

ವ್ರತಗಳು ಕೇವಲ ಧಾರ್ವಿುಕತೆಗೆ ಮಾತ್ರ ಸೀಮಿತವಲ್ಲ. ಸುಂದರ ಜೀವನಕ್ಕೆ ಅವು ಮಾರ್ಗದರ್ಶಕ. ನಮ್ಮನ್ನು ನಾವು ಅರಿತುಕೊಳ್ಳಲು, ಮನಸ್ಸನ್ನು ನಿಗ್ರಹಿಸಿಕೊಂಡು ಬಾಳಲು, ಶಾಂತಿ-ನೆಮ್ಮದಿಯನ್ನು ಹೊಂದಲು ವ್ರತಾಚರಣೆಗಳಿಂದ ಸಾಧ್ಯ. ನಮ್ಮ ಸಂಸ್ಕೃತಿ, ಸಂಪ್ರದಾಯವನ್ನು ಉಳಿಸುವುದರ ಜತೆಗೆ ಬದುಕನ್ನು ಸನ್ಮಾರ್ಗದೆಡೆಗೆ ಕೊಂಡೊಯ್ಯುವ ಹಾಗೂ ಮುಂದಿನ ಪೀಳಿಗೆಗೆ ಕಟ್ಟಿ ಕೊಡುವ ವ್ರತವನ್ನು ನಾವಿಂದು ಕೈಗೊಳ್ಳದಿದ್ದರೆ ನಮ್ಮ ಶ್ರೇಷ್ಠ ಪರಂಪರೆಯು ತನ್ನಿಂದ ತಾನೇ ಅವಸಾನಗೊಳ್ಳುತ್ತದೆ.
ಭಾರತದಲ್ಲಿ ಪುರಾಣ, ಕಥೆಗಳಿಗೆ ಹೆಚ್ಚಿನ ಮಹತ್ವವಿದೆ. ಯಾಕೆಂದರೆ ಅವುಗಳಲ್ಲಿ ಬಗೆಬಗೆಯ ತತ್ವಾದರ್ಶಗಳು, ಜೀವನ, ಮಾನವೀಯ ಮೌಲ್ಯಗಳನ್ನು ಕತೆ, ದೃಷ್ಟಾಂತ, ಸನ್ನಿವೇಶಗಳ ಮೂಲಕ ಪ್ರಚುರಪಡಿಸಿದ್ದು ಅವೆಲ್ಲ ನಮ್ಮ ಜೀವನಕ್ಕೆ ಬುನಾದಿಯಾಗಿವೆ. ಆ ಕತೆಗಳಲ್ಲಿರುವ ಮೌಲಿಕ ತತ್ವಗಳು, ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಿವೆ. ಬ್ರಹ್ಮ, ವಿಷ್ಣು, ಮಹೇಶ್ವರರ ಅನೇಕ ಕತೆಗಳು ನಮ್ಮ ಬದುಕಿಗೆ ಪ್ರೇರಣೆ ನೀಡುವಂಥವು. ಇದಲ್ಲದೆ ಧರ್ಮ-ಅಧರ್ಮ, ನ್ಯಾಯ, ನೀತಿ, ಸನ್ಮಾರ್ಗ ಹೀಗೆ ಹಲವಾರು ವಿಚಾರಧಾರೆಗಳು ಪುರಾಣ ಕತೆಗಳಲ್ಲಿ ಇರುವುದನ್ನು ನಾವು ಕಾಣಬಹುದು.
ಬಾಲ್ಯದಿಂದಲೇ ಪುರಾಣ ಕತೆಗಳನ್ನು ಕೇಳುತ್ತಾ ಬೆಳೆದ ನಾವು, ಅವುಗಳಲ್ಲಿನ ವ್ರತ, ಅವುಗಳ ಸಂಕಲ್ಪ, ಹಿನ್ನೆಲೆಗಳ ಬಗ್ಗೆ ಸಾಕಷ್ಟು ಬಾರಿ ಕೇಳಿದ್ದೇವೆ. ವ್ರತವನ್ನಾಚರಿಸಿ ಸಂತಾನ ಪಡೆಯುವುದು, ವರಗಳನ್ನು ಪಡೆಯುವುದು, ದೇವರನ್ನು ಸಂಪ್ರೀತಗೊಳಿಸಿ ಇಷ್ಟಾರ್ಥ ಸಿದ್ಧಿಸಿಕೊಳ್ಳುವುದು ಹೀಗೆ ನಾನಾ ಕಾರಣಗಳಿಗೆ ವ್ರತಾಚರಣೆ ಪಾಲಿಸುತ್ತಾರೆ. ಪುರಾಣ ಕತೆಗಳಲ್ಲಿ ಮಾತ್ರವಲ್ಲ ಲೌಕಿಕ ಬದುಕಿನಲ್ಲೂ ವ್ರತಾಚರಣೆಗಳಿಗೆ ಹೆಚ್ಚಿನ ಮಹತ್ವವಿದೆ. ಸನಾತನ ಧರ್ಮದಲ್ಲಿ ‘ವ್ರತ’ ಎಂದರೆ ಒಂದು ಆಚರಣೆ. ದೃಢಚಿತ್ತದಿಂದ ಮಾಡಿದ ಸಂಕಲ್ಪವನ್ನು ಈಡೇರಿಸಲು ಅಥವಾ ಸಾಧಿಸಲು ಕೈಗೊಳ್ಳುವ ಕ್ರಿಯೆ. ಮನುಷ್ಯನ ಬದುಕನ್ನು ನಾಲ್ಕು ಆಶ್ರಮಗಳನ್ನಾಗಿ ವಿಂಗಡಿಸಲಾಗಿದೆ. ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸನ್ಯಾಸ. ಪ್ರತಿಯೊಂದು ಆಶ್ರಮಕ್ಕೂ ಅದರದೇ ಆದ ರೀತಿ-ನೀತಿ ಹಾಗೂ ಜೀವನ ಕ್ರಮಗಳಿವೆ. ಇಲ್ಲಿ ಬ್ರಹ್ಮಚರ್ಯ ಮತ್ತು ಸನ್ಯಾಸಾಶ್ರಮವನ್ನು ಆಯ್ದುಕೊಳ್ಳುವವರು ವ್ರತಾಚರಣೆಯ ರೀತಿಯಲ್ಲೇ ಬದುಕನ್ನು ಸಾಗಿಸುತ್ತಾರೆ.
ಬ್ರಹ್ಮಚರ್ಯ ಪಾಲಿಸುವವರು ಕಠಿಣ ವ್ರತಗಳನ್ನು ಆಚರಿಸುತ್ತಾರೆ. ತಮ್ಮ ಆಸೆ, ಕಾಮನೆಗಳನ್ನು ಹತೋಟಿಯಲ್ಲಿ ಇಟ್ಟುಕೊಂಡು, ಪಂಚೇಂದ್ರಿಯಗಳನ್ನು ನಿಯಂತ್ರಿಸಿಕೊಂಡು ಕಲಿಕೆ, ಧರ್ಮ, ಸಾಧನಾ ಮಾರ್ಗದಲ್ಲಿ ಮುಂದುವರೆಯುತ್ತಾರೆ. ಸನ್ಯಾಸಾಶ್ರಮದಲ್ಲಿ ಇರುವವರು ಲೌಕಿಕ ಜೀವನದ ಬಂಧವನ್ನು ಕಳೆದುಕೊಂಡು ತ್ಯಾಗ, ಮೋಕ್ಷದೆಡೆಗೆ ಮುನ್ನಡೆಯುತ್ತಾರೆ. ಇನ್ನು ಗೃಹಸ್ಥಾಶ್ರಮವೂ ಒಂದು ವ್ರತದಂತೆ. ತಮ್ಮ ಜವಾಬ್ದಾರಿಗಳನ್ನು ನಿಭಾಯಿಸುತ್ತಾ, ಮಡದಿ, ಮಕ್ಕಳನ್ನು ಪಾಲಿಸುತ್ತಾ ಧರ್ಮಮಾರ್ಗದಲ್ಲಿ ನಡೆದು ಬದುಕನ್ನು ಸಾರ್ಥಕ ಮಾಡಿಕೊಳ್ಳುವುದಾಗಿದೆ. ಅಷ್ಟೇ ಅಲ್ಲದೆ ತಮ್ಮ ನಿತ್ಯ ಜೀವನದ ನಡುವೆ ಕಷ್ಟ ನಿವಾರಣೆಗೆ, ಇಷ್ಟಾರ್ಥ ಸಾಧನೆಗೆ ಮತ್ತು ಗುರಿ ತಲುಪಲು ಹಲವು ಬಗೆಯ ವ್ರತಾಚರಣೆಯನ್ನು ಕೈಗೊಳ್ಳುತ್ತಾರೆ. ಒಟ್ಟಿನಲ್ಲಿ ಹೇಳುವುದಾದರೆ ಜೀವನವೇ ವ್ರತಕ್ಕೆ ಸಮಾನ. ಅದಕ್ಕಾಗಿಯೇ ಇರಬೇಕು ‘ಬದುಕನ್ನು ವ್ರತದಂತೆ ಪಾಲಿಸಬೇಕು’ ಎಂದು ಹಿರಿಯರು ಹೇಳಿರುವುದು.
ವ್ರತದಲ್ಲಿ ಮುಖ್ಯವಾಗಿರುವುದು ಪಂಚೇಂದ್ರಿಯಗಳ ಮತ್ತು ಅರಿಷಡ್ವರ್ಗಗಳ ಹತೋಟಿ. ಮನಸ್ಸಿನ ನಿಯಂತ್ರಣಕ್ಕಾಗಿ ವ್ರತಗಳ ಆಚರಣೆ. ಭಕ್ತಿಯ ಪಾರಮಾರ್ಥಿಕ, ಅಲೌಕಿಕ ವಿಚಾರವಾಗಿ ಮಾತ್ರವಲ್ಲದೆ ಆರೋಗ್ಯ ವೃದ್ಧಿ ಹಾಗೂ ಸನ್ಮಾರ್ಗದಲ್ಲಿ ನಡೆಯುವುದೇ ವ್ರತದ ಮಹತ್ತರ ಉದ್ದೇಶವಾಗಿದೆ. ಮನಸ್ಸಿನ ನಿಯಂತ್ರಣಕ್ಕಾಗಿ ವ್ರತಗಳು ಒಂದು ಉಪಕ್ರಮವಾಗಿವೆ ಎನ್ನಬಹುದು. ಇಸ್ಲಾಂ, ಕ್ರೈಸ್ತ, ಜೈನ, ಬೌದ್ಧ ಹೀಗೆ ಪ್ರತಿ ಧರ್ಮದಲ್ಲೂ ಅವರದೇ ಆದ ಪದ್ಧತಿಯಲ್ಲಿ ವ್ರತಾಚರಣೆ ಕೈಗೊಳ್ಳುತ್ತಾರೆ. ಹಬ್ಬ ಹರಿದಿನ ಸಂದರ್ಭಗಳಲ್ಲಿ ವಿಶಿಷ್ಟವಾದ ವ್ರತಗಳನ್ನು ಪಾಲಿಸುತ್ತಾರೆ. ಸಾಧು ಸಂತರು, ಸ್ವಾಮೀಜಿಗಳೂ ಚಾತುರ್ವಸ್ಯ ಮುಂತಾದ ವ್ರತಾಚರಣೆ ಮಾಡುತ್ತಾರೆ. ತಮ್ಮ ಆಹಾರ ಪದ್ಧತಿಗಳಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡು ಕಠಿಣ ವ್ರತ ಪಾಲನೆ ಮಾಡುವುದನ್ನು ನಾವು ಗಮನಿಸುತ್ತೇವೆ. ಹಾಗಾಗಿ ವ್ರತಾಚರಣೆ ಎನ್ನುವುದು ಪ್ರತಿಯೊಬ್ಬ ಮನುಷ್ಯನೂ ಪಾಲಿಸಬಹುದಾದ ಒಂದು ಉತ್ತಮ ಸಂಸ್ಕಾರವಾಗಿದೆ.
ಅನೇಕರು ‘ಏಕಾದಶಿ ಉಪವಾಸ ವ್ರತವನ್ನು ಆಚರಿಸುತ್ತಿದ್ದೇನೆ, ಸಂಕಷ್ಟಿಯನ್ನು ಆಚರಿಸುತ್ತಿದ್ದೇನೆ’ ಎಂದು ಹೇಳುವುದನ್ನು ನಾವು ಕೇಳಿರುತ್ತೇವೆ. ಅಂದರೆ ಪ್ರತಿ ಏಕಾದಶಿಯಂದು ತಪ್ಪದೇ ಉಪವಾಸ ಮಾಡುವುದು, ಅಥವಾ ಸಂಕಷ್ಟಿಯಂದು ದಿನವಿಡೀ ಉಪವಾಸವಿದ್ದು ಚಂದ್ರೋದಯವನ್ನು ನೋಡಿ, ಪೂಜೆ ಮಾಡಿ ಊಟ ಮಾಡುವುದು, ಒಂದು ಮಂಡಲ ಪರ್ಯಂತ ಶುದ್ಧವಾಗಿದ್ದು ಮಾಲಾಧಾರಿಗಳಾಗಿ ಅಯ್ಯಪ್ಪ ಸ್ವಾಮಿಯ ದರುಶನಕ್ಕಾಗಿ ಶಬರಿಮಲೆಗೆ ತೆರಳುವ ವ್ರತ ಪಾಲಿಸಿ, ಮಕರ ಸಂಕ್ರಾಂತಿಯಂದು ಮಲೆಯಲ್ಲಿ ಜ್ಯೋತಿಯನ್ನು ಕಾಣುವ ಮೂಲಕ ವ್ರತಾಚರಣೆಯನ್ನು ಕೊನೆಗೊಳಿಸುತ್ತಾರೆ. ಹಾಗೆಯೇ ವರಮಹಾಲಕ್ಷ್ಮಿ ವ್ರತ, ಶರನ್ನವರಾತ್ರಿ ವ್ರತ ಇಂತಹ ಅನೇಕ ಸಂಕಲ್ಪವನ್ನು ದೃಢಚಿತ್ತದಿಂದ ಪಾಲಿಸುತ್ತಾರೆ.
ವ್ರತಗಳಲ್ಲಿ ಸರಳವೂ, ಕಠಿಣವೂ ಆಗಿರುವ ಬಹಳಷ್ಟು ವಿಧಗಳಿವೆ. ಜೈನ ಧರ್ವಿುೕಯರಲ್ಲಿ ಸಲ್ಲೇಖನ ಎಂಬ ವ್ರತವಿದೆ. ಮೋಕ್ಷ ಅಥವಾ ಸದ್ಗತಿಗಾಗಿ ಧರ್ಮಪೂರ್ವಕವಾಗಿ ಶರೀರ ತ್ಯಾಗ ಮಾಡುವ ವಿಧಿಗೆ ಸಲ್ಲೇಖನ ವ್ರತ ಎನ್ನಲಾಗುತ್ತದೆ. ಇದರಲ್ಲಿ ಎರಡು ವಿಧಗಳಿವೆ. ಆಸೆ-ಆಕಾಂಕ್ಷೆಗಳನ್ನು ದೂರವಾಗಿಸುವ ಕಾಷಾಯ ಸಲ್ಲೇಖನ. ಇನ್ನೊಂದು ದೇಹವನ್ನು ಕಠಿಣ ಪರೀಕ್ಷೆಗೆ ಒಡ್ಡಿಕೊಳ್ಳುವ ಕಾಯ ಸಲ್ಲೇಖನ. ಇಲ್ಲಿ ಆಹಾರ ಮತ್ತು ಪಾನೀಯಗಳಿಂದ ಕ್ರಮೇಣವಾಗಿ ದೂರವಿರುವುದು ಎಂದರ್ಥ. ಸಲ್ಲೇಖನವನ್ನು ಅನುಸರಿಸುವ ವ್ಯಕ್ತಿಯು ತನ್ನ ಮನಸ್ಸಿನಲ್ಲಿ ಉಂಟಾಗುವ ಭಾವೋದ್ರೇಕಗಳನ್ನು ನಿಯಂತ್ರಿಸಿ, ಆ ಮೂಲಕ ಅಹಿಂಸಾ ಪಾಲನೆ ಮಾಡುವುದಾಗಿದೆ.
ಸತ್ಯ ನಿಷ್ಠೆಯಿಂದ ವ್ರತವನ್ನು ಆಚರಿಸುವ ಸಲುವಾಗಿ ಭಕ್ತಿಪ್ರಧಾನವಾಗಿ ವ್ರತಾಚರಣೆ ಮಾಡಲಾಗುತ್ತದೆ. ಜನರು ದೇವರ ಹೆಸರಿನಲ್ಲಿ ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು ಎಂಬ ನಂಬಿಕೆ. ಆದರೆ ವ್ರತಾಚರಣೆ ಎನ್ನುವುದು ಕೇವಲ ಧಾರ್ವಿುಕ ವಿಚಾರಗಳಿಗೆ ಮಾತ್ರ ಸೀಮಿತವಲ್ಲ. ಅಧ್ಯಾತ್ಮದ ಹೊರತಾಗಿಯೂ ದೃಢ ಮನಸ್ಸು ಮಾಡಿ ಜೀವನವನ್ನೇ ಒಂದು ವ್ರತವನ್ನಾಗಿ ಕಳೆಯಬಹುದು. ಸತ್ಯ ಹರಿಶ್ಚಂದ್ರ ಸತ್ಯವನ್ನೇ ನುಡಿಯುವ ವ್ರತವನ್ನು ಜೀವನದುದ್ದಕ್ಕೂ ಆಚರಿಸಿದ ಹಾಗೆ. ಎಷ್ಟೇ ಕಷ್ಟಗಳನ್ನು ಎದುರಿಸಿದರೂ ತನ್ನ ಸತ್ಯದ ದಾರಿಯನ್ನು ಆತ ಬಿಟ್ಟುಕೊಡಲಿಲ್ಲ. ಇದು ಎಲ್ಲರಿಗೂ ಮಾದರಿಯಾಗಿದೆ. ರಾಮಚಂದ್ರನು ಏಕಪತ್ನಿ ವ್ರತಸ್ಥನಾಗಿರುವುದು, ಜೀವನದುದ್ದಕ್ಕೂ ಪತಿವ್ರತೆಯಾಗಿ ಆದರ್ಶ ಮಹಿಳೆಯರಾಗಿ ಬದುಕಿದ ಸ್ತ್ರೀಯರು ಹೀಗೆ ಪುರಾಣಗಳಲ್ಲಿ ಅನೇಕ ಕಥೆಗಳನ್ನು ನಾವು ಕಾಣಬಹುದಾಗಿದೆ. ಸಚ್ಚಾರಿತ್ರ್ಯವಂತರಾಗಿ ಬದುಕುವುದು, ಶಿಸ್ತುಬದ್ಧವಾಗಿ ಮೌಲ್ಯಯುತ ಜೀವನ ನಡೆಸುವುದು ಕೂಡ ಒಂದು ವ್ರತವಾಗಿದೆ.
ನಮ್ಮನ್ನು ನಾವು ನಿಗ್ರಹಿಸಿಕೊಳ್ಳಲು ಸಂಯಮ ಅತಿ ಮುಖ್ಯ. ಸಂಯಮವೆಂದರೆ ಪಂಚೇಂದ್ರಿಯಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದು ಅಥವಾ ನಿಗ್ರಹಿಸುವುದು. ಸಿಟ್ಟು ಬಂದಾಗ ಕೋಪವನ್ನು ನಿಯಂತ್ರಿಸಿಕೊಂಡು ಸಮಾಧಾನದಿಂದ ಇರುವುದು, ಖುಷಿಯಾದಾಗ ಅತಿಯಾಗಿ ಉದ್ವೇಗಗೊಳ್ಳದೆ ಇರುವುದು ಹೀಗೆ ಏನೇ ಆದರೂ ಸಮಾಧಾನ ಚಿತ್ತದಿಂದ ಇರುವುದಾಗಿದೆ. ಇದನ್ನು ಸ್ಥಿತಪ್ರಜ್ಞೆ ಎಂದೂ ಹೇಳಲಾಗುತ್ತದೆ. ಇಂದಿನ ದಿನಗಳಲ್ಲಿ ಸಂಯಮ ಹೊಂದುವುದು ಅತಿ ಮುಖ್ಯವಾಗುತ್ತದೆ. ಉದಾಹರಣೆಗೆ, ಬಾಯಿ ಚಪಲದ ಬಗ್ಗೆ ಸಂಯಮ ಇಲ್ಲದಿದ್ದರೆ ಬೇಕು ಬೇಕಾದದ್ದನ್ನೆಲ್ಲ ತಿಂದು ಅನಾರೋಗ್ಯಕ್ಕೆ ಒಳಗಾಗಬಹುದು. ಕುತೂಹಲ ಅಥವಾ ಗೆಳೆಯರ ಒತ್ತಾಯದಿಂದ ಬೀಡಿ, ಸಿಗರೇಟು ಸೇದಿದಾಗ, ಮುಂದೆ ಅದೇ ಚಟವಾಗಬಹುದು. ಪಂಚೇಂದ್ರಿಯಗಳನ್ನು ನಿಯಂತ್ರಿಸಿಕೊಳ್ಳದೇ ಇದ್ದಾಗ ಅಪಾಯವು ಒಂದಲ್ಲ ಒಂದು ರೀತಿಯಲ್ಲಿ ಎದುರಾಗಬಹುದು. ಬದುಕಿನ ಲಯ ತಪ್ಪಲು ಕಾರಣವಾಗುವಂತಹ ಅರಿಷಡ್ವರ್ಗಗಳನ್ನು ನಿಯಂತ್ರಿಸಿಕೊಳ್ಳಲು ಸಂಯಮ ಅತ್ಯವಶ್ಯ. ಇದೂ ಒಂದು ರೀತಿಯ ವ್ರತಾಚರಣೆಯಾಗಿದ್ದು, ಶಾಂತಿ-ನೆಮ್ಮದಿ ಹೊಂದಲು ಸಹಕಾರಿಯಾಗಿದೆ.
ಹಿಂದಿನ ಕಾಲದಲ್ಲಿ ವ್ರತಾಚರಣೆ ಬಹಳ ದೀರ್ಘವಾಗಿ ನಡೆಯುತ್ತಿದ್ದ ಪ್ರಕ್ರಿಯೆ. ಹಿರಿಯರು ಅನೇಕರು ಸಂಕಲ್ಪಿಸಿ ವ್ರತ ಕೈಗೊಂಡರೆಂದರೆ ತಿಂಗಳ ಪರ್ಯಂತ ಅದನ್ನು ಮುಂದುವರಿಸುತ್ತಿದ್ದರು. ಮುಂದೆ ಅದು ಅವರ ಬದುಕಿನುದ್ದಕ್ಕೂ ಹಾಸು ಹೊಕ್ಕಾಗಿರುತ್ತಿತ್ತು. ಅದಕ್ಕಾಗಿಯೇ ಯಾವುದಾದರೂ ಕೆಲಸವಿರಲಿ, ಅಭ್ಯಾಸವಿರಲಿ ಅದನ್ನು 21 ದಿನಗಳವರೆಗೆ ನಿರಂತರವಾಗಿ ಮಾಡಿದರೆ ಅದು ಮುಂದೆ ರೂಢಿಯಾಗುತ್ತದೆ ಎನ್ನುವ ಮಾತಿದೆ. ವಿದ್ಯಾರ್ಥಿಯು 21 ದಿನಗಳ ಕಾಲ ಬೆಳಗ್ಗೆ 5 ಗಂಟೆಗೆ ಏಳುವ ಅಭ್ಯಾಸ ಮಾಡಿದರೆ ಮುಂದೆ ಜೀವನದುದ್ದಕ್ಕೂ ಯಾವುದೇ ಅಲಾಮ್ರ್ ಇಲ್ಲದೆ ತನ್ನಷ್ಟಕ್ಕೆ ತಾನೇ ಏಳುವ ರೂಢಿಯಾಗುತ್ತದೆ. ಮುಂದೆ ಜೀವನದುದ್ದಕ್ಕೂ ಅದನ್ನು ಪಾಲಿಸುವ ಕ್ಷಮತೆ ಆತನಲ್ಲಿ ಇರುತ್ತದೆ. ಹಿಂದೆ ಆಲಾರಾಂಗಳೇ ಇಲ್ಲದ ಕಾಲದಲ್ಲಿ ಮುಂಜಾನೆ ಬೇಗನೆ ಏಳುವ ಅಭ್ಯಾಸವು ಜೀವನ ಕ್ರಮವೇ ಆಗಿತ್ತು. ಕಾಲ ಬದಲಾದಂತೆಲ್ಲ ನಮ್ಮ ಸ್ವಭಾವ, ಜೀವನಕ್ರಮವೂ ನಿಧಾನವಾಗಿ ಬದಲಾಗತೊಡಗಿತು. ಎಲ್ಲವೂ ಕ್ಷಣಾರ್ಧದಲ್ಲಿ ಆಗಬೇಕು. ಕಾಯುವ ತಾಳ್ಮೆ, ಕಷ್ಟ ಪಡುವ ಮನಸ್ಸು ಕಡಿಮೆಯಾಗತೊಡಗಿತು. ಆತುರ, ಒತ್ತಡ, ಉದ್ವೇಗಗಳ ನಡುವೆ ಬದುಕು ಸಿಲುಕಿದೆ. ಪರಿಣಾಮವಾಗಿ ನಿತ್ಯ ಜೀವನ ಕ್ರಮವೇ ಸಾಕಷ್ಟು ಬದಲಾಗಿ ಹೋಗಿದೆ. ಊಟ, ತಿಂಡಿ, ನಿದ್ದೆ, ಕೆಲಸಗಳ ಸಮಯ ಏರುಪೇರಾಗಿದೆ.
ಹಿಂದೆ ನಾಲ್ಕೈದು ದಿನ ನಡೆಯುತ್ತಿದ್ದ ಮದುವೆ ಒಂದೇ ದಿನದಲ್ಲಿ ನಡೆಯುತ್ತದೆ. ಮದುವೆಗೆ ಒಂದು ವಾರ ಮೊದಲೇ ಬರುತ್ತಿದ್ದ ಬಂಧುಬಳಗ, ನೆಂಟರಿಷ್ಟರು ಧಾರಾ ಮುಹೂರ್ತದ ಸಮಯಕ್ಕೆ ಬರುವಂತಾಗಿದೆ. ಮನೆಯವರು ಕುಟುಂಬದವರೇ ಚಪ್ಪರ ಹಾಕಿ, ಎಲ್ಲರನ್ನು ಕುಳ್ಳಿರಿಸಿ ಊಟ ಬಡಿಸುತ್ತಿದ್ದರು. ಈಗ ಶಾಮಿಯಾನ ಹಾಕಿಸಿ ಕ್ಯಾಟರಿಂಗ್ ವ್ಯವಸ್ಥೆ ಮಾಡಲಾಗುತ್ತದೆ. ಕಾರ್ಯಕ್ರಮ ಆಯೋಜನೆಯ ರೂಪುರೇಷೆಗಳು ಸಾಕಷ್ಟು ಬದಲಾಗಿವೆ. ನಮ್ಮ ಧಾರ್ವಿುಕ ಆಚರಣೆಗಳೂ ಇದರಿಂದ ಹೊರತಾಗಿಲ್ಲ. ಹಬ್ಬ ಹರಿದಿನಗಳಿಗೂ ಆಧುನಿಕತೆಯ ಸೋಗು ಅಂಟಿದೆ. ಭಕ್ತಿ ಶ್ರದ್ಧೆಗಳೇ ವ್ರತವಾಗಿದ್ದ ಕಾಲ ಕಳೆದು ಆಡಂಬರ, ವೈಭೋಗವೇ ಹೆಚ್ಚು ಎದ್ದು ಕಾಣುತ್ತದೆ. ಯಾವುದೇ ಧಾರ್ವಿುಕ ವಿಧಿವಿಧಾನ, ಪರಂಪರೆ, ಸಂಪ್ರದಾಯಗಳೆಲ್ಲ ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳದಂತೆ ಆಚರಣೆಯಾಗಬೇಕಾದ ಅಗತ್ಯವಿದೆ.
ಹಾಗಾಗಿ ಅವುಗಳ ಹಿನ್ನೆಲೆಯನ್ನು ಅರಿತುಕೊಂಡು ಆಚರಿಸುವ ನಿಟ್ಟಿನಲ್ಲಿ ನಾವೆಲ್ಲ ಸಂಕಲ್ಪಿಸಿ, ವ್ರತಾಚರಣೆ ಮಾಡಬೇಕಾದ ಅಗತ್ಯ ಹಾಗೂ ಅನಿವಾರ್ಯತೆ ಇದೆ. ನಮ್ಮ ಸಂಸ್ಕೃತಿ, ಸಂಪ್ರದಾಯವನ್ನು ಉಳಿಸುವುದರ ಜತೆಗೆ ಬದುಕನ್ನು ಸನ್ಮಾರ್ಗದೆಡೆಗೆ ಕೊಂಡೊಯ್ಯುವ ಹಾಗೂ ಮುಂದಿನ ಪೀಳಿಗೆಗೆ ಕಟ್ಟಿ ಕೊಡುವ ವ್ರತವನ್ನು ನಾವಿಂದು ಕೈಗೊಳ್ಳದಿದ್ದರೆ ನಮ್ಮ ಶ್ರೇಷ್ಠ ಪರಂಪರೆಯು ತನ್ನಿಂದ ತಾನೇ ಅವಸಾನಗೊಳ್ಳುವ ಸಾಧ್ಯತೆ ಹೆಚ್ಚು. ಹಾಗಾಗಿ ವ್ರತಗಳು ಕೇವಲ ಧಾರ್ವಿುಕತೆಗೆ ಮಾತ್ರ ಸೀಮಿತವಲ್ಲ. ಸುಂದರ ಜೀವನಕ್ಕೆ ಅವು ಮಾರ್ಗದರ್ಶಕ. ನಮ್ಮನ್ನು ನಾವು ಅರಿತುಕೊಳ್ಳಲು, ಮನಸ್ಸನ್ನು ನಿಗ್ರಹಿಸಿಕೊಂಡು ಬಾಳಲು, ಶಾಂತಿ-ನೆಮ್ಮದಿಯನ್ನು ಹೊಂದಲು ವ್ರತಾಚರಣೆಗಳಿಂದ ಸಾಧ್ಯ.
ಬದುಕಿನಲ್ಲಿ ದುರ್ಗಣಗಳು ಯಾವ ಕಷ್ಟವೂ ಇಲ್ಲದೆ ಅಭ್ಯಾಸವಾಗಿ ಬದುಕನ್ನು ಆವರಿಸಿಕೊಳ್ಳುತ್ತವೆ. ಮುಂದೆ ಅವನತಿಗೆ ತಳ್ಳುತ್ತವೆ. ಮದ್ಯವ್ಯಸನಿಯು ಒಂದೆರಡು ಸಲ ಕುಡಿದರೆ ಮತ್ತೆ ಬೇಕು, ಇನ್ನೂ ಬೇಕೆನಿಸಿ ಅದು ಚಟವಾಗಿ ಬೆಳೆಯುತ್ತದೆ. ಇದಕ್ಕೆ ಆತ ಏನೇನೂ ಕಷ್ಟಪಡಬೇಕಾಗಿಲ್ಲ. ಕುಡುಕ ಸ್ನೇಹಿತನೊಂದಿಗೆ ಒಂದೆರಡು ಸಲ ಶರಾಬಿನ ಅಂಗಡಿಗೆ ಹೋಗಿ ಬಂದ ಮೇಲೆ ತಾನೂ ಕುಡುಕನಾಗುತ್ತಾನೆ. ಹಾಗೆಯೇ ಯಾವುದೇ ರೀತಿಯ ಒಳ್ಳೆಯ ಸಂಗತಿಗಳು, ಕೂಡಲೇ ಅಭ್ಯಾಸವಾಗುವುದಿಲ್ಲ. ಮೊಬೈಲ್ ಹಿಡಿದು ಕುಳಿತರೆ ಸಮಯ ಸಾಗುವುದೇ ತಿಳಿಯುವುದಿಲ್ಲ. ಅದೇ ಪುಸ್ತಕ ಹಿಡಿದು ಓದಲು ಶುರು ಮಾಡಿದಾಗ ಕೂತಲ್ಲಿಯೇ ಆಕಳಿಕೆ, ನಿದ್ದೆ ಬರತೊಡಗುತ್ತದೆ. ಹೀಗೆ ಹಲವಾರು ಸಂಗತಿಗಳು ಬದುಕಿನಲ್ಲಿವೆ. ದುರ್ಗಣಗಳನ್ನು ದೂರ ಮಾಡುವುದು ಬಹಳ ಕಷ್ಟ. ಅದಕ್ಕೇ ವ್ರತದಂತೆ ಪರಿಶ್ರಮಪಡಬೇಕಾಗುತ್ತದೆ. ಹಾಗಾಗಿ ನಾವು ಮಾಡುವ ಕೆಲಸ, ವ್ಯವಹಾರ, ಶಿಕ್ಷಣ, ಹೀಗೆ ಏನೇ ಇರಲಿ ಎಲ್ಲದರಲ್ಲೂ ಪರಿಶ್ರಮ, ಶಿಸ್ತು, ಇತ್ಯಾದಿ ಸದ್ಗುಣಗಳನ್ನು ವ್ರತದಂತೆ ಪಾಲಿಸೋಣ.