

ಗಾಂಧೀ ಜಯಂತಿ ಪ್ರಯುಕ್ತ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ವತಿಯಿಂದ ಶ್ರೀ ಕ್ಷೇತ್ರದಲ್ಲಿ ವ್ಯಸನಮುಕ್ತರ ಸಮಾವೇಶ ಹಮ್ಮಿಕೊಂಡಿದ್ದೆವು. ವ್ಯಸನಮುಕ್ತ ಸಮಾಜ ರೂಪಿಸಲು ಅವಿರತವಾಗಿ ಹೋರಾಡುತ್ತಿರುವ ಜನಜಾಗೃತಿ ವೇದಿಕೆಯ ಪ್ರತಿ ಕಾರ್ಯಕರ್ತರು, ಸದಸ್ಯರೂ ‘ಜನಜಾಗೃತಿ ವಾರಿಯರ್ಸ್’ ಎಂದು ಹೇಳಲು ಇಚ್ಛಿಸುತ್ತೇನೆ.
ಜನಜಾಗೃತಿ ವೇದಿಕೆಯನ್ನು ಪ್ರಾರಂಭಿಸಿದಾಗ ಕಾರ್ಯಕರ್ತರಿಗೆ ಅನೇಕ ಅಪಾಯಗಳು ಎದುರಾದವು. ಇನ್ನೂ ಅಪಾಯಗಳನ್ನು ಎದುರಿಸಲಿಕ್ಕಿದೆ. ವ್ಯಕ್ತಿಯನ್ನು ದುಶ್ಚಟಗಳಿಂದ ದೂರ ಮಾಡುವಾಗ ಅವನನ್ನು ದುಶ್ಚಟಕ್ಕೆ ಬೀಳುವಂತೆ ಮಾಡಿದ ಅನೇಕರ ದೃಷ್ಟಿಗೆ ಕಾರ್ಯಕರ್ತರು ಖಳನಾಯಕರಂತೆ ಕಂಡಿರಬಹುದು. ಮದ್ಯನಿಷೇಧ ಹೋರಾಟ ಆರಂಭಿಸಿದಾಗ ಅಪಹಾಸ್ಯ, ಕುಹಕಕ್ಕೆ ಒಳಗಾಗಿದ್ದೇವೆ. ಕಲ್ಲು ಮುಳ್ಳುಗಳ ಹಾದಿ ಕ್ರಮಿಸಿ ವ್ಯಕ್ತಿಯ ಮನಸ್ಸನ್ನು ಪರಿವರ್ತಿಸಿದಾಗ ಆಗುವ ಸಂತಸ ವರ್ಣಿಸಲಸದಳ. ಸುಮಾರು 15 ವರ್ಷಗಳ ಹಿಂದೆ ಜನಜಾಗೃತಿ ವೇದಿಕೆ ಆರಂಭದ ಸಂದರ್ಭದಲ್ಲಿ ಮದ್ಯಮುಕ್ತ ಸಮಾಜದ ನಿರ್ವಣದ ಹೋರಾಟದ ಶುರುವಿನಲ್ಲಿ ಮದ್ಯವ್ಯಸನಿಗಳೇ ನಮ್ಮ ವಿರುದ್ಧ ಹೋರಾಟ ಆರಂಭಿಸಿದ್ದರು; ಅನೇಕರಿಗೆ ಜೀವ ಬೆದರಿಕೆಗಳು ಬಂದಿದ್ದವು.
ಒಂದು ದಿವಸ ನಾನು ಧಾರವಾಡದಲ್ಲಿದ್ದೆ. ರಾತ್ರಿ ಪತ್ರಿಕೆಯ ಮೇಲೆ ಕಣ್ಣಾಡಿಸಿದೆ. ಜನಜಾಗೃತಿ ವೇದಿಕೆ ವಿರುದ್ಧ ಹೋರಾಟ ಆರಂಭವಾಗಿದೆ, 300 ಜನರ ಜಾಥ ಹೊರಟಿದೆ ಎಂಬ ಸುದ್ದಿ ಇತ್ತು. ಹೋರಾಟ ಮಾಡುವವರು ಯಾರು ಎಂದರೆ ಮದ್ಯ ಬೇಕು ಎನ್ನುವವರು. ಬೆಳಗ್ಗೆ ಬೇಗ ಎದ್ದು ಕಾರಿನಲ್ಲಿ ಶ್ರೀ ಕ್ಷೇತ್ರಕ್ಕೆ ಹೊರಟೆ. ಮದ್ಯನಿಷೇಧ ಬೇಡ ಎಂದು ಹೋರಾಟ ಮಾಡುತ್ತಿದ್ದಾರೆ ಎಂದರೆ, ಮದ್ಯನಿಷೇಧ ಆಗಿಯೇ ಆಗುತ್ತದೆಂದು ಬೆದರಿದ್ದಾರೆ ಎಂದು ನನ್ನ ಅರಿವಿಗೆ ಬಂತು. ಜನಜಾಗೃತಿ ಅಭಿಯಾನ ಮುಂದುವರಿಸಲು ಬಿಟ್ಟರೆ ಕುಡಿಯಲು ಮದ್ಯ ಸಿಗುವುದಿಲ್ಲ ಎಂದು ಹೋರಾಟ ಮಾಡುತ್ತಾರೆ ಎಂದಾದರೆ ಅವರಲ್ಲಿ ಎಷ್ಟು ಭಯ, ದುಗುಡ ಇದೆ ಎನ್ನುವುದು ಸ್ಪಷ್ಟವಾಯಿತು. ಇದು ನಮ್ಮ ಆಂದೋಲನಕ್ಕೆ ದೊರೆತ ಜಯ, ಸೋಲಲ್ಲ ಎಂದು ನನಗೆ ಖಾತ್ರಿಯಾಯಿತು. ಜನಜಾಗೃತಿ ವೇದಿಕೆಯ ಸದಸ್ಯರು ಅನೇಕರು ಶ್ರೀ ಕ್ಷೇತ್ರಕ್ಕೆ ಬಂದಿದ್ದರು. ಹೀಗೊಂದು ಹೋರಾಟ ಆಗುತ್ತಿದೆ ಎಂದಾಗ, ನಾನು ನಕ್ಕು ಹೇಳಿದೆ- ‘ಬಹಳ ಒಳ್ಳೆಯ ಸುದ್ದಿ, ನಾವು ಗೆದ್ದಿದ್ದೇವೆ. ಮದ್ಯಪಾನಿಗಳು ಹೋರಾಟಕ್ಕೆ ಇಳಿದಿದ್ದಾರೆ ಎಂದರೆ ಇದು ನಮ್ಮ ಗೆಲುವಲ್ಲದೆ ಮತ್ತೇನು?’ ಅಂದಿನಿಂದ ನಾವು ಇನ್ನಷ್ಟು ನಿರ್ಭೀತಿಯಿಂದ ಕೆಲಸ ಮಾಡಿದ್ದೇವೆ. ಜಿಲ್ಲಾ, ತಾಲೂಕು ಹಾಗೂ ಗ್ರಾಮ ಮಟ್ಟದ ತಳಹಂತದಿಂದ ಕಾರ್ಯಕರ್ತರು ಸೇವಾತತ್ಪರರಾಗಿದ್ದಾರೆ.
ಈಗಾಗಲೇ 1475 ಮದ್ಯವರ್ಜನ ಶಿಬಿರಗಳನ್ನು ನಡೆಸಿದ್ದೇವೆ. ಕರೊನಾ ಸಂದರ್ಭ ಶಿಬಿರವನ್ನು ನಿಲ್ಲಿಸಲಾಗಿತ್ತು. ಇದೀಗ ಅಕ್ಟೋಬರ್ 15ರಿಂದ ಶಿಬಿರ ಪುನರಾರಂಭಿಸಲಾಗಿದೆ. ಶಿಬಿರದಲ್ಲಿ ಪಾಲ್ಗೊಳ್ಳಲು ಆಸಕ್ತರು ಉಜಿರೆಯ ಕೇಂದ್ರವನ್ನು ಸಂರ್ಪಸಬಹುದು. ರಾಜ್ಯದಲ್ಲಿ ಮದ್ಯಪಾನ ಸಂಯಮ ಮಂಡಳಿಯವರು ಮದ್ಯಪಾನ ಮಾಡುವವರಿಗೆ ಸಂಯಮವಿರಲಿ ಎಂದು ತಿಳಿಸುತ್ತಾರೆ. ನಾವು ಮದ್ಯಪಾನ ಮಾಡಲೇಬೇಡಿ ಎಂದು ಹೋರಾಟ ಮಾಡುವವರು. ಜನಜಾಗೃತಿ ಶಿಬಿರಗಳಿಗೆ ಮಂಡಳಿಯವರು ಸಹಕಾರ ನೀಡುತ್ತಿದ್ದಾರೆ. ಕನಿಷ್ಠ 25 ಮಂದಿಯನ್ನು ಶಿಬಿರಕ್ಕೆ ಕರೆತಂದು ಮದ್ಯವ್ಯಸನಮುಕ್ತರನ್ನಾಗಿಸಿದರೆ ಅವರಿಗೆ ‘ಜಾಗೃತಿ ಮಿತ್ರ’ ಪ್ರಶಸ್ತಿ ನೀಡಲಾಗುತ್ತದೆ. 50ಕ್ಕಿಂತ ಹೆಚ್ಚು ಜನರನ್ನು ಶಿಬಿರಕ್ಕೆ ಸೇರಿಸಿ ವ್ಯಸನಮುಕ್ತ ರನ್ನಾಗಿಸಿದರೆ ಅವರಿಗೆ ‘ಜಾಗೃತಿ ಅಣ್ಣ’ ಪ್ರಶಸ್ತಿಯನ್ನು ಜನಜಾಗೃತಿ ವೇದಿಕೆ ಮೂಲಕ ನೀಡಲಾಗುತ್ತದೆ.
ನಮ್ಮ ಹಳ್ಳಿಗಳಲ್ಲಿ ಒಂದು ರೂಢಿ ಇದೆ. ಉದಾ-ಒಬ್ಬ ಬಡವ ಹಳ್ಳಿಯಲ್ಲಿದ್ದರೆ ಅವನು ಕೇವಲ ತಿಮ್ಮನಾಗಿರುತ್ತಾನೆ. ‘ತಿಮ್ಮ ಎಲ್ಲಿದ್ದಾನೆ’ ಎಂದು ಜನ ಕರೆಯುತ್ತಾರೆ. ಅದೇ ವ್ಯಕ್ತಿ ಮದ್ಯವರ್ಜನ ಮಾಡಿ ವ್ಯಾಪಾರ, ವ್ಯವಹಾರ ಮಾಡಿ ಸ್ವಲ್ಪ ಧನಿಕನಾದರೆ ‘ತಿಮ್ಮಣ್ಣ’ನಾಗುತ್ತಾನೆ. ‘ತಿಮ್ಮಣ್ಣ ಎಲ್ಲಿದ್ದಾರೆ, ಬಂದರೇ’ ಎಂದು ಕೇಳುತ್ತಾರೆ. ಇನ್ನೂ ಹೆಚ್ಚು ಸಾಧನೆ ಮಾಡಿ ಹೆಸರು ಗಳಿಸಿದರೆ ‘ತಿಮ್ಮಯ್ಯನವರು’ ಎಂದು ಗೌರವಿಸುತ್ತಾರೆ. ಖ್ಯಾತಿಯ ಉತ್ತುಂಗ ತಲುಪಿದರೆ ‘ತಿಮ್ಮಪ್ಪನವರು’ ಎಂದು ಹೇಳುತ್ತಾರೆ. ಸನ್ಮಾರ್ಗದಲ್ಲಿ ಸಕಾರಾತ್ಮಕ ಬೆಳವಣಿಗೆಯ ಜೊತೆಗೆ ಬದುಕಿದರೆ ಗೌರವ ಪ್ರಾಪ್ತಿಯಾಗುತ್ತದೆ. ಜನಜಾಗೃತಿ ಸಮಾವೇಶದಲ್ಲಿ ಮದ್ಯವ್ಯಸನಮುಕ್ತಿ ಹೊಂದಿದ ಒಬ್ಬ ವ್ಯಕ್ತಿಯ ಮಾತು ಕೇಳಿದಾಗ ಮನಸ್ಸು ಅಹ್ಲಾದಗೊಂಡಿತು. ‘ನಾನು 19 ವರ್ಷದವರೆಗೆ ಮಾತ್ರ ಮನುಷ್ಯನಾಗಿದ್ದೆ. ಆಮೇಲೆ ನಾನು ಮೃಗವೂ ಅಲ್ಲ, ಪಿಶಾಚಿಯೂ ಅಲ್ಲದ ರೀತಿ ಸುಮಾರು 45 ವರ್ಷಗಳ ಕಾಲ ಜೀವನ ಸಾಗಿಸಿದೆ. ಮದ್ಯವೆಂಬ ದುಶ್ಚಟ ಅಂಟಿಕೊಂಡಿದ್ದರಿಂದ ಕಷ್ಟಗಳನ್ನು ಅನುಭವಿಸಿದೆ. ಮೂರು ವರ್ಷಗಳ ಕಾಲ ಯಕ್ಷಗಾನ ಮೇಳದಲ್ಲಿ ಕಲಾವಿದನಾಗಿದ್ದೆ. ಅಲ್ಲಿ ಕುಡಿಯಲು ಅವಕಾಶ ಸಿಗುವುದಿಲ್ಲ ಎಂದು ಮೇಳವನ್ನು ಬಿಟ್ಟೆ. ಊರಿನ ಒಂದಷ್ಟು ಮಕ್ಕಳಿಗೆ ಯಕ್ಷಗಾನದ ತರಬೇತಿ ನೀಡಲು ಆರಂಭಿಸಿದೆ. ತರಬೇತಿ ನೀಡಲು ಕುಡಿದುಕೊಂಡೆ ಹೋಗುತ್ತಿದ್ದೆ. ಕೊನೆಗೆ ಅದನ್ನೂ ನಿಲ್ಲಿಸಿದೆ. ಹಣವಿಲ್ಲದಾಗ ಪತ್ನಿಯ ಬ್ಯಾಗಿನಿಂದ ಹಣ ಕದ್ದು ಸಿಕ್ಕಿಬಿದ್ದದ್ದೂ ಇದೆ. ನಾನು ಯಕ್ಷಗಾನ ಮೇಳದಲ್ಲಿರುವಾಗ ಸಲ್ಲಿಸಿದ ಕಲಾಸೇವೆ ಪರಿಗಣಿಸಿ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಯೂ ಲಭಿಸಿತು. ಪ್ರಶಸ್ತಿ ಸ್ವೀಕರಿಸಲು ಹೋಗುವಾಗಲೂ ಸ್ವಲ್ಪ ಕುಡಿದೇ ಹೋಗಿದ್ದೆ. ಬದಿಯಡ್ಕದ ನವಜೀವನ ಸಮಿತಿ ಸದಸ್ಯರು ಮದ್ಯವರ್ಜನ ಶಿಬಿರಕ್ಕೆ ಸೇರುವಂತೆ ಮನವಿ ಮಾಡಿಕೊಂಡರು. ಶಿಬಿರಕ್ಕೆ ಸೇರಿದ ನಂತರ ಕುಡಿತವನ್ನು ಸಂಪೂರ್ಣವಾಗಿ ಕೈಬಿಟ್ಟೆ. ಮತ್ತೆ ಯಕ್ಷಗಾನ ಕ್ಷೇತ್ರದತ್ತ ಹೆಜ್ಜೆ ಹಾಕಿದೆ. ಇದೀಗ ಯಕ್ಷಗಾನ ಕ್ಷೇತ್ರದಲ್ಲಿ ನನ್ನಷ್ಟು ತೃಪ್ತಿಕರ ಜೀವನ ನಡೆಸುತ್ತಿರುವವರನ್ನು ನಾನು ನೋಡಿಲ್ಲ. ಇದೆಲ್ಲ ಶ್ರೀ ಮಂಜುನಾಥ ಸ್ವಾಮಿಯ ಆಶೀರ್ವಾದದಿಂದ ಸಾಧ್ಯವಾಯಿತು’ ಎಂದು ಪಡುಮಲೆಯ ಜಯರಾಮ ಪಾಟಾಳಿ ಹೇಳುತ್ತಾರೆ.
ದೊಡ್ಡಬಳ್ಳಾಪುರ ತಾಲೂಕಿನ ಯುವಕನೊಬ್ಬ ಮದುವೆಯಾಗಿ ಒಂದು ಗಂಡು ಮಗುವಾದ ಸಂತೋಷದಲ್ಲಿ ಗೆಳೆಯರ ಜೊತೆ ಸೇರಿಕೊಂಡು ಮದ್ಯಪಾನ ಮಾಡಿ ಒಂದೇ ದಿನ 20,000 ರೂ. ಹಾಳು ಮಾಡುತ್ತಾನೆ. ಬಳಿಕ ಕುಡಿತ ಇನ್ನಷ್ಟು ಜಾಸ್ತಿಯಾಗಿ ಹೆತ್ತವರಿಗೆ ಹೊಡೆದು ಹೆಂಡತಿ ಮಕ್ಕಳಿಗೂ ಹಿಂಸಿಸಿ, ದುಡಿದ ಹಣ ಕುಡಿತಕ್ಕೇ ಖರ್ಚು ಮಾಡುತ್ತಿದ್ದ. ಆತನ ಅಕ್ಕ ಸುಳ್ಳು ಹೇಳಿ ಮದ್ಯವರ್ಜನ ಶಿಬಿರಕ್ಕೆ ಸೇರಿಸಿದ್ದರು. ಪ್ರಸ್ತುತ ಆತ ಪರಿವರ್ತನೆಗೊಂಡು ಆಲ್ಕೋಹಾಲ್ ಬಿಟ್ಟು 13 ಹಸುಗಳನ್ನು ಖರೀದಿಸಿ ಹೈನುಗಾರಿಕೆಯಲ್ಲಿ ತೊಡಗಿದ್ದಾನೆ. ಮದ್ಯವರ್ಜನ ಶಿಬಿರದಲ್ಲಿ ಪರಿವರ್ತನೆಯಾದವರು ಕುಡಿತ ಬಿಟ್ಟಿದ್ದಾರೆಯೇ ಎಂದು ಕೇಳುವವರಿದ್ದಾರೆ. ಸುಮಾರು ಶೇಕಡಾ ಹತ್ತರಷ್ಟು ಮಂದಿ ಮತ್ತೆ ದುಶ್ಚಟ್ಟಕ್ಕೆ ಬೀಳುತ್ತಾರೆ. ಇದಕ್ಕೆ ಕಾರಣ ಇಂದ್ರಿಯಗಳ ಮೇಲೆ ಹತೋಟಿಯ ಕೊರತೆ. ಮದ್ಯ ಮತ್ತು ಇತರ ದುಶ್ಚಟಗಳಿಗೆ (ಡ್ರಗ್ಸ್) ನಾಲಗೆ ರುಚಿ ಹಿಡಿದರೆ ನರಮಾಂಸದ ರುಚಿ ಹಿಡಿದ ಹುಲಿಯು ಬಯಸಿದಂತೆ ಮತ್ತೆ ಮತ್ತೆ ಅಪೇಕ್ಷಿಸುತ್ತದೆ. ಮೂಗು ವಾಸನೆ ಹಿಡಿದು ಅಪೇಕ್ಷಿಸುತ್ತದೆ. ಕಣ್ಣು ಮತ್ತು ಕಿವಿಗಳು ತಮ್ಮ ಪಾಲಿನ ಕೊಡುಗೆಯನ್ನು ನೀಡುತ್ತವೆ. ಸ್ನೇಹಿತರ ಮಾತು ಮತ್ತು ನೋಟವೇ ಸಾಕು. ದುಶ್ಚಟಮುಕ್ತರೂ ಪಂಚೇಂದ್ರಿಯಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವಂತೆ ಮದ್ಯವರ್ಜನ ಶಿಬಿರದಲ್ಲಿ ಮಾಹಿತಿ ನೀಡುವುದಲ್ಲದೆ ಯಾವುದೇ ಔಷಧ ನೀಡಲಾಗುವುದಿಲ್ಲ.
ಶರೀರವನ್ನು ರಥವೆಂದು ಪರಿಗಣಿಸಿದರೆ ಆತ್ಮ ಅದರ ಸಾರಥಿ. ಇಂದ್ರಿಯಗಳು ಈ ರಥದ ಕುದುರೆಗಳು. ಕುಶಲ ಸಾರಥಿ ಈ ಇಂದ್ರಿಯಗಳೆಂಬ ಕುದುರೆಗಳ ಮೇಲೆ ಲಗಾಮಿನ ಮೂಲಕ ಹತೋಟಿ ಇಟ್ಟುಕೊಂಡು ಸಾಗುತ್ತಾನೆ. ಕೃಷ್ಣನೂ ಮಹಾಭಾರತದಲ್ಲಿ ತಿಳಿಸಿಕೊಟ್ಟದ್ದು ಈ ವಿಚಾರ ಅಲ್ಲವೇ.
ತಸ್ಮಾದ್ ಯಸ್ಯ ಮಹಾಬಾಹೋ ನಿಗೃಹೀತಾನಿ ಸರ್ವಶ: ||
ಇಂದ್ರಿಯಾಣೀಂದ್ರಿಯಾರ್ಥೇಭ್ಯಸ್ತಸ್ಯ ಪ್ರಜ್ಞಾ ಪ್ರತಿಷ್ಠಿತಾ
ಮನಸ್ಸು ಯಾವಾಗಲೂ ಹೊರಗಿನ ಇಂದ್ರಿಯಗಳು ಏನನ್ನು ಅಭ್ಯಾಸ ಮಾಡಿದವೋ ಅದರ ಹಿಂದೆಯೇ ಹೋಗುತ್ತದೆ. ಇಂದ್ರಿಯಗಳನ್ನು ನಿಯಂತ್ರಿಸದೆ ಮನಸ್ಸನ್ನು ನಿಯಂತ್ರಿಸುವುದು ಕಷ್ಟ, ಆದ್ದರಿಂದ ಮೊದಲು ನಾವು ಇಂದ್ರಿಯಗಳಿಗೆ ತರಬೇತಿ ಕೊಡಬೇಕು. ಮದ್ಯ ವ್ಯಸನಮುಕ್ತರನ್ನಾಗಿಸಲು ಧ್ಯಾನವನ್ನು ಪ್ರಮುಖ ಅಸ್ತ್ರವನ್ನಾಗಿ ಬಳಸಲಾಗುತ್ತದೆ. ಪಂಚೇಂದ್ರಿಯಗಳ ಜೊತೆಗೆ ಮನೋನಿಗ್ರಹವನ್ನು ಮಾಡಿದರೆ ಚಂಚಲತೆಯ ಮನಸ್ಸು ದೃಢವಾಗುತ್ತದೆ. ಜ್ಞಾನವು ಸಂಚಯವಾಗುತ್ತದೆ. ಆಗ ಮನುಷ್ಯ ಜಿತೇಂದ್ರಿಯನಾಗುತ್ತಾನೆ.
ಯದಾ ಸಂಹರತೇ ಚಾಯಂ ಕಮೋಂಖಗಾನೀವ ಸರ್ವಶಃ
ಇಂದ್ರಿಯಾಣೀಂದ್ರಿಯಾರ್ಥೇಭ್ಯಸ್ತಸ್ಯ ಪ್ರಜ್ಞಾ ಪ್ರತಿಷ್ಠಿತಾ
ಹೇಗೆ ಆಮೆಯು ತನ್ನ ಅಂಗಗಳನ್ನು ಪೂರ್ತಿಯಾಗಿ ಚಿಪ್ಪಿನೊಳಗೆ ಎಳೆದುಕೊಳ್ಳುತ್ತದೋ ಹಾಗೆ, ಇಂದ್ರಿಯಗಳನ್ನು ಇಂದ್ರಿಯ ವಿಷಯಗಳಿಂದ ಹಿಂದಕ್ಕೆಳೆದುಕೊಳ್ಳುವವರ ಪ್ರಜ್ಞೆ ಗಟ್ಟಿಗೊಂಡಿರುತ್ತದೆ. ಆಮೆ ಹೇಗೆ ತನ್ನ ನಾಲ್ಕು ಕಾಲು ಮತ್ತು ತಲೆಯನ್ನು ತನ್ನ ಚಿಪ್ಪಿನೊಳಗೆ ಸಂಪೂರ್ಣ ಎಳೆದುಕೊಂಡು ಸುರಕ್ಷಿತವಾಗಿರುತ್ತದೋ, ಹಾಗೇ ನಾವು ನಮ್ಮ ಪಂಚೇಂದ್ರಿಯಗಳನ್ನು ಗಟ್ಟಿ ಮನಸ್ಸಿನ ಕೋಟೆಯೊಳಗೆ ಎಳೆದುಕೊಂಡು ಅಂತಮುಖಗೊಳಿಸಿಕೊಳ್ಳಬೇಕು.
ಆರು ಇಂದ್ರಿಯಗಳ (ಪಂಚೇಂದ್ರಿಯಗಳು ಮತ್ತು ಮನಸ್ಸು) ಮೇಲೆ ಅಧಿಕಾರ ಸಾಧಿಸುವ ಜಿತೇಂದ್ರಿಯನನ್ನು ಪಾಪಗಳು ಅಂಟುವುದಿಲ್ಲ. ವ್ಯಸನಮುಕ್ತರಾಗಲು ಶಿಬಿರ ಸೇರುವವರಿಗೆ ಈ ತತ್ವವನ್ನು ಬಿತ್ತಲಾಗುತ್ತದೆ. ಗಾಂಧೀಜಿಯವರ ಜೊತೆ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಅವರ ಅನುಯಾಯಿಗಳಲ್ಲಿ ಹೆಚ್ಚಿನವರು ದೀರ್ಘಾಯುಷಿಗಳು, ಶತಾಯುಷಿಗಳಾಗಿದ್ದಾರೆ. ಇದಕ್ಕೆ ಕಾರಣವೇನಿರಬಹುದು ಎಂದು ನಾನು ಅನೇಕ ಸಲ ಯೋಚಿಸಿದ್ದಿದೆ. ಇದಕ್ಕೆ ಉತ್ತರ-ಅವರ ನಿರ್ಭಯತ್ವ. ಅವರಿಗೆ ಸಾವಿನ ಭಯವಿರಲಿಲ್ಲ. ನೈತಿಕವಾಗಿ ಬಲಿಷ್ಠರಾಗಿದ್ದರು. ಹಾಗಾಗಿ ಆ ತತ್ವದ ತಳಹದಿಯಲ್ಲಿ ನಿರ್ಭೀತರಾಗಿ ಸಮಾಜದ ಪರಿವರ್ತನೆಗೆ ದೃಢವಾಗಿ ಶ್ರಮಿಸುತ್ತಿದ್ದೇವೆ. ವ್ಯಸನಮುಕ್ತ ಸಮಾಜ ನಿರ್ಮಾಣ ಎಂದರೆ ಒಂದು ಯಜ್ಞ, ಈ ಯಜ್ಞವನ್ನು ನಿರ್ಭೀತಿಯಿಂದ ಮಾಡೋಣ, ಮುನ್ನಡೆಸೋಣ.
ನಮ್ಮ ಸಂಕಲ್ಪ ಹೀಗಿರಲಿ: ನಮ್ಮ ಆಯುಷ್ಯದಲ್ಲಿ ನಾವು ಮಾಡಬಹುದಾದ ಪವಿತ್ರ ಕಾರ್ಯವೆಂದರೆ ಒಂದು ಮನೆಯ ದೀಪ ಬೆಳಗಿಸುವಂಥದ್ದು. ಹೆಣ್ಣುಮಕ್ಕಳ, ಮಕ್ಕಳ ಕಣ್ಣೀರನ್ನು ಒರೆಸುವಂಥದ್ದು. ಯಾಕೆಂದರೆ ಎಷ್ಟೋ ಮಕ್ಕಳು ತಮ್ಮ ಹೆತ್ತವರ ಕುಡಿತದ ಚಟದಿಂದ ಬೇಸತ್ತು, ಅವಮಾನಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದನ್ನೂ ತಿಳಿದಿದ್ದೇವೆ. ಸಮಾಜವನ್ನು ದುಶ್ಚಟಮುಕ್ತವಾಗಿಸಬೇಕು. ಈ ಹಾದಿಯಲ್ಲಿ ಎಷ್ಟೇ ಅಡ್ಡಿ ಆತಂಕಗಳಿರಲಿ, ಒಳ್ಳೆಯ ಕೆಲಸಕ್ಕೆ ಸದಾ ಶ್ರೀ ಸ್ವಾಮಿಯ ಕೃಪೆ ಇದ್ದು ಮದ್ಯಮುಕ್ತ ಸಮಾಜ ನಿರ್ಮಾಣ ಕಾರ್ಯ ನಿತ್ಯ ನಿರಂತರವಾಗಿರಲಿದೆ.
(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)