

ಕೆಲವು ವರ್ಷಗಳ ಹಿಂದೆ ಸಾಧನೆ ಮಾಡುವುದಕ್ಕೆ ಹೆಚ್ಚು ಸೌಲಭ್ಯಗಳಿರಲಿಲ್ಲ. ಈಗ ಆ ಪರಿಸ್ಥಿತಿ ಇಲ್ಲ. ಇವತ್ತು ಸೌಲಭ್ಯಗಳು ಹೆಚ್ಚುತ್ತಿವೆ. ಆದರೆ, ಜೀವನದಲ್ಲಿ ಏನೂ ಸಾಧನೆ ಮಾಡುವುದನ್ನು ಬಿಟ್ಟು, ದುಶ್ಚಟಗಳನ್ನು ಬೆಳೆಸಿಕೊಳ್ಳುತ್ತಿದ್ದೇವೆ. ಕುಡಿತ, ಸಿಗರೇಟ್, ಡ್ರಗ್ಸ್... ಹೀಗೆ ಬೇಡದ ಚಟಗಳನ್ನು ರೂಢಿಸಿಕೊಂಡು ಅದರ ದಾಸರಾಗುತ್ತಿದ್ದೇವೆ. ಮನುಷ್ಯನಿಗೆ ಕೆಲವು ಕಾಯಿಲೆಗಳು ವಂಶಪಾರಂಪರ್ಯವಾಗಿ ಬರುತ್ತವೆ. ಅದನ್ನು ಏನು ಮಾಡುವುದಕ್ಕೆ ಸಾಧ್ಯವಿಲ್ಲ. ಆದರೆ, ಯಾವ ಸಮಸ್ಯೆ ಇಲ್ಲದಿದ್ದರೂ ದುಶ್ಚಟಗಳಿಂದ ಕಾಯಿಲೆಗೆ ಒಳಗಾಗುವುದಿದೆಯಲ್ಲ, ಅದು ದುರಂತ. ವಂಶಪಾರಂಪರ್ಯವಾಗಿ ಬರುವ ಕಾಯಿಲೆಗಳನ್ನು ನಾವು ತಡೆಯುವ ಸಾಧ್ಯತೆ ಇದೆ. ಅವು ಬಂದರೂ, ಒಂದಿಷ್ಟು ವಯಸ್ಸಿನ ನಂತರ ಬರುತ್ತವೆ. ಆದರೆ, ದುಶ್ಚಟಗಳನ್ನು ಕಲಿಯುವುದರಿಂದ, ತಂದೆ-ತಾಯಿಯಿಂದ ಬರುವ ಕಾಯಿಲೆಗಳಿಗೆ ಬಹಳ ಬೇಗ ಬಾಗಿಲು ತೆರೆಯುತ್ತಿದ್ದೇವೆ. ಇವತ್ತು ಜೀವನದಲ್ಲಿ ಏನೋ ಮಾಡಬೇಕು, ಸಾಧಿಸಬೇಕು ಎಂದು ಆಸೆಪಡುವವರಲ್ಲಿ ಹೆಣ್ಮಕ್ಕಳೇ ಹೆಚ್ಚು. ಹೀಗೆ ಸಾಧನೆಯ ಹಂಬಲ ಇರುವ 100 ಜನರಲ್ಲಿ ಹೆಣ್ಮಕ್ಕಳ ಸಂಖ್ಯೆ 15 ಇದ್ದರೆ, ಗಂಡುಮಕ್ಕಳ ಸಂಖ್ಯೆ 5 ಮಾತ್ರ. ಮಿಕ್ಕವರೆಲ್ಲರೂ ಯಾವುದೋ ಚಟಕ್ಕೆ ದಾಸರಾಗಿ, ಏನೋ ಒಂದು ನೆಪ ಹೇಳಿಕೊಂಡು ಓಡಾಡುತ್ತಿದ್ದಾರೆ. ನಮ್ಮ ತಂದೆ ದಿನಾಲೂ ಕುಡಿದು ಬರುತ್ತಾರೆ ಅಂತಲೋ, ನಮ್ಮನೆಯಲ್ಲಿ ಯಾವಾಗಲೂ ಜಗಳವಾಗುತ್ತಿರುತ್ತದೆ ಅಂತಲೋ ಅಥವಾ ಇನ್ಯಾವುದೋ ಕಾರಣಕ್ಕೆ ಮತ್ತು ಅದನ್ನು ಮರೆಯುವುದಕ್ಕೆ ಕುಡಿತಕ್ಕೆ ದಾಸರಾಗಿರುವ ಹಲವರನ್ನು ನೋಡಿರಬಹುದು. ತಂದೆ ಕುಡಿಯುತ್ತಾರೆ ಎಂಬ ಬೇಸರದಲ್ಲಿ ನೀವು ಸಹ ಕುಡಿದು ನಿಮ್ಮ ಸಂಸಾರ ಹಾಳು ಮಾಡಿಕೊಂಡರೆ ಏನು ಬಂದ ಹಾಗಾಯಿತು? ಅದೊಂದು ನೆಪ ಅಷ್ಟೇ. ಶೋಕಿ ಅಥವಾ ದುರಭ್ಯಾಸಗಳಿಗೆ ಒಂದು ಕುಂಟುನೆಪ ಮಾಡಿಕೊಳ್ಳಬೇಡಿ. ಅದರಿಂದ ಹೊರಬಂದು, ಜೀವನದಲ್ಲಿ ಏನಾದರೂ ಸಾಧಿಸುವ ಬಗ್ಗೆ ಯೋಚನೆ ಮಾಡಿ.
ಸಾಮಾನ್ಯವಾಗಿ, ಬಹಳಷ್ಟು ಜನರಿಗೆ ಭವಿಷ್ಯದಲ್ಲಿ ನಂಬಿಕೆ ಇರುತ್ತದೆ. ನಾಳೆ ಏನಾಗಬಹುದು, ಮುಂದಿನ ವರ್ಷ ಏನಾಗಬಹುದು ಎಂದು ಯೋಚಿಸುತ್ತಿರುತ್ತಾರೆ. ಆದರೆ, ಈ ವರ್ಷ ನೀವೇನು ಮಾಡುತ್ತೀರಾ ಮತ್ತು ಮುಂದಿನ ವರ್ಷ ನಿಮ್ಮ ಜೀವನ ಹೇಗಿರಬೇಕು ಎಂದು ಬಯಸುತ್ತೀರಾ ಎಂದು ಯೋಚಿಸಿದರೆ, ಅದೇ ನಿಮ್ಮ ಭವಿಷ್ಯ. ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲೇ ಇರುತ್ತದೆ.
ದೇವರು ಎಲ್ಲರಿಗೂ ಆಯಸ್ಸು ಕೊಟ್ಟಿರುತ್ತಾನೆ, ಆರೋಗ್ಯ ಕೊಟ್ಟಿರುವುದಿಲ್ಲ. ಆ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳಬೇಕು. ಬರೀ ದುಶ್ಚಟಗಳಷ್ಟೇ ಅಲ್ಲ, ನಾವು ತಿನ್ನುವ ಆಹಾರದ ಮೇಲೂ ನಮ್ಮ ಆರೋಗ್ಯ ಅವಲಂಬಿತವಾಗಿರುತ್ತದೆ. ಬೇರೆ ದೇಶಗಳಿಂದ ಅನೇಕ ತಿಂಡಿ-ತಿನಿಸುಗಳು ಬಂದಿವೆ. ಅವು ನಮಗೆ ಗೊತ್ತಿಲ್ಲದೆಯೇ ನಮ್ಮ ಮೇಲೆ ದುಷ್ಪರಿಣಾಮ ಮಾಡುತ್ತಿರುತ್ತವೆ.
ನನ್ನ ವಿಷಯದ ಬಗ್ಗೆಯೇ ಹೇಳುವುದಾದರೆ, ನಾನು ಹಿಂದೊಮ್ಮೆ ದಿನಕ್ಕೆ 30 ಸಿಗರೇಟ್ ಸೇದುತ್ತಿದ್ದೆ. ನಮ್ಮ ತಾಯಿಗೆ ಬ್ರೖೆನ್ಸ್ಟ್ರೋಕ್ ಆಯಿತು. 27 ದಿನಗಳ ಕಾಲ ಅವರು ನರಳಿದರು. ಉಸಿರು ಕೆಳಗೆ ಇಳಿಯುತ್ತಿರಲಿಲ್ಲ. ಇದನ್ನು ನೋಡಿ ಗಾಬರಿಯಾಯಿತು. ಹೆಣ್ಮಕ್ಕಳಿಗೆ ದುಶ್ಚಟವಿರುವುದಿಲ್ಲ. ಅಂಥವರಿಗೇ ಹೀಗೆಲ್ಲ ಆಗಬೇಕಾದರೆ, ಒಬ್ಬ ಸ್ಮೋಕರ್ಗೆ ಇನ್ನೆಷ್ಟು ಲಂಗ್ಸ್ ಡ್ಯಾಮೇಜ್ ಆಗಬಹುದು ಎಂದು ಯೋಚಿಸಿದೆ. ಆಗಿನಿಂದ ಸಿಗರೇಟು ಬಿಟ್ಟೆ. ಹಾಗಾಗಿ, ನಾವು ಬದಲಾಗಬೇಕು ಎಂದರೆ ಯಾರನ್ನೋ ಕೇಳಿ ಬದಲಾಗುವ ಅವಶ್ಯಕತೆ ಇಲ್ಲ. ಇನ್ನೊಬ್ಬರನ್ನು ನೋಡಿ ಬದಲಾಗಬೇಕು ಎನ್ನುವುದಕ್ಕಿಂತ ಮೊದಲು ಒಳಗಿನಿಂದ ಬದಲಾಗಬೇಕು. ಒಳಗೆ ಬದಲಾಗುವುದು ಎಂದರೆ ಅದು ಅಷ್ಟು ಸುಲಭದ ಮಾತಲ್ಲ. ಅದೊಂದು ಮೆಕ್ಯಾನಿಸಂ. ಒಮ್ಮೆ ನೀವು ಬದಲಾಗಿಬಿಟ್ಟರೆ, ಯಾರನ್ನು ಬೇಕಾದರೂ ಗೆಲ್ಲಬಹುದು. ಅದಕ್ಕೂ ಮೊದಲು ನಮ್ಮನ್ನು ನಾವು ಗೆಲ್ಲುತ್ತ ಹೋಗಬೇಕು.
ಇನ್ನು, ನಮ್ಮ ಅಂಗಾಂಗಗಳು ಮಗುವಿನ ತರಹ ಇರುತ್ತವೆ. ಮೇಲೆ ಕೆರೆತ ಆದರೆ, ಕೆರೆಯಬಹುದು. ಗಾಯವಾದರೆ ಮುಲಾಮು ಹಚ್ಚಬಹುದು. ಕೈ, ಕಾಲು, ಬೆರಳು, ಚರ್ಮ ಕಾಣುವ ತರಹ ಒಳಗಿನ ಅಂಗಾಂಗಗಳು ಕಾಣುವುದಿಲ್ಲ. ದುಶ್ಚಟಗಳಿಂದ ಹಲವು ಅಂಗಗಳು ಕೆಡುತ್ತ ಹೋಗುತ್ತವೆ. ನಾನು ತುಂಬ ಒಳ್ಳೆಯವನು, ಒಬ್ಬರಿಗೆ ಹೊಡೆಯುವುದಿಲ್ಲ, ಬಯ್ಯುವುದಿಲ್ಲ, ಯಾರನ್ನೂ ಹಿಂಸಿಸುವುದಿಲ್ಲ ಎನ್ನುವುದಷ್ಟೇ ಅಲ್ಲ. ದೇಹದ ಅಂಗಗಳಿಗೆ ಯಾಕೆ ಹಿಂಸೆ ನೀಡಬೇಕು? ಅವುಗಳಿಗೆ ಮಾತು ಬರುವುದಿಲ್ಲ ಎಂಬ ಕಾರಣಕ್ಕೆ ಯಾಕೆ ಚಟಗಳಿಂದ ಬಲವಂತವಾಗಿ ಅವುಗಳನ್ನು ಹಾಳು ಮಾಡಬೇಕು? ಅಂಗಗಳು ನಾವೇನು ಕೊಟ್ಟರೂ ತೆಗೆದುಕೊಳ್ಳುತ್ತವೆ. ಒಳ್ಳೆಯದನ್ನು ಕೊಟ್ಟರೂ ತೆಗೆದುಕೊಳ್ಳುತ್ತವೆ, ಕೆಟ್ಟದ್ದನ್ನು ಕೊಟ್ಟರೂ ತೆಗೆದುಕೊಳ್ಳುತ್ತವೆ. ಕೆಟ್ಟದನ್ನು ಕೊಟ್ಟು ಅದರ ಪವರ್ ಯಾಕೆ ಕಡಿಮೆ ಮಾಡಬೇಕು?
ಸಾಮಾನ್ಯವಾಗಿ, ಎಲ್ಲದಕ್ಕೂ ಒಂದು ಆಯಸ್ಸು ಇರುತ್ತದೆ. ಆದರೆ, ಅದಕ್ಕೂ ಮೊದಲೇ ಹಾಳು ಮಾಡಿಕೊಳ್ಳುವುದಿದೆಯಲ್ಲ, ಅದು ದುರಂತ. ನಮಗೆ ವಯಸ್ಸಾದಾಗ, ಎಲ್ಲ ಅಂಗಾಂಗಗಳು ಒಂದಲ್ಲ ಒಂದು ದಿನ ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ. ಆದರೆ, ಅದಕ್ಕೂ ಮುನ್ನ ನಮ್ಮ ಕೈಯ್ಯಾರೆ ಯಾಕೆ ನಾವು ಹಾಳು ಮಾಡಿಕೊಳ್ಳಬೇಕು? ಮನುಷ್ಯನನ್ನು ಹಾಳು ಮಾಡುವುದಕ್ಕೆ ಹಲವು ವಸ್ತುಗಳು ಬಹಳ ಹತ್ತಿರದಲ್ಲೇ ಸಿಗುತ್ತವೆ. ಆದರೆ, ಅವುಗಳಿಂದ ದೂರವಿದ್ದು, ಬದುಕನ್ನು ಎಷ್ಟು ಚೆನ್ನಾಗಿ ರೂಪಿಸಿಕೊಳ್ಳುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ಯಾವುದೇ ದುಶ್ಚಟ ರೂಢಿಸಿಕೊಂಡರೂ, ಜೀವನದಲ್ಲಿ ಮುಂದೆ ಬರುವುದು ಕಷ್ಟವಾಗುತ್ತದೆ. ಆಮೇಲೆ ಹೀಗೆ ಮಾಡಿಬಿಟ್ಟೆ ಎಂದು ನಮಗೆ ನಾವೇ ಸಾರಿ ಹೇಳಿಕೊಂಡರೆ ಏನೂ ಪ್ರಯೋಜನವಾಗುವುದಿಲ್ಲ. ಹಿಂದೆಲ್ಲ ನಾವು ಶೋಕಿಗಾಗಿ ಸಿಗರೇಟ್ ಸೇದುತ್ತಿದೆವು. ಕ್ರಮೇಣ, ಅದು ಏನೆಲ್ಲ ಮಾಡುತ್ತದೆ ಎಂದು ಅರಿವಿಗೆ ಬಂತು. ಹಾಗಾಗಿ, ದಯಮಾಡಿ ಇದರಿಂದ ದೂರವಿರಿ.
ದುಶ್ಚಟಗಳನ್ನು ಒಮ್ಮೆಲೇ ಬಿಡುವುದು ಸುಲಭದ ಮಾತಲ್ಲ. ಅದರಿಂದ ಹೊರಬರುವುದಕ್ಕೆ ಸಾಧ್ಯವಾಗದಿದ್ದರೆ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಿ. ಮನಃಶಾಸ್ತ್ರಜ್ಞರನ್ನು ಸಂರ್ಪಸಿ. ಅದರಲ್ಲಿ ತಪ್ಪೇನಿಲ್ಲ. ವಿದ್ಯಾವಂತರ ಸಹವಾಸ ಮಾಡಿ. ಅವರು ನಿಮ್ಮನ್ನು ಗೈಡ್ ಮಾಡುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ, ಚೆನ್ನಾಗಿ ವ್ಯಾಯಾಮ ಮಾಡಿ. ಪ್ರತಿನಿತ್ಯ 40 ನಿಮಿಷಗಳ ಕಾಲ ಚೆನ್ನಾಗಿ ಬೆವರು ಹರಿಸಿ. ವಾಕಿಂಗ್, ಜಾಗಿಂಗ್, ಜಿಮ್ ಕ್ರೀಡೆಗಳು ಇರಬಹುದು... ಎಷ್ಟು ಬೆವರು ಸುರಿಸುತ್ತೇವೋ ಅಷ್ಟು ಮನಸ್ಸು ನಮ್ಮ ಜತೆಗೆ ಮಾತನಾಡುವುದಕ್ಕೆ ಶುರು ಮಾಡುತ್ತದೆ. ಮಿದುಳು ವರ್ಕ್ ಆಗುವುದಕ್ಕೆ ಶುರುವಾಗುತ್ತದೆ. ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ದೇಹಕ್ಕೆ ಕಷ್ಟ ಕೊಟ್ಟಾಗಲೇ ಮನಸ್ಸು ಹಗುರವಾಗುವುದು.
ನೀವು ಬುದ್ಧಿ ಹೇಳಿಬಿಟ್ಟರೆ ನಾವು ಕೇಳಬೇಕಾ? ನೀವು ಯಾವತ್ತೂ ತಪ್ಪೇ ಮಾಡಿಲ್ವ? ಅಂತ ಓದುಗರು ಕೇಳಬಹುದು. ನಾನು ಸಾಕಷ್ಟು ತಪು್ಪಗಳನ್ನು ಮಾಡಿ, ಕೆಟ್ಟ ಅನುಭವಗಳಾಗಿ ಹೇಳುತ್ತಿದ್ದೇನೆ. ನಾನು ಮಾಡಿರುವ ತಪು್ಪಗಳನ್ನು ನೀವು ಮಾಡಬೇಡಿ. ಕೆಲವೊಮ್ಮೆ ಗೊತ್ತಿಲ್ಲದೆಯೇ ತಪ್ಪು ನಡೆದು ಹೋಗಿರುತ್ತದೆ. ಆದರೆ, ಇಷ್ಟೆಲ್ಲ ಉದಾಹರಣೆಗಳಿರುವಾಗಲೂ, ಯಾವುದರಿಂದ ಏನಾಗುತ್ತದೆ ಎಂದು ಗೊತ್ತಿದ್ದೂ ಆ ತಪ್ಪುಗಳನ್ನು ಮಾಡಬೇಡಿ.
(ಲೇಖಕರು ನಟ-ನಿರ್ದೇಶಕ)