

ಹೊಟ್ಟೆಯುಬ್ಬರವನ್ನು ಕಡಿಮೆ ಮಾಡು ವಲ್ಲಿಯೂ ಏಲಕ್ಕಿ ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ. ಏಕೆಂದರೆ ಏಲಕ್ಕಿಗೆ ಜೀರ್ಣಶಕ್ತಿಯನ್ನು ಹೆಚ್ಚಿಸುವ, ಜಠರಾಗ್ನಿಯನ್ನು ವೃದ್ಧಿಸುವ ಶಕ್ತಿ ಇದೆ ಎಂದು ಆಯುರ್ವೆದ ಗ್ರಂಥಗಳು ಹೇಳುತ್ತವೆ. ಹಾಗಾಗಿ ಏಲಕ್ಕಿ, ಉಪ್ಪು (ಸಾಧ್ಯವಾದರೆ ಸೈಂಧವ ಲವಣ) ಮತ್ತು ಒಣಶುಂಠಿಯ ಪುಡಿಗಳನ್ನು ಸಮ ಪ್ರಮಾಣದಲ್ಲಿ ಸೇರಿಸಿ ಇಟ್ಟುಕೊಂಡು ಹೊಟ್ಟೆಯುಬ್ಬರದ ಸಮಸ್ಯೆ ಯಾದಾಗ ಈ ಮಿಶ್ರಣವನ್ನು ಪ್ರತಿದಿನ ಒಂದೆರಡು ಗ್ರಾಮಿನಷ್ಟು ದಿನಕ್ಕೆರಡು ಬಾರಿ ಆಹಾರದ ನಂತರ ಮಜ್ಜಿಗೆಯಲ್ಲಿ ಹಾಕಿ ಸೇವಿಸಬೇಕು.
ಪ್ರಯಾಣ ಮಾಡುವಾಗ ವಾಂತಿ, ತಲೆಸುತ್ತುವಿಕೆಯಂತಹ ಸಮಸ್ಯೆಗಳನ್ನು ತುಂಬಾ ಜನ ಅನುಭವಿಸುತ್ತಾರೆ. ಅದಕ್ಕೆ ಕೂಡಾ ಏಲಕ್ಕಿ ತುಂಬಾ ಒಳ್ಳೆಯ ಮದ್ದು. ಜೊನಿ ಬೆಲ್ಲಕ್ಕೆ ಏಲಕ್ಕಿ ಪುಡಿಯನ್ನು ಹಾಕಿ ಉಂಡೆಯ ರೀತಿ ಮಾಡಿ ಇಟ್ಟುಕೊಳ್ಳಬೇಕು. ಪ್ರಯಾಣ ಮಾಡುವಾಗ ಇದನ್ನು ಬಾಯಲ್ಲಿಟ್ಟು ಸ್ವಲ್ಪ ಸ್ವಲ್ಪವಾಗಿ ಸವಿಯುತ್ತಿದ್ದರೆ ಪ್ರಯಾಣ ಕಷ್ಟಕರವಾಗಿರುವುದಿಲ್ಲ. ಎರಡರಿಂದ ಮೂರು ಗ್ರಾಂನಷ್ಟು ಏಲಕ್ಕಿಯನ್ನು ಪುಡಿ ಮಾಡಿ ಎರಡು ಲೋಟ ಬಿಸಿ ನೀರಿಗೆ ಹಾಕಿ ಮುಚ್ಚಿಡಬೇಕು. ಇದು ತಣ್ಣಗಾದ ನಂತರ ಈ ನೀರನ್ನು ಬಳಸಿ ಬಾಯಿ ಮುಕ್ಕಳಿಸಿದರೆ ವಾಂತಿ ಬಂದಂತೆನಿಸುವುದು ನಿವಾರಣೆ ಯಾಗುವುದಲ್ಲದೆ ಗಂಟಲು ನೋವು,ಬಾಯಿಯ ದುರ್ವಾಸನೆಯ ಸಮಸ್ಯೆಗಳೂ ದೂರಾಗುತ್ತವೆ. ಮೂತ್ರದ ಅಡೆತಡೆಗಳನ್ನು ನಿವಾರಿಸುವ ಗುಣವಿರುವ ಕಾರಣ ಇದನ್ನು ಮೂತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳಲ್ಲಿ ಆಹಾರದಲ್ಲಿ ವಿಶೇಷವಾಗಿ ಬಳಸಬಹುದು. ಇದು ಮೂಲವ್ಯಾಧಿ, ಅಸ್ತಮಾ, ವಿವಿಧ ರೀತಿಯ ಕೆಮ್ಮುಗಳು, ವಾತ ಮತ್ತು ಕಫಕ್ಕೆ ಸಂಬಂಧಿಸಿದ ಸಮಸ್ಯೆಗಳಲ್ಲಿ ತುಂಬಾ ಲಾಭದಾಯಕವಾಗಿದೆ. ಹೃದಯದ ಶಕ್ತಿಯನ್ನು ಹೆಚ್ಚಿಸುವ, ಬಾಯಿ ರುಚಿಯನ್ನು ವರ್ಧಿಸುವ ಮತ್ತು ಪದೇಪದೇ ಆಗುವ ಸುಸ್ತನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ. ಇಷ್ಟೆಲ್ಲ ಒಳ್ಳೆಯ ಗುಣಗಳಿದ್ದರೂ ಅತಿಯಾಗಿ ಬಳಸಿದರೆ ವಿವಿಧ ರೀತಿಯ ಸಮಸ್ಯೆಗಳು ಉಂಟಾಗಬಹುದು. ಮಿತಿಮೀರಿ ಬಳಸಿದಾಗ ಸಂತಾನಹೀನತೆಯಂತಹ ಸಮಸ್ಯೆಗಳು ಕೂಡಾ ಉಂಟಾಗಬಹುದು ಎಂದು ಆಯುರ್ವೆದ ಹೇಳುತ್ತದೆ. ಹಾಗಾಗಿ ನಿತ್ಯವೂ ಬಳಸುವುದಿದ್ದರೆ ಹೆಚ್ಚೆಂದರೆ ದಿನದಲ್ಲಿ ಒಂದು ಗ್ರಾಂನಷ್ಟು ಏಲಕ್ಕಿಯನ್ನು ಮಾತ್ರ ಸೇವಿಸಬಹುದು.