

ಮಧ್ಯವಯಸ್ಸಾದರೂ ಲಗ್ನವಾಗಿರದಿದ್ದ ಮಧುಮಿತಳಿಗೆ ಮಾತಾಪಿತರು ಬೇಗನೇ ವಿವಾಹಕ್ಕೆ ಒತ್ತಾಯಿಸತೊಡಗಿದರು. ನೀವೇ ಸೂಕ್ತ ವರನನ್ನು ಹುಡುಕಿ ಎಂದಳು ಮಧುಮಿತ. ಆದರೆ ಅವರು ಎಷ್ಟೇ ಪ್ರಯತ್ನಿಸಿದರೂ ತಕ್ಕ ವರ ಸಿಗಲಿಲ್ಲ. ಹೀಗಾಗಿ ಮಗಳಿಗೇ ವರನನ್ನು ಆಯ್ಕೆ ಮಾಡಿಕೊಳ್ಳಲು ಸೂಚಿಸಿದರು. ಮಧುಮಿತ ವಧುವರರ ಅನ್ವೇಷಣೆಯ ವೆಬ್ಸೈಟ್ಗಳನ್ನು ಸಂರ್ಪಸಿದಳು. ಅದರಲ್ಲಿ ಒಂದರಲ್ಲಿ ಅವಳಿಗೆ ಉತ್ತರಪ್ರದೇಶದ ನಿವಾಸಿ, 38 ವರ್ಷದ ಮನೋಜ್ ಕುಮಾರ್ ಎನ್ನುವವನ ಬಗ್ಗೆ ತಿಳಿಯಿತು. ಮನೋಜ್ ಪ್ರತಿಷ್ಠಿತ ಐಐಎಂನಿಂದ ಪದವಿ ಪಡೆದಿದ್ದು, ದೊಡ್ಡ ಔಷಧ ಕಂಪನಿಯಲ್ಲಿ ಸಿಇಓ ಹುದ್ದೆಯಲ್ಲಿದ್ದ.
ಆತ ತನಗೆ ಸೂಕ್ತ ವರನೆಂದು ಮಧುಮಿತ ನಿರ್ಧರಿಸಿ ಅವನನ್ನು ಸಂರ್ಪಸಿದಳು. ಇಬ್ಬರೂ ಪಂಚತಾರಾ ಹೋಟೆಲ್ನಲ್ಲಿ ಭೇಟಿಯಾದರು. ಮನೋಜ್ ಕುಮಾರ್ ಅಷ್ಟೇನೂ ರೂಪವಂತನಲ್ಲದಿದ್ದರೂ ಸೌಮ್ಯ ಸ್ವಭಾವದವನಾಗಿದ್ದ. ಆರು ಅಡಿ ಎತ್ತರದ ಆಜಾನುಬಾಹುವಾಗಿದ್ದ ಆತ ವೃತ್ತಿಯಲ್ಲಿ ಸಾಕಷ್ಟು ಹೆಸರನ್ನು ಗಳಿಸಿದ್ದ. ಸಹೋದರಿಯರ ಲಗ್ನವಾಗುವವರೆಗೂ ತಾನು ಲಗ್ನವಾಗಬಾರದೆಂದು ನಿಶ್ಚಯಿಸಿದ್ದ ಕಾರಣ ತನಗೆ ವಿವಾಹ ವಯಸ್ಸು ಮೀರಿತು. ಕುಟುಂಬ ವಲಯದಲ್ಲಿ ಸೂಕ್ತ ವಧು ದೊರೆಯದ ಕಾರಣ ಜಾಲತಾಣದ ಮೊರೆಹೋಗಬೇಕಾಯಿತು ಎಂದ. ಮಧುಮಿತಳನ್ನು ಲಗ್ನವಾಗಲು ಆತ ಒಪ್ಪಿದರೂ, ಇನ್ನೊಮ್ಮೆ ಭೇಟಿಯಾಗಿ ನಂತರವೇ ತೀರ್ವನಿಸಬೇಕೆಂದು ಆಕೆ ಸೂಚಿಸಿದಳು.
ಎರಡನೆಯ ಬಾರಿಗೆ ಭೇಟಿಯಾದಾಗ ಮಧುಮಿತ, ತಾನು ಹಲವಾರು ಪುರುಷ ಸ್ನೇಹಿತರನ್ನು ಹೊಂದಿದ್ದು, ಅವರಲ್ಲೊಬ್ಬನೊಡನೆ ದೈಹಿಕ ಸಂಪರ್ಕವಿಟ್ಟುಕೊಂಡಿದ್ದಾಗಿ ತಿಳಿಸಿದಳು. ಇದನ್ನು ಕೇಳಿ ಮನೋಜ್ ಬೆಚ್ಚಿ ಬಿದ್ದ. ‘ಈಗ ಆತನಿಂದ ದೂರವಾಗಿದ್ದೇನೆ, ಸದ್ಯಕ್ಕೆ ಯಾರ ಸಂಪರ್ಕವೂ ಇಲ್ಲ, ನಿನಗೆ ಇದು ಒಪ್ಪಿಗೆಯಾದರೆ ಲಗ್ನವಾಗು, ಇಲ್ಲದಿದ್ದರೆ ಬೇಡ’ ಎಂದಳು. ಲಗ್ನವಾಗುವ ಮೊದಲೇ ಸತ್ಯವನ್ನು ಮರೆಮಾಚದೆ ಹೇಳಿದ ಮಧುಮಿತಳ ಪ್ರಾಮಾಣಿಕತನಕ್ಕೆ ಬೆರಗಾದ ಮನೋಜ್, ‘ಹಳೆಯದನ್ನು ಮರೆತು ಹೊಸ ಜೀವನ ಸಾಗಿಸೋಣ, ಆದರೆ ನೀನು ಲಗ್ನದ ನಂತರ ಯಾವುದೇ ಪರಪುರುಷನ ಜತೆ ಸಂಪರ್ಕವನ್ನಿಟ್ಟುಕೊಳ್ಳಬಾರದು’ ಎಂಬ ಷರತ್ತನ್ನು ಹಾಕಿದ. ಆಕೆ ಒಪ್ಪಿದಳು. ಎರಡು ತಿಂಗಳ ಬಳಿಕ ಇಬ್ಬರೂ ಕುಟುಂಬದವರೆಲ್ಲರ ಸಮ್ಮುಖದಲ್ಲಿ ವಿವಾಹವಾದರು. ಮಧುಚಂದ್ರಕ್ಕೆಂದು ಸ್ವಿಜರ್ಲ್ಯಾಂಡ್ಗೆ ಹೋದರು. ಅಲ್ಲಿ ಒಂದು ವಾರ ಸಂತೋಷದಿಂದಲೇ ಸಮಯ ಕಳೆದರು. ಆದರೆ ಮನೋಜ್ಗೆ ಮಧುಮಿತಳಿಗೆ ಲೈಂಗಿಕ ಚಟುವಟಿಕೆ ಬಗ್ಗೆ ಅತಿಯಾದ ಆಸಕ್ತಿಯಿದೆ ಎಂದೆನಿಸದೆ ಇರಲಿಲ್ಲ. ಹೊಸದಾಗಿ ಮದುವೆಯಾಗಿರುವವರಲ್ಲಿ ಇದು ಸಹಜವಾಗಿರಬಹುದು ಎಂದು ರ್ತಸಿ ಆತ ಸುಮ್ಮನಾದ. ದೆಹಲಿಗೆ ವಾಪಸಾದ ನಂತರವೂ ಪತ್ನಿಗೆ ಲೈಂಗಿಕಾಸಕ್ತಿ ಕಡಿಮೆಯಾಗದಾದಾಗ ಮನೋಜನಿಗೆ ಚಿಂತೆ ಕಾಡತೊಡಗಿತು.
ಮದುವೆಯಾದ ನಾಲ್ಕು ತಿಂಗಳ ನಂತರದ ಒಂದು ರಾತ್ರಿ ಮಧುಮಿತ ಒಂದು ಬ್ಲೂ ಫಿಲಂ ವಿಡಿಯೋ ತೋರಿಸಿದಳು. ಅದನ್ನು ನೋಡಿ ಮನೋಜ್ ಗಾಬರಿಯಾದ. ‘ಈ ಚಿತ್ರದಲ್ಲಿ ಇರುವ ಜೋಡಿಯ ಹಾಗೆಯೇ ನಮ್ಮಿಬ್ಬರ ಸೆಕ್ಸ್ ಲೈಫ್ ಇರಬೇಕು, ನಾವು ದಿನವೂ ಒಟ್ಟಿಗೆ ಇಂತಹ ಚಿತ್ರಗಳನ್ನು ನೋಡಬೇಕು’ ಎಂದು ಮಧುಮಿತ ಸೂಚಿಸಿದಾಗ, ಮನೋಜ್ ಹೌಹಾರಿದ. ‘ನಾನು ಸಭ್ಯ ಕುಟುಂಬದಿಂದ ಬಂದವನು, ನನಗೆ ಇಂತಹ ಚಿತ್ರಗಳನ್ನು ನೋಡುವುದು ಹೇಸಿಗೆ ತರಿಸುತ್ತದೆ. ನಾನು ಇಂತಹ ಯಾವುದೇ ವಿಡಿಯೋ ನೋಡಿಲ್ಲ’ ಎಂದ. ಆಗ ಕೋಪಗೊಂಡ ಮಧುಮಿತ, ‘ನೀನು ದೊಡ್ಡ ಔಷಧ ಸಂಸ್ಥೆಯಲ್ಲಿ ಕೆಲಸಮಾಡುತ್ತಿದ್ದೂ ಇಷ್ಟು ಮಡಿವಂತನಾಗಿರುವುದು ಆಶ್ಚರ್ಯ ತರಿಸಿದೆ’ ಎಂದು ಮೂದಲಿಸಿದಳು. ‘ಯುವತಿಯಾದಾಗಿನಿಂದಲೂ ನನಗೆ ಇಂತಹ ವಿಡಿಯೋಗಳನ್ನು ನೋಡುವ ಅಭ್ಯಾಸವಿದೆ. ನಿನಗೆ ನೋಡಬೇಕೆನಿಸದಿದ್ದರೆ ಬೇರೊಂದು ಕೋಣೆಯಲ್ಲಿ ಮಲಗಿಕೋ’ ಎಂದಳು. ಕ್ರಮೇಣ ಆಕೆ ಬದಲಾಗಬಹುದು, ಕಾದು ನೋಡುವುದು ಲೇಸು ಎಂದು ಆತ ಸುಮ್ಮನಾದ.
ನಂತರವೂ ಮಧುಮಿತ ತನ್ನ ಚಟವನ್ನು ಬಿಡಲಿಲ್ಲ. ಆಕೆ ಮನೆಯಲ್ಲಿದ್ದಾಗಲೆಲ್ಲಾ ಅಂತಹ ವಿಡಿಯೋಗಳನ್ನೇ ನೋಡುತ್ತಿದ್ದಳು. ಮನೆಗೆ ಬಂದ ನಂತರ ಆಕೆಗೆ ಬೇರೆ ವಿಷಯಗಳ ಬಗ್ಗೆ ಆಸಕ್ತಿಯೇ ಇರಲಿಲ್ಲ. ಯಾವುದೇ ಮನೆಕೆಲಸವನ್ನೂ ಮಾಡುತ್ತಿರಲಿಲ್ಲ. ಕುಟುಂಬಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಇದರಿಂದ ಮನೋಜ್ ಬೇಸತ್ತು ಹೋದ. ಅವರಿಬ್ಬರ ನಡುವೆ ಪದೇಪದೆ ಜಗಳವಾಗತೊಡಗಿತು.
ಒಂದು ಬೆಳಿಗ್ಗೆ ಮಧುಮಿತ ಸ್ನಾನ ಮಾಡಲು ಹೋಗಿದ್ದಾಗ ಅವಳ ಫೋನ್ ರಿಂಗ್ ಆಯಿತು. ಅದನ್ನು ಮನೋಜ್ ಉತ್ತರಿಸಿದ. ಆನಂತರ ಕುತೂಹಲದಿಂದ ಫೋನ್ ಪರೀಕ್ಷಿಸಿದ. ಅದರಲ್ಲಿ ಹಲವಾರು ವಿಡಿಯೋಗಳು ಡೌನ್ಲೋಡ್ ಆಗಿದ್ದವು. ಅವುಗಳಲ್ಲಿ ಮೊದಲ ವಿಡಿಯೋವನ್ನು ತೆರೆದು ನೋಡಿದಾಗ ಅದರಲ್ಲಿ ಮಧುಮಿತಳೇ ಒಬ್ಬ ಯುವಕನ ಜತೆಗೆ ಕಾಮಕೇಳಿಯಲ್ಲಿದ್ದುದು ಕಂಡಿತು. ಮಧುಮಿತ ಸ್ನಾನ ಮುಗಿಸಿ ಹೊರಬಂದು ‘ನನ್ನ ಫೋನಿನಲ್ಲಿ ನೀನೇನು ನೋಡುತ್ತಿರುವೆ’ ಎಂದು ಪ್ರಶ್ನಿಸಿದಳು. ‘ನೀನು ಕೇವಲ ನೀಲಿಚಿತ್ರಗಳನ್ನು ನೋಡುವ ಚಟ ಬೆಳೆಸಿಕೊಂಡಿರುವೆ ಎಂದು ಭಾವಿಸಿದ್ದೆ, ಇದೇನಿದು ನೀನೇ ಇಂತಹ ಚಿತ್ರದಲ್ಲಿ ಪಾತ್ರಧಾರಿಯಾಗಿರುವಿಯಲ್ಲಾ, ವೈದ್ಯೆಯಾಗಿ ನಾಚಿಕೆ ಬರುವುದಿಲ್ಲವೇ, ಮದುವೆಯೆಂಬ ಸಂಬಂಧಕ್ಕೆ ಮಹತ್ವ ಕೊಡಬೇಕೆಂದು ನಿನಗನಿಸುವುದಿಲ್ಲವೇ?’ ಎಂದು ಮನೋಜ್ ತರಾಟೆಗೆ ತಗೆದುಕೊಂಡ. ‘ಮದುವೆಯಾಗುವ ಮೊದಲೇ ನನಗೆ ಒಬ್ಬನೊಡನೆ ಲೈಂಗಿಕ ಸಂಪರ್ಕವಿತ್ತು ಎಂದಿದ್ದೆನಲ್ಲ, ಆತ ಈ ವಿಡಿಯೋವನ್ನಿಟ್ಟುಕೊಂಡು ನನ್ನನ್ನು ಬ್ಲಾ್ಯಕ್ವೆುೕಲ್ ಮಾಡುತ್ತಿದ್ದಾನೆ, ಹಣಕ್ಕಾಗಿ ಪೀಡಿಸುತ್ತಿದ್ದಾನೆ. ಹಣ ನೀಡದ ಕಾರಣ ಆತನೇ ಈ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾನೆ, ಇದು ಹಳೆಯ ವಿಡಿಯೋವೇ ಹೊರತು ನಮ್ಮ ಮದುವೆಯ ನಂತರದ್ದಲ್ಲ’ ಎಂದು ಸಮಜಾಯಿಷಿ ನೀಡಿದಳು. ‘ಹಾಗಾದರೆ ಅವನ ಬಗ್ಗೆ ಪೊಲೀಸರಿಗೆ ದೂರು ನೀಡೋಣ’ ಎಂದು ಮನೋಜ್ ಹೇಳಿದಾಗ, ‘ಈಗಾಗಲೇ ಇದು ಅಪ್ಲೋಡ್ ಆಗಿದೆ, ಇನ್ನು ಅವನು ಪೀಡಿಸುವುದಿಲ್ಲ. ಸುಮ್ಮನಿರುವುದೇ ಲೇಸು’ ಎಂದಳು. ಕೆಲ ದಿನಗಳ ನಂತರ ಮನೋಜ್ನ ವಾಟ್ಸಪ್ಗೆ ಅವನ ಸ್ನೇಹಿತನೊಬ್ಬ ವಿಡಿಯೋವೊಂದನ್ನು ಕಳುಹಿಸಿದ. ಅದು ಮಧುಮಿತಳ ಕಾಮಕೇಳಿಯ ಇನ್ನೊಂದು ವಿಡಿಯೋ ಆಗಿತ್ತು. ಆ ಬಗ್ಗೆ ಪ್ರಶ್ನಿಸಿದಾಗ ಆಕೆ ಸರಿಯಾಗಿ ಉತ್ತರಿಸದೆ ‘ಬೇರೆ ಯಾರದೋ ದೇಹಕ್ಕೆ ನನ್ನ ತಲೆಯನ್ನು ಅಂಟಿಸಲಾಗಿದೆ’ ಎಂದಳು. ‘ಮುಂಬೈನಲ್ಲಿ ಸಿನಿಮಾ ನಟಿಯ ಪತಿಯೊಬ್ಬ ಇಂತಹ ವಿಡಿಯೋಗಳ ತಯಾರಿಕೆ ಮಾಡುತ್ತಾನೆ ಎನ್ನುವ ಆರೋಪವಿದೆ, ನೀನೇನಾದರೂ ಅಂತಹ ಜಾಲಕ್ಕೆ ಸಿಲುಕಿರುವಿಯಾ’ ಎಂದಾಗ ಮಧುಮಿತ ‘ಇಲ್ಲ’ ಎಂದಳು. ಪೊಲೀಸ್ ದೂರು ನೀಡೋಣ ಎಂದಾಗ ಆಕೆ ಬೇಡ ಎಂದಳು.
ಮನೋಜ್ ಮನೋವೈದ್ಯರನ್ನು ಸಂಪರ್ಕಿಸಿದ. ‘ಎಷ್ಟೋ ಜನರಿಗೆ ಚಿಕ್ಕ ವಯಸ್ಸಿನಿಂದಲೇ ಈ ರೀತಿಯ ಅಶ್ಲೀಲ ಚಿತ್ರಗಳು ಹಾಗೂ ವಿಡಿಯೋಗಳನ್ನು ನೋಡುವ ಚಟವಿರುತ್ತದೆ. ಇದೊಂದು ಬಗೆಯ ಮಾನಸಿಕ ರೋಗ. ಮಧುಮಿತಳನ್ನು ಕರೆತಂದರೆ ಆಪ್ತ ಸಮಾಲೋಚನೆ ಮಾಡಿ ಈ ಕಾಯಿಲೆಗೆ ಉಪಾಯವನ್ನು ಕಂಡುಹಿಡಿಯಬಹುದು’ ಎಂದರು. ಮಧುಮಿತ ಮನೋವೈದ್ಯರ ಬಳಿಗೆ ಹೋಗಲು ತಯಾರಾಗಲಿಲ್ಲ.
ಪತ್ನಿಯ ನಡವಳಿಕೆಯಿಂದ ಬೇಸತ್ತ ಮನೋಜ್ ತಾನೇ ಪೊಲೀಸ್ ಠಾಣೆಗೆ ಹೋದ. ‘ನನ್ನ ಪತ್ನಿ ನೀಲಿಚಿತ್ರಗಳಲ್ಲಿ ನಟಿಸುವುದಲ್ಲದೇ ಸದಾಕಾಲವೂ ಅದನ್ನು ನೋಡುತ್ತಾಳೆ, ಕೇಸು ದಾಖಲಿಸಿ’ ಎಂದ. ‘ನಿಮ್ಮ ಪತ್ನಿಯನ್ನು ನೀಲಿ ಚಿತ್ರದಲ್ಲಿ ನಟಿಸಲು ಬಲವಂತ ಮಾಡಲಾಗಿದೆ ಇಲ್ಲವೇ ಅವಳ ಶೋಷಣೆ ಮಾಡಲಾಗಿದೆ ಎಂದು ದೂರಿತ್ತರೆ ಪ್ರಕರಣ ದಾಖಲಿಸುತ್ತೇವೆ. ಯಾರಾದರೂ ಆಕೆಯ ಅಶ್ಲೀಲ ಚಿತ್ರಗಳನ್ನು ತೆಗೆದು ಬ್ಲಾ್ಯಕ್ವೆುೕಲ್ ಮಾಡುತ್ತಿದ್ದರೆ, ಇಲ್ಲವೇ ಅವನ್ನು ರವಾನಿಸುತ್ತಿದ್ದರೆ ಆಗಲೂ ಅಪರಾಧವಾಗುತ್ತದೆ. ಸ್ತ್ರೀಯರನ್ನು ಅಶ್ಲೀಲ ರೀತಿಯಲ್ಲಿ ಪ್ರತಿನಿಧಿಸುವುದನ್ನು ನಿಷೇಧಿಸುವ ಕಾಯ್ದೆಯನ್ವಯವೂ ಕ್ರಮ ಕೈಗೊಳ್ಳಬಹುದು’ ಎಂದರು.
‘ಮಧುಮಿತ ಮೊಬೈಲ್ ಫೋನಿನಲ್ಲಿ ಲೈಂಗಿಕ ಪ್ರಚೋದಕ ವಿಡಿಯೋಗಳನ್ನು ಹೊಂದಿದ್ದಾಳೆ, ಯಾವಾಗಲೂ ಅವುಗಳನ್ನು ನೋಡುತ್ತಿರುತ್ತಾಳೆ, ತನ್ನ ಸ್ನೇಹಿತರಿಗೂ ಅವನ್ನು ಫಾರ್ವರ್ಡ್ ಮಾಡುತ್ತಾಳೆ, ಈ ಬಗ್ಗೆಯಾದರೂ ಆಕೆಯ ವಿರುದ್ಧ ಕೇಸನ್ನು ಮಾಡಿ’ ಎಂದ ಮನೋಜ್. ‘ಇಂತಹ ವಿಡಿಯೋಗಳನ್ನು ವಯಸ್ಕರು ನೋಡುವುದು ಅಪರಾಧವಲ್ಲ. ಆದರೆ ಆಕೆ ಅವುಗಳನ್ನು ಇನ್ನೊಬ್ಬರಿಗೆ ರವಾನಿಸುತ್ತಿದ್ದರೆ ಅಂತಹವರಿಂದ ದೂರು ಕೊಡಿಸಿ. ಯಾವುದಕ್ಕೂ ನಿಮ್ಮ ಪತ್ನಿಯನ್ನು ಇಲ್ಲಿಗೆ ಕರೆತನ್ನಿ’ ಎಂದರು.
ಮಧುಮಿತ ಪೊಲೀಸರಿಗೆ ದೂರನ್ನು ನೀಡುವುದಿಲ್ಲ ಎಂದು ಅರಿತಿದ್ದ ಮನೋಜ್, ವಕೀಲರೊಬ್ಬರನ್ನು ಸಂರ್ಪಸಿದ. ವಿಚ್ಛೇದನ ಪಡೆಯುವುದೇ ಸೂಕ್ತ ಎಂದು ಅವರು ಸೂಚಿಸಿದಾಗ ಆತ ವಿಚ್ಛೇದನದ ನೋಟೀಸ್ ನೀಡಿದ. ಆದರೆ ಅದಕ್ಕೂ ಮಧುಮಿತ ಒಪ್ಪದೇ ತಾನು ಮುಂದೆ ಸರಿಯಾಗಿ ಬಾಳ್ವೆ ಮಾಡುವುದಾಗಿ ಹೇಳಿದ್ದಾಳೆ. ಪ್ರಕರಣ ನ್ಯಾಯಾಲಯದಲ್ಲಿದೆ. ಮನೋಜ್ ಬೇರೆ ಮನೆಯಲ್ಲಿ ವಾಸಿಸುತ್ತಿದ್ದಾನೆ
‘ಇನ್ನೊಬ್ಬರೊಡನಿದ್ದು ದುಃಖಿಸುವುದಕ್ಕಿಂತ ಒಬ್ಬಂಟಿಯಾಗಿ ದುಃಖದಿಂದಿರುವುದೇ ಲೇಸು’ ಎಂದ ಸಿನಿಮಾ ತಾರೆ ಮರ್ಲಿನ್ ಮನ್ರೋಳ ಮಾತುಗಳು ಇಲ್ಲಿ ಅರ್ಥಗರ್ಭಿತವಲ್ಲವೇ?
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)