ನನ್ನ ಅಪ್ಪನದು ತೀರಾ ಮೃದು ಸ್ವಭಾವ ಹಾಗೂ ಸ್ವಾಭಿಮಾನಿ. ಮನೆಯ ಯಜಮಾನರಾದ ತಾತ ಬಹಳ ಸಿಟ್ಟಿನ ಸ್ವಭಾವದವರಾಗಿದ್ದರು. ಖರ್ಚಿಗೆಂದು ಅತ್ಯಲ್ಪ ಹಣ ಕೊಡುತ್ತಿದ್ದರು. ಹೆಚ್ಚು ಕೇಳುವಂತಿರಲಿಲ್ಲ. ಅವರ ಖರ್ಚಿಗೆಂದು ಕೊಟ್ಟ ಹಣವನ್ನು ನಮ್ಮ ಬಟ್ಟೆಗೆ, ಬಣ್ಣದ ಛತ್ರಿಗೆ, ಆಟಿಕೆಗೆಂದು ಉಪಯೋಗಿಸಿ ತಾವು ಮಾತ್ರ ಸದಾ ಹರಿದ ಬನಿಯನ್, ಹಳೆ ಷರ್ಟು- ಪಂಚೆಯಲ್ಲಿಯೇ ಕಾಲ ಕಳೆಯುತ್ತಿದ್ದರು. ಶಾಲೆ ಶುರುವಾಗುವ ಹಿಂದಿನ ದಿನವೇ ಹೊಸ ಪಾಟಿಚೀಲ, ಹೊಸ ಚಪ್ಪಲಿಗಳು ಮನೆಯಲ್ಲಿರುತ್ತಿದ್ದವು. ಅವರು ಕಾಡಿನಲ್ಲಿ ಬೆಳೆಯುವ ದಾಲ್ಚಿನ್ನಿಚಕ್ಕೆ ಮಾರಿ ಬಂದ ಹಣದಿಂದ ಕೊಂಡು ತಂದಿದ್ದೆಂದು ಗೊತ್ತಾಗಿದ್ದು ನಾನು ದೊಡ್ಡವಳಾದ ಮೇಲೆ! ಒಂದು ಸಲ ಔಷಧಿಗೆಂದು ಶಿವಮೊಗ್ಗ ಪೇಟೆಗೆ ಹೋದವರು ಎರಡು ಹೊಸ ಫ್ರಾಕುಗಳನ್ನು ತಂದಿದ್ದರು.ಅದನ್ನು ನಾನು ಹಲವು ವರುಷ ಗರ್ವದಿಂದ ತೊಡುತ್ತಿದ್ದೆ. ಆದರೆ ಅವರು ಊಟ, ತಿಂಡಿ ಮಾಡದೇ ಹಣ ಉಳಿಸಿ ತಂದಿದ್ದು ಆ ಅಂಗಿ ಎಂದು ಅಮ್ಮ ಹೇಳಿದಾಗಲೇ ಗೊತ್ತಾಗಿತ್ತು, ಕಣ್ಣು ತುಂಬಿ ಬಂದಿತ್ತು. | ಯಶೋದಾ ಭಟ್ಟ ದುಬೈ