

ಉತ್ತರ ಭಾರತದ ಎರಡು ಪ್ರಮುಖ ಯಾತ್ರಾಸ್ಥಳಗಳಾದ ಹರಿದ್ವಾರದ ಮಾನಸಾದೇವಿ ಮಂದಿರ ಮತ್ತು ಬಾರಾಬಂಕಿಯ ಅವಸಾನೇಶ್ವರ ದೇವಾಲಯದಲ್ಲಿ ಒಂದೇ ದಿನದ ಅಂತರದಲ್ಲಿ ಸಂಭವಿಸಿದ ಕಾಲ್ತುಳಿತ ಘಟನೆಗಳು ದೇಶದ ಧಾರ್ವಿುಕ ಕೇಂದ್ರಗಳಲ್ಲಿ ಜನಸಂದಣಿ ನಿರ್ವಹಣೆಯ ಅವ್ಯವಸ್ಥೆಗೆ ಮತ್ತೊಮ್ಮೆ ಕನ್ನಡಿ ಹಿಡಿದಿವೆ. ಈ ದುರಂತಗಳು ಸ್ಥಳೀಯ ಸರ್ಕಾರ ಮತ್ತು ದೇವಾಲಯಗಳ ಆಡಳಿತ ಮಂಡಳಿಗಳ ಗಂಭೀರ ಲೋಪಗಳಿಗೆ ಸಾಕ್ಷಿಯಾಗಿವೆ.
ಹರಿದ್ವಾರದಲ್ಲಿ ವಿದ್ಯುತ್ ಶಾರ್ಟ್ಸರ್ಕ್ಯೂಟ್ನ ವದಂತಿಯಿಂದ ಉಂಟಾದ ಕಾಲ್ತುಳಿತದಲ್ಲಿ ಎಂಟು ಜನರ ಪ್ರಾಣಹಾನಿಯಾಗಿದೆ. ಮರುದಿನ, ಬಾರಾಬಂಕಿಯಲ್ಲಿ ಕೋತಿಗಳು ಕೇಬಲ್ಗೆ ಹಾನಿ ಮಾಡಿದವೆಂಬ ವದಂತಿಯಿಂದ ಉಂಟಾದ ಕಾಲ್ತುಳಿತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಈ ಘಟನೆಗಳು ಧಾರ್ವಿುಕ ಕೇಂದ್ರಗಳಲ್ಲಿ ಸುರಕ್ಷತೆ ಮತ್ತು ನಿರ್ವಹಣೆಯ ಕೊರತೆಯನ್ನು ಎತ್ತಿತೋರಿಸುತ್ತಿವೆ. ದೇವಾಲಯಗಳು, ಜಾತ್ರೆಗಳು ಮತ್ತು ಧಾರ್ವಿುಕ ಮೇಳಗಳಲ್ಲಿ ಸಾವಿರಾರು ಭಕ್ತರು ಸೇರುವುದು ಸಾಮಾನ್ಯ. ಇಂತಹ ಸಂದರ್ಭಗಳಲ್ಲಿ ತಾತ್ಕಾಲಿಕ ವಿದ್ಯುತ್ ವ್ಯವಸ್ಥೆಗಾಗಿ ತಂತಿಗಳನ್ನು ಹೇಗೆಂದರೆ ಹಾಗೆ ಎಳೆಯುವುದು, ಟ್ರಾನ್ಸ್ಫಾರ್ಮರ್ಗಳನ್ನು ಸ್ಥಾಪಿಸುವುದು ಮುಂತಾದ ಕೆಲಸಗಳು ಸಾಮಾನ್ಯ.
ಆದರೆ, ಈ ಸಂದರ್ಭದಲ್ಲಿ ಸುರಕ್ಷತೆಯ ಬಗ್ಗೆ ಯಾರೂ ಗಮನ ಹರಿಸುವುದಿಲ್ಲ. ವಿದ್ಯುತ್ ಶಾರ್ಟ್ಸರ್ಕ್ಯೂಟ್ ಅಥವಾ ಕೇಬಲ್ಗೆ ಹಾನಿಯಂತಹ ಸಮಸ್ಯೆಗಳು ಉಂಟಾದಾಗ ತಕ್ಷಣ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ವ್ಯವಸ್ಥೆ ಇರುವುದಿಲ್ಲ. ಇದಕ್ಕಿಂತ ಹೆಚ್ಚಾಗಿ, ವದಂತಿಗಳು ತ್ವರಿತವಚಾಗಿ ಹರಡಿ ಜನರಲ್ಲಿ ಆತಂಕ ಸೃಷ್ಟಿಯಾಗಿ ಕಾಲ್ತುಳಿತದಂತಹ ದುರಂತಗಳು ಸಂಭವಿಸುತ್ತವೆ. ಈ ಎರಡೂ ಘಟನೆಗಳು ವದಂತಿಗಳಿಂದ ಉಂಟಾದ ಆತಂಕದಿಂದಲೇ ಸಂಭವಿಸಿವೆ ಎಂಬುದು ಗಮನಾರ್ಹ. ಇಂತಹ ದುರಂತಗಳನ್ನು ತಡೆಗಟ್ಟಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಸಮಗ್ರ ಜನಸಂದಣಿ ನಿರ್ವಹಣಾ ಮಾರ್ಗಸೂಚಿಗಳನ್ನು ರೂಪಿಸಬೇಕು.
ಈ ಮಾರ್ಗಸೂಚಿಗಳು ಕೇವಲ ಕಾಗದದ ಮೇಲಿರದೆ, ಕಟ್ಟುನಿಟ್ಟಾಗಿ ಜಾರಿಗೆ ಬರಬೇಕು. ಉದಾಹರಣೆಗೆ, ದೇವಾಲಯಗಳಲ್ಲಿ ವಿದ್ಯುತ್ ವ್ಯವಸ್ಥೆಯ ಸುರಕ್ಷತೆಗೆ ಕಟ್ಟುನಿಟ್ಟಾದ ನಿಯಮಗಳು, ತುರ್ತು ಸಂದರ್ಭದಲ್ಲಿ ವಿದ್ಯುತ್ ಸಂಪರ್ಕವನ್ನು ತಕ್ಷಣ ಕಡಿತಗೊಳಿಸುವ ಸ್ವಯಂಚಾಲಿತ ವ್ಯವಸ್ಥೆ, ಜನರಲ್ಲಿ ಆತಂಕವನ್ನು ತಡೆಗಟ್ಟಲು ತ್ವರಿತ ಸಂವಹನ ವ್ಯವಸ್ಥೆಯನ್ನು ಸ್ಥಾಪಿಸಬೇಕು. ಜೊತೆಗೆ, ದೇವಾಲಯದ ಆಡಳಿತ ಮಂಡಳಿಗಳಿಗೆ ಜನಸಂದಣಿ ನಿರ್ವಹಣೆಯ ತರಬೇತಿ, ತುರ್ತು ಘಟಕಗಳ ಸ್ಥಾಪನೆ, ಭಕ್ತರಿಗೆ ಸುರಕ್ಷತಾ ಮಾಹಿತಿಯನ್ನು ಒದಗಿಸುವ ಕಾರ್ಯಕ್ರಮಗಳು ಅಗತ್ಯ. ಇದರ ಜೊತೆಗೆ, ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿಗಳು ಹರಡುವುದನ್ನು ನಿಯಂತ್ರಿಸಲು ಕೂಡ ಕ್ರಮ ಕೈಗೊಳ್ಳಬೇಕು.
ಧಾರ್ವಿುಕ ಕೇಂದ್ರಗಳಲ್ಲಿ ಸಾಮಾನ್ಯವಾಗಿ ಭಕ್ತರ ಸಂಖ್ಯೆ ಹೆಚ್ಚಿರುವುದರಿಂದ, ಜಾತ್ರೆ-ಮೇಳದ ಸಮಯದಲ್ಲಿ ಸಿಬ್ಬಂದಿಯ ಸಂಖ್ಯೆಯನ್ನು ಹೆಚ್ಚಿಸಿ, ಜನಸಂದಣಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಭಕ್ತರ ಭಾವನೆಗಳಿಗೆ ಗೌರವ ಕೊಡುವುದರ ಜೊತೆಗೆ, ಅವರ ಸುರಕ್ಷತೆಯನ್ನು ಖಾತರಿಪಡಿಸುವುದು ಸರ್ಕಾರ ಮತ್ತು ದೇವಾಲಯಗಳ ಆಡಳಿತ ಮಂಡಳಿಗಳ ಆದ್ಯ ಕರ್ತವ್ಯ. ಈ ದುರಂತಗಳಿಂದ ಪಾಠ ಕಲಿತು, ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಮಾಡಲು ಸಮಗ್ರ ಮಾರ್ಗಸೂಚಿ ರೂಪಿಸಿ, ಅವುಗಳ ಅನುಷ್ಠಾನಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯ.