ನಟ ಭಯಂಕರ ಪ್ರಥಮ್​ಗೆ ಧ್ರುವ ಸರ್ಜಾ ಸಾಥ್

Pratham 14 March 20
Published on

ಬೆಂಗಳೂರು: ‘ಬಿಗ್ ಬಾಸ್’ ಖ್ಯಾತಿಯ ಪ್ರಥಮ್ ‘ನಟ ಭಯಂಕರ’ನಾಗಿದ್ದು ಬಹುತೇಕ ಎಲ್ಲರಿಗೂ ಗೊತ್ತಿರುವಂಥದ್ದೇ. ಈಗ ಆ ಚಿತ್ರಕ್ಕೆ ‘ಪೊಗರು’ ಖ್ಯಾತಿಯ ಧ್ರುವ ಸರ್ಜಾ ಸಾಥ್ ನೀಡಿರುವುದರಿಂದ ಮತ್ತಷ್ಟು ಪ್ರೋತ್ಸಾಹ ಸಿಕ್ಕಂತಾಗಿದೆ.

ಪ್ರಥಮ್ ಚೊಚ್ಚಲ ನಿರ್ದೇಶನದ ಈ ಸಿನಿಮಾಗೆ ಶುಕ್ರವಾರವಷ್ಟೇ ಧ್ರುವ ಸರ್ಜಾ ಧ್ವನಿ ನೀಡಿದ್ದಾರೆ. ಧ್ರುವ ಅವರ ನಿರೂಪಣೆ ಚಿತ್ರದುದ್ದಕ್ಕೂ ಅಲ್ಲಲ್ಲಿ ಕೇಳಿ ಬರಲಿದೆ. ‘ತಮ್ಮ ಬಿಡುವಿಲ್ಲದ ಕೆಲಸದ ನಡುವೆಯೂ ಧ್ರುವ ಸರ್ಜಾ ಆಗಮಿಸಿ ಕಂಠದಾನ ಮಾಡಿದ್ದಾರೆ. ಇದರಿಂದ ಚಿತ್ರಕ್ಕೆ ಹೆಚ್ಚಿನ ಆಕರ್ಷಣೆ ಹಾಗೂ ಶಕ್ತಿ ಬಂದಂತಾಗಿದೆ’ ಎನ್ನುತ್ತಾರೆ ಪ್ರಥಮ್

ಧ್ರುವ ಧ್ವನಿಯೇ ಯಾಕೆ ಎಂದರೆ, ‘ಅವರ ಧ್ವನಿಯಲ್ಲಿ ವಿಶೇಷತೆ ಇರುವುದರಿಂದ ವಾಯ್ಸ್ ಓವರ್ ನೀಡುವಂತೆ ಕೋರಿದೆ. ನಮ್ಮಿಬ್ಬರ ಮಧ್ಯೆ ಸ್ನೇಹ ಇರುವ ಜತೆಗೆ ಚಿತ್ರದಲ್ಲಿ ಕಂಟೆಂಟ್ ಕೂಡ ಇರುವುದರಿಂದ ಅವರು ಒಪ್ಪಿ ಧ್ವನಿ ನೀಡಿದರು. ಅದಕ್ಕಾಗಿ ಯಾವುದೇ ಸಂಭಾವನೆಯನ್ನು ಪಡೆಯದ ಅವರಿಗೆ ಪುಣ್ಯಕೋಟಿಯ ರಜತ ಪ್ರತಿಮೆಯನ್ನು ಗೌರವಪೂರ್ವಕವಾಗಿ ನೀಡಿ ಕೃತಜ್ಞತೆ ಸಲ್ಲಿಸಿದೆ’ ಎಂಬ ಮಾಹಿತಿ ನೀಡುತ್ತಾರೆ ಪ್ರಥಮ್ ಧ್ರುವ ಅವರಿಗೆ ಕೊಡಬೇಕಾಗಿದ್ದ ಸಂಭಾವನೆಯನ್ನು ಗೋಶಾಲೆಯೊಂದಕ್ಕೆ ಆರ್ಥಿಕ ನೆರವು ಕೊಡುತ್ತಿರುವುದಾಗಿ ಪ್ರಥಮ್ ಹೇಳಿದ್ದಾರೆ.

ಇನ್ನು ‘ನಟ ಭಯಂಕರ’ ಚಿತ್ರದ ಬಗ್ಗೆ ಮಾತನಾಡುವ ಅವರು, ‘ಇದೊಂದು ಪಕ್ಕಾ ಹಾರರ್-ಕಾಮಿಡಿ ಸಿನಿಮಾ. ಒಬ್ಬ ಸ್ಟುಪಿಡ್ ಸೂಪರ್​ಸ್ಟಾರ್ ಹಾಗೂ ದೆವ್ವವೇ ಈ ಚಿತ್ರದ ಕಥಾಹಂದರ. ಉದಯ್ ಮೆಹ್ತ ಕಥೆ ಬರೆದಿರುವ ಈ ಚಿತ್ರದಲ್ಲಿ ನಿಹಾರಿಕಾ ಶೆಣೈ, ಸುಶ್ಮಿತಾ ಜೋಶಿ ನಾಯಕಿಯರಾಗಿದ್ದಾರೆ. ಈ ಚಿತ್ರದ ಶೂಟಿಂಗ್ ಈಗಾಗಲೇ ಪೂರ್ಣಗೊಂಡಿದ್ದು ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಮೇನಲ್ಲಿ ಚಿತ್ರ ಬಿಡುಗಡೆ ಮಾಡುವ ಗುರಿ ಇರಿಸಿಕೊಳ್ಳಲಾಗಿದೆ’ ಎನ್ನುತ್ತಾರೆ ಪ್ರಥಮ್ ಸಾಯಿಕುಮಾರ್ ಅವರ ವೃತ್ತಿಜೀವನದ 25ನೇ ವರ್ಷದ ಸಿನಿಮಾ ಇದು. ಇಲ್ಲಿ ಅವರು ಅಗ್ನಿ ಆಗಿಯೇ ಕಾಣಿಸಿಕೊಳ್ಳಲಿದ್ದಾರೆ. ಆದರೆ, ಅಗ್ನಿ ಐಪಿಎಸ್ ಅಲ್ಲ, ಅಗ್ನಿ ಎಂಬಿಬಿಎಸ್ ಆಗಿ. ಈ ಚಿತ್ರದಲ್ಲಿ ಅವರು ಮನಃಶ್ಯಾಸ್ತ್ರಜ್ಞನ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ.

ಚಿತ್ರದ ಟೈಟಲ್  ಟ್ರ್ಯಾಕ್​​​ಅನ್ನು ಉಪೇಂದ್ರ ಅವರು ಬಿಡುಗಡೆ ಮಾಡಿದ್ದರು. ಇದೀಗ ಚಿತ್ರಕ್ಕೆ ಧ್ರುವ ಸರ್ಜಾ ವಾಯ್ಸ್​ ಓವರ್ ಕೊಟ್ಟಿದ್ದಾರೆ. ಹೀಗಾಗಿ ಸಿನಿಮಾಗೆ ಹೆಚ್ಚಿನ ಚೈತನ್ಯ ಬಂದಂತಾಗಿದೆ. | ಪ್ರಥಮ್ ನಟ-ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net