ಅಪ್ಪನೆಂಬ ಅದ್ಭುತ| ಸೈಕಲ್ ಸವಾರಿ ಮತ್ತು ಪೋಲಿಯೋ ಡ್ರಾಪ್ಸ್

muralimohan
Published on

ಮಕ್ಕಳ ಪಾಲಿನ ಮೊದಲ ಹೀರೋ ಎಂದರೆ ಅಪ್ಪನೇ. ಬದುಕಿನ ಪ್ರತಿ ಹಂತದಲ್ಲಿಯೂ, ಹೆಜ್ಜೆ ಹೆಜ್ಜೆಗೂ ಮಕ್ಕಳನ್ನು ಕಣ್​ರೆಪ್ಪೆಯಂತೆ ಕಾಯುವ ಅಪ್ಪನಿಗೊಂದು ಥ್ಯಾಂಕ್ಸ್ ಹೇಳುವ ಸಲುವಾಗಿ ಬಂದಿದೆ ಫಾದರ್ಸ್ ಡೇ. ಅಪ್ಪನ ಜತೆಗಿನ ನೆನಪುಗಳನ್ನು ಹಂಚಿಕೊಳ್ಳುವಂತೆ ವಿಜಯವಾಣಿ ನೀಡಿದ್ದ ಕರೆಗೆ 11 ಸಾವಿರಕ್ಕೂ ಅಧಿಕ ಪತ್ರಗಳು ನಮಗೆ ಬಂದಿವೆ. ಅವುಗಳ ಪೈಕಿ ಆಯ್ದ ಕೆಲವನ್ನು ಇಲ್ಲಿ ಪ್ರಕಟಿಸಲಾಗಿದೆ.

1980ರ ಕಾಲಘಟ್ಟ. ನಮ್ಮ ಮನೆಯಲ್ಲಿ ನಾಲ್ಕು ಮಕ್ಕಳಿಗೆ ಪೊಲಿಯೋ ಡ್ರಾಪ್ಸ್ ಹಾಕಬೇಕಿತ್ತು. ಅಪ್ಪನ ಬಳಿಯಲ್ಲಿ ಇದ್ದಿದ್ದು ಒಂದು ಹಳೆಯ ಸೈಕಲ್, ನಾಲ್ಕು ಮಕ್ಕಳನ್ನು ಏಕಕಾಲಕ್ಕೆ 5 ಕಿ.ಮೀ. ದೂರದ ಕುಕ್ಕುಜಡ್ಕ ಎಂಬಲ್ಲಿಗೆ ಕರೆದೊಯ್ಯಬೇಕಾಗಿತ್ತು. ಸೈಕಲ್​ನ ಮುಂಭಾಗದ ರಿಮ್ ಮೇಲೆ ದಿಂಬು ಇಟ್ಟು ನಾನು ಮತ್ತು ತಮ್ಮನನ್ನು ಕುಳ್ಳಿರಿಸಿದ್ದರು. ಹಿಂಭಾಗದಲ್ಲಿನ ಕ್ಯಾರಿಯರ್ ಜಾಗದಲ್ಲಿ ಅಕ್ಕ ಮತ್ತು ಅಣ್ಣನನ್ನು ಕೂರಿಸಿದ್ದರು. ನಾವ್ಯಾರೂ ಬೀಳಬಾರದು ಎಂದು ತಮ್ಮ ಹೊಟ್ಟೆಯ ಭಾಗದ ಸುತ್ತ ಬೈರಾಸಿನಿಂದ ಕಟ್ಟಿಕೊಂಡು ಪ್ರಯಾಣ ಮಾಡಿದ್ದರು. ಅವರ ಬೆವರಿನ ಹನಿಗಳು ನಮ್ಮ ಮೈಮೇಲೆ ಬಿದ್ದು ಅಂಗಿ ಒದ್ದೆಯಾದ ದಿನಗಳು ಇನ್ನೂ ನೆನಪಿದೆ. ಈಗ 80ರ ಹರೆಯದ ನನ್ನ ಅಪ್ಪ ನನ್ನ ಐಷಾರಾಮಿ ಮರ್ಸಿಡಿಸ್ ಬೆನ್ಜ್ ಕಾರಿನ ಮುಂದಿನ ಸೀಟಿನಲ್ಲಿ ನಿರ್ಲಿಪ್ತ ಭಾವದಿಂದ ಕುಳಿತು ಸೀಟು ಬೆಲ್ಟ್ ಹಾಕಲು ಪರದಾಡುವಾಗ ನನ್ನ ಮಗಳು ನಗುತ್ತಾಳೆ. ಆಗ ನನಗೆ ನನ್ನ ಅಪ್ಪ ಹೇಳುತ್ತಿದ್ದ ಹಣ್ಣೆಲೆ ಬೀಳುವಾಗ ಚಿಗುರೆಲೆ ನಕ್ಕಿತಂತೆ ಎಂಬ ಮಾತು ನೆನೆದ ನಾನು ಮೌನಿಯಾಗುತ್ತೇನೆ. ಡಾ|| ಮುರಲೀ ಮೋಹನ ಚೂಂತಾರು ಮಂಗಳೂರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net