ಗ್ಯಾರಂಟಿ ಗುಂಗಿನಲ್ಲಿರುವ ಸಿದ್ದರಾಮಯ್ಯ ಜನರ ಕಿವಿಗೆ ಹೂ ಮುಡಿಸಿದ್ದಾರೆ: ಕುಮಾರಸ್ವಾಮಿ ಪ್ರತಿಕ್ರಿಯೆ

hdk
Published on

ಬೆಂಗಳೂರು: ಕೇಂದ್ರ ಸರ್ಕಾರ ಅಮೃತಕಾಲ ಅಂದರೆ ಸಿದ್ದರಾಮಯ್ಯ ಅವರು ವಿನಾಶಕಾಲ ಎನ್ನುತ್ತಾರೆ. ಏಕೆಂದರೆ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ರಾಜ್ಯದ ವಿನಾಶಕ್ಕೆ ಬುನಾದಿ ಹಾಕಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರಸಕ್ತ ಸಾಲಿನ ಆಯವ್ಯಯದ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಅವರು, ಈ ಬಜೆಟ್ ಅನ್ನು ನೋಡಿದರೆ ಇದು ನಾಳೆ ಬಾ ಸರ್ಕಾರದಂತೆ ಇದೆ.ಓದುವಾಗಲೇ ಸಿದ್ದರಾಮಯ್ಯ ಅವರಲ್ಲಿ ವಿಶ್ವಾಸದ ಕೊರತೆ ಎದ್ದು ಕಾಣುತ್ತಿತ್ತು. ಇದು ಡಿಪಿಆರ್ ಬಜೆಟ್ ಎಂದು ವ್ಯಂಗ್ಯವಾಡಿದರು.

ಸರಕಾರದಿಂದ ಯವುದಾದರೂ ಯೋಜನೆ ಜಾರಿ ಮಾಡುವ ಮುನ್ನ ಸಮಗ್ರ ಯೋಜನಾ ವರದಿ (ಡಿಪಿಆರ್​) ಅಂತ ಮಾಡುತ್ತಾರೆ. ಅದಾದ ಮೇಲೆ ಏನೆಲ್ಲಾ ಆಗುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಈ ಬಜೆಟ್ ಕೂಡ ಹಾಗೆಯೇ ಇದೆ ಎಂದರು.

ಸಿದ್ದರಾಮಯ್ಯ ಗ್ಯಾರಂಟಿಗಳ ಗುಂಗಿನಿಂದ ಇನ್ನೂ ಹೊರಗೆ ಬಂದಿಲ್ಲ. 10 ತಿಂಗಳು ಕಳೆದರೂ ಇನ್ನೂ ಗ್ಯಾರಂಟಿಗಳ ಬಗ್ಗೆಯೇ ಕನವರಿಕೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರ 15ನೇ ಬಜೆಟ್ ಇದು. ರಾಜ್ಯದ ಇತಿಹಾಸದಲ್ಲಿ 15 ಬಜೆಟ್ ಗಳನ್ನು ಮಂಡಿಸುವವರು ಮುಂದೆ ಬರುತ್ತಾರೋ ಇಲ್ಲವೋ ಗೊತ್ತಿಲ್ಲ. ಸಿದ್ದರಾಮಯ್ಯ ಅವರಿಗೆ ಆಡಳಿತದಲ್ಲಿ ಸಾಕಷ್ಟು ಅನುಭವ ಇದೆ. ಆದರೆ, ಬಜೆಟ್ ನೋಡಿದರೆ ಯಾವುದೇ ರೀತಿಯ ವಿಶ್ವಾಸ ಮೂಡುತ್ತಿಲ್ಲ ಎಂದು ಕುಮಾರಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದರು.

ಇನ್ನು ಬಜೆಟ್ ಮೂಲಕ ರಾಜ್ಯದ ವಿನಾಶಕ್ಕೆ ಬುನಾದಿ ಹಾಕಿದ್ದಾರೆ. ಸರ್ಕಾರದ ಖಜಾನೆ ಖಾಲಿ ಆಗಿದೆ ಅಂತ ನಾವು ಹೇಳಲ್ಲ. ಜನರು ಸಮೃದ್ದಿಯಾಗಿ ಖಜಾನೆ ತುಂಬಿಸಿದ್ದಾರೆ. ಈ ಬಜೆಟ್ ನೋಡಿದರೆ ಜನರು ಇವರನ್ನು ಗೆಲ್ಲಿಸಿ ನಾವು ಎಷ್ಟು ತಪ್ಪು ಮಾಡಿದ್ದೇವೆ ಎಂದು ಅಂದುಕೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಆಕ್ರೋಶ ವ್ಯಕ್ತಪಡಿಸಿದರು.

ಏಳು ಕೋಟಿ ಜನರ ಕಿವಿಗೆ ಹೂವು: ಹಿಂದಿನ ಬಿಜೆಪಿ ಸರ್ಕಾರ ಬಜೆಟ್ ಮಂಡನೆ ಮಾಡಿದ್ದಾಗ ಸದನಕ್ಕೆ ಬರುವಾಗ ಕಿವಿಗೆ ಹೂವು ಇಟ್ಟುಕೊಂಡು ಸಿದ್ದರಾಮಯ್ಯ ಬಂದಿದ್ದರು. ಈಗ ಅದೇ ಹೂವನ್ನು 7 ಕೋಟಿ ಜನರ ಕಿವಿಗೆ ಇಟ್ಟಿದ್ದಾರೆ ಎಂದು ಅವರು ಕಿಡಿಕಾರಿದರು.

ಒಂದು ಸುಳ್ಳನ್ನು ಸತ್ಯ ಮಾಡಬೇಕಾದಾರೆ ನೂರು ಬಾರಿ ಸುಳ್ಳು ಹೇಳು ಎನ್ನುವಂತೆ ಕೇಂದ್ರ ಸರ್ಕಾರಕ್ಕೆ ಅವರು ನಿತ್ಯವೂ ಬೈತಾರೆ. ಅದೇ ರೀತಿ ಬಜೆಟ್ ಪ್ರತಿಯ ಪ್ರತಿ ಪುಟದಲ್ಲಿಯೂ ಕೇಂದ್ರ ಸರ್ಕಾರವನ್ನು ಬೈದಿದ್ದಾರೆ. ಇಂತಹ ಕೆಟ್ಟ ಸರ್ಕಾರ ಈ ದೇಶದಲ್ಲಿ ಯಾವತ್ತೂ ಬಂದಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಆಕ್ರೋಶ ವ್ಯಕ್ತಪಡಿಸಿದರು.

ಈ ಬಜೆಟ್ ನೋಡಿದರೆ ಸಿದ್ದರಾಮಯ್ಯ ಅವರಿಗೆ 7 ಕೋಟಿ ಕನ್ನಡಿಗರ ಮೇಲೆ ಆಕ್ರೋಶ ಇದೆ ಅಂತ ಅರ್ಥವಾಗುತ್ತದೆ ಎಂದರು ಕುಮಾರಸ್ವಾಮಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net