

ಪಾಶ್ಚಾತ್ಯ ಜಗತ್ತಿನಲ್ಲಿ ಪ್ಲೇಟೋನಿಂದ ಹಿಡಿದು ಜಾನ್ ಡ್ಯೂಯಿಯವರೆಗೆ ಅನೇಕ ತತ್ತ್ವಶಾಸ್ತ್ರಜ್ಞರು ಶಿಕ್ಷಣದ ವಿವಿಧ ಧ್ಯೇಯ ಮತ್ತು ಸಿದ್ಧಾಂತಗಳನ್ನು ಪ್ರತಿಪಾದಿಸಿದ್ದಾರೆ. ಸ್ವಾಮಿ ವಿವೇಕಾನಂದರ ಮಾನವ ನಿರ್ಮಾಣ ಶಿಕ್ಷಣದ ಮಹತ್ವ, ವೈಶಿಷ್ಟ್ಯ ಮತ್ತು ಪ್ರಾಮುಖ್ಯವನ್ನು ಇನ್ನಿತರ ಶೈಕ್ಷಣಿಕ ಸಿದ್ಧಾಂತಗಳ ಹಿನ್ನೆಲೆಯಲ್ಲಿ ಮಾತ್ರವೇ ಸರಿಯಾಗಿ ಮೌಲ್ಯಮಾಪನ ಮಾಡಬಹುದಾಗಿದೆ.
ಪ್ರಾಚೀನ ಭಾರತ ವಿದ್ಯಾಭ್ಯಾಸ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿತ್ತು. ವೈದಿಕ ಕಾಲದಲ್ಲಿ ಭಾರತ ವಿಶಿಷ್ಟ ರೀತಿಯ ಶಿಕ್ಷಣ ಪದ್ಧತಿ ಅಭಿವೃದ್ಧಿಪಡಿಸಿತ್ತು. ಅದನ್ನು ‘ಗುರುಕುಲ ಶಿಕ್ಷಣ ಪದ್ಧತಿ’ ಎಂದು ಕರೆದರು. ಲೌಕಿಕ ಜೀವನಕ್ಕೆ ಬೇಕಾದ ವಿದ್ಯೆಯನ್ನು ‘ಅಪರಾ ವಿದ್ಯೆ’, ಪರಿಪೂರ್ಣತೆ ಅಥವಾ ಉನ್ನತ ಜ್ಞಾನ ತಂದುಕೊಡುವ ವಿದ್ಯೆಯನ್ನು ‘ಪರಾ ವಿದ್ಯೆ’ ಎಂದು ಕರೆಯುತ್ತಿದ್ದರು. ನಮ್ಮ ದೇಶದಲ್ಲಿ ಹಿಂದಿನಿಂದಲೂ ‘ಪರಾ ವಿದ್ಯೆ’ ಅಥವಾ ಆಧ್ಯಾತ್ಮಿಕ ವಿದ್ಯೆಗೇ ಮಹತ್ವ ನೀಡಲಾಗಿತ್ತು. ಆದರೆ ಅಪರಾ ವಿದ್ಯೆ ಅಥವಾ ಲೌಕಿಕ ವಿದ್ಯೆಯನ್ನು ಕಡೆಗಣಿಸಲಾಗಿರ ಲಿಲ್ಲ. ಹಾಗೆ ನೋಡಿದರೆ ಪ್ರಾಚೀನ ಭಾರತದಲ್ಲಿ ವೈದ್ಯಕೀಯ, ಖಗೋಳಶಾಸ್ತ್ರ, ಸಾಮಾಜಿಕ ವ್ಯವಸ್ಥೆ ಮತ್ತು ಮಾನವನ ಮನಸ್ಸು- ಇವುಗಳಲ್ಲಿ ಉನ್ನತ ಮಟ್ಟದ ಅಧ್ಯಯನ ಜರುಗಿತ್ತು.
ಇತರ ದೇಶಗಳಲ್ಲಿನ ಶಿಕ್ಷಣ ಪದ್ಧತಿ: ಚೀನಾದ ಕನ್ಫ್ಯೂಷಿಯಸ್ (ಕ್ರಿ.ಪೂ. 551-441) ಮತ್ತು ಗ್ರೀಕ್ ದೇಶದ ಪ್ಲೇಟೋ (ಕ್ರಿ.ಪೂ. 427-341) ಶಿಕ್ಷಣದ ಬಗೆಗಿನ ಸ್ವತಂತ್ರ ಚಿಂತನಾಕ್ಷೇತ್ರದ ಹರಿಕಾರರು. ಅವರ ನಂತರ ಬಂದ ಚಿಂತಕರಲ್ಲಿ ಅರಿಸ್ಟಾಟಲ್, ಕೊಮೆನಿಯಸ್, ಅಗಸ್ಟೀನ್, ಜೀನ್ ಜಾಕ್ವೆಸ್ ರೋಸೋ, ಹರ್ಬರ್ಟ್, ಜಾನ್ ಡ್ಯೂಯಿ ಮುಂತಾದವರು ಪ್ರಮುಖರು. ಶಿಕ್ಷಣವು ವ್ಯಕ್ತಿಯೊಬ್ಬನ ನೈತಿಕ ಚಾರಿತ್ರ್ಯದ ಬೆಳವಣಿಗೆಯನ್ನು ಸಾಧಿಸಬೇಕೆಂದು ಹರ್ಬರ್ಟ್ ಪ್ರತಿಪಾದಿಸಿದ. ಅಮೆರಿಕದ ಶಿಕ್ಷಣತಜ್ಞನಾದ ಜಾನ್ ಡ್ಯೂಯಿ, ‘ಶಿಕ್ಷಣವೆಂದರೆ ಜೀವನವೇ ಆಗಿದೆ’ ಎಂಬ ಸಿದ್ಧಾಂತ ಮುಂದಿಟ್ಟ.
ವಿವೇಕಾನಂದರ ನಿಲುವು: ಯಾವುದೇ ಮಗು ಅನಂತ ಜ್ಞಾನ ಮತ್ತು ಸಾಮರ್ಥ್ಯಗಳ ಗಣಿಯಾಗಿದ್ದಾನೆ. ಯಾವುದೇ ಒಂದು ಶೈಕ್ಷಣಿಕ ವ್ಯವಸ್ಥೆ ಮಾನವನಲ್ಲಿ ಈಗಾಗಲೇ ಅಂತರ್ಗತವಾಗಿರುವ ಈ ದಿವ್ಯತೆಯ, ಪರಿಪೂರ್ಣತೆಯ, ಜ್ಞಾನದ ಮತ್ತು ಸಾಮರ್ಥ್ಯದ ಕ್ರಮಬದ್ಧ ಅಭಿವ್ಯಕ್ತಿಗೆ ಅವಕಾಶಗಳನ್ನು ಒದಗಿಸಿಕೊಡಬೇಕು; ಹಾಗೆಯೇ ಅದಕ್ಕೆ ಸರಿಯಾದ ವಾತಾವರಣ ನಿರ್ಮಾಣ ಮಾಡಿಕೊಡಬೇಕು. ಶಿಕ್ಷಣದ ಬಗ್ಗೆ ಮಾತನಾಡುವಾಗ, ಭಾರತದ ಜನಸಾಮಾನ್ಯರನ್ನು ಸ್ವಾಮೀಜಿ ಮನಸ್ಸಿನಲ್ಲಿಟ್ಟುಕೊಂಡಿದ್ದರು. ಭಾರತೀಯ ಜನಸಾಮಾನ್ಯರನ್ನು ಮೇಲೆತ್ತುವ ಬಹುತೇಕ ವಿದೇಶಿ ವಿಧಾನಗಳು ಭಾರತದ ಸಂದರ್ಭಕ್ಕೆ ಸೂಕ್ತವಾಗುವುದಿಲ್ಲ. ಇಲ್ಲಿ ಸ್ವಾಮಿ ವಿವೇಕಾನಂದರ ಮಹತ್ವವನ್ನು ನಾವು ಗುರುತಿಸಬೇಕು. ಜನಸಾಮಾನ್ಯರನ್ನು ಮೇಲೆತ್ತುವುದು ಎಂದು ಮುಕ್ತವಾಗಿ ಘೊಷಿಸಿದ ಪ್ರಪ್ರಥಮ ಧಾರ್ವಿುಕ ಮುಖಂಡ ಸ್ವಾಮಿ ವಿವೇಕಾನಂದರೇ. ಸ್ವಾಮೀಜಿ ಪ್ರತಿಪಾದಿಸಿದ ಜನಸಾಮಾನ್ಯರ ಏಳ್ಗೆಯ ವಿಧಾನ ಭಾರತೀಯ ಸಂಸ್ಕೃತಿಗೆ ಅನುಗುಣವಾದದ್ದು. ಇದರ ಪ್ರಾಯೋಗಿಕ ವಿಧಾನ ಶಿಕ್ಷಣದ ಮೇಲೆಯೇ ಆಧರಿಸಿದೆ. ಅವರು ಹೇಳುತ್ತಾರೆ, ‘ವಿದ್ಯೆ, ವಿದ್ಯೆ, ವಿದ್ಯೆಯೊಂದೇ. ಅನೇಕ ಐರೋಪ್ಯ ದೇಶಗಳಲ್ಲಿ ಪ್ರಯಾಣ ಮಾಡುತ್ತಿದ್ದಾಗ, ಅತಿ ದೀನರಿಗೂ ಅಲ್ಲಿ ಲಭಿಸಿರುವ ಸೌಕರ್ಯ ಮತ್ತು ವಿದ್ಯೆ- ಇವುಗಳನ್ನು ಕಂಡಾಗ ನನ್ನ ದೇಶದ ಬಡಜನರ ಸ್ಥಿತಿ ನನಗೆ ನೆನಪಾಗಿ, ಕಂಬನಿ ಸುರಿಸುತ್ತಿದ್ದೆ. ಈ ವ್ಯತ್ಯಾಸ ಹೇಗಾಯಿತು? ನನಗೆ ಸಿಕ್ಕಿದ ಉತ್ತರವೇ, ವಿದ್ಯೆ’. ‘ಶಿಕ್ಷಣ’ ಎಂಬ ಮಾಂತ್ರಿಕ ಪದದಿಂದ ಪರಿಹರಿಸಲಾಗದ ಯಾವ ಸಮಸ್ಯೆಯೂ ಇಲ್ಲ ಎಂದು ಸ್ವಾಮೀಜಿ ಭಾವಿಸಿದ್ದರು. ಆದರೆ ಇಲ್ಲಿ ಶಿಕ್ಷಣ ಎಂದರೆ, ಸ್ವಾಮೀಜಿ ಪ್ರಕಾರ, ಬರೀ ಪುಸ್ತಕಪಾಂಡಿತ್ಯವಲ್ಲ. ಅವರು ಹೇಳುವ ಪ್ರಕಾರ, ಮಾನವನ ಸಮಗ್ರ ಬೆಳವಣಿಗೆ ಅಥವಾ ‘ಮಾನವ-ನಿರ್ವಣ ಶಿಕ್ಷಣ’ವೇ ನಿಜವಾದ ಶಿಕ್ಷಣ. ‘ವಿದ್ಯಾಭ್ಯಾಸವೆಂದರೆ ಮಾನವನಲ್ಲಿ ಈಗಾಗಲೇ ಅಡಗಿರುವ ಪರಿಪೂರ್ಣತೆಯ ಪ್ರಕಟಣೆ’. ಇಲ್ಲಿ ಪರಿಪೂರ್ಣತೆಯ ಪ್ರಕಟಣೆ ಎನ್ನುವುದು ಮಾನವ ವ್ಯಕ್ತಿತ್ವದ ಲೌಕಿಕ ಆಯಾಮದ ಸಮಗ್ರ ಬೆಳವಣಿಗೆಯನ್ನು ಸೂಚಿಸುತ್ತದೆ. ಈ ವ್ಯಾಖ್ಯಾನದ ಮೂಲಕ ಸ್ವಾಮೀಜಿ ಶಿಕ್ಷಣವನ್ನು ಜೀವನದೊಂದಿಗೆ ಸಮೀಕರಿಸಿದ್ದಾರೆ.
ಒಂದು ಮಗು ತನ್ನದೇ ಆದ ಸಂವೇದನೆ, ಸಂಸ್ಕಾರ ಗಳನ್ನು ಸುತ್ತಲ ವಾತಾವರಣದಿಂದ ಸ್ವೀಕರಿಸುವ ಮತ್ತು ಬೆಳೆಯುವ ಸಾಧ್ಯತೆಯನ್ನು ಪಡೆದುಕೊಂಡೇ ಹುಟ್ಟಿರು ತ್ತದೆ. ಈ ಪ್ರಕ್ರಿಯೆಯಲ್ಲಿ, ಈ ಅಂತರ್ಗತ ಗುಣಗಳು ಅವನ ಸಾಮರ್ಥ್ಯ ಮತ್ತು ಪ್ರತಿಭೆಗಳನ್ನು ಹೊರಗೆ ತರುತ್ತವೆ. ಸ್ವಾಮೀಜಿ ಈ ಸಂದರ್ಭದಲ್ಲಿ ಗಿಡದ ಉದಾಹರಣೆ ನೀಡುತ್ತಾರೆ. ಗಿಡದ ಬೆಳವಣಿಗೆ ಕ್ಷಿಪ್ರಗೊಳಿಸಲು ನಾವೇನು ಮಾಡಬಹುದು? ಅದಕ್ಕೆ ನೀರು ಮತ್ತು ಗೊಬ್ಬರ ಒದಗಿಸಬಹುದು ಅಷ್ಟೇ. ಆದರೆ ಗಿಡ ತಾನೇ ಅದನ್ನು ಹೀರಿಕೊಂಡು, ಬೆಳೆಯಬೇಕಾಗುತ್ತದೆ.
ಸ್ವಾಮಿ ವಿವೇಕಾನಂದರು ಹೀಗೆ ಹೇಳುತ್ತಾರೆ: ‘ಒಂದು ಮಗು ತನಗೆ ತಾನೇ ಕಲಿತುಕೊಳ್ಳುತ್ತದೆ. ಆದರೆ ಅದು ತನ್ನ ಮಾರ್ಗದಲ್ಲಿ ಮುಂದೆ ಸಾಗುವುದಕ್ಕೆ ನೀವು ಸಹಾಯ ಮಾಡಬಹುದು. ಅಡೆತಡೆಗಳನ್ನು ನಿವಾರಣೆ ಮಾಡಬಹುದು, ಆದರೆ ಜ್ಞಾನವು ಸ್ವಭಾವಸಹಜವಾಗಿಯೇ ಅಂತರಂಗದಿಂದ ಮೂಡಿಬರುತ್ತದೆ. ಗಿಡದ ಸುತ್ತಲಿನ ಮಣ್ಣನ್ನು ಸ್ವಲ್ಪ ಸಡಿಲ ಮಾಡಿ; ಆಗ ಅದು ಸುಲಭವಾಗಿ ಮೇಲಕ್ಕೆ ಬರುತ್ತದೆ. ಅದರ ಸುತ್ತಲೂ ಬೇಲಿ ಹಾಕಿ, ಅದನ್ನು ಯಾರೂ ನಾಶಗೊಳಿಸದಂತೆ ನೋಡಿಕೊಳ್ಳಿ. ಅಲ್ಲಿಗೆ ನಿಮ್ಮ ಕರ್ತವ್ಯ ಮುಗಿಯಿತು. ನೀವು ಇನ್ನೇನನ್ನೂ ಮಾಡಲಾರಿರಿ. ಇನ್ನು ಮುಂದಾಗಬೇಕಾದುದು ಬೀಜ ಮೊಳೆಯುವಿಕೆ. ಅದು ಅದರ ಸ್ವಭಾವದಲ್ಲಿಯೇ ಇದೆ. ಇದೇ ರೀತಿ ಮಗುವಿನ ಶಿಕ್ಷಣದ ವಿಷಯದಲ್ಲಿಯೂ. ಮಗುವೊಂದು ತನಗೆ ತಾನೇ ಕಲಿತುಕೊಳ್ಳುತ್ತದೆ’.
ಶಿಕ್ಷಣದ ಸಮಸ್ಯೆ ಮಾನವನ ಸ್ವಭಾವದ ಬಗ್ಗೆ ನಮಗೆ ಇರುವ ಕಲ್ಪನೆಯನ್ನೇ ಹೆಚ್ಚಾಗಿ ಆಧರಿಸಿದೆ. ಇಲ್ಲಿ ಸ್ವಾಮೀಜಿ ಆಧುನಿಕ ಶಿಕ್ಷಣ ತಜ್ಞರಿಗಿಂತ ಭಿನ್ನವಾದ ನಿಲುವನ್ನು ವ್ಯಕ್ತಪಡಿಸುತ್ತಾರೆ. ಆಧುನಿಕ ಶಿಕ್ಷಣತಜ್ಞರು ಮಾನವನನ್ನು ಶರೀರ-ಮನಸ್ಸಿನ ಹಂತಕ್ಕೆ ಸೀಮಿತಗೊಳಿಸುತ್ತಾರೆ. ಆದರೆ ಸ್ವಾಮೀಜಿ ಮಾನವನ ವ್ಯಕ್ತಿತ್ವದ ಅಂತರಾಳದ ಅನ್ವೇಷಣೆಯಲ್ಲಿ ತೊಡಗುತ್ತಾರೆ. ಅವರ ಪ್ರಕಾರ, ಮಾನವನ ನೈಜ ಸ್ವಭಾವವೆಂದರೆ, ಶುದ್ಧ ಚೈತನ್ಯ. ಮನಸ್ಸು ಮತ್ತು ದೇಹಗಳು ಈ ಆತ್ಮವಸ್ತುವಿನ ಬಾಹ್ಯ ಆವರಣಗಳು, ಅಷ್ಟೇ. ಆತ್ಮವು ಪರಿಪೂರ್ಣವೂ, ಸ್ವಯಂಜ್ಯೋತಿ ಸ್ವರೂಪವೂ ಆಗಿದೆ. ವಿವಿಧ ಬಣ್ಣಗಳ ಮತ್ತು ಆಕೃತಿಗಳ ಗಾಜುಗಳ ಮೇಲೆ ಹಾದುಹೋಗುವ ಬೆಳಕು, ಆಯಾ ಬಣ್ಣಗಳನ್ನು ಮತ್ತು ಆಕೃತಿ ಗಳನ್ನು ಪಡೆದುಕೊಳ್ಳುವುದಷ್ಟೇ. ಅದರಂತೆಯೇ, ಆತ್ಮದ ಬೆಳಕು ಮನಸ್ಸಿನ ಮೂಲಕ ಹಾದುಹೋಗುವಾಗ, ಆಲೋಚನೆಗಳನ್ನು ಮತ್ತು ಬಾಹ್ಯವಸ್ತುಗಳ ರೂಪವನ್ನು ಪಡೆದುಕೊಳ್ಳುತ್ತದೆ. ಹೀಗೆ ಅರಿವು ಅಥವಾ ಅನುಭವದ ಪ್ರತಿಯೊಂದು ಕ್ರಿಯೆ ಕೂಡ ಈ ಆಂತರಿಕ ಬೆಳಕಿನ ಅಭಿವ್ಯಕ್ತಿಯೇ ಆಗಿದೆ.
ವೇದಾಂತದ ಈ ಪರಿಕಲ್ಪನೆ ಶಿಕ್ಷಣಕ್ಕೂ ವಿಸ್ತರಿಸಿದಾಗ ನಮ್ಮ ಗಮನಕ್ಕೆ ಬರುವುದು ಇಷ್ಟು: ಯಾವುದು ನಮ್ಮನ್ನು ಸರಿಯಾಗಿ ಅರಿತುಕೊಳ್ಳಲು ನೆರವಾಗು ತ್ತದೆಯೋ, ಅದೇ ನಿಜವಾದ ಶಿಕ್ಷಣ. ಆದ್ದರಿಂದ, ಯಾವ ಪರಿಪೂರ್ಣ ಜ್ಞಾನದ ಮೂಲಕ ಆತ್ಮದ ಅಂತರಂಗದ ಬೆಳಕು ಸಂಪೂರ್ಣವಾಗಿ ಪ್ರಕಟ ಹೊಂದುವುದೋ ಅಂತಹ ಶಿಕ್ಷಣವನ್ನು ದೊರಕಿಸಿಕೊಡುವ ಶಿಕ್ಷಣವೇ ಶ್ರೇಷ್ಠ ಮಟ್ಟದ ಶಿಕ್ಷಣ.
ಶಿಕ್ಷಣದ ಕೇಂದ್ರವಾಗಿ ಧರ್ಮ: ಧರ್ಮದ ಬಗೆಗಿನ ವಿವೇಕಾನಂದರ ವ್ಯಾಖ್ಯಾನ ಹೀಗಿದೆ: ‘ಧರ್ಮವೆಂದರೆ ಮಾನವನಲ್ಲಿ ಈಗಾಗಲೇ ಇರುವ ದಿವ್ಯತೆಯ ಅಭಿವ್ಯಕ್ತಿ’. ಶಿಕ್ಷಣವು ಆತ್ಮಸಾಕ್ಷಾತ್ಕಾರ ಮಾಡಿಕೊಳ್ಳುವುದಕ್ಕೆ ವ್ಯಕ್ತಿಯೊಬ್ಬ ಕೈಗೊಳ್ಳುವ ಮಹಾನ್ ಪ್ರಯತ್ನದ ಒಂದು ಭಾಗ ಮಾತ್ರ. ಆ ಆತ್ಮಸಾಕ್ಷಾತ್ಕಾರವನ್ನೇ ಸ್ವಾಮೀಜಿ ‘ಧರ್ಮ’ ಎಂದು ಕರೆದರು. ಆಧುನಿಕ ಶಿಕ್ಷಣತಜ್ಞರು 'Self' ಎನ್ನುವ ಪಾರಿಭಾಷಿಕ ಪದವನ್ನು ನಾವು ಸಾಮಾನ್ಯ ಭಾಷೆಯಲ್ಲಿ ಬಳಸುವ ‘ನಾನು’ ಅಥವಾ ‘ಅಹಂ’ ಅನ್ನು ಸೂಚಿಸಲು ಉಪಯೋಗಿಸುತ್ತಾರೆ. ಸ್ವಾಮೀಜಿ ಈ ಪದವನ್ನು ವೇದಾಂತವು ನಿರೂಪಿಸುವ ಅತೀಂದ್ರಿಯ ಆತ್ಮವನ್ನು ಸೂಚಿಸಲು ಬಳಸುತ್ತಾರೆ.
ಸ್ವಾಮೀಜಿ ಹೇಳುತ್ತಾರೆ: ‘ಧರ್ಮವು ಶಿಕ್ಷಣದ ಅತ್ಯಂತ ಅಂತರಾಳದ ಕೇಂದ್ರವೆಂದು ನಾನು ಭಾವಿಸುತ್ತೇನೆ’. ಎಫ್.ಎಚ್. ಹರ್ಬರ್ಟ್ ಎಂಬ ಶಿಕ್ಷಣತಜ್ಞನು, ಪಠ್ಯಕ್ರಮವು ಒಂದು ‘ಕೇಂದ್ರ ಪಠ್ಯವಿಷಯ’ದ (Core Subject) ಸುತ್ತಲೂ ರೂಪುಗೊಂಡಿರಬೇಕಾದ ಆವಶ್ಯಕತೆಯನ್ನು ಗುರುತು ಮಾಡಿ ತೋರಿಸುತ್ತಾನೆ. ಮಾನವ ಜನಾಂಗದ ಇತಿಹಾಸವೇ ಆ ಕೇಂದ್ರ ವಿಷಯವಾಗಬೇಕೆಂದು ಅವನ ಅಭಿಪ್ರಾಯ. ಇನ್ನುಳಿದ ಪಠ್ಯವಿಷಯಗಳನ್ನು, ಕೇಂದ್ರ ಪಠ್ಯವಿಷಯದ ಜೊತೆಗೇ ಬೋಧಿಸಬೇಕು. ಕೇಂದ್ರ ವಿಷಯಕ್ಕೂ, ಇತರ ವಿಷಯಗಳಿಗೂ ಇರುವ ಆಂತರಿಕ ಸಂಬಂಧಗಳನ್ನು ತಿಳಿಸಿಕೊಡಬೇಕು. ಭಾರತೀಯ ಶಿಕ್ಷಣದ ಪಠ್ಯಕ್ರಮ, ಧರ್ಮ ಅಥವಾ ಆಧ್ಯಾತ್ಮಿಕತೆಯನ್ನೇ ಕೇಂದ್ರ ಪಠ್ಯವಿಷಯವನ್ನಾಗಿ ಹೊಂದಿರಬೇಕೆಂದು ವಿವೇಕಾನಂದರು ಹೇಳುತ್ತಾರೆ. ಹಾಗೆಯೇ, ಪ್ರತಿಯೊಂದು ಪ್ರಕಾರದ ಸೇವೆಯೂ, ಭಗವಂತನನ್ನು ಆರಾಧಿಸುವ ವಿಧಾನವೆಂದು ಅವರಲ್ಲಿ ಮನಗಾಣಿಸಬಹುದು. ಹಾಗೆ ನೋಡಿದರೆ, ವಿಜ್ಞಾನ, ಕಲೆ ಮತ್ತು ಸಮಾಜಶಾಸ್ತ್ರ- ಇವುಗಳನ್ನೂ ದಿವ್ಯಜೀವನದ ಅವಿಭಾಜ್ಯ ಅಂಗಗಳೆಂದು ಪರಿಗಣಿಸಬೇಕಾಗುತ್ತದೆ. ಆ ರೀತಿಯಲ್ಲಿಯೇ ಅವುಗಳನ್ನು ಮಕ್ಕಳಿಗೆ ಬೋಧಿಸಬೇಕಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ಜೀವನದ ಮುಖ್ಯ ಧ್ಯೇಯ ಆತ್ಮಸಾಕ್ಷಾತ್ಕಾರವೆಂದೂ, ಎಲ್ಲ ಬಗೆಯ ಸಾಧನೆಯೂ ಅದನ್ನು ಸಾಕಾರಮಾಡಿಕೊಳ್ಳುವ ಕಡೆಗಿನ ಮೆಟ್ಟಲುಗಳೆಂದೂ ಮಕ್ಕಳಿಗೆ ತಿಳಿಸಿಕೊಡಬೇಕು. ಪಠ್ಯವಿಷಯಗಳಾದ ವಿಜ್ಞಾನ, ಕಲೆ ಮತ್ತು ಸಮಾಜ ಶಾಸ್ತ್ರಗಳ ಅಧ್ಯಯನಕ್ಕೆ ಕೂಡ ಉನ್ನತ ಮಟ್ಟದ ಉದ್ದೇಶ ಅಥವಾ ಧ್ಯೇಯ ಇದೆ ಎಂದು ಮಕ್ಕಳು ಅರಿತುಕೊಂಡಾಗ, ಇಡೀ ಜೀವನವೇ ಅವರಿಗೆ ಅರ್ಥವತ್ತಾಗಿ ಕಂಡು ಬರುತ್ತದೆ. ಹಾಗೆಯೇ ಇಡೀ ಅಸ್ತಿತ್ವವೇ ಅವರಿಗೆ ಮಹಾನ್ ಅವಕಾಶದಂತೆ ತೋರಿಬರುತ್ತದೆ. ಈ ಬಗೆಯ ಮನೋಧರ್ಮ ಅವರಲ್ಲಿ ಪ್ರಚಂಡ ಆಶಾಭಾವನೆಯನ್ನೂ, ಆತ್ಮವಿಶ್ವಾಸವನ್ನೂ ತುಂಬುತ್ತದೆ. ಹಾಗೂ ಅವರು ಬೆಳೆದಂತೆಲ್ಲ, ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಲು ಸನ್ನದ್ಧರಾಗುತ್ತಾರೆ. ಈ ರೀತಿಯಲ್ಲಿ ಅವರು ತಮ್ಮ ಜೀವನ ಮತ್ತು ಇತರರ ಜೀವನವನ್ನು ಮಂಗಳಮಯವನ್ನಾಗಿ ಮಾಡಿಕೊಳ್ಳುತ್ತಾರೆ. ಧರ್ಮವೇ ಶಿಕ್ಷಣದ ಸಾರತತ್ತ್ವ ಎನ್ನುವ ಸ್ವಾಮೀಜಿಯವರ ಸಿದ್ಧಾಂತದ ಜೊತೆಗೆ ನಿಕಟವಾಗಿ ಸಂಬಂಧ ಹೊಂದಿರುವ ಇನ್ನೊಂದು ಭಾವನೆಯೆಂದರೆ, ‘ಶಿಕ್ಷಣದ ಉದ್ದೇಶ ಮಾನವ ನಿರ್ಮಾಣ ಮತ್ತು ಚಾರಿತ್ರ್ಯ ನಿರ್ವಣ’ ಎಂಬುದು.
ಮಾನವ ಇತಿಹಾಸದ ಪ್ರಾರಂಭಭಾಗದಲ್ಲಿ, ಶಿಕ್ಷಣದ ಕಲ್ಪನೆ ಜೀವನಕ್ಕೆ ಬೇಕಾದ ಕೆಲವು ಕುಶಲತೆಗಳನ್ನು ಮೈಗೂಡಿಸಿಕೊಳ್ಳುವ ಮಟ್ಟಕ್ಕೆ ಮಾತ್ರ ಸೀಮಿತವಾಗಿತ್ತು. ಅದು ಕ್ರಮೇಣ ವಿಕಸನಗೊಂಡು, ಸ್ವಾಮೀಜಿ ಪ್ರತಿಪಾದಿಸಿದ ಮಾನವ-ನಿರ್ವಣ ಸಿದ್ಧಾಂತವಾಗಿ ರೂಪುಗೊಂಡಿತು. ಈ ಸಿದ್ಧಾಂತದಲ್ಲಿ ಮಾನವ ಜೀವಿತ ಮತ್ತು ಚೈತನ್ಯದ ವಿಕಾಸವೇ ಶಿಕ್ಷಣ ಎಂಬ ಅಂಶವೇ ಪ್ರಧಾನ. ಮಾನವಕುಲ ಆಲೋಚಿಸಿ ರುವ ಉನ್ನತ ಮಟ್ಟದ ಶೈಕ್ಷಣಿಕ ವಿಧಾನ ಇದಾಗಿದೆ. ಇಂತಹ ಶ್ರೇಷ್ಠ ಶೈಕ್ಷಣಿಕ ಚಿಂತನವೇ ಮನುಕುಲಕ್ಕೆ ಸ್ವಾಮಿ ವಿವೇಕಾನಂದರು ನೀಡಿರುವ ಮಹತ್ವದ ಕೊಡುಗೆಗಳಲ್ಲಿ ಒಂದು.
(ಲೇಖಕರು ಮೈಸೂರು ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷರು)