ಡಿಗ್ರಿ ಪರೀಕ್ಷೆ ಮುಗಿಸಿ ವಾಪಸ್ ಬರುವಷ್ಟರಲ್ಲಿ ಸಂಜೆಯಾಗಿತ್ತು. ತಾನು ಬರುವವರೆಗೂ ಊರಿಂದ ನಾಲ್ಕು ಕಿ.ಮೀ ದೂರದಲ್ಲಿರುವ ಬಸ್ ನಿಲ್ದಾಣದಲ್ಲೇ ಸ್ನೇಹಿತರ ಜತೆ ಇರುವಂತೆ ಹೇಳಿದ್ದರು ಅಪ್ಪ. ಆದರೆ ನಾನು ಬೆಳಕಿದ್ದರಿಂದ ಧೈರ್ಯ ಮಾಡಿ ನಡೆದೇಬಿಟ್ಟೆ! ಆಗಲೇ ಕತ್ತಲು ಕವಿಯಿತು, ನಿರ್ಜನ ಪ್ರದೇಶದಲ್ಲಿ ಯಾರೊಬ್ಬರೂ ಕಾಣುತ್ತಿರಲಿಲ್ಲ. ಭಯದಿಂದ ತತ್ತರಿಸಿಹೋಗಿದ್ದೆ. ಆಗಲೇ ದೂರದಿಂದ ಅಪ್ಪ ಬರುತ್ತಿದ್ದುದು ಕಂಡು ಆನೆ ಬಲ ಬಂದಂತಾಯ್ತು. ಕತ್ತಲಲ್ಲಿ ನನ್ನ ಕಂಡು ಹೆದರಿಹೋದ ಅಪ್ಪ ಚೆನ್ನಾಗಿ ಬೈಯ್ದರು, ಒಬ್ಬಳೇ ಬಂದರೆ ಏನಾಗುತ್ತದೆ ಎಂದು ಬುದ್ಧಿಮಾತೂ ಹೇಳಿದರು. ಅಂದೇ ಕೊನೆ ಇನ್ಯಾವತ್ತೂ ಅಪ್ಪನಿಗೆ ಬೇಸರವಾಗುವಂತಹ ಕೆಲಸ ಮಾಡಿಲ್ಲ. ನಮ್ಮ ಮನೆ ಊರಿಂದ ಹೊರಗಿದೆ. ಆದ್ದರಿಂದ ಊರಿನ ಜನರ ಸಂಪರ್ಕ ಕಡಿಮೆ. ಈ ಕಾರಣಕ್ಕೆ ಅಪ್ಪ ನಮ್ಮನ್ನು ಬಿಟ್ಟು ಎಲ್ಲಿಯೂ ಹೋಗುತ್ತಿರಲಿಲ್ಲ. ಇತ್ತೀಚೆಗಷ್ಟೇ ನನ್ನ ಮದುವೆಯಾಗಿ ಗಂಡನ ಮನೆಗೆ ಕಳುಹಿಸುವಾಗ ಎಲ್ಲರಿಗಿಂತಲೂ ಹೆಚ್ಚಾಗಿ ಕಣ್ಣೀರು ಹಾಕಿದ್ದೇ ಅಪ್ಪ. ನನಗೆ ಅವರು ತಲೆಗೆ ಎಣ್ಣೆ ಹಾಕುವುದನ್ನು ತುಂಬಾ ಮಿಸ್ ಮಾಡಿಕೊಳ್ತೀನಿ. | ಎಚ್.ಎಸ್.ಪಲ್ಲವಿ ಹೂತಗೆರೆ ಮದ್ದೂರು, ಮಂಡ್ಯ ಜಿಲ್ಲೆ