

ಪ್ರಾಯಶಃ ಕೋವಿಡ್ ಎಂಬ ಮಹಾಮಾರಿ ಬರಬಹುದು ಎಂದು ಊಹೆ ಮಾಡಿದವರಾರೂ ಇಲ್ಲ. ತಮ್ಮದೇ ಆದ ರೀತಿಯಲ್ಲಿ ಬದುಕು ಕಟ್ಟಿಕೊಂಡು ಪ್ರಪಂಚದ ನಾನಾ ಕಡೆಗಳಲ್ಲಿ ವಾಸಿಸುವ ಜನರಿಗೆ 2019ರ ಅಂತ್ಯದಲ್ಲಿ ಕೋವಿಡ್ ಅನುಭವಕ್ಕೆ ಬಂದಾಗ ಆದ ಆಘಾತ ನಿತ್ಯನಿರಂತರ ಮರುಕಳಿಸುತ್ತಿದೆ. ಅವರವರ ಕ್ಷೇತ್ರದಲ್ಲಿ ವ್ಯಾಪಾರ, ವಹಿವಾಟು, ಉದ್ಯೋಗ ಎಂದು ಮಗ್ನರಾಗಿದ್ದವರೆಲ್ಲ ‘ಸೋಂಕಿತ’ ಎಂಬ ಒಂದೇ ವರ್ಗವಾಗಿ ಪರಿವರ್ತಿತರಾಗುವ ಕಾಲಘಟ್ಟದಲ್ಲಿ ನಾವಿದ್ದೇವೆ. ‘ಸಾಮಾಜಿಕ ಅಂತರ’ ಎಂಬುದು ಒಂದು ಪಿಡುಗು ಎಂದು ಪ್ರಪಂಚ ದಾದ್ಯಂತ ನಾನಾ ಬಗೆಯ ಹೋರಾಟಗಳು ನಡೆದು ಕ್ರಾಂತಿಗಳೇ ಆಗಿದ್ದು ಇತಿಹಾಸ. ಆದರೆ, ಸಾಮಾಜಿಕ ಅಂತರವೇ ‘ಆದರ್ಶ’ ಎಂಬ ಹೊಸ ಇತಿಹಾಸ ಈಗ ನಿರ್ಮಾಣವಾಗುತ್ತಿದೆ.
ಜಗತ್ತು ಎಷ್ಟೇ ಮುಂದುವರಿದರೂ ‘ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ’ ಎಂಬ ನಾಣ್ಣುಡಿ ಸತ್ಯವಾಗೇ ಉಳಿಯಿತು. ಮನುಷ್ಯ ಅಭಿವೃದ್ಧಿ, ತಂತ್ರಜ್ಞಾನ, ವಿಜ್ಞಾನ, ವ್ಯಾಪಾರ, ಜಾಗತಿಕ ಮಟ್ಟದಲ್ಲಿ ಸಂಶೋಧನೆಗಳನ್ನು ನಡೆಸಿದರೂ, ಈ ಮಹಾಮಾರಿಯನ್ನು ತಡೆಯಲು ಇಂದಿನವರೆಗೂ ಸಾಧ್ಯವಾಗುತ್ತಿಲ್ಲ. ರೋಗಾಣು ಅಥವಾ ವೈರಾಣು ಎಂದು ಕರೆಯುವುದು ಬಿಟ್ಟರೆ ‘ಇದಂ ಇತ್ತಂ’ ಎಂದು ನಿಖರವಾಗಿ ಹೇಳಲಾಗುತ್ತಿಲ್ಲ. ವಿಜ್ಞಾನಿಗಳಿಗೆ, ವೈರಾಣು ತಜ್ಞರಿಗೆ ಕೈಗೆ ಸಿಗದ, ಅಳತೆಗೆ ಬಾರದ ವಸ್ತು ಅಥವಾ ವಿಷಯ ರಾಜಕಾರಣಿಗಳಿಗೆ ಹೇಗೆ ಎಟುಕಬಲ್ಲದು? ಎಲ್ಲ ಪಕ್ಷಗಳಿಗೂ ಇದೊಂದು ಹೊಸ ಅನುಭವ. ಎಲ್ಲ ಪಕ್ಷಗಳೂ ಊಹಾಪೋಹದಲ್ಲೇ ದಿನ ಕಳೆಯುವುದು ಬಿಟ್ಟರೆ ಯಾರೂ ಸವಾಲು ಮತ್ತು ಸಮಸ್ಯೆ ಎದುರಿಸಲು ಇನ್ನೂ ಸಿದ್ಧವಾಗಿಲ್ಲ. ಯಾರೂ ಕಂಡರಿಯದ, ಕೇಳರಿಯದ ಮಹಾಮಾರಿಗೆ ‘ಹೀಗೆ ಮಾಡಬೇಕಿತ್ತು, ಹಾಗೆ ಮಾಡಬಹುದಿತ್ತು’ ಅಂತ ಉಚಿತ ಸಲಹೆಗಳೇ ಹೆಚ್ಚಾದವು. ಇದು ಕೇವಲ ್ಕಈ (ಛಿಠಛಿಚ್ಟ್ಚ ಚ್ಞಛ ಈಛಿಡಛ್ಝಿಟಟಞಛ್ಞಿಠಿ) ಸಮಯ. ಇಂತಹ ಸಂದರ್ಭದಲ್ಲಿ ಒಣಪ್ರತಿಷ್ಠೆ, ರಾಜಕಾರಣ ಬದಿಗಿಟ್ಟು ತಮ್ಮ ಕೈಲಾದ ಸಹಾಯ ಮಾಡುವುದೇ ಒಳಿತು. ಒಂದು ವರ್ಗ ‘ಲಾಕ್ಡೌನ್ ಮಾಡಿ’ ಎಂದರೆ, ಇನ್ನೊಂದು ವರ್ಗ ‘ಬೇಡ ಬೇರೆ ಪರಿಹಾರ ಹುಡುಕಿ’ ಎಂದು ಹೇಳುತ್ತದೆ. ವ್ಯಾಕ್ಸಿನ್ ಮತ್ತು ಸುರಕ್ಷಿತ ಅಂತರ ಬಿಟ್ಟರೆ, ಬೇರೆ ಪರಿಹಾರ ಯಾರ ಬಳಿಯೂ ಕಾಣುತ್ತಿಲ್ಲ. ಅದರೆ ಜನರಲ್ಲೂ ಈ ಬಗ್ಗೆ ಕಾಳಜಿ ಹಾಗೂ ಜಾಗೃತಿ ಇಲ್ಲದಾಗಿದೆ. ‘ಮನೆಯಲ್ಲಿ ಇರಿ, ಅಂತರ ಕಾಪಾಡಿ’ ಎಂದು ಕೈಮುಗಿದು ಕೇಳಿದರೂ ಜನ ಓಡಾಡುವುದು ಬಿಡುತ್ತಿಲ್ಲ. ಹಾಗಾಗಿ, ಲಾಕ್ಡೌನ್ ಜಾರಿ ಅನಿವಾಯರ್åವಾಯಿತು.
ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಶಕ್ತಿಮೀರಿ ಕೆಲಸ ಮಾಡುತ್ತಿವೆ. ಶಾಸಕರು, ಸಂಸದರು, ಮಂತ್ರಿಗಳು ವಿವಿಧ ಆಯಾಮಗಳಲ್ಲಿ ಕಾಲಕ್ಕೆ ಅನುಸಾರವಾಗಿ ಕಾರ್ಯನೀತಿ ರೂಪಿಸಿದರೆ, ಕಾರ್ಯಾಂಗ ಅದನ್ನು ಜಾರಿಗೊಳಿಸಲು ಹರಸಾಹಸ ಪಡುತ್ತಿದೆ. ಇಡೀ ವ್ಯವಸ್ಥೆ ಇಂದು ಈ ಹೋರಾಟದಲ್ಲಿ ಧುಮುಕಿದೆ. ಶಾಸಕಾಂಗ ಮತ್ತು ಕಾರ್ಯಾಂಗದ ಜಂಟಿ ಕಾರ್ಯಾಚರಣೆಯಲ್ಲಿ ನ್ಯಾಯಾಂಗ ತನ್ನದೇ ಆದ ರೀತಿಯಲ್ಲಿ ಪ್ರಜೆಗಳ ಬದುಕುವ ಸಂವಿಧಾನದತ್ತ ಹಕ್ಕನ್ನು ಕಾಯುವ ನಿಟ್ಟಿನಲ್ಲಿ ಹಲವು ಮಹತ್ವದ ನಿರ್ದೇಶನಗಳನ್ನು ನೀಡುತ್ತಿದೆ.
ಇಂದಿನ ದಿನ ಎಲ್ಲ ಕಡೆ ವೈದ್ಯಕೀಯ ಆಮ್ಲಜನಕ, ರೆಮ್ಸಿವರ್, ಆಂಬುಲೆನ್ಸ್, ಆಸ್ಪತ್ರೆ ಹಾಸಿಗೆ, ಲಸಿಕೆ, ವೆಂಟಿಲೇಟರ್, ಅಂತಿಮ ಸಂಸ್ಕಾರಗಳ ಕುರಿತಾಗಿಯೇ ಚರ್ಚೆ. ಯಾವುದೇ ರಾಜಕಾರಣಿ, ಅಧಿಕಾರಿಗಳಿರಲಿ, ನ್ಯಾಯಧೀಶರಿರಲಿ, ಜನಸಾಮಾನ್ಯರಿರಲಿ ಅವರ ಮುಂದೆ ಬರುವುದು ಇದೇ ವಿಷಯ. ಉಳಿದುದೆಲ್ಲ ಈಗ ನಗಣ್ಯ. ಯಾರು ಏನೇ ನಿರ್ದೇಶನ ನೀಡಲಿ, ವ್ಯವಸ್ಥೆ ಕಲ್ಪಿಸಲಿ ಕೊನೆಗೆ ಜೀವ ಉಳಿದಿದೆಯೇ, ಇಲ್ಲವೇ ಎಂಬುದಷ್ಟೇ ಮುಖ್ಯ. ಮನುಷ್ಯನ ಹಣಬಲ, ಜನಬಲ, ದೇಹಬಲ ಎಲ್ಲವನ್ನೂ ಮೀರಿ ಹೊಡೆತ ಕೊಡುತ್ತಿದೆ ಈ ಮಹಾಮಾರಿ. ಹಲವಾರು ಸರ್ಕಾರೇತರ ಸಂಘ, ಸಂಸ್ಥೆಗಳು ನಿಸ್ವಾರ್ಥದಿಂದ ಶಕ್ತಿಮೀರಿ ಜನರಿಗೆ ಸಹಾಯಹಸ್ತ ಚಾಚಿವೆ. ಈಗ ಕರೊನಾ ಎದುರಿಸಲು ಬೇಕಾಗಿರುವುದು ಎದೆಗಾರಿಕೆ. ಬಹಳಷ್ಟು ಜನ ತನಗೆ ಕರೊನಾ ಬರಬಹುದು, ಬಂದಿರಬಹುದು, ಬಂದರೆ ತನ್ನ ಪರಿಸ್ಥಿತಿ ಏನಾಗಬಹುದು ಎಂದು ಯೋಚಿಸಿಯೇ ಮಾನಸಿಕವಾಗಿ ಕುಗ್ಗಿ ಹೋಗುತ್ತಿದ್ದಾರೆ. ಭಾರತೀಯರಿಗೆ ಪ್ರಕೃತಿದತ್ತವಾಗಿ ಅಥವಾ ದೈವಕೃಪೆಯಿಂದ ಸಹಜವಾಗಿಯೇ ರೋಗನಿರೋಧಕ ಶಕ್ತಿ ಹೆಚ್ಚಿದೆ. ಅದರೊಂದಿಗೆ ಆತ್ಮಬಲವೂ ಕೂಡಿದರೆ ಕರೊನಾ ಎದುರಿಸುವುದು ಸುಲಭ ಎಂಬುದು ಬಹಳಷ್ಟು ಅನುಭವಿಗಳ ಮಾತು.
ರೋಗಲಕ್ಷಣಗಳು ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿ ಕಂಡರೂ ಆತ್ಮಸ್ಥೈರ್ಯ ಅಥವಾ ಎದೆಗಾರಿಕೆ ಕೂಡ ಪರಿಸ್ಥಿತಿ ಎದುರಿಸಲು ಸಹಾಯ ಮಾಡುತ್ತದೆ. ತಜ್ಞರು ಹೇಳುವ ಪ್ರಕಾರ ಅಂಕಿ-ಅಂಶಗಳ ಐದು ಪಟ್ಟು ಸಂಖ್ಯೆಯಲ್ಲಿ ಸೋಂಕಿನ ಪರಿಣಾಮ ಹಾಗೂ ಪ್ರಮಾಣ ಇದೆ. ಉದಾಹರಣೆಗೆ, ರೋಗಲಕ್ಷಣಗಳು ಕಂಡುಬಂದಾಗ ಸಾಮಾನ್ಯವಾಗಿ ಒಬ್ಬರು ಮಾತ್ರ ಪರೀಕ್ಷೆಗೆ ಒಳಗಾಗುತ್ತಾರೆ. ಉಳಿದವರೆಲ್ಲ ಔಷಧೋಪಚಾರ ತೆಗೆದುಕೊಳ್ಳುತ್ತಾರೆ. ಎಷ್ಟೋ ಜನ ಸೌಮ್ಯ ಲಕ್ಷಣಗಳಿದ್ದರೂ, ಆತಂಕಕ್ಕೆ ಒಳಗಾಗಿ ಬೆಡ್ಬುಕ್ ಮಾಡುಲು ಧಾವಿಸುತ್ತಾರೆ. ಇದರಿಂದ ನಿಜವಾಗಿ ಅಗತ್ಯವಿರುವ ಸೋಂಕಿತರಿಗೆ ಹಾಸಿಗೆ ಲಭ್ಯವಾಗುತ್ತಿಲ್ಲ.
ಎಷ್ಟೋ ಜನ ಕರೊನಾವನ್ನು ನಗುನಗುತಾ ಅಥವಾ ತಮಗೆ ಅರಿವಿಲ್ಲದೆಯೇ ಎದುರಿಸಿದ್ದುಂಟು. ಇದು ನನ್ನ ಕುಟುಂಬದ ಅನುಭವ ಕೂಡ. ನಮಗೆ ಬಂದಿರುವುದು ಕರೊನಾ ಎಂದು ಗೊತ್ತಾಗಿದ್ದೇ ಗುಣಮುಖವಾಗುತ್ತಿದ್ದ ಕೊನೆಯ ಹಂತದಲ್ಲಿ. ಕುಟುಂಬದ ಎಲ್ಲರಿಗೂ ಜ್ವರ, ಮೈ-ಕೈ ನೋವು, ವಿಪರೀತ ತಲೆನೋವು ಇದ್ದು, ವಾಸಿಯಾಗುತ್ತಿರುವ ಸಂದರ್ಭದಲ್ಲಿ ನಾಲಿಗೆಯ ರುಚಿ ಕಳೆದುಕೊಂಡಾಗ ಕರೊನಾ ಬಂದಿರಬಹುದೆಂದು ಗ್ರಹಿಸಿ, ಕುಟುಂಬದ ಹಿರಿಯರ ಆರೋಗ್ಯದ ಹಿತದೃಷ್ಟಿಯಿಂದ ಮತ್ತು ಇತರರಿಗೆ ನಮ್ಮಿಂದ ಹರಡಬಾರದು ಎಂಬ ಕಾರಣ ಕ್ಕಾಗಿ ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ವರದಿಯಲ್ಲಿ ‘ಕರೊನಾ ಪಾಸಿಟಿವ್’ ಎಂದು ಗೊತ್ತಾಯಿತು. ಆದರೆ, ಅಷ್ಟು ಹೊತ್ತಿಗಾಗಲೇ ಎಲ್ಲರೂ ಗುಣಮುಖರಾಗಿದ್ದೆವು.
ತಾತ್ಪರ್ಯ ಇಷ್ಟೇ, ವೈದ್ಯರ ಸಲಹೆ ಪಡೆದು ಅನಿವಾರ್ಯ ಪರಿಸ್ಥಿತಿ ಇದ್ದಾಗ ಮಾತ್ರ ಆಸ್ಪತ್ರೆ ಸೇರುವುದು ಒಳಿತು. ಇತ್ತೀಚೆಗಷ್ಟೇ ನಾಗಪುರದಲ್ಲಿ ಹಿರಿಯರೊರೊಬ್ಬರು ತಮಗೆ ಹಂಚಿಕೆಯಾಗಿದ್ದ ಬೆಡ್ಡನ್ನು ತಮಗಿಂತ ಅವಶ್ಯವಿರುವ ಯುವರೋಗಿಗೆ ಬಿಟ್ಟುಕೊಟ್ಟಿದ್ದು ಮತ್ತು ಸುಪ್ರೀಂ ಕೋರ್ಟ್ನ ಹಿರಿಯ ನ್ಯಾಯವಾದಿ ರಾಜೀವ್ ಧವನ್ ತಮಗೆ ಆಸ್ಪತ್ರೆ ಆರೈಕೆಯ ಅವಶ್ಯಕತೆ ಇಲ್ಲ ಎಂದು ಅರಿತುಕೊಂಡು ತಕ್ಷಣದಲ್ಲಿ ಆಸ್ಪತ್ರೆಯಿಂದ ಮನೆಗೆ ತೆರಳಿ ಬೇರೆಯವರಿಗೆ ಅನುವು ಮಾಡಿಕೊಟ್ಟ ಮಾನವೀಯ ಉದಾಹರಣೆಗಳು ನಮ್ಮ ಮುಂದಿವೆ.
ಲಸಿಕೆಗಳು ಈಗಾಗಲೇ ವಿಶ್ವದಾದ್ಯಂತ ಕರೊನಾ ವಿರುದ್ಧ ಹೋರಾಡುತ್ತಿವೆ. ಸೋಂಕಿಗೆ ಜನ್ಮನೀಡಿದೆನ್ನಲಾದ ಚೀನಾದಲ್ಲಿಂದು ಸೋಂಕಿತರೇ ಇಲ್ಲ ಎಂಬುದು ನಗ್ನಸತ್ಯ. ಲಸಿಕೆಗಳ ಬಗ್ಗೆ ಅದೆಷ್ಟೋ ಅಪಪ್ರಚಾರ, ಟೀಕೆ, ಟಿಪ್ಪಣಿ, ರಾಜಕೀಯಗಳು ಆಗಿ ಹೋದವು. ಆದರೆ ಇಂದಿನ ಕಾಲಘಟ್ಟದಲ್ಲಿ ಲಸಿಕೆ ಪಡೆಯುವುದು ಅನಿವಾರ್ಯ ಮತ್ತು ಸುರಕ್ಷಿತ. ಅಡ್ಡಪರಿಣಾಮ ಇಲ್ಲದೆ ಇರುವುದರಿಂದ ಲಸಿಕೆ ಪಡೆದು ಒಂದು ರಕ್ಷಾಕವಚ ರೂಪಸಿಕೊಳ್ಳುವುದು ಸೂಕ್ತ. ಅಲ್ಲದೆ, ಕರೊನಾ ಸೇನಾನಿಗಳು ಇಂಥ ಸಂದಿಗ್ಧ ಸ್ಥಿತಿಯಲ್ಲಿ ಜೀವವನ್ನೇ ಪಣಕ್ಕಿಟ್ಟು ಹೋರಾಡುತ್ತಿದ್ದಾರೆ. ಕರೊನಾ ಸೇನಾನಿಗಳು ಅವರ ಮತ್ತು ಕುಟುಂಬದ ಆರೋಗ್ಯದ ಬಗ್ಗೆ ಸೂಕ್ತ ಕಾಳಜಿ ವಹಿಸಬೇಕು. ಜನಸಾಮಾನ್ಯರು ಸುರಕ್ಷಿತ ಅಂತರ ಕಾಯ್ದುಕೊಂಡು ಕೋವಿಡ್ ನಿಯಮಗಳನ್ನು ಪಾಲಿಸಿ ಲಭ್ಯತೆಗೆ ಅನುಸಾರವಾಗಿ ಲಸಿಕೆ ಪಡೆದುಕೊಳ್ಳಬೇಕು. ಈ ಮೂಲಕ ಕರೊನಾ ಎಂಬ ಮಹಾಪಿಡುಗಿನಿಂದ ನಮ್ಮನ್ನು ನಾವು ಮತ್ತು ದೇಶವನ್ನು ಕಾಪಾಡಿಕೊಳ್ಳೋಣ. ಕೋವಿಡ್ ಮೂರನೇ ಅಲೆ ಬರದಂತೆ, ಬಂದರೂ ಸದೃಢವಾಗಿ ಎದುರಿಸಲು ಸಿದ್ಧರಾಗೋಣ.
(ಲೇಖಕರು ರಾಜ್ಯ ಸರ್ಕಾರದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಮತ್ತು ನ್ಯಾಷನಲ್ ಲಾ ಸ್ಕೂಲ್, ಇಂಡಿಯಾ ಯುನಿವರ್ಸಿಟಿಯ ಅಕಾಡೆಮಿಕ್ ಕೌನ್ಸಿಲ್ ಸದಸ್ಯರು)