

ಜೀವನವೊಂದು ಗಣಿತ...
ಲೆಕ್ಕ ಸರಿ ಇದ್ದಾಗ ಬದುಕು. ಲೆಕ್ಕ ತಪ್ಪಿದಾಗ ನೋವು, ಸಾವು.
ಅವನೊಬ್ಬ ರಾಜ. ಅರಮನೆಯ ವೈಭವವನ್ನೆಲ್ಲ ಹೊದ್ದು ಅದೊಂದು ದಿನ ಪವಡಿಸಿದ್ದಾಗ ಆತನಿಗೊಂದು ಕನಸು. ಯಮದೂತರು ಕೊರಳಿಗೆ ಕುಣಿಕೆ ಹಾಕಿ ಎಳೆಯುತ್ತಿದ್ದಾರೆ. ಆ ಸಾಮ್ರಾಜ್ಯಕ್ಕೆ ಆತ ರಾಜನೇ ಆಗಿದ್ದರೂ, ಯಮನ ಪಾಲಿಗೆ ಜೀವ ಮಾತ್ರ. ಸಮಯ ಬಂದಾಗ ಹೋಗಲೇಬೇಕು. ಮೈ ಎಲ್ಲ ಬೆವರಿಕೊಂಡು ಧಿಗ್ಗನೆ ಎದ್ದು ಕುಳಿತ ರಾಜ, ಭೀತಿಯಿಂದ ನಡುಗುತ್ತಲೇ ಪಕ್ಕದಲ್ಲಿ ಸುಖನಿದ್ರೆಯಲ್ಲಿದ್ದ ರಾಣಿಯನ್ನು ಎಬ್ಬಿಸಿ ಕನಸಿನ ಬಗ್ಗೆ ವಿವರಿಸಿದ. ರಾಜನಿಗೆ ಕೆಟ್ಟ ಕನಸು ಬಿದ್ದಿದೆಯಂತೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಲು ಎಷ್ಟು ಹೊತ್ತುಬೇಕು? ಕೆಲವೇ ಹೊತ್ತಿನಲ್ಲಿ ರಾಜನ ಹೆತ್ತಮ್ಮ, ರಾಜವೈದ್ಯರು, ಮಂತ್ರಿಗಳು, ಜ್ಯೋತಿಷಿಗಳು ಎಲ್ಲರೂ ನೆರೆದಿದ್ದರು. ರಾಜನಿಗೆ ಬಿದ್ದ ಸ್ವಪ್ನದ ಅರ್ಥವೇನೆಂದು ವ್ಯಾಖ್ಯಾನ ಮಾಡಲಾಯಿತು. ಪರಿಹಾರವೇನೆಂಬ ಬಗ್ಗೆ ಚರ್ಚೆ ನಡೆಯಿತು. ಕೆಲವು ದಿನಗಳ ಮಟ್ಟಿಗೆ ರಾಜ ಅರಮನೆಯಲ್ಲಿರುವುದು ಸುರಕ್ಷಿತವಲ್ಲ ಎಂಬ ನಿರ್ಣಯಕ್ಕೆ ಎಲ್ಲರೂ ಬಂದರು. ಸರಿ, ರಾಜ ಮತ್ತು ಸೇನಾಪತಿ ಅತ್ಯಂತ ವೇಗವಾಗಿ ಧಾವಿಸುವ ಕುದುರೆಗಳನ್ನೇರಿ ಆ ಕ್ಷಣದಲ್ಲೇ ರಾಜ್ಯ ತೊರೆದರು. ಕೆಲವೇ ಗಂಟೆಗಳಲ್ಲಿ ಅವರು ತಮ್ಮ ರಾಜ್ಯ, ನೆರೆಹೊರೆ ರಾಜ್ಯಗಳ ಸರಹದ್ದು ದಾಟಿ, ಅತ್ಯಂತ ದೂರದ, ಅಜ್ಞಾತ ಪರ್ವತ ಪ್ರದೇಶವೊಂದನ್ನು ತಲುಪಿದರು. ಇನ್ನು ತಾವು ಸುರಕ್ಷಿತ ಎಂಬ ಭಾವನೆಯಿಂದ ವಿಶ್ರಾಂತಿ ಪಡೆಯಲು ಸೂಕ್ತ ಜಾಗ ಹುಡುಕುತ್ತಿರುವಾಗ ವಿಲಕ್ಷಣ ವ್ಯಕ್ತಿಯೊಬ್ಬ ಅವರನ್ನು ಎದುರುಗೊಂಡ. ‘ಅರೆ ಮಹಾರಾಜ, ಅರಮನೆಯ ಸುಪ್ಪತ್ತಿಗೆಯಲ್ಲಿ ಮಲಗಿರುವ ನೀನು ಅಜ್ಞಾತ ಪರ್ವತ ಪ್ರದೇಶದಲ್ಲಿ ಅನಾಥನಂತೆ ಸಾಯುವುದು ಹೇಗೆ ಸಾಧ್ಯ ಎಂದು ಯೋಚಿಸುತ್ತಿದ್ದೆ. ಇಷ್ಟೊಂದು ಕಡಿಮೆ ಅವಧಿ ಯಲ್ಲಿ ಅಲ್ಲಿಂದ ಇಲ್ಲಿಗೆ ತಲುಪಿದ್ದಾದರೂ ಹೇಗೆ’ ಎಂದು ಪ್ರಶ್ನಿಸಿದ. ಆ ವ್ಯಕ್ತಿ ಯಮದೂತನಾಗಿದ್ದ. ರಾಜನಿಗೆ ಹೃದಯಾಘಾತವಾಗಿ ಅಲ್ಲೇ ಪ್ರಾಣಪಕ್ಷಿ ಹಾರಿಹೋಗಿತ್ತು.
ಇದೊಂದು ಅನೇಕ ರೂಪಾಂತರಗಳೊಂದಿಗೆ ಆಗಾಗ ಉಲ್ಲೇಖವಾಗುತ್ತಿರುವ ಕಥೆ. ಇದರ ತಾತ್ಪರ್ಯ ಅಷ್ಟೇ. ಸಾವು ಬರೆದಿದ್ದರೆ ಎಲ್ಲೋ ಇರಬೇಕಾದ ವ್ಯಕ್ತಿ ಇನ್ನೆಲ್ಲೋ ಹೋಗಿ ಚಿತ್ರವಿಚಿತ್ರ ಸನ್ನಿವೇಶದಲ್ಲಿ ವಿಧಿಯ ವಶನಾಗುತ್ತಿರುತ್ತಾನೆ. ಕಾಲಪುರುಷನ ಗಣಿತವೇ ಹಾಗೆ. ಬಹಳ ವಿಚಿತ್ರ. ಆದರೆ, ಕರಾರುವಾಕ್ಕು. ಆ ಲೆಕ್ಕದಿಂದ ಯಾರೂ ತಪ್ಪಿಸಿಕೊಳ್ಳಲಾರರು. ಈ ಜಗತ್ತಿನ ಲೆಕ್ಕ, ಸಾವಿನ ಲೆಕ್ಕಾಚಾರದ ವಿಚಿತ್ರಗಳನ್ನು ದಿನನಿತ್ಯ ಕಾಣುತ್ತಿರುತ್ತೇವೆ. ಹೊರಡುವುದು ಒಂದು ನಿಮಿಷ ತಡವಾಗಿದ್ದರೆ ಅಥವಾ ಮುಂಚೆಯೇ ಹೊರಟಿದ್ದರೆ ಸಾವಿನ ಆ ಕ್ಷಣದಿಂದ ಆತ ತಪ್ಪಿಸಿಕೊಳ್ಳಬಹುದಿತ್ತು ಎಂದು ಅನ್ನಿಸುತ್ತಿರುತ್ತದೆ. ಆದರೆ, ‘ಯಾರ ಬದುಕು ಎಷ್ಟು ದಿನವೋ, ಯಾರ ಸಾವು ಯಾವ ಕ್ಷಣವೋ’ ಬಲ್ಲವರಾರು? ‘ಅನ್ನದ ಋಣ, ಸಾವಿನ ಋಣ ಎರಡೂ ಮನುಷ್ಯನ ಗ್ರಹಿಕೆಗೆ ನಿಲುಕದ್ದು’. ಬೆಳಗು ಎಂದಿನಂತೆ ಆರಂಭವಾದರೂ, ದಿನಚರಿ ಯಾವತ್ತಿನಂತೆ ಪುನರಾವರ್ತನೆಗೊಂಡರೂ, ನಡುವೆ ಎಲ್ಲೋ ಒಂದು ಕ್ಷಣದಲ್ಲಿ ವಿಧಿ ಲೆಕ್ಕ ತಪ್ಪಿಸುತ್ತದೆ. ಎಲ್ಲೋ ಹೋಗಬೇಕಿದ್ದವರು ಇನ್ನೆಲ್ಲೋ ತಲುಪುತ್ತಾರೆ. ಕಾರ್ಯ, ಕಾರಣ, ಸನ್ನಿವೇಶಗಳು ಯಾವ ರೀತಿ ಒಬ್ಬನ ಅಂತಿಮ ಕ್ಷಣವನ್ನು ಬರೆಯುತ್ತವೆ ಎಂದು ಊಹಿಸಲೂ ಅಸಾಧ್ಯವಾದ ರೀತಿಯಲ್ಲಿ ಒಂದಕ್ಕೊಂದು ಪೂರಕ ಘಟನೆಗಳು ಜೋಡಣೆಗೊಂಡು ಒಂದು ಅಪಘಾತ, ಅನಾಹುತ ಸಂಭವಿಸುತ್ತದೆ. ಅಥವಾ ಕುಳಿತುಕುಳಿತಲ್ಲೇ, ನಿದ್ರೆಯಲ್ಲೋ, ನಡಿಗೆಯಲ್ಲೋ, ಇನ್ನಾವುದೋ ಚಟುವಟಿಕೆಯ ನಡುವೆಯೇ ವ್ಯಕ್ತಿ ಕೊನೆಯುಸಿರು ಎಳೆದಿರುತ್ತಾನೆ. ಕೆಲವೇ ಹೊತ್ತಿನ ಮುಂಚೆ ಏನೋ ಕನಸು ಕಾಣುತ್ತಿದ್ದ, ಯಾವುದೋ ಆಲೋಚನೆಯಲ್ಲಿದ್ದ, ಯಾರೊಂದಿಗೋ ತಮಾಷೆ ಮಾಡುತ್ತಿದ್ದ, ಇನ್ನಾರೊಂದಿಗೋ ಮುನಿಸಿಕೊಂಡಿದ್ದ ವ್ಯಕ್ತಿ ಮುಂದಿನ ಕ್ಷಣದಲ್ಲಿ ಈ ಜಗತ್ತಿನಲ್ಲಿ ನನ್ನ ಪಾಲಿನ ಕೆಲಸ ಮುಗಿಯಿತು ಎಂದು ಹೊರಟೇ ಬಿಟ್ಟಿರುತ್ತಾನೆ. ಹೀಗಾಗಿದ್ದರೆ, ಹಾಗಾಗಿದ್ದರೆ ಎನ್ನುವುದೆಲ್ಲ ಬದುಕಿರುವವರ ತರ್ಕವಷ್ಟೇ. ಆದರೆ, ಸಾವು ಎಲ್ಲ ತರ್ಕಗಳನ್ನು ಮೀರಿದ್ದು. ಎಲ್ಲ ಲೆಕ್ಕಗಳನ್ನು ಮೀರಿದ್ದು. ವಿಧಿಲಿಖಿತ ಎನ್ನುವುದು ಕೆಲವರ ಪಾಲಿಗೆ ಸ್ವಲ್ಪ ಬೇಗ.
ಹೆದ್ದಾರಿಗಳಲ್ಲಿ ಅದೆಷ್ಟೊಂದು ಅಪಘಾತಗಳಾಗುತ್ತವೆ. ದಿನನಿತ್ಯ ಸಾವಿರಾರು ಜನ ಸಾಯುತ್ತಿರುತ್ತಾರೆ. ಎಲ್ಲವೂ ಒಂದೊಂದು ಕ್ಷಣದ ಲೆಕ್ಕ ತಪ್ಪಿದ ಚಿತ್ತವ್ಯತ್ಯಾಸದ ಪ್ರತಿಫಲವೇ ಆಗಿರುತ್ತದೆ. ರಸ್ತೆ ಅಪಘಾತಗಳಂತೂ ಅಪ್ಪಟ ಗಣಿತವೇ. ಅದರಲ್ಲೂ ಓವರ್ಟೇಕ್ ಸಂದರ್ಭದಲ್ಲಿ ಆಗುವ ಅಪಘಾತಗಳು. ವಾಹನಗಳ ವೇಗ ಮತ್ತು ಚಾಲಕನ ಅಂದಾಜಿನಲ್ಲಿ ಒಂದು ಸೆಕೆಂಡ್ ವ್ಯತ್ಯಾಸವಾದರೂ ನಡೆಯುವುದೇ ಭೀಕರ ಅಪಘಾತ. ರಸ್ತೆಯಲ್ಲಿ ನಡೆಯುವ ಎಲ್ಲ ಅನಾಹುತಗಳಲ್ಲೂ ಅಪಘಾತಕ್ಕೆ ಸಿಲುಕಿದವರ ತಪ್ಪೇ ಇರುವುದಿಲ್ಲ. ಯಾರೋ ಮಾಡುವ ತಪ್ಪಿಗೆ ಇನ್ನಾರೋ ಅಮಾಯಕರು ಬಲಿಯಾಗುವ ಪ್ರಕರಣಗಳೇ ಹೆಚ್ಚಿನದಾಗಿರುತ್ತವೆ. ಆದರೆ, ಇದು ಜಗತ್ತಿನ ತರ್ಕಕ್ಕೆ ಮಾತ್ರ. ವಿಧಿಯ ಲೆಕ್ಕದಲ್ಲಿ ಅವರ ಹೆಸರು ಆ ಕ್ಷಣ ಅಲ್ಲಿ ಬರೆದಿದ್ದರೆ ಮಾತ್ರ ಅಂಥವರು ಆ ಅವಘಡದ ಸ್ಥಳದಲ್ಲಿ ನಿಖರವಾಗಿ ಸಿಲುಕಿಕೊಂಡಿರುತ್ತಾರೆ. ಯಾವುದೋ ಕಾರು-ಲಾರಿ ಪಕ್ಕದ ರಸ್ತೆಯಲ್ಲಿ ಬರುತ್ತಿದ್ದರೂ, ಡಿವೈಡರ್ ದಾಟಿ, ಇನ್ನಾವುದೋ ವಾಹನಕ್ಕೆ ಡಿಕ್ಕಿ ಹೊಡೆದು, ಯಾರೋ ಸಂಬಂಧವಿಲ್ಲದವರ ಜೀವ ಬಲಿ ತೆಗೆದುಕೊಂಡಿರುತ್ತದೆ. ಯಾವುದೋ ಬಸ್ಸು, ಲಾರಿಗಳ ಚಕ್ರ ಏಕಾಏಕಿ ಕಳಚಿಕೊಂಡು ಹಿಂದೆ ಬರುತ್ತಿರುವ ವಾಹನ ಸವಾರರ ಜೀವ ತೆಗೆದಿರುತ್ತದೆ. ಕಣ್ಣಿಗೆ ಕಾಣದ ರಸ್ತೆಗುಂಡಿ, ದಿಢೀರನೆ ರಸ್ತೆಗೆ ನುಗ್ಗುವ ಮೂಕಪ್ರಾಣಿ, ರಸ್ತೆ ದಾಟುವ ವ್ಯಕ್ತಿಗಳು ಅಥವಾ ಇನ್ನಾವುದೋ ಸನ್ನಿವೇಶ ಸೃಷ್ಟಿಯಾಗಿ ಅಲ್ಲೊಂದು ಅಪಘಾತ ನಡೆದೇ ತೀರುತ್ತದೆ.
ವಿಧಿಯ ಲೆಕ್ಕವನ್ನು ತಪ್ಪಿಸುವುದು ಮನುಷ್ಯರಿಂದ ಸಾಧ್ಯವಿಲ್ಲ. ಕೆಲವರಿಗೆ ಬೇಗ, ಕೆಲವರಿಗೆ ನಿಧಾನ. ಅವರವರ ಹಣೆಬರಹಕ್ಕೆ ತಕ್ಕಂತೆ ಸಮಯ ಬಂದಾಗ ಎಲ್ಲರೂ ಕಾಲನ ಹಾದಿ ಹಿಡಿಯುವವರೇ. ಪ್ರಪಂಚವಿರಲಿ, ಒಂದು ಪ್ರದೇಶವಿರಲಿ, ಆಗಮನ-ನಿರ್ಗಮನಗಳು ಸಹಜ ಪ್ರಕ್ರಿಯೆ. ಹಾಗಾಗಿ ವಿಧಿಯ ಲೆಕ್ಕ ಕರೆಯುವವರೆಗೆ ನಮ್ಮ ಬದುಕಿನ ಲೆಕ್ಕ ಸರಿಯಾಗಿರುವಂತೆ ನೋಡಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ.
ಅಂಕೆಯಿಲ್ಲದ ಬದುಕು ಎಂಬ ಲೌಕಿಕ ಮಾತೊಂದಿದೆ. ಇದು ಗೊತ್ತುಗುರಿ ಇಲ್ಲದೆ ಬದುಕುವ ರೀತಿಗೆ ಸಂಬಂಧಿಸಿದ್ದಾಗಿರಬಹುದು ಅಥವಾ ಸ್ವಯಂಕೃತಾಪರಾಧದಿಂದ ಚೆಂದದ ಬದುಕನ್ನು ಹಾಳು ಮಾಡಿಕೊಂಡವರ ಬಗ್ಗೆಯೂ ಆಗಿರಬಹುದು. ಅಂಕೆ ಎಂಬ ಪದಕ್ಕೂ ನಾನಾ ಅರ್ಥಗಳಿವೆ. ಮನಸ್ಸಿನ ಮೇಲೆ ನಿಯಂತ್ರಣ ಇಲ್ಲದಿದ್ದರೆ ಆಗುವ ಅನಾಹುತಗಳನ್ನೂ ಅದು ಸೂಚಿಸುತ್ತದೆ. ಒಟ್ಟಾರೆಯಾಗಿ ನಮ್ಮ ಬದುಕಿಗೆ ಏನು ಬೇಕು? ಯಾವುದು ಬೇಡ? ಸರಿ-ತಪು್ಪ, ಹಿತ-ಅಹಿತ ಎಂಬ ವ್ಯತ್ಯಾಸಗಳನ್ನು ಅರಿತುಕೊಂಡು ನಮ್ಮ ಆಯ್ಕೆಗಳನ್ನು, ಪ್ರಾಶಸ್ಱಗಳನ್ನು ಗುರುತಿಸಿಕೊಳ್ಳುವ ವಿವೇಚನೆ ಅದು. ಪರರಿಗೆ ಒಳಿತು ಬಯಸುವವರು ಸ್ವತಃ ನೆಮ್ಮದಿಯಿಂದಿರುತ್ತಾರೆ. ದುಷ್ಟ ಚಿಂತನೆಗಳನ್ನು ತುಂಬಿಕೊಂಡವರಿಗೆ ಸ್ವಂತಕ್ಕೂ ಮನಃಶಾಂತಿ ಇರುವುದಿಲ್ಲ. ಮೇಲಕ್ಕೆಸೆಯುವ ಕಲ್ಲು, ಗೋಡೆಗೆಸೆಯುವ ಚೆಂಡು ಎಸೆಯುವವನತ್ತಲೇ ಮರಳುತ್ತದೆ. ಬದುಕು ಸಹ ಹಾಗೆಯೇ. ನಾವು ಮಾಡಿದ್ದು ನಮಗೆ. ಒಳಿತಾದರೆ ಒಳಿತು, ಕೆಡುಕಾದರೆ ಕೆಡುಕು.
ಬದುಕಿಗೊಂದು ಲೆಕ್ಕ ಇರುವುದು ಸರಿ. ಆದರೆ, ಕೂಡಿ, ಕಳೆದು, ಗುಣಿಸಿ, ಬಾಗಿಸುವ ಲೆಕ್ಕಾಚಾರದಂತೆ ಅಕ್ಷರಶಃ ಬದುಕುವುದು ಸಾಧ್ಯವಿಲ್ಲ. ಇಲ್ಲಿ ಲೆಕ್ಕವೆಂದರೆ, ದೂರದೃಷ್ಟಿ, ಸಮದೃಷ್ಟಿ, ಹಿತದೃಷ್ಟಿ. ಪುನರ್ಜನ್ಮವನ್ನು ನಂಬುವವರಾದರೆ, ಏಳೇಳು ಜನ್ಮದ ಪುಣ್ಯ, ಎಷ್ಟೋ ಜನ್ಮದ ಪಾಪ ಇತ್ಯಾದಿ ಹೇಳಿಕೆ-ನಂಬಿಕೆಯ ಬಗ್ಗೆ ಕೇಳುತ್ತಿರುತ್ತೇವೆ. ನಮ್ಮ ಪೂರ್ವಜರ, ದಾಸರ, ಶರಣರ, ಸಂತರ ಕೀರ್ತನೆ-ವಚನ- ನುಡಿಗಳಲ್ಲೂ ಜನ್ಮಾಂತರದಿಂದ ಬರುವ ಪಾಪ-ಪುಣ್ಯಗಳ ಫಲಾಫಲಗಳ ಉಲ್ಲೇಖವಿರುತ್ತದೆ. ಒಂದಂತೂ ನಿಜ. ಎಷ್ಟು ದಿನ ಇರುತ್ತೇವೋ ಗೊತ್ತಿಲ್ಲ. ಆದರೆ, ಇರುವಷ್ಟು ದಿನ ಸಾರ್ಥಕವಾಗಿ ಕಳೆಯುವಂಥ ಲೆಕ್ಕಾಚಾರ ಬದುಕಿನಲ್ಲಿದ್ದರೆ ಸುಖ- ಸಂತೋಷದ ಸಾಕ್ಷಾತ್ಕಾರ ಇರುವಷ್ಟು ದಿನದಲ್ಲೇ ಕಾಣಲು ಸಾಧ್ಯ.
ನೆಮ್ಮದಿಯಿಂದ ಬದುಕುವುದಕ್ಕೆ ಏನೇನು ಬೇಕು? ಋಣ (ಸಾಲ), ರೋಗ, ದಾರಿದ್ರ್ಯ (ಬಡತನ), ಪಾಪ, ಅಪಮೃತ್ಯು, ಭಯ, ಶೋಕ, ಮನಸ್ತಾಪ ಇವುಗಳನ್ನು ಪರಿಹರಿಸು ಎಂದು ನಿತ್ಯ ಭಗವಂತನಲ್ಲಿ ಬೇಡಿಕೊಳ್ಳುವ ಸಂಸ್ಕೃತಿ, ಸಂಸ್ಕಾರ ಈ ದೇಶದ್ದು. ಅನಾಯಾಸೇನ ಮರಣಂ (ಸಾವೆನ್ನುವುದು ನಿಶ್ಚಿತ. ಆದರೆ, ನೋವು, ಹಿಂಸೆ, ಯಾತನೆ, ರಕ್ತಪಾತ, ನರಳಿಕೆಗಳಿಲ್ಲದ ಸುಖಮರಣ ಬರಲಿ), ವಿನಾ ದೈನ್ಯೇನ ಜೀವನಂ (ಬೇರೊಬ್ಬರ ಬಳಿ ಬೇಡುವಂಥ ದೈನ್ಯತೆ ಇಲ್ಲದ ಸ್ವಾಭಿಮಾನದ ಜೀವನ ನಮ್ಮದಾಗಲಿ), ದೇಹಿ ಮೆ ಕೃಪಯಾ ಶಂಭೋ ತ್ವಯಿ ಭಕ್ತಿಮಚಂಚಲಾಂ (ಇಂಥ ನಿರುಮ್ಮಳವಾದ ಬದುಕನ್ನು ಕರುಣಿಸುವ ಭಗವಂತನೇ ನಿನ್ನ ಮೇಲಿನ ಭಕ್ತಿ ನಿರಂತರವಾಗಿರಲಿ) ಇಂಥ ಸ್ತೋತ್ರಗಳಲ್ಲಿ ಸಾರ್ಥಕ ಬದುಕಿನ ಸೂತ್ರಗಳಿವೆ.
ಸಾಮಾನ್ಯವಾಗಿ ಸಾವೆನ್ನುವುದು ಆಪ್ತರಿಗೆ ಸಂಬಂಧಿಸಿದ್ದಾಗ ಶೋಕ. ಇಲ್ಲದಿದ್ದರೆ ವೇದಾಂತ. ಎಲ್ಲೋ ದೂರದಲ್ಲಿ ಸಂಭವಿಸಿದ್ದು ತನಗೆ ಸಂಬಂಧಿಸಿದ್ದಲ್ಲ ಎಂಬ ನಿರ್ಲಿಪ್ತ ಭಾವವೇ ಮನುಷ್ಯನಿಗೆ ವರವೂ ಹೌದು, ಶಾಪವೂ ಹೌದು. ಪ್ರತಿನಿತ್ಯ ಸಾವಿನ ಮೆರವಣಿಗೆಯನ್ನು ನೋಡುತ್ತಿದ್ದರೂ, ಮನುಷ್ಯ ತಾನು ಮಾತ್ರ ಸಾಯುವುದೇ ಇಲ್ಲ ಎಂಬಂತೆ ಬದುಕುತ್ತಾನೆ. ‘ಇದೇ ನನಗೆ ಲೋಕದಲ್ಲಿ ಅತ್ಯಂತ ಅಚ್ಚರಿ ಉಂಟುಮಾಡುವ ಸಂಗತಿ’ ಎಂದು ಧರ್ಮರಾಜ ಯಕ್ಷ ಕೇಳುವ ಪ್ರಶ್ನೆಗೆ ಉತ್ತರಿಸುತ್ತಾನೆ. ಆಸೆ, ದುರಾಸೆ, ಲೋಭ, ಮೋಹ, ಮದ, ಲಾಲಸೆ, ಸ್ವಾರ್ಥ, ಸಂಕುಚಿತ ಮನೋಭಾವಗಳಲ್ಲಿ ತೊಳಲುವ ಪ್ರಾಪಂಚಿಕರು ಉಪ್ಪರಿಗೆ ಮನೆ, ಕೊಪ್ಪರಿಗೆ ಹೊನ್ನು, ತಲೆಮಾರಿಗಾಗುವಷ್ಟು ಸಂಪತ್ತು ಕೂಡಿಡುವುದನ್ನು ನೋಡುವಾಗ, ಅವರಿಗೆ ಸಾವೇ ಇಲ್ಲವೇನೋ ಎಂಬ ಭಾವನೆ ಬರುತ್ತಿರುತ್ತದೆ. ಆದರೆ, ಎಷ್ಟು ಸಂಪಾದಿಸಿದರೂ ಹೋಗುವಾಗ ಎಲ್ಲರದೂ ಬರಿಗೈ. ‘ನಿದ್ದೆಗೊಮ್ಮೆ ನಿತ್ಯ ಮರಣ, ಎದ್ದ ಸಲ ನವೀನ ಜನನ’ ಎಂಬ ಬೇಂದ್ರೆ ಕಲ್ಪನೆಯಲ್ಲಿ ಜಗತ್ತಿನ ಚಿಂತನೆಯ ಸಾರವೇ ಅಡಗಿದೆ. ಅಂಥ ತಿಳಿವಳಿಕೆಗಳನ್ನು ಅಳವಡಿಸಿಕೊಂಡ ಬದುಕು ನಮ್ಮದಾದರೆ ಇರುವ ನಾಲ್ಕು ದಿನದ ಬದುಕಿನಲ್ಲಿ ಶೋಕ ಕಡಿಮೆ ಮಾಡಿಕೊಂಡು ಇರುವುದರಲ್ಲೇ ನಾಕವನ್ನು ಕಾಣಬಹುದು. ಹುಟ್ಟಿದವನು ಸಾಯಲೇ ಬೇಕು. ಅದರ ನಡುವಿನ ಜೀವನ ಪಯಣ ಸಾರ್ಥಕವಾಗಿಸಿಕೊಳ್ಳುವುದು ನಮ್ಮ ಕೈಲಿದೆ. ಅದೇ ಬದುಕಿನ ಲೆಕ್ಕ, ಬದುಕುವ ಲೆಕ್ಕ.
ತಿಳಿವಳಿಕೆಯ ತುದಿ ನಾವೂ ನೀವೂ
ತಿಳಿಯೆನು ಎನ್ನುವ ಹಠವೇ ಸಾವು (ಬೇಂದ್ರೆ)
(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)