

ಪ್ರತಿಕೂಲ ಸಮಯದಲ್ಲಿ ಜನರ ನಿಜವಾದ ಪಾತ್ರವು ಸ್ಪಷ್ಟವಾಗುತ್ತದೆ ಎಂದು ಹೇಳಲಾಗುತ್ತದೆ. ಇದು ನಾಯಕತ್ವಕ್ಕೂ ಅನ್ವಯಿಸುತ್ತದೆ. ವಿಶ್ವದಾದ್ಯಂತ, ಕೋವಿಡ್-19 ಸಾಂಕ್ರಾಮಿಕವು ನಾಯಕತ್ವವನ್ನು ಪರೀಕ್ಷೆಗೆ ಒಡ್ಡಿದೆ. ಈ ಪರೀಕ್ಷೆಯಲ್ಲಿ ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ಒಂದು ಮಾದರಿಯನ್ನು ಸೃಷ್ಟಿಸಿದ್ದಾರೆ. ಭಾರತವು ಮೋದಿ ನೇತೃತ್ವದಲ್ಲಿ ವೈರಸ್ ವಿರುದ್ಧ ದಿಟ್ಟ ಹೋರಾಟ ಮಾಡುತ್ತಿರುವುದು ಮಾತ್ರವಲ್ಲದೆ, ಬಿಕ್ಕಟ್ಟಿನಾಚೆಗೆ ಕೋವಿಡ್ ನಂತರದ ಜಗತ್ತಿನ ಬಗ್ಗೆಯೂ ದೃಷ್ಟಿ ನೆಟ್ಟಿದೆ ಮತ್ತು ಅದಕ್ಕಾಗಿ ಸನ್ನದ್ಧವಾಗುತ್ತಿದೆ. ಸ್ವಾವಲಂಬಿ ಭಾರತ ಅಥವಾ ಆತ್ಮನಿರ್ಭರ ಭಾರತಕ್ಕಾಗಿ ಕಳೆದ ಐದು ದಿನಗಳಲ್ಲಿ ಕೈಗೊಂಡ ಐತಿಹಾಸಿಕ ಸರಣಿ ನಿರ್ಧಾರಗಳನ್ನು ಒಂದು ಮಹತ್ವದ ತಿರುವು ಎಂದು ದೇಶದ ಇತಿಹಾಸವು ಸ್ಮರಿಸಿಕೊಳ್ಳಲಿದೆ. ‘ಬಿಕ್ಕಟ್ಟಿನಿಂದ ನಿರಾಶರಾಗಬೇಕಿಲ್ಲ. ಬದಲಿಗೆ, ಜಾಗತಿಕ ಪೂರೈಕೆ ಸರಪಳಿಗಳ ಸನ್ನಿಹಿತ ಪುನರ್ ರಚನೆಯಲ್ಲಿ ದೊಡ್ಡಪಾತ್ರವನ್ನು ವಹಿಸಲು ಸಿದ್ಧರಾಗಿರಬೇಕು’ ಎಂಬ ಸ್ಪೂರ್ತಿದಾಯಕ ಸಂದೇಶವು ಪ್ರತಿಯೊಬ್ಬ ಭಾರತೀಯರ ಉತ್ಸಾಹವನ್ನು ಹೆಚ್ಚಿಸಿದೆ.
ಭವಿಷ್ಯದಲ್ಲಿ ಭಾರತದ ಬೆಳವಣಿಗೆಗೆ ನಿರ್ಣಾಯಕವಾಗಿರುವ ಪ್ರತಿಯೊಂದು ವಲಯವೂ ಮೋದಿ ನೇತೃತ್ವದಲ್ಲಿ ಸುಧಾರಣೆಯನ್ನು ಕಂಡಿದೆ. ದೇಶದ ಪ್ರಗತಿಯಲ್ಲಿ ಪ್ರಮುಖರಾದ ಬಡವರು, ಬೀದಿ ವ್ಯಾಪಾರಿಗಳು ಮತ್ತು ವಲಸೆ ಕಾರ್ವಿುಕರಿಗಾಗಿ ಹಲವಾರು ಕ್ರಮಗಳನ್ನು ಘೊಷಿಸಲಾಗಿದೆ. ‘ಒನ್ ನೇಷನ್ ಒನ್ ರೇಷನ್ ಕಾರ್ಡ್’ನಿಂದ ಎಲ್ಲ ವಲಸಿಗರಿಗೆ ಉಚಿತ ಆಹಾರ ಧಾನ್ಯ, ಸಣ್ಣ ಸಾಲದ ಮುದ್ರಾ ಫಲಾನುಭವಿಗಳಿಗೆ ಬಡ್ಡಿ ಸಹಾಯಧನದಿಂದ ಹಿಡಿದು ಬೀದಿವ್ಯಾಪಾರಿಗಳಿಗೆ ಮೂಲ ಬಂಡವಾಳದ ಸೌಲಭ್ಯದವರೆಗೆ, ಆರೋಗ್ಯ ಕೇಂದ್ರಗಳ ಸಬಲೀಕರಣಕ್ಕಾಗಿ ಎಂಜಿಎನ್ಆರ್ಇಜಿಎ ಹಂಚಿಕೆಗೆ ಉತ್ತೇಜನ- ಹೀಗೆ ಕೋವಿಡ್-19ರ ಆರ್ಥಿಕ ಪರಿಣಾಮಗಳಿಂದ ಗಂಭೀರವಾಗಿ ಹಾನಿಗೊಳಗಾದವರನ್ನು ಬಲಪಡಿಸಲು ಆರ್ಥಿಕ ಪ್ಯಾಕೇಜ್ ಒತ್ತು ನೀಡಿದೆ.
ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಅಥವಾ ಎಂಎಸ್ಎಂಇ ವಲಯ ಭಾರತದ ಪ್ರಗತಿಯ ಎಂಜಿನ್ಗಳಲ್ಲಿ ಒಂದಾಗಿದೆ, ಈ ಕ್ಷೇತ್ರದಲ್ಲಿ ಇರುವ ಉದ್ಯೋಗ ಸ್ವರೂಪದಿಂದಾಗಿ ಇದು ಹೆಚ್ಚು ಮುಖ್ಯವಾಗಿದೆ. ರಿಯಾಯಿತಿ ಬಡ್ಡಿದರದಲ್ಲಿ ಎಂಎಸ್ಎಂಇಗಳಿಗೆ 3 ಲಕ್ಷ ಕೋಟಿ ರೂ.ಗಳ ಸಾಲ ಖಾತ್ರಿಯನ್ನು, ಯಾವುದೇ ಮೇಲಾಧಾರವಿಲ್ಲದೆ ನೀಡುವುದು ಎಂಎಸ್ಎಂಇಗಳಿಗೆ ಬಹುದೊಡ್ಡ ಉತ್ತೇಜನವಾಗಿದೆ. ಎಂಎಸ್ಎಂಇಗಳ ವ್ಯಾಖ್ಯಾನದಲ್ಲಿನ ಆಮೂಲಾಗ್ರ ವಿಸ್ತರಣೆಯು ಎಂಎಸ್ಎಂಇಯ ನಿರ್ದಿಷ್ಟ ಪ್ರಯೋಜನಗಳನ್ನು ಕಳೆದುಕೊಳ್ಳುವ ಭೀತಿಯಿಂದ ಹೊರತರುತ್ತದೆ. ಎಂಎಸ್ಎಂಇಗಳಿಗೆ ಸಂದೇಶ ಏನೆಂದರೆ-ದೊಡ್ಡದಾಗಿ ಯೋಚಿಸಿ, ದೊಡ್ಡದಾಗಿ ಬೆಳೆಯಿರಿ.
ಇತ್ತೀಚಿನ ಕೃಷಿ ಸುಧಾರಣಾ ಕ್ರಮಗಳನ್ನು ಅನೇಕ ಕೃಷಿ ತಜ್ಞರು ಸ್ವಾತಂತ್ರ್ಯಆಂದೋಲನಕ್ಕೆ ಹೋಲಿಸಿದ್ದಾರೆ. ಅಸ್ತಿತ್ವದಲ್ಲಿರುವ ಕೃಷಿ ಮಾರುಕಟ್ಟೆ ಮಾದರಿಯ ಒಂದು ವೈಶಿಷ್ಟ್ಯವೆಂದರೆ, ಗ್ರಾಹಕ ಮತ್ತು ರೈತ ಇಬ್ಬರೂ ಉತ್ತಮ ಲಾಭ ಪಡೆದರೆ, ಮಧ್ಯವರ್ತಿಗಳು ದಿಕ್ಕಾಪಾಲಾದರು. ಅಗತ್ಯ ಸರಕುಗಳ ಕಾಯ್ದೆಯಲ್ಲಿನ ಬದಲಾವಣೆಗಳು, ರೈತರು ಕೃಷಿ ಉತ್ಪನ್ನಗಳನ್ನು ತಮಗೆ ಬೇಕಾದವರಿಗೆ ಮಾರಾಟ ಮಾಡುವ ಸ್ವಾತಂತ್ರ್ಯ, ಫಾರ್ಮ್-ಗೇಟ್ ಮೂಲಸೌಕರ್ಯಕ್ಕೆ 1 ಲಕ್ಷ ಕೋಟಿ ರೂ. ಹೂಡಿಕೆ ಮತ್ತು ಕೃಷಿ ಮತ್ತು ಉದ್ಯಮವನ್ನು ಒಟ್ಟಿಗೆ ತರುವ ಕ್ರಮಗಳು ಕೃಷಿಯನ್ನು ನಿಜವಾಗಿಯೂ ರೈತ ಪರವಾಗಿಸಿವೆ.
ಮೇಲೆ ಹೇಳಿದ ಕೃಷಿ ಮತ್ತು ಎಂಎಸ್ಎಂಇ ಕ್ಷೇತ್ರಗಳು ಭಾರತದ ಎರಡು ದೊಡ್ಡ ಉದ್ಯೋಗದಾತರು ಎಂಬುದನ್ನು ನೆನಪಿಡಿ. ಈ ಎರಡು ಕ್ಷೇತ್ರಗಳ ಸುಧಾರಣೆಗಳು ಭಾರತದ ಭವಿಷ್ಯಕ್ಕೆ ಪೂರಕ. ಮತ್ತೊಂದೆಡೆ, ಕಲ್ಲಿದ್ದಲು, ಗಣಿಗಾರಿಕೆ, ರಕ್ಷಣೆ, ವಿಮಾನಯಾನ ಮತ್ತು ಬಾಹ್ಯಾಕಾಶದಂತಹ ಪ್ರಮುಖ ಕ್ಷೇತ್ರಗಳಲ್ಲಿ ಸಾರ್ವತ್ರಿಕವಾಗಿ ಶ್ಲಾಘಿಸಲ್ಪಟ್ಟ ಸುಧಾರಣೆಗಳು ಸರ್ಕಾರದ ಸುಧಾರಣಾವಾದಿ ಹಾದಿಯನ್ನು ತೋರಿಸಿದೆ. ಈ ವರ್ಷದ ಆರಂಭದಲ್ಲಿ ಆರ್ಬಿಐ ಕೈಗೊಂಡ ಹಣದ ಹರಿವಿನ ಕ್ರಮಗಳು ಮತ್ತು 20 ಲಕ್ಷ ಕೋಟಿ ರೂ. ಆರ್ಥಿಕ ಪ್ಯಾಕೇಜ್ ಕೋವಿಡ್ ನಂತರದ ಭಾರತದ ಬೆಳವಣಿಗೆಗೆ ವಾಹಕ ಆಗಲಿವೆ. ಇಂಥ ಮಹತ್ವದ ಹೆಜ್ಜೆಗಳ ಹೊರತಾಗಿಯೂ, ನಿರೂಪಕ ವರ್ಗದ ಕೆಲವರು ಮತ್ತು ರಾಜಕೀಯ ಪಕ್ಷಗಳ ಕೆಲವರು ಪ್ರಧಾನಿ ನರೇಂದ್ರ ಮೋದಿಯವರನ್ನು ವಿರೋಧಿಸುತ್ತಿದ್ದಾರೆ. ಮೊದಲನೆಯದಾಗಿ, ಸರ್ಕಾರವು ಜನರ ಕೈಗೆ ಹಣವನ್ನೇ ಕೊಟ್ಟಿಲ್ಲ ಎಂದು ಅವರು ಹೇಳುತ್ತಾರೆ. ಬಹುಶಃ ಇವರಿಗೆ ಸ್ಮರಣ ಶಕ್ತಿ ಕಡಿಮೆ ಎನಿಸುತ್ತದೆ. ಸರ್ಕಾರವು ಬಡವರಿಗಾಗಿ ಘೊಷಿಸಿದ ಆರಂಭಿಕ ಪರಿಹಾರ ಪ್ಯಾಕೇಜ್ ‘ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್’ 1.7 ಲಕ್ಷ ಕೋಟಿ ರೂ.ಗಳದ್ದು. ಇದು ಯುಪಿಎ ಕಾಲದಂತೆ ಕೇವಲ ಘೊಷಣೆಯಾಗಿ ಉಳಿದಿಲ್ಲ. ಈಗಾಗಲೇ 39 ಕೋಟಿಗೂ ಹೆಚ್ಚು ಫಲಾನುಭವಿಗಳು ಸುಮಾರು 35,000 ಕೋಟಿ ರೂ.ಗಳನ್ನು ಪಡೆದಿದ್ದಾರೆ. ಇದರಲ್ಲಿ ತಮ್ಮ ಖಾತೆಗಳಿಗೆ 2,000 ರೂ. ಪಡೆದ 8 ಕೋಟಿ ರೈತರು ಮತ್ತು ಮೊದಲ ಹಾಗೂ ಎರಡನೆಯ ಕಂತುಗಳ ನೆರವು ಪಡೆದ 20 ಕೋಟಿ ಜನಧನ್ ಖಾತೆ ಹೊಂದಿರುವ ಮಹಿಳೆಯರು ಸೇರಿದ್ದಾರೆ. ‘ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ’ ಯೋಜನೆಯಡಿ 80 ಕೋಟಿ ಬಡ ಜನರನ್ನು ಎನ್ಎಫ್ಎಸ್ಎ ವ್ಯಾಪ್ತಿಗೆ ಒಳಪಡಿಸಲಾಗಿದೆ, ಪ್ರತಿ ವ್ಯಕ್ತಿಗೆ 5 ಕೆಜಿ ಆಹಾರ ಧಾನ್ಯ ಮತ್ತು ಪ್ರತಿ ಕುಟುಂಬಕ್ಕೆ 1 ಕೆಜಿ ದ್ವಿದಳ ಧಾನ್ಯಗಳನ್ನು ನೀಡಲಾಗುತ್ತಿದೆ. ಇವುಗಳು ಯಾವುದೇ ಸೋರಿಕೆಯಿಲ್ಲದೆ ನೇರವಾಗಿ ಜನರನ್ನು ತಲುಪುತ್ತಿವೆ.
ಸೂಕ್ತ ನಿರ್ಧಾರಗಳನ್ನು ಸೂಕ್ತ ರೀತಿಯಲ್ಲಿ ತೆಗೆದುಕೊಳ್ಳುವುದೂ ಮುಖ್ಯವಾಗಿದೆ. ಯಾವುದೇ ರೀತಿಯಲ್ಲಿ ರೈತರನ್ನು ತಲುಪದ, ಆದರೆ ಆರ್ಥಿಕತೆಯನ್ನು ನಾಶಪಡಿಸಿದ ಯುಪಿಎಯ ಸಾಲ ಮನ್ನಾವನ್ನು ಪ್ರತಿಯೊಬ್ಬರೂ ಬೇಸರದಿಂದ ನೆನಪಿಸಿಕೊಳ್ಳುತ್ತಾರೆ, ಆದರೆ ಇಲ್ಲಿ ಮೋದಿ ಸರ್ಕಾರ ಜನರನ್ನು ತಲುಪುವುದರ ಜೊತೆಗೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಸರ್ಕಾರದ ಪ್ರಮುಖ ಕ್ರಮಗಳಲ್ಲಿ ಪ್ರಮುಖವಾದದ್ದು, ರಾಜ್ಯಗಳ ಸಾಲ ಮಿತಿಯನ್ನು ಶೇಕಡ 3 ರಿಂದ ಶೇಕಡ 5ಕ್ಕೆ ಹೆಚ್ಚಿಸಿರುವುದು. ಇದು ರಾಜ್ಯಗಳಿಗೆ ಹೆಚ್ಚುವರಿ 4 ಲಕ್ಷ ಕೋಟಿ ರೂ.ಗಳನ್ನು ಒದಗಿಸುತ್ತದೆ.
ಆದರೂ, ಇದನ್ನು ಕೆಲವರು ‘ಒಕ್ಕೂಟ ವಿರೋಧಿ’ ಎಂದು ಕರೆಯುವವರಿದ್ದಾರೆ. ಏಕೆಂದರೆ ಸರ್ಕಾರವು ಈ ಹೆಚ್ಚುವರಿ ಶೇ.1.5ನ್ನು (ಹೆಚ್ಚುವರಿ ಶೇ.0.5 ಸ್ವಯಂಚಾಲಿತವಾಗಿದೆ) ಸುಧಾರಣೆಗಳನ್ನು ಕೈಗೊಳ್ಳುವ ರಾಜ್ಯಗಳೊಂದಿಗೆ ಸಂರ್ಪಸಿದೆ. ರಾಜ್ಯಗಳು ಈಗಾಗಲೇ ತಮ್ಮ ಜಿಎಸ್ಡಿಪಿಯ ಶೇ.3 ಕ್ಕೆ ಅರ್ಹತೆ ಪಡೆದಿವೆ ಮತ್ತು ಈ ಸುಧಾರಣೆಗಳ ಆಧಾರದ ಮೇಲೆ ಸರ್ಕಾರವು ಅವುಗಳ ಸಾಲಮಿತಿಯನ್ನು ಹೆಚ್ಚಿಸಿದೆ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಇದು ಒಕ್ಕೂಟ ವ್ಯವಸ್ಥೆಯ ಸುಧಾರಣೆಯನ್ನು ನಿಜವಾದ ಅರ್ಥದಲ್ಲಿ ಉತ್ತೇಜಿಸುತ್ತಿದೆ.
ಅಲ್ಲದೆ, ಈ ಸುಧಾರಣೆಗಳಲ್ಲಿ ಹಲವು ಇಂಧನ ಸುಧಾರಣೆಗಳು, ಸುಲಭ ವ್ಯಾಪಾರ, ನಗರ ಸ್ಥಳೀಯ ಸಂಸ್ಥೆಯ ಸುಧಾರಣೆಗಳು ಇತ್ಯಾದಿಗಳನ್ನು ಸಾರ್ವತ್ರಿಕವಾಗಿ ಅದೇ ವ್ಯಾಖ್ಯಾನಕಾರರು ಟೀಕಿಸುತ್ತಿದ್ದಾರೆ.
ನಿಜವಾದ ನಾಯಕತ್ವವು ಸಾಂಸ್ಥಿಕ ಸುಧಾರಣೆಯನ್ನು ಪ್ರೇರೇಪಿಸುತ್ತದೆ ಮತ್ತು ಪ್ರೋತ್ಸಾಹಿಸುತ್ತದೆ. ಸುಧಾರಣಾ ನಾಯಕತ್ವವು ತಕ್ಷಣದ ಸವಾಲಿನ ಮೇಲೆ ಹಿಡಿತ ಸಾಧಿಸುವುದಲ್ಲದೆ, ಮೊದಲಿಗಿಂತಲೂ ಬಲವಾಗಿ ಹೊರಹೊಮ್ಮಲು ದೇಶವನ್ನು ಸಿದ್ಧಪಡಿಸುತ್ತದೆ. ಅಂತಹ ಜಾಗತಿಕ ಬಿಕ್ಕಟ್ಟಿನ ನಂತರ ವಿಶ್ವದ ಕ್ರಮಾಂಕವು ರೂಪಾಂತರಗೊಂಡಿರುವುದನ್ನು ಇತಿಹಾಸವು ತೋರಿಸಿದೆ. ಇಂತಹ ಸಮಯದಲ್ಲಿ ದೇಶವನ್ನು ಮುನ್ನಡೆಸಲು ಪ್ರಧಾನಿ
ಮೋದಿಯವರನ್ನು ಪಡೆದಿರುವುದು ಭಾರತದ ಸೌಭಾಗ್ಯ. ಪ್ರಧಾನಿ ನರೇಂದ್ರ ಮೋದಿ ಅವಕಾಶವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿರುವುದನ್ನು ಕಳೆದ ವಾರ ಕೈಗೊಂಡ ಸುಧಾರಣಾ ಕ್ರಮಗಳು ತೋರಿಸುತ್ತಿವೆ.
(ಲೇಖಕರು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವರು)