ಭಯದ ವಾತಾವರಣ ನಿವಾರಿಸಿ

vidhana soudha
Published on

ವಿವಾದಿತ ಜಮೀನಿನ ಸರ್ವೆ ಕಾರ್ಯಕ್ಕೆ ಹೋಗಿದ್ದ ಬಂಗಾರಪೇಟೆ ತಾಲೂಕಿನ ತಹಸೀಲ್ದಾರ್ ಬಿಕೆ ಚಂದ್ರಮೌಳೇಶ್ವರ ಅವರನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವುದು ನಿಜಕ್ಕೂ ಖಂಡನೀಯ.

ಮೇಲಾಗಿ ಇಲ್ಲಿ ಭದ್ರತಾ ವೈಫಲ್ಯ ಸ್ಪಷ್ಟವಾಗಿ ಕಂಡುಬರುತ್ತದೆ. ಉನ್ನತ ಮಟ್ಟದ ಅಧಿಕಾರಿಗಳಿಗೆ ಹೀಗಾದರೆ ಇನ್ನು ಕೆಳಹಂತದ ಸಾಮಾನ್ಯ ಅಧಿಕಾರಿಗಳು/ನೌಕರರ ಪಾಡೇನು? ಇಂತಹ ಕೊಲೆ, ಹಲ್ಲೆ, ಕಿರುಕುಳ, ಬೆದರಿಕೆಯಂತಹ ಪ್ರಕರಣಗಳು ಇಂದು ನಿನ್ನೆಯದಲ್ಲ, ಮಾಧ್ಯಮಗಳಲ್ಲಿ ಇಂತಹ ಪ್ರಕರಣಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ಗ್ರಾಮ ಮಟ್ಟದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ)ಯಿಂದ ಹಿಡಿದು ಐಎಎಸ್ ಅಧಿಕಾರಿಗಳು ಕೂಡ ಅವರ ವೃತ್ತಿಜೀವನದಲ್ಲಿ ಇಂಥ ಸಂಕಷ್ಟಗಳನ್ನು ಸಾಕಷ್ಟು ಬಾರಿ ಎದುರಿಸಿರುತ್ತಾರೆ. ಕೆಲವೊಮ್ಮೆ ಉಳ್ಳವರ ಪ್ರಭಾವ ಮತ್ತು ಒತ್ತಡ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳೂ ಇವೆ.

ಅಧಿಕಾರಿಗಳಿಗೆ ನಿರ್ಭೀತರಾಗಿ ಕೆಲಸ ಮಾಡುವ ಮುಕ್ತ ವಾತಾವರಣ ಕಲ್ಪಿಸಿಕೊಡಬೇಕಾಗಿದೆ, ಸರ್ಕಾರ ಬರೀ ಸರ್ಕಾರಿ ಅಧಿಕಾರಿಗಳ ಸೇವೆಯನ್ನು ಅಪೇಕ್ಷಿಸದೆ ಆವರ ಹಿತವನ್ನೂ ಕಾಪಾಡಬೇಕು. ಜೊತೆಗೆ ಇನ್ನೂ ಹೆಚ್ಚಿನ ಸೂಕ್ತ ಭದ್ರತೆ ನೀಡಿ ಇಂತಹ ಘಟನೆಗಳು ಭವಿಷ್ಯದಲ್ಲಿ ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಬೇಕಾಗಿದೆ.

| ಮುರುಗೇಶ ಡಿ ದಾವಣಗೆರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net