ದೊಡ್ಡ ಘಂಟೆಯನ್ನು ಬಾರಿಸಲಾಗುತ್ತದೆ. ಜೊತೆಗೆ ಡೋಲನ್ನೂ ಬಾರಿಸಲಾಗುತ್ತದೆ. ಹಿಂದೊಮ್ಮೆ ಮ್ಯಾನ್ಮಾರ್ (ಬರ್ವ) ದೇಶಕ್ಕೆ ಪ್ರವಾಸ ಹೋಗಿದ್ದಾಗ ಅಲ್ಲಿ ಬೃಹತ್ ಗಾತ್ರದ ಘಂಟೆಗಳನ್ನು ಕಂಡು ಆಶ್ಚರ್ಯಗೊಂಡಿದ್ದೆ. ಏಕೆಂದರೆ ಊಹೆ ಮಾಡಲಾಗದಷ್ಟು ದೊಡ್ಡ ಗಾತ್ರ ಘಂಟೆ ಅದಾಗಿತ್ತು. ಬೌದ್ಧ ದೇಶವಾಗಿರುವ ಮ್ಯಾನ್ಮಾರ್​ನಲ್ಲಿ ಎಲ್ಲಿ ನೋಡಿದರೂ ಘಂಟೆಗಳು ಕಾಣ ಸಿಗುತ್ತವೆ. ಅಲ್ಲಿ ಮಿಂಗನ್ ಬೆಲ್ ಮತ್ತು ಧಮ್ಮಜೇದಿ ಎಂಬ ಎರಡು ಪ್ರಸಿದ್ಧ ಘಂಟೆಗಳಿದ್ದು ಧಮ್ಮಜೇದಿ ಮಹಾ ಘಂಟೆ ವಿಶ್ವದ ಅತಿ ದೊಡ್ಡ ಘಂಟೆಯಾಗಿದೆ. ಇದು 294 ಟನ್ ತೂಕ ಹೊಂದಿದ್ದು, ಬೆಳ್ಳಿ ಮತ್ತು ಚಿನ್ನ ಹಾಗೂ ತಾಮ್ರ ಮತ್ತು ತವರ ಲೋಹಗಳಿಂದ ನಿರ್ವಿುತವಾಗಿದೆ.

ಅಷ್ಟು ದೊಡ್ಡ ಘಂಟೆ ನೋಡುವಾಗ ಇದನ್ನು ಹೇಗೆ ನಿರ್ವಿುಸಿರಬಹುದು? ಹೇಗೆ ಕಂಬ ಕೊಟ್ಟು ನಿಲ್ಲಿಸಿರಬಹುದು? ಎಂದೆಲ್ಲ ಯೋಚನೆಗಳ ಜೊತೆಗೆ ಇದನ್ನು ಬಾರಿಸಲು ಎಷ್ಟು ಜನರು ಬೇಕಾಗುತ್ತದೋ ಎಂಬ ಪ್ರಶ್ನೆಯೂ ಮೂಡುತ್ತದೆ. ಅಂಥಾ ಘಂಟೆಯನ್ನು ಬಾರಿಸಬೇಕೆಂದರೆ ಬಹುಶಃ ಆನೆಯೇ ಬೇಕಾಗಬಹುದೋ ಏನೋ. ಹಿಂದೆ ರಾಜರ ಆಸ್ಥಾನಗಳಲ್ಲಿ ಅಥವಾ ಅರಮನೆಯ ಎದುರುಗಡೆ ದೊಡ್ಡ ಘಂಟೆಯೊಂದನ್ನು ನೇತು ಹಾಕುತ್ತಿದ್ದರು. ರಾಜನ ಆಸ್ಥಾನದಲ್ಲಿ ದೂರು ಸಲ್ಲಿಸಬೇಕಿದ್ದರೆ ಪ್ರಜೆಗಳು ಆ ಘಂಟೆಯನ್ನು ಬಾರಿಸಬಹುದಿತ್ತು. ಆಗ ಅವರನ್ನು ಕರೆಸಿಕೊಂಡು ಸಮಸ್ಯೆಗಳಿಗೆ ಪರಿಹಾರ ನೀಡುವ ವ್ಯವಸ್ಥೆಯಿತ್ತು. ದೂರು ನೀಡಲು ಮಾತ್ರವಲ್ಲದೆ ರಾಜ್ಯ, ಕೋಟೆಯ ಮೇಲೆ ದಾಳಿಯಾದಾಗ ಎಚ್ಚರಿಕೆ ನೀಡಲು ಘಂಟೆಯನ್ನು ಬಳಸುವ ಪದ್ಧತಿ ಇದ್ದುದನ್ನು ಇತಿಹಾಸದಲ್ಲಿ ತಿಳಿಯಬಹುದಾಗಿದೆ.

ಗ್ರಾಮೀಣ ಜನರೂ ಘಂಟೆಗಳನ್ನು ಸಾಕಷ್ಟು ರೀತಿಯಲ್ಲಿ ಬಳಸುತ್ತಾರೆ. ಮುಖ್ಯವಾಗಿ ತಮ್ಮ ಮನೆಯ ಜಾನುವಾರುಗಳ ಕುತ್ತಿಗೆಗೆ ಘಂಟೆಯನ್ನು ಕಟ್ಟುತ್ತಾರೆ. ಯಾಕೆಂದರೆ ಅವುಗಳನ್ನು ದೂರದೂರ ಮೇಯಲು ಬಿಟ್ಟಾಗ ಅವು ಮರಳಿ ಬಾರದೆ ಇದ್ದಾಗ ಅವುಗಳ ಕುತ್ತಿಗೆಯಲ್ಲಿರುವ ಘಂಟೆಯ ಶಬ್ದವನ್ನು ಆಲಿಸಿ ಅವುಗಳಿರುವ ಜಾಗವನ್ನು ಪತ್ತೆ ಹಚ್ಚಬಹುದಾಗಿತ್ತು. ಘಂಟೆಗಳು ಬಳಕೆಗೆ ಬರುವ ಮುನ್ನ ಬಿದಿರನ್ನು ಬಳಸಿಕೊಂಡು ತಯಾರಿಸಿದ ವಸ್ತುಗಳು ಹಸುಗಳ ಕೊರಳನ್ನು ಅಲಂಕರಿಸಿದ್ದವು. ಇನ್ನು ಕೆಲವೆಡೆಗಳಲ್ಲಿ ಬಸವನನ್ನು ಮನೆಮನೆಗೆ ಕರೆದುಕೊಂಡು ಹೋಗಿ ಪೂಜಿಸಲಾಗುತ್ತದೆ. ಆ ಸಂದರ್ಭದಲ್ಲಿ ಬಸವನಿಗೆ ಘಂಟೆ ಕಟ್ಟಿ ಮನೆಯವರಿಗೆ ಒಳಿತಾಗಲೆಂದು ಪ್ರಾರ್ಥಿಸುವ ಸಂಪ್ರದಾಯವಿದೆ.

ಮಕ್ಕಳಿಗೆ ಅತಿ ಇಷ್ಟವಾಗುವ ಇನ್ನೊಂದೆರಡು ಘಂಟೆನಾದಗಳಿವೆ. ಅದೇನೆಂದರೆ ಐಸ್​ಕ್ಯಾಂಡಿ ಮಾರುವಾತನದ್ದು. ದೂರದಿಂದಲೇ ಅಸ್ಪಷ್ಟವಾಗಿ ಐಸ್​ಕ್ಯಾಂಡಿ ಘಂಟೆ ಸದ್ದು ಕೇಳಿತೆಂದರೆ ಸಾಕು, ಮಕ್ಕಳ ಕಿವಿಗಳೆಲ್ಲ ಅಲರ್ಟ್ ಆಗುತ್ತವೆ. ಆಗಲೇ ‘ಅಮ್ಮಾ ಎರಡು ರೂಪಾಯಿ ಕೊಡು, ಐದು ರೂ. ಕೊಡು, ಹತ್ತು ರೂ. ಕೊಡು, ನನಗೆ ಐಸ್ ಕ್ಯಾಂಡಿ ಬೇಕು, ಬೆಲ್ಲ ಕ್ಯಾಂಡಿ ಬೇಕು’ ಎಂದು ಅಮ್ಮನನ್ನು ಕಾಡಿಸತೊಡಗುತ್ತಾರೆ. ‘ಅಪ್ಪಾ ಕ್ಯಾಂಡಿಗೆ ದುಡ್ಡು ಕೊಡಪ್ಪಾ’ ಎಂದು ಗೋಗರೆಯುತ್ತಾರೆ. ಒಮ್ಮೊಮ್ಮೆ ಮಕ್ಕಳ ಈ ಕಾಟವನ್ನು ತಡೆಯಲಾಗದ ಹೆತ್ತವರು ಐಸ್​ಕ್ಯಾಂಡಿ ಮಾರುವಾತನಿಗೆ ‘ನೋಡು, ನಾಳೆಯಿಂದ ನಮ್ಮ ಮನೆ ಹತ್ತಿರ ಬರುವಾಗ ಘಂಟೆ ಹೊಡಿಬೇಡ, ಮುಂದೆ ಹೋದ ಮೇಲೆ ಘಂಟೆ ಹೊಡಿ. ಘಂಟೆ ಶಬ್ದ ಕೇಳಿದಾಕ್ಷಣ ಮಕ್ಕಳು ಕ್ಯಾಂಡಿ ಬೇಕೆಂದು ಹಠ ಹಿಡಿದು ರಂಪಾಟ ಮಾಡುತ್ತಾರೆ’ ಎನ್ನುವುದೂ ಇದೆ. ಹಾಗೆಯೇ ಶಾಲೆಯಲ್ಲಿ ಬೆಳಗ್ಗೆ ಘಂಟೆ ಬಾರಿಸುವ ಸಮಯಕ್ಕಿಂತ ಸಂಜೆಯ ಘಂಟೆ ಬಾರಿಸುವಾಗ ಮಕ್ಕಳು ಹೆಚ್ಚು ಉತ್ಸಾಹದಲ್ಲಿರುತ್ತಾರೆ. ಹಳ್ಳಿಗಳಲ್ಲಿ ಶಾಲೆಯ ಕೊನೆಯ ಬೆಲ್ ಕೊನೆಗೊಳ್ಳುವ ಮೊದಲೇ ಮಕ್ಕಳು ಶಾಲಾ ಕಂಪೌಂಡ್ ದಾಟಿ ಮನೆಯತ್ತ ದಾಪುಗಾಲಿಡುತ್ತಾರೆ. ಈ ಎರಡೂ ಬೆಲ್​ಗಳು ಮಕ್ಕಳಿಗೆ ಅತೀವ ಸಂತೋಷವನ್ನು ಉಂಟು ಮಾಡುವಂಥವುಗಳು.

ನಾವೆಲ್ಲ ಗಮನಿಸಿರುವಂತೆ ಅಗ್ನಿಶಾಮಕ ವಾಹನದಲ್ಲಿ ಘಂಟೆಯೊಂದಿದೆ. ಅಗ್ನಿ ದುರಂತ ಮುಂತಾದ ಅವಘಡಗಳಾದಾಗ ಸೈರನ್ ಮೊಳಗಿಸುತ್ತಾ ಘಂಟೆ ಬಾರಿಸುತ್ತಾ ತುರ್ತಾಗಿ ಚಲಿಸುತ್ತದೆ. ಇತರ ವಾಹನ ಸವಾರರಿಗೆ ದಾರಿ ಮಾಡಿಕೊಡಿ ಎಂಬ ಎಚ್ಚರಿಕೆ ಘಂಟೆಯೂ ಆಗಿರುತ್ತದೆ. ಇಷ್ಟೆಲ್ಲ ಘಂಟೆಯ ಬಗ್ಗೆ ಮಾತನಾಡುವಾಗ ಬೆಕ್ಕಿಗೆ ಘಂಟೆ ಕಟ್ಟುವವರು ಯಾರು ಎಂಬ ಕತೆ ನೆನಪಿಗೆ ಬರುತ್ತದೆ. ತಮ್ಮನ್ನು ಬೇಟೆಯಾಡುವ ಬೆಕ್ಕಿನಿಂದ ಪಾರಾಗಲು ಇಲಿಗಳೆಲ್ಲ ಮೀಟಿಂಗ್ ಮಾಡಿದವು. ಕೊನೆಗೆ ಬೆಕ್ಕು ಬರುವುದನ್ನು ತಡೆಯಲು ಅದರ ಕುತ್ತಿಗೆಗೆ ಘಂಟೆ ಕಟ್ಟಬೇಕು. ಅದು ಬೇಟೆಯಾಡಲು ಬರುವಾಗ ನಮಗೆಲ್ಲ ಘಂಟೆ ಶಬ್ದದ ಮೂಲಕ ತಿಳಿಯುತ್ತದೆ. ಆಗ ನಾವು ಸುಲಭವಾಗಿ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದೆಲ್ಲ ತೀರ್ವನವಾಗುತ್ತದೆ. ಎಲ್ಲರಿಗೂ ಒಪ್ಪಿಗೆಯಾಗುತ್ತದೆ. ಆದರೆ ಕೊನೆಗೆ ಬೆಕ್ಕಿಗೆ ಘಂಟೆ ಕಟ್ಟುವವರು ಯಾರು ಎಂದು ಪ್ರಶ್ನೆ ಬಂದಾಗ ಒಬ್ಬರೂ ಮುಂದೆ ಬರುವುದಿಲ್ಲ. ಆಗ ಬೆಕ್ಕು ಬಂದು ಮೀಯಾಂ ಎಂದಾಗ ಎಲ್ಲಾ ಇಲಿಗಳು ಚೆಲ್ಲಾಪಿಲ್ಲಿಯಾಗಿ ಓಡಿಹೋಗುತ್ತವೆ. ಇದು ತಮಾಷೆಯ ಕತೆಯಾದರೂ ಗಂಭೀರವಾಗಿ ಆಲೋಚಿಸಬೇಕಾದ ಸಂಗತಿ.

ನಾವು ಮಾತನಾಡುವಾಗಲೆಲ್ಲ ಎಚ್ಚರಿಕೆ ಘಂಟೆ ಎಂಬ ಮಾತು ಆಗಾಗ ಬರುತ್ತದೆ. ನಮ್ಮ ಜೀವನದಲ್ಲಿ ಹಿರಿಯರಿಂದ, ಬಂಧುಗಳು, ಆಪ್ತರು, ಹಿತೈಷಿಗಳಿಂದ ಸಲಹೆ, ಮಾರ್ಗದಶನಗಳು ಎಚ್ಚರಿಕೆಯ ಮಾತುಗಳ ರೂಪದಲ್ಲಿ ಬರುತ್ತಿರುತ್ತವೆ. ಅವುಗಳನ್ನು ಅಲಕ್ಷ್ಯಿಸಿ ಮುನ್ನಡೆದಾಗ ಸಂಕಷ್ಟವನ್ನು ಅನುಭವಿಸಬೇಕಾಗುತ್ತದೆ. ಹಾಗೆಯೇ ಉದ್ಯೋಗ, ವ್ಯಾಪಾರ, ವಹಿವಾಟು, ಹೀಗೆ ಎಲ್ಲೆಡೆಗಳಲ್ಲೂ ಬಂದೊದಗುವ ಎಚ್ಚರಿಕೆಯ ಮಾತುಗಳನ್ನು ಪರಾಮಶಿಸಿ ಮುಂದುವರೆಯುವುದು ಉತ್ತಮ. ಈ ಎಚ್ಚರಿಕೆಯ ಸಂಗತಿಗಳು ಹೇಗೆಂದರೆ ನಾವು ಬೆಳಗ್ಗೆ ಸರಿಯಾದ ಸಮಯಕ್ಕೆ ಎದ್ದೇಳಲು ಫಿಕ್ಸ್ ಮಾಡಿ ಇಡುವ ಅಲಾಮರ್್​ಗಳಂತೆ. ಅಲಾಮ್ರ್ ಆದ ಕೂಡಲೇ ಎಚ್ಚೆತ್ತರೆ ಆ ದಿನದ ಕೆಲಸ ಕಾರ್ಯವೆಲ್ಲವನ್ನೂ ಸರಿಯಾಗಿ ನಿಭಾಯಿಸಬಹುದು. ಒಂದು ವೇಳೆ ಅಲಾಮರ್್​ಅನ್ನು ನಿರ್ಲಕ್ಷ್ಯ ಮಾಡಿ ಸ್ವಲ್ಪ ಹೊತ್ತು ಜಾಸ್ತಿ ಮಲಗಿದರೆ ಅಂದಿನ ಕೆಲಸವೆಲ್ಲ ಹಾಳು. ಅದೇ ರೀತಿ ಬದುಕಿನಲ್ಲಿ ಬರುವಂತಹ ಎಚ್ಚರಿಕೆಯ ಘಂಟೆಗಳನ್ನು ನಿರ್ಲಕ್ಷ್ಯ ಮಾಡದಿರುವುದೇ ಚೆನ್ನ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net