

| ಅಶ್ವಿನಿ ಎಚ್.ಆರ್. ಬೆಂಗಳೂರು
ಚಳಿಗಾಲ ಶುರುವಾಗುತ್ತಿದ್ದಂತೆ ಮುಖ, ಕೈ, ಕಾಲುಗಳು ಉರಿಯುವ ಹಾಗೆ ಭಾಸವಾಗುತ್ತದೆ. ಚರ್ಮ ಸುಕ್ಕುಗಟ್ಟುವುದು, ಒಡೆಯುವುದು ಹೀಗೆ ನಾನಾ ಸಮಸ್ಯೆಗಳು ಎದುರಾಗುತ್ತವೆ. ನೀವು ಎಷ್ಟೇ ಆರಾಮದಾಯಕ ಹೊದಿಕೆಗಳನ್ನು ಹೊದ್ದು, ಬೆಚ್ಚಗಿನ ಸ್ವೆಟರ್, ಮೈ ಮುಚ್ಚುವ ಹಾಗೆ ಬಟ್ಟೆ ಧರಿಸಿ, ಬಿಸಿ ಬಿಸಿ ಪಾನೀಯ ಕುಡಿಯುತ್ತಾ ಆರೈಕೆ ಮಾಡಿದರೂ ತ್ವಚೆ ಶುಷ್ಕವಾಗುವುದನ್ನು ತಡೆಗಟ್ಟಲು ಸಾಧ್ಯವಾಗುವುದಿಲ್ಲ. ಇನ್ನು ಮಾರುಕಟ್ಟೆಯಲ್ಲಿ ಸಿಗುವ ಕ್ರೀಮ್ ಮತ್ತು ಲೋಷನ್ ನಿಮ್ಮ ತ್ವಚೆಯನ್ನು ನಯವಾಗಿ ಆರ್ಧ್ರಕವಾಗಿರಿಸುತ್ತವೆ ಎಂದು ಜಾಹೀರಾತುಗಳಲ್ಲಿ ಹೇಳಿದರೂ, ಅದರಲ್ಲಿರುವ ರಾಸಾಯನಿಕಗಳು ಅಡ್ಡಪರಿಣಾಮಗಳನ್ನು ಉಂಟು ಮಾಡುತ್ತವೆ. ಆದ್ದರಿಂದ ಚಳಿಗಾಲದಲ್ಲಿ ತ್ವಚೆಯ ಆರೈಕೆ ಮಾಡಲು ಕೇವಲ ಮನೆಮದ್ದುಗಳನ್ನು ಬಳಸಿ ಸಾಕು. ಬೆಚ್ಚಗಿನ ಸೂಪ್, ಸಾಕಷ್ಟು ನೀರಿನ ಸೇವನೆಯೊಂದಿಗೆ ಇಲ್ಲಿ ಹೇಳಿರುವ ಮನೆಮದ್ದುಗಳನ್ನು ಬಳಸುವುದರಿಂದ ನಿಮ್ಮ ಚರ್ಮವು ನಯವಾಗಿ, ಮೃದುವಾಗಿ ಮತ್ತು ಆರ್ಧ್ರಕವಾಗಿರಿಸಲು ಸಹಾಯ ಮಾಡುತ್ತವಲ್ಲದೆ, ಖರ್ಚನ್ನು ಕಡಿಮೆ ಮಾಡುತ್ತವೆ. ಹಾಗಾದರೆ ಚಳಿಗಾಲದಲ್ಲಿ ತ್ವಚೆಯನ್ನು ಚೆನ್ನಾಗಿ ಪೋಷಿಸಲು ಸಹಾಯ ಮಾಡುವ ಈ ಮನೆಮದ್ದುಗಳ ಕುರಿತ ಮಾಹಿತಿಯನ್ನು ತಿಳಿಯೋಣ ಬನ್ನಿ...
ಕೊಬ್ಬರಿ ಎಣ್ಣೆ: ಕೊಬ್ಬರಿ ಎಣ್ಣೆಯು ಒಣ ಚರ್ಮಕ್ಕೆ ಚಿಕಿತ್ಸೆ ನೀಡುವುದಲ್ಲದೆ, ಇದು ಅತ್ಯುತ್ತಮವಾದ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ. ಜತೆಗೆ ನಿಮ್ಮ ಚರ್ಮದ ಮೇಲ್ಮೈಯಿಂದ ತೇವಾಂಶದ ನಷ್ಟ ತಡೆಯುತ್ತದೆ. ಆದ್ದರಿಂದ ನೀವು ತ್ವಚೆ ಶುಷ್ಕವಾಗಿರುವ ಕಡೆ ತೆಂಗಿನ ಎಣ್ಣೆಯನ್ನು ಹಚ್ಚಿ, ನಿಧಾನವಾಗಿ ಮಸಾಜ್ ಮಾಡಿ. ದಿನಕೊಮ್ಮೆಯಾದರೂ ಈ ರೀತಿ ಮಾಡಿ.
ಮೊಸರು: ಮೊಸರನ್ನು ಜೇನುತುಪ್ಪದೊಂದಿಗೆ ಬಳಸುವುದರಿಂದ ನಿಮ್ಮ ಚರ್ಮವನ್ನು ತೇವಗೊಳಿಸುತ್ತದೆ ಮತ್ತು ಮೃದುವಾಗಿರಿ ಸುತ್ತದೆ. 1 ಬೌಲ್ ಮೊಸರಿಗೆ 1 ಚಮಚ ಜೇನುತುಪ್ಪ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ ತ್ವಚೆ ಶುಷ್ಕವಾಗಿರುವ ಭಾಗಕ್ಕೆ ಹಚ್ಚಿ. 15 ನಿಮಿಷಗಳ ನಂತರ ಅದನ್ನು ತಣ್ಣೀರಿನಿಂದ ತೊಳೆಯಿರಿ. ನೀವು ಈ ಪ್ಯಾಕ್ ಅನ್ನು ವಾರಕ್ಕೆ ಎರಡು ಬಾರಿ ಹಚ್ಚಬಹುದು.
ನಿಂಬೆಹಣ್ಣು: ನಿಂಬೆಯಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಆದ್ದರಿಂದ ನಿಂಬೆಹಣ್ಣನ್ನು ಜೇನುತುಪ್ಪದೊಂದಿಗೆ ಉಪಯೋಗಿಸುವ ಮೂಲಕ ಶುಷ್ಕ ಮತ್ತು ತುರಿಕೆ ಚರ್ಮದಿಂದ ಮುಕ್ತಿ ಪಡೆಯಬಹುದು. ಅರ್ಧ ಮಾಗಿದ ನಿಂಬೆಯಿಂದ ರಸವನ್ನು ಹೊರತೆಗೆದು ಅದಕ್ಕೆ ಜೇನುತುಪ್ಪವನ್ನು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ, ಇದನ್ನು ಸಮಸ್ಯೆಯಿರುವ ಜಾಗದಲ್ಲಿ ಹಚ್ಚಿ. 15 ನಿಮಿಷಗಳ ನಂತರ ತೊಳೆಯಿರಿ. ವಾರದಲ್ಲಿ ಕನಿಷ್ಠ ಎರಡು ಬಾರಿ ಈ ರೀತಿ ಮಾಡಿದರೆ ಸಾಕು.
ಸಲಹೆ, ಅಭಿಪ್ರಾಯ ಮತ್ತು ಬರಹಗಳಿಗೆ: lalithavijayavani@gmail.com