ಶಾಲೆ ಬಾಗಿಲು ತೆರೆದರೂ...: ಶಿಕ್ಷಣ ರಂಗದ ಮುಂದಿವೆ ಹೊಸ ಸವಾಲುಗಳು, ಕಲಿಕೆಯಲ್ಲಿ ಆಸಕ್ತಿ ಕಳೆದುಕೊಂಡಿರುವ ಮಕ್ಕಳು..

Vihara F
Published on
ಕರೊನಾ ಆರ್ಭಟ ಕಡಿಮೆಯಾಗಿ ಶಾಲೆಗಳು ಕ್ರಮೇಣ ಆರಂಭವಾಗುತ್ತಿವೆ. ಆದರೆ, ಕಳೆದ ಎರಡು ವರ್ಷಗಳಲ್ಲಿ ಆಗಿರುವ ಹಾನಿ, ಸ್ಥಿತ್ಯಂತರ ಅಷ್ಟಿಷ್ಟಲ್ಲ. ದೀರ್ಘಾವಧಿಯವರೆಗೆ ಶಾಲೆಗಳು ಬಂದ್ ಆಗಿದ್ದರಿಂದ ಕಲಿಕೆಯ ಹಾದಿಗಳೂ ಬಂದ್ ಆಗಿದ್ದವು. ಆನ್​ಲೈನ್ ತರಗತಿಗಳು ನಾಮ್ ಕೇ ವಾಸ್ತೆ ಎಂಬಂತ್ತಿದ್ದವು. ಒಟ್ಟಾರೆಯಾಗಿ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣದ ಸ್ವರೂಪಕ್ಕೇ ಪೆಟ್ಟುಬಿದ್ದಿದೆ.

| ರವೀಂದ್ರ ಎಸ್. ದೇಶಮುಖ್

ಮುಂಚೆಲ್ಲ ರಜೆಯ ಮೋಜಿಗಾಗಿ ಕಾಯುತ್ತಿದ್ದ ಮಕ್ಕಳು ಕಳೆದ ಎರಡು ವರ್ಷಗಳಲ್ಲಿ ಬೆಂಬಿಡದೆ ಕೇಳಿದ ಪ್ರಶ್ನೆ ಒಂದೇ-‘ಶಾಲೆ ಯಾವಾಗ ಆರಂಭವಾಗುತ್ತದೆ?’ ಬಹುತೇಕ ಎಲ್ಲ ಪಾಲಕರ, ಶಿಕ್ಷಕರ ಮನದಲ್ಲೂ ಇದೇ ಪ್ರಶ್ನೆ ನೆಲೆಸಿತ್ತು. ಕರೊನಾ ಮೊದಲನೇ ಅಲೆಯ ವೇಳೆ ಮುಚ್ಚಿದ ಶಾಲೆಗಳು (2020 ಮಾರ್ಚ್) ಸೋಂಕಿನ ಮೂರನೇ ಅಲೆ ತಗ್ಗಿದ ಬಳಿಕ (2022 ಫೆಬ್ರವರಿ) ಆರಂಭಗೊಂಡಿವೆ/ಗೊಳ್ಳುತ್ತಿವೆ. ಆದರೆ, ಶಾಲೆ ಆರಂಭವಾದ ಬಳಿಕ ಯಾವುದೂ ಮೊದಲಿನಂತಿಲ್ಲ. ಏಕಾಗ್ರತೆ ಕಳೆದುಕೊಂಡಿರುವ ಮಕ್ಕಳು ಪಾಠದತ್ತ ಗಮನ ನೀಡುತ್ತಿಲ್ಲ. ಶಿಸ್ತು, ಕಲಿಕೆಯ ಉತ್ಸಾಹ, ಶೈಕ್ಷಣಿಕ ಚಟುವಟಿಕೆಗಳನ್ನು ಕೈಗೊಳ್ಳುವ ಬದ್ಧತೆ... ಯಾವವೂ ಕಾಣುತ್ತಿಲ್ಲ. ಈ ಮಕ್ಕಳಿಗೆ ಹೇಗೆ ಓದಿಸುವುದು ಎಂಬ ಚಿಂತೆ ಶಿಕ್ಷಕರದ್ದು. ಹೋಮ್ರ್ಕ್ ಮಾಡುತ್ತಿಲ್ಲ, ಕಿರುಪರೀಕ್ಷೆ, ಇತರ ಪರೀಕ್ಷೆ ಬರೆಯುತ್ತಿಲ್ಲ ಎಂಬ ಆತಂಕ ಪಾಲಕರದ್ದು. ಒಂದೇ ಬಾರಿಗೆ ಪಾಠದ ಸಂಗತಿಗಳನ್ನು ಗ್ರಹಿಕೆ ಮಾಡಿಕೊಳ್ಳುತ್ತಿದ್ದ ಮಕ್ಕಳು ಈಗ ಹಲವು ಬಾರಿ ಪುನರಾವರ್ತಿಸಿದರೂ ತಪು್ಪಗಳನ್ನು ಮಾಡುತ್ತಲೇ ಇದ್ದಾರೆ. ಈ ಸಮಸ್ಯೆ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಹಂತದಲ್ಲಿ ತೀವ್ರವಾಗಿ ಕಾಡುತ್ತಿದ್ದು, ಕಲಿಕೆಯ ಹೊಸ ಮಾರ್ಗಗಳಿಗೆ ತೆರೆದುಕೊಳ್ಳಬೇಕಾದ ಅನಿವಾರ್ಯತೆ ಶಿಕ್ಷಕರ ಮೇಲಿದೆ. ಆದರೇನು ಮಾಡುವುದು, ಮಕ್ಕಳು ಮುಂಚಿನಂತೆ ಆಸಕ್ತಿ ತೋರುತ್ತಿಲ್ಲ, ಅವರ ಗ್ರಹಿಕೆಯ ಸಾಮರ್ಥ್ಯವೂ ಕುಂದಿದೆ ಎಂಬ ಕಳವಳ ಶೈಕ್ಷಣಿಕ ಸಂಸ್ಥೆಗಳದ್ದು. ಸಮಸ್ಯೆಯ ಮತ್ತೊಂದು ಮುಖ ಮತ್ತಷ್ಟು ಘೋರ. ನಮ್ಮ ದೇಶದಲ್ಲಿ ಶಿಕ್ಷಣ ಮೂಲಭೂತ ಹಕ್ಕು ಎಂದು ಪರಿಗಣಿಸಲಾಗಿದೆ. ಆದರೆ, ಮಾಧ್ಯಮಿಕ ಮತ್ತು ಪ್ರೌಢಶಾಲೆ ಹಂತದಲ್ಲೇ ಶಾಲೆ ತೊರೆಯುವವರ ಸಂಖ್ಯೆ ಹೆಚ್ಚುತ್ತಿದೆ; ಕಳೆದ ಎರಡು ವರ್ಷಗಳಲ್ಲಂತೂ ಮತ್ತಷ್ಟು ಏರಿಕೆ ಕಂಡಿದೆ. ಗ್ರಾಮೀಣ ಪ್ರದೇಶಗಳಲ್ಲಂತೂ ಶಾಲೆ ಬಿಡಿಸಿ, ಮಕ್ಕಳನ್ನು ದುಡಿಮೆಗೆ ನೂಕಲಾಗುತ್ತಿದೆ. ಬಾಲ್ಯವಿವಾಹದ ಪ್ರಕರಣಗಳೂ ಏರಿಕೆ ಕಂಡಿವೆ. ಶಾಲೆಯಿಂದ ಹೊರಗುಳಿದ ಮಕ್ಕಳ ಕುರಿತಂತೆ ಇತ್ತೀಚೆಗೆ ಯುನೆಸ್ಕೋ ತನ್ನ ವರದಿಯಲ್ಲಿ ಕಳವಳ ವ್ಯಕ್ತಪಡಿಸಿದೆ.

ಅನಾಥರಾದ ಮಕ್ಕಳು: ದೇಶದಲ್ಲಿ 2020 ಏಪ್ರಿಲ್​ನಿಂದ 2022 ಜನವರಿವರೆಗೆ 1, 47,492 ಮಕ್ಕಳು ಕರೊನಾದಿಂದ ಪಾಲಕರ ಪೈಕಿ ಒಬ್ಬರು ಅಥವಾ ಇಬ್ಬರನ್ನೂ ಕಳೆದುಕೊಂಡಿದ್ದಾರೆ. ಇವರ ಪೈಕಿ 72,508 ಬಾಲಕರಿದ್ದು, 70,980 ಬಾಲಕಿಯರು. ತೃತೀಯ ಲಿಂಗಿಗಳ ನಾಲ್ವರು ಮಕ್ಕಳು ಇದರಲ್ಲಿ ಸೇರಿದ್ದಾರೆ. ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗ (ಎನ್​ಸಿಪಿಸಿಆರ್) ಸುಪ್ರೀಂಕೋರ್ಟಿಗೆ ಜನವರಿಯಲ್ಲಿ ಸಲ್ಲಿಸಿರುವ ವರದಿಯಲ್ಲಿ ಈ ವಿವರ ನೀಡಿದೆ. 10,094 ಮಕ್ಕಳು ಅನಾಥರಾಗಿದ್ದಾರೆ. 1,36,910 ಮಕ್ಕಳು ಪಾಲಕರ ಪೈಕಿ ಒಬ್ಬರನ್ನು ಕಳೆದುಕೊಂಡಿದ್ದಾರೆ. 488 ಮಕ್ಕಳನ್ನು ಪಾಲಕರೇ ತೊರೆದಿದ್ದಾರೆ. ಈ ಮಕ್ಕಳಲ್ಲಿ 59,010 ಮಕ್ಕಳು 8 ರಿಂದ 13 ವಯೋಮಾನದವರು. 22,763 ಮಕ್ಕಳು 14ರಿಂದ 15 ವಯೋಮಾನದವರು. 16ರಿಂದ 18 ವರ್ಷದೊಳಗಿನ 22,626 ಮಕ್ಕಳಿದ್ದರೆ, 4ರಿಂದ 7 ವರ್ಷದೊಳಗಿನ 26,080 ಮಕ್ಕಳಿದ್ದಾರೆ.

ಏನು ಹೇಳುತ್ತೆ ಯುನೆಸ್ಕೋ ವರದಿ?: ಭಾರತದಲ್ಲಿ ಕರೊನಾದಿಂದ 29 ಕೋಟಿ ಮಕ್ಕಳ ಶಿಕ್ಷಣದ ಮೇಲೆ ವ್ಯತಿರಿಕ್ತ ಪರಿಣಾಮವಾಗಿದೆ. ಈ ಪೈಕಿ 14 ಕೋಟಿ ಬಾಲಕಿಯರು. 15 ಕೋಟಿ ಬಾಲಕರು. ಮಧ್ಯದಲ್ಲೇ ಶಾಲೆ ಬಿಟ್ಟ ಬಾಲಕಿಯರ ಪೈಕಿ ಅರ್ಧಕ್ಕಿಂತ ಹೆಚ್ಚು ಹುಡುಗಿಯರು ಮತ್ತೆ ಶಾಲೆಗಳನ್ನು ಪ್ರವೇಶಿಸುವುದೇ ಇಲ್ಲ. ಕರೊನಾ ಕಾರಣದಿಂದ ಪೂರ್ವ ಪ್ರಾಥಮಿಕ (ಪ್ರಿ ಪ್ರೖೆಮರಿ) ಮತ್ತು ಸೆಕೆಂಡರಿ ಶಿಕ್ಷಣದಿಂದ 11 ಕೋಟಿ ಮಕ್ಕಳು ವಂಚಿತರಾಗಿದ್ದಾರೆ. ಇದು ಪ್ರಪಂಚದಾದ್ಯಂತ ಇರುವ ವಿದ್ಯಾರ್ಥಿಗಳ ಸಂಖ್ಯೆಯ ಶೇಕಡ 7.5.

ಶಾಲೆ ತೊರೆದವರು: ಮಧ್ಯದಲ್ಲೇ ಶಾಲೆ ಬಿಟ್ಟವರ ಸಂಖ್ಯೆ ಅರುಣಾಚಲ ಪ್ರದೇಶದಲ್ಲಿ ಹೆಚ್ಚಿದೆ. ಇಲ್ಲಿ ಡ್ರಾಪ್​ಔಟ್ ಪ್ರಮಾಣ ಶೇಕಡ 34.3. ನಂತರದ ಸ್ಥಾನದಲ್ಲಿದೆ ಅಸ್ಸಾಂ (ಶೇ.32.3). ಮೂರನೇ ಸ್ಥಾನದಲ್ಲಿ ತ್ರಿಪುರಾ (ಶೇ.26.7). ಮಧ್ಯಪ್ರದೇಶ, ಮೇಘಾಲಯ, ನಾಗಾಲ್ಯಾಂಡ್​ನಲ್ಲಿ ಈ ಪ್ರಮಾಣ ಶೇ.25ಕ್ಕಿಂತ ಹೆಚ್ಚು. ಗುಜರಾತಿನಲ್ಲಿ ಶೇ.23.3, ಕರ್ನಾಟಕ ಶೇ.18.6. ಅತಿ ಕಡಿಮೆ ಪ್ರಮಾಣ ಪಂಜಾಬಿನಲ್ಲಿದೆ (ಶೇ.1.6).

ಕೇಂದ್ರದ ನೆರವು: ಈ ಮಕ್ಕಳಿಗೆ ಪಿಎಂ ಕೇರ್ಸ್ ನಿಧಿಯಡಿ ನಿಶ್ಚಿತ ಠೇವಣಿ ಇರಿಸಿ ಮಕ್ಕಳಿಗೆ ತಲಾ 10 ಲಕ್ಷ ರೂಪಾಯಿ ಸಿಗುವಂತೆ ಯೋಜನೆ ರೂಪಿಸಲಾಗಿದೆ. ಅವನು/ಅವಳು 18 ವರ್ಷ ತುಂಬಿದ ಬಳಿಕ ಮುಂದಿನ ಐದು ವರ್ಷಗಳ ಕಾಲ ಅಂದರೆ 23 ವರ್ಷ ತುಂಬುವವರೆಗೂ ಆರ್ಥಿಕ ಬೆಂಬಲ ಸಿಗಲಿದೆ. 23 ವರ್ಷ ತುಂಬಿದ ಬಳಿಕ 10 ಲಕ್ಷ ರೂ ಪಾವತಿಯಾಗಲಿದೆ. ಈ ಅನಾಥ ಮಕ್ಕಳಿಗೆ ಸಮೀಪದ ಕೇಂದ್ರೀಯ ವಿದ್ಯಾಲಯಕ್ಕೆ ಪ್ರವೇಶ ಕಲ್ಪಿಸಲಾಗುವುದು.

ಕರ್ನಾಟಕದ ಸ್ಥಿತಿ: ರಾಜ್ಯದಲ್ಲಿ 115 ಮಕ್ಕಳು ಅನಾಥರಾಗಿದ್ದು, ಈ ಪೈಕಿ 113 ಮಕ್ಕಳು ಬಾಲಸೇವಾ ಯೋಜನೆಗೆ ಅರ್ಹರಾಗಿದ್ದಾರೆ. ಈ ಮಕ್ಕಳಿಗೆ ಆರ್ಥಿಕ ನೆರವು ನೀಡುವ ಯೋಜನೆಯನ್ನು ಈ ಹಿಂದಿನ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಘೊಷಿಸಿದ್ದರು. ಈ ಮಕ್ಕಳಿಗೆ ಪದವಿ ಪೂರ್ಣಗೊಳಿಸುವವರೆಗೆ ಮಾಸಿಕ 3500 ರೂಪಾಯಿಗಳ ನೆರವು ಸಿಗಲಿದೆ.

ಮುಂದಿನ ದಾರಿ ಏನು?

  • ಕಲಿಕೆಯತ್ತ ಆಸಕ್ತಿ ಹೆಚ್ಚಿಸಲು ಸೃಜನಶೀಲ ತಂತ್ರಗಳನ್ನು ಬಳಸಿ, ಮಕ್ಕಳ ಮನೋವಿಕಾಸಕ್ಕೆ ಮೊದಲ ಆದ್ಯತೆ ನೀಡಬೇಕು, ಜ್ಞಾಪಕಶಕ್ತಿ ಹೆಚ್ಚಿಸುವ, ಏಕಾಗ್ರತೆ ಮೂಡಿಸುವ ನಿಟ್ಟಿನಲ್ಲಿ ಹೊಸ ಪ್ರಯೋಗಗಳನ್ನು ಕೈಗೊಳ್ಳಬೇಕು. ಆಟ, ಪಠ್ಯೇತರ ಚಟುವಟಿಕೆಗಳ ಮೂಲಕ ಏಕಾಗ್ರತೆ ಹೆಚ್ಚಿಸಲು ಪ್ರಯತ್ನಿಸಬೇಕು.
  • ಹಠ, ಭಯ, ಮೊಂಡುತನವೂ ಮಕ್ಕಳಲ್ಲಿ ಕಂಡುಬರುತ್ತಿದೆ. ಈ ನಿಟ್ಟಿನಲ್ಲಿ ಆಪ್ತ ಸಮಾಲೋಚಕರ ನೆರವು ಪಡೆದು, ಮಕ್ಕಳ ವರ್ತನೆಯನ್ನು ತಿದ್ದಬೇಕು.
  • ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಕರೆತರಲು ಬರೀ ಸರ್ಕಾರದ ಪ್ರಯತ್ನಗಳು ಸಾಕಾಗುವುದಿಲ್ಲ. ಸಮುದಾಯದ ಸಹಭಾಗಿತ್ವವೂ ಅಗತ್ಯ. ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನಪ್ರತಿನಿಧಿಗಳು, ಸ್ಥಳೀಯ ಮುಖಂಡರು, ಶಿಕ್ಷಕರು ಎಲ್ಲರೂ ಒಟ್ಟಾಗಿ ಇಂಥ ಮಕ್ಕಳನ್ನು ಗುರುತಿಸಿ, ಶಾಲೆಗೆ ಕರೆತರಬೇಕು.

ಹೀಗಾಯಿತು ನಷ್ಟ

  • ಲಾಕ್​ಡೌನ್ ಪರಿಣಾಮ ಪ್ರತಿ ಏಳರಲ್ಲಿ ಒಂದು ಮಗುವಿನ ಶಾಲಾ ಶಿಕ್ಷಣದ ಅವಧಿ ಸರಾಸರಿ ಏಳು ತಿಂಗಳು ಕಡಿಮೆಯಾಯಿತು.
  • ಮಕ್ಕಳ ಮೂಲಭೂತ (ಬೇಸಿಕ್) ಶಿಕ್ಷಣದ ಅವಧಿ 7.9 ವರ್ಷದಿಂದ 7.2 ವರ್ಷಕ್ಕೆ ತಗ್ಗಿತು.
  • ಬಾಲಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಶಾಲೆ ತೊರೆದಿದ್ದು, ಮುಂದೆ ಇದು ಅಸಮಾನತೆ, ಸಾಮಾಜಿಕ ಸಮಸ್ಯೆಗಳಿಗೆ ಕಾರಣವಾಗಬಹುದು.

ಪಾಲಕರ ಮೇಲೂ ಇದೆ ಜವಾಬ್ದಾರಿ

  • ಬರೀ ಶಿಕ್ಷಕರನ್ನು, ಶೈಕ್ಷಣಿಕ ಸಂಸ್ಥೆಗಳನ್ನು ದೂರದೆ ಪಾಲಕರು ಮಕ್ಕಳಿಗೆ ಹೆಚ್ಚಿನ ಸಮಯ, ಅದರಲ್ಲೂ ಗುಣಾತ್ಮಕ ಸಮಯ ನೀಡುವುದು ಅಗತ್ಯ.
  • ಮಕ್ಕಳ ಕಲಿಕೆಯನ್ನು ಚುರುಕುಗೊಳಿಸಲು ಅದಕ್ಕೆ ಪೂರಕ ಚಟುವಟಿಕೆಗಳಲ್ಲಿ ಅವರನ್ನು ತೊಡಗಿಸಬೇಕು.
  • ಓದು, ಬರಹದ ಅವಧಿಯನ್ನು ಕ್ರಮೇಣ ಹೆಚ್ಚಿಸುತ್ತ, ಆಸಕ್ತಿ ಮೂಡಿಸಬೇಕು.
  • ಬೇರೆ ಮಕ್ಕಳೊಂದಿಗೆ ಹೋಲಿಕೆ ಮಾಡದೆ ಇವರ ಸಾಮರ್ಥ್ಯ ಗುರುತಿಸಿ, ಅದನ್ನು ಮಕ್ಕಳಿಗೆ ಮನದಟ್ಟು ಮಾಡಿಕೊಡುವುದು ಪಾಲಕರ ಕರ್ತವ್ಯ.

ಪ್ರಬಲ ಇಚ್ಛಾಶಕ್ತಿ ಪ್ರದರ್ಶಿಸಬೇಕು

ಕೋವಿಡ್-19ರ ಸಂಕಷ್ಟದಿಂದ ಭಾರೀ ಬಿಕ್ಕಟ್ಟಿಗೆ ಒಳಗಾಗಿರುವ ಸಾರ್ವಜನಿಕ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಮರಳಿ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಮೂರು ಪ್ರಮುಖ ಸವಾಲುಗಳಿವೆ. ಒಂದು- ಶಾಲೆಯಿಂದ ಹೊರಗಿರುವ ಎಲ್ಲ ಮಕ್ಕಳನ್ನೂ ಶಿಕ್ಷಣ ಹಕ್ಕು ಕಾಯ್ದೆ ಅನ್ವಯ ಮತ್ತೆ ಶಾಲೆಗೆ ತರುವುದು. ಮಕ್ಕಳು ಶಾಲೆಗೆ ಬಂದ ನಂತರ ವಿಶೇಷ ಕಲಿಕಾ ಕಾರ್ಯಕ್ರಮದ ಮೂಲಕ ಅವರ ವಯಸ್ಸು ಮತ್ತು ತರಗತಿಗೆ ಅನುಗುಣವಾಗಿ ಅಲ್ಪ ಮತ್ತು ದೀರ್ಘಕಾಲಿಕ ಸೇತುಬಂಧ ಕಾರ್ಯಕ್ರಮವನ್ನು ರೂಪಿಸಿ ಜಾರಿಗೊಳಿಸುವುದು.

ಎರಡನೇ ಸವಾಲು- ಸಾವಿರಾರು ಮಕ್ಕಳು ಶಾಲೆ ತೊರೆದು ಬಾಲಕಾರ್ವಿುಕ, ಜೀತಕಾರ್ವಿುಕ, ಬಾಲ್ಯವಿವಾಹ ಇತ್ಯಾದಿ ಸಾಮಾಜಿಕ ಅನಿಷ್ಠ ಪದ್ಧತಿಗೆ ಒಳಗಾಗಿರುವ ಸಂಭವನೀಯತೆ ಹೆಚ್ಚಿದೆ. ಆ ಮಕ್ಕಳನ್ನು ವಿಶೇಷ ಉತ್ತೇಜಕಗಳ ಮೂಲಕ ಮತ್ತೆ ಶಾಲಾ ಮುಖ್ಯವಾಹಿನಿಗೆ ತರಲು ರಾಜ್ಯದಲ್ಲಿ ‘ಮರಳಿ ಶಾಲೆಗೆ’ ಅಭಿಯಾನವನ್ನು ಸಾಮಾಜಿಕ ಆಂದೋಲನದ ರೀತಿಯಲ್ಲಿ ನಡೆಸಲು ಮತ್ತು ಶಾಲಾಹಂತದಲ್ಲಿಯೇ ವಿಶೇಷ ಸೇತುಬಂಧ ಹಾಗೂ ವಿಶೇಷ ಕಲಿಕಾ ಕಾರ್ಯಕ್ರಮಗಳನ್ನು ರೂಪಿಸಲು ಪ್ರತೀ ಶಾಲೆಗೆ ವಿಶೇಷ ಅನುದಾನ ಒದಗಿಸಬೇಕು.

ಮೂರು-ಶಾಲೆಗಳನ್ನು ದೀರ್ಘಾವಧಿ ಮುಚ್ಚಿದ ಪರಿಣಾಮ ಮಕ್ಕಳು ಕಲಿಕೆಯಿಂದ ವಂಚಿತರಾಗಿದ್ದಾರೆ. ಗ್ರಾಮೀಣ ವಲಯದ ಅವಕಾಶ ವಂಚಿತ ಸಮುದಾಯದ ಮಕ್ಕಳು, ವಿಶೇಷವಾಗಿ ಹೆಣ್ಣುಮಕ್ಕಳ ಕಲಿಕೆಯನ್ನು ಮೂಲಸ್ಥಿತಿಗೆ ತಂದು ಗುಣಾತ್ಮಕ ಶಿಕ್ಷಣವನ್ನು ಖಾತರಿಗೊಳಿಸಲು ಅಗತ್ಯವಾದ ಸೇತುಬಂಧ ಕಾರ್ಯಕ್ರಮ, ಪೂರಕ ಕಲಿಕಾ ಚಟುವಟಿಕೆ, ಸಮುದಾಯ ಕಲಿಕಾ ಕೇಂದ್ರಗಳನ್ನು ಸ್ಥಾಪಿಸಬೇಕು. ‘ಮರಳಿ ಕಲಿಕೆಗೆ’ ಕಲಿಕಾ ಕಾರ್ಯಕ್ರಮವನ್ನು ಸಾಮೂಹಿಕವಾಗಿ ಹಮ್ಮಿಕೊಳ್ಳಲು ಮತ್ತು ಮಕ್ಕಳಿಗೆ ಅಗತ್ಯವಾದ ಪೂರಕ ಕಲಿಕಾ ಸಾಮಗ್ರಿ ಮತ್ತು ಕಾರ್ಯಪುಸ್ತಕಗಳನ್ನು ಒದಗಿಸಲು ಕ್ರಮವಹಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net