

ಈ ದೃಶ್ಯವನ್ನು ಆ ಮರದ ಮೇಲೆ ಕುಳಿತ ಒಂದು ಮಂಗಗಳ ಜೋಡಿ ನೋಡುತ್ತಿತ್ತು. ಅವು ಇಂಥ ಅದ್ಭುತವೊಂದು ಇದೆಯೆಂದು ನಮಗೆ ಇಷ್ಟು ದಿನ ಗೊತ್ತೇ ಇರಲಿಲ್ಲ ಎಂದು ತಡ ಮಾಡದೇ ಸರೋವರದಲ್ಲಿ ಜಿಗಿದು ಬಿಟ್ಟವು. ನೋಡ ನೋಡುತ್ತಲೇ ಅವರು ಸುಂದರ ಸ್ತ್ರೀ ಪುರುಷರಾಗಿ ಹೊರಬಂದು ಸಂತೋಷದಿಂದ ಕುಣಿದಾಡಲಾರಂಭಿಸಿದರು. ಆಗ ಪುರುಷ ರೂಪದಲ್ಲಿದ್ದ ಮಂಗಕ್ಕೆ ಒಂದು ಯೋಚನೆ ಬಂದು ಇನ್ನೊಂದಕ್ಕೆ ಹೇಳಿತು- ‘ನಾವು ಇಷ್ಟಕ್ಕೇ ಸಮಾಧಾನ ಹೊಂದುವದು ಬೇಡ. ಇನ್ನೊಂದು ಬಾರಿ ಮರವೇರಿ ಜಿಗಿಯೋಣ. ಆಗ ನಾವು ಈಗಿರುವ ಮನುಷ್ಯರಿಂದ ದೇವತಾ ರೂಪಕ್ಕೆ ಬರುತ್ತೇವೆ.’ ಆಗ ಹೆಣ್ಣು ರೂಪದಲ್ಲಿದ್ದ ಮಂಗ, ‘ಬೇಡ ಬೇಡ ಈಗ ಒಳ್ಳೆಯದೇ ಸಿಕ್ಕಿದೆ. ಅತಿ ಆಸೆ ಬೇಡ’ ಎಂದು ಗೋಗರೆಯಿತು. ಗಂಡು ಮಂಗವು ಅದನ್ನು ಕಿವಿಗೆ ಹಾಕಿಕೊಳ್ಳದೆ ‘ನಾನಂತೂ ಹೊರಟೆ ನೀನು ಬರುವದಾದರೆ ಬಾ’ಎಂದಿತು. ಆದರೇನಾಶ್ಚರ್ಯ! ಸರೋವರದಲ್ಲಿ ಜಿಗಿದ ತಕ್ಷಣ ಅದು ಮತ್ತೆ ಮಂಗವಾಗಿ ಬಿಟ್ಟಿತ್ತು.
ಇತ್ತ ಆ ಸುಂದರವಾದ ಸ್ತ್ರೀ ಅಲ್ಲಿಂದ ನಡೆದುಕೊಂಡು ಊರ ಕಡೆಗೆ ಹೊರಟಿರುವಾಗ ರಾಜಕುಮಾರನ ದೃಷ್ಟಿಗೆ ಬಿದ್ದು ಅವನಿಂದ ಆಕರ್ಷಿತಳಾಗಿ ವಿವಾಹ ನಡೆದು ಮಹಾರಾಣಿಯಾಗಿಬಿಟ್ಟಳು. ಒಂದು ಸಲ ಅರಮನೆಯ ಉದ್ಯಾನದಲ್ಲಿ ಆ ಗಂಡು ಮಂಗವು ಬಂದಾಗ ರಾಜಭಟರು ಅದನ್ನು ಓಡಿಸಿಬಿಟ್ಟರು. ಅದು ದೂರದಿಂದಲೇ ಮಹಾರಾಣಿಯನ್ನು ಕಂಡು ಅಸಹಾಯಕತೆಯಿಂದ ಪರಿತಪಿಸಿ ಪಶ್ಚಾತ್ತಾಪ ಪಟ್ಟಿತು. ಮನುಷ್ಯನಿಗೆ ಮಹತ್ವಾಕಾಂಕ್ಷೆ ಇರಬೇಕು ನಿಜ. ಆದರೆ ಸಿಕ್ಕದ್ದನ್ನೆಲ್ಲಾ ಬಾಚಿಕೊಳ್ಳುವ ದುರಾಶೆ ಇರಬಾರದು. ಸಂತೃಪ್ತಿ ಬಹಳ ಮಹತ್ವದ್ದಾಗಿದೆ. ಇನ್ನಷ್ಟು ಬೇಕು, ಮತ್ತಷ್ಟು ಬೇಕು ಎಂದು ಹೊರಟರೆ ಅದಕ್ಕೆ ಕೊನೆಯೆಂಬುದಿಲ್ಲ. ಇದ್ದುದನ್ನೂ ಅನುಭವಿಸಲು ಆಗುವದಿಲ್ಲ. ಒಂದು ಶ್ವಾಸವನ್ನು ತೆಗೆದುಕೊಳ್ಳಬೇಕಾದರೆ ಒಂದು ಶ್ವಾಸವನ್ನು ಬಿಡಬೇಕಾಗುತ್ತದೆ. ಹೊರಗಡೆ ಗಾಳಿ ಬೇಕಾದಷ್ಟಿದ್ದರೂ ನಾವು ಎಷ್ಟು ಬೇಕೋ ಅಷ್ಟನ್ನು ಮಾತ್ರ ತೆಗೆದುಕೊಳ್ಳಲು ಸಾಧ್ಯ. ಈ ಸತ್ಯವನ್ನು ಅರಿತರೆ ಜೀವನ ಆನಂದಮಯ.
(ಲೇಖಕರು ನಿವೃತ್ತ ಬ್ಯಾಂಕ್ ಅಧಿಕಾರಿ)