ಚಕ್ರವರ್ತಿ ಲಲಿತಾದಿತ್ಯ, ನಾವು ತಿಳಿಯದ ಐತಿಹಾಸಿಕ ಸತ್ಯ

sdaasdsf
Published on
ಕಾಶ್ಮೀರ ಆರಂಭದಿಂದಲೂ ಶಿಕ್ಷಣ, ಸಂಶೋಧನೆ, ವಿಜ್ಞಾನ, ಕಲೆ, ಶಿಲ್ಪಕಲೆಗಳ ಜ್ಞಾನಪೀಠವಾಗಿತ್ತು. ಲಲಿತಾದಿತ್ಯನ ಸಾಮ್ರಾಜ್ಯ ಮೊಘಲರು ಆಳಿದ ಭೂಭಾಗಕ್ಕಿಂತ ವಿಸ್ತಾರವಾಗಿತ್ತು. ತನ್ನ ಆಡಳಿತಾವಧಿಯಲ್ಲಿ ಆತ ಅನೇಕ ರಾಜವಂಶಗಳನ್ನು ಸೋಲಿಸಿ, ರಾಜ್ಯಗಳನ್ನು ವಶಪಡಿಸಿಕೊಂಡರೂ, ಯಾವುದೇ ಸಂಸ್ಕೃತಿ, ಕಲೆ, ಪರಂಪರೆಗಳನ್ನು ನಾಶಪಡಿಸಲಿಲ್ಲ. ಕೊಳ್ಳೆ ಹೊಡೆಯಲಿಲ್ಲ.
ದೇವಭೂಮಿ ಕಾಶ್ಮೀರದಲ್ಲೊಂದು ಮುಂಜಾನೆ ಕಶ್ಯಪ ಮಹರ್ಷಿಗಳು ತಮ್ಮ ದಂಡ, ಕಮಂಡಲ, ಉಡುಗೆಗಳನ್ನು ಕಳಚಿಟ್ಟು ಸರೋವರದಲ್ಲಿ ಸ್ನಾನ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಅದೇ ದಾರಿಯಲ್ಲಿ ಸಾಗುತ್ತಿದ್ದ ಪಾಕಿಸ್ತಾನದವರಿಬ್ಬರು ಕಶ್ಯಪರಿಗೆ ಕೀಟಲೆ ಮಾಡುವ ಉದ್ದೇಶದಿಂದ ದಂಡೆ ಮೇಲಿದ್ದ ಕಮಂಡಲ, ಉಡುಗೆಗಳನ್ನು ಎತ್ತಿಕೊಂಡು ಓಡತೊಡಗಿದರು!

ಇದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೆಸರಲ್ಲಿ ಪ್ರಚಲಿತದಲ್ಲಿರುವ ಒಂದು ಕಥೆ! 1994ರಲ್ಲಿ ಭಾರತದ ಪ್ರತಿನಿಧಿಯಾಗಿ ವಿಶ್ವಸಂಸ್ಥೆಗೆ ತೆರಳಿದ್ದಾಗ ವಾಜಪೇಯಿ ತಮ್ಮ ಭಾಷಣದಲ್ಲಿ ಹೇಳಿದ್ದರೆಂಬ; ವಾಸ್ತವ ಮತ್ತು ತರ್ಕಕ್ಕೆ ಹತ್ತಿರವೆನಿಸುವ ಈ ಕಥೆಯನ್ನು ನಂಬದಿರುವುದಕ್ಕೆ ಕಾರಣವೇ ಇಲ್ಲ. ಅದರ ಪ್ರಕಾರ, ಪಾಕಿಗಳು ಕಶ್ಯಪರ ಕಮಂಡಲ ಎತ್ತಿಕೊಂಡು ಓಡಿದರು ಎಂದು ವಾಜಪೇಯಿ ಹೇಳುತ್ತಿರುವಾಗ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಪ್ರತಿನಿಧಿ ಆಕ್ಷೇಪವೆತ್ತಿ, ‘ಕಶ್ಯಪರು ಇದ್ದಿದ್ದು ಸಾವಿರಾರು ವರ್ಷಗಳ ಹಿಂದೆ. ಆಗ ಪಾಕಿಸ್ತಾನವೆಲ್ಲಿತ್ತು? ನೀವು ಅಸಂಬದ್ಧ ಕಥೆ ಹೇಳುತ್ತಿದ್ದೀರಿ’ ಎಂದು ಅಸಹನೆ ವ್ಯಕ್ತಪಡಿಸಿದರು. ಆಗ ವಾಜಪೇಯಿ ನಗುತ್ತ, ‘ನಾನು ಹೇಳುತ್ತಿರುವುದೂ ಅದನ್ನೇ... ಕಾಶ್ಮೀರ ಸಹಸ್ರಾರು ವರ್ಷಗಳಿಂದ ಅಖಂಡ ಭಾರತದ ದೇವಭೂಮಿ. ಪಾಕಿಸ್ತಾನ ಉದಯವಾಗಿದ್ದು ಕೆಲವು ದಶಕಗಳ ಹಿಂದೆ’ ಎಂದಾಗ ಸಭೆ ಚಪ್ಪಾಳೆಯೊಂದಿಗೆ ವಾಜಪೇಯಿ ಮಾತುಗಳನ್ನು ಅನುಮೋದಿಸಿತ್ತು.

ಲಗಧ್, ಚರಕ, ವಿಷ್ಣು ಶರ್ಮ, ವಾಗ್ಭಟ, ಭಾಮಹ, ಆನಂದವರ್ಧನ, ರುದ್ರಟ, ಅಭಿನವ ಗುಪ್ತ, ಕ್ಷೇಮೇಂದ್ರ, ಬಿಲ್ಹಣ, ಕಲ್ಹಣ, ಜಲ್ಹಣ, ಕೇಶವ ಭಟ್ಟಾಚಾರ್ಯ, ಮಮ್ಮಟ, ರಲ್ಹಟ, ಶಿಲ್ಹಣ, ಮಲ್ಹಣ, ರುಯ್ಯಕ, ಕುಂತಕ, ರುಚಕ, ಉದ್ಭಟ, ಶಂಕುಕ, ಗುಣಾದಯ, ಸೋಮದೇವ, ಪಿಂಗಳ, ಜಯದತ್ತ, ವಾಮನ, ಕ್ಷೀರಸ್ವಾಮಿ, ಪುಷ್ಪದಂತ... ಇವರೆಲ್ಲ ಕಾಶ್ಮೀರದ ಪ್ರಸಿದ್ಧ ಸಂಸ್ಕೃತ ವಿದ್ವಾಂಸರು. ಅನಾದಿ ಕಾಲದಿಂದ ಕಾಶ್ಮೀರ ಜ್ಞಾನಭೂಮಿ. ಕಾಶ್ಮೀರ ಪುರವಾಸಿನಿ ಎಂದು ಮಾತೆ ಸರಸ್ವತಿಯನ್ನು ಹಾಡಿಹೊಗಳಿರುವುದೂ ಇದೇ ಕಾರಣಕ್ಕೆ. ಕೇರಳದ ಕಾಲಡಿಯಿಂದ ಭಾರತದ ಭೂಶಿರ ಕಾಶ್ಮೀರಕ್ಕೆ ಶಂಕರಾಚಾರ್ಯರು ಕಾಲ್ನಡಿಗೆಯಲ್ಲಿ ತೆರಳಿದ್ದೂ ಇದೇ ಜ್ಞಾನಸರಸ್ವತಿಯನ್ನು ಹುಡುಕಿಕೊಂಡು.

ಇತ್ತೀಚೆಗೆ ಬಿಡುಗಡೆಯಾಗಿರುವ ‘ಕಶ್ಮೀರ್ ಫೈಲ್ಸ್’ ಚಿತ್ರದಲ್ಲೊಂದು ಸನ್ನಿವೇಶ. ‘ಕಾಶ್ಮೀರವನ್ನು ಆಳಿದ ಪ್ರಸಿದ್ಧ ವ್ಯಕ್ತಿ ಯಾರು?’ ಎಂದು ವಿಶ್ವವಿದ್ಯಾಲಯದ ಅಧ್ಯಾಪಕಿಯೊಬ್ಬರು ಕೇಳಿದಾಗ ವಿದ್ಯಾರ್ಥಿ ‘ಷೇಖ್ ಅಬ್ದುಲ್ಲ’ ಎಂದು ಉತ್ತರಿಸುತ್ತಾನೆ. ಅಂದರೆ, ಅಷ್ಟರ ಮಟ್ಟಿಗೆ ನಮ್ಮನ್ನು ಅಜ್ಞಾನ ಆವರಿಸಿದೆ. ಇದು ವಿದ್ಯಾರ್ಥಿಗಳ ತಪ್ಪಲ್ಲ. ನಮ್ಮ ಶಿಕ್ಷಣ ವ್ಯವಸ್ಥೆಯ ದೋಷ. ಭಾರತದ ನೈಜ ಇತಿಹಾಸವನ್ನು ಮರೆಮಾಚಿ ಭಾರತದ ಮೇಲಿನ ದಾಳಿಕೋರರನ್ನು, ಲೂಟಿಕೋರರನ್ನು, ವಿಧ್ವಂಸಕರನ್ನು ಗ್ರೇಟ್, ಮಹಾನ್ ಎಂದು ವೈಭವೀಕರಿಸುವ ಮಿಥ್ಯಕಥೆಗಳನ್ನು ಪಠ್ಯದೊಳಗೆ ತುರುಕಿ ತಲೆಮಾರುಗಳ ಮನೋಸ್ಥಿತಿಯನ್ನು ಕೆಡಿಸುತ್ತ ಬಂದ ಸರ್ಕಾರಗಳ ಮಹಾಪ್ರಮಾದ ಇದು. ಲಲಿತಾದಿತ್ಯ ಮುಕ್ತಪೀಡ ಕಾಶ್ಮೀರವನ್ನು ಆಳಿದ ಅತ್ಯಂತ ಪ್ರಖ್ಯಾತ ಚಕ್ರವರ್ತಿ. ಅಖಂಡ ಭಾರತವನ್ನು ತನ್ನ ಸಾಮ್ರಾಜ್ಯವಾಗಿಸಿಕೊಂಡಿದ್ದ ಮಹಾಸೇನಾನಿ ಈತ. ದಕ್ಷಿಣದಲ್ಲಿ ಕಾವೇರಿಯಿಂದ ಚೀನಾ, ಉಜ್ಬೆಕಿಸ್ತಾನಗಳವರೆಗೆ ಬಹುದೊಡ್ಡ ಭೂಭಾಗವನ್ನು ಆಳಿದ ಮಹಾರಾಜ ಈತ. ಆದರೆ, ನಮ್ಮ ಪಠ್ಯಗಳಲ್ಲಿ ಈಗಲೂ ಹೇಳಿಕೊಡುತ್ತಿರುವುದು ‘ಅಕ್ಬರ್ ದಿ ಗ್ರೇಟ್’ ಎಂದು. ಲಲಿತಾದಿತ್ಯನ ಬಗ್ಗೆ ಉಲ್ಲೇಖವಿಲ್ಲ.

ಲಲಿತಾದಿತ್ಯ ಮಾತ್ರವೇ ಅಲ್ಲ. ಶಕರು, ಯವನರನ್ನು ಸೋಲಿಸಿ 78ನೇ ಇಸವಿಯಲ್ಲಿ ಭಾರತದ ರಾಷ್ಟ್ರೀಯ ಪಂಚಾಂಗ ಶಾಲಿವಾಹನ ಶಕ ವರ್ಷವನ್ನು ಆರಂಭಿಸಿದ ಶಾತವಾಹನರ ಶ್ರೇಷ್ಠ ದೊರೆ ಗೌತಮಿಪುತ್ರ ಶಾತಕರ್ಣಿಯ ಬಗ್ಗೆ ನಮಗೆ ಹೆಚ್ಚೇನೂ ತಿಳಿದಿಲ್ಲ. ಕ್ರಿ.ಪೂ. 1-2ನೇ ಶತಮಾನದಲ್ಲಿ ಕಳಿಂಗವನ್ನಾಳಿದ ಒಡಿಶಾದ ಸರ್ವಶ್ರೇಷ್ಠ ಮಹಾಮೇಘವಾಹನ ಚಕ್ರವರ್ತಿ ಖರವೇಲ ಬಗ್ಗೆಯೂ ನಾವು ಎಲ್ಲಿಯೂ ಓದಿಲ್ಲ. ಹಾಲಿ ಪಾಕಿಸ್ತಾನದಲ್ಲಿರುವ ಸಿಯಾಲ್​ಕೋಟ್ ಅನ್ನು ರಾಜಧಾನಿಯಾಗಿಸಿಕೊಂಡು ಆಗ್ನೇಯ ಭಾರತವನ್ನು ಆಳಿದ ಕ್ರಿ.ಪೂರ್ವದ ದೊರೆ ಮಿಲಿಂದನ ಬಗ್ಗೆಯೂ ನಮಗೇನೂ ಗೊತ್ತಿಲ್ಲ. 4ನೇ ಶತಮಾನದಲ್ಲಿ ಹೂಣರನ್ನು ಹೆಡೆಮುರಿ ಕಟ್ಟಿ ವಿದೇಶಿ ಆಕ್ರಮಣದಿಂದ ಭಾರತವನ್ನು ಕಾಪಾಡಿದ ಗುಪ್ತ ಸಾಮ್ರಾಜ್ಯದ ಶ್ರೇಷ್ಠ ಸಾಮ್ರಾಟ ಸ್ಕಂಧಗುಪ್ತನ ಬಗ್ಗೆಯೂ ನಾವು ತಿಳಿದಿರುವುದು ಚೂರುಪಾರು ಅಷ್ಟೇ. ಭಾರತವನ್ನು ಅತ್ಯಂತ ದೀರ್ಘ ಅವಧಿಗೆ ಆಳಿದ ರಾಜವಂಶ ಚೋಳ ಸಾಮ್ರಾಜ್ಯದ ಸಾಮ್ರಾಟ, ವಿಶ್ವದಲ್ಲೇ ಅತ್ಯಂತ ಪ್ರಬಲ ನೌಕಾಪಡೆಯನ್ನು ಹೊಂದಿದ್ದ ರಾಜ ರಾಜ ಚೋಳನ ಬಗ್ಗೆಯೂ ನಮ್ಮ ಇತಿಹಾಸ ಪುಸ್ತಕಗಳು ಹೇಳುವುದು ಅಲ್ಪ. ನರ್ಮದಾ ದಂಡೆಯ ಮೇಲೆ ನಡೆದ ಮಹಾಸಂಗ್ರಾಮದಲ್ಲಿ ಮಹಾಸೇನಾನಿ ಹರ್ಷವರ್ಧನನನ್ನು ಸೋಲಿಸಿದ ಕಲ್ಯಾಣಿ ಚಾಲುಕ್ಯ ಚಕ್ರವರ್ತಿ ಇಮ್ಮಡಿ ಪುಲಕೇಶಿಯ ಸಾಹಸಗಾಥೆಗಳು ನಮ್ಮ ಸ್ಮೃತಿಯಿಂದ ಅಳಿಸಿಹೋಗುತ್ತಿವೆ.

ಮಹಾ ಮಲ್ಲನೆಂದು ಹೆಸರಾಗಿದ್ದ ಪಲ್ಲವ ದೊರೆ ನರಸಿಂಹವರ್ಮನ್ ಬಗ್ಗೆಯೂ ವಿಸ್ಮೃತಿ. ಕನ್ನಡ ಕಾವ್ಯಮಾರ್ಗದ ಆರಂಭದಲ್ಲಿ ಲಕ್ಷದೀಪೋತ್ಸವದ ಬೆಳಕು ಬೆಳಗಿದ ಕವಿರಾಜಮಾರ್ಗದ ಕತೃ, ದಕ್ಷಿಣ ಭಾರತದ ಅಶೋಕ ಎಂದೇ ಹೆಸರಾದ ಸರ್ವಶ್ರೇಷ್ಠ ರಾಷ್ಟ್ರಕೂಟ ಚಕ್ರವರ್ತಿ ಅಮೋಘವರ್ಷ ನೃಪತುಂಗನ 64 ವರ್ಷಗಳ ರಾಜ್ಯಭಾರದ ಸುವರ್ಣಯುಗದ ಬಗ್ಗೆಯೂ ನಾವು ಅರಿತಿರುವುದು ಅತ್ಯಲ್ಪ. ಅದೇ ರೀತಿ ಘಜ್ನಿ ಸೇನಾನಿ ಘಾಜಿ ಸಲಾರ್ ಸಯ್ಯದ್ ಮಸೂದ್​ನನ್ನು ಸೋಲಿಸಿದ ಶ್ರಾವಸ್ಥಿಯ ಸುಹೇಲ್ ದೇವನ ಬಗ್ಗೆ, 1741ರಲ್ಲಿ ಡಚ್ಚರನ್ನು ಸೋಲಿಸಿ ಭಾರತದಿಂದ ಹೊರಗಟ್ಟಿದ ತಿರುವನಂತಪುರದ ದೊರೆ ಮಾರ್ತಾಂಡ ವರ್ಮನ ಬಗ್ಗೆ, ಪೋರ್ಚುಗೀಸರನ್ನು ಹಲವು ಬಾರಿ ಸೋಲಿಸಿ ಸುದೀರ್ಘ 40 ವರ್ಷಗಳ ಕಾಲ ತುಳುನಾಡು ಸಂರಕ್ಷಣೆ ಮಾಡಿದ ರಾಣಿ ಅಬ್ಬಕ್ಕನ ಬಗ್ಗೆ, ತುಘಲಕ್ ಸೇನೆಯನ್ನು ಮಣಿಸಿ, ಮುಹಮದ್ ಬಿನ್ ತುಘಲಕ್​ನನ್ನು ಸೆರೆಹಿಡಿದಿದ್ದ ಮೇವಾರದ ರಾಜ ರಾಣಾ ಹಮ್ಮೀರ್ ಸಿಂಗ್ ಬಗ್ಗೆ, ದಾಳಿಕೋರ ಅರಬ್ಬರನ್ನು ಸೋಲಿಸಿದ ಗುರ್ಜರ ಪ್ರತಿಹಾರ ದೊರೆ ಒಂದನೇ ನಾಗಭಟನ ಬಗ್ಗೆ, 1671ರ ಸರಾಯ್ಘಾಟ್ ಯುದ್ಧದಲ್ಲಿ ಮೊಘಲ್ ಸೇನೆಯನ್ನು ಹೆಡೆಮುರಿ ಕಟ್ಟಿ ಔರಂಗಜೇಬನಿಗೆ ಮುಖಭಂಗ ಉಂಟು ಮಾಡಿದ ಅಸ್ಸೋಂನ ಅಹೊಮ್ ದೊರೆ ಲಚಿತ್ ಬೋರ್ಫಕನ್ ಬಗ್ಗೆ, ಮಧುರೈ ತಿರುಮಲ ನಾಯಕನ ಬಗ್ಗೆ, ಪೇಶ್ವೆ ಬಾಲಾಜಿ ವಿಶ್ವನಾಥನ ಬಗ್ಗೆ, ರಾಣಿ ರುದ್ರಮದೇವಿ ಬಗ್ಗೆ, ರುದ್ರದಮನ, ಕಲಚೂರಿ ಲಕ್ಷ್ಮೀಕರ್ಣನ ಬಗ್ಗೆ... ಹೀಗೆ ಭಾರತವರ್ಷದ ಕೀರ್ತಿಪತಾಕೆಯನ್ನು ಸಹಸ್ರಾರು ವರ್ಷಗಳಿಂದ ಮೆರೆಸಿದ ರಾಜಮಹಾರಾಜರ ಬಗ್ಗೆ ನಾವು ಪಠ್ಯದಲ್ಲಿ ಕಲಿತು ತಿಳಿದಿರುವುದು ಏನೇನೂ ಇಲ್ಲ. ಇತಿಹಾಸವನ್ನೇ ತಿಳಿಯದವರು ಭವಿಷ್ಯ ರೂಪಿಸುವುದಾದರೂ ಹೇಗೆ? ಭಾರತವನ್ನು ಕೊಳ್ಳೆಹೊಡೆದು ಬಾಚಿಬಳಿದ ಖಿಲ್ಜಿಗಳು, ಮೊಘಲರು, ಬ್ರಿಟಿಷರನ್ನೇ ಶ್ರೇಷ್ಠರೆನ್ನುತ್ತಿದ್ದರೆ, ಈ ದಾಸ್ಯ ಮನೋಸ್ಥಿತಿಯಿಂದ ಹೊರಬರುವುದಾದರೂ ಯಾವಾಗ?

ಲಲಿತಾದಿತ್ಯ ಕಾಶ್ಮೀರವನ್ನಾಳಿದ ಕಕೋಟ ರಾಜವಂಶದ ಅತ್ಯಂತ ಶಕ್ತಿಶಾಲಿ ದೊರೆ. 12ನೇ ಶತಮಾನದ ಕವಿ, ಇತಿಹಾಸಕಾರ ಕಲ್ಹಣ ತನ್ನ ‘ರಾಜತರಂಗಿಣಿ’ ಕೃತಿಯಲ್ಲಿ ಲಲಿತಾದಿತ್ಯ ವಿಶ್ವವನ್ನೇ ಗೆದ್ದ ಚಕ್ರವರ್ತಿ ಎಂದು ಬಣ್ಣಿಸಿದ್ದಾನೆ. 724ರಿಂದ 761ರವರೆಗೆ 37 ವರ್ಷ ಕಾಲ ಸಾಮ್ರಾಜ್ಯವನ್ನಾಳಿದ ಲಲಿತಾದಿತ್ಯನ ಅವಧಿ ಕಾಶ್ಮೀರದ ಸುವರ್ಣಯುಗವಾಗಿತ್ತು. ಕಕೋಟ ಸಾಮ್ರಾಜ್ಯವನ್ನು ಸ್ಥಾಪಿಸಿದ್ದು ದುರ್ಲಭವರ್ಧನ. ಗೊಂದಾಡಿಯ ರಾಜ್ಯದ ಸೇನಾಧಿಕಾರಿಯಾಗಿದ್ದ ದುರ್ಲಭವರ್ಧನನ ಸಾಮರ್ಥ್ಯವನ್ನು ಮೆಚ್ಚಿ ದೊರೆ ಬಾಲಾದಿತ್ಯ ತನ್ನ ಮಗಳು ಅನಂಗಲೇಖಳನ್ನು ಕೊಟ್ಟು ಮದುವೆ ಮಾಡಿದ್ದ. ಬಾಲಾದಿತ್ಯನ ಸಾವಿನೊಂದಿಗೆ ಗೊಂದಾಡಿಯ ವಂಶ ನಿರ್ವಂಶವಾದಾಗ ದುರ್ಲಭವರ್ಧನ ತನ್ನದೇ ರಾಜ್ಯ ಕಟ್ಟಿದ. ಈತನ ಮಗ ಪ್ರತಾಪಾದಿತ್ಯನಿಗೆ ಮೂವರು ಗಂಡು ಮಕ್ಕಳು. ವಜ್ರಾದಿತ್ಯ ಚಂದ್ರಪೀಡ, ಉದಯಾದಿತ್ಯ ತಾರಾಪೀಡ ಮತ್ತು ಲಲಿತಾದಿತ್ಯ ಮುಕ್ತಪೀಡ. ರಾಷ್ಟ್ರಕೂಟ ಸಾಮ್ರಾಜ್ಯಕ್ಕೆ ಅಡಿಗಲ್ಲು ಹಾಕಿದ ದಂತಿದುರ್ಗ ಪಟ್ಟಕ್ಕೇರಲು ಲಲಿತಾದಿತ್ಯ ನೆರವಾಗಿರುವ ಬಗ್ಗೆ ಇತಿಹಾಸದಲ್ಲಿ ಉಲ್ಲೇಖಗಳಿವೆ. ಚಾಲುಕ್ಯರ ಸಾಮಂತನಾಗಿದ್ದ ಒಂದನೇ ಇಂದ್ರ ನಿಧನನಾದ ಬಳಿಕ ಆತನ ಸಹೋದರ ಒಂದನೇ ಕೃಷ್ಣ ಸಿಂಹಾಸನವೇರಲು ಬಯಸಿದ್ದ. ಆದರೆ, ಚಾಲುಕ್ಯ ರಾಜಕುಮಾರಿ, ಇಂದ್ರನ ರಾಣಿ ಭಾವಾಂಗನಾ (ಭಾವನಾಗ) ಕೋರಿಕೆಯಂತೆ ಲಲಿತಾದಿತ್ಯ, ದಂತಿದುರ್ಗನಿಗೆ ನೆರವಾಗುತ್ತಾನೆ. ಉತ್ತರ-ಪೂರ್ವದಲ್ಲಿ ಕನ್ಯಾಕುಬ್ಜ (ಈಗಿನ ಕನೌಜ್), ಕಳಿಂಗ (ಒಡಿಶಾ), ಗೌಡ (ಬಂಗಾಳ) ದೇಶಗಳನ್ನು ಗೆದ್ದು, ದಕ್ಷಿಣದಲ್ಲಿ ಕಾವೇರಿ ತೀರವರೆಗೆ ವಿಸ್ತರಿಸಿ, ಕೊಂಕಣ ತೀರದಲ್ಲಿ ಯುದ್ಧಗಳನ್ನು ಗೆಲ್ಲುತ್ತ ದ್ವಾರಕಾ, ಆವಂತಿವರೆಗೆ ಸಾಮ್ರಾಜ್ಯ ವಿಸ್ತರಿಸಿದ ಲಲಿತಾದಿತ್ಯ, ಪಂಜಾಬ್, ಅಫ್ಘಾನಿಸ್ತಾನ ಪ್ರದೇಶಗಳನ್ನು ವಶಕ್ಕೆ ತೆಗೆದುಕೊಂಡು, ಭಾರತದ ಮೇಲೆ ಆಕ್ರಮಣಕ್ಕೆ ಹೊಂಚುಹಾಕುತ್ತಿದ್ದ ಅರಬ್ಬರನ್ನು ಹೊಡೆದಟ್ಟುತ್ತಾನೆ. ಚೀನಾದ ತಾಂಗ್ ರಾಜವಂಶದೊಂದಿಗೆ ಲಲಿತಾದಿತ್ಯನ ಸ್ನೇಹಸಂಬಂಧ ಅರಬ್ಬರು ಮತ್ತು ಟಿಬೆಟಿಯನ್ನರ ವಿರುದ್ಧ ಯಶಸ್ವಿ ಹೋರಾಟದಲ್ಲಿ ನೆರವಿಗೆ ಬರುತ್ತದೆ. ಟಿಬೆಟಿಯನ್ನರ ವಿರುದ್ಧ ಲಲಿತಾದಿತ್ಯನ ವಿಜಯೋತ್ಸವದ ಸಂಭ್ರಮವನ್ನು ಕಾಶ್ಮೀರಿಗಳು ಪ್ರತೀ ವರ್ಷ ಯುಗಾದಿ ದಿನ ಆಚರಿಸುತ್ತಿದ್ದರು ಎಂದು ಇತಿಹಾಸಕಾರ ಆಲ್ಬೆರೂನಿ ಉಲ್ಲೇಖಿಸಿದ್ದಾನೆ. ತುರ್ಕಮೆನಿಸ್ತಾನದ ತುರ್ಕರು, ಬಡಕಸ್ತಾನದ ತೊಚ್ರನ್​ಗಳು, ಬಾಲ್ಟಿಸ್ತಾನದ ಭೂತಿಯರು, ಡೇರಿಯಸ್​ನ ದರ್ದಾಸ್​ಗಳು, ಉಜ್ಬೆಕಿಸ್ತಾನ, ತಜಿಕಿಸ್ತಾನ, ದಕ್ಷಿಣ ರ್ಕಿಗಿಸ್ತಾನ, ಆಗ್ನೇಯ ಕಝುಕಿಸ್ತಾನದ ಆಕ್ರಮಣಕಾರರನ್ನು ಸೋಲಿಸಿದ ಲಲಿತಾದಿತ್ಯ ತುರ್ಕಿಸ್ತಾನದ ಮೇಲೆ ದಂಡೆತ್ತಿ ಹೋಗಿ ಬುಖಾರಾದ ಮೊಮಿನ್​ನನ್ನು 4 ಬಾರಿ ಸೋಲಿಸಿದ. ಐದನೇ ಬಾರಿ ಮೊಮಿನ್ ಹತನಾದ. ಲಲಿತಾದಿತ್ಯನ ಪ್ರಾಬಲ್ಯವೆಷ್ಟಿತ್ತೆಂದರೆ, ಆತನು ಕಾಲವಾದ 300 ವರ್ಷಗಳವರೆಗೆ ಮುಸ್ಲಿಂ ಆಕ್ರಮಣಕಾರರು ಕಾಶ್ಮೀರದತ್ತ, ಭಾರತದತ್ತ ತಲೆಹಾಕಲಿಲ್ಲ.

ಲಲಿತಾದಿತ್ಯನ ಸಾಮ್ರಾಜ್ಯ ಮೊಘಲರು ಆಳಿದ ಭೂಭಾಗಕ್ಕಿಂತ ವಿಸ್ತಾರವಾಗಿತ್ತು. ತನ್ನ ಆಡಳಿತಾವಧಿಯಲ್ಲಿ ಆತ ಅನೇಕ ರಾಜವಂಶಗಳನ್ನು ಸೋಲಿಸಿ, ರಾಜ್ಯಗಳನ್ನು ವಶಪಡಿಸಿಕೊಂಡರೂ, ಯಾವುದೇ ಸಂಸ್ಕೃತಿ, ಕಲೆ, ಪರಂಪರೆಗಳನ್ನು ನಾಶಪಡಿಸಲಿಲ್ಲ. ಕೊಳ್ಳೆ ಹೊಡೆಯಲಿಲ್ಲ. ಕಾಶ್ಮೀರ ಆರಂಭದಿಂದಲೂ ಶಿಕ್ಷಣ, ಸಂಶೋಧನೆ, ವಿಜ್ಞಾನ, ಕಲೆ, ಶಿಲ್ಪಕಲೆಗಳ ಜ್ಞಾನಪೀಠವಾಗಿತ್ತು. ಲಲಿತಾದಿತ್ಯ ಕಟ್ಟಿಸಿದ ಮಾರ್ತಾಂಡ ಸೂರ್ಯ ದೇವಾಲಯದ ಅವಶೇಷಗಳು ಸಾವಿರಾರು ವರ್ಷಗಳ ಬಳಿಕವೂ ನಮ್ಮ ಶ್ರೇಷ್ಠ ಪರಂಪರೆಯ ಪಳಯುಳಿಕೆಯಾಗಿ ಉಳಿದಿದೆ.

ಲಲಿತಾದಿತ್ಯ ಮಹಾಸೇನಾನಿಯಾಗಿದ್ದ. ಅಷ್ಟೇ ದೊಡ್ಡ ಜ್ಞಾನಿಯಾಗಿದ್ದ. ಆತನ ದೂರದರ್ಶಿತ್ವ ಅದ್ಭುತವಾಗಿತ್ತು. ರಾಜತಂತ್ರ ನಿಪುಣನಾಗಿದ್ದ. ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನದ ನೆಲದಲ್ಲಿ ನಡೆಸಿದ ಸರ್ಜಿಕಲ್ ಸ್ಟ್ರೈಕ್​ಗಳನ್ನು ಆ ಕಾಲದಲ್ಲೇ ಲಲಿತಾದಿತ್ಯ ಮಾಡಿದ್ದ. ಎಲ್ಲಕ್ಕಿಂತ ಮುಖ್ಯವಾಗಿ ಬಾಹ್ಯಶಕ್ತಿಗಳು ಭಾರತದ ಮೇಲೆ ಆಕ್ರಮಣ ಮಾಡದಂತೆ ಅಖಂಡ ಭಾರತವನ್ನು ಬಲಪಡಿಸಿದ ಶಕ್ತಿವಂತನಾಗಿದ್ದ. ಈತ ಏಷ್ಯಾದ ಅಲೆಕ್ಸಾಂಡರ್ ಎಂದು ಕೊಂಡಾಡುತ್ತಾರಾದರೂ, ಅಲೆಕ್ಸಾಂಡರ್​ನನ್ನು ಮೀರಿದ ಸಾಮ್ರಾಟನಾಗಿದ್ದ. ನಮ್ಮ ಚರಿತ್ರೆಕಾರರು ದೇಶದ ಇತಿಹಾಸದಲ್ಲಿ ಲಲಿತಾದಿತ್ಯನಿಗೆ ಯೋಗ್ಯವಾಗಿ ಸಲ್ಲಬೇಕಾಗಿದ್ದ ಗೌರವವನ್ನು ಸಲ್ಲಿಸಿಲ್ಲ.

ಬೆಳಕನ್ನು ಕತ್ತಲ ಕೋಣೆಯಲ್ಲಿ ಬಂಧಿಸಿಡಲು ಸಾಧ್ಯವಿಲ್ಲ. ಮುಚ್ಚಿಟ್ಟ ಸತ್ಯಗಳು ಒಂದಲ್ಲ ಒಂದು ದಿನ ಬೆಳಕಿಗೆ ಬರಲೇಬೇಕು. ನಮ್ಮ ನೈಜ ಇತಿಹಾಸವನ್ನು ಜಾಗೃತ ಮನಸ್ಸುಗಳಿಗೆ ತಲುಪಿಸುವ ಅರಿವಿನ ಅಭಿಯಾನ ಇಂದಿನ ತುರ್ತು ಅಗತ್ಯವಾಗಿದೆ.

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net