

ಹೇ ಅಪ್ಪಾ ಹೇಗಿದ್ದಿಯಾ? ನೀ ಇಲ್ಲದ ಈ ಜಗತ್ತಲ್ಲಿ ನನ್ನ ಜತೆಯಾಗಿ ಇರುವುದು ನೀ ಕಲಿಸಿದ ಪಾಠ, ನೀ ಕೊಟ್ಟ ಆಕಾಶದಷ್ಟು ಪ್ರೀತಿ, ನಿನ್ನ ಆ ಮರೆಯಲಾಗದ ನೆನಪುಗಳು. ನೆನಪಿದೆಯಾ ಅಪ್ಪಾ ನಿನಗೆ, ನನ್ನ ಮದುವೆ. ಏಕೆಂದರೆ ಅದು ಬರೀ ಮದುವೆಯಾಗಿರಲಿಲ್ಲ; ಅದು ನಿನಗೆ ಸುಖ-ದುಃಖ ತುಂಬಿದ ಸಂಭ್ರಮವಾಗಿತ್ತು; ನಿನ್ನ ಕನಸಾಗಿತ್ತು. ನಿನ್ನ ಕನಸನ್ನು (ಮಗಳನ್ನು) ನನ್ನ ಕನಸಿನ ರಾಜನಿಗೆ ಧಾರೆಯೆರದು ಕೊಟ್ಟ ಗಳಿಗೆ ಸ್ಮರಣೀಯ. ನೀನು ಯಾವಾಗಲೂ ಹೇಳುತ್ತಿದ್ದೆ, ‘ನಿನಗೆ ಏನಾದರೂ ಬೇಕು ಅಂದರೆ ನಾನಿದ್ದೀನಿ, ಚಿಂತಿಸಬೇಡ’ ಎಂದು. ಆದರೆ ನನಗೆ ಇವತ್ತು ಯಾವ ವಸ್ತು, ತಿಂಡಿ ತಿನಿಸುಗಳು ಬೇಡಪ್ಪ, ಯಾವ ದೊಡ್ಡ ಉಡುಗೊರೆಗಳು ಬೇಡಪ್ಪ, ನನಗೆ ಇವತ್ತು ನೀ ಬೇಕು. ಅಪ್ಪಾ, ಯಾರ ಹತ್ರ ನಿನ್ನ ಕೊಡುವಂತೆ ಕೇಳಲಿ? ನನ್ನ ಅಪ್ಪ ನನ್ನ ಧೈರ್ಯ, ನನ್ನ ಹೆಮ್ಮೆ, ನನ್ನ ಜೀವ, ನನ್ನ ನಗು, ನನ್ನ ಹೀರೋ, ನನ್ನ ರೆಕ್ಕೆ ಮತ್ತು ನನ್ನ ಜಗತ್ತು. ನೀ ಬರುವ ದಾರಿ ಕಾಯುತ್ತಿರುವೆ ಅಪ್ಪಾ... ಇಂತಿ ನಿನ್ನ ಪುಟ್ಟ ಅಶಕ್ಕಾ.
| ಅಶ್ವಿನಿ ಕೈಲಾಸ ಅಗಡಿ ಜೋಶಿ ಮಂಗಲ ಕಾರ್ಯಾಲಯ, ಧಾರವಾಡ