ಲಾಕರ್​ನಲ್ಲೇ ನಕಲಿ ಚಿನ್ನ: ಆ ಕ್ಷಣ ಅಂಕಣ..

Aa kshana
Published on
ಸಹಕಾರಿ ಬ್ಯಾಂಕಿನ ಗ್ರಾಮೀಣ ಶಾಖೆ ಮ್ಯಾನೇಜರ್ ಆಗಿ ಲಕ್ಷ್ಮಣರಾವ್ ಒಂದು ತಿಂಗಳ ಹಿಂದಷ್ಟೇ ಅಧಿಕಾರ ವಹಿಸಿಕೊಂಡಿದ್ದರು. ಒಂದು ಮುಂಜಾನೆ ಇಬ್ಬರು ವ್ಯಕ್ತಿಗಳು ಅವರನ್ನು ಭೇಟಿ ಮಾಡಲು ಬಂದರು. ಅವರಲ್ಲಿ ಒಬ್ಬ ತಾನು ಪಕ್ಕದ ಗ್ರಾಮದ ನಿವಾಸಿಯಾಗಿರುವ ವರ್ತಕನೆಂದು ಪರಿಚಯಿಸಿಕೊಂಡು, ‘ಎರಡು ವರ್ಷಗಳ ಹಿಂದೆ ಚಿನ್ನದ ಆಭರಣಗಳನ್ನು ನಿಮ್ಮ ಬ್ಯಾಂಕಿನಲ್ಲಿ ಅಡವಿಟ್ಟು ಸಾಲ ಪಡೆದಿದ್ದೆ. ಯಾವುದೋ ಕಾರಣದಿಂದ ಸಾಲ ತೀರಿಸಲಾಗಿರಲಿಲ್ಲ. ಸಾಲ ಹಿಂತಿರುಗಿಸದೇ ಹೋದರೆ ಆಭರಣ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ನಿಮ್ಮಿಂದ ನೋಟಿಸ್ ಬಂದಿದೆ. ಹೀಗಾಗಿ ಸಾಲದ ಬಾಕಿ ಮತ್ತು ಬಡ್ಡಿ ತೀರಿಸಿ ಒಡವೆ ಬಿಡಿಸಿಕೊಳ್ಳಲು ಬಂದಿದ್ದೇನೆ’ ಎಂದು ಸಂಬಂಧಪಟ್ಟ ಕಾಗದಪತ್ರ ತೋರಿಸಿದ.

ಮ್ಯಾನೇಜರ್ ಲಕ್ಷ್ಮಣರಾವ್ ಆ ವ್ಯಕ್ತಿ ಅಡವಿಟ್ಟಿದ್ದ ಚಿನ್ನಾಭರಣಗಳನ್ನು ಬ್ಯಾಂಕಿನ ಸಂದೂಕದಿಂದ ತೆಗೆದು ಅವನ ಮುಂದೆ ತಂದಿಟ್ಟರು. ‘ಇವೇ ನಿಮ್ಮ ಆಭರಣಗಳಾ ಎಂದು ಪರೀಕ್ಷಿಸಿ ನೋಡಿ’ ಎಂದರು. ಆ ವ್ಯಕ್ತಿ, ‘ತಾವು ತಪ್ಪು ತಿಳಿಯದಿದ್ದರೆ ಈ ಆಭರಣವನ್ನು ನನ್ನ ಜೊತೆ ಬಂದಿರುವ ಅಕ್ಕಸಾಲಿಗನ ಮೂಲಕ ಪರೀಕ್ಷಿಸುವೆ’ ಎಂದ. ಮ್ಯಾನೇಜರ್ ಒಪ್ಪಿದರು. ಆ ಅಕ್ಕಸಾಲಿಗ ಚೀಲದಿಂದ ತೂಕ ಮಾಡುವ ಯಂತ್ರ ಮತ್ತು ಒರೆಗಲ್ಲನ್ನು ತೆಗೆದು ಆಭರಣಗಳನ್ನು ಒರೆಗಲ್ಲಿಗೆ ಹಚ್ಚಿ ನೋಡಿದ. ಕೂಡಲೇ ಇದು ಅಪ್ಪಟ ಚಿನ್ನವಲ್ಲ ಎಂದ. ವರ್ತಕ ಮತ್ತು ಮ್ಯಾನೇಜರ್ ಇಬ್ಬರೂ ಗಾಬರಿಯಾದರು. ‘ಯಾವುದಕ್ಕೂ ಇದನ್ನು ತೂಗಿ ನೋಡುತ್ತೇನೆ’ ಎಂದ ಅಕ್ಕಸಾಲಿಗ ಆಭರಣಗಳನ್ನು ತೂಗಿದ. ಆ ಆಭರಣಗಳು 130 ಗ್ರಾಂ ತೂಕವಿದ್ದವು. ಆ ವರ್ತಕ, ‘ನಿಮ್ಮಲ್ಲಿ ಅಡವಿಟ್ಟ ಆಭರಣದ ತೂಕ 125 ಗ್ರಾಂ ಎಂದು ದಾಖಲು ಮಾಡಿಕೊಂಡು ಸಾಲ ನೀಡಿದಿರಿ, ಈಗ 130 ಗ್ರಾಂ ಬರುತ್ತಿದೆ, ಆಭರಣಗಳ ತೂಕ ಹೇಗೆ ಹೆಚ್ಚಾಗಲು ಸಾಧ್ಯ? ಅಲ್ಲದೆ ಅಕ್ಕಸಾಲಿಗ ಈ ಒಡವೆಗಳನ್ನು ಅಪ್ಪಟ ಚಿನ್ನವಲ್ಲ ಎಂದು ಹೇಳುತ್ತಿದ್ದಾನೆ. ಮೋಸವಾದಂತೆ ಕಾಣುತ್ತಿದೆ. ಅಡವಿಟ್ಟ ಅಸಲಿ ಚಿನ್ನದ ಆಭರಣಗಳನ್ನು ವಾಪಸ್ ಕೊಡಿ, ನಂತರವೇ ಬಾಕಿ ಸಾಲ ತೀರಿಸುವೆ’ ಎಂದ.

ಮ್ಯಾನೇಜರ್ ಸಿಬ್ಬಂದಿಯನ್ನು ಕರೆದು ವಿಚಾರಿಸಿದರು, ಎಲ್ಲರೂ ಈ ಬಗ್ಗೆ ತಮಗೇನೂ ತಿಳಿಯದು ಎಂದರು. ಸಾಲಗಾರನನ್ನು ಮರುದಿನ ಬರಲು ಹೇಳಿ ಕಳುಹಿಸಿದ ಅವರು ಸಂಬಂಧಿಸಿದ ದಾಖಲಾತಿಗಳನ್ನು ಪರಿಶೀಲಿಸತೊಡಗಿದರು. ಯಾವುದೇ ಸಂಶಯ ಕಾಣಲಿಲ್ಲ. ಬ್ಯಾಂಕಿನಲ್ಲಿಯೇ ಆಭರಣಗಳ ಬದಲಾವಣೆ ನಡೆದಿರಬೇಕೆಂದು ಭಾವಿಸಿದರು. ಮರುದಿನ ಬಂದ ವರ್ತಕ ತನ್ನ ಹೆಂಡತಿ ಕೊರಳಲ್ಲಿ ಮತ್ತು ಕೈಯಲ್ಲಿ ಧರಿಸಿದ್ದ ಆಭರಣದ ಫೋಟೋಗಳನ್ನು ತೋರಿಸಿ, ‘ಸ್ವಾಮಿ, ಈ ಫೋಟೋದಲ್ಲಿರುವ ಆಭರಣಗಳನ್ನು ನೀವು ನನಗೆ ಹಿಂತಿರುಗಿಸುತ್ತಿರುವ ಆಭರಣಗಳಿಗೆ ಹೋಲಿಕೆ ಮಾಡಿ ನೋಡಿ, ಅವುಗಳ ಮಧ್ಯೆ ಇರುವ ವ್ಯತ್ಯಾಸ ಗೊತ್ತಾಗುತ್ತದೆ’ ಎಂದ. ಮೇಲ್ನೋಟಕ್ಕೆ ಬ್ಯಾಂಕಿನಲ್ಲಿ ಆ ಸಮಯವಿದ್ದ ಆಭರಣ ಮತ್ತು ಆ ಸಾಲಗಾರ ಅಡವಿಟ್ಟ ಆಭರಣಗಳು ಬೇರೆ ಬೇರೆ ಎಂದು ಗೋಚರಿಸುತ್ತಿತ್ತು.

ಮ್ಯಾನೇಜರ್ ಬ್ಯಾಂಕಿನ ಹಿರಿಯ ಅಧಿಕಾರಿಗಳನ್ನು ಸಂರ್ಪಸಿದರು. ಸಾಲಗಾರ ಅಡವಿಟ್ಟ ಚಿನ್ನದ ಶುದ್ಧತೆಯನ್ನು ದೃಢೀಕರಿಸಿದ ಬ್ಯಾಂಕಿನ ಮೌಲ್ಯಮಾಪಕನನ್ನು ಕರೆಸಿ ಕೇಳಿ ಎಂದರವರು. ಬ್ಯಾಂಕಿನ ಮೌಲ್ಯಮಾಪಕ, ‘ಇದು ಅಪ್ಪಟ ಚಿನ್ನವೇ ಹೌದು, ಸಾಲಗಾರನ ಜತೆಗೆ ಬಂದ ಅಕ್ಕಸಾಲಿಗ ಸುಳ್ಳು ಹೇಳುತ್ತಿದ್ದಾನೆ’ ಎಂದ. ಆಗ ಲಕ್ಷ್ಮಣರಾವ್ ಸಮೀಪದ ಪಟ್ಟಣದಿಂದ ಇನ್ನೊಬ್ಬ ಅಕ್ಕಸಾಲಿಗನನ್ನು ಕರೆಸಿದರು. ಆತ ಬ್ಯಾಂಕಿನಲ್ಲಿದ್ದ ಆಭರಣಗಳು ಚಿನ್ನದ ಲೇಪನ ಮಾಡಿರುವಂತಹುದಾಗಿದ್ದು ಅವುಗಳ ತೂಕ 132 ಗ್ರಾಂ ಎಂದು ದೃಢೀಕರಿಸಿ ಕಾಲಕ್ರಮೇಣ ಚಿನ್ನ ತನ್ನ ತೂಕ ಕಳೆದುಕೊಳ್ಳಬಹುದೇ ಹೊರತು ಜಾಸ್ತಿಯಾಗಲು ಸಾಧ್ಯವಿಲ್ಲವೆಂದ. ಆಗ ಹಿರಿಯ ಅಧಿಕಾರಿಗಳು ಬ್ಯಾಂಕಿನ ಆ ಶಾಖೆಯಲ್ಲಿ ಅಡವಿಡಲಾಗಿದ್ದ ಎಲ್ಲ ಚಿನ್ನವನ್ನೂ ಪರೀಕ್ಷೆಗೆ ಒಳಪಡಿಸಲು ತೀರ್ವನಿಸಿದರು. ಆ ಶಾಖೆಯಲ್ಲಿ ಕಳೆದ 10 ವರ್ಷಗಳಿಂದ 450 ಜನರು ಆಭರಣಗಳನ್ನು ಅಡವಿಟ್ಟು ಸಾಲ ಪಡೆದಿದ್ದರು. ಅವರಲ್ಲಿ 330 ಜನರು ಸಾಲ ತೀರಿಸಿರಲಿಲ್ಲ. ‘ಕೂಡಲೇ ಬಾಕಿ ಸಾಲವನ್ನು ಬಡ್ಡಿಸಮೇತ ತೀರಿಸದಿದ್ದರೆ ಅಡವಿಟ್ಟ ಚಿನ್ನವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು’ ಎಂದು ಅವರೆಲ್ಲರಿಗೂ ನೋಟಿಸ್ ಹೋಗಿತ್ತು. ಆ ಸಾಲಗಾರರು ಬ್ಯಾಂಕಿನಲ್ಲಿ ಅಡವಿಟ್ಟ ಚಿನ್ನವನ್ನು ವಾಲ್ಟ್​ನಲ್ಲಿಡಲಾಗಿತ್ತು. ಅವೆಲ್ಲವನ್ನೂ ಹೊರತೆಗೆದು ಪರಿಶೀಲಿಸಿದಾಗ, ಎಲ್ಲವೂ ಚಿನ್ನದ ಲೇಪನದ್ದಾಗಿದ್ದವು ಎಂದು ಸಾಬೀತಾದವು. ಬ್ಯಾಂಕಿಗೆ ಸಂಬಂಧಿಸಿದವರೇ ಅಡವಿಟ್ಟ ಆಭರಣಗಳನ್ನು ಹೊರತೆಗೆದು ನಕಲಿ ಆಭರಣಗಳಿಂದ ಅವನ್ನು ಬದಲಾಯಿಸಿದ್ದಾರೆ ಎನ್ನುವುದು ಸ್ಪಷ್ಟವಾದ ಕಾರಣ ಲಕ್ಷ್ಮಣರಾವ್​ರನ್ನು ಅಮಾನತ್ತು ಮಾಡಲಾಯಿತು.

‘ನಾನು ಇಲ್ಲಿಗೆ ಬಂದು ಕೇವಲ ಒಂದು ತಿಂಗಳಾಗಿದೆ, ನಾನು ಬಂದ ನಂತರ ಯಾರೂ ಆಭರಣ ಅಡವಿಟ್ಟು ಸಾಲ ಪಡೆದಿಲ್ಲ್ಲ ಅಲ್ಲದೆ 330 ಜನ ಸಾಲಗಾರರಲ್ಲಿ ಯಾರೂ ಚಿನ್ನವನ್ನು ಹಿಂದೆ ಪಡೆದಿಲ್ಲ. ನಾನು ಈ ಶಾಖೆಯ ಅಧಿಕಾರ ವಹಿಸಿಕೊಂಡಾಗ ಹಿಂದಿದ್ದ ಅಧಿಕಾರಿ ಎಲ್ಲ ಆಭರಣಗಳೂ ಸುಸ್ಥಿತಿಯಲ್ಲಿವೆ ಎಂದು ತಿಳಿಸಿದರು. ಅವರ ಮೇಲಿನ ನಂಬಿಕೆಯಿಂದ ಕಾಗದಪತ್ರಗಳಿಗೆ ಸಹಿಹಾಕಿ ವಾಲ್ಟ್ ಕೀಲಿಕೈಯನ್ನು ವಶಕ್ಕೆ ಪಡೆದೆ. ಬ್ಯಾಂಕಿನಲ್ಲಿದ್ದ ಪ್ರತಿಯೊಂದು ಆಭರಣವನ್ನೂ ನಕಲಿಯೋ ಅಥವಾ ಅಸಲಿಯೋ ಎಂದು ಪರೀಕ್ಷಿಸಲಿಲ್ಲ ಮತ್ತು ತೂಕವನ್ನು ನೋಡಲಿಲ್ಲ. ಏಕೆಂದರೆ ಇಷ್ಟೆಲ್ಲ ಆಭರಣಗಳನ್ನೂ ಪರಿಶೀಲಿಸಬೇಕಾದರೆ ಸುಮಾರು ಒಂದು ದಿನವೇ ಹಿಡಿಯುತ್ತಿತ್ತು’ ಎಂದರು ಲಕ್ಷ್ಮಣರಾವ್. ಆ ಶಾಖೆಯೊಳಗೆ ಸಿಸಿಟಿವಿ ಕ್ಯಾಮರಾ ಇರದಿದ್ದ ಕಾರಣ ಈ ಬದಲಾವಣೆ ಹೇಗಾಯಿತೆಂದು ತಿಳಿಯುವುದು ಕಷ್ಟವಾಗಿತ್ತು. ಹೀಗಾಗಿ ಹಿರಿಯ ಅಧಿಕಾರಿಗಳು ಪೊಲೀಸರಿಗೆ ದೂರು ಕೊಟ್ಟರು. ಸ್ಥಳೀಯ ಪೊಲೀಸರು ಬ್ಯಾಂಕಿಗೆ ಬಂದು ಪರಿಶೀಲಿಸಿ ಒಟ್ಟಾರೆ ನಾಲ್ಕು ಕಿಲೋ ತೂಕದ ಮೂರು ನೂರಕ್ಕೂ ಹೆಚ್ಚು ಆಭರಣಗಳನ್ನು ನಕಲಿ ಆಭರಣಗಳಿಂದ ಬದಲಾವಣೆ ಮಾಡಿದ್ದನ್ನು ಪತ್ತೆ ಮಾಡಿದರು. ಲಕ್ಷ್ಮಣರಾವ್​ಗೆ ಅಧಿಕಾರ ಹಸ್ತಾಂತರ ಮಾಡಿದ್ದ ಮ್ಯಾನೇಜರ್ ಹೆಸರು ಬಾಲಚಂದ್ರ. ಆತ ಆ ಶಾಖೆಯಿಂದ ವರ್ಗವಾದ ನಂತರ ಬೇರೊಂದು ನಗರದ ಶಾಖೆಗೆ ವರ್ಗವಾಗಿದ್ದ. ಅವನನ್ನು ಕರೆದು ವಿಚಾರಿಸಿದಾಗ, ಆಭರಣಗಳ ಬದಲಾವಣೆ ಬಗ್ಗೆ ತನಗೇನೂ ಗೊತ್ತಿಲ್ಲ ಎಂದ.

ಪೊಲೀಸರಿಗೆ ಬಾಲಚಂದ್ರ ಏನೋ ವಿಷಯ ಮುಚ್ಚಿಡುತ್ತಿದ್ದಾನೆ ಎಂಬ ಸಂಶಯ ಬಂತು. ಅವರು ಗೂಢಚಾರರಿಂದ ಅವನ ಚಲನವಲನಗಳ ಮೇಲೆ ನಿಗಾವಹಿಸಿದರು. ಆತ ಮಹಾನಗರವೊಂದರ ಬಡಾವಣೆಯಲ್ಲಿ ಸ್ವಂತ ಮನೆ ಕಟ್ಟುತ್ತಿದ್ದಾನೆ ಎಂಬ ಮಾಹಿತಿ ಬಂತು. ಬಾಲಚಂದ್ರನನ್ನು ಮತ್ತು ಆಗ ಬ್ಯಾಂಕಿನ ಮೌಲ್ಯಮಾಪಕನಾಗಿದ್ದ ಅಕ್ಕಸಾಲಿಗನನ್ನೂ ಪೊಲೀಸ್ ಠಾಣೆಗೆ ಕರೆಸಲಾಯಿತು. ಬ್ಯಾಂಕ್ ಲಾಕರ್​ನಲ್ಲಿದ್ದ ಅಸಲಿ ಒಡವೆಗಳು ನಕಲಿ ಹೇಗಾದವು ಎಂದು ಪ್ರಶ್ನಿಸಿದಾಗ ಆತ ಸತ್ಯ ಬಾಯಿಬಿಟ್ಟ.

‘ಮ್ಯಾನೇಜರ್ ಬಾಲಚಂದ್ರ ಒಂದು ದಿನ ನನ್ನನ್ನು ಬ್ಯಾಂಕಿಗೆ ಕರೆಸಿ ಒಂದು ಚೈನನ್ನು ತೋರಿಸಿ ಇದೇ ರೀತಿಯ ಚೈನಿನ ಮಾದರಿ ಹಾಗೂ ತೂಕದಂತೆ ಬಂಗಾರಲೇಪಿತ ಚೈನನ್ನು ಮಾಡಿ ತರುವಂತೆ ಹೇಳಿದರು. ನಾನು ಆ ರೀತಿಯೇ ಮಾಡಿಕೊಂಡು ಬಂದಾಗ ಅವರು ನನಗೆ ನೂರಾರು ಆಭರಣಗಳನ್ನು ಎರಡು ಕಂತುಗಳಲ್ಲಿ ಕೊಟ್ಟು ಅಂತಹ ನಕಲಿ ಆಭರಣಗಳನ್ನು ಮಾಡಿಸಿಕೊಂಡು ಬರಲು ಹೇಳಿದರು. ನಾನು ಆಂಧ್ರಪ್ರದೇಶದ ಮಚಲೀಪಟ್ಟಣಕ್ಕೆ ಹೋಗಿ ಅಂತಹುದನ್ನು ಮಾಡಿಸಿದೆ. ಈ ಕೆಲಸಕ್ಕಾಗಿ ಅವರು ನನಗೆ ಒಂದು ಲಕ್ಷ ರೂಪಾಯಿ ಕೊಟ್ಟರು. ಆನಂತರ ಏನಾಯಿತು ನನಗೆ ತಿಳಿದಿಲ್ಲ’ ಎಂದ. ಆನಂತರ ಬಾಲಚಂದ್ರನನ್ನು ಕೂಲಂಕಷವಾಗಿ ವಿಚಾರಣೆ ಮಾಡಿದಾಗ, ಆತ ತಾನು ಅಸಲಿ ಆಭರಣಗಳನ್ನು ದುರುಪಯೋಗ ಮಾಡಿಕೊಂಡಿರುವುದಾಗಿ ಒಪ್ಪಿ ಅವನ್ನು ಪಕ್ಕದ ಜಿಲ್ಲೆಯ ಒಬ್ಬ ವ್ಯಾಪಾರಿಗೆ ಮಾರಿದ್ದಾಗಿ ತಿಳಿಸಿದ. ಆ ವ್ಯಾಪಾರಿಯನ್ನು ವಿಚಾರಿಸಿದಾಗ ಆತ ಬಾಲಚಂದ್ರ ತನಗೆ ಮೂರೂವರೆ ಕಿಲೋ ತೂಕದ ಹಲವಾರು ಆಭರಣಗಳನ್ನು ಮಾರಿ 19 ಲಕ್ಷ ರೂ. ನಗದನ್ನು ಪಡೆದಿದ್ದಾಗಿ ತಿಳಿಸಿದ. ಅವನು ಆಭರಣಗಳನ್ನು ಕರಗಿಸಿದ್ದ ಕಾರಣ ಅದೇ ತೂಕದ ಚಿನ್ನವನ್ನು ಅವನಿಂದ ಜಪ್ತಿ ಮಾಡಲಾಯಿತು.

‘ನಾನು ಸಾಲ ಪಡೆದು ಹೊಸಮನೆ ಕಟ್ಟುತ್ತಿದ್ದೆ. ಮನೆ ಮುಗಿಯುವ ಹಂತಕ್ಕೆ ಬಂದಾಗ ತೀವ್ರವಾಗಿ ಹಣದ ಕೊರತೆಯಾಯಿತು. ನನ್ನ ಬ್ಯಾಂಕ್ ಶಾಖೆಯಲ್ಲಿ ನೂರಾರು ಮಂದಿ ಚಿನ್ನದ ಆಭರಣಗಳನ್ನು ಅಡವಿಟ್ಟು ಸಾಲ ಪಡೆದು ಅದನ್ನು ತೀರಿಸಿರಲಿಲ್ಲ. ಹೇಗಾದರೂ ಅವರು ತಮ್ಮ ಒಡವೆಗಳನ್ನು ವಾಪಸ್ ಪಡೆಯಲು ಸದ್ಯ ಬರುವುದಿಲ್ಲವಾದ್ದರಿಂದ ಅವನ್ನು ಬದಲಿಸಿ ಹಣ ಗಳಿಸುವ ಪ್ಲಾನ್ ಹಾಕಿದೆ’ ಎಂದ.

ಬಾಲಚಂದ್ರ ಮತ್ತು ಬ್ಯಾಂಕಿನ ಮೌಲ್ಯಮಾಪಕ ಇವರಿಬ್ಬರನ್ನೂ ಬಂಧಿಸಿ ಅವರ ವಿರುದ್ಧ ಮೋಸ, ನಂಬಿಕೆದ್ರೋಹ ಆರೋಪದ ಮೇರೆಗೆ ಆರೋಪಪಟ್ಟಿ ಸಲ್ಲಿಸಲಾಗಿದೆ. ಇಬ್ಬರೂ ನ್ಯಾಯಾಂಗ ಬಂಧನದಲ್ಲಿದ್ದಾರೆ. ಬಾಲಚಂದ್ರನನ್ನು ತನ್ನ ಸೇವೆಯಿಂದ ಬ್ಯಾಂಕ್ ವಜಾ ಮಾಡಿದೆ. ‘ಅಕ್ಕಿಯುಂ ತೆಂಗು, ಜಾನಕ್ಕಿಯುಂ ಲಂಕೆಯು, ಮೆಕ್ಕೆಯಿಂ ಕಣಿಕ ಕೆಡುವಂತೆ ದುರ್ಬುದ್ಧಿ ಹೊಕ್ಕವಂ ಕೆಡುವ ಸರ್ವಜ್ಞ’ ಎಂಬ ವಚನದಂತೆ ತನ್ನ ಕೆಟ್ಟ ಯೋಚನೆ ಫಲವಾಗಿಯೇ ಬಾಲಚಂದ್ರ ಹಾಳಾದ.

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net