

| ಕಿರಣ್ ಮಾದರಹಳ್ಳಿ ಚಾಮರಾಜನಗರ
ಅನತಿ ದೂರದಲ್ಲೇ ಆಕರ್ಷಿಸುತ್ತೆ ಈ ಶಾಲೆಯ ಬಣ್ಣ. ಒಳಗೆ ಹೋಗುತ್ತಿದ್ದಂತೆ ಗಿಡಮೂಲಿಕೆ ಸಂಪತ್ತು, ಕೈತೋಟ, ಮಿತ್ರಕಸ-ಶತ್ರುಕಸ ವಿಂಗಡಣಾ ತೊಟ್ಟಿ, ಹೂವಿನ ಕುಂಡಗಳ ಮೇಲೆ ರಾರಾಜಿಸುತ್ತಿರುವ ವನ್ಯಪ್ರಾಣಿಗಳ ಚಿತ್ರ, ಸಭಾ ಮಂಟಪ, ಕ್ರೀಡಾ ಮೈದಾನ, ಮಹಾತ್ಮರು-ಕವಿಗಳ ಫೋಟೋ ಸಹಿತ ವಾಣಿ, ಸುಸಜ್ಜಿತ ಕಲಿಕಾ ಸಾಮಗ್ರಿ, ಶುದ್ಧನೀರು... ಕಣ್ಣಿಗೆ ಗೋಚರಿಸುತ್ತದೆ. ಆಶ್ಚರ್ಯ ಭರಿತ ಖುಷಿಯನ್ನು ಒಮ್ಮೆಲೆ ಉಕ್ಕಿಸುತ್ತದೆ. ಈ ದೃಶ್ಯವನ್ನು ಕಣ್ತುಂಬಿಕೊಂಡವರಿಗೆ ಇದು ಖಾಸಗಿ ಶಾಲೆಯೋ ಸರ್ಕಾರಿ ಶಾಲೆಯೋ ಎಂಬ ಪ್ರಶ್ನೆ ಮನಸ್ಸಿನಲ್ಲಿ ಮೂಡುತ್ತದೆ. ಆದರೆ ಇದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.
ತನ್ನ ಫೇಸ್ಬುಕ್ ಖಾತೆಯಲ್ಲಿ ಶಾಲೆಯ ಅಗತ್ಯಗಳನ್ನು ಬರೆದು ದಾನಿಗಳನ್ನು ಕೋರುತ್ತಿದ್ದಾರೆ. ಈ ಮನವಿಗೆ ಬೆಂಗಳೂರು, ಮೈಸೂರು, ಉಡುಪಿ, ಚಿಕ್ಕಮಗಳೂರು, ಕೊಡಗು, ಕೋಲಾರ, ತುಮಕೂರು, ಧಾರವಾಡ ಮುಂತಾದ ಜಿಲ್ಲೆಗಳ ಫೇಸ್ಬುಕ್ ಬಳಕೆದಾರರು ಸ್ಪಂದಿಸುತ್ತಿದ್ದಾರೆ. ಸರ್ಕಾರಿ ಶಾಲೆಯ ಉನ್ನತಿಗೆ ತಮ್ಮ ಕೈಲಾದ ಸಹಾಯ ಮಾಡಿ ಸಾರ್ಥಕತೆ ಮೆರೆಯುತ್ತಿದ್ದಾರೆ. ಸದ್ಯ ಕೊರತೆಗಳನ್ನು ಮೀರಿ ನಿಂತಿರುವ ಸಿದ್ದಯ್ಯನಪುರ ಸರ್ಕಾರಿ ಶಾಲೆಯು ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವಂತಿದೆ.
ಫೇಸ್ಬುಕ್ ಗಮನಿಸಿ ಸಿದ್ದಯ್ಯನಪುರ ಶಾಲೆಗೆ ಬಂದು ಜನ್ಮದಿನ ಆಚರಿಸಿಕೊಂಡು ಕೊಡುಗೆ ನೀಡುವ ದಾನಿಗಳ ಹೆಸರಿನಲ್ಲಿ ಶಾಲೆ ಆವರಣದಲ್ಲಿ ಗಿಡಗಳನ್ನು ನೆಡಲಾಗಿದೆ. ಪರಂಗಿ, ನುಗ್ಗೆ, ನೆಲ್ಲಿ, ಸೀಬೆ, ತೆಂಗು, ಅಡಕೆ, ಮಾವು, ನೇರಳೆ, ಬಾಳೆ, ಕರಿಬೇವು ಶಾಲೆ ಆವರಣದಲ್ಲಿ ನಳನಳಿಸುತ್ತಿವೆ. ಇವುಗಳ ಪೋಷಣೆಗಾಗಿ ಹನಿ ನೀರಾವರಿಯನ್ನೂ ಅಳವಡಿಸಲಾಗಿದೆ. ಶಾಲೆಯಲ್ಲಿ ಉತ್ಪತ್ತಿಯಾಗುವ ಕಸ ವಿಂಗಡಿಸಲು ಶತ್ರು ಕಸ, ಮಿತ್ರ ಕಸ ಎಂಬ ತ್ಯಾಜ್ಯದ ಗುಂಡಿಗಳನ್ನು ಹಳೇ ವಿದ್ಯಾರ್ಥಿಗಳ ನೆರವಿನಿಂದ ನಿರ್ವಿುಸಲಾಗಿದೆ. ಕೊಳೆಯುವ ಕಸವನ್ನು ಮಿತ್ರಕಸದ ಗುಂಡಿಗೆ ಹಾಕಿ ಗೊಬ್ಬರವಾಗಿ ಪರಿವರ್ತಿಸಿ ಗಿಡಗಳಿಗೆ ಬಳಸಲಾಗುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ಶತ್ರುಕಸದ ಗುಂಡಿಗೆ ಹಾಕಿ ವಿಲೇವಾರಿ ಮಾಡಲಾಗುತ್ತಿದೆ.
‘ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವಕ್ಕೆ ದುಂದುವೆಚ್ಚ ಮಾಡುವ ಬದಲು ಸರ್ಕಾರಿ ಶಾಲೆಗೆ ಕೊಡುಗೆ ನೀಡಿ, ಮಕ್ಕಳ ಓದಿಗೆ ಸಹಕರಿಸಿ’ ಎಂದು ಶಿಕ್ಷಕ ನಾರಾಯಣ ತಮ್ಮ ಫೇಸ್ಬುಕ್ ಖಾತೆಯಲ್ಲಿ ಮನವಿ ಮಾಡುತ್ತ ದಾನಿಗಳನ್ನು ಸೆಳೆಯುತ್ತಿದ್ದಾರೆ. ಇದನ್ನು ಕಂಡ ಸಮಾಜಸೇವಕರು, ಸಂಘಟನೆಗಳ ಮುಖಂಡರು, ಸರ್ಕಾರಿ ಶಾಲೆಗಳ ಉಳಿವಿಗಾಗಿ ಮನಮಿಡಿಯುತ್ತಿರುವವರು, ಹಳೇ ವಿದ್ಯಾರ್ಥಿ ಗಳು ಶಾಲೆಗೆ ಬಂದು ಮಕ್ಕಳೊಂದಿಗೆ ಜನ್ಮದಿನ ಆಚರಿಸಿಕೊಂಡು ಆ ಸವಿನೆನಪಿಗಾಗಿ ಉಡುಗೊರೆ ಕೊಟ್ಟು ಹೋಗುತ್ತಿದ್ದಾರೆ.
ಶಿಕ್ಷಕ ನಾರಾಯಣ ತನ್ನ ಫೇಸ್ಬುಕ್ ಖಾತೆ ಮೂಲಕ ಸಂಪರ್ಕಕ್ಕೆ ಸಿಕ್ಕ ದಾನಿಗಳಿಂದ ತನ್ನ ಶಾಲೆಗೆ ಮಾತ್ರವಲ್ಲದೆ ಇತರ ಶಾಲೆ ಹಾಗೂ ವಿದ್ಯಾರ್ಥಿಗಳಿಗೂ ನೆರವು ಒದಗಿಸಿಕೊಟ್ಟಿದ್ದಾರೆ. ಲಾಕ್ಡೌನ್ ಸಮಯದಲ್ಲಿ ಆನ್ಲೈನ್ ತರಗತಿ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ದಾನಿಗಳಿಂದ 10 ಮೊಬೈಲ್, 1 ಲ್ಯಾಪ್ಟಾಪ್, ಸಂಘ-ಸಂಸ್ಥೆಗಳಿಂದ 1.50 ಲಕ್ಷ ರೂ. ಶಾಲಾ ಶುಲ್ಕವನ್ನು ಬಡ ವಿದ್ಯಾರ್ಥಿಗಳಿಗೆ ಕೊಡಿಸಿದ್ದಾರೆ.