ಮುಖಪತ್ತೆ ತಂತ್ರಜ್ಞಾನದಲ್ಲೂ ನಾನವನಲ್ಲ ಎಂಬ ಸ್ಥಿತಿ!

3-67bb622bc9cf0
Published on

ಅಪರಾಧ ಪತ್ತೆಗೆ ಮುಖಪತ್ತೆ ತಂತ್ರಾಂಶವು ಬಳಕೆಯಾಗುತ್ತಿದೆ. ಸಂಚಾರಿ ನಿಯಮಗಳನ್ನು ಉಲ್ಲಂಘಿಸುವುದೇ ಇರಲಿ ಗುಂಪಿನಲ್ಲಿ ಬಂದು ದೊಂಬಿ ಮಾಡುವವರನ್ನು ಪತ್ತೆಹಚ್ಚುವುದಕ್ಕೇ ಆಗಲಿ ಸಿಸಿಟಿವಿಯ ಜೊತೆಗೆ ಪೂರಕವಾಗಿ ಕಾರ್ಯನಿರ್ವಹಿಸುವ ಮುಖಪತ್ತೆ ತಂತ್ರಾಂಶಗಳು ಕಾನೂನುಪಾಲಕರ ನೆರವಿಗೆ ನಿಂತಿವೆ. ಹಾಗೆಯೇ ಸವಾಲುಗಳನ್ನೂ ಸೃಷ್ಟಿಸಿವೆ.

ಬಲ್ದೇವ್ ಸಿಂಗ್ 2023ರ ಸೆಪ್ಟೆಂಬರ್ 25ರಂದು ದೆಹಲಿಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಅವರ ಪೂರ್ತಿ ಕುಟುಂಬವೇ ಸ್ವಾಗತಿಸಲು ನಿಂತಿತ್ತು. ಎಲ್ಲರ ಕಣ್ಣಲ್ಲೂ ಆತಂಕ, ದುಗುಡ. ಭಾರದ ಹೆಜ್ಜೆಯನ್ನಿಡುತ್ತ ಬಂದ ಬಲ್ದೇವ್ ಕಣ್ಣುಗಳು ನಿಸ್ತೇಜಗೊಂಡಿದ್ದವು. ಭಾವನೆಗಳ ಮಹಾಪೂರದ ನಡುವೆ ಕುಟುಂಬದವರಿಗೆ ಅಲ್ಲಿ ಮಾತನಾಡಲು ಏನೂ ಇರಲಿಲ್ಲ. ಬಲ್ದೇವ್ ಅವರ ಕುಟುಂಬದವರನ್ನು ತಬ್ಬಿಕೊಂಡರೆ ಅವರೆಲ್ಲರಿಂದ ಕಣ್ಣೀರ ಧಾರೆ.

ಪಂಜಾಬಿನ ಕಪೂರ್ತಲಾದ ವ್ಯಾಪಾರಿ ಬಲ್ದೇವ್ ಸಿಂಗ್ ಮೊದಲಬಾರಿಗೆ ವಿಮಾನವನ್ನೇರಿ ಮನೀಲಾಗೆ ಹದಿನೈದು ದಿನಗಳ ಪ್ರವಾಸಿ ವೀಸಾದ ಮೇಲೆ ಸುತ್ತಾಡಲು ಹೋಗಿದ್ದ. ಆದರೆ, ಆತ ಮತ್ತೆ ಮರಳಿ ಬಂದಿದ್ದು ಐದು ವರ್ಷಗಳ ನಂತರವೇ. ಅಂದು ತಮ್ಮ ಪ್ರವಾಸವನ್ನು ಮುಗಿಸಿ ಭಾರತಕ್ಕೆ ವಾಪಸ್ಸು ಬರಲು ವಿಮಾನವನ್ನು ಹತ್ತಿದ್ದ ಬಲ್ದೇವ್​ಗೆ ವಿಮಾನ ಹೊರಡುವ ಕೆಲ ನಿಮಿಷಗಳ ಮೊದಲು ತಮ್ಮ ಹೆಸರು ಘೊಷಣೆಯಾದದ್ದು ಕೇಳಿಸಿತು. ಕೈಯೆತ್ತಿ ವಿಮಾನದಲ್ಲಿ ತಮ್ಮ ಹಾಜರಿಯನ್ನು ಖಾತ್ರಿಪಡಿಸಿದ ಅವರನ್ನು ಗಗನಸಖಿ ಹೊರಬರಲು ವಿನಂತಿಸಿಕೊಂಡಳು.

ಬಲ್ದೇವ್ ಕೆಳಗಿಳಿಯುತ್ತಿದ್ದಂತೆಯೇ ಅವರಿಗಾಗಿಯೇ ಕಾಯುತ್ತಿದ್ದ ಸ್ಥಳೀಯ ಪೊಲೀಸ್ ಸೀದಾ ಅವರನ್ನು ಠಾಣೆಗೆ ಕರೆದೊಯ್ದು ಜೈಲಿನಲ್ಲಿ ಕೂಡಿಹಾಕಿದರು. ಪಂಜಾಬಿ ಮತ್ತು ಹಿಂದಿ ಬಿಟ್ಟರೆ ಬೇರೆ ಭಾಷೆ ಬರದ ಬಲ್ದೇವ್ ಆರ್ತನಾದ ಯಾರಿಗೂ ಕೇಳಿಸಲೇ ಇಲ್ಲ. ಅತ್ತ ಅವರ ಮನೆಯವರು ಇವರಿಗಾಗಿ ಕಾದು ಕಾದು ಹೈರಾಣಾಗಿ ತಮ್ಮ ಮೂಲಗಳನ್ನು ಸಂರ್ಪಸಿ ಇವರನ್ನು ಹುಡುಕಲು ಪ್ರಯತ್ನಿಸಿದರು. ಹಲವು ತಿಂಗಳುಗಳ ಪ್ರಯತ್ನಗಳ ನಂತರ ಜೈಲಿನಲ್ಲಿ ಅವರ ಇರುವಿಕೆಯ ಕುರಿತು ಗೊತ್ತಾದ ಮನೆಯವರು ಸರ್ಕಾರದ ಮೊರೆ ಹೋದರು. ನಂತರದಲ್ಲಿ ಸರ್ಕಾರದ ಮಟ್ಟದಲ್ಲಿ ನಡೆದ ಸರಣಿ ಮಾತುಕತೆಗಳ ಫಲವಾಗಿ ಅಂತೂ ಇಂತು ತಾಯ್ನಾಡಿಗೆ ಬಂದು ತಲುಪಿದಾಗ ಐದು ವರ್ಷಗಳೇ ಗತಿಸಿದ್ದವು.

ಅಷ್ಟಕ್ಕೂ ಬಲ್ದೇವ್ ಸಿಂಗ್​ರ ತಪ್ಪು ಏನು ಗೊತ್ತಾ? ಅಂದು ವಿಮಾನದಲ್ಲಿ ಅಧಿಕಾರಿಗಳು ಬಲ್ದೇವ್ ಸಿಂಗ್ ಹೆಸರು ಘೊಷಣೆ ಮಾಡಿದ್ದು ಫಿಲಿಪೈನ್ಸ್​ನಿಂದ ವಿಮಾನದಿಂದ ಪರಾರಿಯಾಗುತ್ತಿದ್ದ ಅದೇ ಹೆಸರಿನ ಅಪರಾಧಿಯ ಕುರಿತು ಕೊನೆಯ ಕ್ಷಣದಲ್ಲಿ ಬಂದ ಮಾಹಿತಿಯ ಕಾರಣದಿಂದ. ಅದಕ್ಕೆ ಪ್ರಾಮಾಣಿಕವಾಗಿ ಕೈಯೆತ್ತಿ ಕೆಳಗಿಳಿದ ಈ ಬಲ್ದೇವ್ ಸಿಂಗ್​ರನ್ನು ಅರ್ಧಂಬರ್ಧ ಮಾಹಿತಿ ಹೊಂದಿದ್ದ ಪೊಲೀಸರು ತಮ್ಮ ಜೊತೆಗೆ ಕರೆದೊಯ್ದರು. ತದನಂತರ ಕುಟುಂಬ ಮತ್ತು ಸರ್ಕಾರದಿಂದ ನಡೆದ ಪ್ರಯತ್ನಗಳ ಫಲ ಕೈಗೆಟುಕುವಷ್ಟರಲ್ಲಿ ದೈಹಿಕ ಮತ್ತು ಮಾನಸಿಕವಾಗಿ ಬಳಲಿ ಬೆಂಡಾಗಿದ್ದ ಬಲ್ದೇವ್​ರ ಜೀವನದ ಅಮೂಲ್ಯ ಐದು ವರ್ಷಗಳು ಉರುಳಿಹೋಗಿದ್ದವು.

2003ರ ಆಗಸ್ಟ್ ತಿಂಗಳಿನಲ್ಲಿ ದೆಹಲಿಯಲ್ಲಿ ಸಂಸತ್ತಿನ ಅಧಿವೇಶನ ನಡೆಯುತ್ತಿತ್ತು. ನಟ ಶತ್ರುಘ್ನ ಸಿನ್ಹಾ ಆಗ ಕೇಂದ್ರದಲ್ಲಿ ಮಂತ್ರಿಯಾಗಿದ್ದರು. ಅಧಿವೇಶನಕ್ಕೆ ಸಿನ್ಹಾ ಸಂಸತ್ತಿನ ಮುಖ್ಯದ್ವಾರವನ್ನು ದಾಟಿ ಒಳಗೆ ಹೋಗಿದ್ದ ಸುದ್ದಿ ಎಲ್ಲೆಡೆ ಸಂಚಲನವನ್ನು ಉಂಟುಮಾಡಿತ್ತು. ಮಂತ್ರಿಯೊಬ್ಬ ಸಂಸತ್ ಪ್ರವೇಶಿಸಿದರೆ ಅದಕ್ಯಾಕೆ ಅಷ್ಟೊಂದು ಬಿಲ್ಡಪ್ಪು ಅಂತನಿಸುವುದು ಸಹಜವೇ. ಆದರೆ ಅಂದು ಒಳಗೆ ಪ್ರವೇಶಿಸಿದ್ದು ಆ ನಟನಲ್ಲ, ಬದಲಿಗೆ ಆತನಂತೇ ಕಾಣುವ ಕಾರಣಕ್ಕೆ ಸಣ್ಣಪುಟ್ಟ ಮಿಮಿಕ್ರಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಮುಂಬೈ ಮೂಲದ ಬಲಬೀರ್ ಸಿಂಗ್ ಎಂಬ ಕಲಾವಿದ.

ವಾಹಿನಿಯೊಂದು ಸುರಕ್ಷತಾ ನ್ಯೂನತೆಗಳ ಕುರಿತು ಮಾಡಿದ್ದ ಸ್ಟಿಂಗ್ ಆಪರೇಷನ್ ಭಾಗವಾಗಿ ಶತ್ರುಘ್ನ ಸಿನ್ಹಾ ಪಾತ್ರವಹಿಸಿ ಸಂಸತ್ತಿನಲ್ಲಿ ಒಂದು ಹಂತದವರೆಗೆ ಸುರಕ್ಷತಾ ಸಿಬ್ಬಂದಿ ಸೇರಿದಂತೆ ಎಲ್ಲರಿಗೂ ಚಳ್ಳೆಹಣ್ಣು ತಿನ್ನಿಸಿದ. ಅನುಮಾನ ಬಾರದ ರೀತಿಯಲ್ಲಿ ಪ್ರವೇಶ ಪಡೆಯಲು ಯಶಸ್ವಿಯಾದ ಆ ಕಲಾವಿದನನ್ನೂ ಸೇರಿದಂತೆ ವಾಹಿನಿಯ ತಂಡದ ಮೇಲೆ ಹೊರಿಸಿದ ಗಂಭೀರ ಆರೋಪಗಳ ತನಿಖೆ ಇನ್ನೂ ನಡೆಯುತ್ತಿರುವುದು ಬೇರೆ ಮಾತು.

ಪ್ರಮುಖ ಅಂತಾರಾಷ್ಟ್ರೀಯ ಘಟನೆಯೊಂದರ ವಿಶ್ಲೇಷಣೆ ಕುರಿತು ರ್ಚಚಿಸಲು ಬ್ರಿಟಿಷ್ ಮೂಲದ ಜನಪ್ರಿಯ ಆಂಗ್ಲವಾಹಿನಿಯೊಂದರಲ್ಲಿ 2006ರ ಮೇ 8ರಂದು ಗೈ ಕಾವ್ನಿ ಎಂಬ ಪರಿಣತರೊಬ್ಬರನ್ನು ಆಹ್ವಾನಿಸಲಾಗಿತ್ತು. ಸ್ಟುಡಿಯೋಗೆ ನಿಗದಿತ ಸಮಯಕ್ಕಿಂತ ಸ್ವಲ್ಪ ಮೊದಲೇ ಆಗಮಿಸಿದ ಅವರನ್ನು ಸಹಾಯಕರು ಸ್ವಾಗತಿಸಿ ಅತಿಥಿಗಳ ಕೊಠಡಿಯಲ್ಲಿ ಕೂರಿಸಿದರು. ನಂತರ ಶೂಟಿಂಗ್​ನ ಸಿದ್ಧತೆ ಪೂರ್ಣಗೊಳ್ಳುತ್ತಿದ್ದಂತೆ ಅತಿಥಿಯನ್ನು ಒಳಕರೆದು ಸಂದರ್ಶನದ ಚಿತ್ರೀಕರಣವನ್ನು ಮುಗಿಸಿ ಮನೆಗೆ ತಲುಪಿಸಲಾಯಿತು.

ತಾಂತ್ರಿಕ ಕಾರ್ಯಗಳು ಮುಗಿದು ಕಾರ್ಯಕ್ರಮ ಬಿತ್ತರವಾಗುವ ಸಮಯದಲ್ಲಿ ಅಲ್ಲಿದ್ದ ತಂತ್ರಜ್ಞನಿಗೆ ಏನೋ ಅನುಮಾನವುಂಟಾಗಿ ಎದ್ದು ಅತಿಥಿಗಳ ಕೊಠಡಿಗೆ ಹೋಗಿ ನೋಡಿದರೆ ಗೈ ಕಾವ್ನಿ ಅಲ್ಲೇ ಕೂತಿದ್ದು ತಮ್ಮ ಸರದಿಗೆ ಕಾಯುತ್ತಿದ್ದರು. ಕಾರ್ಯಕ್ರಮದ ನಿರ್ದೇಶಕರಿಗೆ ಈ ವಿಷಯ ತಿಳಿಸಿ ತಕ್ಷಣ ಆ ಕಂತಿನ ಪ್ರಸಾರವನ್ನು ತಡೆಹಿಡಿಯಲಾಯಿತು. ಕೊನೆಗೆ ಗೊತ್ತಾದದ್ದು ಸಂದರ್ಶನಕ್ಕೆಂದು ಬಂದು ಅತಿಥಿಗಳ ಕೊಠಡಿಯಲ್ಲಿ ಕಾಯುತ್ತಿದ್ದ ಗೈ ಕಾವ್ನಿ ನಡುವೆ ನೈಸರ್ಗಿಕ ಕರೆಗೆಂದು ಶೌಚಗೃಹಕ್ಕೆ ಹೋಗಿದ್ದರು.

ಸರಿಯಾಗಿ ಅದೇ ಸಮಯಕ್ಕೆ ಚಿತ್ರೀಕರಣಕ್ಕೆ ಕರೆಯಲು ತಂಡದ ಸಹಾಯಕ ಅಲ್ಲಿಗೆ ಬಂದಿದ್ದಾನೆ. ಆಗ ಅಲ್ಲಿದ್ದಿದ್ದು ಆ ಸುದ್ದಿವಾಹಿನಿಯ ಕಾರಕೂನರ ಕೆಲಸದ ಸಂದರ್ಶನಕ್ಕೆಂದು ಬಂದಿದ್ದ ಗೈ ಗೋಮಾ ಎಂಬಾತ. ಅದಕ್ಕಾಗಿ ತನ್ನ ಪಠ್ಯದ ಜೊತೆಗೆ ಪ್ರಚಲಿತ ವಿದ್ಯಮಾನಗಳನ್ನೂ ಓದಿ ಚೆನ್ನಾಗಿಯೇ ತಯಾರಿ ಮಾಡಿಕೊಂಡು ಬಂದು ತನ್ನ ಸರದಿಗಾಗಿ ಕಾಯುತ್ತಿದ್ದವನಿಗೆ ‘ಬನ್ನಿ ಗೈ’ ಎಂದು ಆ ಸಹಾಯಕ ಹೇಳಿದಾಗ ಆ ಗೈ ಬದಲಿಗೆ ಈ ಗೈ ಒಳಗೆ ಹೋದ. ಅಲ್ಲಿ ಕೇಳಲಾದ ಪ್ರಶ್ನೆಗಳು ಪ್ರಚಲಿತ ವಿದ್ಯಮಾನದ್ದೇ ಆಗಿದ್ದ ಕಾರಣಕ್ಕೆ ಸುಲಲಿತವಾಗಿ ಉತ್ತರಿಸಿದ ಈ ಗೈ ಬಗ್ಗೆ ಸಂದರ್ಶಕರಿಗೂ ಅನುಮಾನ ಬರಲಿಲ್ಲ.

ಮೇಲಿನವೆಲ್ಲವೂ ತಪ್ಪು ಗುರುತುಗಳ ನೈಜ ಘಟನೆಗಳ ಕೆಲ ಸ್ಯಾಂಪಲ್​ಗಳು. ಇವೆಲ್ಲ ಕಾಕತಾಳೀಯವೋ, ಮುದ್ದಾಂ ಮಾಡಿದ್ದೋ ತಪ್ಪು ಆದದ್ದು ಮಾತ್ರ ಮನುಷ್ಯನಿಂದಲೇ ಎಂಬುದನ್ನಿಲ್ಲಿ ಗಮನಿಸಬೇಕು. ಹೀಗಿರುವಾಗ ಮಾನವನು ನಿರ್ವಿುಸಿದ ಯಂತ್ರಗಳು ತಪ್ಪು ಮಾಡಲಾರವೇ? ನೈಸರ್ಗಿಕ ಬುದ್ಧಿಮತ್ತೆಯನ್ನು ಹೊಂದಿರುವ ಮಾನವನು ಇದೀಗ ಹೆಚ್ಚೆಚ್ಚು ಕೃತಕ ಬುದ್ಧಿಮತ್ತೆಯೆಡೆ ವಾಲುತ್ತಿರುವ ಇಂದಿನ ದಿನಗಳಲ್ಲಿ ಇಂತಹುದೊಂದು ಪ್ರಶ್ನೆ ಅಲ್ಲಲ್ಲಿ ಕೇಳತೊಡಗಿದೆ.

ಹಾರ್ವೆ ಮರ್ಫಿ ಎಂಬ ಯುವಕ ಅಮೆರಿಕದ ಟೆಕ್ಸಾಸ್​ನ ಮೋಟಾರು ವಾಹನಗಳ ಕಚೇರಿಗೆ 2023ರ ಅಕ್ಟೋಬರ್ 20ರಂದು ಡ್ರೖೆವಿಂಗ್ ಲೈಸೆನ್ಸ್ ನವೀಕರಿಸಲು ಹೋಗಿದ್ದ. ಅಲ್ಲಿನ ಸಿಬ್ಬಂದಿ ಆತನ ಗುರುತಿನ ಚೀಟಿಯನ್ನು ಪರಿಶೀಲಿಸಿದರು. ಅದಾದ ಕೆಲವೇ ಕ್ಷಣಗಳಲ್ಲಿ ಪೊಲೀಸರು ಅಲ್ಲಿಗೆ ಬಂದು ಆತನನ್ನು ಬಂಧಿಸಿ ಜೈಲಿಗೆ ತಳ್ಳಿದರು. ಹೌಸ್ಟನ್​ನಲ್ಲಿನ ವ್ಯಾಪಾರಿ ಮಳಿಗೆಯೊಂದರಲ್ಲಿ 2022ರಲ್ಲಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಆತನನ್ನು ಬಂಧಿಸಲಾಗಿತ್ತು. ಆ ಮಳಿಗೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳನ್ನು ಆಧರಿಸಿ ‘ಫೇಸ್ ಡಿಟೆಕ್ಷನ್’ ತಂತ್ರಾಂಶವು ಆ ದರೋಡೆಕೋರನನ್ನು ಹಾರ್ವೆ ಮರ್ಫಿ ಎಂದು ಗುರುತಿಸಿತ್ತು. ಅಸಲಿಗೆ ದರೋಡೆ ನಡೆದ ದಿನ ಹಾರ್ವೆ ಮರ್ಫಿ ಹೌಸ್ಟನ್​ನಲ್ಲಿ ಇರಲೇ ಇಲ್ಲ. ಕೊನೆಗೆ ಆತನ ಪರ ವಕೀಲರು ಮಂಡಿಸಿದ ವಾದವನ್ನು ಆಲಿಸಿದ ಕೋರ್ಟು ಹಾರ್ವೆ ಮರ್ಫಿ ಮೇಲಿನ ಆರೋಪಗಳೆಲ್ಲ ಸುಳ್ಳೆಂದು ಘೊಷಿಸಿ ಆತನನ್ನು ಖುಲಾಸೆಗೊಳಿಸಿತು.

ಕೃತಕ ಬುದ್ಧಿಮತ್ತೆ ಬಳಸಿ ಮುಖಪತ್ತೆ ಮಾಡುವ ತಂತ್ರಜ್ಞಾನವು ಅತಿ ಕಡಿಮೆ ಸಮಯದಲ್ಲೇ ಬಹುಜನಪ್ರಿಯವಾದ ಸಾಧನ. ಈ ತಂತ್ರಜ್ಞಾನದಲ್ಲಿ ನಮ್ಮ ಮುಖವನ್ನು ಸ್ಕಾ್ಯನ್ ಮಾಡುವ ಯಂತ್ರವು ಪೂರ್ತಿ ಮುಖವನ್ನು ಮೂರುಆಯಾಮದ ಚಿತ್ರವನ್ನಾಗಿಸಿ ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತದೆ. ನಂತರ ಮುಖವನ್ನು ಪತ್ತೆಹಚ್ಚುವ ಪ್ರಮೇಯ ಬಂದಾಗ ಕ್ಯಾಮರಾ ಮೂಲಕ ಸೆರೆಹಿಡಿದ ಚಿತ್ರದ ಡಿಜಿಟಲ್ ರೂಪವನ್ನು ತನ್ನ ಸಂಗ್ರಹದಲ್ಲಿರುವ ದತ್ತಾಂಶದ ಜೊತೆಗೆ ಕೃತಕ ಬುದ್ಧಿಮತ್ತೆ ಬಳಸಿ ಹೋಲಿಸಿ ನೋಡಿ ಉತ್ತರ ನೀಡುತ್ತದೆ.

ಮುಖಪತ್ತೆ ತಂತ್ರಜ್ಞಾನ ಬಂದನಂತರ ನಮ್ಮ ಮೊಬೈಲ್​ನ ಪರದೆಯಿಂದ ಹಿಡಿದು ಮನೆಯ ಬಾಗಿಲನ್ನು ತೆಗೆಯುವವರೆಗೆ ನಮ್ಮ ಮುಖವೇ ಕೀಲಿಕೈ. ನೌಕರಿಗೆ ಹಾಜರಿ ಹಾಕುವಲ್ಲಿಯಿಂದ ಹಿಡಿದು ಹೊಸ ಸಿಮ್ ಕಾರ್ಡ್ ಖರೀದಿಸುವವರೆಗೆ ನಮ್ಮ ಮುಖವೇ ನಮಗೆ ಗುರುತಿನ ಚೀಟಿ. ಸಾಮಾಜಿಕ ಜಾಲತಾಣಗಳಲ್ಲಂತೂ ನಮ್ಮ ಫೋಟೋಗಳಿಂದ ನಮ್ಮ ಆಪ್ತರನ್ನು ಈ ತಂತ್ರಾಂಶಗಳೇ ಗುರುತಿಸಿ ಪರಿಚಯ ಹೇಳುತ್ತಿವೆ. ಹೀಗಾಗಿ ಮದುವೆ, ಮುಂಜಿಗಳಲ್ಲಿ ‘ನಾನ್ಯಾರು ಗೊತ್ತಾಯ್ತಾ?’ ಎನ್ನುತ್ತ ಧುತ್ತನೆ ನಮ್ಮೆದುರಿಗೆ ಬಂದು ನಿಲ್ಲುವ ಹಳೆಯ ಪರಿಚಯಸ್ಥರನ್ನು ಗುರುತಿಸುವ ಕೆಲಸವೂ ನಮಗೀಗ ಸಲೀಸು.

ಮತ್ತೊಂದೆಡೆ, ಅಪರಾಧ ಪತ್ತೆಗೆ ಮುಖಪತ್ತೆ ತಂತ್ರಾಂಶವು ವ್ಯಾಪಕವಾಗಿ ಬಳಕೆಯಾಗುತ್ತಿದೆ. ಸಂಚಾರಿ ನಿಯಮಗಳನ್ನು ಉಲ್ಲಂಘಿಸುವುದೇ ಇರಲಿ ಗುಂಪಿನಲ್ಲಿ ಬಂದು ದೊಂಬಿ ಮಾಡುವವರನ್ನು ಪತ್ತೆಹಚ್ಚುವುದಕ್ಕೇ ಆಗಲಿ ಸಿಸಿಟಿವಿಯ ಜೊತೆಗೆ ಪೂರಕವಾಗಿ ಕಾರ್ಯನಿರ್ವಹಿಸುವ ಮುಖಪತ್ತೆ ತಂತ್ರಾಂಶಗಳು ಕಾನೂನುಪಾಲಕರ ನೆರವಿಗೆ ನಿಂತಿವೆ. ಆದರೆ ಇಂತಹುದೊಂದು ವ್ಯವಸ್ಥೆಯ ಕರಾರುವಾಕ್ಕುತನ ಅಲ್ಲಿ ಬಳಸಲಾಗಿರುವ ಉಪಕರಣ ಮತ್ತು ಅವುಗಳ ಕ್ಷಮತೆಯ ಮೇಲೆ ಸಂಪೂರ್ಣವಾಗಿ ನಿರ್ಭರವಾಗಿದೆ. ಉದಾಹರಣೆಗೆ, ನಂಬರ್ ಪ್ಲೇಟ್ ಪತ್ತೆ ಹಚ್ಚಿ ಪ್ರಕರಣ ದಾಖಲಿಸುವಿಕೆ ಇದೀಗ ವ್ಯಾಪಕವಾಗಿ ಬಳಸಲ್ಪಡುವ ವಿಧಾನ.

ಇಲ್ಲಿ ಬಳಸಲಾಗುವ ಕ್ಯಾಮರಾಗಳು ವೇಗವಾಗಿ ಬರುವ ವಾಹನಗಳ ನಂಬರ್ ಪ್ಲೇಟ್​ಗಳನ್ನು ಓದಲು ಅನುಗುಣವಾಗುವಂತೆ ಹೆಚ್ಚು ಫ್ರೇಮ್ ರೇಟ್ ಅಂದರೆ ನಿಮಿಷವೊಂದಕ್ಕೆ ಅರವತ್ತಕ್ಕೂ ಹೆಚ್ಚು ಫ್ರೇಮ್ಳನ್ನು ದಾಖಲಿಸಿಕೊಳ್ಳುವಂತೆ ರೂಪಿಸಲಾಗಿರುತ್ತವೆ. ಅದೇ ಸಾಮಾನ್ಯ ಸಿಸಿಟಿವಿ ಕ್ಯಾಮರಾಗಳಲ್ಲಿ ಅದು 15ರಿಂದ 30ರಷ್ಟಿರುತ್ತದೆ. ಹೀಗಾಗಿ ಸಾಮಾನ್ಯ ಸಿಸಿಟಿವಿ ಕ್ಯಾಮರಾಗಳನ್ನು ಬಳಸಿ ನಂಬರ್ ಓದಲು ಹೋದರೆ ಅದು ಹಾರ್ವೆ ಮರ್ಫಿಯ ಪ್ರಕರಣದ ಥರ ಠುಸ್ ಪಟಾಕಿಯಾಗುತ್ತದೆ. ದೆಹಲಿಯಲ್ಲಿ ಸಂಚಾರಿ ಪೊಲೀಸರು ಎಲ್ಲೆಡೆ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿ ಮುಖಪತ್ತೆ ತಂತ್ರಾಂಶದ ಮೂಲಕ ತಪ್ಪಿತಸ್ಥರ ಮೇಲೆ ಪ್ರಕರಣ ದಾಖಲಿಸತೊಡಗಿದಾಗ ಈ ಕಾರ್ಯವಿಧಾನದ ಕ್ಷಮತೆ ಕುರಿತು ಹಲವು ಪ್ರಶ್ನೆಗಳು ಎದ್ದು ಈ ಹೊಸ ಪ್ರಕ್ರಿಯೆಗೆ ಭಾರಿ ವಿರೋಧವುಂಟಾಯಿತು. ಈ ಕುರಿತು ಹಲವು ಆರ್​ಟಿಐಗಳನ್ನೂ ದಾಖಲಾಯಿಸಲಾಯಿತು. ಅದಕ್ಕೆ ಉತ್ತರಿಸಿದ ಇಲಾಖೆಯು ತನ್ನ ದತ್ತಾಂಶದಲ್ಲಿನ ಮುಖಕ್ಕೆ ಶೇಕಡ 80ರಷ್ಟು ಸಾಮ್ಯತೆಯಿದ್ದಲ್ಲಿ ತಂತ್ರಾಂಶವು ಅದನ್ನು ಪಕ್ಕಾ ಎಂದು ತೀರ್ವನಿಸುತ್ತದೆ ಎಂದಿತು.

ನಕಲಿ ಮುಖಚರ್ಯು ಬಳಸಿ ಮೊಬೈಲ್ ಸಿಮ್ಾರ್ಡ್​ಗಳನ್ನು ಪಡೆದುಕೊಂಡು ಅಪರಾಧ ನಡೆಸುವ ಪ್ರವೃತ್ತಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಭಾರತೀಯ ದೂರಸಂಪರ್ಕ ಇಲಾಖೆಯು ಸಿ ಡಾಟ್ ಸಂಸ್ಥೆಯ ಜೊತೆಗೂಡಿ ಮುಖಪತ್ತೆ ತಂತ್ರಾಂಶವನ್ನು ಬಳಸಿ 2023ರಲ್ಲಿ ಆರಂಭಿಸಿದ ಅಭಿಯಾನದಲ್ಲಿ ಆ ಒಂದು ವರ್ಷದಲ್ಲಿಯೇ 60 ಲಕ್ಷಕ್ಕೂ ಹೆಚ್ಚು ನಕಲಿ ಸಿಮ್ಳನ್ನು ಪತ್ತೆಹಚ್ಚಿ ಅವುಗಳನ್ನು ನಿಷ್ಕ್ರೀಯಗೊಳಿಸಿತು.

ಕೋವಿಡ್ ನಂತರದಲ್ಲಿ ಸಂಪರ್ಕರಹಿತ ತಂತ್ರಜ್ಞಾನಗಳಿಗೆ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಅತಿ ಶೀಘ್ರವೇ ತನ್ನ ಜನಪ್ರಿಯತೆಯನ್ನು ಕುದುರಿಸಿಕೊಂಡಿದ್ದು ಮುಖಪತ್ತೆಯ ಸಾಧನ. ಇದು ಉಪಯುಕ್ತವೆಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅಪರಾಧ ಪತ್ತೆಯಂಥ ಸೂಕ್ಷ್ಮ ವಿಷಯಗಳಲ್ಲಿ ಕೇವಲ ತಂತ್ರಜ್ಞಾನವನ್ನೇ ಮೂರನೇ ಅಂಪೈರ್ ಸ್ಥಾನದಲ್ಲಿ ಕೂರಿಸಲಾಗದು. ಹಾಗೆಯೇ ಇಲ್ಲಿ ಬಳಸುವ ತಂತ್ರಾಂಶಗಳ ಮುಖಾಂತರ ನಮ್ಮ ಖಾಸಗಿ ಮಾಹಿತಿ ಸೋರಿಕೆಯಾಗುವ ಸಾಧ್ಯತೆಗಳೂ ಹೆಚ್ಚಿವೆ. ಹೀಗಾಗಿ ಬಳಕೆದಾರರು ಮತ್ತು ಸೇವೆ ಒದಗಿಸುವವರು ಜಾಗರೂಕತೆಯಿಂದ ಇರಬೇಕಾದುದು ಅವಶ್ಯ.

(ಲೇಖಕರು ವಿಜ್ಞಾನ, ತಂತ್ರಜ್ಞಾನ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net