

ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಡಿ ವಿದ್ಯಾರ್ಥಿಗಳಿಗೆ ಪೋಸ್ಟ್ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ನೀಡಲು ಅರ್ಜಿ ಆಹ್ವಾನಿಸಲಾಗಿತ್ತು. ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಏಪ್ರಿಲ್ 20ನ್ನು ಕೊನೆಯ ದಿನವಾಗಿ ನಿಗದಿಗೊಳಿಸಲಾಗಿತ್ತು. ಕರೊನಾ ಸಾಂಕ್ರಾಮಿಕದ ಕಾರಣ ಸರ್ಕಾರ ಜನತಾ ಕರ್ಫ್ಯೂ ಘೊಷಿಸಿರುವ ಹಿನ್ನೆಲೆಯಲ್ಲಿ ಆ ದಿನಾಂಕವನ್ನು ಒಂದರಿಂದ ಒಂದೂವರೆ ತಿಂಗಳ ಕಾಲ ವಿಸ್ತರಿಸಲಾಗಿದೆ. ಆದರೆ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಮಾತ್ರ ಈ ಅವಧಿಯನ್ನು ಕೇವಲ 10 ದಿನಕ್ಕೆ ವಿಸ್ತರಿಸಿ ಏಪ್ರಿಲ್ 30ರಂದು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಕೊನೆಗೊಳಿಸಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ, ತಾಂತ್ರಿಕ ಶಿಕ್ಷಣ ಇಲಾಖೆ- ಇವೆಲ್ಲ ಮೇ 15 ಮತ್ತು ಮೇ 31ನ್ನು ಅರ್ಜಿ ಸಲ್ಲಿಸಲು ಕೊನೆಯ ದಿನವನ್ನಾಗಿ ನಿಗದಿಪಡಿಸಿವೆ. ಅದೇ ರೀತಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸಹ ಸಾಂದೀಪನಿ ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಮೇ 31ರವರೆಗೆ ವಿಸ್ತರಿಸಬೇಕು.
ವಿದ್ಯಾರ್ಥಿಗಳು ದಾಖಲೆಗಳ ಇ-ದೃಢೀಕರಣಕ್ಕಾಗಿ ಕಾಲೇಜನ್ನು ಸಂರ್ಪಸಬೇಕು, ಇಲ್ಲವೆ ಸಂಬಂಧಪಟ್ಟ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಭೇಟಿ ಮಾಡಬೇಕು. ಕಾಲೇಜುಗಳು ಮುಚ್ಚಿರುವ ಕಾರಣ ದಾಖಲೆಗಳ ಇ-ದೃಢೀಕರಣ ಮಾಡಿಸಲಾಗುತ್ತಿಲ್ಲ. ಎಲ್ಲಡೆ ಕರೊನಾ ವ್ಯಾಪಿಸುತ್ತಿರುವಾಗ ವಿದ್ಯಾರ್ಥಿಗಳು ಅಧಿಕಾರಿಗಳನ್ನು ಹುಡುಕಿಕೊಂಡು ಹೋಗುವುದಾದರೂ ಹೇಗೆ?
| ಎಲ್.ಎನ್.ಪ್ರಸಾದ್ ತುರುವೇಕೆರೆ