ಅಪ್ಪನೆಂಬ ಅದ್ಭುತ| ಪ್ರಾಮಾಣಿಕತೆಯೇ ಉಸಿರು

ashok gouroji
Published on

ಮಕ್ಕಳ ಪಾಲಿನ ಮೊದಲ ಹೀರೋ ಎಂದರೆ ಅಪ್ಪನೇ. ಬದುಕಿನ ಪ್ರತಿ ಹಂತದಲ್ಲಿಯೂ, ಹೆಜ್ಜೆ ಹೆಜ್ಜೆಗೂ ಮಕ್ಕಳನ್ನು ಕಣ್​ರೆಪ್ಪೆಯಂತೆ ಕಾಯುವ ಅಪ್ಪನಿಗೊಂದು ಥ್ಯಾಂಕ್ಸ್ ಹೇಳುವ ಸಲುವಾಗಿ ಬಂದಿದೆ ಫಾದರ್ಸ್ ಡೇ. ಅಪ್ಪನ ಜತೆಗಿನ ನೆನಪುಗಳನ್ನು ಹಂಚಿಕೊಳ್ಳುವಂತೆ ವಿಜಯವಾಣಿ ನೀಡಿದ್ದ ಕರೆಗೆ 11 ಸಾವಿರಕ್ಕೂ ಅಧಿಕ ಪತ್ರಗಳು ನಮಗೆ ಬಂದಿವೆ. ಅವುಗಳ ಪೈಕಿ ಆಯ್ದ ಕೆಲವನ್ನು ಇಲ್ಲಿ ಪ್ರಕಟಿಸಲಾಗಿದೆ.

ಆಗ ಸ್ವಾತಂತ್ರ ಚಳವಳಿ ರೂಪುಗೊಂಡಿತ್ತು. ನಮ್ಮ ತಾಲೂಕು ಸಂಸ್ಥಾನವಾಗಿತ್ತು. ಸಂಸ್ಥಾನಿಕರ ದಬ್ಬಾಳಿಕೆ ವಿರುದ್ಧ ಜನರ ಚಳವಳಿ ಪ್ರಾರಂಭವಾಗಿತ್ತು. ಆಗ ಚಳವಳಿಗಾರರ ಮುಖಂಡರಾಗಿದ್ದ ದಿವಾಕರ ಎಂಬ ಜನನಾಯಕರು ಮೊದಲು ಸಂಸ್ಥಾನಿಕರ ವಿರುದ್ಧ ಧ್ವನಿ ಎತ್ತಿ ನಂತರ ಮೌನವಾಗಿದ್ದರಂತೆ. ಆಗ ನನ್ನಪ್ಪ ಮಾರುತೆಪ್ಪ ಪತ್ರಿಕೆಯೊಂದರಲ್ಲಿ ‘ಸಂಸ್ಥಾನಿಕರ ಉಂಡಿ ಜಿಲೇಬಿಗೆ ಮರುಳಾಗುವ ದೀವಾಕರರೆ ಎಚ್ಚರ’ ಎಂಬ ಲೇಖನವನ್ನು ಅಂಜನೇಯ ಸುರೆಬಾನ ಎಂಬ ಹೆಸರಿನಲ್ಲಿ ಬರೆದಿದ್ದರು. ಅಗ ಸಂಸ್ಥಾನಿಕರ ಪೊಲೀಸರು ಲೇಖನ ಬರೆದ ಅಂಜನೇಯ ಸುರೆಬಾನನನ್ನು ಬಂಧಿಸಲು ಹುಡುಕಾಡಿದ್ದರಂತೆ. ಆದರೆ ಹೆಸರು ಬೇರೆ ಇದ್ದುದರಿಂದ ಪೊಲೀಸರಿಗೆ ಗೊತ್ತಾಗಲಿಲ್ಲ. ಅದೇ ಮುಂದೆ ಅಪ್ಪನನ್ನು ಪ್ರಸಿದ್ಧ ವಕೀಲರನ್ನಾಗಿಯೂ ಮಾಡಿತು. ಪ್ರಾಮಾಣಿಕತೆಗೆ ಹೆಸರಾಗಿದ್ದ ನನ್ನ ಅಪ್ಪ ನನ್ನನ್ನು ಮತ್ತು ಅಣ್ಣನನ್ನು ವಕೀಲರನ್ನಾಗಿ ಮಾಡಿದ.

ನಾನು ಕೆಎಸ್​ಎಫ್​ಸಿಯಲ್ಲಿ ಉಪ ಕಾನೂನು ಅಧಿಕಾರಿ ಆಗಿ ನೌಕರಿಗೆ ತೆರಳುವಾಗ ಅಪ್ಪ ನನಗೆ ಸರ್ಕಾರ ಅಧಿಕಾರ ಅನ್ನುವ ಬೆಂಕಿ ನಿನ್ನ ಕೈಯಲ್ಲಿ ಕೊಟ್ಟಿದೆ. ಅದನ್ನು ಬೇರೆಯವರಿಗೆ ಬೆಳಕು ನೀಡಲು ಬಳಸು. ಅದರಿಂದ ಬೇರೆಯವರ ಮನೆ ಸುಡಬೇಡ ಪ್ರಾಮಾಣಿಕತೆಯಿಂದ ಕೆಲಸ ಮಾಡು. ಅದು ಸಾಧ್ಯವಾಗದಿದ್ದರೆ ಕೆಲಸ ಬಿಟ್ಟು ಬಾ ಎಂದು ಹೇಳಿದ್ದ ಮಾತನ್ನು ಕೊನೆಯವರೆಗೂ ಪಾಲಿಸಿದೆ. | ಅಶೋಕ ಗೌರೋಜಿ ವಕೀಲರು, ಧಾರವಾಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net