

ಭಾರತದ ಶಿಕ್ಷಣ ವ್ಯವಸ್ಥೆ ಹಿಂದೆಂದಿಗಿಂತಲೂ ಈಗ ಅತ್ಯುತ್ತಮ ಗುಣಮಟ್ಟ ಹೊಂದಿದೆ ಎಂದು 73% ಯುವಜನರು ನಂಬಿರುವುದಾಗಿ ಯುನಿಸೆಫ್ನ ‘ದ ಚೇಂಜಿಂಗ್ ಚೈಲ್ಡ್ಹುಡ್ ಪ್ರಾಜೆಕ್ಟ್’ ಎಂಬ ಸಮೀಕ್ಷಾ ವರದಿ ತಿಳಿಸಿದೆ. ಶಿಕ್ಷಣಕ್ಕೆ ಸಂಬಂಧಿಸಿ ಪುರುಷರು ಮತ್ತು ಮಹಿಳೆಯರಲ್ಲಿ ವಿಭಿನ್ನ ಪರಿಕಲ್ಪನೆಗಳಿವೆ. ನಲವತ್ತು ವರ್ಷ ಮೇಲ್ಪಟ್ಟ ಭಾರತೀಯ ಮಹಿಳೆಯರ ಪೈಕಿ ಶೇಕಡ 78 ಜನ ಇಂದಿನ ಮಕ್ಕಳಿಗೆ ಸಿಗುತ್ತಿರುವ ಶಿಕ್ಷಣ ವ್ಯವಸ್ಥೆ ಹಿಂದಿನ ವರ್ಷಗಳಿಗಿಂತ ಎಷ್ಟೋ ಅತ್ಯುತ್ತಮ ಮಟ್ಟದಲ್ಲಿದೆ ಎಂದು ಹೇಳಿದ್ದಾರೆ.
ಇದೇ ವಯೋಮಾನದ ಪುರುಷರ ಪೈಕಿ ಶೇಕಡ 72 ಜನ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 15ರಿಂದ 24 ವರ್ಷ ವಯೋಮಾನದವರ ಪೈಕಿ ಶೇಕಡ 57 ಯುವಜನರು ಭಾರತದ ಶಿಕ್ಷಣ ವ್ಯವಸ್ಥೆ ಅತ್ಯುತ್ತಮ ಗುಣಮಟ್ಟದು ಎಂದು ಹೇಳಿದ್ದಾರೆ. ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಶೇಕಡ 59 ಜನ 15 ವರ್ಷದಿಂದ 24 ವರ್ಷ ವಯೋಮಾನದವರು. ಯಶಸ್ಸಿನಲ್ಲಿ ಶಿಕ್ಷಣ ತುಂಬ ಮುಖ್ಯಪಾತ್ರವಹಿಸುತ್ತಿದೆ ಎಂಬುದು ಇವರ ಅಭಿಪ್ರಾಯ.
ಡಿಜಿಟಲ್ ಟೆಕ್ನಾಲಜಿಯು ಮಕ್ಕಳ ಶಿಕ್ಷಣದಲ್ಲಿ ಹೆಚ್ಚು ನೆರವಾಗುತ್ತಿದೆ ಎಂದು ಶೇಕಡ 67 ಹುಡುಗಿಯರು ಅಭಿಪ್ರಾಯಪಟ್ಟರೆ, ಶೇಕಡ 59 ಹುಡುಗರಲ್ಲಿ ಈ ಅಭಿಪ್ರಾಯವಿದೆ. ಭಾರತದಲ್ಲಿ ಶೇಕಡ 57 ಯುವಜನರು ನಿತ್ಯ ಇಂಟರ್ನೆಟ್ ಬಳಸುತ್ತಿದ್ದಾರೆ. ಶೇಕಡ 27 ಹಳಬರು ಮಾತ್ರ ನಿತ್ಯ ಇಂಟರ್ನೆಟ್ ಬಳಸುವವರು. ಇದೇ ರೀತಿ, ಹವಾಮಾನ ವೈಪರೀತ್ಯದ ವಿಚಾರವನ್ನು ಭಾರತದಲ್ಲಿ ಶೇಕಡ 55 ಯುವಜನರು ಅರಿತಿದ್ದರೆ, ಹಳಬರ ಪೈಕಿ ಶೇಕಡ 42 ಜನರಿಗೆ ಮಾತ್ರವೇ ಈ ವಿಚಾರ ಗೊತ್ತು ಎಂದು ವರದಿ ತಿಳಿಸಿದೆ. 21 ರಾಷ್ಟ್ರಗಳ ಒಟ್ಟು 21,000 ಜನ ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದರು.