ಅಪ್ಪನೆಂಬ ಅದ್ಭುತ| ಗರಿಗರಿ ನೋಟು ಸಿಕ್ಕಾಗ ವರ್ಷಗಳ ಹಿಂದೆ ಜಾರಿದೆ...

divya
Published on

ಮಕ್ಕಳ ಪಾಲಿನ ಮೊದಲ ಹೀರೋ ಎಂದರೆ ಅಪ್ಪನೇ. ಬದುಕಿನ ಪ್ರತಿ ಹಂತದಲ್ಲಿಯೂ, ಹೆಜ್ಜೆ ಹೆಜ್ಜೆಗೂ ಮಕ್ಕಳನ್ನು ಕಣ್​ರೆಪ್ಪೆಯಂತೆ ಕಾಯುವ ಅಪ್ಪನಿಗೊಂದು ಥ್ಯಾಂಕ್ಸ್ ಹೇಳುವ ಸಲುವಾಗಿ ಬಂದಿದೆ ಫಾದರ್ಸ್ ಡೇ. ಅಪ್ಪನ ಜತೆಗಿನ ನೆನಪುಗಳನ್ನು ಹಂಚಿಕೊಳ್ಳುವಂತೆ ವಿಜಯವಾಣಿ ನೀಡಿದ್ದ ಕರೆಗೆ 11 ಸಾವಿರಕ್ಕೂ ಅಧಿಕ ಪತ್ರಗಳು ನಮಗೆ ಬಂದಿವೆ. ಅವುಗಳ ಪೈಕಿ ಆಯ್ದ ಕೆಲವನ್ನು ಇಲ್ಲಿ ಪ್ರಕಟಿಸಲಾಗಿದೆ.

ಅಂದು ಮೊದಲ ಸಂಬಳ ಕೈಸೇರಿತ್ತು. ಗರಿಗರಿ ನೋಟುಗಳು, ಅದರಿಂದ ಬರುವ ಪರಿಮಳ, ಕೈಯಲ್ಲಿ ಹಿಡಿದು ಹಾಗೇ ನೋಡುತ್ತಿದ್ದೆ. ಮನಸ್ಸು ಬೀಗುತ್ತಿತ್ತು. ಮರುಕ್ಷಣವೇ ಅಪ್ಪನ ನೆನಪಾಗಿ ಕಣ್ಣಂಚಲ್ಲಿ ನೀರು ತುಂಬಿತ್ತು. ಇದೇ ನೋಟುಗಳನ್ನು ಎಷ್ಟೋ ಬಾರಿ ನೀರಿನಂತೆ ಖರ್ಚು ಮಾಡಿ ಓದಿಸಿದ್ರು ಅಪ್ಪ, ಕೇಳಿದಾಗೆಲ್ಲಾ ದುಡ್ಡು ಕೈಗಿಡುತ್ತಿದ್ರು. ನಾಲ್ಕು ಜನರ ಪುಟ್ಟ ಸಂಸಾರ ನಮ್ಮದು. ನಾಲ್ಕು ಜನರ ಹೊಟ್ಟೆಬಟ್ಟೆಗೇ ದುಡಿದ ದುಡ್ಡೆಲ್ಲಾ ಖಾಲಿ ಆಗುವಾಗ , ಮಕ್ಕಳಿಗೆ ಓದಿಸಬೇಕು ಅನ್ನೋ ಇನ್ನೊಂದು ಭಾರ ಅಪ್ಪನ ಮೇಲೆ ಇತ್ತು. ಓದಿನ ಹಸಿವಿದ್ದ ನನಗೆ ಪ್ರೖೆವೇಟ್ ಕಾಲೇಜಿನಲ್ಲಿ ಓದಿಸಿದ್ರು. ಅಪ್ಪನ ಕಷ್ಟ ಅರಿವಿಗೆ ಬಾರದೇ ಖಾಸಗಿ ಕಾಲೇಜಿಗೆ ಹೋಗಿದ್ದೆ! ಬೆಲೆ ಕಟ್ಟಲಾಗದ ತಂದೆಯ ಪ್ರೀತಿಗೆ ಏನು ಇನಾಮು ಕೊಡಲಿ ಎನ್ನುವಾಗಲೇ ಗರಿಗರಿಯ ನೋಟುಗಳ ಮೇಲೆ ಟಪಟಪನೆ ಉದುರಿತ್ತು ಕಣ್ಣೀರಿನ ಹನಿ. ಮೊದಲ ದುಡಿಮೆ ಹಣವನ್ನು ಅಪ್ಪನ ಕೈಗಿಟ್ಟು , ನನ್ನ ಶ್ರಮದ ಫಲ ಎನ್ನಬೇಕೋ ಅಥವಾ ಅವರ ತ್ಯಾಗಕ್ಕೆ ಸಿಕ್ಕ ಬೆಲೆಯೋ? ಅರಿವಿದ್ದೋ ಇಲ್ಲದೆಯೋ ಮಾಡಿದ್ದ ಅದೆಷ್ಟೋ ತಪ್ಪುಗಳು ಅಪ್ಪನ ಮನಸ್ಸನ್ನು ಎಷ್ಟು ನೋಯಿಸಿತ್ತೋ, ಕ್ಷಮೆ ಕೇಳಬೇಕೆಂದಿತ್ತು ಮನಸ್ಸು, ಸಣ್ಣಗೆ ಗುನುಗಿತ್ತು ಹಾಡು ಅಪ್ಪಾ ಐ ಲವ್ ಯೂ ಪಾ ಎಂದು. | ದಿವ್ಯಾ ಕಡಬಾಳ ಶಿರಸಿ, ಉತ್ತರ ಕನ್ನಡ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net